ಜ್ವಾಲಾಮುಖಿ
ರಾಕೇಶ್ ಕುಮಾರ್ ಕಮ್ಮಜೆ
ಬಾಂಗ್ಲಾದೇಶ ಗಲಭೆ-ಘರ್ಷಣೆಗಳಿಂದ ಜರ್ಜರಿತವಾಗುತ್ತಿದೆ. ಅದರ ಪ್ರಧಾನಿಯನ್ನು ಸಮೂಹಸನ್ನಿಯೊಂದು ದೇಶದಿಂದಲೇ ಹೊರಗಟ್ಟಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೇ ಗಡುವು ನೀಡಿ ರಾಜೀನಾಮೆ ಪಡೆಯಲಾಗಿದೆ. ತಮಗೆ ಬೇಕಾದ ಸರಕಾರವೊಂದನ್ನು ಪ್ರತಿಭಟನಾ ಕಾರರು ರೂಪಿಸಿ ಕೊಂಡಿದ್ದಾರೆ. ಸ್ಥಾಪಿತ ಪುತ್ಥಳಿಗಳನ್ನು ಕುಟ್ಟಿ ಕೆಡವಿದ್ದಾರೆ.
ಇವೆಲ್ಲವನ್ನೂ ಬೇಕಾದರೆ ಯಾವುದೋ ಮಹಾ ಅನ್ಯಾಯದ ವಿರುದ್ಧದ ಹೋರಾಟ ಎಂದು ನಂಬಬಹುದು ಅಥವಾ ಬಿಂಬಿಸಬಹುದು. ಆದರೆ ಇದೇ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಹಿಂದೂ ಸಮೂಹದ ಮೇಲೆ ಇನ್ನಿಲ್ಲದ ದಾಳಿ ನಡೆಸುವುದು, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ
ಎಸಗುವುದು, ಹಿಂದೂ ಮನೆ- ಮಂದಿರಗಳನ್ನು ಧ್ವಂಸಗೊಳಿಸುವುದು ಇವೆಲ್ಲವೂ ಪ್ರತಿಭಟನೆಯ ಲಕ್ಷಣಗಳಲ್ಲ, ಭಯೋತ್ಪಾದನೆಯ ದ್ಯೋತಕಗಳು!
ಒಂದು ಕಾಲಕ್ಕೆ ಭಾರತದಿಂದಾಗಿಯೇ ತನ್ನ ಅಸ್ತಿತ್ವ ಕಂಡು ಕೊಂಡ ಬಾಂಗ್ಲಾ, ಇಂದು ಭಾರತದ ವಿರುದ್ಧ ಕತ್ತಿ ಮಸೆಯಲಾರಂಭಿಸಿದೆ.
ಅಲ್ಲಿನ ಬಹುಸಂಖ್ಯಾತರು ಭಾರತವನ್ನು ತಮ್ಮ ವೈರಿಯೆಂಬಂತೆ ಕಾಣಲಾ ರಂಭಿಸಿದ್ದಾರೆ. ಅಪಾತ್ರರಿಗೆ ಮಾಡುವ ಸಹಾಯ ಹೇಗೆ ತಿರುಗಿಬೀಳುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಆದರೆ, ಅದೇ ದೇಶದ ಪ್ರಧಾನಿ ಯಾಗಿದ್ದ ಶೇಖ್ ಹಸೀನಾ ಓಡಿಬಂದು ಆಶ್ರಯ ಪಡೆದದ್ದು ಭಾರತದಲ್ಲೇ!
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಂದ ಮೇಲೆ, ಕಾಶ್ಮೀರದಲ್ಲಿ ಹಿಂದೂ ಗಳ ಮೇಲಾದ ಅನಾಚಾರಗಳು ಈಗಿನ ತಲೆಮಾರಿಗೆ ಜಗ ಜ್ಜಾಹೀರಾಗಿತ್ತು. ಕ್ರೌರ್ಯದ ಅಟ್ಟಹಾಸ ಎಂಥ ಘೋರರೂಪಿಯಾಗಿ ಹಿಂದೂಗಳ ಮೇಲೆರಗಿತ್ತೆಂಬುದಕ್ಕೆ ಆ ಸಿನಿಮಾ ಸಾಕ್ಷಿಯಾಗಿತ್ತು. ಆ ಸಿನಿಮಾ ಬಂದಾಗ ಅದರ
ಸತ್ಯಾಸತ್ಯತೆಯನ್ನು ಪ್ರಶ್ನಿಸಿದವರೂ ಇದ್ದಾರೆ!
