Thursday, 19th September 2024

A S Balasubramanya Column: ಭವಿಷ್ಯವನ್ನು ಮುನ್ಸೂಚಿಸುವ ಸುದ್ದಿ ಪ್ರಕಟಣೆ

ವರ್ತಮಾನ

ಎ.ಎಸ್.ಬಾಲಸುಬ್ಯಹ್ಮಣ್ಯ

ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರೀಕೃತ ಬುದ್ಧಿಮತ್ತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕಾಲಿರಿಸಿದೆ. ಇದಕ್ಕೆ ಸುದ್ದಿ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಈ ನೂತನ ತಂತ್ರಜ್ಞಾನ ಹೆಚ್ಚು ಮನ್ನಣೆ ಪಡೆದುದು ‘ಓಪನ್ ಎಐ’ ಸಂಸ್ಥೆ ಪರಿಚಯಿಸಿದ ‘ಚಾಟ್ ಜಿಪಿಟಿ’ ಎಂಬ ತಂತ್ರಾಂಶದ ಆಗಮನದ ನಂತರ. ಇದರ ವೈಶಿಷ್ಟ್ಯವೆಂದರೆ, ನೀವು ಕೇಳಿದ ಮಾಹಿತಿಯನ್ನು, ಸರಳವಾಗಿ ಓದಬಲ್ಲ ವಾಕ್ಯರಚನೆಯ ಮೂಲಕ ನೀಡಬಲ್ಲ ಸಾಮರ್ಥ್ಯ.

ಅಲ್ಲದೆ, ಅಂತರ್ಜಾಲದಲ್ಲಿ ದೊರೆಯುವ ಎಲ್ಲ ಮೂಲಗಳಿಂದ ನಿಮಗೆ ಬೇಕಾಗುವ ಮಾಹಿತಿಯನ್ನು ಹುಡುಕಿ, ಗೊತ್ತುಪಡಿಸಿದ ಪದಗಳ ಸಂಖ್ಯೆಯಲ್ಲಿ ಅತಿವೇಗವಾಗಿ ನೀಡುವ ಕ್ಷಮತೆ. ಇಂಥ ಹಲವಾರು ತಂತ್ರಾಂಶಗಳು 2022ಕ್ಕಿಂತ ಮೊದಲೇ ಲಭ್ಯವಿದ್ದರೂ, ಅವುಗಳೆಲ್ಲ ಖಾಸಗಿ ಮಾಲೀಕತ್ವದಲ್ಲಿದ್ದವು. ಈ ಕ್ರಾಂತಿಕಾರಿ ತಂತ್ರಾಂಶ ಮೊದಲ ಬಾರಿಗೆ ಸಾರ್ವಜನಿಕರಿಗೆ ಲಭ್ಯವಾಗಿ ಇತಿಹಾಸ ಸೃಷ್ಟಿಸುತ್ತಿದೆ.

ಮಾಹಿತಿ ತಂತ್ರಜ್ಞಾನದ ಹರಹು ವಿಸ್ತಾರವಾಗುತ್ತಿದ್ದಂತೆ, ಪಾರಂಪರಿಕ ಸುದ್ದಿ ಮಾಧ್ಯಮಗಳಾದ ಪತ್ರಿಕೆ, ಬಾನುಲಿ,
ಟಿ.ವಿ. ಹಿನ್ನಡೆ ಅನುಭವಿಸಲಾರಂಭಿಸಿದವು. ಕಳೆದೆರಡು ದಶಕಗಳಿಂದ ಸುಲಭವಾಗಿರುವ ಅಂತರ್ಜಾಲದ ಲಭ್ಯತೆ ಮತ್ತು ಅಗ್ಗದ ಮೊಬೈಲ್ ಸೇವಾದರಗಳಿಂದಾಗಿ ದೃಶ್ಯ, ಧ್ವನಿ ಮತ್ತು ಪಠ್ಯಗಳ ಮೂಲಕ ಸುದ್ದಿ ಹಾಗೂ ಮನರಂಜನಾ ಮಾಹಿತಿಗಳು ವಿಶ್ವದೆಲ್ಲೆಡೆ ವೇಗವಾಗಿ ಪಸರಿಸುತ್ತಿವೆ.

