ಸುಪ್ತ ಸಾಗರ
rkbhadti@gmail.com
ಅನುಮಾನವೇ ಇಲ್ಲ, 21ನೇ ಶತಮಾನದ ಅತಿದೊಡ್ಡ ಕ್ರಾಂತಿ ದೇಶದಲ್ಲಿ ಜರುಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿ ದೇಶದ 13 ನಗರಗಳ ಮಂದಿ 5ಜಿ ಸಂಪರ್ಕಕ್ಕೆ ತಮ್ಮನ್ನು ತಾವು ಬೆಸೆದುಕೊಳ್ಳಲಿದ್ದಾರೆ. 5ಜಿ ಕೇವಲ ಶೀಘ್ರ ಗಾಮಿ ನೆಟ್‌ವರ್ಕ್ ಅಲ್ಲವೇ ಅಲ್ಲ. ಹಾಗೆ ನೋಡಿದರೆ ಆ ಮೂಲಕ ಭಾರತದ ಜೀವನವೇ ಬದಲಾಗುವ ನಿರೀಕ್ಷೆ ಇದೆ.
ನನಗಿನ್ನೂ ನೆನಪಿದೆ. ಆಗ ನಾನಿನ್ನೂ ‘ಸಂಯುಕ್ತ ಕರ್ನಾಟಕ’ದಲ್ಲಿ ಹಿರಿಯ ಉಪ ಸಂಪಾದಕ/ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಬಹುಶಃ 1995-96ರ ಸಾಲಿರಬಹುದು. ಆಗ ಪೇಜರ್‌ಗಳ ಜಮಾನ. ಸೊಂಟಕ್ಕೆ ಚಿಕ್ಕದೊಂದು ಕ್ಕಿಪೊಟ್ಟಣದಂಥ
ಉಪಕರಣವನ್ನು ಸಿಕ್ಕಿಸಿಕೊಂಡು ಓಡಾಡುತ್ತಿದ್ದೆವು.
ತುಸು ಸ್ಥಿತಿವಂತರು, ವ್ಯವಹಾರಸ್ಥರು, ಅಧಿಕಾರಿಗಳು ಬಿಟ್ಟರೆ ಪತ್ರಕರ್ತರ ಬಳಿಯಲ್ಲಿ ಮಾತ್ರ ಪೇಜರ್‌ಗಳಿದ್ದವು. ಅದರಲ್ಲೂ ಸುದ್ದಿಮನೆಯ ಹಿರಿಯ ವರದಿಗಾರರಿಗಷ್ಟೇ ಪೇಜರ್ ಸೌಲಭ್ಯವನ್ನು ಕಚೇರಿಯಿಂದಲೇ ಒದಗಿಸಲಾಗುತ್ತಿತ್ತು. ವರದಿಗಳಿಗಾಗಿ ಹೊರಗೆ ಸುತ್ತಾಡುತ್ತಿರುವಾಗ ಮಹತ್ವದ ಬೆಳವಣಿಗೆಗಳ ಬಗೆಗೆ ಕಚೇರಿಯ ಗಮನಸೆಳೆಯಲು ಅನುಕೂಲವಾಗಲಿ ಎಂಬುದು ಅದರ ಹಿಂದಿನ ಉದ್ದೇಶ. ನಾವು ಈಗ ಮೊಬೈಲ್‌ನಲ್ಲಿ ಎಸ್ಸೆಮ್ಮೆಸ್ ಕಳುಹಿಸಿದಂತೆ, ಪದಮಿತಿಯನ್ನುನುಸರಿಸಿ ಸಂದೇಶವನ್ನು
ಕಳುಹಿಸಬಹುದಿತ್ತು.
ಒಂದು ರೀತಿಯಲ್ಲಿ ಅದು ಟೆಲಿಗ್ರಾಮ್‌ನಂತೆ. ನಿರ್ದಿಷ್ಟ ಅಕ್ಷರ ಮಿತಿಯೊಳಗೆ ಹೇಳಬೇಕಾದುದನ್ನು ಸಮರ್ಥವಾಗಿ ಹೇಳುವ ಸವಾಲನ್ನು ಅದು ಒಡ್ಡಿತ್ತು. ಪರ್ತಕರ್ತರಿಗಂತೂ ಅದು ನಿಜಕ್ಕೂ ಎಡಿಟಿಂಗ್ ಕೌಶಲಕ್ಕೆ ಸಾಣೆ ಇಟ್ಟಂತೆ. ಪ್ರತಿ ಸಂದೇಶಕ್ಕೂ ದರ
ಅನ್ವಯವಾಗುತ್ತದೆ. ದಿನಕ್ಕೆ ಇಂತಿಷ್ಟು ಸಂದೇಶ ಎಂಬ ಮಿತಿಯೂ ಇರುತ್ತಿತ್ತು; ಈಗಿನ ಕರೆನ್ಸಿ ಅಥವಾ ಡಾಟಾ ಪ್ಯಾಕ್‌ನಂತೆ. ಹೀಗಾಗಿ ಮನಬಂದಂತೆ ಸಂದೇಶಗಳನ್ನು ಕಳುಹಿಸುವಂತಿರಲಿಲ್ಲ.
