Monday, 25th November 2024

ಚಿಮೇರಾದಲ್ಲಿ ಅಬ್ಬರದ ಜಲಪಾತ.!

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

ಅದರಲ್ಲೂ ನಮ್ಮ ತಂಡ ಕಾಲಿಡುವ ವೇಳೆಗೆ ಹಿಡಿದಿದ್ದ ಅಬ್ಬರದ ಮಳೆ ಈ ಬಾರಿ ಬರೀ ಡಾಂಗ್ ಮಾತ್ರವಲ್ಲ ಸುತ್ತಲಿನ ಸೂರತ್ ನಗರ ದಿಂದ ಹಿಡಿದು ನವಾಪುರ, ವಲ್ಸಾಡ ಇತ್ಯಾದಿ ರೈಲು ನಿಲ್ದಾಣಗಳನ್ನೇ ಮುಳುಗಿಸಿ ಹಾಕಿತ್ತು.

ಇದನ್ನು ನೋಡಲು, ಕಣ್ತುಂಬಿಕೊಳ್ಳಲು ಹತ್ತಿರ ಹೋಗುವ ಮೊದಲೇ ಮಾತುಗಳೇ ನಿದ್ದರೂ ಮುಗಿಸಿಕೊಳ್ಳಬೇಕು. ಆಮೇಲೆ ವಾಪಸ್ಸು ಬರುವವರೆಗೂ ಎಲ್ಲ ಸ್ತಬ್ಧ. ಸಂಪೂರ್ಣ ಇದರದ್ದೇ ಅಬ್ಬರ. ವಿಪರೀತ ಗದ್ದಲದ ಈ ಜಲಪಾತದ ಹತ್ತಿರ ಹೋಗುತ್ತಿದ್ದಂತೆ ಕಿವಿ ಗಡ ಚಿಕ್ಕುತ್ತದೆ. ಬೀಳುವ ಜಾಗದ ಅರ್ಧ ಕಿ.ಮೀ.ಗೂ ಮೊದಲೇ ಶಬ್ದದ ಹಡಾಹುಡಿ ಆರಂಭವಾಗಿರುತ್ತದೆ. ಅಬ್ಬರಕ್ಕೆಂದೇ ಹೆಸರಾದ ಇಲ್ಲಿ ಹತ್ತಿರವಾ ಗುತ್ತಿದ್ದಂತೆ ನಾವು ಮಾತಾಡಿದ್ದು ನಮಗೇ ಕೇಳಿಸುವುದಿಲ್ಲ. ತೀರ ಕಿರುಚಾಡಿದರೂ ಬಾಯಿ ಸನ್ನೆಯೇ ಮಿಗಿಲು ಎನ್ನಿಸುವಷ್ಟೂ ದಿಗಿಲು ಹುಟ್ಟಿಸುತ್ತಾ ರಭಸದಿಂದ ಧುಮುಕುವ ನೀರಿಗೆ ಈಗ ಅಬ್ಬರದ ಸುಸಂಧಿ. ಆದರೆ ಇದರ ಕಾಲಾವಧಿ ಕೇವಲ ಎರಡು ಮೂರು ತಿಂಗಳು ಮಾತ್ರ ಕಾರಣ ಮಳೆಗಾಲದಲ್ಲಿ ಮಾತ್ರ ವೇಗ ಅಬ್ಬರ ದಕ್ಕುವ ಇದಕ್ಕೆ ಬೇರೆ ಜಲಧಾರೆಯ ಒತ್ತಾಸೆ ಇಲ್ಲದಿರುವುದೂ ಕಾರಣ.

