Friday, 13th December 2024

ಭಾಷಾಭಿಮಾನ, ದುರಭಿಮಾನಗಳ ನಡುವೆ…

-ಎಂ.ಕೆ.ಭಾಸ್ಕರ್ ರಾವ್

ಕರ್ನಾಟಕದಂಥ ರಾಜ್ಯಗಳಲ್ಲಿ ಬಾಲಬಿಚ್ಚುವ ಐಎಎಸ್ ಅಧಿಕಾರಿಗಳು ತಮಿಳುನಾಡಿನಲ್ಲಿ ಅದನ್ನು ಮುದುರಿಕೊಳ್ಳುವುದಕ್ಕೆ ಕಾರಣ ತಮಿಳಿನ ವಿಚಾರದಲ್ಲಿ ಅಲ್ಲಿನ ಎಲ್ಲ ಪಕ್ಷದವರ ರಾಜಿಹಿರತ ನಿಲುವು. ಹಾಗಾಗಿ ತಮಿಳುನಾಡು ಕೇಡರ್‌ಗೆ ಬರುವ ಐಎಎಸ್‌ಗಳು ಆರಂಭದಲ್ಲೇ ತಮಿಳನ್ನು ಕಲಿತಿರುತ್ತಾರೆ.

ಮುಂಬೈಯಲ್ಲಿ ನಡೆದ ‘ಡಾಟೆಡ್’ ಇಂಡಿಯ ಒಕ್ಕೂಟದ ಮೂರನೇ ಸಮಾವೇಶ, ಇದಕ್ಕೂ ಮೊದಲು ಪಟನಾ ಮತ್ತು ಬೆಂಗಳೂರಲ್ಲಿ ನಡೆದ ಸಭೆಗಿಂತ ಹೆಚ್ಚು ಗಮನ ಸೆಳೆಯಿತು. ಈ ಮೊದಲು ೨೬ ಪಕ್ಷಗಳ ಒಕ್ಕೂಟ
ವಾಗಿದ್ದ ಇದರೊಂದಿಗೆ ಇನ್ನೂ ಎರಡು ಪಕ್ಷಗಳು ಕೈಜೋಡಿಸಿ ಒಕ್ಕೂಟದ ಸದಸ್ಯ ಬಲ ೨೮ಕ್ಕೆ ಏರಿತು ಎನ್ನುವುದು ಅಂಥ ಮಹತ್ವದ ಸುದ್ದಿಯೇನೂ ಅಲ್ಲ. ಮುಂದಿನ ಸಭೆ ಹೊತ್ತಿಗೆ ಇನ್ನೂ ಕೆಲವು ಪಕ್ಷಗಳು ಸೇರಬಹುದು. ಅದು ಒತ್ತಟ್ಟಿಗಿರಲಿ. ಒಕ್ಕೂಟದ ಅತ್ಯಂತ ಪ್ರಮುಖ ಪಕ್ಷವಾದ ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಭೆ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಳೆದ ತಮಿಳು ಭಾಷಾ ಪರ ನಿಲುವು ಅಚ್ಚರಿ ಮೂಡಿಸಿದ ಬೆಳವಣಿಗೆ. ದೇಶದ ಮೇಲೆ ಹಿಂದಿಯನ್ನು ಬಲಾತ್ಕಾರದಲ್ಲಿ ಹೇರುವ ಕೇಂದ್ರ ಸರಕಾರದ ನೀತಿಯನ್ನು ಧಿಕ್ಕರಿಸಿ ನಿಂತ ರಾಜ್ಯ ಆ ಕಾಲದ ಮದ್ರಾಸು ಪ್ರಾಂತ್ಯ. ೫೦-೬೦ರ ದಶಕದಲ್ಲಿ ತಮಿಳರು ತಳೆದ ಹಿಂದಿ ವಿರೋಧಿ ನಿಲುವು, ದೇಶದ ಅನೇಕ ಹಿಂದಿಯೇತರ ರಾಜ್ಯಗಳಿಗೆ ಮಾದರಿಯಾಗಿದ್ದು ಹಳೆಯ ಕಥೆ. ತ್ರಿಭಾಷಾ ಸೂತ್ರವನ್ನು ಹೇರುವ ಕೇಂದ್ರದ ಆಗಿನ ಕಾಂಗ್ರೆಸ್ ಸರಕಾರದ ವಿರುದ್ಧ ಬಂಡಾಯ ಸಾರಿದ್ದು ರಾಮಸ್ವಾಮಿ ನಾಯ್ಕರ್ ನೇತೃತ್ವದ ದ್ರಾವಿಡ ಕಳಗಂ (ಡಿಕೆ). ಈ ಆಂದೋಲನವನ್ನು ಡಿಎಂಕೆ, ಅಣ್ಣಾಡಿ ಎಂಕೆ ಸೇರಿದಂತೆ ಈಗಿನ ತಮಿಳುನಾಡಿನ ಎಲ್ಲ ಪ್ರಾದೇಶಿಕ ಪಕ್ಷಗಳೂ ವ್ರತದಂತೆ ಪಾಲಿಸಿಕೊಂಡು
ಬಂದಿವೆ.

