ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಆಸ್ಪತ್ರೆಯಲ್ಲಿದ್ದ ಕ್ಲಿಯರ್‌ಗೆ ಮನೋಬಲವೆಂಬ ಬೆಳಕಿನ ಕಿಂಡಿ

ಜೀವನ ಮುಗಿದೇ ಹೋಯಿತು ಎಂದು ಭಾವಿಸಿದ್ದ ಅವನ ಬದುಕಿನಲ್ಲಿ ಕಾಮನ ಬಿಲ್ಲು ಮೂಡಲಾ‌ ರಂಭಿಸಿತ್ತು. ಬೇಸ್ ಬಾಲ್ ಅವನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವನ ತಂದೆಯೂ ಲೀಗ್ ಪಂದ್ಯ ಗಳಲ್ಲಿ ಆಡಿದ್ದರು. ಅವನಿಗೂ ವೃತ್ತಿಪರ ಬೇಸ್ ಬಾಲ್ ಆಟಗಾರನಾಗಬೇಕು ಎಂಬ ಆಸೆಯಿತ್ತು. ಆದರೆ ಇಂಥ ಪರಿಸ್ಥಿತಿಯಲ್ಲಿ, ಆಟಗಾರನಾಗುವುದು ಬೇರೆ ಮಾತಾಯಿತು, ಮೊದಲಿನಂತೆ ಓಡಾ ಡಲು ಸಾಧ್ಯವಾದರೆ ಅದೇ ದೊಡ್ಡದಾಗಿತ್ತು.

ಆಸ್ಪತ್ರೆಯಲ್ಲಿದ್ದ ಕ್ಲಿಯರ್‌ಗೆ ಮನೋಬಲವೆಂಬ ಬೆಳಕಿನ ಕಿಂಡಿ

ನೂರೆಂಟು ವಿಶ್ವ

vbhat@me.com

ಅಂದು ಹೈಸ್ಕೂಲಿನಲ್ಲಿ ಅವನ ಕೊನೆಯ ದಿನ. ಕ್ಲಾಸ್ ಮೇಟ್ ಬೀಸಿದ ಬೇಸ್ ಬಾಲ್ ಬ್ಯಾಟ್ ಕೈತಪ್ಪಿ ಅವನ ಮುಖಕ್ಕೆ ಬಲವಾಗಿ ಬಂದು ಬಡಿಯಿತು. ಬ್ಯಾಟ್ ಬಂದು ನೇರವಾಗಿ ಎರಡು ಕಣ್ಣು ಗಳ ಮಧ್ಯೆ, ಮೂಗು ಮತ್ತು ಹಣೆಗೆ ಹೊಡೆಯಿತು. ಅದೊಂದೇ ಗೊತ್ತು, ಮುಂದೇನಾಯಿತು ಎಂಬುದು ಅವನಿಗೆ ಗೊತ್ತಾಗಲೇ ಇಲ್ಲ. ಬ್ಯಾಟ್ ಬಂದು ಬಡಿದ ವೇಗ ಅದೆಷ್ಟು ಜೋರಾಗಿತ್ತೆಂದರೆ, ಮೂಗಿನ ಮೂಳೆ ಮುರಿದುಹೋಗಿತ್ತು. ಮೂಗಿನಿಂದ ಮಿದುಳಿಗೆ ಹೋಗುವ ನರ ತುಂಡಾಗಿತ್ತು. ಬ್ಯಾಟ್ ಬಡಿದ ಹೊಡೆತಕ್ಕೆ ಹಣೆಗೂ ಪೆಟ್ಟಾಗಿತ್ತು. ಇಡೀ ತಲೆಬುರುಡೆ ‘ದಿಮ್’ ಎನ್ನುತ್ತಿತ್ತು. ನೋಡನೋಡುತ್ತಿದಂತೆ, ಅವನ ಮೂಗಿನಿಂದ ಧಾರಾಕಾರವಾಗಿ ರಕ್ತ ಹರಿಯಲಾರಂಭಿಸಿತು. ರಕ್ತ ನೋಡುತ್ತಿದ್ದಂತೆ ಆತ ವಿಚಲಿತನಾದ. ಕೆಲವೇ ಕ್ಷಣಗಳಲ್ಲಿ ಗೊತ್ತಾಗಿದ್ದೇನೆಂದರೆ, ಅವನ ಮೂಗು ಮುರಿದಿದೆ, ತಲೆಬುರಡೆಗೆ ಏಟು ಬಿದ್ದಿದೆ ಮತ್ತು ಕಣ್ಣು ಗುಡ್ಡೆಗಳೆರಡಕ್ಕೂ ಧಕ್ಕೆಯಾಗಿವೆ ಎಂದು.

