ತನ್ನಿಮಿತ್ತ
ಆಮೀರ್ ಅಶ್ ಅರೀ ಬನ್ನೂರು
1904 ರಲ್ಲಿ ಹುಟ್ಟಿ 1994ರಲ್ಲಿ ಭವ ತೊರೆದ ಕನ್ನಡದ ಶ್ರೇಷ್ಠ ಮತ್ತು ಮನುಷ್ಯ ಪ್ರೇಮದ ಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು). ತೊಂಬತ್ತು ವರ್ಷಗಳ ಕಾಲ ಬದುಕಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡಕ್ಕಾಗಿ ಉತ್ಕೃಷ್ಟ ಕೃಷಿ ಮಾಡಿದವರು. ಕತೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ, ಕಂಡ ಕಾವ್ಯ, ಕಥನ ಕಾವ್ಯ, ಭಾವಗೀತೆ, ಮಹಾಕಾವ್ಯ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹಾಗೂ ವೈಚಾರಿಕ ಬರಹ ಹೀಗೆ ತರಹೇವಾರು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕುವೆಂಪು ಜೀವ ತುಂಬಿದ ಪರಿ ವಿಶೇಷ. ಅದಕ್ಕೆ ನಿತ್ಯ ನಿರಂತರ ವಾಗಿ ಶಾಲೆಗಳಲ್ಲಿ ಮಕ್ಕಳು ಪಠಿಸುವ ನಾಡಗೀತೆಯೇ ಉದಾಹರಣೆ.
ಇಪ್ಪತ್ತನಾಲ್ಕನೆ ವಯಸ್ಸಿನ ಅಮಲನ ಕಥೆ ಎಂಬ ಶಿಶು ಸಾಹಿತ್ಯದ ಮೂಲಕ ಅಧಿಕೃತವಾಗಿ ದಾಪುಗಾಲಿಟ್ಟು,
ಇಪ್ಪತ್ತೆಂಟನೇಯ ವಯಸ್ಸಿನಲ್ಲಿ ಯಮನ ಸೋಲು ಮತ್ತು ಜಲಗಾರ ನಾಟಕಗಳು ಪ್ರಕಟಿಸಿದ ಅವರು ಮತ್ತೆ ಎಂದೂ ಹಿಂತಿರುಗಿ ನೋಡಿದವರಲ್ಲ. ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಸಾಹಿತ್ಯ ಮತ್ತು ಸಾಧನೆಗೆ ಕೇಂದ್ರ ಸರಕಾರವು ಪದ್ಮಭೂಷಣ ಮತ್ತು ರಾಜ್ಯ ಸರಕಾರ ರಾಷ್ಟ್ರಕವಿ ಹಾಗೂ
ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡಕ್ಕೆ ಮೊದಲು ತಂದುಕೊಟ್ಟ ಕವಿ ಯಾರು ಎಂಬ ಪ್ರಶ್ನೆಗಿರುವ ಉತ್ತರವೇ ಕುವೆಂಪು. ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕಾಗಿದೆ ಅವೆರಡು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತದ್ದು. ಕರ್ನಾಟಕ ಸರಕಾರ ಕೊಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ತಮ್ಮದಾಗಿಸಿಕೊಂಡಿರುವುದು ಶ್ರೇಷ್ಠ ಸಂಗತಿ.
ಸರಕಾರ ಅಥವಾ ಸಂಘ-ಸಂಸ್ಥೆಗಳು ನೀಡಿರುವ ಗೌರವ ಮತ್ತು ಪ್ರಶಸ್ತಿ ಪುರಸ್ಕಾರಕ್ಕಿಂತಲೂ ಮಿಗಿಲಾಗಿ ಅವರಿಗೆ ಸಂದ ಗೌರವವೇ ಅವರ ಜನ್ಮದಿನವನ್ನು ವಿಶ್ವ ಮಾನವ ದಿನವೆಂದು 2015ರಲ್ಲಿ ಕರ್ನಾಟಕ ಸರಕಾರ ಘೋಷಣೆ ಮಾಡಿರುವುದು. ಇದರಿಂದ ಅವರ ಸಾಹಿತ್ಯ ಮತ್ತು ಮಾನವೀಯ ತತ್ವಗಳಿಗೆ ನೀರುಣಿಸಿ ಬೆಳೆಸಿದಂತಾಗಿದೆ. 6ನೇ ಶತಮಾನದಲ್ಲಿ ವಿಶ್ವ ಪ್ರವಾದಿ ಪೈಗಂಬರರು, 10ನೇ ಶತಮಾನದಲ್ಲಿ ಪಂಪ, 12ನೇ ಶತಮಾನದಲ್ಲಿ ಬಸವಣ್ಣ,
19ನೇ ಶತಮಾನದ ಆಧ್ಯಾತ್ಮಿಕ ಸಂತ ವಿವೇಕಾನಂದರು ಹಾಗೂ 20ನೇ ಶತಮಾನದ ಕವಿ ಕುವೆಂಪು ಇವರೆಲ್ಲರೂ
ವಿಶ್ವಮಾನವರು ಮತ್ತು ಅಮಾನವೀಯತೆಯನ್ನು ಭೇಧಿಸಿ, ಮಾನವೀಯತೆಯನ್ನು ಭೋದಿಸಿದವರಾಗಿದ್ದಾರೆ.