ಈ ಹಿನ್ನೆಲೆಯಲ್ಲಿ ಕಳೆದ ವಾರ ‘ಡಾಟೆಡ್’ ಇಂಡಿಯ ಒಕ್ಕೂಟದ ಸಭೆ ನಂತರದಲ್ಲಿ ನಡೆದ ಮಾಧ್ಯಮ ಗೋಷ್ಠಿ ವಿಶೇಷ ಕುತೂಹಲ ಕೆರಳಿಸಿತು. ಗೋಷ್ಠಿಯಲ್ಲಿ ಒಕ್ಕೂಟದ ಬಹುತೇಕ ಎಲ್ಲ ನಾಯಕರೂ ಮಾತಾಡಿ ತಮ್ಮ ತಮ್ಮ ನಿಲುವು ಹಂಚಿಕೊಂಡರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯವರು ತಮ್ಮ ಬದ್ಧ ರಾಜಕೀಯ ವೈರಿ ಕಮ್ಯುನಿಸ್ಟ್ ಪಕ್ಷಗಳಿಗೆ ದೊರೆಯುತ್ತಿರುವ ಆದ್ಯತೆ ವಿರೋಧಿಸಿ ಸ್ಥಳ ತೆರವು ಮಾಡಿದ್ದಕ್ಕಿಂತ ದೊಡ್ಡ ಸುದ್ದಿಯಾಗಿದ್ದು ಮಾಧ್ಯಮವನ್ನುದ್ದೇಶಿಸಿ ಮಾತಾಡಲು ಡಿಎಂಕೆ ನಾಯಕ ಸ್ಟಾಲಿನ್ ಆಯ್ಕೆ ಮಾಡಿ ಕೊಂಡ ಭಾಷೆ ತಮಿಳು ಆಗಿತ್ತು ಎನ್ನುವುದು. ಭಾರತದ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ ಎನ್ನುವ ರಾಮಮನೋಹರ ಲೋಹಿಯಾ ವಾದ ಎಲ್ಲ ಕಾಲಕ್ಕೂ ಸಮರ್ಥನೀಯ ವಾದವೇ ಸರಿ. ಆದರೆ ಮುಂಬೈಯಂಥ ಮಹಾನಗರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹಾಜರಿದ್ದ ತಮಿಳು ಬಲ್ಲ ವರದಿಗಾರರು ಎಷ್ಟು ಎನ್ನುವುದನ್ನು ಲೆಕ್ಕಕ್ಕೆ ತೆಗೆದು ಕೊಂಡರೆ ಸ್ಟಾಲಿನ್ ಪ್ರದರ್ಶಿಸಿದ್ದು ಅಂಧ ಭಾಷಾಭಿಮಾನ ಎಂಬ ವಾದವೂ ಬಲಿಯುತ್ತದೆ. ಸ್ಟಾಲಿನ್ ಈ ಅರ್ಥದಲ್ಲಿ ಉಗ್ರ ಭಾಷಾಭಿಮಾನಿ ತಮಿಳಿಗ ಆಗಿದ್ದರ ಹಿಂದಿರುವ ಕಾರಣ ಅವರ ತಂದೆಯೇ.