ಅದನ್ನು ನೋಡಿ ಸುತ್ತಲಿದ್ದವರೆ ಕಂಗಾಲಾದರು. ಯಾರೋ ತನ್ನ ಅಂಗಿ ಬಿಚ್ಚಿಕೊಟ್ಟ. ಅದನ್ನು ಆತ ತನ್ನ ಮೂಗಿಗೆ ಹಿಡಿದ. ಆದರೂ ರಕ್ತ ಹರಿಯುವುದು ನಿಲ್ಲಲಿಲ್ಲ. ಅವನಿಗೆ ಏನು ನಡೆಯುತ್ತಿದೆ ಯೆಂಬುದೇ ಗೊತ್ತಾಗಲಿಲ್ಲ. ಈ ವಿಷಯ ಟೀಚರ್‌ಗೆ ಗೊತ್ತಾಯಿತು. ಅಲ್ಲಿ ಇದ್ದವರೆಲ್ಲ ಸುತ್ತಲೂ ಜಮಾಯಿಸಿದರು. ಆತನಿಗೆ ಪ್ರಜ್ಞೆ ಇರಲಿಲ್ಲ.

ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ನಾಲ್ಕಾರು ಜನ ಅವನನ್ನು ಹಿಡಿದು ಮೇಲೆತ್ತಿದ್ದರು. ಒಂದೊಂದು ಕ್ಷಣವೂ ಅಮೂಲ್ಯವಾಗಿತ್ತು. ಕಾರಣ ಕ್ಷಣಕ್ಷಣಕ್ಕೂ ಮುಖ ನೀಲಿಗಟ್ಟಿ ಊದಿಕೊಳ್ಳಲು ಆರಂಭಿಸಿತ್ತು. ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ, ನರ್ಸ್ ಹತ್ತಾರು ಪ್ರಶ್ನೆಗಳನ್ನು ಕೇಳಿದಳು. ‘ಇದು ಯಾವ ಇಸವಿ?’ ಎಂದು ಕೇಳಿದಳು.

ಇದನ್ನೂ ಓದಿ: Vishweshwar Bhat Column: ಜಗತ್ತಿನ ಮುಂದೆ ವಿಚಿತ್ರ ಮನವಿ ಇಟ್ಟಿದ್ದ ಜಪಾನ್‌ ಪ್ರಧಾನಿ !

ಆತ ಹೇಳಿದ - ‘1998’ ಆದರೆ ಅದು 2002 ಆಗಿತ್ತು. ‘ಅಮೆರಿಕದ ಅಧ್ಯಕ್ಷ ಯಾರು?’ ಎಂದು ಕೇಳಿ ದಳು. ಆತ ಹೇಳಿದ - ‘ಬಿಲ್ ಕ್ಲಿಂಟನ್’. ಸರಿ ಉತ್ತರ ಜಾರ್ಜ್ ಡಬ್ಲ್ಯೂ ಬುಷ್. ಮುಂದಿನ ಪ್ರಶ್ನೆ - ‘ನಿನ್ನ ತಾಯಿಯ ಹೆಸರೇನು?’ ಅದಕ್ಕೆ ಉತ್ತರಿಸಲು ಆತ ತಡಬಡಿಸಿದ. ಸರಿಯಾದ ಉತ್ತರ ಹೇಳಲು ಹತ್ತು ನಿಮಿಷ ತೆಗೆದುಕೊಂಡ. ಆತನಿಗೆ ನೆನಪಿದ್ದಿದ್ದು ಅದೇ ಕೊನೆ ಪ್ರಶ್ನೆ. ಮುಂದೇನಾಯಿತು ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ಕಣ್ಣುಗುಡ್ಡೆ ಊದಿಕೊಳ್ಳಲಾರಂಭಿಸಿತು.

ತಲೆಬುರುಡೆ ಅಸಾಧ್ಯವಾಗಿ ಶಳಿಯುತ್ತಿತ್ತು. ಆಂಬುಲೆನ್ಸ್ ಬರುವುದಕ್ಕಿಂತ ಮುನ್ನವೇ ಆತ ಪ್ರಜ್ಞಾ ಹೀನನಾಗಿ ಬಿದ್ದುಬಿಟ್ಟ. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಿದರು. ಆಸ್ಪತ್ರೆಗೆ ಬರುತ್ತಿದ್ದಂತೆ, ಆತನ ದೇಹದ ಚಲನೆಗಳು ಕ್ಷೀಣವಾಗತೊಡಗಿದವು. ಎಂಜಲು ನುಂಗಲು ಮತ್ತು ಸರಾಗವಾಗಿ ಉಸಿರಾಡಲು ಅವನಿಗೆ ಕಷ್ಟವಾಗತೊಡಗಿತು.