ಮಳೆಯ ಆರಂಭದಲ್ಲಿ ಮೈ ತಳೆಯುವ, ನಾಲ್ಕಾರು ತಿಂಗಳು ಕಾಲ ಸುರಿಯುತ್ತಲೇ ಸುಸ್ತಾಗಿ, ಜನವರಿಯ ಹೊತ್ತಿಗೆ ನಿಂತು ಹೋಗುವ ಚಿಮೇರ ಜಲಪಾತ ಅಪ್ಪಟರಾಡಿ ನೀರಿನ ಸಹವಾಸ. ಸರಿ ಸುಮಾರು ಕಣಿವೆಯ ಆಳ ಸೇರಿಸಿದರೆ ನೂರಡಿ ಮೇಲಿನಿಂದ ನೇರವಾಗಿ ಧುಮುಕುವ ಚಿಮೇರ ಪಕ್ಕದ ಹಳ್ಳಿಯಿಂದ ಎರವಲು ಪಡೆದ ಚಿಮೇರಾದ ಹೆಸರಿನಿಂದಲೇ ಪ್ರಸಿದ್ಧಿ. ತೀರ ಕೆಳಕ್ಕಿಳಿಯಲು ಅವಕಾಶ ಇಲ್ಲದಿರುವ ಸಾಹಸಕ್ಕೆ ಮಾತ್ರ ದಕ್ಕುವ ಚಿಮೇರಾದಲ್ಲಿ ಹಸಿರು ಹೊಲಗಳ ಹಿಮ್ಮೇಳ ಮತ್ತು ವಿರಳ ಕಾಡಿನ ಚಾರಣದ ದಾರಿ ಒಂದು ರೀತಿಯಲ್ಲಿ ಚಿಮೇರ ತಲುಪುವ ಮೊದಲಿನ ಉಮೇದಿಗೆ ಇಂಬು ನೀಡುತ್ತದೆ.

ಕಣ್ಣೆವೆ ಇಕ್ಕದೆ ನೋಡಬಹುದಾದಷ್ಟು ಹಸಿರಿನ ಸಮೃದ್ಧಿ, ಗುಜರಾತಿನ ಈ ಒಳ ನೆಲದಲ್ಲೂ ಕರ್ನಾಟಕದ ಮಲೆನಾಡಿನ ಜಿಲ್ಲೆಗಳನ್ನು ನೆನಪಿಸಿದರೆ, ಅಬ್ಬರದ ಕೆಂಪು ನೀರು ಮತ್ತು ಮಳೆಯ ಭೋರ್ಗರೆತ ಕರಾವಳಿಯ ನಿರಂತರ ಮಳೆಯನ್ನು ನೆನಪಿಸುತ್ತದೆ. ಅಕ್ಷರಶಃ ನಮ್ಮ ಘಟ್ಟಗಳಲ್ಲಿ ಬೆಟ್ಟ ಪರ್ವತ ಮಳೆಯ ಅಬ್ಬರಕ್ಕೆ ತೊಳೆದುಕೊಂಡು ಕೆಂಪು ರಾಡಿಯಾಗಿ ಕೆಳಗಿಳಿಯುತ್ತವಲ್ಲ ಹಾಗೆ ಇದೂ ದೂರ ದಿಂದ ಚೆಂದವಾಗಿಯೂ ಕೈಯಿಕ್ಕಲು ಒಲ್ಲದ ನೀರಾಗಿಯೂ ಧುಮುಕುತ್ತಿರುತ್ತದೆ.