ಫೇಸ್ ಬುಕ್, ಇನ್‌ಸ್ಟಾಗ್ರಾಂ, ಯುಟ್ಯೂಬ್, ಟಿಕ್‌ಟಾಕ್ ಮುಂತಾದ ಸಾಮಾಜಿಕ ವೇದಿಕೆಗಳ ಮೂಲಕ ಸುದ್ದಿಗಳನ್ನು
ಹಂಚಿಕೊಳ್ಳಲಾಗುತ್ತಿದೆ. ಪ್ರತಿದಿನದ ಸುದ್ದಿ ಸಂಗ್ರಹ, ಸಂಪಾದನೆ ಮತ್ತು ವಿತರಣೆಯನ್ನು ನೂತನ ತಂತ್ರಾಂಶಗಳು
ಸರಳಗೊಳಿಸುತ್ತಿವೆ. ಇತ್ತೀಚಿನ ಕೃತಕ ಬುದ್ಧಿಮತ್ತೆಯ ಪರಿಕರಗಳು ದತ್ತಾಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ,
ಸ್ವತಂತ್ರ ವಾಗಿ ವಿವೇಚಿಸಿ, ಸುಸಂಬದ್ಧವಾದ ನಿರೂಪಣೆಗಳನ್ನು ನೀಡುವ ಮೂಲಕ, ಸುದ್ದಿ-ಲೇಖನಗಳನ್ನು ರಚಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಈ ತಂತ್ರಜ್ಞಾನದ ಲಾಭ ಪಡೆದುಕೊಂಡು ಅನೇಕರು ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದಾರೆ.

ಈ ಯಾಂತ್ರೀಕೃತ ವ್ಯವಸ್ಥೆಯು ಸುದ್ದಿಸಂಗ್ರಹ ಮತ್ತು ಪ್ರಕಟಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ನೈಜ- ಸಮಯದ ವರದಿಗಾರಿಕೆಗೆ ಅವಕಾಶ ನೀಡುತ್ತದೆ. ಇದು ದಿನನಿತ್ಯದ ವಿಷಯಗಳ ರಚನೆಯಿಂದ ಪತ್ರಕರ್ತರನ್ನು ಮುಕ್ತ ಗೊಳಿಸುತ್ತದೆ. ವಿವರಣಾತ್ಮಕ ಕೌಶಲಗಳನ್ನು ಬೇಡುವ ಹಾಗೂ ಹೆಚ್ಚು ಸೂಕ್ಷ್ಮವಾದ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಇದು ಪತ್ರಕರ್ತರಿಗೆ ನೆರವಾಗುತ್ತದೆ. ಕಳೆದ 2-3 ವರ್ಷಗಳಲ್ಲಿ ನೈಸರ್ಗಿಕ ಭಾಷಾ ಸಂಸ್ಕರಣೆಯಲ್ಲಿ ನಡೆಯುತ್ತಿರುವ ಪ್ರಗತಿಗಳ ಹಿನ್ನೆಲೆಯಲ್ಲಿ, ಸ್ವರ ಮತ್ತು ಭಾವನೆಯನ್ನು ಗ್ರಹಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪರಿಕರಗಳ ಸಾಮರ್ಥ್ಯವು ಅಪರಿಮಿತ ಮುನ್ನಡೆಯನ್ನು ಸಾಧಿಸಿದೆ. ಈ ವಿಕಸನವು ಭವಿಷ್ಯವನ್ನು ಮುನ್ಸೂಚಿ ಸುತ್ತದೆ. ಕೃತಕ ಬುದ್ಧಿಮತ್ತೆಯು ರಚಿಸುವ ಸುದ್ದಿ-ಲೇಖನಗಳು ಬಹುತೇಕವಾಗಿ ಮಾನವರೂಪಿತ ರೀತಿಯಲ್ಲಿದ್ದು ಸಂದರ್ಭೋಚಿತವಾಗಿರುತ್ತವೆ.