ಕರುಣಾನಿಧಿಯವರಿಗೆ ಇಂಗ್ಲಿಷ್ ಅಥವಾ ಇನ್ನಿತರ ಕೆಲವಾದರೂ ಭಾಷಾಜ್ಞಾನ ಇರಲಿಲ್ಲವೆಂದೇನೂ ಅಲ್ಲ. ಆದರೆ ಅವರು ಸಾರ್ವಜನಿಕವಾಗಿ ಇಂಗ್ಲಿಷ್ ಅಥವಾ ಬೇರೆ ಭಾರತೀಯ ಭಾಷೆಯನ್ನು ಬಳಸಲಿಲ್ಲ. ಇನ್ನು ಹಿಂದಿ ಮಾತಾಡಲು ಅವರಿಗೆ ಬರುತ್ತಿತ್ತೋ ಇಲ್ಲವೋ ಪರೀಕ್ಷಿಸಿ ಖಚಿತಪಡಿಸಿಕೊಂಡವರಿಲ್ಲ. ಐದು ಬಾರಿ ಪ್ರಮಾಣವಚನ ಸ್ವೀಕರಿಸಿ ಸುಮಾರು ಇಪ್ಪತ್ತು ವರ್ಷ ಕಾಲ ತಮಿಳುನಾಡಿನ ಸಿಎಂ ಆಗಿದ್ದ ಮುತ್ತುವೇಲ್ ಕರುಣಾನಿಧಿ, ಸಾರ್ವಜನಿಕ ಬದುಕಿನಲ್ಲಿ ತಮಿಳು ಹೊರತಾಗಿ ಅನ್ಯಭಾಷೆಯಲ್ಲಿ ಮಾತನಾಡುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡಿದ್ದರು. ಭಾಷಾ ಬೆಳವಣಿಗೆ ದೃಷ್ಟಿಯಿಂದ ಇದು ಅತ್ಯುತ್ತಮ ನಿರ್ಧಾರವಾಯಿತೆನ್ನುವುದು ಇವತ್ತು ತಮಿಳು ವಿಜೃಂಭಿಸುತ್ತಿರುವ ರೀತಿಯನ್ನು ನೋಡಿದರೆ ಮನದಟ್ಟಾಗುತ್ತದೆ. ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಭಾಷಾ ಬೆಳವಣಿಗೆಗೆ ಬಹಳ ದೊಡ್ಡ ಅಡ್ಡಗಾಲು ಹಾಕುವವರು ಐಎಎಸ್ ಅಧಿಕಾರಿಗಳು. ಆಕಾಶದಿಂದ ಇಳಿದು ಬಂದವರು ತಾವೆಂಬ ಭ್ರಮೆಯಲ್ಲೇ ತೇಲಾಡುವ ಈ ಅಧಿಕಾರಿಗಳು ಕೆಲಸಕ್ಕೆ ತಾವು ನಿಯೋಜಿತವಾಗಿರುವ ರಾಜ್ಯದ ಆಡಳಿತ ಭಾಷೆಯನ್ನು ಕಲಿಯಲು ಎಳ್ಳುಕಾಳಿನಷ್ಟೂ ಆಸಕ್ತಿ ತೋರುವುದಿಲ್ಲ; ಇಂಗ್ಲಿಷ್‌ನಲ್ಲೇ ವ್ಯವಹರಿಸುವ ಅವರು, ಇಲಿಯನ್ನು ಬೆಕ್ಕು ಆಟ ಆಡಿಸಿದಂತೆ ಅಧಿಕಾರಸ್ತ ರಾಜಕಾರಣಿಗಳನ್ನು ಆಡಿಸುತ್ತಾರೆ. ಸ್ವಂತಿಕೆ ಕಳೆದುಕೊಂಡಿರುವ ಬಹುತೇಕ ರಾಜಕಾರಣಿಗಳು ಐಎಎಸ್ ಅಧಿಕಾರಿಗಳು ಹಾಕಿದ ತಾಳಕ್ಕೆ ಮಂಗ್ಯಾಗಳಂತೆ ಹೆಜ್ಜೆ ಹಾಕುತ್ತಾರೆ.