ದಾರಿಯುದ್ದಕ್ಕೂ ನೀರಿನ ಕಾಲುವೆಯಂಥ ದಾರಿಗಳ ನೀರಿನಲ್ಲೇ ಕ್ರಮಿಸಬೇಕಾದ ಚಿಮೇರಾ ಒಂದರ್ಥದಲ್ಲಿ ತಗ್ಗು ಪ್ರದೇಶದಲ್ಲಿ ಮುಳು ಗಿಯೂ ಬದುಕುತ್ತಿರುವ ಊರು. ಮಳೆ ಸುರಿದು ನೀರಿನ ಒರತೆಗಳು ಉಕ್ಕುತ್ತಿದ್ದಂತೆ ಚಿಮೇರಾದ ಸುತ್ತಮುತ್ತಲಲ್ಲೆ ಗದ್ದೆಗಳ ಬದಿಗಳ ವರೆಗೂ ನೀರು. ಊರಲ್ಲೂ ನೀರು, ದಾರಿಯಲ್ಲೂ ನೀರು.. ಎಲೆಲ್ಲೂ ಸಳಸಳನೆ ಕಾಲಡಿಗೆ ನುಸಿಯುವ ಕೆಂಪು ನೀರಿಗೆ ಎಲ್ಲೆಲ್ಲೋ ನುಗ್ಗಿ ಎಲ್ಲೆಲ್ಲೂ ಮಾಯವಾಗುವ ಆತುರದಲ್ಲಿ ಕೊಚ್ಚೆ ರಾಡಿ ಇತ್ಯಾದಿ ಲೆಕ್ಕಕ್ಕೆ ತೆಗೆದುಕೊಳ್ಳದೆ ನಡೆಯಲೇಬೇಕು. ಅದಾಗ್ಯೂ ಅದರಲ್ಲೆ ಕಚಪಚ ಮಾಡುತ್ತಾ ಥ್ರೀ -ರ್ತೇ ಗತಿಯಾಗಿಸಿಕೊಂಡು ಸಾವಿರಾರು ಜನರು ಅವಽಯುದ್ದಕ್ಕೂ ಭೇಟಿ ನೀಡುತ್ತಾರೆ.

ಸುತ್ತಮುತ್ತಲೂ ಹಸಿರು ಭತ್ತದ ಗದ್ದೆಗಳು, ಅದಕ್ಕೂ ಸುತ್ತಲೂ ಹರಿಯುವ ಚೀಮೆರ ನಾಲಾ ಮುಂದೆ ಪೂರ್ಣಾ ಬೇಸಿನ್ ಆವರಣಕ್ಕೆ ಸೇರ್ಪಡೆಯಾಗುತ್ತದೆ. ಅದನ್ನು ಹೊರತು ಪಡಿಸಿದರೆ ಕೊಂಚ ಹೆಚ್ಚಿನ ಮಳೆ ಬಿದ್ದರೂ ಕೆಳಹಂತದ ಸೇತುವೆಗಳನ್ನು ಮುಳುಗಿಸಿ ಹರಿಯುವ ಚೀಮೆರ ನದಿ ಇಲ್ಲಿನ ವಾತಾವರಣಕ್ಕೆ ಹೆಚ್ಚಿನ ಜೀವ ಕಳೆ ಉಕ್ಕಿಸುತ್ತವೆ. ಅದರಲ್ಲೂ ಚಿಮೇರ, ಹೆಚ್ಚಿನಂಶ ಸಂಪೂರ್ಣ ಗುಜರಾತಿನ ಡಾಂಗ್ ಅರಣ್ಯ ಪ್ರದೇಶದ ನಂತರ, ಅತಿ ಹೆಚ್ಚಿನ ಹಸಿರು ಉಕ್ಕಿಸುವ ಪ್ರದೇಶ. ಹಾಗಾಗಿ ಗುಜರಾತಿನ ಏಕೈಕ ಗಿರಿಧಾಮ ಸಾಪುತಾರದಿಂದ ದೂರವಾಗಿ ಹೊಸದನ್ನು ಹುಡುಕುವವರಿಗಿದು ಸ್ವರ್ಗ. ಕಾರಣ ಸಾಪುತಾರ ಇತ್ತ ಮಹಾರಾಷ್ಟ್ರ ಮತ್ತು ಕೆಳಗಿಳಿದರೆ ಗುಜರಾತಿನ ಹೆಗಲ ಮೇಲೆ ಸರಹದ್ದಿನಲ್ಲಿ ಕೂತಿರುವ ಸಣ್ಣ ಗಿರಿಧಾಮವಾದರೂ ಅಧಿಕೃತವಾಗಿ ಗುಜರಾತಿಗೇ ಸೇರುವುದರಿಂದ ಅದೊಂದೇ ಗಿರಿಧಾಮ ಎಂಬ ಹೆಗ್ಗಳಿಕೆ ಕೂಡಾ.

