Friday, 20th September 2024

ಮಾನವ ವಿಕಾಸದ ಸಂಶೋಧನೆಗೆ ನೊಬೆಲ್‌

ವೈದ್ಯ ವೈವಿಧ್ಯ

drhsmohan@gmail.com

ಮಾನವನ ಉಗಮ, ನಾವು ಆರಂಭದಲ್ಲಿ ಬಂದ ದಾರಿ, ಮಾನವ ವಂಶದ ಜತೆ ಜೀವಿಸಿದ್ದ ಮನುಷ್ಯ ರೀತಿಯ ಕೆಲವು ಜೀವಿಗಳು ಏಕೆ ನಶಿಸಿಹೋಗಿವೆ, ಹಾಗಾಗಿ ಮನುಕುಲ ಹೇಗೆ ಭಿನ್ನ ಈ ಎಲ್ಲ ಪ್ರಶ್ನೆಗಳಿಗೆ ಸ್ವಾಂಟೆ ಪಾಬೋ ಅವರ ಸಂಶೋಧನೆ ಉತ್ತರಿಸುತ್ತದೆ. ಇದೊಂದು ತೀರಾ ಅಪರೂಪದ ಮಾರ್ಗದರ್ಶಿ ಸಂಶೋಧನೆ.

ಸ್ವಿಡನ್ನಿನ ಸ್ವಾಂಟೆ ಪಾಬೋ ಅವರಿಗೆ ಈ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಮಾನವ ವಿಕಾಸ ಹಂತದ, ಈಗ ಕಣ್ಮರೆ ಯಾಗಿರುವ ಹಿಂದಿನ ಮಾನವ ಸಂತತಿಗಳ ಜೀನೋಮ್‌ಗಳ ಸಂಶೋಧ ನೆಗೆ ಅವರಿಗೆ ಈ ಪ್ರಶಸ್ತಿ ಸಂದಿದೆ. ಬಹಳ ವರ್ಷಗಳ ಹಿಂದಿದ್ದ ನಿಯಂದರ್ಥಾಲ್ಸ್ (Neanderthals) ಎಂಬ ಪ್ರಾಚೀನ ಮನುಕುಲದ ಜತೆಗಿದ್ದ ವಂಶವನ್ನು (ಈಗಿನ ಮಾನವ ವಂಶಕ್ಕಿಂತ ಭಿನ್ನವಾದದ್ದು) ಅವರು ಕಂಡುಹಿಡಿದಿದ್ದಲ್ಲದೆ ಅದರ ಜೀನೋಮ್ ಅನ್ನು ಪ್ರತ್ಯೇಕಿಸಿ ಸಂಪೂರ್ಣವಾಗಿ ಸೀಕ್ವೆನ್ಸ್ ಮಾಡಿದ್ದಾರೆ ಎಂಬುದು ಗಮನಾರ್ಹ.

ಹಾಗೆಯೇ ಅವರು ಡೆನಿಸೊವಾನ್ಸ್ (Denisovans) ಎಂಬ ಭಿನ್ನ ರೀತಿಯ ವಂಶವೊಂದನ್ನು ಕಂಡುಹಿಡಿದಿದ್ದಾರೆ. ಹೋಮೊ ಸಪಿಯನ್ಸ್ ಎಂಬ ನಮ್ಮ ಮಾನವ ವಂಶ ಅಥವಾ ಮನುಕುಲ ಆಫ್ರಿಕಾ ಖಂಡದಿಂದ ಹೊರಬಂದ ನಂತರ, ಆ ಎರಡು ವಂಶಗಳೊಂದಿಗೆ ಸಹಬಾಳ್ವೆ ನಡೆಸಿತ್ತು ಎಂಬುದನ್ನು ಅವರು ತಮ್ಮ ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ದೃಢೀಕರಿಸಿದ್ದಾರೆ.