ಆದರೀಗ ಮತ್ತೊಂದು ಕಾಶ್ಮೀರವಾಗಿ ಬಾಂಗ್ಲಾ ಪರಿವರ್ತನೆ ಗೊಂಡಿದೆ. ಕಾಶ್ಮೀರದ ಭಯೋತ್ಪಾದನೆಯ ಘೋರ ದೃಶ್ಯಗಳಿಗೆ ಸಾಕ್ಷಿಯಾಗದ ಇಂದಿನ ತಲೆಮಾರಿಗೆ ಈಗ ಬಾಂಗ್ಲಾದ ಭಯೋತ್ಪಾದನೆ ತನ್ನ ಕರಾಳಮುಖವನ್ನು ತೋರಿಸುತ್ತಿದೆ. ಆದರೆ ಅಚ್ಚರಿಯೆನಿಸುವುದು ಇದಲ್ಲ. ಭಯೋತ್ಪಾದನೆ
ಯನ್ನು ತನ್ನದೆಂದು ಪೇಟೆಂಟ್ ಪಡೆದಿರುವ ಪಾಕಿಸ್ತಾನ ಹಾಗೂ ಅದೇ ಮಟ್ಟಕ್ಕೆ ತಾನೂ ಬರಬೇಕೆಂಬ ಹಂಬಲದಲ್ಲಿರುವಂತಿರುವ ಬಾಂಗ್ಲಾದಲ್ಲಿ ಹಿಂದೂ ಗಳ ಮೇಲೆ, ದೇವಸ್ಥಾನಗಳ ಮೇಲೆ ದಾಳಿಯಾಗುವುದು ನಿರೀಕ್ಷಿತವೇ.
ಆದರೆ ಹಿಂದೂಗಳ ಪಾಲಿಗೆ ಪೂಜನೀಯವೆನಿಸಿರುವ ಗೋವನ್ನು ಕದ್ದು ಒಯ್ಯುವಾಗ ಮುಸ್ಲಿಂ ಯುವಕರಿಗೆ ನಾಲ್ಕು ಪೆಟ್ಟು ಬಿತ್ತೆಂಬ ಕಾರಣಕ್ಕೆ, ಅದೆಲ್ಲೋ ಚರ್ಚ್ ಮೇಲೆ ದಾಳಿಯಾದ ಸುದ್ದಿ ಕೇಳಿದಾಕ್ಷಣ ತಮ್ಮ ಕಿಡ್ನಿಯೇ ಹೋದಂತೆ ಅರಚುವ ನಮ್ಮ ಬುದ್ಧಿಜೀವಿಗಳು ಈಗ ದಿವ್ಯಮೌನಕ್ಕೆ
ಶರಣಾಗಿದ್ದಾರೆ. ಹಾಗೆಂದು ಧರ್ಮದ ಕಾರಣಕ್ಕಾಗಿ ಮುಸ್ಲಿಮರು-ಕ್ರೈಸ್ತರ ಮೇಲೆ ದಾಳಿ- ದೌರ್ಜನ್ಯ ಎಸಗುವುದು ಒಪ್ಪಬಹುದಾದ ಸಂಗತಿಯಲ್ಲ, ಅದು ಖಂಡನೀಯವೇ.
ಆದರೆ ಇಂಥ ಖಂಡನೆಗಳು ಆ ಎರಡು ಸಮುದಾಯಕ್ಕೆ ಹಾನಿಯಾದಾಗಷ್ಟೇ ಕೇಳಿಬರುವುದಲ್ಲ, ಹಿಂದೂಗಳ ಮೇಲೆ ಅನ್ಯಾಯವಾದಾಗಲೂ ಹಾಗೇ ಖಂಡಿಸುವ, ವಿರೋಧಿಸುವ ಮನಸ್ಥಿತಿಯಿರಬೇಕು ಅಷ್ಟೇ. ಭಾರತದ ಅನ್ನವುಂಡು, ಇಲ್ಲಿನ ಬಹುಸಂಖ್ಯಾತ ಹಿಂದೂಗಳ ಸಜ್ಜನಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈ ಬುದ್ಧಿ ಜೀವಿಗಳು ಹಿಂದೂ ಜೀವನಪದ್ಧತಿಗೇ ಒಂದು ಅಡಚಣೆಯಾಗಿ ಬಿಟ್ಟಿದ್ದಾರೆ. ಬಲಪಂಥೀಯ ವಿಚಾರಧಾರೆಗಳನ್ನು ಖಂಡಿಸುವುದೇ ತಮ್ಮ ಜೀವನದ ಸಾರ್ಥಕ್ಯ ಎಂದು ನಂಬಿ ಬದುಕುತ್ತಿರುವ ಇವರಿಗೆ ಕನಿಷ್ಠ ಆತ್ಮಸಾಕ್ಷಿಯೂ ಇಲ್ಲವಾಯಿತಲ್ಲ ಎಂಬುದು ವಿಷಾದನೀಯ.
