Friday, 20th September 2024

ಆ ಕೃಷಿಕನಿಗೆ ಈಗ 50, ಅವರ ತರಕಾರಿ ಕೃಷಿಗೆ 25 !

ಸುಪ್ತ ಸಾಗರ

rkbhadti@gmail.com

ತರಕಾರಿ ಮಾತ್ರವೇ ಅಲ್ಲ. ಎಲ್ಲದಕ್ಕೂ ತಾವು ನಂಬಿದ ನೈತಿಕ ಮೌಲ್ಯ ಸಿದ್ಧಾಂತದ ಅಳವಡಿಕೆ ಶಿವಪ್ರಸಾದರದ್ದು. ಎರಡೂ ವರೆ ದಶಕದಲ್ಲಿ ಒಮ್ಮೆಯೂ ಇದನ್ನು ಮೀರಿ ಹೋಗಿಲ್ಲ. ಬೇಕಿದ್ದರೆ ಉಚಿತವಾಗಿ ತರಕಾರಿ ಹಣ್ಣು ಹಂಚುತ್ತಾರೆಯೇ ಹೊರತು ಮಧ್ಯವರ್ತಿಗಳಿಗೆ ಕೊಡುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಎಷ್ಟೋ ಮಂದಿಗೆ ತರಕಾರಿಯನ್ನು ಹಂಚಿದ್ದಾರೆ.

ಹೌದು, ತರಕಾರಿ ಕೃಷಿಯಲ್ಲಿ ಸ್ವಾವಲಂಬನೆ ಸಾಧನೆಯಷ್ಟೇ ಅಲ್ಲ, ವೈವಿಧ್ಯಮಯ ಕೃಷಿ ಪ್ರಯೋಗಗಳಿಂದ ಮಾದರಿಯಾದ ಕಾಸರಗೋಡು ಜಿಲ್ಲೆಯ ಪೆರ್ಲದ ಬಳಿಯ ಕೃಷಿಕ ಶಿವಪ್ರಸಾದ್ ವರ್ಮುಡಿ, ಮನೆಯಂಗಳದ ವೈವಿಧ್ಯಮಯ ತರಕಾರಿ ಬೆಳೆದು ಕೃಷಿಯಲ್ಲಿ ಸಾಧಿಸಿದ್ದಾರೆ, ಕಾಯಿಲೆ ಗಳನ್ನೂ ಗೆದ್ದಿದ್ದಾರೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ಇಡೀ ಕಟುಂಬದ ಪ್ರತಿ ಊಟದ ತಟ್ಟೆ ಸಮೃದ್ಧ, ಪೌಷ್ಟಿಕಾಂಶಯುಕ್ತ, ರುಚಿಕರ ನಿರ್ವಿಶವಾದ ತಾಜಾ ತರಕಾರಿ ಗಳಿಂದ ತುಂಬುಕೊಂಡಿದೆ. ಅಂದಂದಿನ ಅಡುಗೆಗೆ ಅಂದೇ ಅಲ್ಲ, ಆಗಷ್ಟೇ ಹಿತ್ತಿಲಿನಿಂದ ಕೊಯ್ದು ತಂದ ತಾಜಾ ತರಕಾರಿಗಳೇ. ಅದೂ ಒಂದಿನಿತೂ ರಾಸಾಯನಿಕ ಸೋಂಕದ, ಕೀಟನಾಶಕಗಳಿಲ್ಲದ ಶುದ್ಧ ದೇಸಿ ಪದ್ಧತಿಯಲ್ಲಿ ಬೆಳೆದದ್ದು. ಊಟದ ವಿಚಾರದಲ್ಲಿ ಅವರದ್ದು ಪಕ್ಕಾ ವೈಜ್ಞಾನಿಕ ಕ್ರಮ-ಶೇ.30 ಪ್ರೋಟೀನ್.

ಶೇ.30 ಗುಡ್ ಫ್ಯಾಟ್, ಶೇ.40 ಕಾರ್ಬೋ ಹೈಡ್ರೇಡ್ ಹಾಗೂ ಶೇ.20 ಫೈಬರ್. ಹೀಗಾಗಿ ಯಾವತ್ತೂ ಯಾವ ಕಾಯಿಲೆ ಗಳೂ ನಮ್ಮ ಬಳಿ ಸುಳಿದೇ ಇಲ್ಲ. ಮನೆಯವರಿಗಾಗಿ ಮದ್ದು ಎಂಬುದನ್ನು ತಂದದ್ದೇ ಇಲ್ಲ. ಅನಾರೋಗ್ಯದಿಂದ ವೈದ್ಯರ ಬಳಿ ಹೋಗಿದ್ದು, ಇಪ್ಪತ್ತು ವರ್ಷದ ಹಿಂದೆ ಅಪ್ಪನಿಗಾಗಿಯಷ್ಟೇ’ ಎನ್ನುತ್ತಾರೆ ಶಿವಪ್ರಸಾದ್.

