ಅಲೆಮಾರಿಯ ಡೈರಿ
mehandale100@gmail.com
ಮಂಜು ಬೇಕಾ, ಮಳೆ ಬೇಕಾ.. ಹಿಮದ ಹೊಗೆ ಬೇಕಾ, ಹನಿಯುವ ನೀರಿನ ಸಿಂಚನ ಬೇಕಾ? ಏರಲು ಶಿಲಾರೋಹಣ ಬೇಕಾ? ಇಳಿಯಲು ತೀವ್ರ ಆಯಕಟ್ಟಿನ ಕೊರಕಲು ಬೇಕೆ? ಎಲ್ಲ ಆದ ಮೇಲೂ ಅನಾಮತ್ತು ಐವತ್ತೂ ಚಿಲ್ಲರೆ ಕಿ.ಮೀ. ನಡೆಯುವ ಕೊವತ್ತು ನಿಮಗಿದೆ ಏರಿನ ಹಾದಿಯಲ್ಲಿ ಎಂದು ಸ್ವತಃ ನೋಡಿಕೊಳ್ಳಬೇಕೇ? ಎರಡು ಹಂತದ ಕಾಡಿನ ವಾಸದ ಚಾರಣ ಮತ್ತು ಸಾಹಸ ಹಾಗೂ ಕಠಿಣ ದುರ್ಗಮ ರಸ್ತೆಯ ಏರುವಿಕೆಗೆ ಪಕ್ಕಾಗಬೇಕೇ..? ಹೂಂ ಎಂದಾ ದರೆ ಮೊದಲು ದೈಹಿಕ ತಯಾರಿ ನಡೆಸಿ ಕೊಳ್ಳಿ.
ಅಮೇಲೆ ಗೂಗಲ್ ಮೇಲೆ ಬೆರಳಾಡಿಸಿ. ಕಾರಣ ಇದು ಸುಲಭದಲ್ಲಿ ಪ್ರವಾಸಿಗರಿಗೆ, ಚಟಕ್ಕೆ ತಿರುಗುವವರಿಗೆ ಕೈಗೆ ಹತ್ತುವ ಇಸಮೇ ಅಲ್ಲ. ಇದು ಅಗಸ್ತ್ಯಾರಕೂಡಂ ಅಥವಾ ಅಗಸ್ತ್ಯ ತೀರ್ಥ ಎಂದು ಓದಿಕೊಳ್ಳಬಹುದು. ಚೆಂದದ ಮತ್ತು ದೇವಭೂಮಿ ಎಂದು ಕರೆದು ಕೊಂಡು ಸಂಪೂರ್ಣ ರಾಜಕೀಯವಾಗಿ ಹಡಾಲೆದ್ದು ಹೋಗುತ್ತಿರುವ ಕೇರಳದ ಸರಹದ್ದಿ ನಲ್ಲಿ ತಮಿಳನಾಡು, ತಿರುನ ಲ್ವೇಲಿಗಳೊಂದಿಗೆ ಗಡಿ ಹಂಚಿಕೊಂಡು ಅಗಲ ವಾಗಿದ್ದು ಅಗಾಧ ಕಾಡ ಮಧ್ಯೆ ಸಾಹಸಿಗಳಿಗೆ ಹೇಳಿ ಮಾಡಿಸಿದ ಚಾರಣ ತಾಣ ಇದು.