ಕ್ಷಣಾರ್ಧದಲ್ಲಿ ಆತ ಹೆಚ್ಚು ಕಮ್ಮಿ ಉಸಿರಾಡುವುದನ್ನು ನಿಲ್ಲಿಸಿಬಿಟ್ಟ. ವೈದ್ಯರು ಬಿರಬಿರನೆ ಅವನಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ಅನುವು ಮಾಡಿಕೊಟ್ಟರು. ಆತನ ದೇಹದಲ್ಲಾಗು ತ್ತಿರುವ ಏರುಪೇರುಗಳನ್ನು ಗಮನಿಸಿದ ವೈದ್ಯರು, ಸಿನ್ಸಿನಾಟಿಯಲ್ಲಿರುವ ಆಧುನಿಕ ಸಲಕರಣೆ - ಸವಲತ್ತುಗಳಿರುವ ಬೇರೆ ಆಸ್ಪತ್ರೆಗೆ ಹೆಲಿಕಾಪ್ಟರಿನಲ್ಲಿ ಕೊಂಡೊಯ್ಯಲು ನಿರ್ಧರಿಸಿದರು.

6 22 R

ಅಲ್ಲಿಂದ ಅವನ ದೇಹವನ್ನು ಸುತ್ತಿ ಹೆಲಿಪ್ಯಾಡ್ ತನಕ ಸ್ಟ್ರೆಚರಿನಲ್ಲಿ ಸಾಗಿಸಿದರು. ಆಗ ನರ್ಸುಗಳು ಅವನಿಗೆ ಉಸಿರಾಟಕ್ಕೆ ನೆರವಾಗಲು ಸ್ಟ್ರೆಚರನ್ನು ಸುತ್ತುವರಿದು ಅದರ ಹಿಂದೆಯೇ ಓಡುತ್ತಿದ್ದರು. ಅಷ್ಟೊತ್ತಿಗೆ ಅವನ ತಾಯಿ ಹೆಲಿಪ್ಯಾಡಿಗೆ ಆಗಮಿಸಿದಳು. ಅವನಿಗೆ ಪ್ರಜ್ಞೆ ಇರಲಿಲ್ಲ. ಹೆಲಿಕಾಪ್ಟರಿ ನಲ್ಲಿ ದುಃಖತಪ್ತ ತಾಯಿ ಪಕ್ಕದಲ್ಲಿ ಕುಳಿತಿದ್ದಳು.

ಅಷ್ಟೊತ್ತಿಗೆ ಅವನ ತಂದೆಗೆ ಈ ವಿಷಯ ಗೊತ್ತಾಯಿತು. ಆತ ಮನೆ-ಮಂದಿಗೆ ಈ ವಿಷಯ ತಿಳಿಸಿದ. ಅವನ ತಂದೆ ಕಾರಿನಲ್ಲಿ ಸಿನ್ಸಿನಾಟಿಗೆ ಹೊರಟರು. ಅಂದೇ ಅವನ ಸಹೋದರಿಯ ಗ್ರಾಜುಯೇಷನ್ ಡೇ ಇತ್ತು. ಹೆಲಿಕಾಪ್ಟರ್ ಭೂಸ್ಪರ್ಶವಾಗುತ್ತಿದ್ದಂತೆ, ಅಲ್ಲಿಗೆ ಸುಮಾರು ಇಪ್ಪತ್ತು ವೈದ್ಯರು ಮತ್ತು ನರ್ಸುಗಳು ಧಾವಿಸಿ ಅವನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋದರು.

ಅಷ್ಟೊತ್ತಿಗೆ ಅವನ ಮುಖ ಕುಂಬಳಕಾಯಿಯಂತೆ ಊದಿಕೊಂಡಿತ್ತು. ತಲೆಶಕೆ ಸಹಿಸಲ ಸಾಧ್ಯ ವಾಗಿತ್ತು. ಅವನ ಮುರಿದ ಮೂಗಿನ ಮೂಳೆಗಳನ್ನು ಸರಿಪಡಿಸಬೇಕಿತ್ತು. ಅದಕ್ಕೆ ಸರ್ಜರಿ ಮಾಡಲೇ ಬೇಕಿತ್ತು. ಆತ ಕೋಮಾಕ್ಕೆ ಜಾರಿದಾಗ, ಅವನ ತಂದೆ - ತಾಯಿಯನ್ನು ಸಮಾಧಾನ ಪಡಿಸಲು, ಆಸ್ಪತ್ರೆಯ ಅಧಿಕಾರಿಗಳು ಚರ್ಚಿನ ಧರ್ಮಗುರುಗಳು ಮತ್ತು ಸಾಮಾಜಿಕ ಕಾರ್ಯಕರ್ತ ರನ್ನು ಕರೆಯಿಸಿದರು. ಹತ್ತು ವರ್ಷಗಳ ಹಿಂದೆ, ವೈದರು ಅವನ ಸಹೋದರಿಗೆ ಕ್ಯಾನ್ಸರ್ ಎಂದು ಹೇಳಿದಾಗಲೂ ಅದೇ ಧರ್ಮಗುರುಗಳು ಮತ್ತು ಕಾರ್ಯಕರ್ತರು ಆಗಮಿಸಿದ್ದರು. ಅಕ್ಷರಶಃ ಆತ ಮಷೀನುಗಳಿಂದ ಸುತ್ತುವರಿದಿದ್ದ. ಆ ಯಂತ್ರಗಳೇ ಅವನನ್ನು ಬದುಕಿಸಿಟ್ಟಿದ್ದವು.