ಎಲ್ಲರಿಗೂ ಕಳುಹಿಸಲಾಗುವುದೂ ಇಲ್ಲ, ಏಕೆಂದರೆ, ಎದುರಿನವರ ಬಳಿ ಪೇಜರ್ ಗಳಿರಬೇಕಲ್ಲಾ? ಆಗ ನಮ್ಮಲ್ಲಿ (ಸಂಯುಕ್ತ ಕರ್ನಾಟಕ) ಲೆಕ್ಕ ಮಾಡಿ ಐವರಿಗೆ ರಾಯರು (ಕೆ.ಶಾಮರಾವ್) ಕಚೇರಿಯಿಂದ ಪೇಜರ್ ತೆಗೆಸಿಕೊಟ್ಟಿದ್ದರು. ಆಗಿನ ಜಂಟಿ ಸಂಪಾದಕ ಗುಂಡಾಭಟ್, ಮುಖ್ಯವರದಿಗಾರ ರಾಜನ್ (ಈಗಿನ ಸಂಪಾದಕ), ಹಿರಿಯ ರಾಜಕೀಯ ವರದಿಗಾರರಾದ ಕೆ.ಎಚ್.ಸಾವಿತ್ರಿ (ಮಾಜಿ ಸಚಿವ ಸುರೇಶ್ ಕುಮಾರ್ ಅವರ ಪತ್ನಿ), ಯಗಟಿ ಮೋಹನ್(ಖ್ಯಾತ ಕಿರುತೆರೆ ನಟರಾಗಿದ್ದ ದಿ.ಕೃಷ್ಣ ನಾಡಿಗ್ ಅವರ ಸೋದರ) ಹಾಗೂ ರಾಯರ ನೀಲಿಕಣ್ಣಿನ ಹುಡುಗನೆಂದೇ ಗುರುತಿಸಿಕೊಂಡಿದ್ದ ಜಾನ್ ಮಥಾಯಿಸ್‌ಗೆ ಈ ಸೌಲಭ್ಯ ದಕ್ಕಿತ್ತು. ಅದರಲ್ಲಿ ಗುಂಡಾಭಟ್ಟರು ಹಾಗೂ ರಾಜನ್‌ರ ಪೇಜರ್‌ಗಳನ್ನು ಬೇರೆಯವರು ಬಳಸುವಂತಿರಲಿಲ್ಲ.
ಇನ್ನು ಮಥಾಯಿಸ್ ರಾಯರಿಗೆ ಹತ್ತಿರ ಎಂಬ ಕಾರಣಕ್ಕೆ ಬೇರೆಯವರು ಆತನ ಪೇಜರ್ ಕೇಳುವ ಧೈರ್ಯ ಮಾಡುತ್ತಿರಲಿಲ್ಲ, ಮಾಡಿದರೂ ಆತ ಕೊಡುತ್ತಲೂ ಇರಲಿಲ್ಲ. ಇನ್ನು ವಿಧಾನಸಭಾ ಕಲಾಪಕ್ಕೆ ಹೋಗುತ್ತಿದ್ದ ಸಾವಿತ್ರಿ ಮೇಡಂ ಹಾಗೂ ಯಗಟಿ ಯವರು ಮಾತ್ರ ಪಾಳಿಯ ಮೇಲೆ ಕಲಾಪ ವರದಿಗೆ ತಮ್ಮ ನಂತರ ಬರುವ ನನ್ನಂಥವರಿಗೆ ಪೇಜರ್ ಹಸ್ತಾಂತರಿಸಿ ಸದನದಿಂದ
ಹೋರಬರುತ್ತಿದ್ದರು.
ಅದಕ್ಕೂ ಮುನ್ನ ಇದ್ದದ್ದು ಲ್ಯಾಂಡ್ ಲೈನ್ ದೂರವಾಣಿಗಳು ಮಾತ್ರವೇ. ಅದೂ ಊರಿನಲ್ಲಿ ಒಂದೆರಡು ಶ್ರೀಮಂತರ ಮನೆ ಯಲ್ಲಿ ಮಾತ್ರವೇ. ನಮ್ಮೂರಿನ ಸುತ್ತಮುತ್ತ ಇದ್ದುದೇ ನಾಲ್ಕು ಲ್ಯಾಂಡ್ ಲೈನ್‌ಗಳು. ಒಂದು ನಮ್ಮೂರಿನ ಗಣ್ಯ ಮನೆತನ ವೆನಿಸಿದ ‘ಮಾವಿನಕುಳಿ’ ಅವರ ಮನೆಯಲ್ಲಿ. ಇನ್ನೊಂದು ಸಾಗರ ತಾಲೂಕಿನಲ್ಲೇ ಹಿರಿಯ ಮುತ್ಸದ್ದಿ ಎನಿಸಿದ್ದ ತುಂಬೆ ಸುಬ್ರಾಯರ ಮನೆ ಯಲ್ಲಿ. ಅದುಬಿಟ್ಟರೆ ಅಂಚೆಕಚೇರಿಯ ನಂತರ ಲಾಂಡ್ ಲೈನ್ ಪೋನ್ ಬಂದ್ದದ್ದೇ ನಮ್ಮಜ್ಜನ ಮನೆ, ಗೀಜಗಾರಿನ ‘ಹಳೆಮನೆ’ಗೆ. ಎಲ್ಲ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ.