ಮಾನವನ ಉಗಮ, ನಾವು ಆರಂಭದಲ್ಲಿ ಬಂದ ದಾರಿ, ಮಾನವ ವಂಶದ ಜತೆ ಜೀವಿಸಿದ್ದ ಮನುಷ್ಯ ರೀತಿಯ ಕೆಲವು ಜೀವಿಗಳು ಏಕೆ ನಶಿಸಿಹೋಗಿವೆ, ಹಾಗಾಗಿ ಮನುಕುಲ ಹೇಗೆ ಭಿನ್ನ- ಈ ಎಲ್ಲ ಪ್ರಶ್ನೆಗಳಿಗೆ ಈ ಸಂಶೋಧನೆ ಉತ್ತರಿಸುತ್ತದೆ. ಸ್ವಾಂಟೆ ಪಾಬೋ ಅವರು ಪ್ರಸ್ತುತ ಜರ್ಮನಿಯ ಲೀಪ್ಜಿಗ್ ನ ‘ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಎವಲೂಷನರಿ ಆಂತ್ರೋಪಾಲಜಿ’ಯಲ್ಲಿ ಜೆನೆಟಿಕ್ ತಜ್ಞ ಮತ್ತು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಇದೊಂದು ತೀರಾ ಅಪರೂಪದ ಮಾರ್ಗದರ್ಶಿ ಸಂಶೋಧನೆ. ಇದು ಅಸಾಧ್ಯ ಎಂದು ಮೊದಲು ಭಾವಿಸಲಾಗಿದ್ದ ಈ ಮಾನವ ವಿಕಾಸದ ಅಧ್ಯಯನ/ ಸಂಶೋಧನೆಯು ಕಳೆದ ಕೆಲ ದಶಕಗಳಲ್ಲಿ ನಾವಂದುಕೊಂಡಿದ್ದ ಸೀಮೆಗಳನ್ನೆಲ್ಲ ಮೀರಿ
ಮುಂದುವರಿದಿದೆ. ನಮ್ಮ ಪುರಾತನ ಜೀವಿಗಳು ವಾಸಿಸಿದ್ದ ಗುಹೆಗಳಿಂದ ಲಭ್ಯವಾದ ಪಳೆಯುಳಿಕೆಗಳ ಶಿಥಿಲ ಮೂಳೆಗಳಿಂದ ಡಿಎನ್‌ಎಯನ್ನು ಪ್ರತ್ಯೇಕಿಸುವ ಮೂಲಕ ಈ ಮಹತ್ತರ ಕೆಲಸವನ್ನು ಮಾಡಿರುವ ಪಾಬೋ ಅವರು ಆ ಜೀನೋಮ್‌ಗಳನ್ನು
ಸಂಪೂರ್ಣ ಕ್ರಮಾನುಗತಿಯಾಗಿ ಸೀಕ್ವೆನ್ಸ್ ಮಾಡಿದ್ದಾರೆ’ ಎಂದು ಜರ್ಮನಿಯ ಟುಬಿಂಜೆನ್ ವಿಶ್ವವಿದ್ಯಾಲಯದ ಪಾಲಿಯೋ ಆಂತ್ರೋಪಾಲಜಿಸ್ಟ್ ಶ್ರೀಮತಿ ಕತೇರೀನಾ ಹರ್ವಾಟಿ ಅಭಿಪ್ರಾಯಪಡುತ್ತಾರೆ.

ಈ ವಿಷಯಕ್ಕಾಗಿ ಪಾಬೋ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿದುದರಿಂದ, ಮಾನವ ವಿಕಾಸ ಮತ್ತು ಹಿಂದಿನ ಪರಂಪರೆ ಇವುಗಳಿಗೆ ಈ ದಿನಗಳಲ್ಲೂ ಮಹತ್ವವಿರುವುದನ್ನು ತೋರಿಸುತ್ತದೆ. ಮಾನವನ ಉಗಮದಂಥ ಹಳೆಯ ವಿಚಾರಗಳು
ಈಗಲೂ ಮಹತ್ವ ಪಡೆಯುತ್ತಿರುವುದು ಸ್ವಾಗತಾರ್ಹ ವಿಚಾರ ಎಂಬುದು ಆಕೆಯ ಅನಿಸಿಕೆ. ಹಿಂದೆ ಕೈಗೊಂಡ ಸಂಶೋಧನೆ ಗಳ ಪ್ರಕಾರ ಆಫ್ರಿಕಾದಲ್ಲಿ ಹೋಮೊಸಪಿಯನ್ಸ್ 300000 ವರ್ಷಗಳ ಮೊದಲು ಉಗಮವಾಯಿತು ಎಂಬುದೊಂದು ಅಂದಾಜು.

