ವಿಶ್ವವಾಣಿ ಸುದ್ದಿಮನೆ
ವಿಜಯಪುರ :
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಕಿಡಿಕಾರಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಎಲ್.ಸಿ. ಸಿ. ಪಿ. ಯೋಗೇಶ್ವರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸರ್ಕಾರ ನಡೆಸಲು ಯಾರಿಂದಲೂ ಕಲಿಯುವ ಅವಶ್ಯಕತೆ ಇಲ್ಲ. ಅವರಿಗೆ ೪ ದಶಕದ ಅನುಭವ ಇದೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಎಲ್ಲ ಪಕ್ಷದ ಶಾಸಕರು ಭೇಟಿಯಾಗುತ್ತಾರೆ. ಇದನ್ನು ರಾಜಕೀಯ ಕಣ್ಣಿನಿಂದ ನೋಡಬಾರದು. ಸಂಪೂರ್ಣ ಅವಧಿ ಮುಗಿಯುವ ವರೆಗೂ ಯಡಿಯೂರಪ್ಪನವರೆ ಸಿ.ಎಂ.ಆಗಿ ಇರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಮತ್ತೊಂದೆಡೆ ಕೋವಿಡ್ ೧೯ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಸಿ.ಎಂ. ಸಿದ್ದರಾಮಯ್ಯನವರು ಕಾಂಗ್ರೆಸ್ ಕಣ್ಣಿನಿಂದ ಕೋವಿಡ್ ಕುರಿತು ವಿಚಾರಿಸಬಾರದು. ಕರೋನಾ ವೈರಸ್ ಗೆ ಜೆಡಿಎಸ್, ಬಿಜೆಪಿ, ಕಾಂಗ್ರೇಸ್, ಸೇರಿದಂತೆ ಎಲ್ಲ ಪಕ್ಷದವರು ಒಳಗಾಗುತ್ತಿದ್ದಾರೆ. ಪಕ್ಷದ ಬಣ್ಣದಿಂದ ಈ ರೋಗವನ್ನು ಅಳೆಯಲು ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.