ಅವನ ತಂದೆ-ತಾಯಿಗಳು ಮಗನ ಪಾಡನ್ನು ನೋಡಲಾಗದೇ, ಬಳಲಿಕೆಯಿಂದ ನಿತ್ರಾಣ ಗೊಂಡಿದ್ದರು. ನಾಲ್ಕೈದು ದಿನಗಳ ನಂತರ, ಆತ ಚಿಕಿತ್ಸೆಗೆ ಸ್ಪಂದಿಸಲಾರಂಭಿಸಿದ. ಆಶ್ಚರ್ಯಕರ ರೀತಿಯಲ್ಲಿ ಅವನಿಗೆ ಪ್ರಜ್ಞೆ ಮರಳಿತು. ಅವನಿಗೆ ವಾಸನಾಶಕ್ತಿ ಹೊರಟು ಹೋಗಿತ್ತು. ಕೆಲವು ದಿನಗಳಲ್ಲಿ ಅದು ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದರು. ಮುರಿದ ಮೂಗಿನ ಮೂಳೆ ಗಳಿಂದ ಉಸಿರಾಡುವುದು ಕಷ್ಟವಾಗಿತ್ತು.

ಉಬ್ಬಿದ ಕಣ್ಣುಗುಡ್ಡೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಬರುವ ಸೂಚನೆಗಳು ಕಾಣಲಾರಂಭಿಸಿದವು. ತಲೆಶೂಲ ಕಮ್ಮಿಯಾಗಿತ್ತು. ಅವನ ಕಣ್ಣುಗಳು ಕ್ರಮೇಣ ಮೊದಲಿನ ಸ್ಥಾನದಲ್ಲಿ ಕುಳಿತುಕೊಳ್ಳಲಿವೆ ಎಂದು ನೇತ್ರತಜ್ಞರು ಹೇಳಿದರು. ಒಂದು ವಾರದ ನಂತರ ಇನ್ನೊಂದು ಸರ್ಜರಿ ಮಾಡಬೇಕು, ಅದು ಗುಣವಾಗಲು ಹತ್ತು ದಿನಗಳಾದರೂ ಬೇಕು ಎಂದು ವೈದ್ಯರು ಹೇಳಿದರು. ಅವನನ್ನು ನೋಡಿದರೆ, ಬಾಕ್ಸಿಂಗ್ ಪಂದ್ಯದಲ್ಲಿ ಪೆಟ್ಟು ತಿಂದು ಬ್ಯಾಂಡೇಜ್ ಹಾಕಿಸಿಕೊಂಡವನಂತಿದ್ದ. ಆಗಾಗ ಆಸ್ಪತ್ರೆಗೆ ಬರಬೇಕಾಗುತ್ತದೆಯೆಂದು ತಿಳಿಸಿದ ವೈದ್ಯರು, ಇನ್ನು ಎರಡು-ಮೂರು ತಿಂಗಳು ವಿಶ್ರಾಂತಿ ತೆಗೆದು ಕೊಳ್ಳುವಂತೆ ಸೂಚಿಸಿ ಡಿಸ್ಚಾರ್ಜ್ ಮಾಡಿದರು.

ಮುಂದಿನ ಮೂರು ತಿಂಗಳು ಭಯಾನಕವಾಗಿದ್ದವು. ಆತ ಮಾಂಸದ ಮುದ್ದೆಯಂತೆ ಹಾಸಿಗೆಯಲ್ಲಿ ಮಲಗಿದ್ದ. ಅವನ ಜೀವನದ ಎಲ್ಲಾ ಚಟುವಟಿಕೆಗಳು ಸ್ತಬ್ದವಾಗಿದ್ದವು. ಆತನಿಗೆ ನೇರವಾಗಿ ನೋಡಲು ಆಗುತ್ತಿರಲಿಲ್ಲ. ನೆಗಡಿಯಾದಾಗ ಮೂಗು ವಿಪರೀತ ನೋಯುತ್ತಿತ್ತು. ಹತ್ತು ನಿಮಿಷ ಕ್ಕಿಂತ ಹೆಚ್ಚು ಕಾಲ ಓದಲು ಆಗುತ್ತಿರಲಿಲ್ಲ. ಎರಡೆರಡು ಇಮೇಜುಗಳು ಕಾಣುತ್ತಿದ್ದವು.