ತಮಿಳುನಾಡಿನಲ್ಲೂ ವಿಪರೀತದ ಪರಾಕಾಷ್ಠೆ ಮುಟ್ಟಿದ್ದ ಸ್ಥಳೀಯ ಭಾಷಾ ವಿರೋಧದ ಧೋರಣೆಗೆ ಬಹಳ ದೊಡ್ಡ ರೀತಿಯಲ್ಲಿ ಕಡಿವಾಣ ಹಾಕಿದವರು ನಿಸ್ಸಂಶಯವಾಗಿ ಡಿಎಂಕೆ ನಾಯಕರು, ಮುಖ್ಯವಾಗಿ ಕರುಣಾನಿಧಿ. ಕಮಲಹಾಸನ್ ಹೇಳುವಂತೆ ದಿನಕ್ಕೆ ಒಂದಾದರೂ ತಮಿಳು ಪದ್ಯ ಬರೆಯುವ ಅಭ್ಯಾಸ ರೂಢಿಸಿಕೊಂಡಿದ್ದ ಕರುಣಾನಿಧಿಯವರೊಳಗಿನ ಬರಹಗಾರ ತಮಿಳು ಭಾಷಾ ಅಭಿವೃದ್ಧಿಗೆ ತೆಗೆದುಕೊಂಡ ಕಾಳಜಿ ಸಾರ್ವಕಾಲಿಕ ಆದರ್ಶ. ತಂದೆಯ ಈ ಗುಣ ರಕ್ತಗತವಾಗಿ ಸ್ಟಾಲಿನ್‌ರಲ್ಲಿ ಹರಿದುಬಂದಿದೆ ಎಂದು ಇದರ ಅರ್ಥವಲ್ಲ. ತಮಿಳುನಾಡಿನಲ್ಲಿ ರಾಜಕಾರಣದಲ್ಲಿ ಏಗಬೇಕು ಎಂದರೆ ಎರಡು ವಿಷಯಗಳನ್ನು ಸದಾ ಜೀವಂತವಾಗಿಡಬೇಕಾದ ಅನಿವಾರ್ಯವಿದೆ. ಅದರಲ್ಲಿ ಒಂದು, ತಮಿಳು ಭಾಷೆಯನ್ನು ಹೋದಲ್ಲಿ ಬಂದಲ್ಲಿ ವೈಭವೀಕರಿಸುವುದು; ಎರಡನೆಯದು ಕಾವೇರಿ ಜಲ ವಿವಾದವನ್ನು ಸದಾಕಾಲಕ್ಕೂ ಜೀವಂತವಾಗಿಡುವುದು. ಸ್ಟಾಲಿನ್ ಈ ರಹಸ್ಯವನ್ನು ಅರಿತವರೇ ಆಗಿರುವುದರಿಂದ ಮುಂಬೈಯಾದರೂ ಸೈ ಲಂಡನ್ ಆದರೂ ಸೈ ಅವರ ಸಾರ್ವಜನಿಕ ಬದುಕು ತಮಿಳುಮಯವಾಗಿರುತ್ತದೆ.

