ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
1978ರ ಫೆಬ್ರವರಿಯಲ್ಲಿ, ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರ ಏರ್ ಇಂಡಿಯಾದ ಅಧ್ಯಕ್ಷ ಹುದ್ದೆಯಿಂದ ಜೆ.ಆರ್.ಡಿ.ಟಾಟಾ ಅವರನ್ನು ಕಿತ್ತು
ಹಾಕಿತು. 1953ರಿಂದಲೂ ಅವರು ಆ ಹುದ್ದೆಯಲ್ಲಿದ್ದರು.
ಟಾಟಾ ಕೇವಲ ಏರ್ ಇಂಡಿಯಾ ಅಧ್ಯಕ್ಷರಷ್ಟೇ ಆಗಿರಲಿಲ್ಲ. ಅದನ್ನು ಸ್ಥಾಪಿಸಿದವರೂ ಅವರೇ. ಈ ವಿಷಯದಲ್ಲಿ ಮೊರಾರ್ಜಿ ಸಂಯಮದಿಂದ ಮತ್ತು ಗೌರವದಿಂದ ನಡೆದುಕೊಳ್ಳಬೇಕಿತ್ತು. ಒಂದು ವೇಳೆ ಟಾಟಾ ಅವರನ್ನು ಆ ಸ್ಥಾನದಿಂದ ಇಳಿಸಬೇಕೆಂದಿದ್ದರೆ, ಅದನ್ನು ಅವರ ಗಮನಕ್ಕೆ ತಂದಿದ್ದರೆ, ಅವರು ತಾವಾಗಿಯೇ ರಾಜೀನಾಮೆ ನೀಡಿ ನಿರ್ಗಮಿಸುತ್ತಿದ್ದರು. ಆದರೆ ಸರಕಾರ ಹಠಾತ್ ಅವರನ್ನು ಕಿತ್ತು ಹಾಕಿತು.
ಕಾಲಚಕ್ರ ಬದಲಾಗಿದೆ. ಕರ್ಮ ಯಾರನ್ನೂ ಬಿಡುವುದಿಲ್ಲ. ಆಶ್ಚರ್ಯಕರ ಬೆಳವಣಿಗೆಯಲ್ಲಿ, ಈಗ ಏರ್ ಇಂಡಿಯಾ ವಾಪಸ್ ಟಾಟಾ ತೆಕ್ಕೆಗೆ ಸೇರಿದೆ. ಮೊನ್ನೆ ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ಖರೀದಿಸಿದ ಲೀಡ್ ಸುದ್ದಿಗೆ ನಾವು, ‘ಟಾಟಾ ಅಂದ್ರೆ ಗುಡ್ ಬೈ ಅಲ್ಲ’ ಎಂಬ ಶೀರ್ಷಿಕೆ ಹಾಕಿದ್ದೆವು. ಎಲ್ಲವೂ ಮುಗಿದು ಹೋಯಿತು ಅಥವಾ ಅಂತಿಮ ವಿದಾಯ ಸೂಚಿಸುವಾಗ ಟಾಟಾ, ಬೈಬೈ ಎಂದು ಹೇಳುತ್ತೇವೆ. ಆದರೆ ಈ ವಿಷಯದಲ್ಲಿ ಟಾಟಾ ಅಂದ್ರೆ ಬೈಬೈ ಅಲ್ಲ ಎಂಬುದು ಸಾಬೀತಾ ಗಿದೆ. ಮುಂದೊಂದು ದಿನ ತಮ್ಮ ಸಂಸ್ಥೆಯೇ ಏರ್ ಇಂಡಿಯಾವನ್ನು ಖರೀದಿಸಬಹುದೆಂದು ಅಂದು ಜೆಆರ್ ಡಿ. ಕೂಡ ಊಹಿಸಿದ್ದಿರಲಿಕ್ಕಿಲ್ಲ. ಆದರೆ ಕಾಲಚಕ್ರ ತಿರುಗಿ, ತಿರುಗಿ ಪುನಃ ಟಾಟಾ ಸಂಸ್ಥೆಯ ಮುಂದೆ ನಿಂತಿದೆ.