ಈಗ ಪಾಬೋ ಅವರು ಕಂಡುಹಿಡಿದಿರುವ ನಿಯಂದರ್ಥಾಲ್ಸ್ ವಂಶದ ಜೀವಿಗಳು ಆಫ್ರಿಕಾದ ಹೊರಗೆ ಕಾಣಿಸಿಕೊಂಡು
ಯುರೋಪ್ ಮತ್ತು ಏಷ್ಯಾದ ಪಶ್ಚಿಮ ಭಾಗದಲ್ಲಿ ವಾಸಿಸಿದ್ದವು. ಅಂದಾಜಿನ ಪ್ರಕಾರ 400000  ವರ್ಷಗಳ ಮೊದಲಿ ನಿಂದ ಜೀವಿಸಿ ಸುಮಾರು 30000 ವರ್ಷಗಳ ಮೊದಲು ಸಂಪೂರ್ಣ ನಶಿಸಿಹೋದವು ಎನ್ನಲಾಗಿದೆ. ಹೋಮೋಸಪಿಯನ್‌ ಗೆ ಸೇರಿದ ಗುಂಪುಗಳು 70000 ವರ್ಷಗಳ ಮೊದಲು ಆಫ್ರಿಕಾ ಬಿಟ್ಟು ಹೊರಗೆ ಬಂದು ಜಗತ್ತಿನಾದ್ಯಂತ ತುಂಬಿಕೊಂಡವು ಎನ್ನಲಾಗಿದೆ. ಈ ಹೋಮೋಸಪಿಯನ್‌ಗಳು (ಅಂದರೆ ಮಾನವ ಸಂತತಿಯ ಹಿಂದಿನ ಪೂರ್ವಜರು) ಯುರೋಪ್ ಮತ್ತು ಏಷ್ಯಾದಲ್ಲಿ ನಿಯಾಂದರ್ಥಾಲ್ಸ ವಂಶಗಳ ಜತೆಗೆ ಸಾವಿರಾರು ವರ್ಷ ಸಹಬಾಳ್ವೆ ನಡೆಸಿದರು ಎನ್ನಲಾಗುತ್ತದೆ. ಆದರೆ ಅವೆರಡರ ಮಧ್ಯದ ಸಂಬಂಧಗಳ ಬಗ್ಗೆ ನಿಖರವಾಗಿ ಗೊತ್ತಿಲ್ಲ.

ಸ್ವೀಡನ್ನಿನ ಸ್ಟಾಕ್ ಹೋಂನಲ್ಲಿ 1955ರಲ್ಲಿ ಜನಿಸಿದ ಸ್ವಾಂಟೆ ಪಾಬೋರು ಅವರಿಗೆ ಮಾನವ ಜನಾಂಗದ ಚರಿತ್ರೆಯ ಬಗ್ಗೆ
ಚಿಕ್ಕವಯಸ್ಸಿನಿಂದಲೂ ಆಸಕ್ತಿಯಿತ್ತು. ಆರಂಭದಲ್ಲಿ ಇವರು ಹೋಮೋನಿನ್‌ಗಳ ಹತ್ತಿರದ ವಂಶವಾದ ನಿಯಂದರ್ಥಾಲ್
ವಂಶದ ಹಳೆಯ ಡಿಎನ್‌ಎಗಳನ್ನು ಶೋಧಿಸಲಾರಂಭಿಸಿದರು. ಆದರೆ ಅವು ಅಷ್ಟು ಸುಲಭವಾಗಿ ಲಭ್ಯವಾಗುವುದಿಲ್ಲ, ಸಣ್ಣ ತುಂಡುಗಳಾಗಿ ಹರಿದು ಹಂಚಿಹೋಗಿ ಬಿಡುತ್ತವೆ. ಹಾಗೆಯೇ ಬೇರೆಯ ವಸ್ತುಗಳ ಡಿಎನ್‌ಎಗಳ ಜತೆ ಕಲುಷಿತಗೊಳ್ಳುತ್ತವೆ.
ಪಾಬೋ ಅವರು ಮೊದಲಿಗೆ ಮೈಟೋಕಾಂಡ್ರಿಯಾದ ಡಿಎನ್‌ಎಗಳ ಮೇಲೆ ಗಮನ ಕೇಂದ್ರೀಕರಿಸಿದರು.