ಊರಿನವರೆಲ್ಲ, ಅಲ್ಲಿಂದಲೇ ಬೇರೆಯವರನ್ನು ಸಂಪರ್ಕಿಸಬೇಕು. ತೀರಾ ಆತ್ಮೀಯರಿಗಾದರೆ ಒಂದೆರಡು ತುರ್ತು ಕರೆಗಳನ್ನು ಮಾಡಲು (ಪುಕ್ಕಟೆ) ಕೊಡುತ್ತಿದ್ದರು, ಶಿವಾಯ್ ಉಳಿದಂತೆ ಆ ಮನೆಯವರಿಗೆ ಹಣ ಕೊಟ್ಟೇ ಕರೆ ಮಾಡಬೇಕಿತ್ತು. ಅದೂ ಸ್ಥಳೀಯ ಕರೆಗಳಷ್ಟೇ (ಸ್ಥಳೀಯ ಕರೆಗಳೆಂದರೆ ಆಗ ತಾಲೂಕಿನ ವ್ಯಾಪ್ತಿಯಷ್ಟೇ). ಏಕೆಂದರೆ ಟ್ರಂಕಾಲ್ (ಎಸ್‌ಟಿಡಿ) ಮಾಡಲು ಕರೆ ದುಬಾರಿ ಮತ್ತು ದರ ಅಂದಾಜು ಮಾಡಲಾಗುತ್ತಿರಲಿಲ್ಲ. ಸಾಲದ್ದಕ್ಕೆ ಟ್ರಂಕಾಲ್ ಕರೆಯಾದರೆ ನಾವೇ ಟೆಲಿ-ನ್ ಎಕ್ಸ್‌ಚೇಂಜ್
ಗೆ ಕರೆ ಮಾಡಿ ನಂಬರ್ ಕೊಟ್ಟು ಕರೆ ಬುಕ್ ಮಾಡಬೇಕಿತ್ತು.
ಅದೆಷ್ಟೋ ಹೊತ್ತಿನ ನಂತರ ಲೈನ್ ಸಿಕ್ಕರೆ ಎಕ್ಸ್‌ಚೇಂಜ್ ನವರೇ ಕರೆ ಮಾಡಿ ಕೊಡುತ್ತಿದ್ದರು. ಅದಕ್ಕೂ ಒಂದೆರಡು ನಿಮಿಷಗಳ ಸಮಯದ ಮಿತಿ. ಕೊನೆಯ ಮೂವತ್ತು ಸೆಕೆಂಡ್ ಉಳಿದಿರುವಾಗ ‘ನಿಮ್ಮ ಸಮಯವಾಗುತ್ತಿದೆ, ಇನ್ನು ಹದಿನೈದು ಸೆಕೆಂಡ್ ಉಳಿದಿದೆ’ ಎಂದು ನಮ್ಮ ಸಂಭಾಷಣೆಯ ನಡುನಡುವೆಯೇ ಎಕ್ಸ್‌ಚೆಂಜ್‌ನ ಸುಂದರಿಯರು( ಹಾಗಂತ ನಾವು ಭಾವಿಸಿದ್ದೆವು, ಅಲ್ಲಿ ಎಂಥ ಕುರೂಪಿಯರಿರುತ್ತಿದ್ದರೋ ನಮಗೆ ಕಾಣಿಸುತ್ತಿರಲಿಲ್ಲವಲ್ಲ!) ಉಲಿಯುತ್ತಿದ್ದರು.
ಹೀಗಾಗಿ ಹೇಳಿಬೇಕಾದ್ದ ನ್ನಷ್ಟೇ ಒದರಿ ಇಟ್ಟುಬಿಡುತ್ತಿದ್ದೆವು. ಕೆಲವೊಮ್ಮೆ ಅದೂ ಪೂರ್ಣವಾಗುತ್ತಿರಲಿಲ್ಲ. ಇನ್ನೂ ಸಮಸ್ಯೆ ಎಂದರೆ ಫೋನ್ ಇದ್ದವರ ಮನೆಗೆ ಹೋಗಿ ಯಾವುದೋ ತುರ್ತು ವಿಷಯಕ್ಕೆ, ಅವರ ಬಳಿ ಗೋಗರೆದು ಟ್ರಂಕಾಲ್ ಬುಕ್ ಮಾಡಿಸಿ ಕೊಳ್ಳುವುದು. ಹಾಗಂತ ತಕ್ಷಣ ಲೈನ್ ಸಿಗುವುದಿಲ್ಲ. ತಕ್ಷಣ ಸಿಗದು ಎಂದು ಎದ್ದು ಬರುವಂತಿಲ್ಲ. ಹುಡುಗಿಯರ ಮನಸ್ಸಿನಷ್ಟೇ ವಿಚಿತ್ರ ಅನಿಶ್ಚಿತತೆ. ಹೇಗೂ ಲೇಟ್ ಆಗುತ್ತದೆ ಎಂದು ಬಂದುಬಿಟ್ಟರೆ ಮನೆಗೆ ಬರುವಷ್ಟರಲ್ಲಿ ಲೈನ್ ಸಿಕ್ಕಿರುತ್ತಿತ್ತು. ಫೋನ್ ಇದ್ದವರ ಮನೆಯಲ್ಲಿ ಯಾರೋ ಹುಡುಗರನ್ನೋ, ಆಳುಗಳನ್ನೋ ಕಳುಹಿಸಿ, ನಮಗೆ ಹೇಳಿಕಳುಹಿಸಿ, ನಾವೂ ಎದ್ದೆನೋ
ಬಿದ್ದೆನೋ ಎಂದು ಓಡಿ ಅಲ್ಲಿ ಹೋಗಿ ರಿಸೀವರ್ ಎತ್ತಿ, ‘ಹಲೋ’ ಎನ್ನುವಷ್ಟರಲ್ಲಿಯೇ ಕರೆ ಕಡಿತಗೊಂಡಿರುತ್ತಿತ್ತು, ಇಲ್ಲವೇ ಕರೆ ಅವಧಿ ಮುಗಿದಿರುತ್ತಿತ್ತು.
