Sunday, 15th December 2024

ದುಪ್ಪಟ್ಟು ದರ ವಸೂಲಿ; ಆಟೋಗಳ ಮೇಲೆ ಕ್ರಮ ವಹಿಸಿ

ದೀಪಾವಳಿ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ದುಪ್ಪಟ್ಟು ದರ ವಿಧಿಸುವುದರ ವಿರುದ್ಧ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆ ಗಿಳಿದು, ಹಲವಾರು ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ಶ್ಲಾಘನೀಯ.

ಆದರೆ ನಗರಗಳಲ್ಲಿ ಓಡಾಡುವ ಆಟೋರಿಕ್ಷಾಗಳಲ್ಲೂ ಪ್ರಯಾಣಿಕರಿಂದ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಕುರಿತು ಅನೇಕ ದೂರುಗಳು ದಾಖಲಾಗುತ್ತಿವೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದೆಡೆ ಸಾರ್ವಜನಿಕರ ಶಾಪಿಂಗ್ ಜೋರಾಗಿದೆ. ಮತ್ತೊಂದೆಡೆ ಹಬ್ಬ ಆಚರಣೆಗಾಗಿ ಹೊರ ಊರುಗಳಿಗೆ ಹೋಗುವ ಜನರ ಸಂಖ್ಯೆ ಹೆಚ್ಚಿದೆ. ಆಟೋ ಚಾಲಕರು ಇದೇ ಪರಿಸ್ಥಿತಿಯ ಲಾಭ ಪಡೆದು ನಿಯಮಬಾಹಿರವಾಗಿ ಹೆಚ್ಚಿನ ದರ ಪಡೆಯುತ್ತಿದ್ದಾರೆ.

ಬೇಕಂತಲೇ ಪ್ರಯಾಣಿಕರು ಕರೆದ ಸ್ಥಳಕ್ಕೆ ಬರಲು ನಿರಾಕರಿಸಿ, ದುಪ್ಪಟ್ಟು ದರ ಕೊಟ್ಟರೆ ಮಾತ್ರ ಬರುತ್ತೇವೆ ಎಂದು ಅನಿವಾರ್ಯತೆ ಸೃಷ್ಟಿ ಮಾಡುತ್ತಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳೂ ಸಲ್ಲಿಕೆಯಾಗಿವೆ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಮೀಟರ್ ಅಳವಡಿಸಬೇಕು, ಆ ಪ್ರಕಾರವೇ ಸಾರ್ವಜನಿಕರಿಂದ ಹಣ ಪಡೆಯಬೇಕು ಎಂದು ಸೂಚನೆ ನೀಡಿದ್ದರೂ ಯಾರೊಬ್ಬರೂ ಮೀಟರ್ ಪ್ರಕಾರ ದುಡ್ಡು ಪಡೆಯುತ್ತಿಲ್ಲ. ಆಟೋರಿಕ್ಷಾಗಳಲ್ಲಿ ಚಾಲಕರು ಪಡೆದ ಪರವಾನಗಿ ಪತ್ರಗಳನ್ನು ಪ್ರಯಾಣಿಕರಿಗೆ ಕಾಣಿಸುವಂತೆ ಲಗತ್ತಿಸಬೇಕು ಎಂದು ನಿಯಮವಿದೆ.

ಆದರೆ ಅನೇಕ ಆಟೋಗಳಲ್ಲಿ ಈ ಪರವಾನಗಿ ಪತ್ರಗಳನನು ಲಗತ್ತಿಸಿರುವುದಿಲ್ಲ. ಇನ್ನು ಕೆಲವು ಆಟೋಗಳು ಯಾರದ್ದೋ ಹೆಸರಿನಲ್ಲಿ ಪರವಾನಿಗೆ ಪಡೆದಿರುತ್ತವೆ, ಇನ್ಯಾರೋ ಅದರ ಚಾಲಕರಾಗಿರುತ್ತಾರೆ. ಯೂನಿಫಾರ್ಮ್ ಹಾಕಿರುವ ಆಟೋ ಚಾಲಕರು ಸಿಗುವುದು ಅಪರೂಪ ಎಂಬಂತಾಗಿದೆ. ಇನ್ನು ಆನ್‌ಲೈನ್‌ಲ್ಲಿ ಒಮ್ಮೆ ಬುಕ್ ಮಾಡಿ ನಂತರ ರದ್ದುಪಡಿಸಿದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಆದ್ದರಿಂದ ಆನ್‌ಲೈನ್‌ನಲ್ಲಿ ದರ ವಿಽಸುವ ವಿಚಾರದಲ್ಲಿ ಸೂಕ್ತ ಸೂಚನೆಗಳನ್ನು ನೀಡಬೇಕು. ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆಟೋ ಚಾಲಕರ ವಿರುದ್ಧ ಕ್ರಮ ವಹಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗ ದಂತೆ ನೋಡಿಕೊಳ್ಳಬೇಕಿದೆ.