ಜೀವಕೋಶದೊಳಗಿರುವ ಮೈಟೋಕಾಂಡ್ರಿಯಾ ಶಕ್ತಿಯನ್ನುಂಟುಮಾಡುವ ಮುಖ್ಯ ಅಂಗ. ಅವರು 40000 ವರ್ಷ ಹಳೆಯ ಮೂಳೆಯ ತುಣುಕಿನಿಂದ ತೆಗೆದ ಡಿಎನ್‌ಎ ಅನ್ನು ಸೀಕ್ವೆನ್ಸ್ ಮಾಡಿ, ಅದು ಆಧುನಿಕ ಮಾನವರು ಮತ್ತು ಚಿಂಪಾಂಜಿಗಳಿಗಿಂತ ತುಂಬಾ ಭಿನ್ನ ಎಂದು ಸಾಬೀತುಪಡಿಸಿದರು. ನಂತರ ಅವರು ಸಹೋದ್ಯೋಗಿಗಳ ಜತೆಗೂಡಿ ಆಧುನಿಕ ಡಿಎನ್‌ಎ ಸೀಕ್ವೆನ್ಸಿಂಗ್ ಕ್ರಮಗಳನ್ನು ಅನುಸರಿಸಿ ನಿಯಂದ ರ್ಥಾಲ್‌ನ ಇಡೀ ಜೀನೋಮ್ ಅನ್ನೇ ಸೀಕ್ವೆನ್ಸ್ ಮಾಡಿದರು. ಇದು ಅವರು 2010ರಲ್ಲಿ ಮಾಡಿದ ಪ್ರಯೋಗ.

ಹೋಮೋಸಪಿಯನ್ಸ್ ಮತ್ತು ನಿಯಂದರ್ಥಾಲ್‌ಗಳ ಹಿಂದಿನ ಜನಾಂಗದವರು 800000 ವರ್ಷಗಳ ಹಿಂದೆ ಒಟ್ಟಾಗಿ ಜೀವಿಸಿದ್ದರು. ಇವೆರಡೂ ಜನಾಂಗಗಳಲ್ಲಿ ಸಾವಿರಾರು ವರ್ಷಗಳ ಕಾಲ ರಕ್ತ ಸಂಬಂಧವಿತ್ತು. ಹಾಗಾಗಿ ಈಗಲೂ ಯುರೋಪ್ ಮತ್ತು ಏಷ್ಯಾದ ಕೆಲವು ಜನಾಂಗಗಳಲ್ಲಿ ಶೇ. ೧ರಿಂದ ೪ರಷ್ಟು ಜೀನೋಮ್‌ಗಳು ಪ್ರಾಚೀನ ನಿಯಂದ ರ್ಥಾಲ್‌ಗಳಿಂದ ಬಂದಿವೆ ಎನ್ನುತ್ತದೆ ಈ ಸಂಶೋಧನೆ. ಆಧುನಿಕ ಮಾನವರು ಹಾಗೂ ನಿಯಂದ ರ್ಥಾಲ್‌ಗಳ ನಡುವೆ ಒಂದು ರೀತಿಯ ಸಂಬಂಧ

ವಿತ್ತು ಎಂದು ಹಿಂದಿನ ಸಂಶೋಧಕರು ಅಂದಾಜು ಮಾಡಿದ್ದರು. ಮೊದಲ ಬಾರಿಗೆ ನಿಯಂದರ್ಥಾಲ್ ನ ಜೀನೋಮ್ ಸೀಕ್ವೆನ್ಸ್ ಮಾಡಿದಾಗ, ಅದು ಮಾನವ ವಿಕಾಸದ ಈ ವಿಜ್ಞಾನ ಶಾಖೆಯಲ್ಲಿನ ಒಂದು ಅವಿಸ್ಮರಣೀಯ ಗಳಿಗೆ ಎಂದು ಎಣಿಸಲಾಗಿತ್ತು. ಅಂದರೆ ಇದರಿಂದ ಮಾನವನ ಜ್ಞಾನದ ಪರಿಧಿ ಅಗಾಧವಾಗಿ ವಿಸ್ತಾರಗೊಂಡಿತು. ಮುಂದಿನ ಅಧ್ಯಯನಗಳಿಗೆ ಇದು ದೊಡ್ಡ ನಾಂದಿಯಾಯಿತು ಎನ್ನುತ್ತಾರೆ ವಾಷಿಂಗ್ಟನ್ ವಿಶ್ವವಿದ್ಯಾಲಯದ ಶರೂನ್ ಬ್ರೌನಿಂಗ್. ನಂತರ ವಿಜ್ಞಾನಿಗಳು ಬಹಳಷ್ಟು ನಿಯಂದರ್ಥಾಲ್ ಜೀನೋಮ್‌ಗಳು, ಡೆನಿಸೊವಾನ್ ಜೀನೋಮ್‌ಗಳು, ಸಾವಿರಾರು
ವರ್ಷಗಳ ಮೊದಲು ಜೀವಿಸಿದ್ದ ಮನುಷ್ಯರ ಮತ್ತು ವಿವಿಧ ಪ್ರಾಣಿಗಳ ಜೀನೋಮ್‌ಗಳನ್ನು ಸೀಕ್ವೆನ್ಸ್ ಮಾಡಿದ್ದಾರೆ.