ಹಾಗೆಂದು ಟ್ರಂಕಾಲ್ ಬುಕ್ ಮಾಡಿ ಅಲ್ಲೇ ಕುಳಿತು, ದಿನಗಟ್ಟಲೇ ಕುಳಿತರೂ ಲೈನ್ ಸಿಗುತ್ತಿರಲಿಲ್ಲ. ಎಷ್ಟು ಹೊತ್ತೆಂದು ಹಾಗೆ
ಕಂಡವರು ಮನೆಯಲ್ಲಿ ಕುಳಿತು ಕಾಯುವುದು? ಆ ಮನೆಯವರು ಏನೋ ಹಿಂಸೆಗೊಳಗಾದವರಂತೆ (ಅವರ ಖಾಸಗೀತನಕ್ಕೆ
ಧಕ್ಕೆ ಬರುತ್ತಿದ್ದು ನಿಜ) ಮಾಡುವ ಮುಖಭಾವ ಎದುರಿಸುವ ಮುಜುಗರ ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಕಾರಣಕ್ಕೆ ಎಲ್ಲ ಕೆಲಸವನ್ನು ಬದಿಗೊತ್ತಿ ಅಲ್ಲಿ ಕಾಯಬೇಕಾದ ಅನಿವಾರ್ಯ. ನಾವಿದ್ದೇವೆ ಎಂಬ ಕಾರಣಕ್ಕೆ ಫೋನ್ ಇರುವ ಮನೆಯವರು ನಮ್ಮನ್ನು ಆಗಾಗಲಾದರೂ ಬಂದು ಮಾತಾಡಿಸುತ್ತಲೇ ಇರಬೇಕಿತ್ತು.
ಸಾಲದ್ದಕ್ಕೆ ಸೌಜನ್ಯಕ್ಕಾದರೂ ಕಾಫಿ, ತಿಂಡಿ ಸಮಯಕ್ಕೆ ನಮ್ಮನ್ನು ಕರೆಯಬೇಕಿತ್ತು. ಇವೆಲ್ಲ ಸರ್ಕಸ್ಸು ನಮಗೆ ಯಾವಾಗಲೋ ಒಂದುಬಾರಿ. ಆದರೆ ಫೋನ್ ಹೊಂದಿದ್ದವರ ಮನೆಯವರಿಗೆ ನಿತ್ಯದ ಗೋಳು. ಯೋಚಿಸಿ, ಊರಿನಲ್ಲಿ ಮೂವತ್ತು ಮನೆಗಳಿದ್ದ ವೆಂದರೆ ಒಬ್ಬರಲ್ಲ ಒಬ್ಬರು ಕೆರೆ‘ಕರೆ’ ಮಾಡಲು ಬಂದೇ ಇರುತ್ತಿದ್ದರು. ಇದರದ್ದು ಒಂದು ಗೋಳಾದರೆ, ಒಳ ಬರುವ ಕರೆಗಳದ್ದು ಇನ್ನೊಂದು ರಾಮಾಯಣ. ಅದನ್ನು ‘ಪಿಪಿ ಕಾಲ್’ ಎನ್ನುತ್ತಿದ್ದರು. ಯಾರದ್ದೋ ಮನೆಯ ದೂರವಾಣಿ ಸಂಖ್ಯೆಯನ್ನು ‘ಪಿಪಿ ನಂಬರ್’ ಎಂದು ಊರಿನವರೆಲ್ಲ, ತಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ, ವ್ಯವಹಾರಸ್ಥರಿಗೆ, ಕೊನೆಗೆ ಗರ್ಲ್ ಫ್ರೆಂಡ್, ಬಾಯ್
ಪ್ರಂಡ್‌ಗಳಿಗೂ ಕೊಟ್ಟು ಬಂದಿರುತ್ತಿದ್ದರು.
ಹಗಲಿಲ್ಲ, ರಾತ್ರಿಯೆಂಬುದಿಲ್ಲ ಪೋನ್ ರಿಂಗಣಿಸುತ್ತಿದ್ದಂತೆಯೇ ಎಲ್ಲೋ, ಏನೋ ಮಾಡುತ್ತಿದ್ದ ಕೆಲಸ ಬಿಟ್ಟು ಓಡಿ ಬಂದು
ರಿಸೀವರ್ ಎತ್ತಿದರೆ ಅತ್ತಲಿಂದ ‘ಸ್ವಲ್ಪ ಅರ್ಜೆಂಟ್ ಇತ್ತು, ಸ್ವಲ್ಪ ಪಕ್ಕದಮನೆಯ ಅವರನ್ನು ಕರೆಯಬಹುದಾ, ಎದುರುಮನೆಯ ಇವರನ್ನು ಕರೆಯಬಹುದಾ?’ ಎಂಬ ಮನವಿ. ಕೆಲವೊಮ್ಮೆ ಅವರಪ್ಪನ ಮನೆಯ ಫೋನ್ ಎನೋ ಎಂಬಂತೆ ‘ಸ್ವಲ್ಪ ಅರ್ಜೆಂಟಾಗಿ, ಇವರನ್ನು ಕರೀರಿ’ ಎಂಬ ಆದೇಶಪೂರ್ವಕ ಧ್ವನಿ ಅತ್ತಲಿಂದ.