ಹಿಂದೂಗಳ ಮೇಲೆ ದೌರ್ಜನ್ಯವಾಗುತ್ತಿದೆ ಎಂಬುದು ಬದಿಗಿರಲಿ, ಕನಿಷ್ಠ ಒಂದು ಮಾನವ ಸಮುದಾಯದ ಮೇಲಾಗುತ್ತಿರುವ ದಾಳಿ ಎಂಬ
ನೆಲೆಯಲ್ಲಾದರೂ ಖಂಡನೆಯ ಮಾತು ಇವರಿಂದ ಹೊಮ್ಮಬೇಕಿತ್ತು. ಆದರೆ ಈ ದುರ್ಬುದ್ಧಿಜೀವಿಗಳಿಗೆ ಬಾಂಗ್ಲಾದ ಹಿಂದೂಗಳು ಮಾನವರಂತೆಯೂ ಕಾಣಿಸುತ್ತಿಲ್ಲ. ಹಾಗೆಂದು ಈ ಮಹಾನ್ ಜೀವಿಗಳಲ್ಲನೇಕರು ಹಿಂದೂ ಸಮಾಜಕ್ಕೆ ಸೇರಿದವರೇ ಆಗಿದ್ದಾರೆ. ಹಿಂದೊಮ್ಮೆ ಕೇಂದ್ರದ ಮಾಜಿ ಸಚಿವ
ಅನಂತಕುಮಾರ್ ಹೆಗಡೆ ಹೇಳಿದಂತೆ, ತಮ್ಮ ರಕ್ತದ ಪರಿಚಯವೇ ಇಲ್ಲದಾದಾಗ ಇಂಥ ವಿಸ್ಮೃತಿಗಳು ಜಾರಿಯಲ್ಲಿರುತ್ತವೆ!
ಇಲ್ಲಿನ ಬುದ್ಧಿಜೀವಿಗಳ ಸಂತಾನಗಳಂತೆ ಬಾಂಗ್ಲಾದಲ್ಲಿ ಬದುಕುತ್ತಿದ್ದವರ ಮೇಲೂ ದಾಳಿಯಾಗಿದೆ! ಮುಸ್ಲಿಂ ತೀವ್ರವಾದಿತನದ ಅತಿರೇಕ ಗಳನ್ನು ಖಂಡಿಸದೆ ತಾವು ಧರ್ಮಾತೀತ ಮಾನವಕುಲದವ ರೆಂಬಂತೆ ಪ್ರತಿಬಾರಿಯೂ ಮುಸ್ಲಿಂ ಉಗ್ರಗಾಮಿತ್ವಕ್ಕೆ ಬೆನ್ನೆಲು ಬಾಗಿದ್ದವರ ಮನೆಗೇ ಅಲ್ಲಿ ಬೆಂಕಿ ಬಿದ್ದಿದೆ. ನಮ್ಮ ಬುದ್ಧಿಜೀವಿಗಳ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಉಗ್ರವಾದವನ್ನು ಬೆಳೆಸುವ ಮಂದಿಗೆ ಒತ್ತಾಸೆಯಾಗು ವವರು ಒಂದಲ್ಲಾ ಒಂದು ದಿನ ಅದೇ ಉಗ್ರವಾದದ ಬಲಿಪಶುಗಳಾಗು ವುದರಲ್ಲಿ ಸಂಶಯವಿಲ್ಲ.