ಇಂಥ ಅಧ್ಯಯನಗಳಿಂದ ಮಾನವ ಇತಿಹಾಸದ ಹಲವಾರು ಒಳನೋಟಗಳು ಕಾಣಸಿಗುತ್ತವೆ, ಮನುಷ್ಯ ಹೇಗೆ ಪ್ರಾಣಿಗಳೊಂದಿಗೆ ಜೀವಿಸುತ್ತ ತನ್ನ ಉಪಯೋಗಕ್ಕಾಗಿ ಅವನ್ನು ಸಾಕತೊಡಗಿದ ಮತ್ತು ಪ್ರತಿ ಹಂತದಲ್ಲೂ ಹೇಗೆ ಈ ಜನಾಂಗಗಳು ವಿಕಾಸ ಹೊಂದಿದವು ಈ ಎಲ್ಲ ಜ್ಞಾನ, ಮಾಹಿತಿ ಲಭ್ಯವಾಗುತ್ತವೆ.

ಪಾಬೋ ಮತ್ತು ಅವರ ಸಹೋದ್ಯೋಗಿಗಳು ಡೆನಿಸೊವಾನ್ಸ್ ಎಂಬ ಮತ್ತೊಂದು ಹೊಸ ಹೋಮೋನಿನ್ ವಂಶವನ್ನು ಕಂಡುಹಿಡಿದು, ಅದರ ಜೀನೋಮ್‌ಗಳನ್ನು ಸೀಕ್ವೆನ್ಸ್ ಮಾಡಿದರು. ಸೈಬೀರಿಯಾದಲ್ಲಿ ದೊರೆತ 40000 ವರ್ಷಗಳ
ಹಿಂದಿನ ಬೆರಳಿನ ಮೂಳೆಯ ಅಂಶಗಳಿಂದ ಡಿಎನ್‌ಎ ಅನ್ನು ಪ್ರತ್ಯೇಕಿಸಿದರು.

ಅದು ಹೋಮೋಸಪಿಯನ್ಸ್ ಮತ್ತು ನಿಯಂದರ್ಥಾಲ್‌ಗಳಿಗಿಂತ ಭಿನ್ನ ಎಂದು ತೋರಿಸಿಕೊಟ್ಟರು. ಮಾನವರಿಗೂ
ಮತ್ತು ಡೆನಿಸೊವಾನ್ಸ್‌ಗಳಿಗೂ ಪರಸ್ಪರ ರಕ್ತಸಂಬಂಧ ಏರ್ಪಟ್ಟಿತ್ತು. ಈಗಿನ ಆಗ್ನೇಯ ಏಷ್ಯಾದ ಜನರ ಡಿಎನ್‌ಎನಲ್ಲಿ ಶೇ. ೬ರಷ್ಟು ಭಾಗ ಡೆನಿಸೊವಾನ್ ವಂಶದ್ದು ಎನ್ನಲಾಗಿದೆ.

ಈ ಸಂಶೋಧನೆಯ ಫಲವಾಗಿ ಪ್ಯಾಲಿಯೋಜಿ ನೋಮಿಕ್ಸ್ ಎಂಬ ವಿeನದ ಹೊಸಶಾಖೆ ಹುಟ್ಟಿಕೊಂಡಿತು. ಪುರಾತನ ಹೋಮೋನಿನ್ ವಂಶವು ಆಧುನಿಕ ಮಾನವನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಸಂಶೋಧನೆ ದೃಢಪಡಿಸುತ್ತದೆ. ಡೆನಿಸೊವನ್ ಜೀನ್ ಆಧುನಿಕ ಟಿಬೆಟಿಯನ್ನರಿಗೆ ಅತಿ ಎತ್ತರದ ಹಿಮಾಲಯ ಪರ್ವತದ, ಕಡಿಮೆ ಆಮ್ಲಜನಕವಿರುವ ವಾತಾವರಣದಲ್ಲಿ ಹೊಂದಿಕೊಂಡು ಜೀವ ಉಳಿಸಿಕೊಳ್ಳುವ ಕ್ರಿಯೆಯನ್ನು ಸಾಧ್ಯವಾಗಿಸುತ್ತದೆ. ಹಾಗೆಯೇ ನಿಯಂದರ್ಥಾಲ್ ಜೀನ್ ವಿವಿಧ ಸೋಂಕುರೋಗಗಳಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡು ಗಟ್ಟಿಯಾಗಲು ಪ್ರೇರೇಪಿಸುತ್ತದೆ.