ಹೋಗಲಿ ಏನೋ ತುರ್ತು ಸಮಸ್ಯೆ ಇದ್ದೀತೆಂದು ಕರೆದರೆ, ಲೋಕಾಭಿರಾಮ ಹರಟುತ್ತಾ, ಲಲ್ಲೆಗರೆಯುತ್ತಾ, ಊರ ಪಂಚಾಯ್ತಿ ಯನ್ನು ಹೇಳುತ್ತ ಗಂಟೆಗಟ್ಟಲೆ ಕುಳಿತುಬಿಡುತ್ತಿದ್ದರು. ಅಯ್ಯೋ ಇಂತಿಪ್ಪ ಫೋನಾಯಣವೆಲ್ಲವನ್ನೂ ದಾಟಿ ಶುರುವಾದದ್ದು ಮೊಬೈಲ್ ಜಮಾನ. ಅದು ೯೦ರ ದಶಕದ ಅಂತಿಮ ಕಾಲಘಟ್ಟ. ನಿಧಾನಕ್ಕೆ ಬೆಂಗಳೂರಿನಲ್ಲಿ ಮೊಬೈಲ್‌ಗಳು ಪರಿಚಯ ವಾಗತೊಡಗಿದವು. ಆಗ ಇದ್ದುದೇ ಒಂದೆರಡು ಕಂಪನಿಗಳ ಮೊಬೈಲ್ ಸೆಟ್. ಮೋಟರೋಲಾ, ಸೋನಿ, ನೋಕಿಯಾ… ಕಂಪನಿಯ ಸೆಲ್ ಫೋನ್‌ಗಳು ಜನಪ್ರಿಯ. ಆಗಷ್ಟೇ ನೋಕಿಯಾ ಮೊಬಿರಾ (Nokia-MobiraOy) ನಿಂದ ಬದಲಾಗಿ ಅಧಿಕೃತವಾಗಿ ನೋಕಿಯಾ ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಹೀಗೆ ಬೆರಳೆಣಿಕೆಯಷ್ಟು ಖಾಸಗಿ ಮೊಬೈಲ್ ದೂರವಾಣಿ ಸೆಟ್‌ಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಜನರಿಗೆ ಇರಲಿಲ್ಲ. ಇನ್ನು ಸಿಮ್‌ನಲ್ಲಿ ಮಹಾನಗರಗಳನ್ನು ಬಿಟ್ಟರೆ ಉಳಿದೆಲ್ಲೆಡೆ ಲಭ್ಯ ಇದ್ದುದು ಈಗಿನ ಬಿಎಸ್‌ಎನ್‌ಎಲ್‌ನ ಸಿಮ್‌ಕಾರ್ಡ್ ಗಳು ಮಾತ್ರವೇ. ದಿನವಿಡೀ ಸರತಿ ಸಾಲಿನಲ್ಲಿ ದೂರವಾಣಿ ಇಲಾಖೆಯ ಪ್ರಾದೇಶಿಕ ಕಚೇರಿಗಳ ಎದುರು ನಿಂತು ಅರ್ಜಿ ಗುಜರಾಯಿಸಿ, ಸಿಮ್‌ಗಾಗಿ ತಿಂಗಳಾನುಗಟ್ಟಲೆ ಕಾಯಬೇಕಾಗಿತ್ತು. ಮಾರುದ್ದದ ಅರ್ಜಿಗಳಲ್ಲಿ ವೈಯಕ್ತಿಕ ಜಾತಕ ವಿವರಗಳನ್ನು ಭರ್ತಿ ಮಾಡಿ, ಎರಡು ಸೆಟ್ ಪಾಸ್ ಪೋರ್ಟ್ ಫೋಟೋಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು.
ಅದರಲ್ಲೂ ನೀಡಬೇಕಿದ್ದ ದಾಖಲೆಗಳಲ್ಲಿ ಒಂದಿನಿತು ವ್ಯತ್ಯಾಸವಾಗಿದ್ದರೂ ಅರ್ಜಿ ವಜಾ ಆಗುತ್ತಿತ್ತು. ಮತ್ತೆ ಸರತಿಯಲ್ಲಿ ನಿಂತು ಅರ್ಜಿ ಸಲ್ಲಿಸಿ, ಮತ್ತೆ ತಿಂಗಳವರೆಗೆ ಕಾಯಬೇಕಿತ್ತು. ಇಷ್ಟೆಲ್ಲದರ ಬಳಿಕ ಸಿಗುವ ಸಿಮ್ ಪ್ರೀಪೇಯ್ಡ್ ಆಗಿರಲಿ, ಪೋಸ್ಟ್ ಪೇಯ್ಡ್ ಆಗಿರಲಿಅದನ್ನು ಬಳಸುವುದು ಮಾತ್ರ ತೀರಾ ಅಪರೂಪವೇ. ಕೇವಲ ಕೊಂಡುಕೊಂಡ ದುಬಾರಿ ಮೊಬೈಲ್ ಸೆಟ್ ಅನ್ನು
ಜೀವಂತವಾಗಿಡುವ ನೆಪಕ್ಕೆ ಸಿಮ್ ಹಾಕಿಟ್ಟುಕೊಳ್ಳುವುದಷ್ಟೇ.