ಫಿಸಿಯೋ ಥೆರಪಿ ತಜ್ಞರು ದಿನವೂ ಮನೆಗೆ ಬಂದು ಆರೈಕೆ ಮಾಡುತ್ತಿದ್ದರು. ಜೀವನ ಮುಗಿದೇ ಹೋಯಿತು ಎಂದು ಭಾವಿಸಿದ್ದ ಅವನ ಬದುಕಿನಲ್ಲಿ ಕಾಮನ ಬಿಲ್ಲು ಮೂಡಲಾರಂಭಿಸಿತ್ತು. ಬೇಸ್ ಬಾಲ್ ಅವನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವನ ತಂದೆಯೂ ಲೀಗ್ ಪಂದ್ಯ ಗಳಲ್ಲಿ ಆಡಿದ್ದರು. ಅವನಿಗೂ ವೃತ್ತಿಪರ ಬೇಸ್ ಬಾಲ್ ಆಟಗಾರನಾಗಬೇಕು ಎಂಬ ಆಸೆಯಿತ್ತು. ಆದರೆ ಇಂಥ ಪರಿಸ್ಥಿತಿಯಲ್ಲಿ, ಆಟಗಾರನಾಗುವುದು ಬೇರೆ ಮಾತಾಯಿತು, ಮೊದಲಿನಂತೆ ಓಡಾ ಡಲು ಸಾಧ್ಯವಾದರೆ ಅದೇ ದೊಡ್ಡದಾಗಿತ್ತು.

ಅಷ್ಟಕ್ಕೂ ಆತ ಬದುಕಿದ್ದುದೇ ಒಂದು ಪವಾಡ. ಜೀವನದಲ್ಲಿ ಮೊದಲಿನಂತೆ ತಾನು ಫೀಲ್ಡಿಗೆ ಇಳಿಯಬೇಕು, ಮೊದಲಿನ ಕಸುವು, ಚಮಕ್, ಕ್ರಿಯಾಶೀಲತೆಯನ್ನು ತನ್ನದಾಗಿಸಿಕೊಳ್ಳಬೇಕು ಎಂದು ಆತ ಪ್ರತಿದಿನ ಅಂದುಕೊಳ್ಳಲಾರಂಭಿಸಿದ. ಅದಕ್ಕೆ ಪೂರಕವಾಗಿ ಅಭ್ಯಾಸವನ್ನೂ ಮಾಡಲಾರಂಭಿಸಿದ. ದಿನದಿಂದ ದಿನಕ್ಕೆ ಪ್ರಾಕ್ಟೀಸ್ ಅವಧಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದ.

ಒಂದೂವರೆ ವರ್ಷದ ನಂತರ...

ಬೇಸ್ ಬಾಲ್ ಫೀಲ್ಡಿಗೆ ಮರಳಿ ಬಂದ! ಆತ ಜೀವನದಲ್ಲೆಂದೂ ಬೇಸ್ ಬಾಲ್ ಆಡಲಾರ ಎಂದು ಅಂದುಕೊಂಡವರೂ ಅಚ್ಚರಿಪಟ್ಟರು. ಆತನಿಗೆ ತನ್ನ ವಯೋಮಾನದವರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಗಲಿಲ್ಲ. ಜೂನಿಯರ್ ತಂಡದಲ್ಲಿ ಆಡುವಂತೆ ಹೇಳಿದಾಗ ಆತ ಗೋಳೋ ಎಂದು ಅತ್ತುಬಿಟ್ಟ. ಆದರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ತನ್ನಲ್ಲಿ ಭರವಸೆಯನ್ನು ತುಂಬಿಕೊಳ್ಳದೇ, ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲ ಎಂಬುದು ಅವನಿಗೆ ಖಾತ್ರಿಯಾಯಿತು. ಮತ್ತೊಂದು ವರ್ಷ ಸತತ ಪ್ರಾಕ್ಟೀಸ್ ಮಾಡಿದ.