೨೦೧೦ರಲ್ಲಿ ಪಾಬೋ ಅವರು ನಿಯಂದರ್ಥಾಲ್ ಜೀನೋಮ್‌ಗಳ ಸೀಕ್ವೆನ್ಸ್ ಅನ್ನು ಮೊಟ್ಟಮೊದಲ ಬಾರಿಗೆ ಪ್ರಕಟಿಸಿದರು. ಇದು ಯುರೋಪ್ ಮತ್ತು ಏಷ್ಯಾ ಖಂಡಗಳ ಬಹುಭಾಗದ ಜನರ ಜೀನೋಮ್‌ಗಳ ಸೀಕ್ವೆನ್ಸ್‌ಗಳಿಗೆ ತುಂಬ ಹತ್ತಿರವಾಗಿದ್ದವು.

ಆದರೆ ಆಫ್ರಿಕಾ ಖಂಡದ ಜನರ ಜೀನೋಮ್‌ಗಳು ಈ ಗುಂಪಿನ ಜೀನೋಮ್‌ಗಳಿಗೆ ಹೊಂದುತ್ತಿರಲಿಲ್ಲ. ಹಾಗಾಗಿ ಹೋಮೋ ಸಪಿಯನ್ಸ್ ಮತ್ತು ನಿಯಂದ ರ್ಥಾಲ್‌ಗಳ ನಡುವೆ ‘ಕೊಡು-ಕೊಳ್ಳುವ’ ರೀತಿಯ ರಕ್ತಸಂಬಂಧವಿತ್ತು ಎಂಬ ಅಂಶವನ್ನು ಇದು ಎತ್ತಿ ತೋರಿಸುತ್ತದೆ. ಕ್ರೊಯೇಶಿಯಾದ ವಿಂದಿಜಾ ಗುಹೆಗಳಿಂದ ೨೧ ನಿಯಂದರ್ಥಾಲ್ ಮೂಳೆಗಳ ಪುಡಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರು.

ಅವುಗಳಲ್ಲಿ ೩ ಮೂಳೆಗಳನ್ನು ಮತ್ತಷ್ಟು ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡು ಅವುಗಳಿಂದ ೯ ಡಿಎನ್‌ಎ ಅಂಶವನ್ನು ಹೊರತೆಗೆದರು. ಡಿಎನ್‌ಎ ಮತ್ತು ಸೂಕ್ಷ್ಮಾಣು ಜೀವಿಗಳ ಬಗ್ಗೆ ಅಗತ್ಯ ಪರೀಕ್ಷೆ ನಡೆಸಿದರು. ಈಗಿನ ಜಗತ್ತಿನ ೫ ಭಿನ್ನ ಭಾಗಗಳ ಮಾನವ ಜೀನೋಮ್ ಗಳನ್ನು ದೊರಕಿಸಿಕೊಂಡರು. ಅವೆಂದರೆ ಆಫ್ರಿಕಾದ ದಕ್ಷಿಣ ಮತ್ತು ಪಶ್ಚಿಮ ಭಾಗಗಳು, ಪಪುವಾ ನ್ಯೂಗಿನಿ, ಚೀನಾದ ಒಂದು ಭಾಗ ಮತ್ತು ಪಶ್ಚಿಮ ಯುರೋಪಿನ ಫ್ರಾನ್ಸ್ ದೇಶ.