ಜೆ.ಆರ್.ಡಿ.ಟಾಟಾರನ್ನು ಏರ್ ಇಂಡಿಯಾ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸಿದ ಎರಡು ದಿನಗಳ ನಂತರ, ಅಂದು ಅಧಿಕಾರದಲ್ಲಿ ಇಲ್ಲದ ಇಂದಿರಾ ಗಾಂಧಿ ಅವರು ಜೆ.ಆರ್.ಡಿ ಅವರಿಗೆ ಒಂದು ಪತ್ರ ಬರೆದಿದ್ದರು. ಅದನ್ನು ತಾವು ಗುವಾಹಟಿಯಿಂದ ಕೋಲ್ಕೊ ತಾಕ್ಕೆ ಬರುವ ವಿಮಾನದಲ್ಲಿ ಬರೆದಿರುವುದಾಗಿ ಇಂದಿರಾ ಆ ಪತ್ರದಲ್ಲಿ ನಮೂದಿಸಿದ್ದರು. ಈ ಪತ್ರ ಮತ್ತು ಅದಕ್ಕೆ ಜೆ.ಆರ್.ಡಿ. ನೀಡಿದ ಉತ್ತರವನ್ನು ಓದಿದರೆ, ಕೆಲವು ಸಂಗತಿಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಪತ್ರದಲ್ಲಿ ಹೇಳದ ಎಷ್ಟೋ ವಿಷಯಗಳು ನಮ್ಮ ಗ್ರಹಿಕೆಗೆ ಬರುತ್ತವೆ. ಅದಕ್ಕಾಗಿ ನಾನು ಇಲ್ಲಿ ಇಂದಿರಾ ಪತ್ರ ಮತ್ತು ಅದಕ್ಕೆ ಜೆ.ಆರ್.ಡಿ.ಉತ್ತರ ಎರಡನ್ನೂ ನೀಡುತ್ತಿದ್ದೇನೆ.
ಮೊದಲು ಇಂದಿರಾ ಪತ್ರ :
ಪ್ರಿಯ ಜೇಹ್,
ಏರ್ ಇಂಡಿಯಾದಲ್ಲಿ ಇನ್ನು ಮುಂದೆ ನೀವು ಅಧ್ಯಕ್ಷರಾಗಿ ಇರುವುದಿಲ್ಲ ಎಂಬ ವಿಷಯ ತಿಳಿದು ಬೇಸರವಾಯಿತು. ನಿಮ್ಮ ನಿರ್ಗಮನದಿಂದ ನಿಮಗಾದಷ್ಟೇ ಪ್ರಾಯಶಃ ಏರ್ ಇಂಡಿಯಾ ಸಂಸ್ಥೆಗೂ ಅಷ್ಟೇ ಬೇಸರವಾಗಿರಲಿಕ್ಕೂ ಸಾಕು. ನೀವು ಕೇವಲ ಏರ್ ಇಂಡಿಯಾದ ಅಧ್ಯಕ್ಷರಷ್ಟೇ ಆಗಿರಲಿಲ್ಲ. ಅದರ ಸಂಸ್ಥಾಪಕರೂ ಆಗಿ, ಅದನ್ನು ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿದವರು. ಹೀಗಾಗಿ ನಿಮಗೆ ಆ ಸಂಸ್ಥೆಯ ಜತೆಗೆ ಆಳವಾದ ವೈಯಕ್ತಿಕ, ಭಾವನಾತ್ಮಕ ಸಂಬಂಧ ಇದೆ. ಏರ್ ಇಂಡಿಯಾ ವಿಮಾನದ ಗಗನಸಖಿಯರ ಸೀರೆ ಹೇಗಿರಬೇಕು, ಅವರು ಹೇಗೆ ಪ್ರಯಾಣಿಕರ ಜತೆ ವರ್ತಿಸಬೇಕು ಎಂಬಂಥ ಸಣ್ಣ ಮತ್ತು ಸೂಕ್ಷ್ಮ ಸಂಗತಿಗಳ ಬಗ್ಗೆ ತಾವು ಗಮನ ಹರಿಸಿದ ಕಾರಣ ಅದು ಅಂತಾರಾಷ್ಟ್ರೀಯ ಮಟ್ಟಕ್ಕೇರಿ, ಉನ್ನತ ಸ್ಥಾನ ಮತ್ತು ಹೆಸರು ಪಡೆಯುವಂತಾಯಿತು.
ನಿಮ್ಮ ಬಗ್ಗೆ ಮತ್ತು ಏರ್ ಇಂಡಿಯಾ ಬಗ್ಗೆ ನನಗೆ ಅತೀವ ಅಭಿಮಾನವಿದೆ. ಯಾರೂ ಈ ಸಮಾಧಾನವನ್ನು ನಿಮ್ಮಿಂದ ಕಸಿದುಕೊಳ್ಳಲಾರರು. ನಮ್ಮ ನಡುವೆ ಕೆಲವು ತಪ್ಪು ಗ್ರಹಿಕೆಗಳಿದ್ದವು. ನಾಗರಿಕ ವಿಮಾನಯಾನ ಸಚಿವಾಲಯದಲ್ಲಿರುವವರ ವೈಷಮ್ಯ ಮತ್ತು ನಾನು ಯಾವ ಒತ್ತಡದಲ್ಲಿ ಕೆಲಸ ಮಾಡಬೇಕಾಯಿತು
ಎಂಬುದರ ಬಗ್ಗೆ ನಿಮಗೆ ತಿಳಿಸಲು ನನಗೆ ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ಇದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳಲಾರೆ.