ಏಕೆಂದರೆ ಈಗಿನಂತೆ ಬೇಕೆಂದಾಗಲೆಲ್ಲ ಕರೆ ಮಾಡಿ ಗಂಟೆಗಟ್ಟಲೆ ಹರಟಲು ಫ್ರೀ ಕಾಲ್‌ನ ಪ್ಯಾಕ್‌ಗಳು, ಆಫರ್ ಗಳು ಹಾಗಿರಲಿ, ನಿಮ್ಮ ಸೆಲ್ ಫೋನ್‌ಗೆ ಯಾರಾದರೂ ಕರೆ ಮಾಡಿದರೆಂದು ನೀವು ರಿಸೀವ್ ಮಾಡಿದರೂ ಕರೆನ್ಸಿ ಕಟ್ ಆಗುತ್ತಿತ್ತು. ಹೌದು, ಒಳಬರುವ ಹಾಗೂ ಹೊರಹೋಗುವ ಕರೆಗಳೆರಡಕ್ಕೂ ಚಾರ್ಜ್ ಆಗುತ್ತಿದ್ದ ಜಮಾನವದು. ಹೀಗಾಗಿ ಅನಗತ್ಯವಾಗಿ ಯಾರೂ ಕರೆ ಮಾಡುತ್ತಲೂ ಇರಲಿಲ್ಲ, ಬಂದ ಕರೆಗಳು ಅಪರಿಚಿತವಾಗಿದ್ದರೆ ಸ್ವೀಕರಿಸುತ್ತಲೂ ಇರಲಿಲ್ಲ.
ಮಾತುಗಳೂ ಟೆಲಿಗ್ರಾಮ್‌ನಂತೆ, ವಿಷಯಕ್ಕಷ್ಟೇ ಸೀಮಿತ. ಪ್ರೀಪೇಯ್ಡ್ ಆಗಿದ್ದರೆ ಎಷ್ಟು ಹಣ ಹೋಯಿತೆಂಬುದು ಗೊತ್ತಾದರೂ ಗೊತ್ತಾಗುತ್ತಿತ್ತು. ಪೋಸ್ಟ್ ಪೇಯ್ಡ್‌ನಲ್ಲಿ ತಿಂಗಳ ನಂತರ ಬಿಲ್ ಬಂದಾಗಲೇ ‘ಹೃದಯಾಘಾತ’ವಾಗುತ್ತಿದ್ದುದು. ಹೀಗಾಗಿ ಹಣ ವಂತರಷ್ಟೇ ಪೋಸ್ಟ್ ಪೇಯ್ಡ್ ಸಿಮ್‌ಗಳನ್ನು ಇಟ್ಟುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಉಳಿದಂತೆ ಪ್ರೀ ಪೇಯ್ಡ್
ಹಾಕಿಸಿಕೊಂಡು, ರಸ್ತೆಯಲ್ಲಿ ಒಡಾಡುತ್ತಿದ್ದಾಗ, ಬಸ್ ಗಳಲ್ಲಿ, ಆಫೀಸ್‌ನಲ್ಲಿ ನಡುನಡುವೆ ಸೆಲ್‌ಗಳನ್ನು ಸೈಲೆಂಟ್ ಗೆ ಹಾಕಿ, ಸುಖಾ ಸುಮ್ಮನೇ ‘ಹಲೋ’ ಎನ್ನುತ್ತಾ ಕಿವಿಗಿಟ್ಟು ಕೊಂಡು ಎದ್ದು ಹೋಗಿ ಮಾತಾಡಿದಂತೆ ಪೋಸು ಕೊಡುತ್ತಿದ್ದುದೇ ಹೆಚ್ಚು.
ನಮ್ಮ ಹಿರಿಯ ಸಹೋದ್ಯೋಗಿಯೊಬ್ಬರು ಶಿವಕುಮಾರ್ ಭೋಜಶೆಟ್ಟರ್ ಅಂತ ಇದ್ದರು. ಒಳ್ಳೆಯ ಮನುಷ್ಯರೇ, ಆದರೆ ಸ್ವಲ್ಪ ಅಂಡೆಪಿರ್ಕಿ. ಆಗಷ್ಟೇ ವಿಜಯ್ ಸಂಕೇಶ್ವರ್ ಆರಂಭಿಸಿದ್ದ ‘ವಿಜಯ ಕರ್ನಾಟಕ’ದಲ್ಲಿ ತುಸುಮೇಲಿನ ಹುದ್ದೆಯೊಂದಕ್ಕೆ ಸೇರಿದ್ದರು. ಹೀಗೇ ಯಾರೋ ಇಬ್ಬರು ತಂತಮ್ಮ ಸಿಮ್‌ಗಳ ಮಾತನಾಡುತ್ತ, ನಡುವೆ ಬಂದ ಭೋಜಶೆಟ್ಟರ್ ಅವರನ್ನೂ ‘ಶೆಟ್ರೆ ನಿಮ್ಮದ್ಯಾವುದು ಸಿಮ್, ಪ್ರೀಪೇಯ್ಡಾ, ಪೋಸ್ಟ್ ಪೇಯ್ಡಾ?’ ಎಂದು ಕೇಳಿದರು.