ಕೊಂಚ ಮಾತ್ರ ಸಾಹಸ ಪ್ರವೃತ್ತಿಯ, ನೀರಿನೊಂದಿಗೆ ಸೆಣಸಿಗಿಳಿಯಬಲ್ಲ ಪ್ರವಾಸಿಗರು ಮಳೆಯ ಅಬ್ಬರದ ಮಧ್ಯೆ ಇಲ್ಲಿ ಕೆಂಪು ನೀರಿ ಗಿಳಿಯುತ್ತಾರೆ. ಅಸಲಿಗೆ ಚಿಮೇರ ಒಂದು ನದಿಯ ಪಾತ್ರ ಆಕಸ್ಮಿಕವಾಗಿ ತಿರುಗಿ ಜಲಪಾತವಾಗಿ ಕಡಿದಾದ ಬಂಡೆಯ ಮೇಲಿಂದ ಧುಮ್ಮಿಕ್ಕಿ ಕಿವಿಗಡಚಿಕ್ಕುವ ತನ್ನ ಅಬ್ಬರದಿಂದ ಹೆಸರು ಮಾಡಿರುವ ಜಲಪಾತ. ಮೂಲ ಇದು ನದಿಯ ಪಾತ್ರದ ನೀರುಕ್ಕುವಾಗ ಮಾತ್ರ ಇತ್ತ ಧುಮ್ಮಿಕ್ಕುವ ಕಾರಣ ಬಾಕಿ ವರ್ಷಾವಧಿ ಏನಿದ್ದರೂ ಒಣ ಬಂಡೆಗಳ ಕೆಂಪು ಚಿತ್ತಾರ ಮಾತ್ರ ಇಲ್ಲಿ.

ದಕ್ಷಿಣ ಗುಜರಾತಿನ ಹೊಚ್ಚ ಹೊಸ ಜಿಲ್ಲೆಯಾದ (೨೦೦೮-೦೯ರ ಸುಮಾರಿಗೆ ಆದ ಮರು ವಿಂಗಡಣೆಯಲ್ಲಿ- ಜತೆಗೆ ಸಾಕಷ್ಟು ಹಿಂದುಳಿದ, ಹೆಚ್ಚಿನಂಶ ಬುಡಕಟ್ಟು ಜನಾಂಗದ ಪ್ರಭಾವವಿರುವ)‘ತಾಪಿ’ಯ ಮುಖ್ಯ ಜಿಲ್ಲಾ ಕೇಂದ್ರವಾದ ವ್ಯಾರಾ ಪಟ್ಟಣದಿಂದ ಸುಮಾರು ಅರವತ್ತು ಕಿ.ಮೀ. ದೂರದಲ್ಲಿದೆ ಚಿಮೇರ. ವ್ಯಾರಾ ಮಹಾರಾಷ್ಟ್ರದ ಗಡಿಯಲ್ಲಿರುವ ಸಾಕಷ್ಟು ಮರಾಠಿ ಭಾಷಾ ಪ್ರಭಾವಕ್ಕೆ ತುತ್ತಾಗಿದ್ದರೂ, ತೀರ ಬುಡಕಟ್ಟು ಜನಾಂಗವೇ ವಾಸಿಸುವ ಜಿಲ್ಲೆಯಾದುದರಿಂದ ತಾಪಿ ಇವತ್ತಿಗೂ ತನ್ನ ಅಪ್ಪಟ ದೇಶಿ ಸೊಗಡನ್ನು ಉಳಿಸಿಕೊಂಡಿರುವ ಪುಟ್ಟ ಜಿಲ್ಲೆ. ಪ್ರತಿ ಹಳ್ಳಿ ಮತ್ತು ಒಳಾವರಣದ ಪ್ರದೇಶಗಳೆಲ್ಲ ಅಪ್ಪಟ ದೇಶಿ ಸೊಗಡಿನ ಸಿನೆಮಾ ಸೆಟ್ಟುಗಳು. ಉಡುಗೆ ತೊಡುಗೆಯಿಂದ ಮನೆ ಮಠಗಳ ವಿನ್ಯಾಸಾದಿಯಾಗಿ ತಾಪಿಯಿಂದ ಸಾಪುತಾರ ಡಾಂಗ್‌ವರೆಗೂ ಇದು ಕಪ್ಪು ಮಣ್ಣಿನ ವಿಭಿನ್ನ ವಿಭಿನ್ನ.