ಶುಭವಾಗಲಿ, ತಮ್ಮ ವಿಧೇಯ
– ಇಂದಿರಾ
ಈ ಪತ್ರಕ್ಕೆ ಜೆ.ಆರ್.ಡಿ.ಟಾಟಾ ಬರೆದ ಉತ್ತರ :
ಪ್ರಿಯ ಇಂದಿರಾ,
ಏರ್ ಇಂಡಿಯಾ ಜತೆಗಿನ ನನ್ನ ಸಂಬಂಧವನ್ನು ಕಡಿದು ಹಾಕಿದ ಸರಕಾರದ ಕ್ರಮದ ಬಗ್ಗೆ ನೀವು ನನಗೆ ಪತ್ರ ಬರೆಯುವ ಪ್ರಯಾಸ ತೋರಿದ್ದಕ್ಕೆ ಧನ್ಯವಾದ ಗಳು. ಏರ್ ಇಂಡಿಯಾ ಸಂಸ್ಥೆಯನ್ನು ಕಟ್ಟುವಲ್ಲಿ ನನ್ನ ಪಾತ್ರದ ಬಗ್ಗೆ ಪ್ರಸ್ತಾಪಿಸುತ್ತಾ, ನೀವು ತೋರಿದ ಅಭಿಮಾನಕ್ಕೆ ನನ್ನ ಹೃದಯ ತುಂಬಿ ಬಂದಿದೆ. ನನ್ನ ಜತೆ ಕೆಲಸ ಮಾಡಿದ ಪ್ರಾಮಾಣಿಕ ಮತ್ತು ನಿಸ್ಪೃಹ ಸಿಬ್ಬಂದಿ ಮತ್ತು ಸಹಕಾರ ನೀಡಿದ ಸರಕಾರದ ಬೆಂಬಲ ಇಲ್ಲದಿದ್ದರೆ ನಾನು ಅಲ್ಪವಾದುದನ್ನಷ್ಟೇ ಸಾಽಸಲು ಸಾಧ್ಯವಾಗುತ್ತಿತ್ತು. ನೀವು ಸೌಖ್ಯವಾಗಿದ್ದೀರಿ ಎಂದು ಭಾವಿಸುವೆ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.
ನಿಮ್ಮ ವಿಧೇಯ
– ಜೇಹ್
ಈ ಎರಡು ಪತ್ರಗಳನ್ನು ಓದಿದರೆ, ಹೇಳದೇ ಹೋದ ಅವೆಷ್ಟೋ ವಿಷಯಗಳು ನಮ್ಮ ಗ್ರಹಿಕೆಗೆ ದಕ್ಕುತ್ತವೆ.
ಹೀಗೊಬ್ಬ ಅಡುಗೆ ಭಟ್ಟ!
To Somu, who makes amazing rasam without any science!
ಹೀಗೆಂದು ಕ್ರಿಶ್ ಅಶೋಕ್ ಅವರು ತಮ್ಮ ಇತ್ತೀಚಿನ ಪುಸ್ತಕ – Masala Lab : The Science of Indian Cooking ಕೃತಿಯನ್ನು ಅರ್ಪಣೆ ಮಾಡಿದ್ದಾರೆ.
ಮನೆಗೆ ಐವರು ನೆಂಟರು ಊಟಕ್ಕೆ ಬಂದರೆ, ಅಮ್ಮ ಮಾಡಿದ ಅಡುಗೆ ಎಂದಾದರೂ ಕಡಿಮೆ ಬಿದ್ದಿದ್ದೇ ಇಲ್ಲ. ಹಾಗೆಂದು ಹೆಚ್ಚಾಗಿದ್ದೂ ಇಲ್ಲ. ಅವಳೇನು ಗ್ರಾಮ್, ಲೀಟರ್ ಗಳಲ್ಲಿ ಅಳೆದು, ತೂಗಿ ಅಡುಗೆ ಮಾಡುವುದಿಲ್ಲ. ಎಲ್ಲವೂ ಕಣ್ಣಳತೆ. ಆ ಅಂದಾಜು ಏನು ಎಂಬುದು ಅವಳಿಗೆ ದಕ್ಕಿಬಿಟ್ಟಿದೆ. ಹತ್ತು ಜನರಿಗೆ ಸಾಕಾಗುವಷ್ಟು ಸಾರು ಮಾಡಿದರೆ ಎಷ್ಟು ಉಪ್ಪು ಹಾಕಬೇಕು ಎಂಬುದು ಅವಳಿಗೆ ಗೊತ್ತಿದೆ.