ಅಯ್ಯೋ ತರಕಾರಿ ಇಲ್ಲದೇ ಅಡುಗೆಯೇ ರುಚಿಸದು. ಪೇಟೆಯಿಂದ ಕೊಂಡು ತರುವುದೆಂದರೆ ದುಬಾರಿ. ಮಾರುಕಟ್ಟೆಯಲ್ಲೂ ಅವವೇ ತರಕಾರಿಗಳು ಸಿಗುತ್ತವೆ. ವೆರೈಟಿನೇ ಇಲ್ಲ. ಜತೆಗೆ ಯಾವತ್ತೋ ಕೊಯ್ದು, ಎಲ್ಲಿಂದಲೋ ಸಾಗಿಸಿ, ಯಾವ ಕೊಳೆಯ ರಾಶಿಯ ಹೊರಳಾಡಿಸಿ ಬಣ್ಣ ಬೆರೆಸಿ ಮಾರುತ್ತಾರೆ. ನಮಗೆ ಬೇಕೆನ್ನುವುದು ಬೇಕಾದಾಗ ಸಿಗುವುದಿಲ್ಲ. ಬೆಳೆದುಕೊಳ್ಳೋಣ ವೆಂದರೆ ಇಷ್ಟು ಪುಟ್ಟ ಜಾಗದಲ್ಲಿ ಏನಾಗುತ್ತೆ ಎನ್ನುವವರಿಗೆ ನಿಮಗೆ ಇರುವ ಜಾಗದ ನಿಮ್ಮ ಮನೆಗೆ ಅಗತ್ಯ ತರಕಾರಿಗಳನ್ನು ವರ್ಷವಿಡೀ ಬೆಳೆದುಕೊಳ್ಳುವುದು ಹೇಗೆಂಬುದನ್ನು ಅವರೇ ಹೇಳಿಕೊಡುತ್ತಾರೆ.

ಯಾವ್ಯಾವ್ಯಾಗ ಯಾವ್ಯಾವ ತರಕಾರಿ ಬೆಳೆದರೆ ಚೆನ್ನ ಎಂಬುದರ ಕುರಿತು ಮೊಟ್ಟ ಮೊದಲ ಬಾರಿಗೆ ಅತ್ಯಂತ ಕರಾರುವಾಕ್ ‘ತರಕಾರಿ ಬೆಳೆ ಪಂಚಾಂಗ’ವನ್ನೇ ತಯಾರಿಸಿದ ಖ್ಯಾತಿ ವರ್ಮುಡಿಯವರದ್ದು. ಪೆರ್ಲದಲ್ಲಿ ಎಲ್ಲರೂ ನನಗೆ ಆತ್ಮೀಯರೇ. ಯಾರು ಸಿಕ್ಕರು ಒಂದರೆಗಳಿಗೆ ನಿಲ್ಲಿಸಿ ಮಾತಾಡಿಸುವ ಆತ್ಮೀಯರೇ. ಆದರೆ, ನೀವು ನಂಬಬೇಕು. ಪೇಟೆಯಲ್ಲಿ ಇಬ್ಬರು ಮಾತ್ರ ಇಂದಿಗೂ ಅಪರಿಚಿತರಾಗೇ ಉಳಿದಿದ್ದಾರೆ.

ಮೆಡಿಕಲ್ ಶಾಪ್‌ನವರು ಹಾಗೂ ತರಕಾರಿ ಅಂಗಡಿಯವರನ್ನು ಈವರೆಗೆ ಪರಿಚಯ ಮಾಡಿಕೊಳ್ಳುವ ಪ್ರಮೇಯವೇ
ಬರಲಿಲ್ಲ. ಏಕೆಂದರೆ ತರಕಾರಿ ನಮ್ಮ ಊರಿಗೆ ಹಂಚುವಷ್ಟಿದೆ, ಇದನ್ನು ತಿಂದು ನಾವು ಆರೋಗ್ಯಕಾರಿಯಾಗಿರುವುದರಿಂದ ಮೆಡಿಕಲ್ ಶಾಪ್‌ಗೆ ಹೋಗುವ ಸಂದರ್ಭವೇ ಬೀಳುವುದಿಲ್ಲ ಎಂದು ಹಾಸ್ಯದ ಧಾಟಿಯಲ್ಲಿ ಹೇಳುತ್ತಾರಾದರೂ ಶಿವ ಪ್ರಸಾದ್ ಮಾತಿನ ಹಿಂದಿನ ವಾಸ್ತವ ಅರ್ಥವಾಗದಿರದು.

ಇಷ್ಟೆಲ್ಲಕ್ಕೆ ಕಾರಣವೇ ‘ಅಪ್ಪನ ಕಾಯಿಲೆ’ ಎನ್ನುವಾಗಲೊಮ್ಮೆ, ಅವರಿಗೆ ಇಂಥ ಸ್ವಚ್ಛ-ಸಮೃದ್ಧಾಹಾರ ಒದಗಿಸಲಾಗಲಿಲ್ಲ ಎಂಬ ವಿಷಾದ ವರ್ಮುಡಿಯವರ ಮಾತಲ್ಲಿ ಇಣುಕುತ್ತದೆ. ಶಿವಪ್ರಸಾದ್‌ರ ತಂದೆಯವರಿಗೆ ಮಧುಮೇಹ ಸಮಸ್ಯೆ ಮಿತಿಮೀರಿದಾಗ ವೈದ್ಯರು ಹೇಳಿದ್ದು ಹೇರಳ ತರಕಾರಿ ಬಳಸಲು. ಪ್ರತಿ ದಿನ ಪೇಟೆಯಿಂದ ದುಬಾರಿ ತರಕಾರಿ ಕೊಂಡು ತರಬಹುದಾದರೂ ರಾಸಾಯನಿಕ ಹಾಕಿಯೇ ಬೆಳೆಸಿದ ಅವು ನಿಜಕ್ಕೂ ಪರಿಣಾಮಕಾರಿಯೇ? ಈ ಪ್ರಶ್ನೆಗೆ ವೈದ್ಯರ ಬಳಿ ಉತ್ತರವಿರಲಿಲ್ಲ.