ಆದರೆ ಅದು ನಮ್ಮ ಕೆಲವು ಲದ್ದಿಜೀವಿಗಳಿಗೆ ಅರ್ಥವಾಗುತ್ತಿಲ್ಲ. ಬುದ್ಧಿಜೀವಿಗಳಷ್ಟೇ ಅಲ್ಲ, ಜಾಗತಿಕವಾಗಿ ಮತ್ತು ನಮ್ಮದೇ ನೆಲದ ಮುಸ್ಲಿಮರು-ಕ್ರೈಸ್ತರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಯಾವೊಬ್ಬ ಮುಸ್ಲಿಂ-ಕ್ರೈಸ್ತ ಧಾರ್ಮಿಕ ಮುಖಂಡರೂ, ರಾಜಕೀಯ ನೇತಾರರೂ ಬಾಂಗ್ಲಾದಲ್ಲಿ
ಹಿಂದೂಗಳ ಮೇಲಾದ ಅನ್ಯಾಯವನ್ನು ಖಂಡಿಸುತ್ತಿಲ್ಲ. ತಂತಮ್ಮ ಸಮಾಜಕ್ಕೆ ಹಾನಿಯಾಗುವಾಗ ಜೀವ ಭಾವದ ಮಾತಾಡುವ ಇವರಿಗೆ, ಕಂಡಕಂಡಲ್ಲಿ ಪತ್ರಿಕಾಗೋಷ್ಠಿ ನಡೆಸುವವರಿಗೆ, ಬಾಂಗ್ಲಾದ ಹಿಂದೂಗಳಿಗೂ ಜೀವವಿದೆ ಎಂಬುದು ಮರೆತುಹೋದಂತಿದೆ. ಇಷ್ಟೇ ಅಲ್ಲ, ಭಾರತದಲ್ಲಿ ಮುಸ್ಲಿಮರ ಮೇಲೆ ಸಣ್ಣ ಪುಟ್ಟ ದಾಳಿಗಳಾದರೂ, ಪಾಕಿಸ್ತಾನ, ಸೌದಿ ಅರೇಬಿಯಾ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಭಾರಿ ಖಂಡನೆಗಿಳಿಯುತ್ತವೆ, ತಮ್ಮ ಸಮುದಾಯವನ್ನು ರಕ್ಷಿಸುವಂತೆ ಭಾರತ ಸರಕಾರವನ್ನು ಆಗ್ರಹಿಸತೊಡಗುತ್ತವೆ.
ಅಮೆರಿಕ, ಚೀನಾದಂಥ ರಾಷ್ಟ್ರಗಳೂ ತಮಗೆ ಸಂಬಂಧವಿಲ್ಲದಿದ್ದರೂ ಆತಂಕ ಹೊಮ್ಮಿಸುತ್ತವೆ. ಆದರೆ ಬಾಂಗ್ಲಾದಲ್ಲಿಂದು ಹಿಂದೂಗಳ ಮೇಲೆ ಹಾದಿಬೀದಿಯಲ್ಲಿ ಭೀಕರ ದೌರ್ಜನ್ಯವಾಗುತ್ತಿದ್ದರೂ ಯಾವೊಂದು ರಾಷ್ಟ್ರವೂ ತುಟಿಬಿಚ್ಚುತ್ತಿಲ್ಲ. ಇಸ್ರೇಲ್ ಬಿಟ್ಟು ಮಿಕ್ಕೆಲ್ಲಾ ರಾಷ್ಟ್ರಗಳು ತಮಗೆ ಸಂಬಂಧವೇ ಇಲ್ಲವೆಂಬಂತೆ ಕಣ್ಣುಮುಚ್ಚಿ ಕೂತಿವೆ. ಹಿಂದೂಗಳ ಬಗ್ಗೆ ಈ ರಾಷ್ಟ್ರಗಳ ಧೋರಣೆ ಏನೆಂಬುದು ಸ್ಪಷ್ಟವಾಗಿ ಅರ್ಥ ವಾಗುತ್ತಿದೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯದ ಅರಿವೇ ಇಲ್ಲದಂತಿರುವ ನಮ್ಮ ಬುದ್ಧಿಜೀವಿಗಳನ್ನು ಯಾರಾದರೂ ಇನ್ನೂ ಗೌರವದ ಕಣ್ಣುಗಳಿಂದ ಕಾಣುತ್ತಾರೆಂದರೆ, ಅಂಥವರನ್ನು ಮೊದಲು ನೇತ್ರಾಲಯಕ್ಕೆ ಒಯ್ದು ಚಿಕಿತ್ಸೆ ಕೊಡಿಸಬೇಕು! ಭಾರತೀಯ ಬುದ್ಧಿ ಜೀವಿಗಳು ಮಾತ್ರವಲ್ಲದೆ ಪ್ರಪಂಚದ ಅತಿಬುದ್ಧಿವಂತರೂ ಬಾಂಗ್ಲಾ ದುಷ್ಕೃತ್ಯಗಳ ಜ್ವಾಲೆಯಲ್ಲಿ ಎಲ್ಲವನ್ನೂ ಕಳಕೊಂಡು ಬೆತ್ತಲಾಗಿದ್ದಾರೆ. ಇದುವರೆಗೆ ತಾವು ಜೀವಪರರೆಂದು ಬಿಂಬಿಸಿ ಕೊಳ್ಳುತ್ತಿದ್ದವರು ಕನಿಷ್ಠ ಮಾನವೂ ಇರದವರೆಂಬುದು ಜಗತ್ತಿಗೆ ತಿಳಿಯಲಾರಂಭಿಸಿದೆ. ಹಿಂದೂ ಸಮಾಜಕ್ಕೂ ಈ ಆಷಾಢಭೂತಿತನಗಳು ತಿಳಿಯಲಾರಂಭಿಸಿವೆ. ಹಾಗಾಗಿಯೇ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಹಿಂದೂಗಳು ಒಂದಾಗಿ ಬೀದಿಗಿಳಿದಿದ್ದಾರೆ. ಕೈಯಲ್ಲಿ ಖಡ್ಗಹಿಡಿದು
ಪ್ರತಿಭಟಿಸುವ ಧೈರ್ಯವನ್ನು ಅಲ್ಲಿನ ಹಿಂದೂ ಯುವಕ – ಯುವತಿಯರು ಆವಾಹಿಸಿ ಕೊಂಡಿದ್ದಾರೆ.