ಕಣ್ಣಳತೆ ಅಥವಾ ಮುಷ್ಟಿಯಳತೆಯಲ್ಲಿ ಯಾವ ಯಾವ ಪದಾರ್ಥಗಳನ್ನು ಎಷ್ಟು ಹಾಕಬೇಕು ಎಂದು ಕ್ಷಣಾರ್ಧದಲ್ಲಿ ನಿರ್ಧರಿಸುವ ಚಾಕಚಕ್ಯತೆ ಅವಳದ್ದು. ಅಮ್ಮ ಅಡುಗೆಮನೆಯಲ್ಲಿರುವ ರಾಸಾಯನ ಶಾಸ್ತ್ರ ವಿಜ್ಞಾನಿಯೂ ಹೌದು ಮತ್ತು ಪ್ರಯೋಗಶಾಲೆಯಲ್ಲಿರುವ ಕಪ್ರವೀಣೆಯೂ ಹೌದು. ಆಕೆ ರಸಾಯನಶಾಸ್ತ್ರ
ಓದದಿದ್ದರೂ, ಯಾವ ಯಾವ ಪದಾರ್ಥಗಳನ್ನು, ಯಾವ ಯಾವ ಪ್ರಮಾಣದಲ್ಲಿ ಹಾಕಿದರೆ ಏನಾಗುತ್ತದೆ ಎಂಬುದು ಅವಳಷ್ಟು ಜ್ಞಾನ, ಆ ಶಾಸ್ತ್ರವನ್ನು ಓದಿದ ವಿಜ್ಞಾನಿಗಳಿಗೂ ಇರಲಿಕ್ಕಿಲ್ಲ. ಅಮ್ಮ ಮಾಡಿದ ಅಡುಗೆಯಲ್ಲಿ ಒಂದು ದಿನವೂ ಉಪ್ಪು ಜಾಸ್ತಿಯಾಯಿತು, ಸಿಹಿ ಕಮ್ಮಿಯಾಯಿತು ಎಂಬುದಿಲ್ಲ.
ಒಂದು ವೇಳೆ ಉಪ್ಪು ಜಾಸ್ತಿಯಾದರೂ, ಸರಿ ಮಾಡುವುದು ಹೇಗೆಂಬುದು ಅವಳಿಗೆ ಗೊತ್ತು. ಐವರಿಗೆ ಅಡುಗೆ ಸಿದ್ಧಪಡಿಸಿದಾಗ, ಹಠಾತ್ ಹತ್ತು ಜನ ಬಂದರೆ, ಅಷ್ಟೇ ಅಡುಗೆಯಲ್ಲಿ ಮನೆಗೆ ಬಂದವರೆಲ್ಲರಿಗೂ ಹೊಟ್ಟೆ ತುಂಬುವಷ್ಟು ಬಡಿಸುವುದು ಹೇಗೆ ಎಂಬುದು ಅವಳಿಗೆ ಗೊತ್ತು. ಅಡುಗೆ ಮನೆ ಎಂಬುದು ಒಂದು ಒಂದು ಅದ್ಭುತ ಪಾಕಶಾಲೆ, ಅದೇ ಒಂದು ಅನೂಹ್ಯ ಪ್ರಪಂಚ. ಅಲ್ಲಿ ಅಡುಗೆಯೊಂದೇ ಅಲ, ಪ್ರೀತಿ, ಸಹಬಾಳ್ವೆ, ಸಂಬಂಧ ಅರಳುವ ಪವಿತ್ರ ಜಾಗ. ಸ್ವಾದಭರಿತ
ಅಡುಗೆಯ ಮೂಲಕ ಎಂಥವರನ್ನಾದರೂ ಗೆಲ್ಲಬಹುದು.
ಇಂದು ನಾವು ಸೇವಿಸುವ ಪ್ರತಿ ಆಹಾರದ ಹಿಂದೆ, ಅವೆಷ್ಟೋ ಮಂದಿಯ ಪರಿಶ್ರಮವಿದೆ. ಅವರೆಲ್ಲ ಸಂಶೋಧಿಸಿದ ಫಲವಾಗಿ ಇಂದು ನಾವು ರುಚಿರುಚಿ ತಿಂಡಿ-ತಿನಿಸುಗಳನ್ನು ಸೇವಿಸುತ್ತಿದ್ದೇವೆ. ಈ ಪುಸ್ತಕದಲ್ಲಿ ಕ್ರಿಶ್ ಅಶೋಕ್ ಈ ಎಲ್ಲಾ ವಿಷಯಗಳನ್ನು ಚರ್ಚಿಸಿದ್ದಾರೆ. ಭಾರತೀಯ ಅಡುಗೆ ಪದ್ಧತಿಯ ಹಿಂದಿನ ವೈಜ್ಞಾನಿಕ ಕಾರಣಗಳನ್ನು ವಿವರಿಸಿದ್ದಾರೆ.