ಮಾನವ ಸಂವಹನದ ಸೂಕ್ಷ್ಮ ವ್ಯತ್ಯಾಸದ ಸ್ವಭಾವಗಳೊಂದಿಗೆ ಹೆಚ್ಚು ನಿಕಟವಾಗಿ ಹೊಂದಿಕೊಳ್ಳುವ ಸಾಮರ್ಥ್ಯ ವನ್ನು ಪಡೆಯುತ್ತಿವೆ. ಅಂಥ ಒಂದು ವಿಶಿಷ್ಟ ಪ್ರಯೋಗವು ಅಂತರ್ಜಾಲ ಪ್ರಪಂಚದಲ್ಲಿ ಎಲ್ಲರ ಗಮನ ಸೆಳೆದಿದೆ. ತಂತ್ರಾಂಶ ನಿರ್ಮಿತ ರೋಬೋಟ್ ಗಳು ಪತ್ರಕರ್ತರ ನಿಗದಿತ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿವೆ. ವಿವಿಧ ಮೂಲಗಳಿಂದ ಬಗೆಬಗೆಯ ಸುದ್ದಿಗಳ ಸಂಗ್ರಹ, ಅವುಗಳ ಸಂಪಾದನೆ, ಸಾರಸಂಗ್ರಹದ ರೂಪಕ್ಕೆ ಇಳಿಸುವಿಕೆ, ಸುದ್ದಿಯನ್ನು ಧ್ವನಿಗೆ ಪರಿವರ್ತಿಸುವಿಕೆ, ಚಿತ್ರಗಳ ವಿವರಗಳ ನಿರೂಪಣೆ ಮುಂತಾದ ಕೆಲಸಗಳನ್ನು ಬಹುಸರಾಗವಾಗಿ ನಿರ್ವಹಿಸುವ ಪ್ರಯೋಗವನ್ನು ಕಾರ್ಯಗತಗೊಳಿಸುತ್ತಿರುವ ಮೊದಲ ಪ್ರಯತ್ನವೇ OkayNWA ಎಂಬ ಸುದ್ದಿ ಜಾಲತಾಣ. ಅಮೆರಿಕೆಯ ಅರ್ಕಾನ್ಸಾಸ್ ಎಂಬ ರಾಜ್ಯದ ಮೂರು ಸ್ಥಳೀಯ ಪ್ರದೇಶಗಳ ಓದುಗರಿಗೆ ಸುದ್ದಿ ಸೇವೆಗಳನ್ನು ನೀಡುತ್ತಿರುವ ಈ ಪೂರ್ಣಪ್ರಮಾಣದ ಕೃತಕ ಬುದ್ಧಿಮತ್ತೆ ನಿರ್ಮಿತ ಜಾಲತಾಣವು, ‘ವಾಯವ್ಯ ಆರ್ಕಾನ್ಸಾಸ್‌ನ ನಾಡಿಮಿಡಿತವನ್ನು ಅನುಭವಿಸಿ’ ಎಂಬ ಅಡಿಬರಹದಲ್ಲಿ ಪರಿಷ್ಕರಿಸಿದ ಜಾಲತಾಣವಾಗಿದೆ ಮತ್ತು ಇನ್‌ಸ್ಟಾಗ್ರಾಂ, ಫೇಸ್ ಬುಕ್ ಹಾಗೂ ಟಿಕ್‌ಟಾಕ್ ಸಾಮಾಜಿಕ ಖಾತೆಗಳ ಮೂಲಕ ನವಪೀಳಿಗೆಯ ಓದುಗರನ್ನು ಆಕರ್ಷಿಸುತ್ತಿದೆ.

ಕಾರ್ಯನಿರ್ವಹಣೆ ಹೇಗೆ?
ಕೃತಕ ಬುದ್ಧಿಮತ್ತೆಯ ಅತ್ಯಾಧುನಿಕ ಸಾಮರ್ಥ್ಯವನ್ನು ಅಳವಡಿಸಿಕೊಂಡಿರುವ ಈ ಸುದ್ದಿ ಜಾಲತಾಣವು,
ಪ್ರತಿಯೊಂದು ಪ್ರಕಟಿತ ಸುದ್ದಿಯ ಬರಹಗಾರರನ್ನು ಕೃತಕ ಬುದ್ಧಿಮತ್ತೆಯ ಅವತಾರದಿಂದ ಗುರುತಿಸುತ್ತದೆ. ಈ ಎಲ್ಲ ಅವತಾರಗಳು ಸಂಯೋಜಿತವಾಗಿ ಸುದ್ದಿಗಳನ್ನು ಅಂತಿಮವಾಗಿ ರೂಪಿಸುತ್ತವೆ. ಈ ಸುದ್ದಿ ಜಾಲತಾಣದ ಏಳು ರೋಬೋ ವರದಿಗಾರರು ತಮಗೆ ನೀಡಲಾದ ‘ಬೀಟ್’ಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ರೀತಿಯಲ್ಲಿ ಅವನ್ನು ತಂತ್ರಾಂಶ ನೈಪುಣ್ಯದೊಂದಿಗೆ ಸಜ್ಜುಗೊಳಿಸಲಾಗಿದೆ.