ಕೊನೆಗೆ, ಯುನಿವರ್ಸಿಟಿ ಸೀನಿಯರ್ ತಂಡದಲ್ಲಿ ಆಡುವ ಅವಕಾಶ ಒದಗಿ ಬಂದಿತು. ಇದು ಅವನ ಜೀವನದ ಕನಸಾಗಿತ್ತು. ಕಾರಣ ಇಲ್ಲಿ ಅತ್ಯುತ್ತಮ ಸಾಧನೆ ಮೆರೆದರೆ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದಿತ್ತು. ಎರಡು ವರ್ಷಗಳ ನಂತರ ಆತ ಡೆನಿಸನ್ ಯುನಿವರ್ಸಿಟಿಯನ್ನು ಸೇರಿದ. ಯಾವುದೇ ಅಭ್ಯಾಸವನ್ನು ಸ್ವಲ್ಪ ಸ್ವಲ್ಪ ದಿನೇ ದಿನೆ ಮಾಡುತ್ತಾ, ಮಾಡುತ್ತಾ, ಅದರಲ್ಲಿ ಪ್ರಗತಿ ಸಾಧಿಸಿದರೆ, ಮುಂದೊಂದು ದಿನ ಅಸಾಧ್ಯವಾದುದನ್ನು ಸಾಧಿಬಹುದು ಎಂಬುದು ಅವನಿಗೆ ಅರಿವಾಗುತ್ತಾ ಹೋಯಿತು.

ಡೆನಿಸನ್ ಸೇರಿದ್ದು ಅವನ ಜೀವನವನ್ನೇ ಬದಲಿಸಿತು. ಬೇಸ್ ಬಾಲ್ ಜತೆಗೆ ಯುನಿವರ್ಸಿಟಿಯ ಅಥ್ಲೀಟ್ ಆಗಿ ಕೂಡ ಆತ ಆಯ್ಕೆಯಾದ. ಆತನ ಸ್ನೇಹಿತರು ವಿಡಿಯೊ ಗೇಮ್ಸ್ ಆಡುವುದರಲ್ಲಿ ನಿರತರಾಗಿದ್ದರೆ, ಆತ ಯಾರೂ ಊಹಿ‌ಸಲಾರದ ಸಾಧನೆಗೆ ಅಣಿಯಾಗುತ್ತಿದ್ದ. ಇದು ಅವನಲ್ಲಿ ಅದಮ್ಯ ಜೀವನೋತ್ಸಾಹವನ್ನು ತುಂಬಿತು. ಬದುಕಿನಲ್ಲಿ ದಿನಾ ಹತ್ತು ಹೆಜ್ಜೆಗಳನ್ನು ಇಡುತ್ತಾ, ಎವರೆಸ್ಟ್ ಶಿಖರವನ್ನಾದರೂ ಏರುವುದು ಕಷ್ಟವಲ್ಲ, ಆದರೆ ಏನೇ ಆದರೂ ಏರುವುದನ್ನು ಬಿಡಬಾರದು ಎಂಬುದು ಅವನಿಗೆ ಮನವರಿಕೆಯಾಯಿತು.

ಆತ ತನ್ನೆಲ್ಲ ಸಾಧನೆಯ ಜತೆಗೆ ವೇಟ್ ಲಿಫ್ಟಿಂಗ್ ಅಭ್ಯಾಸವನ್ನೂ ಮಾಡಲಾರಂಭಿಸಿದ. ಆತನ ದೇಹದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿದವು. ಬೇಸ್ ಬಾಲ್ ಬ್ಯಾಟ್‌ನಿಂದ ಪೆಟ್ಟು ತಿಂದು ಗುಣಮುಖನಾದ ನಂತರ ಊಟ, ನಿದ್ದೆ, ಬಿಡುವು, ಓದು, ಆಟದಲ್ಲಿ ಆತ ಒಂದು ಶಿಸ್ತನ್ನು ರೂಢಿಸಿಕೊಂಡಿದ್ದ. ಅದು ಈಗ ಫಲ ನೀಡಲಾರಂಭಿಸಿದವು.

ಆರು ವರ್ಷಗಳ ನಂತರ ಆತ ಡೆನಿಸನ್ ಯುನಿವರ್ಸಿಟಿಯ ಟಾಪ್ ಅಥ್ಲೀಟ್ ಪ್ರಶಸ್ತಿಗೆ ಪಾತ್ರನಾದ. ಅಲ್ಲದೇ ಎಎಸ್ಪಿಎನ್ ಅಕಾಡೆಮಿಕ್ ಆಲ್ ಅಮೆರಿಕ ಟೀಮ್ ಗೆ ಆಯ್ಕೆಯಾದ. ಇಡೀ ಅಮೆರಿಕದಲ್ಲಿ ಮೂವತ್ಮೂರು ಆಟಗಾರರು ಮಾತ್ರ ಆ ತಂಡಕ್ಕೆ ಆಯ್ಕೆಯಾಗುತ್ತಾರೆ. ಅದೇ ವರ್ಷ ಆತನಿಗೆ ಅಕಾಡೆ ಮಿಕ್ ಚಟುವಟಿಕೆಗಳಲ್ಲೂ ಪ್ರೆಸಿಡೆಂಟ್ ಮೆಡಲ್ ಬಂತು.