ಇದರ ಅಪ್ಪಟ ಛಾಯೆ ಚೀಮೆರ ತಲುಪುವ ವೇಳೆಗೆ ಸ್ಪಷ್ಟವಾಗುತ್ತದೆ. ಹೆದ್ದಾರಿಯನ್ನು ಹೊರತುಪಡಿಸಿದರೆ ಇಕ್ಕೆಲಗಳಲ್ಲಿ ಬುಡಕಟ್ಟು ಜನಾಂಗದ ಜನಜೀವನ ಅನಾವರಣಗೊಳ್ಳುತ್ತದೆ. ಸಂಪೂರ್ಣ ದೇಶಿ ಶೈಲಿಯ ಹಳ್ಳಿಗಳ ಬದುಕಿನ ಶೈಲಿ ಚಿಮೇರಾ ತಲುಪುವ ವೇಳೆಗೆ ವಿಭಿನ್ನ ಅನುಭವ ನೀಡುತ್ತದೆ. ವ್ಯಾರಾ ನಗರ ಕೇಂದ್ರದಿಂದ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಹೆದ್ದಾರಿ ಸೋನಗಡ ರಸ್ತೆಯಲ್ಲಿ ಸುಮಾರು ಐವತ್ತೈದು ಕೀ.ಮೀ. ಚಲಿಸಿದರೆ ವಟಾ ಗ್ರಾಮ. ಇದೊಂದು ರೀತಿಯ ಜಲಗ್ರಾಮವಿದ್ದಂತೆ. ತೇಲುತ್ತಲೇ ಇದೆ ಎನ್ನುವ ಹಾಗೆ. ಈ ಮಾರ್ಗದಲ್ಲಿ ಚಿಕ್ಕ ಚಿಕ್ಕ ನದಿಯ ಹರಿವುಗಳು ಮುಳುಗಿಸಿದ ರಸ್ತೆಗಳನ್ನು ದಾಟುತ್ತಾ ಸಾಗಬೇಕಾಗುತ್ತದೆ.

ಉತ್ತರ ಮತ್ತು ದಕ್ಷಿಣ ಎರಡೂ ದಿಕ್ಕಿನಿಂದ ಸೌಂದರ್ಯವನ್ನು ಅನುಭವಿಸಬಹುದಾದ ಚಿಮೇರ ಜಲಪಾತಕ್ಕೆ ತಲುಪುವ ವೇಳೆಗೆ ನಮ್ಮ ತಂಡ, ಮಳೆಯ ಮತ್ತು ಮೊಳಕಾಲವರೆಗೆ ಹರಿಯುತ್ತಿದ್ದ ನದಿಯ ಕೆಂಪು ನೀರಿನ ಹೊಡೆತಕ್ಕೆ ಸಿಕ್ಕು ಅಪ್ಪಟ ಮಲೆನಾಡಿನಲ್ಲಿ ಗೊಪ್ಪೆಯ ಡಿಯಲ್ಲಿದ್ದೂ ಮುದ್ದೆಯಾದಂತಾಗಿತ್ತು. ಸಂಪೂರ್ಣ ಆವರಿಸಿಕೊಳ್ಳಬಹುದಾದ ರೇನ್‌ಕೋಟ್ ಹೊರತುಪಡಿಸಿದರೆ ಉಳಿದದ್ದು ಯಾವುದೂ ನಮ್ಮ ರಕ್ಷಣೆಗೆ ಬರಲಾರದು.