ಹಾಗೆ ನೋಡಿದರೆ, ಕ್ರಿಶ್ ಅಶೋಕ್ ಅವರು ಅಡುಗೆ ಭಟ್ಟ (Chef) ರೇನೂ ಅಲ್ಲ. ಆದರೆ ಅವರು ಪ್ರತಿದಿನ ಅಡುಗೆ ಮಾಡುತ್ತಾರೆ ಮತ್ತು ಅದರಲ್ಲಿಯೇ ಖುಷಿ ಕಾಣುತ್ತಾರೆ. ಹಾಗಂತ ಅವರು ವಿಜ್ಞಾನಿಯೂ ಅಲ್ಲ, ಆದರೆ ಅವರು ವಿಜ್ಞಾನಿಯಂತೆ ಸುಲಭವಾಗಿ, ಸ್ಪಷ್ಟವಾಗಿ ವಿವರಿಸುತ್ತಾರೆ. ಅವರು ತಮ್ಮ ಕುಟುಂಬದ ಒಬ್ಬ ಮಹಿಳೆಯೊಬ್ಬರಿಂದ ಅಡುಗೆ ಮಾಡುವುದನ್ನು ಕಲಿತರು. ಆದರೆ ತಮ್ಮ ಆಸಕ್ತಿಯಿಂದ ಅಡುಗೆ ಮಾಡುವುದರಲ್ಲಿ ಸಮಾಧಾನ, ನೆಮ್ಮದಿ ಕಂಡರು. ಅವರು ಯಾರೋ ಹೇಳಿಕೊಟ್ಟಿದ್ದನ್ನು ಮಾಡಲಿಲ್ಲ, ಬದಲು ತಾವೇ ವೈಜ್ಞಾನಿಕ ಮನೋಭಾವದಿಂದ ಪಾಕಶಾಸವನ್ನು ಕುತೂಹಲ ದಿಂದ ಅಧ್ಯಯನ ಮಾಡಿದರು, ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡರು.
ಈಗ ಬೇರೆಯವರ ಮೇಲೆಯೂ ಪ್ರಯೋಗ ಮಾಡಿ, ಉತ್ತಮ ಬಾಣಸಿಗ, ಅಡುಗೆ ಭಟ್ಟ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಧಿಕಾರವಾಣಿಯಿಂದ ಪುಸ್ತಕ ಬರೆಯು ವಷ್ಟು ಅಡುಗೆ ಶಾಸದಲ್ಲಿ ಪರಿಣತಿ ಸಾಧಿಸಿದ್ದಾರೆ. ಪಾಕಶಾಸ್ತ್ರದಲ್ಲಿ ನಿಮಗೆ ಆಸಕ್ತಿಯಿದ್ದರೆ, ನೀವು ಈ ಪುಸ್ತಕವನ್ನು ಸವಿಯಬಹುದು.
ಸಂಯಮ ಎಂಬ ಪದಾರ್ಥ
‘Masala Lab : The Science of Indian Cooking’ ಕೃತಿ ಆರಂಭದಲ್ಲಿ ಕ್ರಿಶ್ ಅಶೋಕ್ ಅವರು ಒಂದು ಸಣ್ಣ ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ.
ಮೊದಲ ಬಾರಿಗೆ ನಾನು ವಿದೇಶ ಪ್ರಯಾಣಕ್ಕೆ ಹೋಗುವ ಮುನ್ನ, ಒಳ್ಳೆಯ ಪಾಕಪ್ರವೀಣೆಯಾದ, ನನ್ನ ತಾಯಿಯ ತಾಯಿ (ಅಜ್ಜಿ) ಬಳಿ ಅಡೆ (ಅಡೈ ಅಂತಾನೂ ಹೇಳುತ್ತಾರೆ, ಅಂದರೆ ಒಂಥರದ ದೋಸೆ) ಮಾಡುವುದು ಹೇಗೆ ಎಂದು ಕೇಳಿದೆ. ನಿಮಗೆ ಗೊತ್ತಿರಬಹುದು, ಅದನ್ನು ಮಾಡುವುದು ಸುಲಭ, ಆದರೆ ಕೆಲವೇ ಕೆಲವು ಮಂದಿ ಮಾತ್ರ ಸರಿಯಾಗಿ ಮಾಡುತ್ತಾರೆ. ನಾನು ಅದನ್ನು ಮಾಡುವುದು ಹೇಗೆ, ಏನೇನು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು, ಮಾಡುವ ವಿಧಾನವನ್ನು ಕೇಳಿದೆ. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿ ಅವಳಿಗೆ ಗೊತ್ತಿರಲಿಲ್ಲ. ಅವಳ ಪಾಲಿಗೆ ಅಡುಗೆ ಅಂದರೆ, ಪರಿಮಳ, ಕಣ್ಣಳತೆ, ಮುಷ್ಟಿ ಅಳತೆ ಮತ್ತು ಪಾಕ ವಿಧಾನ ಅಷ್ಟೇ. ಅವಳು ಏನೇ ಮಾಡಿದರೂ, ಬಾಯಿ ಚಪ್ಪರಿಸುವಷ್ಟು ರುಚಿಕಟ್ಟಾಗಿ ಮಾಡುತ್ತಿದ್ದಳು.