ತಾನು ಏನೇ ಮಾಡಿದರೂ ಅದರಲ್ಲಿ ಸಾಧನೆ ಮಾಡಬಹುದಾದ ಶಿಸ್ತು, ಶ್ರದ್ಧೆ ಮತ್ತು ಅಚ್ಚು ಕಟ್ಟುತನ ತನ್ನಲ್ಲಿದೆ ಎಂಬುದು ಅವನಿಗೆ ಮನವರಿಕೆಯಾಯಿತು. ಜೀವನದಲ್ಲಿ ಎಲ್ಲಾರೂ ಬೀಳು ತ್ತಾರೆ. ಎಲ್ಲರೂ ಬೇಸ್ ಬಾಲ್ ಬ್ಯಾಟ್‌ನಿಂದ ಅಲ್ಲವಾದರೂ, ಬೇರೆ ರೀತಿಯಲ್ಲಿ ಪೆಟ್ಟು ತಿನ್ನುತ್ತಾರೆ. ಆದರೆ ಅದರಿಂದ ಗುಣಮುಖರಾಗಿ, ಸಣ್ಣ ಸಣ್ಣ ಪ್ರಯತ್ನಗಳಿಂದ, ಉತ್ತಮ ಅಭ್ಯಾಸ ಬಲದಿಂದ ಅಸಾಧಾರಣವಾದುದನ್ನು ಸಾಧಿಸಬಹುದು ಎಂಬುದು ಅವನಿಗೆ ಮನದಟ್ಟಾಗುತ್ತಾ ಹೋಯಿತು.

ರಾತ್ರಿ ಬೆಳಗಾಗುವುದರೊಳಗೆ ಅಸಾಮಾನ್ಯ ಸಾಧನೆ ಮಾಡಿದವರು ಯಾರೂ ಇಲ್ಲ, ಲಾಟರಿಯಲ್ಲಿ ಬಹುಮಾನ ಗಿಟ್ಟಿಸಿದವರನ್ನು ಬಿಟ್ಟು. ಪ್ರಜ್ಞಾಶೂನ್ಯನಾಗಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದವ, ‘ಅಕಾಡೆಮಿಕ್ ಆಲ್ ಅಮೆರಿಕನ್’ ಆಗುವ ತನಕ ಅವನನ್ನು ಕೈಹಿಡಿದು ಬೆಳೆಸಿದ್ದು ಅವನ ಅಭ್ಯಾಸ ಬಲ ಅಂದರೆ ಹ್ಯಾಬಿಟ್. ಒಳ್ಳೆಯ ಹ್ಯಾಬಿಟ್ ಬೆಳೆಸಿಕೊಂಡರೆ, ಅದನ್ನೇ ರೂಢಿ ಮಾಡಿಕೊಂಡರೆ, ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಬಹುದು.

ಆತ ತನ್ನ ಅನುಭವಗಳನ್ನೇ ಆಗಾಗ ಟಿಪ್ಪಣಿ ಮಾಡಿಕೊಳ್ಳಲಾರಂಭಿಸಿದ. ಅದನ್ನೇ ಬ್ಲಾಗ್ ರೂಪ ದಲ್ಲಿ ಪೋಸ್ಟ್ ಮಾಡಲಾರಂಭಿಸಿದ. ಪ್ರತಿ ಸೋಮವಾರ ಮತ್ತು ಗುರುವಾರ ಲೇಖನ ಬರೆದು ತನ್ನ ವೆಬ್ ಸೈಟಿನಲ್ಲಿ ಪೋಸ್ಟ್ ಮಾಡುತ್ತಿದ್ದ. ಒಂದು ವಾರದಲ್ಲಿ ಅವನಿಗೆ ಸಾವಿರಾರು ಇಮೇಲ್ ಚಂದಾ ದಾರರಾದರು. ಆರು ತಿಂಗಳಲ್ಲಿ ಚಂದಾದಾರರ ಸಂಖ್ಯೆ ಒಂದು ಲಕ್ಷವನ್ನು ದಾಟಿತು.

ಮುಂದಿನ ಮೂರು ತಿಂಗಳಲ್ಲಿ ಇದು ಎರಡು ಲಕ್ಷ ದಾಟಿತು. ಈ ಮಧ್ಯೆ ಟೈಮ್, ಫೋರ್ಬ್ಸ್‌ ಮುಂತಾದ ಪ್ರತಿಷ್ಠಿತ ಪತ್ರಿಕೆಗಳು ಲೇಖನಗಳನ್ನು ಬರೆದುಕೊಡುವಂತೆ ಹೇಳಿದವು. ಆತ ಆ ಪತ್ರಿಕೆಗಳಿಗೆ ಬರೆಯಲಾರಂಭಿಸಿದ. ಇವನ್ನೆಲ್ಲಾ ಗಮನಿಸಿದ ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಾಶನ ಸಂಸ್ಥೆ ಅವನಿಗೆ ಒಂದು ಪುಸ್ತಕ ಬರೆದುಕೊಡುವಂತೆ ಹೇಳಿತು. ಆತ ಒಂದು ಚೆಂದದ ಪುಸ್ತಕ ಬರೆದುಕೊಟ್ಟ. ಅದರ ಹೆಸರು Atomic Habits : Tiny Changes, Remarkable Results. ಅಂದ ಹಾಗೆ ಇಲ್ಲಿ ತನಕ ಆತ, ಅವನು ಎಂದೆ ಹೇಳಿದೆನಲ್ಲ, ಅವನ ಹೆಸರು ಜೇಮ್ಸ್ ಕ್ಲಿಯರ್!