ಯಾವ ದಿಕ್ಕಿನಿಂದ ಪ್ರವೇಶಿಸಿದರೂ ಇನ್ನೊಂದು ದಿಕ್ಕಿನ ಜಲಪಾತ ನೋಡಬಹುದಾದ ಪ್ರದೇಶವನ್ನು ತಲುಪುವ ಪ್ರವಾಸಿಗರಿಗೆ ಎದುರಿನ ಜಲಪಾತದ ನೆತ್ತಿಯನ್ನು ಸರಾಗವಾಗಿ ತಲುಪುವ ಅವಕಾಶ ಸಿಗುತ್ತದೆ. ಹೆಚ್ಚಿನಂಶ ಇಲ್ಲಿನ ಮಳೆಗಾಲದಲ್ಲಿ ಯಾವಾಗಲೂ ಮೋಡಾವೃತ ವಾತಾವರಣ ಅತ್ಯುತ್ತಮ ಎನ್ನಿಸುವ ಹಾಗಿದ್ದರೂ ಚಿತ್ರಣಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಅದರೊಂದಿಗೆ ಜಲಪಾತದ ಧುಮ್ಮಿಕ್ಕುವ ರಭಸಕ್ಕೆ ಏಳುವ ನೀರ ಮಂಜಿನ ಆವರಣ ನಮ್ಮೆಲ್ಲ ಶ್ರಮಕ್ಕೆ ನೀರೆರಚುತ್ತದೆ.

ಅದರಲ್ಲೂ ನಮ್ಮ ತಂಡ ಕಾಲಿಡುವ ವೇಳೆಗೆ ಹಿಡಿದಿದ್ದ ಅಬ್ಬರದ ಮಳೆ ಈ ಬಾರಿ ಬರೀ ಡಾಂಗ್ ಮಾತ್ರವಲ್ಲ ಸುತ್ತಲಿನ ಸೂರತ್ ನಗರದಿಂದ ಹಿಡಿದು ನವಾಪುರ, ವಲ್ಸಾಡ ಇತ್ಯಾದಿ ರೈಲು ನಿಲ್ದಾಣಗಳನ್ನೇ ಮುಳುಗಿಸಿ ಹಾಕಿತ್ತು. ಆದ್ದರಿಂದ ನಮ್ಮ ಸುತ್ತಮುತ್ತಲಿನ ಮಣ್ಣಿನ ರಸ್ತೆಗಳೂ ಅಗಾಧವಾಗಿ ಕೆಂಪು ನದಿಯ ಆವಾಹನೆಗೆ ಒಳಗಾದಂತೆ ತುಂಬಿ ಹರಿಯುತ್ತಿದ್ದವು. ಹಾಗಾಗಿ ಕೊನೆಯ ನಾಲ್ಕೈದು ಕೀ.ಮೀ. ಕ್ರಮಿಸುವ ದಾರಿಯನ್ನು ನಡೆದೇ ಹೋಗುವ ಅನಿವಾರ್ಯತೆ ಎದುರಿಸಿದ ನಾವು ಅಲ್ಲಲ್ಲಿ ಏರುತ್ತಿದ್ದ ನದಿ ಪಾತ್ರ ದಾಟುವಾಗ ಕೆಲವೊಮ್ಮೆ ಅಂಗೈಯಲ್ಲಿ ಜೀವ ಹಿಡಿದುಕೊಂಡದ್ದು ಹೌದು. ಆದರೆ ಸತತ ಮಳೆಯ ಸಿಂಚನದಲ್ಲಿ ಚಳಿಗೆ ನಡಗುತ್ತಾ ಎದುರಿಗೆ ಹರಿಯುತ್ತಿದ್ದ ರಭಸದ ಚಿಮೇರ ಕಂಡಾಗ ಎಲ್ಲವನ್ನು ಮರೆತು ನಿಂತಿದ್ದು ಹೌದು. ತುಂಬ ಆಪ್ತ ಎನ್ನಿಸುವಂತೆ ನಮ್ಮನ್ನು ಮಾತಾಡಲೂ ಬಿಡದೆ, ಕಿವಿ ಕೆಪ್ಪಾಗುತ್ತದೇನೋ ಎಂದು ಅಬ್ಬರಿಸುತ್ತಾ, ಶಬ್ದಿಸುತ್ತ ಹರಿವ ಚಿಮೇರಾ.. ಚಿತ್ರಣಕ್ಕೂ ಅವಕಾಶ ಕೊಡದಂತೆ ನಮ್ಮನ್ನು ಕಾಡಿಸುತ್ತಿದ್ದ ಮಳೆ ಎಂದಿಗಿಂತಲೂ ನಮ್ಮ ಪ್ರವಾಸವನ್ನು ವಿಭಿನ್ನವಾಗಿಸಿದ್ದು ಹೌದು.

