Friday, 20th September 2024

ಉಪರಾಷ್ಟ್ರಪತಿ ಪ್ರಶಂಸೆ ಮತ್ತು ಸ್ವಾಭಿಮಾನಿ ಪತ್ರಕರ್ತನ ಸಾತ್ವಿಕ ಸಿಟ್ಟು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ನಾನು ಹುಬ್ಬಳ್ಳಿಯ ’ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡುವಾಗ, ಪಾಟೀಲ ಪುಟ್ಟಪ್ಪನವರ ’ಪ್ರಪಂಚ’ ಮತ್ತು ’ವಿಶ್ವವಾಣಿ’ಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಜೀವನ ಎಂಬ ಡೆಸ್ಕ್ ಪತ್ರಕರ್ತರ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದೆ.

ಪುಟ್ಟಪ್ಪನವರು ಕನ್ನಡ ಚಳವಳಿ, ಹೋರಾಟ, ಪ್ರವಾಸ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಅವರ ಪತ್ರಿಕೆಗಳು ಮಾತ್ರ
ಚೆಂದವಾಗಿ ಮೂಡಿ ಬರುತ್ತಿದ್ದವು. ಅದಕ್ಕೆ ಮುಖ್ಯ ಕಾರಣ ಜೀವನ. ಪುಟ್ಟಪ್ಪನವರಿಗೆ ಜೀವನ ಅವರ ಮೇಲೆ ಅಪಾರ ನಂಬಿಕೆ. ಹೀಗಾಗಿ ಅವರ ಮೇಲೆ ಪತ್ರಿಕೆ ಗಳನ್ನು ಬಿಡುತ್ತಿದ್ದರು. ಮೂಲತಃ ಒಳ್ಳೆಯ ಲೇಖಕರಾಗಿದ್ದ ಜೀವನ, ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ ಅವರು ಸ್ವಾತಂತ್ರ್ಯ ಯೋಧರಿಗೆ ಸರಕಾರ ಕೊಡುವ ಪಿಂಚಣಿಗೆ ಕೈಯೊಡ್ಡಲಿಲ್ಲ. ’ಸರಕಾರ ಮುಂದೆ ಪಿಂಚಣಿ ಕೊಡುತ್ತದೆ ಎಂಬ ಕಾರಣಕ್ಕೆ ನಾನು ಜೈಲಿಗೆ ಹೋಗಿರಲಿಲ್ಲ. ಈ ಮೂರು ಕಾಸು ಯಾರಿಗೆ ಬೇಕು?’ ಎಂದು ಅವರು ಅದನ್ನು ನಿರಾಕರಿಸಿಬಿಟ್ಟರು.

’ವಿಶ್ವವಾಣಿ’ ಕಾರ್ಯಾಲಯದಲ್ಲೇ ಜೀವನ ಮಲಗುತ್ತಿದ್ದರು. ಅದೇ ಅವರಿಗೆ ಮನೆಯಾಗಿತ್ತು. ಅದೇ ಜೀವನ ವಾಗಿತ್ತು. ಅವರು ಕೊನೆ ತನಕ ಪುಟ್ಟಪ್ಪನವರು ಕೊಡುತ್ತಿದ್ದ ಅಷ್ಟೋ – ಇಷ್ಟೋ ಹಣದಲ್ಲಿಯೇ ಬದುಕು ಸಾಗಿಸಿ ದರು. ತಮಗೆ ಎಷ್ಟು ಪಗಾರ ಎಂಬುದನ್ನು ಸಹ ಅವರು ಕೇಳಲಿಲ್ಲ. ಅದಕ್ಕಿಂತ ಹೆಚ್ಚಿನ ಸಂಬಳ ಕೊಡುತ್ತೇವೆ ಎಂಬ ಆಮಿಷ ಒಡ್ಡಿ, ಬೇರೆ ಪತ್ರಿಕೆಯವರು ಕರೆದರೂ ಅವರು ಬೇರೆಲ್ಲೂ ಹೋಗಲಿಲ್ಲ. ಜೀವನ ಅಂತರಮುಖಿ. ತಾವಾಯಿತು, ತಮ್ಮ ಕೆಲಸ ವಾಯಿತು. ಅವರಿಗೆ ಪಾಟೀಲ ಪುಟ್ಟಪ್ಪನವರನ್ನು ಕಂಡರೆ ಅತೀವ ಗೌರವ. ಅವರ ಜತೆ ಕೆಲಸ ಮಾಡುವುದೇ ತಮ್ಮ ಸೌಭಾಗ್ಯ ಎಂದು ಭಾವಿಸಿದ್ದರು. ಹೀಗಾಗಿ ಅವರು ಸಂಬಳ, ಸಾರಿಗೆ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ.