ಸುಮಾರು ಆರು ಸಾವಿರ ಅಡಿ ಎತ್ತರ ನಮ್ಮ ಖಾಸಗಿ ಮೀಟರ್ ಅನ್ನು ಅಳೆದುಬಿಡುತ್ತದೆ ಅಗಸ್ತ್ಯ ತೀರ್ಥ. ಇಲ್ಲಿನ ಮೂರು ಪ್ರಮುಖ ಅಭಯಾರಣ್ಯದಲ್ಲಿ ಒಂದಾದ ನೆಯ್ಯರ್ ವನ್ಯಜೀವಿ ಅಭಯಾರಣ್ಯದ ಅಡಿಯಲ್ಲಿ ನಿಯಂತ್ರಣದಲ್ಲಿದೆ. ಕನಿಷ್ಠ ಎರಡ ರಿಂದ ಮೂರು ದಿನಗಳನ್ನು ಬೇಡುವ ಅಗಸ್ತ್ಯಾರ ಕೂಡಂ ಸುಲಭಕ್ಕೆ ಜಗ್ಗದ ಪರ್ವತ ಪ್ರದೇಶ. ಬೋನಡನಿಂದ ಸುಮಾರು ಮೂವತ್ತು ಕಿ.ಮೀ. ನಮ್ಮ ಶ್ರಮವನ್ನೂ ಸಹನೆಯನ್ನೂ ಪರೀಕ್ಷಿಸುವ ಏರು ದಾರಿ. ಎರಡು ದಿನಗಳ ನಿರಂತರ ಏರುಮುಖದ ಕಾಡಿನ ಕೊರಕಲು ದಾರಿ ಅಕ್ಷರಶಃ ಪುರಾತನ ಕಾಲದ ಕಾಲ್ದಾರಿಗಳಾ ಎನ್ನುವಷ್ಟು ನೀರಿನ ಹರಿವಿನ ಆಸರೆಯನ್ನೆ ಬಳಸಿ ಮಾಡಿದ ಅನುಕೂಲ ಜಾಗ ಮಾತ್ರ.
ಪ್ರತಿ ಹೆಜ್ಜೆಗೆ ಕಲ್ಲು, ಮರದ ಗೆಲ್ಲು, ಮಣ್ಣಿನ ಕೊರಕಲು ಮತ್ತು ಅಡ್ಡಡ್ಡ ಬರುವ ಲೆಕ್ಕ ತಪ್ಪಿ ಬೆಳೆದ ಬೇರು ಜಾತಿಯ ಕಾಂಡಗಳ
ಸಮೂಹ ಹೀಗೆ ಎಲ್ಲ ಬಗೆಯ ಕಾಡ ದಾರಿಯ ಹರವು ಅಗಸ್ತ್ಯಾರ ಕೂಡಂಗೆ ನಿಮ್ಮನ್ನು ಸ್ವಾಗತಿಸುತ್ತದೆ. ಬೋನ್ಕಾಡ್ ಒಂದು ರೀತಿಯಲ್ಲಿ ಬೇಸ್ ಕ್ಯಾಂಪ್ ಇದ್ದಂತೆ. ಪ್ರತಿ ವರ್ಷ ಎರಡು ತಿಂಗಳು ಮಾತ್ರ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಪ್ರವೇಶ ಕಲ್ಪಿಸುವ ಮೂಲಕ ಅಗಸ್ತ್ಯಾರ ಕೂಡಂ ಅಷ್ಟರಮಟ್ಟಿಗೆ ನಿಷೇಧಿತ ವಲಯ ದಲ್ಲಿದ್ದೂ ಪ್ರವಾಸಕ್ಕೂ ಚಾರಣಕ್ಕೂ ಲಭ್ಯವಾಗಿದೆ.
ದೂರದಲ್ಲೆ ಕಣಿವೆಯ ಆಳದಲ್ಲಿ ಹರಿವ ನದಿ ತಾಮ್ರಿಬರಾಣಿ ಮೂಲತಃ ತಮಿಳುನಾಡಿನ ಪೂರ್ವಕ್ಕೆ ಹುಟ್ಟುವಂತಹದ್ದು.
ಇದೊಂಥರಾ ಭಕ್ತರ ಪಾಲಿನ ತೀರ್ಥಕ್ಷೇತ್ರವೂ ಆಗಿರುವುದರಿಂದ ಪ್ರತಿವರ್ಷ ದರ್ಶನಕ್ಕೆ ಬರುವವರಿಗಾಗಿ ತೆರೆಯುವ ಪ್ರವೇಶ ಚಾರಣಿಗರಿಗೆ ಹಬ್ಬವಾಗುತ್ತಿದೆ. ಕಾರಣ ಸಪ್ತ ಋಷಿಗಳಲ್ಲಿ ಒಬ್ಬರಾಗಿರುವ ಹಿಂದೂ ಋಷಿ ಅಗಸ್ತ್ಯರ ಭಕ್ತರಿಗೆ ಇದು ಅತ್ಯಂತ ಪುಣ್ಯಕ್ಷೇತ್ರ. ಜತೆಗೆ ತಮಿಳು ಸರಹದ್ದಿನಲ್ಲಿರುವುದರಿಂದ ಈ ಪಿತಾಮಹ ಅರಾಧ್ಯ ದೈವ ಕೂಡ.