ತಕ್ಷಣ ಶೆಟ್ಟರು-‘ಇಲ್ಲಿಲ್ಲ ನಂದು ಆಫೀಸ್ ಪೇಯ್ಡ್’ ಎಂದುಬಿಡಬೇಕೇ? ನಿಜವಾಗಿ ಸತ್ಯವನ್ನೇ ಅವರು ಹೇಳಿದ್ದರು- ಕನ್ನಡ ಪತ್ರಿಕಾ ಕಚೇರಿಗಳಲ್ಲಿ ಹಿರಿಯ ಸಿಬ್ಬಂದಿಗೆ ಮೊಬೈಲ್ ಕೊಟ್ಟಿದ್ದ ಮೊದಲ ಪತ್ರಿಕೋದ್ಯಮಿ ವಿಜಯ ಸಂಕೇಶ್ವರರೇ. ಅಷ್ಟರಮಟ್ಟಿಗೆ ಜನರಲ್ಲಿ ಮೊಬೈಲ್ ತಂತ್ರಜ್ಞಾನದ ಬಗೆಗೆ ಅಜ್ಞಾನ ಇದ್ದುದು ಒಂದೆಡೆಯಾದರೆ, ಇನ್ನೊಂದೆಡೆ ಇಬ್ಬರು ಸೇರಿದರೆ ಅಲ್ಲಿ ಸೆಲ್ ಫೋನ್‌ಗಳ ಬಗೆಗೆ ಪ್ರಸ್ತಾಪವಿಲ್ಲದೇ ಮಾತೇ ಮುಗಿಯುತ್ತಿರಲಿಲ್ಲ.
ಇವತ್ತು ಕಾಸಿಗೊಂದು ಕೊಸರಿಗೊಂದು ಸೆಲ್ ಫೋನ್ ಕಂಪನಿಗಳು ಹುಟ್ಟಿಕೊಂಡಿವೆ. ಜಗತ್ತಿನೆಲ್ಲೆಡೆ ದೂರ ಸಂಪರ್ಕ ಕ್ಷೇತ್ರದಲ್ಲಿ ಬೃಹತ್ ಕ್ರಾಂತಿಯೇ ಆಗಿದೆ. ಆಗ ಬ್ಲಾಕ್‌ಬೆರ್ರಿ ಬಂದದ್ದೇ ಬಲದೊಡ್ಡ ಸುದ್ದಿ. ಮತ್ತದನ್ನು ಖರೀದಿಸುವುದೇ ಜೀವನದ ಪರಮ ಗುರಿಗಳಲ್ಲೊಂದಾಗಿತ್ತು. ಈಗಿನ ಸ್ಮಾರ್ಟ್‌ಪೂನ್‌ಗಳಿಗೆ ಹೋಲಿಸಿದರೆ ಬ್ಲಾಕ್ ಬೆರ್ರಿ ಏನೇನೂ ಅಲ್ಲ ಎನ್ನವಂತಾಗಿದೆ.
ಐಫೋನ್ ಬಂದ ಮೇಲಂತೂ ಸೆಲ್ ಫೋನ್‌ಗಳ ಖದರ್ರೇ ಬದಲಾಯಿತು. ಸ್ಯಾಮ್‌ಸಂಗ್-ಆಪಲ್‌ಗಳ ಮಧ್ಯದ ದುಬಾರಿ ಸೆಟ್ ಗಳ ಪೈಪೋಟಿಯ ನಡುವೆಯೂ, ತೀರಾ ಕಡಿಮೆ ಬೆಲೆಗೆ ಒಳ್ಳೊಳ್ಳೆಯ ಸ್ಪಾರ್ಟ್ ಫೋನ್‌ಗಳು ಬಂದು, ಕೂಲಿಯವರ ಕೈಯಲ್ಲೂ ಟಚ್ ಸ್ಕ್ರೀನ್ ರಾರಾಜಿಸುವಂತಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಪೇಂಟ್‌ಡಬ್ಬಾದಲ್ಲಿ ನೀರು ತುಂಬಿಕೊಂಡು ಎಡಗೈಲಿ ‘ಚರಿಗೆ’ ಹಿಡಿದು ಬಯಲಿಗೆ ಹೋಗುವ
ಜೋಪಡಿಯವನ ಬಲಗೈನಲ್ಲೂ ಟಚ್ ಸ್ಕ್ರೀನ್ ಹೊಳೆಯುತ್ತಿರುತ್ತದೆ. ಒಳ್ಳೆಯ ಬೆಳವಣಿಗೆಯೇ. ಅದೆಲ್ಲವನ್ನೂ ಮೀರಿ,
ಅವತ್ತು ಊಹಿಸಲೂ ಸಾಧ್ಯವಾಗದಂತಿದ್ದ 5 ಜಿ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಕಳೆದವಾರ ದೇಶಕ್ಕೆ
ಪರಿಚಯಿಸಿದ್ದಾರೆ.