ಒಮ್ಮೆ ಖಂಡಿತವಾಗಿಯೂ ಸಂದರ್ಶಿಸಬಹುದಾದ ಚಿಮೇರ ಹೋಗುವ ಮುನ್ನ ಸಾಕಷ್ಟು ತಯಾರಿಯನ್ನು ಬೇಡುವ ಕಾಡು ದಾರಿಯೂ, ಛಾಯಾಗ್ರಹಣಕ್ಕೆ ಬೆಳಕಿನ ಸಹಾಯವಿದ್ದರೆ ದಾರಿಯುದ್ದಕ್ಕೂ ಹಸಿರಿನ ಹೊನಲನ್ನು ಹರಿಸುವ ಅಪರೂಪದ ಬಯಲೂ ಹೌದು.

ಗುಜರಾತಿನ ವಿಭಿನ್ನ ಭೂ ವಲಯದಲ್ಲಿ ಈ ಪರಿಯ ಹಸಿರು ಮತ್ತು ನೀರಿನ ಸೇಂಚನ ಒದಗಿಸುವ ಏಕೈಕ ಸ್ಥಳವಾಗಿ ಡಾಂಗ್ ವಲಯದ ಚಿಮೇರಾ ನಾನು ಗುಜರಾತಿನಲ್ಲಿದ್ದಷ್ಟೂ ಕಾಲ ತಿರುಗಿದ ಇತರ ಪ್ರದೇಶಗಳಿಗೆ ಹೋಲಿಸಿದರೆ ವಿಭಿನ್ನ ನೆಲೆಗಟ್ಟಿನ ಅಪ್ಪಟ ಸ್ಥಳೀಯ ಸೊಗಡಿನ ನೆಲ. ಹಾಗಾಗೇ ಜಲಪಾತದ ಹೊರತಾಗಿಯೂ, ಅಲ್ಲಿನ ನೇಟಿವಿಟಿ ಉಳಿದೆಲ್ಲ ಭಾಗಕ್ಕಿಂತಲೂ ಹೆಚ್ಚಾಗಿ ನನ್ನನ್ನು ಆಗಾಗ ಕಾಡುತ್ತಲೇ ಇರುತ್ತದೆ. ಮಳೆಯಲ್ಲಿ ತೊಪ್ಪೆಯಾಗಿ ಹೊರಬಂದಾಗ ರಸ್ತೆ ಬದಿಯ ಚಹ ಬಹುಶಃ ಯಾವತ್ತಿಗಿಂತಲೂ ಹೆಚ್ಚಿಗೆ ರುಚಿ ಮತ್ತು ಚಹ ಎಂದರೆ ತಹ ತಹ ಎನ್ನುವುದ್ಯಾಕೆ ಎನ್ನುವುದಕ್ಕೆ ಉದಾಹರಣೆ ಆಗಿದ್ದೂ ಹೌದು.