ತಮಿಳಿನ ಭಾಷೆಯ ಪಿತಾಮಹ, ಅಷ್ಟೇಕೆ ಮೊಟ್ಟ ಮೊದಲ ತಮಿಳು ವ್ಯಾಕರಣ ಸಂಕಲನಕಾರ ಕೂಡ ಅಗಸ್ತ್ಯ ಮಹರ್ಷಿಯೇ. ಅದರ ಅಪಭ್ರಂಶವೇ ಬಹುಶಃ ಅಗತ್ತಿಯಂ ಎಂದಾಗಿರಬೇಕು. ಅಲ್ಲಿ ಆ ಐತಿಹ್ಯದ ಕಾರಣ ಒಂದು ಕಲ್ಲಿನ ಪ್ರತಿಮೆ ಸಹ ಸ್ಥಾಪಿಸ ಲಾಗಿದೆ. ಅಗಸ್ತ್ಯತೀರ್ಥದ ಆರಂಭದಲ್ಲಿ ಇರುವ ಅಗಸ್ತ್ಯ ಋಷಿ ನಿಮ್ಮನ್ನು ಸ್ವಾಗತಿಸುತ್ತಾನೆ. ಕಣಿ ಬುಡಕಟ್ಟು ಜನರು ಅಗಸ್ತ್ಯ ಪ್ರಾಚೀನ ಆರಾಧಕರು.
ಹೆಚ್ಚುವರಿಯಾಗಿ, ಪ್ರತಿ ವರ್ಷ, ಸಾವಿರಾರು ಹಿಂದೂ ಭಕ್ತರು ಈ ಪರ್ವತದ ತುದಿಯಲ್ಲಿ ಅಗಸ್ತ್ಯ ಪ್ರಾರ್ಥನೆ ಸಲ್ಲಿಸಲು ಬೆಟ್ಟದ ನೆತ್ತಿ ಏರುತ್ತಾರೆ. ಕಾಣಿ ಬುಡಕಟ್ಟಿನ (ಕಾನಿಕ್ಕರನ್) ಜನ ಅಭಯಾರಣ್ಯದ ಇಲಾಖೆಯೊಂದಿಗಿನ ವ್ಯಾವಹಾರಿಕ ಸಾಮರಸ್ಯ ದಿಂದಾಗಿ ಪರಸ್ಪರ ಸಹಾಯದ ನಂಬಿಕೆಯ ಮೇಲೆ ಕೆಲಸ ಕಾರ್ಯ ನಡೆಯುತ್ತಿದೆ. ಹಾಗಾಗಿ ಕಾಡುಪ್ರಾಣಿ ಮತ್ತು ಅರಣ್ಯದಲ್ಲಿ ಪ್ರವಾಸಿ ಅಥವಾ ಚಾರಣದ ವ್ಯಕ್ತಿಗಳು ಅಪಾಯಕ್ಕೆ ಈಡಾಗದಂತೆ ಇವರು ಕಾಯುತ್ತಿದ್ದುದು ಅತಿ ದೊಡ್ಡ ಕೊಡುಗೆ.
ಇದು ಅತಿ ಹೆಚ್ಚು ಕಾಡು ಕೋಣ, ಚಿರತೆ ಮತ್ತು ಹುಲಿಗಳ ನಿರಂತರ ಚಲವಲನದ ಕ್ಷೇತ್ರವಾಗಿರುವುದರಿಂದ ಈ ಎಚ್ಚರ ಅನಿವಾರ್ಯ. ಮೊದಲೆಲ್ಲ ಅಷ್ಟಾಗಿ ನಿರ್ಭಂದನೆಗಳಿಲ್ಲದೆ ಇದು ನಡೆಯುತ್ತಿತ್ತಲ್ಲ. ಆಗ ಎಲ್ಲರಿಗೂ ಸುಲಭವಾಗಿತ್ತು. ಆದರೆ
2016ರಲ್ಲಿ ಯುನೆಸ್ಕೊ ಇದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರೊಂದಿಗೆ ಇದರ ಖದರ್ರೇ ಬದಲಾಯಿತು. ಇತ್ತ ತಿರುವನಂತ ಪುರಂ ವಿಮಾನ ನಿಲ್ದಾಣದಿಂದ ಕೇವಲ 61 ಕಿ.ಮೀ. ದೂರ ಇರುವ ಕೂಡಂ ನೆಯ್ಯಾರ್‌ನಿಂದ 32 ಕಿ.ಮೀ. ದೂರ ಇದ್ದು ಸುಲಭಕ್ಕೆ ಸ್ಥಳೀಯ ವಾಹನ ಸೌಲಭ್ಯ ಮತ್ತು ಗೈಡು ಇತ್ಯಾದಿ ಲಭ್ಯ ಇದೆ.