ತಮ್ಮ ಶಿಷ್ಯ ಮತ್ತು ಸಮುದಾಯಗಳಿಗೆ ಸಮಸಮಾಜದ ಪ್ರತಿಷ್ಠಾಪನೆಗೆ ಪ್ರಚೋದಿಸಿದ ಮಹಾನ್ ಚೇತನಗಳು.
ಇವರಂತೆಯೇ ಇನ್ನೂ ಅನೇಕ ವಿಶ್ವಮಾನವರ ಸಾಲೂ ಲಭ್ಯ. ಒಬ್ಬರಿಗೊಬ್ಬರು ಸಾಮ್ಯರಲ್ಲ, ವಿಶ್ವಾಸದ
ವಿಚಾರದಲ್ಲಂತೂ ಪ್ರತಿಯೊಬ್ಬರಿಗೂ ವಿಭಿನ್ನ ನಿಲುವು ಮತ್ತು ವಿಶ್ವಾಸ. ಆದರೆ ಮಾನವೀಯತೆ ಮತ್ತು ಮನುಷ್ಯತ್ವದ ಚಿಂತನೆಯಲ್ಲಿ ಅವರೆಲ್ಲರೂ ಸಮಾನರು.
ಮಾನವೀಯತೆಗಾಗಿ ಕುವೆಂಪು ಅವರ ಸಾಹಿತ್ಯಗಳು ದುಡಿದಿತ್ತು, ಮಿಡಿಯುತ್ತಿತ್ತು ಎಂಬುದನ್ನು ಒಪ್ಪಿಕೊಳ್ಳ
ಬೇಕು. 1996ರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ತಂದೆ ಕುವೆಂಪು ಅವರ ಬಗ್ಗೆ ಬರೆದ ‘ಅಣ್ಣನ ನೆನಪು’ ಎಂಬ
ಆತ್ಮಕಥನಲ್ಲಿ ಒಂದು ಸನ್ನಿವೇಶವನ್ನು ಅದ್ಭುತವಾಗಿ ವಿವರಿಸುತ್ತಾರೆ. ಹಾಗೆ ಒಂದು ದಿನ ಮನೆಗೆ ಪತ್ರಿಕೆ ಹಾಕಲು
ಬಂದ ಹುಡುಗನೊಂದಿಗೆ ಕುವೆಂಪು ಮಾರನೆಯ ದಿನ ಈ ಪತ್ರಿಕೆಯ ಬದಲು ಬೇರೆ ಪತ್ರಿಕೆಯನ್ನು ಹಾಕಲು
ಸೂಚಿಸುತ್ತಾರೆ. ಪತ್ರಿಕೆಯ ಮಾರನೇ ದಿನದಿಂದ ಬೇರೆ ಪತ್ರಿಕೆ ಹಾಕಲು ಪ್ರಾರಂಭಿಸಿದ. ಇದನ್ನು ಮನಗಂಡ ತೇಜಸ್ವಿ
ಹುಡುಗನನ್ನು ಪತ್ರಿಕೆಯ ಬದಲಾವಣೆ ಬಗ್ಗೆ ಪ್ರಶ್ನಿಸಿದರು.