‘ನ್ಯೂಯಾರ್ಕ್ ಟೈಮ್ಸ್’ ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ‘ಟಾಪ್ ಟೆನ್’ ಪುಸ್ತಕ ಪಟ್ಟಿ ಯಲ್ಲಿದ್ದ ಈ ಪುಸ್ತಕದ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ಜಗತ್ತಿನ ಐವತ್ತಕ್ಕೂ ಹೆಚ್ಚು ಭಾಷೆಗಳಿಗೆ ಇದು ಅನುವಾದವಾಗಿದೆ. ಹತ್ತು ಲಕ್ಷ ಜನ ಇಮೇಲ್ ಚಂದಾದಾರರನ್ನು ಹೊಂದಿರುವ ಜೇಮ್ಸ ಕ್ಲಿಯರ್ ನ ವೆಬ್‌ಸೈಟಿಗೆ ವಾರ್ಷಿಕ ಒಂದು ಕೋಟಿಗಿಂತ ಹೆಚ್ಚು ಜನ ಭೇಟಿ ನೀಡುತ್ತಾರೆ.

ಆತ ಜಗತ್ತಿನ ಇಪ್ಪತ್ತೈದು ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಿಗೆ ‘ಅಭ್ಯಾಸಬಲ ಮನಶ್ಶಾಸ್ತ್ರ’ದ ಬಗ್ಗೆ ಉಪನ್ಯಾಸ ನೀಡುತ್ತಾನೆ. ನಮ್ಮ ಬದುಕಿನಲ್ಲಿ ಸಣ್ಣ ಪುಟ್ಟ ಮಾರ್ಪಾಟು ಗಳನ್ನು ಮಾಡಿಕೊಳ್ಳುವ ಮೂಲಕ ಅಸಾಧಾರಣ ಬದಲಾವಣೆಗಳನ್ನು ತರಬಹುದು ಎಂಬುದನ್ನು ಹತ್ತಾರು ನಿದರ್ಶನಗಳ ಮೂಲಕ ಹೇಳುವ ಜೇಮ್ಸ್ ಕ್ಲಿಯರನ ಪುಸ್ತಕ ಓದಿ ಕೋಟ್ಯಂತರ ಜನ ತಮ್ಮ ಬದುಕನ್ನು ಚೆಂದವಾಗಿಸಿಕೊಂಡಿದ್ದಾರೆ.

ಜೀವನದಲ್ಲಿ ಬದಲಾವಣೆಯನ್ನು ತರಲು ಮಹಾನ್ ಕನಸು ಕಾಣಬೇಕಿಲ್ಲ, ಅದರ ಬದಲು ಚಿಕ್ಕ ಚಿಕ್ಕ ಹತ್ತಾರು ನಿರ್ಧಾರಗಳನ್ನು ತೆಗೆದುಕೊಳ್ಳಿ, ಪ್ರತಿದಿನ ಐದು ನಿಮಿಷ ಮುಂಚೆ ಏಳಿ, ಎರಡು ಪುಟ ಜಾಸ್ತಿ ಓದಿ, ಹತ್ತು ನಿಮಿಷ ಹೆಚ್ಚು ವ್ಯಾಯಾಮ ಮಾಡಿ , ಪ್ರತಿದಿನ ಒಂದು ಸಿಗರೇಟು ಕಡಿಮೆ ಸೇದುತ್ತಾ ಹೋಗಿ, ದಿನವೂ ನೂರು ಮೀಟರ್ ಜಾಸ್ತಿ ನಡೆಯಿರಿ... ಇದನ್ನೇ ‘ಅಟಾಮಿಕ್ ಹ್ಯಾಬಿಟ್ಸ್’ ಅಂತಾರೆ. ಒಂದು ವರ್ಷದ ನಂತರ ನೋಡುತ್ತಿರಿ... ನಿಮ್ಮೊಳಗಿದ್ದ ಬೀಜ ಹೆಮ್ಮರವಾಗಿ ಬೆಳೆದಿರು ತ್ತದೆ.