ಕರ್ನಾಟಕದಂಥ ರಾಜ್ಯಗಳಲ್ಲಿ ಬಾಲವನ್ನು ಹರಿಯಬಿಡುವ ಐಎಎಸ್ ಅಧಿಕಾರಿಗಳು ತಮಿಳು ನಾಡಿನಲ್ಲಿ ಬಾಲ ಮುದುಡಿಕೊಂಡು ಬಿದ್ದಿರುವುದಕ್ಕೆ ಕಾರಣ ಸ್ಥಳೀಯ ಭಾಷೆ ತಮಿಳಿನ ವಿಚಾರದಲ್ಲಿ ಆ ರಾಜ್ಯದ ಎಲ್ಲ ಪಕ್ಷ ರಾಜಕಾರಣಿಗಳ ರಾಜಿಹಿರತ ನಿಲುವು. ಹಾಗಾಗಿ ತಮಿಳುನಾಡು ಕೇಡರ್‌ಗೆ ಬರುವ ಐಎಎಸ್ ಅಧಿಕಾರಿಗಳು ಆರಂಭದಲ್ಲೆ ತಮಿಳನ್ನು ಓದಲು ಬರೆಯಲು ಮಾತಾಡಲು ಕಲಿತಿರುತ್ತಾರೆ. ಎಲ್ಲಿಂದಲೋ ಬಂದು ಅಚ್ಚ ಕನ್ನಡಿಗರನ್ನೂ ಮೀರಿಸುವ ರೀತಿಯಲ್ಲಿ ಕನ್ನಡವನ್ನೂ ಕರ್ನಾಟಕ ಸಂಸ್ಕೃತಿಯನ್ನೂ ಮೈಗೂಡಿಸಿಕೊಂಡ ಅಧಿಕಾರಿಗಳ ಸಂಖ್ಯೆ ಕಡಿಮೆಯಾದರೂ ನಮ್ಮಲ್ಲೂ ಇದ್ದಾರೆ. ಅಂಥ ಕೆಲವರಲ್ಲಿ ಮುಖ್ಯವಾದವರು ಪಂಜಾಬಿನಲ್ಲಿ ಹುಟ್ಟಿಬೆಳೆದು ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅಡಿಷನಲ್ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಚಿರಂಜೀವಿ ಸಿಂಗ್. ಅವರು ಸೇವೆಯಲ್ಲಿದ್ದ ಸಮಯದಲ್ಲಿ ಉತ್ತರ ಭಾರತದ ರಾಜ್ಯವೊಂದರ ಅಧಿಕಾರಿ ಹಿಂದಿಯಲ್ಲಿ ಅಧಿಕೃತ ಪತ್ರ ಬರೆದಿದ್ದರು. ಚಿರಂಜೀವಿ ಸಿಂಗ್ ಹೇಗೂ ಹಿಂದಿ ಬಲ್ಲ ಅಧಿಕಾರಿ ಎನ್ನುವುದು ಪತ್ರ ಬರೆದ ಆ ಅಧಿಕಾರಿಯ ನಿಲುವಾಗಿತ್ತು. ರಾಜ್ಯರಾಜ್ಯಗಳ ನಡುವೆ ಸಂವಹನಕ್ಕೆ ಇಂಗ್ಲಿಷ್ ಭಾಷೆಯನ್ನು ದೇಶ ಒಪ್ಪಿಕೊಂಡಿದೆ ಯಾದರೂ ಆ ಅಧಿಕಾರಿ ಹಿಂದಿಯಲ್ಲಿ ಪತ್ರ ಬರೆದು ಉದ್ಧಟತನ ತೋರಿದ್ದರು. ಒಡಿಶಾದ ಅಧಿಕಾರಿ ಆ ಭಾಷೆಯಲ್ಲಿ ಕರ್ನಾಟಕಕ್ಕೋ ಆಂಧ್ರಕ್ಕೋ ಪತ್ರ ಬರೆದರೆ ಹೇಗಿರುತ್ತದೆ? ಹಿಂದಿಯಲ್ಲಿ ಬಂದ ಆ ಪತ್ರಕ್ಕೆ ಕನ್ನಡದಲ್ಲಿ ಉತ್ತರಿಸುವ ಮೂಲಕ ಚಿರಂಜೀವಿ ಸಿಂಗ್ ಆ ಅಧಿಕಾರಿ ಎಚ್ಚೆತ್ತುಕೊಳ್ಳುವಂತೆ ಮಾಡಿದ್ದರು. ಕರ್ನಾಟಕದಂಥ ರಾಜ್ಯಗಳಲ್ಲಿ ಈ ಗುಣಾದರ್ಶದ
ಅಧಿಕಾರಿಗಳು ಅಲ್ಲೊಬ್ಬರು ಇಲ್ಲೊಬ್ಬರು. ಆದರೆ ತಮಿಳುನಾಡಿನಲ್ಲಿ ಸೇವೆಗೆ ಬರುವ ಪರ ಭಾಷಾ ಐಎಎಸ್ ಅಧಿಕಾರಿಗಳು ತಮಿಳು ಕಲಿಯದಿದ್ದರೆ ಅಂಥವರಿಗೆ ಭವಿಷ್ಯಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ.