‘ಅಲ್ಲ ಸಾರ್ ನಿಮ್ಮ ತಂದೆ ಪತ್ರಿಕೆ ಬದಲಾಯಿಸಲು ಹೇಳಿದ್ರು’ ಎಂದುತ್ತರಿಸಿದ. ಈ ಬೆಳವಣಿಗೆ ತೇಜಸ್ವಿಯವರಿಗೆ ಕುತೂಹಲವನ್ನು ಉಂಟು ಮಾಡಿತು. ಅದನ್ನು ತಂದೆ ಕುವೆಂಪುರೊಂದಿಗೆ ಕೇಳುತ್ತಾರೆ. ನೀವು ಪತ್ರಿಕೆಯ ಬದಲಾ ವಣೆಗೆ ಹೇಳಿದ್ರಂತೆ? ಹೌದು ಹೇಳಿದೆ. ಯಾಕೆ? ಮಗನ ಮತ್ತೊಂದು ಪ್ರಶ್ನೆ. ಅದೇನೋ ಅಡ್ಡ ಪಲ್ಲಕ್ಕಿ ಉತ್ಸವ ಎಂಬ ಚಿತ್ರ ಎಲ್ಲ ಹಾಕಿದ್ದಾರೆ ಅದಕ್ಕೆ ನಾನೇ ಬೇಡ, ಬೇರೆ ಹಾಕಲು ಹೇಳಿದೆ ಎಂದು ಮಗನಲ್ಲಿ ಉತ್ತರಿಸುತ್ತಾರೆ. ಕಾರಣ ಕೊಟ್ಟ ಕುವೆಂಪು ಜೀವಂತ ಮನುಷ್ಯನನ್ನು, ಜೀವಂತ ಮನುಷ್ಯರ ಸಂಖ್ಯೆಯೊಂದು ಹೊತ್ತುಕೊಂಡು ಹೋಗು ವುದು (ಅಡ್ಡ ಪಲ್ಲಕ್ಕಿ) ಮನುಷ್ಯ ಘನತೆಗೆ ತಕ್ಕುದಲ್ಲ, ಅದೂ ಅಮಾನವೀಯ ಗುಣವೆಂದು ಆಕ್ರೋಶ ವ್ಯಕ್ತಪಡಿಸಿ ದರು.
ಜಾತಿ, ಮತ, ಭೇದವಿಲ್ಲದೆ ಮನುಷ್ಯರನ್ನು ಗೌರವಿಸುವುದೇ ನಿಜ ಧರ್ಮವೆಂಬ ವಿಶ್ವಾಸ ಮತ್ತು ಸಿದ್ಧಾಂತದ ಮೇಲೆ
ಬದುಕನ್ನು ನಾಟಿದ್ದ ಕುವೆಂಪು ಅವೆಲ್ಲವನ್ನೂ ತೀವ್ರವಾಗಿ ವಿರೋಧಿಸುತ್ತಿದ್ದರು. ವಿಶ್ವಮಾನವ ಸಂದೇಶವನ್ನು
ಸಾರಲೆಂದು ಲೇಖನಗಳು ಮತ್ತು ಪುಸ್ತಕಗಳನ್ನೂ ಬರೆದರು. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಮನುಜಮತ-
ವಿಶ್ವಪಥ ಮತ್ತು ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಪುಸ್ತಕಗಳು ಅವುಗಳಲ್ಲಿ ಮುಖ್ಯವಾದದ್ದು ಮತ್ತು ಕನ್ನಡಿಗರು
ಓದಲೇ ಬೇಕಾಗಿದ್ದು. ಒಬ್ಬ ಸಾಹಿತಿಯಲ್ಲಿ ಇರಬೇಕಾದ ಎಲ್ಲ ಗುಣಲಕ್ಷಣಗಳು ಅವರಲ್ಲಿತ್ತು. ತನ್ನ ಸಿದ್ಧಾಂತ, ನಂಬಿಕೆ ಅಥವಾ ನಿಲುವುಗಳ ಮೇಲೆ ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ.