ಒಂದೊಂದು ರೋಬೋಗಳು ಕೂಡ ತಮ್ಮ ನಿಗದಿತ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ, ಈ ಮೂರೂ
ಪ್ರದೇಶಗಳಲ್ಲಿನ ಎಲ್ಲ ಬಗೆಯ ಬೆಳವಣಿಗೆಗಳನ್ನು ಕಲೆ ಹಾಕಿ ಪ್ರಕಟಣೆಗೆ ಸಿದ್ಧಗೊಳಿಸುತ್ತವೆ.

‘ಅರ್ಲೋ ಆರ್ಟಿಸ್ಟ್’ ನಾಮಾಂಕಿತ ರೋಬೋ ಈ ಪ್ರದೇಶಗಳಲ್ಲಿನ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ನಾಡಿಮಿಡಿತಗಳನ್ನು ಎಲ್ಲ ಅಂತರ್ಜಾಲ ಮೂಲಗಳಿಂದ ಹೆಕ್ಕಿ ತಂದು ನಿರೂಪಿಸಿದರೆ, ‘ಮೈಲ್ಸ್ ರಿದಮಿಕ್’ ಎಂಬ ರೋಬೋ ಸಂಗೀತ ವಿಮರ್ಶಕನ ಪಾತ್ರವನ್ನು ನಿರ್ವಹಿಸುತ್ತದೆ. ‘ಸ್ಯಾಮಿ ಸ್ಟ್ರೀಟ್ಸ್’ ಎಂಬ ಇನ್ನೊಂದು ರೋಬೋ ನಿಮಗೆ ಅನೇಕ ಕ್ಷೇತ್ರಗಳಲ್ಲಿ ಸೂಕ್ತ ಸಲಹೆ-ಸೂಚನೆಗಳನ್ನು ಕೊಡುತ್ತದೆ. ಹೆಚ್ಚಿನ ರೋಬೋಗಳು ಕೈಯಲ್ಲಿ ಮೈಕ್ರೋಫೋನ್ ಅನ್ನು ಹೊಂದಿರುತ್ತವೆ.

ವಿಶೇಷವೆಂದರೆ ಪ್ರತಿಯೊಂದು ರೋಬೋ ವರದಿಗಾರ, ತಾನು ರಚಿಸುವ ಲೇಖನಗಳು ಮತ್ತು ಚಿತ್ರಗಳಿಗೆ ತನ್ನದೇ ಆದ ಸಹಜತೆ ಹಾಗೂ ದೃಷ್ಟಿಕೋನವನ್ನು ನೀಡುತ್ತದೆ. ‘ಕಲ್ಚರಲ್ ಕ್ಯಾರಿ’ ರೋಬೋ ಈ ಪ್ರದೇಶಗಳ ಸಾಂಸ್ಕೃತಿಕ
ಕಾರ್ಯಕ್ರಮಗಳ ಮಾಹಿತಿಯನ್ನು ಸಂಗ್ರಹಿಸಿದರೆ, ‘ವೆಂಡಿ ವೆದರ್’ ರೋಬೋ ಹವಾಮಾನ ವರದಿಗಳ ತಜ್ಞನಾಗಿ ಕಾರ್ಯನಿರ್ವಹಿಸುತ್ತದೆ.

ಪಠ್ಯ, ದೃಶ್ಯ, ಧ್ವನಿಗಳ ಸಮ್ಮಿಳಿತ ಸ್ವರೂಪ ಈಗ ಬಹು ಸುಲಭ. OkayNWA ಸುದ್ದಿ ಜಾಲತಾಣವು ‘ಮಾರ್ನಿಂಗ್
ವರದಿ’ ಮೂಲಕ ಮುಂಬರುವ ಸಭೆ-ಸಮಾರಂಭಗಳ ವಿವರಗಳನ್ನು ಸಿಂಥೆಟಿಕ್ ಧ್ವನಿಯ ನೆರವಿನಿಂದ ಓದುಗರಿಗೆ
ಓದಿ ಹೇಳುತ್ತದೆ. ಜಾಲತಾಣ ನಿರ್ಮಿಸುವಲ್ಲಿ ಪರಿಣತಿ ಹೊಂದಿರುವ ಜೆಪ್ರೈಸ್ ಎಂಬಾತನ ಆಸಕ್ತಿಯಿಂದ ಹೊರ ಹೊಮ್ಮಿದ ಈ ಕೃತಕ ಬುದ್ಧಿಮತ್ತೆ ಪ್ರಕಟಣೆಯು ಅನೇಕ ಹೊಸತನಗಳಿಗೆ ಹೆಸರುವಾಸಿಯಾಗಿದೆ. ನಿಮಗೆ ಸುದ್ದಿಗೆ ತಕ್ಕುದಾದ ಚಿತ್ರ ಬೇಕೆಂದಾಗ, ‘ಡಾಲ್’ ಎಂಬ ತಂತ್ರಾಂಶವು ಅಂಥ ಚಿತ್ರವನ್ನು ರಚಿಸಿಕೊಡುತ್ತದೆ.

