ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿ ನ.೧ ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನವಾಗಿ ೨.೫೦ ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದ್ದಾರೆ.
ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾ ದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್ ನಿರ್ದೇಶಕರಾದ ಎಂ.ಕೆ. ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್. ಹೆಚ್.ಬಿ. ಶಿವನಂಜಪ್ಪ, ಜಿ. ಚಂದ್ರ ಶೇಖರ್, ಹೆಚ್.ಕೆ. ರೇಣುಕಪ್ರಸಾದ್, ಎಸ್.ಆರ್. ಗೌಡ, ಚನ್ನಮಲ್ಲಪ್ಪ, ರಾಷ್ಟಿçÃಯ ಹೈನು ಅಭಿವೃದ್ದಿ ಮಂಡಳಿಯ ರಜನಿ ಬಿ.ತ್ರಿಪಾಠಿ, ಹೆಚ್.ಕೆ. ರಾಘವೇಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್ ಅವರೊಂದಿಗೆ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿ, ಜಿಲ್ಲೆಯಲ್ಲಿ ಅತಿವೃಷ್ಠಿ, ಮೇವಿನ ಕೊರತೆ, ಜಾನುವಾರುಗಳಲ್ಲಿ ಕಂಡು ಬಂದಿರುವ ಚರ್ಮದ ಗಂಟು ರೋಗದಿಂದ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಒಕ್ಕೂಟವು ನವೆಂಬರ್ ೧ ರಿಂದ ಹಾಲಿನ ದರ ಹೆಚ್ಚಿಸಿ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ ೨.೫೦ ರೂ.ನಂತೆ ವಿಶೇಷ ಪ್ರೋತ್ಸಾಹ ಧನ ನೀಡಲು ತೀರ್ಮಾನ ಕೈಗೊಂಡಿದೆ. ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ. ೩.೫ ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ ೩೦ ರೂ., ಸಂಘಗಳಿಗೆ ೩೦.೯೩ ರೂ. ಹಾಗೂ ೪೧ ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ ೩೧.೫೪ ರೂ., ಸಂಘಗಳಿಗೆ ೩೨.೪೭ ರೂ.ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಒಕ್ಕೂಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿ0ದ ಮತ್ತು ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವು ಸಹ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಒಕ್ಕೂಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವಿವರಿಸಿದ್ದಾರೆ.
ಒಕ್ಕೂಟ ನೀಡುತ್ತಿರುವ ಹಾಲಿನ ದರದ ಜತೆಗೆ ಸರ್ಕಾರದ ೫ ರೂ.ಗಳ ಪ್ರೋತ್ಸಾಹ ಧನವನ್ನು ಸಮರ್ಪಕವಾಗಿ ಬಳಕೆ ಮಾಡಿ ಕೊಂಡು ಇನ್ನೂ ಹೆಚ್ಚಿನ ಹಾಲು ಉತ್ಪಾದನೆ ಮಾಡಲು ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಜಿಲ್ಲೆಯ ರೈತರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.
ಒಕ್ಕೂಟದಲ್ಲಿ ಮಾರಾಟದ ಜಾಲವನ್ನು ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ ೨೦೨೨-೨೩ನೇ ಸಾಲಿನ ಅಕ್ಟೋಬರ್ ೨೬ರ ಅಂತ್ಯಕ್ಕೆ ೨೮೬೮೧೨ ಲೀ. ಮತ್ತು ಆಗಸ್ಟ್ ೪ರಂದು ೩೧೩೮೬೧ ಲೀ. ಹಾಲನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಅದೇ ರೀತಿ ಮುಂಬೈ ಮಹಾನಗರದಲ್ಲಿ ಪ್ರಸ್ತುತ ದಿನವಹಿ ಸರಾಸರಿ ೨೦೦೮೦೦ ಲೀ. ಹಾಲು ಮಾರಾಟವಾಗುತ್ತಿದ್ದು, ಆಗಸ್ಟ್ ೮ರಂದು ಅತಿ ಹೆಚ್ಚು ಅಂದರೆ ೨೩೯೦೨೦ ಲೀ.ಹಾಲು ಮಾರಾಟವಾಗಿದೆ. ೨೦೨೨ರ ಸೆಪ್ಟೆಂಬರ್ ಮಾಹೆಯಲ್ಲಿ ಲಾಭ-ನಷ್ಟದ ತಃಖ್ತೆ ಪ್ರಕಾರ ೨.೨೦ಕೋಟಿ ರೂ. ಲಾಭವನ್ನು ಹೊಂದಿದ್ದು, ೨೦೨೨-೨೩ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ೩.೪೮ ಕೋಟಿ ರೂ. ಗಳ ಕ್ರೋಢೀಕೃತ ನಿವ್ವಳ ಲಾಭವನ್ನು ಒಕ್ಕೂಟ ಹೊಂದಿದೆ ಎಂದು ತಿಳಿಸಿದ್ದಾರೆ.