ಬಸವಣ್ಣ ಕೇಳಿದಂತೆ ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನು ತುಪ್ಪವ ಹೊಯ್ದರೆ, ಸಿಹಿಯಾಗಬಲ್ಲುದೆ ಕಹಿಯಹುದಲ್ಲವೇ..? ಹೇಳುವ ವಿಷಯಕ್ಕಿರುವ ರುಚಿ ಸಿಹಿ ಅಥವಾ ಕಹಿಯೇ ಇರಲಿ
ಇದ್ದದ್ದು ಇದ್ದಹಾಗೆ ಹೇಳುತ್ತಿದ್ದರು. ಎಂದೂ ರುಚಿ ಬದಲಿಸಿದವರಲ್ಲ, ಎಲ್ಲವನ್ನು, ಎಲ್ಲರನ್ನೂ ಎದುರಿಸುತ್ತಲೇ
ವಿಷಯ ಮಂಡಿಸುವ ಪ್ರೌಢಿಮೆ. ಎಡವಟ್ಟು ಮಾಡಿದರೆ ಸಿಹಿ ಕಹಿಯಾದಿತು, ಕಹಿಗೆ, ಸಿಹಿಯ ಅಭಿಷೇಕ ಮಾಡಿ ದರೂ ಸಿಹಿಯಾಗ ಬಲ್ಲದೆಂಬ ಎಂಬ ಪ್ರಜ್ಞೆಯಿಂದ ಕುವೆಂಪು ಹೊರಬಂದವರಲ್ಲ. ಅಂಕುಡೊಂಕು ನಿಲುವುಗಳ ಸಮಾಜದ ಮುಂದೆ ನೇರ ದಿಟ್ಟತನದಿಂದ ನಡೆದು, ಸಾಹಿತ್ಯದ ಉತ್ತರಿಸುವ ವಿಶೇಷ ಕೌಶಲ್ಯ ಅವರಿಗಲ್ಲದೆ ಮತ್ಯಾರಿ ಗಿತ್ತು ಹೇಳಿ? ಅಧಿಕಾರವೋ, ಅಧಿಕಾರಿಗಳಿಗೋ ಅಂಜಿಕೊಂಡವರಲ್ಲ.
ರಾಜಪ್ರಭುತ್ವದ ಕಾಲದಲ್ಲೂ ಅದನ್ನು ಓಲೈಸುವ ಕೆಲಸ ಮಾಡದೆ ತೀವ್ರವಾಗಿ ಪ್ರಜಾಪ್ರಭುತ್ವವನ್ನು ಪ್ರತಿ ಪಾದಿಸುತ್ತಿದ್ದರು. ಮೈಸೂರು ರಾಜಕುಮಾರನ ಮಗನಿಗೆ ಶಿಕ್ಷಣವನ್ನು ಕಲಿಸಬೇಕೆಂಬ ಆಜ್ಞೆ ಬಂದಾಗ, ಕಲಿಯುವ ಆಸಕ್ತಿ ಇದ್ದರೆ ನಾನು ಕಲಿಸುವ ಶಾಲೆಯಲ್ಲಿ ಬಂದು ಕಲಿಯಲಿ ಎಂದು ನೇರವಾಗಿ ಉತ್ತರಿಸುತ್ತಾರೆ. ಸ್ವಾತಂತ್ರ್ಯದ ನಂತರ ಕರ್ನಾಟಕದ ಏಕೀಕರಣ ಚಳುವಳಿಯಲ್ಲಿ ಹೋರಾಟಗಾರರಿಗೆ ಸಂಪೂರ್ಣ ಬೆಂಬಲ ವನ್ನು ಕುವೆಂಪು ನೀಡಿದರು. ಅದನ್ನು ಗಮನಿಸಿದ ಶಾಸಕರು ಮತ್ತು ಸಚಿವರ ಹಾಗೂ ರಾಜಕಾರಣಿಗಳು ಅವರ ವಿರುದ್ಧ ಮುಖ್ಯ ಮಂತ್ರಿಗೆ ದೂರನ್ನು ಕೊಟ್ಟದರು.
ಸರಕಾರವು ತಕ್ಷಣ ಕುವೆಂಪು ಅವರಿಗೆ ನೋಟಿಸ್ ನೀಡಿತು. ಅದಕ್ಕೆ ಕವಿತೆ ಮೂಲಕ ಉತ್ತರಿಸಿದ ಕುವೆಂಪುಗೆ ಮತ್ತೆಂದೂ ನೋಟಿಸ್ ಕಳಿಸುವ ಸಾಹಸ ಮಾಡಿರಲಿಲ್ಲ, ನೋಟೀಸ್ ಕೊಟ್ಟು ಕೈ ಸುಟ್ಟಿಸಿಕೊಂಡ ಪರಿಸ್ಥಿತಿ ಉಂಟಾಯಿತು. ಅಖಂಡ ಕರ್ನಾಟಕ ಎಂಬ ಕವಿತೆಯೂ ರಾಜಕಾರಣಿಗಳ ಸೊಕ್ಕು, ದರ್ಪ ಮತ್ತು ಅಹಂಕಾರದ ಎದೆಯನ್ನು ಸೀಳಿ ಬಿಟ್ಟಿದ್ದಂತೂ ನಿಜ.