ಅಡೆ ಮಾಡುವ ವಿವರಗಳೆಲ್ಲವನ್ನೂ ಬರೆದುಕೊಂಡ ನಂತರ, ‘ನೀನು ಏನೇನು ಬರೆದುಕೊಂಡಿರುವೆ ಎಂಬುದನ್ನು ನಾನು ನೋಡಬಹುದಾ?’ ಎಂದು ಕೇಳಿದಳು.
ನಾನು ಅವಳಿಗೆ ತೋರಿಸಿದೆ. ‘ಅಯ್ಯೋ, ನೀನು ಬಹಳ ಮುಖ್ಯವಾದ ಪದಾರ್ಥವನ್ನೇ ಬಿಟ್ಟುಬಿಟ್ಟೀದ್ದೀಯಲ್ಲ’ ಎಂದು ಹೇಳಿದಳು. ‘ಹೌದಾ? ಏನದು’ ಎಂದು ಕೇಳುತ್ತಾ, ಬರೆದುಕೊಳ್ಳಲು ಪೆನ್ನನ್ನು ಹುಡುಕಲಾರಂಭಿಸಿದೆ. ಆಗ ಅಜ್ಜಿ, ‘ಸಂಯಮ…ಸಂಯಮ…’ ಎಂದಳು. ನನಗೆ ಅರ್ಥವಾಗಲಿಲ್ಲ. ನಾನು ಅವಳ ಮುಖವನ್ನೇ ನೋಡುತ್ತಿದ್ದೆ. ‘ಸಂಯಮ, ತಾಳ್ಮೆ ಎಂಬ ಪದಾರ್ಥ ಬಹಳ ಮುಖ್ಯ. ಯಾವುದೇ ತಿಂಡಿ-ತಿನಿಸು ತಯಾರಿಸುವಾಗ, ನಾವು ಪ್ರತಿಯೊಂದಕ್ಕೂ ಅದರದ್ದೇ ಆದ ಒಂದಿಷ್ಟು ಸಮಯ ಎಂಬುದಿರುತ್ತದೆ. ಅದನ್ನು ಕೊಡಲೇಬೇಕು. ಅವಸರ ಮಾಡಬಾರದು.
ಉಪ್ಪಿಟ್ಟನ್ನು ಮಾಡಿದ ಬಳಿಕ, ಎರಡು ನಿಮಿಷ ಬಿಟ್ಟು, ತೆಂಗಿನಕಾಯಿಯನ್ನು ತುರಿದು ಹಾಕಿ ಮೇಲಿಂದ ಸಿಂಪಡಿಸಬೇಕು. ಅದಾಗಿ ಎರಡು ನಿಮಿಷಗಳ ನಂತರ ಬಡಿಸಬೇಕು. ಪ್ರತಿ ಐಟೆಮ್ಮೂ ಇಂಥ ಸಂಯಮವನ್ನು ಬೇಡುತ್ತದೆ. ಈ ಸಂಗತಿ ಯಾವ ಪಾಕ ಪುಸ್ತಕದಲ್ಲೂ ಇರುವುದಿಲ್ಲ ಆದರೆ ರೂಢಿಸಿಕೊಳ್ಳಬೇಕು’ ಎಂದಳು.
ಫ್ರಿಟ್ಟಾಟ (frittata) ಅಂದ್ರೆ ಏನು?
ಈ ಪ್ರಶ್ನೆಗೆ ಸುಲಭವಾಗಿ ಮತ್ತು ತಕ್ಷಣ ಅರ್ಥವಾಗುವಂತೆ ಹೇಳುವುದಾದರೆ, ಅದು ಆಮ್ಲೆಟ್ ನ ಚಿಕ್ಕ ಸಹೋದರ, ಅಷ್ಟೇ. ಹಾಗಾದರೆ ಆಮ್ಲೆಟ್ ಎಂದೇ ಹೇಳ ಬಹುದಿತ್ತಲ್ಲ. ಆಗ ಫ್ರಿಟ್ಟಾಟ ತಿಂದ ಹಾಗೆ ಆಗುವುದಿಲ್ಲವಲ್ಲ. ಕೆಲವರು ತಮಾಷೆಗೆ, ಫ್ರಿಟ್ಟಾಟ ಅಂದ್ರೆ ಆಮ್ಲೆಟ್ಟೇ ಹೊರತು ಬೇರೇನೂ ಅಲ್ಲ. ವಿದೇಶದಲ್ಲಿ ಓದಿ ಬಂದ ಆಮ್ಲೆಟ್‌ಗೆ ಫ್ರಿಟ್ಟಾಟ ಅಂತ ಹೇಳುತ್ತಾರೆ ಎನ್ನುವುದುಂಟು. ಆಮ್ಲೆಟ್ ತಯಾರಿಕೆಗೆ ಏನೇನು ಬಳಸುತ್ತಾರೋ, ಫ್ರಿಟ್ಟಾಟ ತಯಾರಿಕೆಗೂ ಅದನ್ನೇ ಬಳಸುತ್ತಾರೆ. ಆದರೂ ಆಮ್ಲೆಟ್ ಗೂ, ಫ್ರಿಟ್ಟಾಟಕ್ಕೂ ಸ್ವಲ್ಪ ವ್ಯತ್ಯಾಸವಿದೆ.