ರೈತ ಸಂಘದ ಅಧ್ಯಕ್ಷರಾಗಿದ್ದ ಎಂ.ಡಿ. ನಂಜುಂಡ ಸ್ವಾಮಿಯವರು ಈಗ ಇಲ್ಲ. ಅಗಾಧ ಇಂಗ್ಲಿಷ್ ಜ್ಞಾನವಿದ್ದ ಅವರು ಅಷ್ಟೇ ಪ್ರಮಾಣದ ಕನ್ನಡ ಭಾಷಾ ಸಂಸ್ಕೃತಿ ಪ್ರೇಮಿಯೂ ಆಗಿದ್ದರು. ರೈತರ ಜ್ವಲಂತ ಸಮಸ್ಯೆಯೇ ಅಲ್ಲದೆ ಮನ್ಸಾಂಟೋ ಕುಲಾಂತರಿ ತಳಿ ವಿರುದ್ಧ, ಕೆಂಟುಕಿ ಚಿಕನ್ ವಿರುದ್ಧ ಹೋರಾಟ ಸಾರಿದ್ದ ಅವರು ಅಂತಾರಾಷ್ಟ್ರೀಯ ಮಾಧ್ಯಮದ ಗಮನ ಸೆಳೆದಿದ್ದರು. ಹಾಗಾಗಿ ಅವರ ಮಾಧ್ಯಮ ಗೋಷ್ಠಿ ಕಿಕ್ಕಿರಿಯುತ್ತಿತ್ತು. ಕನ್ನಡವಲ್ಲದೆ ಇಂಗ್ಲಿಷ್ ಮತ್ತಿತರ ಭಾಷಾ ವರದಿಗಾರರು ಅಲ್ಲಿ ನೆರೆಯುತ್ತಿದ್ದರು. ತಾವು ಹೇಳ ಬೇಕಾಗಿರುವುದನ್ನು ಕನ್ನಡದಲ್ಲೇ ವಿವರಿಸುತ್ತಿದ್ದ, ತಮ್ಮ ಹೇಳಿಕೆಯನ್ನು ಕನ್ನಡದಲ್ಲೇ ಅಚ್ಚು ಹಾಕಿಸಿ ಹಂಚುತ್ತಿದ್ದ ನಂಜುಂಡ ಸ್ವಾಮಿ ಇಂಗ್ಲಿಷ್‌ನಲ್ಲಿ ಬೈಟ್ ಕೇಳಿದ ವರದಿಗಾರರಿಗೆ ಕನ್ನಡ ಕಲಿಯಿರಿ ಎಂದು ತಾಕೀತು ಮಾಡುತ್ತಿದ್ದರು. ಇಂಗ್ಲಿಷ್‌ನಲ್ಲಿ ಪತ್ರಿಕಾ ಹೇಳಿಕೆ ಕೇಳಿದವರಿಗೆ ತಾವು ರೈತರೆಂದೂ ರೈತರ ಭಾಷೆ ಕನ್ನಡವೆಂದೂ ಯಾವುದೇ ಮುಲಾಜು ದಾಕ್ಷಿಣ್ಯ ಇಲ್ಲದೆ ಹೇಳಿ ಬಾಯಿ ಮುಚ್ಚಿಸುತ್ತಿದ್ದರು. ತಮಿಳುನಾಡಿನಲ್ಲಿ ಕೆಲಸ ಮಾಡುವ ಅನ್ಯಭಾಷಾ ವರದಿಗಾರರು ತಮಿಳು ಕಲಿಯುವ ಅನಿವಾರ್ಯ ಅಲ್ಲಿ ಸೃಷ್ಟಿಯಾಗಿರುವುದು ಕರುಣಾ ನಿಧಿ ಮುಂತಾದವರ ತಮಿಳು ಪ್ರೇಮದಿಂದ. ಆದರೆ ಕರ್ನಾಟಕದಲ್ಲಿ ಅನ್ಯ ಭಾಷಾ ವರದಿಗಾರರನ್ನು ಮೆಚ್ಚಿಸುವ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡುತ್ತಿದ್ದಾರೆ. ತಮಗೆ ಬಾರದ ಭಾಷೆಯಲ್ಲಿ ತಪ್ಪುತಪ್ಪಾಗಿ ಹೇಳುತ್ತ ಕರ್ನಾಟಕದ ಮಾನವನ್ನು ವ್ಯವಸ್ಥಿತವಾಗಿ ಹರಾಜು ಹಾಕುತ್ತಿದ್ದಾರೆ.