ಕೊನೆಗೆ ಈ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ಮುಂದಾಗಿ ಮನೆಯಂಗಳದ ಸಣ್ಣ ಪುಟ್ಟ ತರಕಾರಿಗಳನ್ನು
ಬೆಳೆಯಲು ಆರಂಭಿಸಿದವರು ವರ್ಮುಡಿ. ದೈನಂದಿನ ಬಳಕೆಗೆ ವೈವಿಧ್ಯ ಬೇಕೆನಿಸಿದಾಗ ಸುಮುತ್ತಲ ಪರಿಸರದಲ್ಲಿ
ಬೆಳೆಯಬಹುದಾದ ಇನ್ನಷ್ಟು ಬಗೆಯನ್ನು ಬೆಳೆಸಲು ಮುಂದಾದರು. ಹೀಗೆಯೇ ತರಕಾರಿಗಳ ಸಂಖ್ಯೆ ವೃದ್ಧಿಸುತ್ತಾ ಸಾಗಿ ಈ 25 ವರ್ಷಗಳಲ್ಲಿ ಅವರ ಅಂಗಳದಲ್ಲಿ ಏನಿಲ್ಲ ಎಂಬುದನ್ನು ಹುಡುಕಬೇಕು.

ಅಷ್ಟು ತರಕಾರಿಗಳ ವೈವಿಧ್ಯ ಕಣ್ಣನ್ನು ತಣಿಸುತ್ತವೆ. ತರಕಾರಿ ಕೃಷಿಗೆಂದೇ ಇವರು ಅರ್ಧ ಎಕರೆ ಮೀಸಲಿಟ್ಟಿದ್ದಾರೆ.
ಸಾಮಾನ್ಯವಾಗಿ ಹೆಚ್ಚಿನ ಕೃಷಿಕರು ಮಳೆಗಾಲದಲ್ಲಿ ಒಂದಷ್ಟು ತರಕಾರಿಗಳನ್ನು ಅಂಗಳದಲ್ಲಿ ಬೆಳೆದುಕೊಳ್ಳುತ್ತಾರೆ. ಕೊಯ್ಲು ಮುಗಿದು ಬಳಿಕ ಗದ್ದೆಯ- ತೋಡದಂಚಿನ ಕುಂಬಳ- ಮಂಗಳೂರು ಸೌತೆಯಂಥ ಕೆಲವನ್ನು ಬೇಕೂ ಬೇಡವೆಂಬಂತೆ
ಬಿತ್ತಿರುತ್ತಾರೆ. ಅದು ಕಾಯಿಬಿಟ್ಟರೆ ಬಿಟ್ಟಿತು. ಇಲ್ಲವಾದರೆ ಇಲ್ಲ. ಇನ್ನು ಮಲೆನಾಡು-ಕರಾವಳಿಯಲ್ಲಿ ಹೆಣ್ಣಮಕ್ಕಳು ಹಿತ್ತಿಲಲ್ಲಿ ಒಂದಷ್ಟು ಬಳೆ, ಹರಿವೆ, ತೊಂಡೆ ಬೆಲೆದುಕೊಳ್ಳುವುದು ಉಂಟು.

ಆದರೆ ಒಮ್ಮೆ ಮಳೆ ಮುಗಿಯಿತೆಂದರೆ ಚೀಲ ಹಿಡಿದು ಪೇಟೆಗೆ ಹೊರಡುವುದು ಇದ್ದದ್ದೇ. ಆದರೆ ಶಿವಪ್ರಸಾದ್ ರದ್ದು ಹಾಗಲ್ಲ. ಆಯಾ ಕಾಲಕ್ಕೆ ಬೆಳೆಯಬಹುದಾದದ್ದು ಅವರ ಅಂಗಳದಲ್ಲಿ ಬೆಳೆದಿರುತ್ತದೆ. ಒಮದಾದ ನಂತರ ಇನ್ನೊಂದು ಕೊಯ್ಲಿಗೆ
ಬರುವಂತೆ ಪಕ್ಕಾ ಯೋಜಿತವಾಗಿ ಬಿತ್ತಿರುತ್ತಾರೆ. ಊರಿನವರಿನ ಇತರರದ್ದು ಇವತ್ತಿನ ಅಡುಗೆಗೆ ಏನೂ ಇಲ್ಲ, ಎಲ್ಲಿಂದ ತರುವುದು ಎಂಬ ಯೋಚನೆಯಾದರೆ, ಇವರ ಮನೆಯಲ್ಲಿ ಇಷ್ಟೆಲ್ಲದರಲ್ಲಿ ಯಾವುದನ್ನು ಇವತ್ತು ಮಾಡುವುದು ಎಂಬ ಗೊಂದಲ. ಹೀಗಾಗಿ ಪದಾರ್ಥಗಳ ವೈವಿಧ್ಯ ಊಟದ ತಟ್ಟೆಯಲ್ಲಿ ವಿಜೃಂಭಿಸುತ್ತಿರುತ್ತದೆ.