ಕನ್ನಡ ನಾಡು ಸಕಲರ ಗೌರವ ಮತ್ತು ವಂದನೆಗೆ ಪಾತ್ರವಾದದ್ದು, ಈ ನಾಡಿನ ನಿರ್ಮಾಣಕ್ಕೆ ಕೋಟ್ಯಾಂತರ
ಮನಸ್ಸುಗಳ ಪ್ರಾಮಾಣಿಕ ಪರಿಶ್ರಮ, ತ್ಯಾಗ ಬಲಿದಾನವಿದೆ. ಅಂತಹ ನಾಡಿನ ನಿರ್ನಾಮ ಇಂದು ಬಂದು ನಾಳೆ
ನಿರ್ಗಮಿಸುವ ನಿಮ್ಮಿಂದ ಅದು ಹೇಗೆ ಸಾಧ್ಯವೇ? ವೆಂದು ರಾಜಕಾರಣಿಗಳಿಗೆ ಬಹಿರಂಗ ಪ್ರಶ್ನೆ ಕವಿತೆಯ ಕೇಳುತ್ತಾರೆ. ಬೂಟಾಟಿಕೆಯ ರಾಜಕೀಯದಿಂದ ಈ ನಾಡಿನ ರಕ್ಷಣೆಗಾಗಿ ಒಬ್ಬರಿಗೊಬ್ಬರಂತೆ ತಂಡೋಪ ತಂಡವಾಗಿ ಬರುತ್ತಲೇ ಇರುತ್ತಾರೆ. ಕನ್ನಡ ನಾಡು ಅಮೂಲ್ಯ ಮತ್ತು ಅಮರವಾದದ್ದು. ನೀವು ಮತ್ತು ನಿಮ್ಮ ಸರಕಾರ ಎಂದಿಗೂ ಶಾಶ್ವತ ವಲ್ಲ. ಅಖಂಡ ಕರ್ನಾಟಕಕ್ಕೆ ಸರಸ್ವತಿಯೇ ರಚಿಸಿರುವ ಸರಕಾರವಿದೆ. ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ! ಕನ್ನಡ ಸಾಹಿತ್ಯದ ಮೊದಲ ಪರಂಪರೆಯನ್ನು ಪ್ರಾರಂಭಿಸಿದ ಅಮೋಘವರ್ಷಣ್ ನೃಪತುಂಗ ಅಖಂಡ ಕರ್ನಾಟಕದ ಚಕ್ರವರ್ತಿ, ಕನ್ನಡದ ಮೊದಲ ಕವಿ ಪಂಪ ಈ ನಾಡಿನ ಅಜೀವ ಮುಖ್ಯಮಂತ್ರಿ.
ರನ್ನ, ಜನ್ನ, ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ಸರ್ವಜ್ಞ ಮತ್ತು ಷಡಕ್ಷರಿ ಸೇರಿದ ಸಚಿವರುಗಳ
ತಂಡವೇ ಅಖಂಡ ಕರ್ನಾಟಕದ ನಿಜವಾದ ಮಂತ್ರಿ ಮಂಡಲವೆಂದು ಅಂದಿನ ಸರಕಾರವನ್ನು ಕಟುವಾಗಿ ವಿರೋಧಿ ಸುತ್ತಾರೆ.
ಕುವೆಂಪು ಧನಾತ್ಮಕ ನಿಲುವು ಮತ್ತು ಸಾಮಾಜಿಕ ಪ್ರಜ್ಞೆಗೆ ಮತ್ತೊಂದು ಹೆಸರು. ಭೌತಿಕವಾಗಿ ಅಗಲಿದ ಕುವೆಂಪು
ಇಲ್ಲಿನ ಪ್ರತಿ ಕಾಲ ಮತ್ತು ನಿಸರ್ಗದೊಳಗೆ ನಿತ್ಯ ಜೀವಿಸುತ್ತಿದ್ದಾರೆ. ಕಾರಣ ಯುಗದ ಕವಿ ಜಗದ ಕವಿ ಎಂದು ವರಕವಿ ಬೇಂದ್ರೆಯವರಿಂದ ಎನಿಸಿಕೊಂಡಿರುವ ಬಿರುದು ಕಾಲಾಂತ್ಯದವರೆಗೂ ಕುವೆಂಪುರವರನ್ನು ಜನರ ನಡುವೆ
ಜೀವಿಸುವಂತೆ ಮಾಡಿದೆ.
(ಲೇಖಕರು: ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