ಚಾರಣ ಆರಂಭಿಸಿದ ಮೇಲೆ ಮಧ್ಯ ಭಾಗದಲ್ಲಿ ಹಾಯ್ದು ಹೋಗುವ ಕಲ್ಲಕಾಡ ಮುಂಡಂತುರೈ ಪ್ರದೇಶ ಹುಲಿಯಾಭಯಾಣ್ಯ ವೂ ಆಗಿರುವುದರಿಂದ ಅಲ್ಲಲ್ಲಿ ಆಗೀಗ ಹುಲಿ ದರ್ಶನ, ಭಯದ ಆನಾವರಣ ಎರಡೂ ಅನುಭವಕ್ಕೆ ಪಕ್ಕಾ. ಇದರ ಮಧ್ಯೆ ಮೇಲ್ಗಡೆ ಹುಟ್ಟಿ ಕೆಳಕ್ಕೆ ನಮ್ಮ ದಾರಿಗೆ ಅಭಿಮುಖವಾಗಿ ಬರುವ ಕರಮಾನ್ ನದಿ ಮತ್ತೊಂದು ಪ್ರಮುಖ ಘಟ್ಟ, ಅಲ್ಲಲ್ಲಿ ಸಣ್ಣ ಪುಟ್ಟ ಜಲಪಾತಗಳನ್ನು ಸೃಷ್ಟಿಸಿದೆಯಲ್ಲದೇ, ಇತ್ತಲಿಂದ ಹೋಗುವಾಗ ನೀರಿನ ಕೊರತೆಯನ್ನು ನೀಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇಲ್ಲಿ ಒಂದು ವಿಷಯ ಗೊತ್ತಿರಬೇಕು ಮೊದಲನೆಯದಾಗಿ, ಅಗಸ್ತ್ಯ ಮಲೈ ಮತ್ತು ಅಗಸ್ತ್ಯಾರಕೂಡಂ ಎರಡೂ ಬೇರೆ ಬೇರೆ.
ಎರಡರ ನಡುವಿನ ವ್ಯತ್ಯಾಸ ಕೂಡ ಗೊತ್ತಿರಬೇಕು. ಏಕೆಂದರೆ ಜನರು ಈ ಪದಗಳನ್ನು ಪರಸ್ಪರ ಬದಲಿಯಾಗಿ ಬಳಸುತ್ತಾರೆ.
ಅಗಸ್ತಯ (ಅಥವಾ ಅಗಸ್ತ್ಯ ಬಯೋಸಿಯರ್ ರಿಸರ್ವ್) ಕೇರಳ ಮತ್ತು ತಮಿಳುನಾಡು ನಡುವಿನ ಪಶ್ಚಿಮ ಘಟ್ಟಗಳಲ್ಲಿ ಸಂರಕ್ಷಿತ ಅರಣ್ಯ ಪ್ರದೇಶ. ಇದು ೨,೦೦೦ಕ್ಕೂ ಹೆಚ್ಚು ಜಾತಿಯ ಔಷಧಿಯ ಸಸ್ಯಗಳನ್ನು ಒಳಗೊಂಡಂತೆ ಅನೇಕ ಅಪರೂಪದ ಮತ್ತು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಇದು ಶೆಂದೂರ್ನಿ, ಪೆಪ್ಪಾರ ಮತ್ತು ನೆಯ್ಯರ್ ಎಂಬ ಮೂರು ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡಿದೆ.