ತನ್ಮೂಲಕ ಬಾಂಗ್ಲಾ ಹಿಂದೂಗಳು ತಮ್ಮ ಪರಂಪರೆಯನ್ನು ನೆನಪಿಸಿ ಕೊಂಡಿದ್ದಾರೆ ಎಂಬುದು ಶ್ಲಾಘನೀಯ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳುವುದಕ್ಕೆ ಬಾಂಗ್ಲಾ ಒಂದು ಉದಾಹರಣೆಯಾಗಿ ಕಂಡುಬರುತ್ತಿದೆ. ಅಲ್ಲಿನ ಹಿಂದೂಗಳು ಹೇಗೆ ತಮ್ಮ ರಕ್ಷಣೆಗಾಗಿ ಮತ್ತೊಬ್ಬರನ್ನು ಆಶ್ರಯಿಸದೆ ಸ್ವತಃ ಕಣಕ್ಕಿಳಿ ದಿದ್ದಾರೋ, ಭಾರತದಲ್ಲೂ ಅಂಥ ಆತ್ಮಪ್ರಜ್ಞೆ ಬೆಳೆಯ ಬೇಕಿದೆ. ಮತ್ತೊಂದು ಸಮಾಜಕ್ಕೆ ಅನಗತ್ಯವಾಗಿ ಹಾನಿ ಮಾಡುವ, ವಿಕೃತ ಆನಂದ ಪಡುವ ಸ್ವಭಾವ ಹಿಂದೂ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಾಗುವುದು ಬೇಡ; ಹಾಗಂತ, ತಮ್ಮ ಮೇಲೆ ಅನ್ಯಾಯವಾಗುತ್ತಿರುವಾಗಲೂ ಈ ಹಿಂದಿನಂತೆ ಸಹಿಸುವ ಸ್ವಭಾವವನ್ನೇ ಮುಂದುವರಿಸಿದರೆ ಅದು ಸ್ವಾಗತಾರ್ಹವೂ ಅಲ್ಲ!
ಧರ್ಮ, ಜಾತಿ, ವರ್ಣ, ಲಿಂಗಗಳ ಆಧಾರದ ಮೇಲೆ ನಡೆಯುವ ಯಾವುದೇ ದೌರ್ಜನ್ಯವನ್ನು, ಅವೆಲ್ಲವನ್ನೂ ಮೀರಿ ಪ್ರತಿಭಟಿಸುವ, ವಿರೋಧಿಸುವ ವಿಚಾರಸ್ಪಷ್ಟತೆ ಇದ್ದಾಗಲಷ್ಟೇ ಮನುಷ್ಯರಾದದ್ದು ಸಾರ್ಥಕವೆನಿಸುತ್ತದೆ. ಅಂಥ ವಿರೋಧಗಳೂ, ಹೋರಾಟಗಳೂ ಜೀವಪರ ಎನಿಸುತ್ತವೆ. ಹಾಗೆಂದು ಯಾವುದೋ ಕೆಲವು ಸಮುದಾಯಕ್ಕೆ ಮಾತ್ರ ಸೀಮಿತವಾದ ಕಾಳಜಿ, ಕೆಲವು ಸಮಾಜದ ಬಗೆಗಷ್ಟೇ ಉಕ್ಕಿಬರುವ ಕಕ್ಕುಲತೆಗಳನ್ನು ‘ಮನುಷ್ಯಪರ’ ಎನ್ನುವುದಿಲ್ಲ, ‘ಮಾನಸಿಕ ಮಂಡೆಪೆಟ್ಟು’ ಎನ್ನುತ್ತೇವೆ!
(ಲೇಖಕರು ಪ್ರಾಂಶುಪಾಲರು)