ಕಪಿಲಾಮೃತದ ಸಿಂಚನ: ಯಾವ ತರಕಾರಿಯ ಬೀಜಗಳನ್ನೂ ಇವರು ಹೊರಗಿನಿಂದ ತಂದದ್ದಿಲ್ಲ. ಸಾಂಪ್ರದಾಯಿಕವಾಗಿ ಬೀಜ ತಯಾರಿಸಿ, ಸಂಗ್ರಹಿಸಿ, ಮತ್ತೆ ಮತ್ತೆ ಬಿತ್ತಿ ಬೆಳೆಯುತ್ತಾರೆ. ಅದಕ್ಕೆ ದೇಸಿ ತಳಿ ಹಸುವಿನದ್ದೇ ಸಾವಯವ ಗೊಬ್ಬರ. ಕೀಟನಾಶಕವಾಗಿ ತಾವೇ ಪ್ರಯೋಗಗಳಿಂದ ಕಂಡುಕೊಂಡ ಹಲ ಬಗೆಯ ಸಸ್ಯಜನ್ಯ ಮದ್ದು ಸಿಂಪಡನೆ. ರಾಮಚಂದ್ರಾಪುರ ಮಠದ ಪರಮಶಿಷ್ಯರಾದ ಅವರು, ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಆಣತಿಯಂತೆ ಒಂದಷ್ಟು ದೇಸಿ ಗೋ ತಳಿಗಳನ್ನೂ ಪೋಷಿಸುತ್ತಿದ್ದಾರೆ.

ಮಲೆನಾಡು ಗಿಡ್ಡ ಸೇರಿದಂತೆ ಈ ಗೋವುಗಳ ಮೂತ್ರ, ಗೋಮಯ ಹಾಗೂ ಕೆಲವೊಂದು ವಿಶಿಷ್ಟ ಸಸ್ಯಗಳ ರಸದೊಂದಿಗೆ ತಾವೇ ತಯಾರಿಸಿದ ‘ಕಪಿಲಾಮೃತ’ ಸಿಂಪಡನೆ ತರಕಾರಿಗಳನ್ನು ರೋಗ ಮುಕ್ತವಾಗಿಸಿದೆ. ಹಾಗೆಂದು ಪಾಳೆಕರ್ ಅವರ
ಜೀವಾಮೃತಕ್ಕಿಂತ ಇದು ಭಿನ್ನ. ಇಂಥ ಪ್ರಯೋಗಗಳು ಶಿವಪ್ರಸಾದ್ ಅವರಲ್ಲಿ ನಿರಂತರ. ಹುಳಿ ಮಜ್ಜಿಗೆ, ತುಳಸಿ ರಸದಿಂದ ತಯಾರಿಸಿದ ದ್ರಾವಣ ಇವರದ್ದೇ ಇನ್ನೋವೇಶನ.

ಮಾತ್ರವಲ್ಲ, ಸ್ಥಳೀಯ ಲಭ್ಯ ಪದಾರ್ಥಗಳನ್ನೇ ಬಳಸಿ ‘ತ್ರೀ ಜಿ’ ಸೂತ್ರದ ದ್ರಾವಣ ಇನ್ನೂ ವಿಶಿಷ್ಟವಾದುದು. ಶುಂಠಿ, ಬೆಳ್ಳುಳ್ಳಿ,
ಗಾಂಧಾರಿ ಮೆಣಸು ಇದರ ಪ್ರಧಾನ ಅಂಶಗಳು. ಇಂಥ ಅದೆಷ್ಟೋ ಪ್ರಯೋಗಗಳೂ ನಿರಂತರ ನಡೆಯುತ್ತಲೇ ಇರುತ್ತವೆ ಇವರ ತರಕಾರಿ ತೋಟದಲ್ಲಿ. ಹಾಗೆಂದು ಇಂಥವಕ್ಕೆ ಹಕ್ಕು ಸ್ವಾಮ್ಯ ಪಡೆಯಬೇಕೆಂದಾಗಲೀ, ತಮ್ಮ ಅನುಮತಿ ಪಡೆದೇ ಬಳಸಬೇಕೆಂಬ ಬಯಕೆಯಾಗಲೀ ಅವರಿಗಿಲ್ಲ. ರೈತರಿಗೆ ಅನುಕೂಲವಾಗುವುದಾದರೆ ಆಗಲಿ, ನನ್ನದೇ ಎನ್ನುವ ಹೆಗ್ಗಳಿಕೆ ಕಟ್ಟಿಕೊಂಡು ಏನಾಗಬೇಕಿದೆ ಎಂಬ ನಿರ್ಲಿಪ್ತ ಭಾವ ಅವರದ್ದು.