ಆದರೆ ಅಗಸ್ತ್ಯತೀರ್ಥ ಒಂದು ನಿರ್ದಿಷ್ಟ ಪ್ರದೇಶ ಮತ್ತು ಶಿಲಾಬೆಟ್ಟ. ನಾವೆಲ್ಲ ನಮ್ಮ ಮೀಟರ್ ಅಳೆದುಕೊಳ್ಳಲು ಬಯಸುವುದು ಇದನ್ನೆ. ಇಂದು ನಂಬುಗೆಯ ವಿಪರ್ಯಾಸ ಇದೆ. ಅಗಸ್ತ್ಯ ಮೂಲತಃ ಬ್ರಹ್ಮಚಾರಿ. ಹಾಗಾಗಿ ಅವನ ನೆಲಕ್ಕೆ ಹೆಣ್ಣುಮಕ್ಕಳು ಕಾಲಿಡಬಾರದೆನ್ನುವ ಸ್ಥಳೀಯ ನಂಬಿಕೆಯಾಧಾರಿತ ನಿಯಮ ಮೊನ್ನೆ ಮೊನ್ನೆ ಸುಪ್ರಿಂ ಕೋರ್ಟು ಸೂಚನೆ ನೀಡುವವರೆಗೂ
ಅನೂಚಾನವಾಗಿ ಜಾರಿಯಲ್ಲಿತ್ತು. ಆದರೆ 2019 ರಲ್ಲಿ ಈ ಒಂದು ಆಜ್ಞೆ ಜಾರಿಯಾಗುತ್ತಿದ್ದಂತೆ ಜನವರಿ 2020ರಲ್ಲಿ ಮೊದಲ ಮಹಿಳಾ ತಂಡ ಅಗಸ್ತ್ಯಾರ ಕೂಡಂ ನೆತ್ತಿಗೆ ಹೆಜ್ಜೆಯೂರಿ ಬಂದಿದೆ.
ಅಲ್ಲಿನ ಪರಿಸರ ಮತ್ತು ಧಾರ್ಮಿಕ ಪ್ರಾಮುಖ್ಯದಿಂದಾಗಿ ಅಗಸ್ತ್ಯ ಟ್ರೆಕ್ ಪ್ರತಿ ವರ್ಷ ಜನವರಿ ಎರಡನೇ ವಾರದಿಂದ ಮಾರ್ಚ್ ವರೆಗೆ ಸುಮಾರು 45 ದಿನಗಳವರೆಗೆ ತೆರೆದಿರುತ್ತದೆ. ಆದರೆ, ಈ ಋತುವಿನಲ್ಲಿ ಕೆಎಫ್ಡಿಸಿಯಿಂದ ಪ್ರತಿದಿನ ಕೇವಲ 100 ಪಾಸ್ ಗಳನ್ನು ನೀಡಲಾಗುತ್ತದೆ. ಆಯಾ ಋತುವಿನಲ್ಲಿ ಟಿಕೆಟ್ ಕಾಯ್ದಿರಿಸಲು ಲಿಂಕು ಕೇರಳ ಅರಣ್ಯ ಇಲಾಖೆಯ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಜತೆಗೆ, ಟ್ರೆಕ್ಕಿಂಗ್ ಸೀಸನ್ ಪ್ರಾರಂಭವಾಗುವ ಒಂದು ವಾರದ ಮೊದಲು, ಕೇರಳದಾದ್ಯಂತದ ಪ್ರಮುಖ ಪತ್ರಿಕೆಗಳಲ್ಲಿ ಚಾರಣದ ಬಗ್ಗೆ ಎಲ್ಲ ವಿವರಗಳನ್ನು ಪ್ರಕಟಿಸಲಾಗುತ್ತದೆ.
ಟ್ರೆಕ್ಕಿಂಗ್ ಪಾಸ್ ತಲಾ ವೆಚ್ಚವು ಸುಮಾರು ಒಂದೂವರೆ ಸಾವಿರ ರೂ. ಒಂದು ಪಾಸ್‌ನಲ್ಲಿ 10 ಜನರನ್ನು ಬುಕ್ ಮಾಡಬಹುದು. ಈ ವೆಚ್ಚವು ಅರಣ್ಯ ಪರವಾನಗಿ ಮತ್ತು ವಸತಿಯನ್ನು ಒಳಗೊಂಡಿರುತ್ತದೆ. ಊಟಕ್ಕೆ ಬೆಲೆ ಪ್ರತ್ಯೇಕವಾಗಿದ್ದು ನಮ್ಮ ನಮ್ಮ ಅಗತ್ಯಕ್ಕೆ ತಕ್ಕಂತೆ ಮತ್ತು ಹೊರಬಹುದಾದ ಸಾಮರ್ಥ್ಯಕ್ಕೆ ತಕ್ಕಂತೆ ಒಂದಷ್ಟು ತೆಗೆದುಕೊಳ್ಳುವುದು ಅವರವರ ಕೆಪಾಸಿಟಿ. ತೀರ ಕೆಲವೇ ಜನರಿಗೆ ಅವಕಾಶಗಳಿರುವುದರಿಂದ ಸಂಪೂರ್ಣ ಪಕ್ಕಾ ತಯಾರಿ ಅವಶ್ಯ. ದಾರಿಯ ಮೇಲೆ ತುಂಬಾ ಹಿಡಿದು ನಿಲ್ಲಿಸುವ
ಫೋಟೊಗ್ರಫಿಕ್ ಎಂದರೆ ಅಗಸ್ತ್ಯಕೂಡಂ ಬ್ರಿಟಿಷ್ ಜಮಾನದ ಟೀ ಫ್ಯಾಕ್ಟರಿಗಳ ಅವಶೇಷಗಳು.
ಚಾರಣವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ ನಂತರ, ತಿರುವನಂತಪುರದಿಂದ 50 ಕಿಮೀ ದೂರದಲ್ಲಿರುವ ಬೋನಕಾಡ್‌ಗೆ ವರದಿ ಮಾಡಬೇಕು. ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೆ ತಿರುವನಂತಪುರದಿಂದ ಬೋನಕಾಡ್‌ಗೆ ಸರಕಾರಿ ಬಸ್ಸುಗಳ ಸೌಲಭ್ಯ ಇದ್ದು, ಖಾಸಗಿ ವಾಹನಗಳ ದಂಡೂ ಹೊರಡುತ್ತವೆ. ಬೋನಕಾಡ್‌ನಲ್ಲಿ, ಬೋನಕಾಡ್ ಪಿಕೆಟ್ ಸ್ಟೇಷನ್‌ಗೆ (ಅರಣ್ಯ ಚೆಕ್‌ಪೋಸ್ಟ್ ) ವರದಿ ಮಾಡಿಕೊಳ್ಳಬೇಕು. ಅಲ್ಲಿಂದ ತಂಡ ತಂಡವಾಗಿ ಮಾರ್ಗದರ್ಶಕರ ಮೂಲಕ ಹೊರಡುವ ಮುನ್ನ ಒಟ್ಟೂ ಅಂತರವನ್ನು ಎರಡು ಅಥವಾ ಮೂರು ದಿನಕ್ಕೆ ನಿಗದಿಗೊಳಿಸಿಕೊಳ್ಳಲೇ ಬೇಕು. ಪ್ರತಿ ತಂಡದಲ್ಲಿ ಇಪ್ಪತ್ತು ಜನರ ಲೆಕ್ಕಕೆ ಒಬ್ಬ ಅಧಿಕೃತ ಕಾಣಿ ಮಾರ್ಗದರ್ಶಿ.
ಚಾರಣ ಪಥ, ಚಾರಣಿಗರಿಗಾಗಿ ಮಾಡಿಟ್ಟಿರುವ ಡಾರ್ಮರೆಟರೀ ವ್ಯವಸ್ಥೆ, ಅದರಲ್ಲೂ ಕೊನೆಯ ಹಂತದ ಕಲ್ಲಿನ ಪರ್ವತ ಏರಲು ಮಾಡಿಟ್ಟಿವ ವ್ಯವಸ್ಥೆ ಸಾಹಸದ ಮನಸ್ಥಿತಿಗೆ ಒಂದು ಸವಾಲು. ಸಾಲು ಸಾಲಾಗಿ ಎರಡ್ಮೂರು ಹಗ್ಗದ ಏರು ಸಪೋಟ್‌ನ್ನು ಕಟ್ಟಿಡ ಲಾಗಿದ್ದು, ಮೂರನೆಯ ಹಂತದ ಅಂತಿಮ ಚಾರಣವನ್ನು ಸುಲಭಗೊಳಿಸುತ್ತದೆ. ಇಲ್ಲದಿದ್ದರೆ ಬಹುಶಃ ಹೆಚ್ಚಿನ ಪ್ರವಾಸಿಗಳಿಗೆ ಈ ಬೆಟ್ಟದ ನೆತ್ತಿ ದಕ್ಕುವುದು ಕಷ್ಟವೇ ಸರಿ.