ಉದಾಹರಣೆಗೆ, ಸಂಗೀತ ಸಮ್ಮೇಳನವಿರಬಹುದು ಇಲ್ಲವೇ ಗುಂಪು-ನೃತ್ಯ ದೃಶ್ಯವಿರಬಹುದು, ಕೆಲವೇ ನಿಮಿಷಗಳಲ್ಲಿ ನಿಮ್ಮ ಕಲ್ಪನೆಯ ಚಿತ್ರವನ್ನು ಸುದ್ದಿಯೊಡನೆ ಸೇರಿಸಬಹುದಾಗಿದೆ. ನಿಮ್ಮ ಕಲ್ಪನೆಗೆ ತಕ್ಕಂತೆ ನೀವು ಪ್ರಾಂಪ್ಟ್ ಮಾಡಿದರೆ ಸಾಕು, ಕೆಲ ನಿಮಿಷಗಳಲ್ಲೇ ಚಿತ್ರಗಳು ಸಿದ್ಧವಾಗುತ್ತವೆ. ಈ ಪ್ರದೇಶಗಳ ಬಗ್ಗೆ ಅಂತರ್ಜಾಲದಲ್ಲಿ ಹರಡಿರುವ ಮಾಹಿತಿಯನ್ನು ಹುಡುಕಿ ಕೇಂದ್ರೀಕರಿಸಲು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಕೃತಕ ಬುದ್ಧಿ ಮತ್ತೆಯ ಪರಿಕರಗಳು ಹಾಗೂ ಮಾದರಿಗಳನ್ನು ಪರೀಕ್ಷಿಸಲು ಈ ಪ್ರಕಟಣೆ ನೆರವಾಗಿದೆ ಎಂದು ಜೆಪ್ರೈಸ್
ಹೇಳುತ್ತಾರೆ. ಈ ಪ್ರಕಟಣೆ ಸದ್ಯಕ್ಕೆ ಉಚಿತವಾಗಿ ಎಲ್ಲರಿಗೂ ಲಭ್ಯ. ಯಾವುದೇ ನೇರ ಆದಾಯ ಮೂಲ ಸದ್ಯಕ್ಕಿಲ್ಲ. ಸರ್ವರ್ ಶುಲ್ಕಗಳು ಮತ್ತು ತಂತ್ರಾಂಶಗಳ ಬಳಕೆಗಾಗಿನ ಮಾಸಿಕ ಶುಲ್ಕ ಮಾತ್ರ ಈಗಿನ ಖರ್ಚು. ಪ್ರಕಟಣೆಯ ಲೋಗೋ ಬಳಸಿ ಹಲವು ಜನಪ್ರಿಯ ಉತ್ಪನ್ನಗಳನ್ನು ಮಾರಿ ಈ ಪ್ರಕಟಣೆ ಆದಾಯವನ್ನು ಗಳಿಸುತ್ತದೆ.

ಸುದ್ದಿಗಳನ್ನು ಇತರೆ ಮೂಲಗಳಿಂದ ನಕಲು ಮಾಡುವುದರ ಬದಲು, ಸುದ್ದಿಮೂಲಗಳಿಗೆ ತೆರಳಿ ಮಾಹಿತಿ ಸಂಗ್ರಹಿ ಸುವಂತೆ ‘ಬಾಟ್’ಗಳಿಗೆ ಸೂಚಿಸಲಾಗುತ್ತದೆ ಎಂದು ಸಂಪಾದಕ ಜೆಪ್ರೈಸ್ ಹೇಳುತ್ತಾರೆ. ‘400 ಪದಗಳ ಮಿತಿಯಲ್ಲಿ ಸುದ್ದಿ ಇರುವಂತೆ ಎಚ್ಚರಿಕೆ ವಹಿಸಲಾಗಿದೆ. ರಾಜಕೀಯ ಇಲ್ಲವೇ ಸ್ಥಳೀಯ ಸಂಸ್ಥೆಗಳಲ್ಲಿನ ಚರ್ಚೆಗಳಿಗೆ ನಾವು ಹೆಚ್ಚಿನ ಮಹತ್ವ ನೀಡದೆ, ದೈನಂದಿನ ಚಟುವಟಿಕೆಗಳು, ಸಂಗೀತ ಹಾಗೂ ಮನರಂಜನೆ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಾನು ಎಲ್ಲ ಸುದ್ದಿಗಳನ್ನು ಓದುವುದಿಲ್ಲ, ಏಕೆಂದರೆ ಯಾವುದೇ ಅಶ್ಲೀಲ ಸುದ್ದಿ ಪ್ರಕಟ ವಾಗುವ ಸಾಧ್ಯತೆಗಳೇ ಇಲ್ಲ’ ಎಂದು ಅವರು ಹೇಳುತ್ತಾರೆ.