ತರಕಾರಿ ಕ್ಯಾಲೆಂಡರ್: ವರ್ಮುಡಿಯವರು ತರಕಾರಿ ಬಿತ್ತನೆ ಹಾಗೂ ಕೊಯ್ಲಿಗೆ ಸಂಬಂಧಿಸಿದಂತೆ ಪಕ್ಕಾ ಲೆಕ್ಕಾಚಾರದ ವಾರ್ಷಿಕ ಟೈಮ್ ಟೇಬಲ್ ಅನ್ನೇ ಸಿದ್ಧಪಡಿಸಿಬಿಟ್ಟಿದ್ದಾರೆ. ತರಕಾರಿ ಪಂಚಾಂಗ ಅಥವಾ ಕ್ಯಾಲೆಂಡರ್ ಎಂದೇ ಜನಪ್ರಿಯ ವಾಗಿರುವ ಅದನ್ನು ಸಾವಯವ ಕೃಷಿ ಪರಿವಾರ ಮುದ್ರಿಸಿ ಮಾರಾಟವನ್ನೂ ಮಾಡಿದೆ. ಸಾವಿರದ ಸಂಖ್ಯೆಯಲ್ಲಿ ಅದು
ಬಿಕರಿಯಾಗಿದೆ. ಶಿವಪ್ರಸಾದ್ ಹೇಳುವ ಪ್ರಕಾರ, ತಳಿಯ ಆಯ್ಕೆ, ಬೀಜ, ಗೊಬ್ಬರ, ಉಪಚಾರದಷ್ಟೇ ಮುಖ್ಯ ಸಂಗತಿ ಅದನ್ನು ಮುಖ್ಯ ಬಿತ್ತುವ ಅಥವಾ ನೆಡುವ ಸಮಯ.

ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗೆ ಹೊಂದುವಂಥ ಹಾಗೂ ಆಯಾ ಪ್ರದೇಶಕ್ಕೆ ಸೂಕ್ತವಾಗಬಲ್ಲ ಬೆಳೆಗಳ ಮಾರ್ಗದರ್ಶಿ ಸಿದ್ಧಗೊಂಡಿದ್ದು ಅನುಭವದಿಂದ. ಯಾವ್ಯಾವಾಗ ಯಾವ ಬೆಳೆ ಶುರು ಮಾಡಬೇಕೆಂಬುದಕ್ಕೆ ಈ ಕ್ಯಾಲೆಂಡರನಲ್ಲಿ ಮಾಹಿತಿ ಇದೆ. ಅಮವಾಸ್ಯೆ ಮತ್ತು ಹುಣ್ಣಿಮೆಗಳ ನಡುವೆ ಪ್ರಥಮ, ದ್ವಿತೀಯ, ತೃತೀಯ ಎಂಬಿತ್ಯಾದಿ ತಿಥಿ-ವಾರ, ಮಳೆ ನಕ್ಷತ್ರ ಗಳಿಗನುಗುಣವಾಗಿ ತರಕಾರಿಗಳನ್ನು ಬಿತ್ತಿ ಬೆಳೆದರೆ ಮಾತ್ರವೇ ಸೂಕ್ತ ನಿರೀಕ್ಷಿತ ಬೆಳೆ ಸಾಧ್ಯ.

ಇವರ ತರಕಾರಿ ಕೃಷಿ ಕ್ಯಾಲೆಂಡರ್ ಪ್ರಕಾರ ‘ಮಿ’ಯಿಂದ ಕೊನೆಗೊಳ್ಳುವ ತಿಥಿಯ ದಿನ ಬೀಜ ಬಿತ್ತಲೇ ಬಾರದು. ಅಂದರೆ ಪಂಚಮಿ, ಸಪ್ತಮಿ, ನವಮಿ, ದಶಮಿ ಇಂಥ ತಿಥಿಗಳಂದು ತರಕಾರಿ ಬಿತ್ತಿದರೆ ಖಂಡಿತ ಅವು ಸೂಕ್ತವಾಗಿ ಬೆಳೆಯುವುದಿಲ್ಲ. ಇಂಥ ಜ್ಞಾನ ಪರಂಪರಾನುಗತವಾಗಿ ಹಿರಿಯರಿಂದ ಬಂದದ್ದು ಎನ್ನುತ್ತಾರೆ ಅವರು.