ಇಷ್ಟೆಲ್ಲ ಹೇಳಿದ ಬಳಿಕವೂ ಸ್ಟಾಲಿನ್ ತಮ್ಮ ತಮಿಳು ಅಭಿಮಾನ ಮೆರೆಯಲು ಆಯ್ಕೆ ಮಾಡಿಕೊಂಡ ಮುಂಬೈನ ಸ್ಥಳ, ಸನ್ನಿವೇಶ ಅದಕ್ಕೆ ಪೂರಕ ವಾಗಿರಲಿಲ್ಲ ಎಂದು ಹೇಳಲೇಬೇಕಾಗಿದೆ. ಭಾಷೆಯೊಂದು ಮುಖ್ಯವಾಗಿ ಸಂಪರ್ಕ ಸಾಧನ. ಸಂವಹನಕ್ಕೆ ಒಂದು ಸೇತುವೆ. ಚನ್ನೈಯಲ್ಲಿ ವಿಧಾನ ಸೌಧದ ಪೀಠದಲ್ಲಿ ಕುಳಿತು ತಮಿಳು ಬಾರದವರಿಗೆ ಪಾಠ ಹೇಳಿ ತಿದ್ದುವುದಕ್ಕೂ ದೂರದ ಮುಂಬೈಯಲ್ಲಿ ಕುಳಿತು ಬೇಕಿದ್ದರೆ ಕೇಳಿಸಿಕೊಳ್ಳಿ ಬೇಡವಾದರೆ ಬಿಡಿ ಎನ್ನುವುದಕ್ಕೂ ಇರುವ ವ್ಯತ್ಯಾಸದ ಅಂತರ ಅಜಗಜ. ಅಂಥ ಕಡೆಗಳಲ್ಲಿ ನಾನು ಹೇಳುವುದನ್ನು ಹೇಳುತ್ತೇನೆ, ಬೇಕಾದರೆ ಕೇಳಿಸಿಕೊಳ್ಳಿ ಬೇಡವಾದರೆ ಬಿಡಿ ಎಂಬ ಧೋರಣೆಗಿಂತ ಹೆಚ್ಚಿನ ಅಗತ್ಯವಿರುವುದು ನಾನು ಹೇಳುವುದು ಹೊರ ಜಗತ್ತಿನ ಗಮನಕ್ಕೆ ಬರಬೇಕು ಎನ್ನುವುದಾಗಿರಬೇಕು. ಅಷ್ಟರಮಟ್ಟಿಗೆ ಸ್ಟಾಲಿನ್ ಫೇಲಾದರೆ..? ಈ ಕ್ಷಣದಲ್ಲಿ ನಿಂತು ಪ್ರತಿಕ್ರಿಯಿಸುವುದಾದರೆ ಆ ಉತ್ತರ ಹೌದು ಎಂದಲ್ಲದೆ ಬೇರೇನೂ ಅಲ್ಲ.