ಅಮ್ಲೆಟನ್ನು ಹೆಚ್ಚಿನ ಬಿಸಿ (ಬೆಂಕಿ)ಯಲ್ಲಿ ಬಹಳ ಬೇಗ ಸಿದ್ಧಪಡಿಸುತ್ತಾರೆ. ಬಿಸಿ ಬಿಸಿಯಿರುವಾಗಲೇ ಬಡಿಸುತ್ತಾರೆ. ಬಿಸಿಬಿಸಿಯಿರುವಾಗಲೇ ಸೇವಿಸಿದರೆ ರುಚಿ ಜಾಸ್ತಿ. ಆದರೆ ಫ್ರಿಟ್ಟಾಟ ಹಾಗಲ್ಲ, ಮಂದ ಉರಿಯಲ್ಲಿ, ನಿಧಾನವಾಗಿ ತಯಾರಿಸುತ್ತಾರೆ. ತಯಾರಿಸಿದ ನಂತರ, ಸ್ವಲ್ಪ ತಣ್ಣಗಾದ ನಂತರ (ರೂಮ್ ಟೆಂಪರೇ ಚರ್) ಬಡಿಸುತ್ತಾರೆ. ಆಗ ಸೇವಿಸಿದರೆ ಚೆನ್ನಾಗಿರುತ್ತದೆ. ಇಷ್ಟಾದರೂ ಕೆಲವರು ಆಮ್ಲೆಟ್ ಬದಲು, ಫ್ರಿಟ್ಟಾಟ ಅಂತಾನೆ ನಾಲಗೆ ಹೊರಳಿಸಿ ಹೇಳುತ್ತಾರೆ.
ಎಲಾನ್ ಮಸ್ಕ್ ಆರು ಮಂತ್ರ
ಇತ್ತೀಚೆಗೆ ಆರ್ಪಿಜಿ ಎಂಟರ್ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ ಕೆಲವು ಕಾರ್ಯಮಂತ್ರಗಳನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದರು. ಆ ಆರು ಪುಟ್ಟ ಸಂಗತಿಗಳಲ್ಲಿ ಒಂದು ಪುಸ್ತಕಕ್ಕಾಗುವಷ್ಟು ವಿಷಯಗಳಿದ್ದವು.
ಒಂದು ಕೆಲಸ, ಯೋಜನೆ ಆರಂಭಿಸಿದಾಗ ಅದು ಅಲ್ಲಲ್ಲಿ ಕೈ ಕೊಡಬೇಕು. ಆರಂಭದಲ್ಲಿ ಆಗಾಗ ನಾವು ಸೋಲಬೇಕು. ಈ ಸೋಲು ನಮ್ಮನ್ನು ಅಧೀರರನ್ನಾಗಿ ಮಾಡಬಾರದು. ಇದು ಇಡೀ ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂಬುದನ್ನು ನಮ್ಮನ್ನು ಎಚ್ಚರಿಸುವ ಗಂಟೆ ಎಂದು ಭಾವಿಸಬೇಕು. ಅದಕ್ಕಿಂತ ಹೆಚ್ಚು ತಲೆಕೆಡಿಸಿ ಕೊಳ್ಳಬಾರದು. ಮಹಾನ್ ಸಂಸ್ಥೆ ಎಂದು ಕರೆಯಿಸಿಕೊಳ್ಳಬೇಕಾದರೆ, ನೀವು ಯಾರೂ ತಯಾರಿಸದ ಅತ್ಯತ್ತಮ ಪ್ರಾಡಕ್ಟ್ ಸಿದ್ಧಪಡಿಸಬೇಕು. ಕಾರಣ ನೀವು ನಿಮ್ಮ ಸಂಸ್ಥೆಯಲ್ಲಿ ಏನು ಮಾಡುತ್ತೀರಿ ಎಂಬುದು ಹೊರ ಜಗತ್ತಿಗೆ ಗೊತ್ತಾಗುವುದು ನೀವು ತಯಾರಿಸುವ ಪ್ರಾಡಕ್ಟ್ ಗಳಿಂದ.