ಉದಾಹರಣೆಗೆ ಆರಿದ್ರಾ ನಕ್ಷತ್ರದಲ್ಲಿ ಬರುವ ಜೂನ್ ತಿಂಗಳ ಅಮಾವಾಸ್ಯೆಯಂದು ಮುಳ್ಳುಸೌತೆ ಬೀಜ ಹಾಕಬೇಕು. ಜುಲೈ ತಿಂಗಳ ಆಟಿ ಅಮಾವಾಸ್ಯೆಯ ದಿನ ಸೌತೆ, ಕುಂಬಳಗಳ ಬೀಜ ಹಾಕಬಹುದು. ಬಸಳೆ ನೆಡಬಹುದು, ಸೆಪ್ಟೆಂಬರ್ ತಿಂಗಳ ತಾರೀಕು ೧೫- ೨೦ರ ಅಂದಾಜು ತೊಂಡೆ ಬಳ್ಳಿ ನೆಟ್ಟರೆ ಉತ್ತಮ. ಅದೇ ಆಸುಪಾಸು ಹಳೆ ಬಳ್ಳಿ ಕಡಿದು ಚಪ್ಪರ ಹಾಕಬೇಕು. ತೊಂಡೆ ಕೃಷಿಗೆ ಎರಡು ಹೊಂಡ ಮಾಡಿಕೊಂಡಿದ್ದಾರೆ.

ಒಂದು ಹೊಂಡದ ಬಳ್ಳಿ ಸೆಪ್ಟೆಂಬರ್‌ನಲ್ಲಿ ಕಡಿದು ಬಿಡುತ್ತಾರೆ. ಇನ್ನೊಂದರಲ್ಲಿ ಹೊಸದಾಗಿ ನೆಡುತ್ತಾರೆ. ಈ ಕ್ರಿಯೆಯ ಆವರ್ತನದಿಂದಾಗಿ ದೀರ್ಘಕಾಲ ತೊಂಡೆ ಸಿಗುತ್ತಿರುತ್ತದೆ ಎಂಬುದು ಅನುಭವ. ತೊಂಡೆಯಂಥ ತರಕಾರಿಯಲ್ಲಿ ಕೂಳೆ ಬೆಳೆಯ ಪ್ರಯೋಗವೂ ಯಶಸ್ಸು ಕಂಡಿದೆ. ಜತೆಗೆ ವರ್ಷಪೂರ್ತಿ ಇಂಥ ತರಕಾರಿ ಸಿಗುವಂತೆ ಯೋಜಿಸಿದ್ದಾರೆ.

ಮಳೆಗಾಲದ ತರಕಾರಿಯ ಬೀಜವನ್ನು ಏಪ್ರಿಲ್ ೧೫ಕ್ಕೆ ಮೊದಲೇ ಬಿತ್ತನೆ. ಮೇಲಿಂದ ನೀರು ಕೇಳದೇ ಮಳೆಯಿಂದಲೇ ಬೆಳೆಯುವ ಈ ಕ್ರಮದಿಂದ ಗಿಡ ಬೇಗನೆ ಬೆಳೆದು ಜುಲೈ ಹೊತ್ತಿಗೆ ಬೆಳೆ ಕೊಡತೊಡಗುತ್ತದೆ ಎನ್ನುತ್ತಾರೆ.

ಮಾರುಕಟ್ಟೆ ಮೋಸ: ಎಲ್ಲ ಕೃಷಿ ಉತ್ಪನ್ನಗಳಂತೆಯೇ ತರಕಾರಿಯಲ್ಲೂ ಲಾಭ ಮಾಡಿಕೊಳ್ಳುವುದು ಮಧ್ಯವರ್ತಿಗಳೇ. ಆದರೆ ತರಕಾರಿಯಲ್ಲಿ ದೀಢೀರ್ ಲಾಭ ಮತ್ತು ಹೆಚ್ಚಿನ ಲಾಭಾಂಶ ಅವರ ಪಾಲಾಗುತ್ತದೆ. ಪೇಟೆಯಮ್ಮೆ ೪೦ ರು. ಕೆ.ಜಿಯಂತೆ
ಇವರು ಮಾರಿದ ತೊಂಡೆ ಕಣ್ಣೆದುರೇ ೮೦ ರು.ನಂತೆ ಮಾರಾಟವಾದ ನಂತರ ಯಾವುದೇ ಕಾರಣಕ್ಕೂ ಬೇರೆಯವರಿಗೆ ತರಕಾರಿ ಮಾರದಿರುವ ನಿರ್ಧಾರ ಮಾಡಿದರಂತೆ.

ಬೆಳೆಗಾರ ತನ್ನ ಬೆವರಿನ ಶ್ರಮ, ಸಮಯ, ಒಳಸುರಿಗಳ ವೆಚ್ಚ ಎಲ್ಲ ಕಳೆದು ಕೇವಲ ೨೦ ರು. ಲಾಭ ಪಡೆದರೆ ಕೆಲವೇ ಕ್ಷಣದಲ್ಲಿ ಮಧ್ಯವರ್ತಿ ಯಾವುದೇ ಶ್ರಮವಿಲ್ಲದೇ ೪೦ ರು. ಲಾಭ ಪಡೆಯುವ ಅನ್ಯಾಯದಿಂದ ಕೃಷಿಕ ಮುಕ್ತನಾಗಬೇಕು ಎನ್ನುತ್ತಾರೆ.