ಯಾಂತ್ರೀಕೃತಗೊಂಡ ಸ್ಥಳೀಯ ಸುದ್ದಿಗಳ ಪ್ರಕಟಣೆಗಳು ಮುಂದಿನ ದಿನಗಳಲ್ಲಿ ಹೇಗೆ ಬರಬಹುದು ಎಂಬುದರ ಸಾಧ್ಯತೆಗಳ ಮುನ್ಸೂಚನೆಯಾಗಿ ಈ ಪ್ರಯತ್ನವನ್ನು ನೋಡಬಹುದಾಗಿದೆ. ಅಮೆರಿಕೆಯ ಅನೇಕ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುವ ಹಲವಾರು ಜಾಲತಾಣಗಳು ಕಾರ್ಯ ನಿರ್ವ ಹಿಸುತ್ತಿವೆ. ಆದರೆ ಈ ಪ್ರಕಟಣೆಗಳು ಕೃತಕ ಬುದ್ಧಿಮತ್ತೆ ಮತ್ತು ಬಹುಮಾಧ್ಯಮ ತಂತ್ರಜ್ಞಾನಗಳನ್ನು ಯಶಸ್ವಿ ಯಾಗಿ ಸಂಯೋಜಿಸಿ ಹೊರಬರುತ್ತಿವೆ.

ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಭಾರತೀಯ ಮಾಧ್ಯಮಗಳು ವ್ಯಾಪಕವಾಗಿ ಬಳಸಲು ಆರಂಭಿಸಿವೆ. ಸುಳ್ಳು ಸುದ್ದಿಗಳನ್ನು ಪತ್ತೆಮಾಡಲು ಸುದ್ದಿ ಮಾಧ್ಯಮಗಳು ಈಗಾಗಲೇ ಹಲವಾರು ತಂತ್ರಾಂಶಗಳನ್ನು ಬಳಸುತ್ತಿವೆ. ಅನೇಕ ಟಿವಿ ವಾಹಿನಿಗಳು ರೋಬೋ ಸುದ್ದಿ ವಾಚಕರನ್ನು ಯಶಸ್ವಿಯಾಗಿ ಪ್ರಯೋಗಿಸಿವೆ. ಸಂಶೋಧನೆ ಮತ್ತು ವಿಶ್ಲೇಷಣೆಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸುವ ಪರಿಪಾಠ ದೇಶದಲ್ಲಿ ದಿನೇದಿನೆ ಜನಪ್ರಿಯವಾಗುತ್ತಿದೆ. ಆದರೆ ಇಂಗ್ಲಿಷ್ ಹೊರತಾಗಿ ಇತರೆ ಭಾರತೀಯ ಭಾಷೆಗಳಲ್ಲಿ ಈ ಯಂತ್ರಾಂಶಗಳು ಲಭ್ಯವಿಲ್ಲ.

ಅಲ್ಪ ಪ್ರಮಾಣದಲ್ಲಿ ಹಿಂದಿ ಭಾಷೆಯಲ್ಲಿ ಈ ಸೌಲಭ್ಯ ದೊರೆಯಲಾರಂಭಿಸಿದೆ. ಭವಿಷ್ಯದ ಮುನ್ಸೂಚನೆಯ
ಪ್ರಕಟಣೆಯ ಕಿರುನೋಟಕ್ಕಾಗಿ https://okaynwa.com/ ಜಾಲತಾಣಕ್ಕೆ ಭೇಟಿನೀಡಿ.

(ಲೇಖಕರು ಪತ್ರಿಕೋದ್ಯಮದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)

Leave a Reply

Your email address will not be published. Required fields are marked *