ಒಂದು ಪ್ರಾಡಕ್ಟ್ ಮಾಡಿದ ನಂತರ ಸಂತೃಪ್ತರಾಗಿ ಅಲ್ಲಿಗೆ ಕೈಕಟ್ಟಿ ಕುಳಿತುಕೊಳ್ಳಬೇಡಿ. ನೀವು ಮಾಡದಿದ್ದರೆ, ನೀವು ತಯಾರಿಸಿದ ಪ್ರಾಡಕ್ಟನ್ನು ಬೇರೆಯವರು ಸುಧಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ನಿಮ್ಮನ್ನು ಮೀರಿಸುತ್ತಾರೆ. ಹೀಗಾಗಿ ಯಾವತ್ತೂ ನಿಮ್ಮ ಪ್ರಾಡಕ್ಟ್ ಗಳನ್ನು ಸುಧಾರಿಸುತ್ತಲೇ ಇರಬೇಕು. ನಿಮ್ಮ ಸಂಸ್ಥೆಯಲ್ಲಿ ಸಾಮಾನ್ಯ (Ordinary) ವ್ಯಕ್ತಿಗಳಿದ್ದರೆ ಅವರನ್ನು ನಿರ್ಲಕ್ಷಿಸಬೇಡಿ. ಅವರೂ ಅಸಾಮಾನ್ಯ (extraordinary) ಕೆಲಸ ಮಾಡಬಲ್ಲರು. ಎಲ್ಲಾ
ಸಂಸ್ಥೆಗಳಲ್ಲೂ ಅಸಾಮಾನ್ಯ ಕೆಲಸ ಮಾಡುವ ಸಾಮಾನ್ಯರು ಇರುತ್ತಾರೆ. ಅಷ್ಟಕ್ಕೂ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಹೊಣೆಗಾರಿಕೆ ನಿಮ್ಮದು ಎಂಬುದು ಗೊತ್ತಿರಲಿ.
ಸಣ್ಣ ಸಣ್ಣ ಸಂಗತಿಗಳನ್ನು ನಿರ್ಲಕ್ಷಿಸಬೇಡಿ. ಮುಂದೆ ಅವೇ ದೊಡ್ಡದಾಗುತ್ತವೆ ಎಂಬುದು ಗೊತ್ತಿರಲಿ. ಎಲ್ಲಾ ದೊಡ್ಡ ಸಮಸ್ಯೆಗಳೂ ಆರಂಭದಲ್ಲಿ ಸಣ್ಣದಾಗಿಯೇ ಇರುತ್ತವೆ. ಸಣ್ಣದಾಗಿ ದ್ದಾಗಲೇ ಅವನ್ನು ಪರಿಹರಿಸಬೇಕು. ಇದನ್ನು ಅಭ್ಯಾಸವಾಗಿ ಮಾಡಿಕೊಳ್ಳಬೇಕು. ನೀವು ಯಾವತ್ತೂ ಹಠಮಾರಿ ಆಗಿರಬೇಕು. ಕೆಲವು ಸಲ ಸಮಾಧಾನಿ ಆಗಿರಲೇಬಾರದು. ನಿಮ್ಮ ಹಠ ಕೈಗೊಡಿದ ನಂತರವಷ್ಟೇ ಸಂತೃಪ್ತರಾಗಬೇಕು.
ಟ್ವೀಟ್ ಮತ್ತು ಕಾಮೆಂಟ್
ಕೆಲವರ ಟ್ವೀಟ್‌ಗಿಂತ ಅವುಗಳಿಗೆ ಬಂದಿರುವ ಕಾಮೆಂಟುಗಳೇ ಚೆನ್ನಾಗಿರುತ್ತವೆ. ಕೆಲವು ದಿನಗಳ ಹಿಂದೆ, ನಟಿ ದಿಯಾ ಮಿರ್ಜಾ ಒಂದು ಟ್ವೀಟ್ ಮಾಡಿದ್ದರು – ‘ನನ್ನ ತಂದೆ ಕ್ಯಾಥೋಲಿಕ್, ತಾಯಿ ಬಂಗಾಳಿ. ನನ್ನನ್ನು ಸಾಕಿದವರು ಮುಸ್ಲಿಂ ಸಾಕು ತಂದೆ. ನಾನು ಹಿಂದೂವನ್ನು ಮದುವೆಯಾಗಿದ್ದೇನೆ. ನಾನು ಭಾರತೀ ಯಳು’ ಅದಕ್ಕೆ ಯಾರೋ ಕಾಮೆಂಟ್ ಮಾಡಿದ್ದರು – ‘ನನ್ನ ತಂದೆ ಹಿಂದೂ. ನನ್ನ ತಾಯಿಯೂ ಹಿಂದೂ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ನನ್ನನ್ನು ಸಾಕಿ ದವರೂ ಹಿಂದುಗಳೇ. ಪ್ರಾಯಶಃ ನಾನು ಮದುವೆಯಾಗುವುದೂ ಹಿಂದುವನ್ನೇ. ಕೆಲವರು ಭಾರತದಲ್ಲಿದ್ದೂ ಟೂರಿಸ್ಟ್ ಆಗಿದ್ದಾರಾ ಏನು?’