ಪುಟ್ಟ ಜಾಗದಲ್ಲಿ ತರಕಾರಿ ಕೃಷಿಯ ವೆಚ್ಚವನ್ನು ತರಕಾರಿಗಳಿಂದಲೇ ಸರಿದೂಗಿಸಲು ಸಾಧ್ಯ. ಜತೆಗೆ ಉತ್ತಮ ಆದಾಯ, ಶುದ್ಧ ಆಹಾರ ಎರಡೂ ಸಿಗುತ್ತದೆ. ಹೋಟೆಲಿನವರು, ಬೇಕರಿಯವರೊಂದಿಗೆ ಒಪ್ಪಂದ ಮಾಡಿಕೊಂಡರೆ ಇಡೀ ವರ್ಷ ಉತ್ತಮ ದರದಲ್ಲಿ ಮಾರಬಹುದು. ಇದರ ಹೊರತಾಗಿಯೂ ಸಾವಯವ ತರಕಾರಿಗೆ ತುಸು ಹೆಚ್ಚಿನ ದರ ಕೊಟ್ಟು ಕೊಳ್ಳುವವರು ಸನಿಹದ ಚಿಕ್ಕ ಪೇಟೆಯ ಸಿಗುತ್ತಾರೆ ಎಂಬ ಕಿವಿಮಾತು ಹೇಳುತ್ತಾರೆ.

ನನ್ನ ಊಟದಲ್ಲಿ ಮೂರನೇ ಎರಡು ಭಾಗದಷ್ಟು ತರಕಾರಿ ಇರುತ್ತದೆ. ಅದೂ ತೀರಾ ತಾಜಾ, ಅಂದಂದೇ ಕೊಯ್ದದ್ದು. ಸೌತೆ, ಕುಂಬಳ, ಚೀನಿ(ಸಿಹಿಗುಂಬಳ) ಕಾಯಿಯಂಥವು ಸಹ ಅವತ್ತೇ ಕೊಯ್ದು ಅವತ್ತೇ ಪದಾರ್ಥ ಮಾಡುವುದು. ಹೆಚ್ಚು ಕಾಲ ತಾಳುವ ತರಕಾರಿಗಳನ್ನು ಸಹ ದಾಸ್ತಾನು ಮಾಡುವುದಿಲ್ಲ. ಉಳಿದೆಲ್ಲವರೂ ಅನ್ನಕ್ಕೆ ತರಕಾರಿಯ ಪದಾರ್ಥ ಕಲೆಸಿಕೊಂಡರೆ
ನಾವು ತರಕಾರಿಗಳಿಗೆ ಅನ್ನು ಸೇರಿಸಿ ತಿನ್ನುತ್ತೇವೆ.

ಬಳ್ಳಿ, ಗಿಡ, ಮರ, ಹಾಗೂ ಗಡ್ಡೆಯ ತರಕಾರಿಗಳೆಂಬ ನಾಲ್ಕೂ ವಿಧವನ್ನು ಇವರು ಕೃಷಿ ಮಾಡುತ್ತಾರೆ. ಹೆಚ್ಚುಕಮ್ಮಿ ಮೂರು ಡಜನ್ ವೈವಿಧ್ಯದ ತರಕಾರಿ ಬೆಳೆಯುವ ಇವರ ತೋಟದ ಹಣ್ಣುಗಳಿಗೂ ಕೊರತೆಯಿಲ್ಲ. ವರ್ಷವಿಡೀ ದೊರೆಯುವ ಹಣ್ಣು ಗಳನ್ನೂ ಬೆಳೆದುಕೊಂಡಿದ್ದಾರೆ. ಪಾರಂಪರಿಕವಾಗಿ ಬಂದ ಅಡಕೆ, ಬಾಳೆ, ತೆಂಗು ಕೃಷಿಯೂ ಇದೆ.

ನೈತಿಕ ಸಿದ್ಧಾಂತ: ತರಕಾರಿ ಮಾತ್ರವೇ ಅಲ್ಲ. ಎಲ್ಲದಕ್ಕೂ ತಾವು ನಂಬಿದ ನೈತಿಕ ಮೌಲ್ಯ ಸಿದ್ಧಾಂತದ ಅಳವಡಿಕೆ ಶಿವಪ್ರಸಾದರದ್ದು. ಎರಡೂವರೆ ದಶಕದಲ್ಲಿ ಒಮ್ಮೆಯೂ ಇದನ್ನು ಮೀರಿ ಹೋಗಿಲ್ಲ. ಬೇಕಿದ್ದರೆ ಉಚಿತವಾಗಿ ತರಕಾರಿ ಹಣ್ಣು
ಹಂಚುತ್ತಾರೆಯೇ ಹೊರತು ಮಧ್ಯವರ್ತಿಗಳಿಗೆ ಕೊಡುವು ದಿಲ್ಲ. ಕೋವಿಡ್ ಸಂದರ್ಭದಲ್ಲಿ ಎಷ್ಟೋ ಮಂದಿಗೆ ತರಕಾರಿಯನ್ನು ಹಂಚಿದ್ದಾರೆ.