ಈ ಪ್ರದೇಶಗಳ ಜೀನೋಮ್‌ಗಳನ್ನು ಮೇಲಿನ ಪ್ರಯೋಗದಲ್ಲಿ ದೊರಕಿದ ನಿಯಂದರ್ಥಾಲ್ ಜೀನೋಮ್ ಗಳಿಗೆ ಹೋಲಿಸಿ ಅವೆರಡರಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಂಡುಕೊಂಡರು. ಬೇರೆಯ ಹೋಮೋನಿನ್ ವಂಶಗಳಿಗೂ ಮತ್ತು ಈಗಿನ ಮಾನವ ಸಂತತಿಗೂ ಇರುವ ಸಾಮ್ಯ, ವ್ಯತ್ಯಾಸಗಳನ್ನು ಅಧ್ಯಯನ ಮಾಡಲು ನಿಯಂದರ್ಥಾಲ್ ಜೀನೋಮ್ ಗಳು ಅನುವು ಮಾಡಿಕೊಡುತ್ತವೆ.

ಈಗಿನ ಮಾನವ ಜನಾಂಗದ ಹತ್ತಿರದ ವಂಶವಾದ ನಿಯಂದರ್ಥಾಲ್ ಜೀವಿಗಳು ಯುರೋಪ್ ಮತ್ತು ಏಷ್ಯಾದ ಪಶ್ಚಿಮ ಭಾಗದಲ್ಲಿ (ಸೈಬೀರಿಯಾ ಮತ್ತು ಮಧ್ಯಪ್ರಾಚ್ಯ ಸೇರಿ) ಜೀವಿಸಿದ್ದು, ಸುಮಾರು 30000 ವರ್ಷಗಳ ಮೊದಲು ಕಣ್ಮರೆ ಯಾದವು ಎನ್ನಲಾಗಿದೆ. ಭಾರತ ಸರಕಾರದ ರಾಷ್ಟ್ರೀಯ ವಿಜ್ಞಾನ ಎಂಜಿನಿಯರಿಂಗ್ ಮಂಡಳಿಯ ಚೇರ್ಮನ್
ಡಾ. ಪಾರ್ಥ ಮಜುಂದಾರ್ ಅವರು ಈ ಸಂಶೋಧನೆ ಮತ್ತು ಅದರ ತಾಂತ್ರಿಕತೆಯನ್ನು ಮುಕ್ತಕಂಠದಲ್ಲಿ ಹೊಗಳಿದರು. ಮಾನವ ವಿಕಾಸದ ಹಂತಗಳನ್ನು ತಿಳಿದುಕೊಳ್ಳಲು ಈ ಸಂಶೋಧನೆ ಮಹತ್ವವಾದದ್ದು.

ತುಂಬಾ ಶಿಥಿಲವಾಗಿರುವ, ತುಂಡಾಗಿರುವ ಡಿಎನ್‌ಎಗಳನ್ನು ಸರಿಯಾಗಿ ಶೋಧಿಸಿ ಕರಾರುವಾಕ್ಕಾಗಿ ಸೀಕ್ವೆನ್ಸ್ ಮಾಡುವುದು
ಅತಿಕಷ್ಟದ ಕೆಲಸ. ಈ ಪಳೆಯುಳಿಕೆಗಳಲ್ಲಿ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಸೇರಿಕೊಂಡು ಕಲುಷಿತಗೊಳಿಸುತ್ತವೆ. ಹಾಗೆಯೇ ಈ ಸಂಶೋಧನೆ ವಿಕಾಸವಾದದ ಜೀವಶಾಸ ಮತ್ತು ಪಾಲಿಯೋಜೀನೋಮಿಕ್ಸ್ ರೀತಿಯ ವಿಭಾಗಗಳು ಮುನ್ನೆಲೆಗೆ ಬರುವಂತೆ ಮಾಡಿದೆ. ಅದೂ ಭಾರತ ಮತ್ತು ಆಫ್ರಿಕಾ ದೇಶಗಳಂತಹ ಉಷ್ಣ ವಲಯಗಳಲ್ಲಿ ಈ ಸಂಶೋಧನೆ ಮತ್ತೂ ಮಹತ್ವ ವಹಿಸುತ್ತದೆ.

ಏಕೆಂದರೆ ಇಲ್ಲಿ ಹಳೆಯ ಡಿಎನ್ ಎಯನ್ನು ಉಳಿಸಿಕೊಳ್ಳುವುದು ಕಷ್ಟ. ಒಟ್ಟಿನಲ್ಲಿ ಸ್ವಾಂಟೆ ಪಾಬೋ ಅವರು ಈ ಸಂಶೋಧನೆಗೈದು ಮನುಕುಲದ ವಿಕಾಸ ಹಂತದ ವಿಶ್ಲೇಷಣೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.