ಅನುಮಾನವೇ ಇಲ್ಲ, 21ನೇ ಶತಮಾನದ ಅತಿದೊಡ್ಡ ಕ್ರಾಂತಿ ದೇಶದಲ್ಲಿ ಜರುಗಿದೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿ ದೇಶದ 13 ನಗರಗಳ ಮಂದಿ ೫ಜಿ ಸಂಪರ್ಕಕ್ಕೆ ತಮ್ಮನ್ನು ತಾವು ಬೆಸೆದುಕೊಳ್ಳಲಿದ್ದಾರೆ. ೫ಜಿ ಕೇವಲ ಶೀಘ್ರಗಾಮಿ ನೆಟ್ ವರ್ಕ್ ಅಲ್ಲವೇ ಅಲ್ಲ. ಹಾಗೆ ನೋಡಿದರೆ ಆ ಮೂಲಕ ಭಾರತದ ಜೀವನವೇ ಬದಲಾಗುವ ನಿರೀಕ್ಷೆ ಇದೆ. ಏಕೆಂದರೆ ೫ನೇ ತಲೆಮಾರಿನ ನೆಟ್‌ವರ್ಕ್ ಕೇವಲ ಮೊಬೈಲ್, ಅಥವಾ ಡೆಸ್ಕ್‌ಟಾಪ್‌ನಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್‌ನ ವೇಗವನ್ನು ಹೆಚ್ಚಿಸುವುದಲ್ಲ, ಬದಲಿಗೆ ಬದುಕಿನ ಆಲೋಚನೆಗಳ ಅಪ್‌ಲೋಡ್-ಡೌನ್ ಲೋಡ್‌ಗಳ ವೇಗವನ್ನೂ ಹೆಚ್ಚಿಸಲಿದೆ.
ಏಕೆಂದರೆ ೫ಜಿಯ ವೇಗದ ಹಿಂದೆ ಕೆಲಸ ಮಾಡುತ್ತಿರುವ ಮಿಲಿಮೀಟರ್ ವೆಬ್ ಗಳ ಸಾಮರ್ಥ್ಯ ೫-೬ ಎಏನಿಂದ ೩೦-೩೦೦ ಎಏ
ಏರಲಿದೆ. ಅಂದರೆ ಕೇವಲ 1 ಚದರ ಕಿಲೋಮೀಟರಗಳಲ್ಲಿ ಒಂದು ಮಿಲಿಯನ್ ಸಾಧನಗಳನ್ನು ಸಂಪರ್ಕಿಸಬಹುದಾಷ್ಟು ಹೆಚ್ಚು. ಹೀಗಾಗಿ ಇದರ ಅಲ್ಟ್ರಾ ಹೈ ಸ್ಪೀಡ್ ಮತ್ತು ಅತಿ ಕಡಿಮೆ ಲೇಟೆನ್ಸಿಯಿಂದಾಗಿ ಒಂದು ಯಂತ್ರದಿಂದ ಇನ್ನೊಂದಕ್ಕೆ ಸಂವಹನವನ್ನು ಬಹಳ ಸುಲಭಗೊಳಿಸುತ್ತದೆ.
ಅಂದರೆ, ಹಿಂದಿನ Mbps ನಲ್ಲಿನ ಲೆಕ್ಕಾಚಾರಗಳು ಇದೀಗ Gbps ಆಗಿ ಬದಲಾಗಲಿದೆ. ಇದರ ಅಗಾಧತೆ ಅರ್ಥವಾಗ ಬೇಕೆಂದರೆ ಹಿಂದಿನದಕ್ಕಿಂತ ನೂರುಪಟ್ಟು ವೇಗ ಮತ್ತುಹೆಚ್ಚಿನ ಸಾಮರ್ಥ್ಯದ ಯೋಚನೆಯನ್ನು ರೂಢಿಸಿಕೊಳ್ಳ ಬೇಕಿದೆ. ಒಂದೇಮಾತಲ್ಲಿ ಹೇಳುವುದಿದ್ದರೆ ೫ಜಿ ನೆರವಿನಲ್ಲಿ ಇನ್ನೊಂದೇ ವರ್ಷದಲ್ಲಿ ಹಿಂದಿನ ಹತ್ತು ವರ್ಷಗಳಲ್ಲಿ ಮಾಡಲಾಗದ ಸಾಧನೆಯನ್ನು ಸಾಧ್ಯ ವಾಗಿಸಬಹುದು.
ಬದುಕಿನ ಎಲ್ಲದಕ್ಕೂ ನಮ್ಮ ಸ್ಮಾರ್ಟ್ ಫೋನ್‌ಗಳು ಒನ್ ಪಾಯಿಂಟ್ ರಿಮೋಟ್ ಕಂಟ್ರೋಲರ್ ಆಗಲಿದೆ. ಇನ್ನೂ ಏನೇ ನಾಗಲಿದೆಯೋ ಜಗತ್ತು, ಆ ವೇಗಕ್ಕೆ ತಕ್ಕಂತೆ ನಾವು ಹೆಜ್ಜೆ ಹಾಕುವುದನ್ನುರೂಢಿಸಿಕೊಳ್ಳಬೇಕಷ್ಟೆ.