ತಾವು ಬಳಸದ ರಬ್ಬರ್‌ನಂಥ ಯಾವುದೇ ವಾಣಿಜ್ಜಿಕ್ಕ ಬೆಳೆಯನ್ನು ತಾವು ಬೆಳೆಯುವುದಿಲ್ಲ. ಸಾವಯವ ತರಕಾರಿ ಸಮೃದ್ಧಿ
ಸಾಧನೆ ಪ್ರತಿ ರೈತನ ಮನೆಯಲ್ಲಿರಬೇಕು. ಅದು ಎಷ್ಟರಮಟ್ಟಿಗೆಂದರೆ ವಾರ್ಷಿಕ ಹಬ್ಬ-ಸಮಾರಂಭಗಳಿಗೂ ಕೃಷಿಕ,
ಪೇಟೆಯ ತರಕಾರಿಗೆ ಕೈಚಾಚಬಾರದು ಎನ್ನುತ್ತಾರೆ. ವರ್ಷದ ಹಿಂದೆ ೧೫೦ ಅತಿಥಿಗಳು ಸೇರಿದ್ದ ಕಾರ್ಯಕ್ರಮದಲ್ಲೂ
ನೂರು ಪ್ರತಿಶತ ಮನೆ ತರಕಾರಿಯದೇ ಊಟ!

ಇವರು ಹೊಸಹೊಸ ತರಕಾರಿಗಳನ್ನು ಹುಡುಕುತ್ತಿರುತ್ತಾರೆ. ಹೀಗೆ ಸಿಕ್ಕಿದ್ದು ಉತ್ತರದ ಹೃಷಿಕೇಶದ ಹೀರೆಕಾಯಿ. ಈ ತಳಿ
ಅಲ್ಲಿ ಬೇಲಿ ಬದಿಯಲ್ಲಿ ಧಾರಾಳ ಬೆಳೆಯುತ್ತಿರುತ್ತದಂತೆ. ಇವರ ಹಿತ್ತಲಿಗಿದು ಬಂದು ಮನ ಗೆದ್ದು ಆರೆಂಟು ವರ್ಷವಾಯಿತು. ನೀರಿನಂಶ ಹೆಚ್ಚು. ಸ್ವಲ್ಪ ಸಿಹಿಯೂ ಇದೆ. ಇದರ ಸಲಾಡ್ ಮಾಡಿ ಗಾಂಧಾರಿ ಮೆಣಸು ನುರಿದುಕೊಂಡರೆ ದೋಸೆಗೆ ಚಟ್ನಿಯ ಬದಲೂ ಬಳಸಬಹುದು. ಪ್ರತಿವರ್ಷ ಬೆಳೆಸುವ ಆರೆಂಟು ಗಡ್ಡೆ ತರಕಾರಿಗಳಲ್ಲಿ ಹೆಚ್ಚಿನ ಆದ್ಯತೆ ಕಲಶ ಕೆಸುವಿಗೆ. ಇದರ
ಗಡ್ಡೆಯ ಆಕಾರದಿಂದಾಗಿ ಈ ಹೆಸರು ಬಂದಿದೆ. ‘ಕಲಶ ಕೆಸು’ ಆಲುಗಡ್ಡೆಗೆ ಉತ್ತಮ ಪರ್ಯಾಯ.

ಪಲ್ಯ, ಸಾಂಬಾರ್, ಮಸಾಲೆ ದೋಸೆಗೆ ಬಾಝಿ ಕೂಡ ಇದರದ್ದೇ. ಒಂದಷ್ಟು ಹೆಚ್ಚು ತಿಂದರೂ ಹೊಟ್ಟೆಗೆ ತೊಂದರೆ
ಆಗುವುದಿಲ್ಲ ಎನ್ನುತ್ತಾರೆ. ಈಚೆಗೆ ಅವರ ಹಿತ್ತಿಲು ಸೇರಿದ ಎಲೆ ತರಕಾರಿ ಛಾಯಾ ಮಾನಸ ಒಂದು ಪೊದರುಗಿಡ (Shrub plant). ಇದು ಕೇರಳದಲ್ಲಿ ಜನಪ್ರಿಯ. ಸುಲಭದಲ್ಲಿ ಬೆಳೆದು ಬಹುವರ್ಷ ಉಳಿಯುತ್ತದೆ. ಗಿಡ ಕೊಟ್ಟವರು ಇದನ್ನು ತಿನ್ನಬಹುದು ಎಂದರೂ ಇವರಿಗೆ ಧೈರ್ಯ ಬಂದದ್ದು ಒಂದು ದನ ಹಿತ್ತಿಲು ನುಗ್ಗಿ ತಿಂದ ಮೇಲೆಯೇ. ಈಚೆಗೆ ಇದರ ಪತ್ರೊಡೆ
ಮಾಡಿ ಸವಿದರು. ಹಾಗೆಮದು ಸೋಲುಗಳೇ ಇಲ್ಲವೆಂತಲ್ಲ.

ಸಾಕಷ್ಟು ಆರಂಭಿಕ ತೊಡಕು, ಸಮಸ್ಯೆಗಳನ್ನು ಎದುರಿಸಿ ಹೈರಾಣಾಗಿದ್ದಾರೆ. ಆದರೆ ಇಂದು ಶಿವಪ್ರಸಾದ್ ರ ಅಂಗಳದಲ್ಲಿ ತಲೆ ಎತ್ತಿರುವ ತರಕಾರಿ ಜಗತ್ತಿನ ವೈಭವ ಕಾಣಲು ಎರಡು ಕಣ್ಣುಗಳು ಸಾಲದು.