ಹಾಗಂತ ಜೀವನ ಸ್ವಾಭಿಮಾನಿ ಮತ್ತು ಖಡಾಖಡಿ ಸ್ವಭಾವದವರು. ಒಮ್ಮೆ ಹಾವೇರಿಯಲ್ಲಿ ಒಂದೇ ವೇದಿಕೆ ಯಲ್ಲಿ ಭಾರತದ ಉಪರಾಷ್ಟ್ರಪತಿಯಾಗಿದ್ದ ಬಿ.ಡಿ.ಜತ್ತಿ ಅವರಿಗೆ ಸನ್ಮಾನ ಕಾರ್ಯಕ್ರಮ. ಸಂಘಟಕರು ಮತ್ತು ಭಾಷಣಕಾರರು ಜತ್ತಿಯವರನ್ನು ಅತಿಯಾಗಿ ಪ್ರಶಂಸಿಸಲಾರಂಭಿಸಿದರು. ತಮ್ಮನ್ನು ಇನ್ನಷ್ಟು ಪ್ರಶಂಸಿ ಸುವಂತೆ ಭಾಷಣ ಕಾರರಿಗೆ ಹೇಳಿ ಎಂದು ಜತ್ತಿಯವರು ಚೀಟಿ ಬರೆದು ಕಳಿಸಿದರು. ಇದನ್ನು ಪಕ್ಕ ದಲ್ಲಿಯೇ ಕುಳಿತಿದ್ದ ಜೀವನ ತಟ್ಟನೆ ನೋಡಿದರು. ಮೊದಲೇ ಜತ್ತಿಯವರನ್ನು ಯದ್ವಾತದ್ವಾ ಹೊಗಳುವುದನ್ನು ಕೇಳಿ ರೋಸಿ ಹೋಗಿದ್ದ ಜೀವನ, ಯಾವಾಗ ಖುದ್ದು ಜತ್ತಿಯವರೇ ತಮ್ಮನ್ನು ಇನ್ನಷ್ಟು ಹೊಗಳುವಂತೆ ಚೀಟಿ ಬರೆದು ಕಳಿಸಿದ್ದನ್ನು ಕಂಡು ಕುದ್ದು ಹೋದರು.

ಅದಾದ ಬಳಿಕ ಅತಿಥಿಗಳಲ್ಲಿ ಒಬ್ಬರಾದ ಜೀವನ ಭಾಷಣ. ತಮಗೆ ಸನ್ಮಾನ ಮಾಡಿದ್ದರ ಬಗ್ಗೆ ಕೃತಜ್ಞತೆ ಸಲ್ಲಿಸಿದ ಜೀವನ, ನಂತರ ನೇರವಾಗಿ ಜತ್ತಿಯವರನ್ನು ಉದ್ದೇಶಿಸಿ, ’ಈ ಕಾರ್ಯಕ್ರಮದ ಆರಂಭಕ್ಕೆ ಮೊದಲು ನನಗೆ ಜತ್ತಿಯವರ ಬಗ್ಗೆ ಗೌರವವಿತ್ತು. ಈಗ ಇಲ್ಲ. ಇದ್ದ ಒಳ್ಳೆಯ ಭಾವನೆಯೆಲ್ಲ ಹೊರತು ಹೋಯಿತು, ಕ್ಷಮಿಸಿ. ಇಂಥ ಸನ್ಮಾನ ಕಾರ್ಯಕ್ರಮ ಮಾಡಿ, ನನ್ನ ಮಾನ ಕಳೆಯಬೇಡಿ. ಎಲ್ಲರಿಗೂ ನಮಸ್ಕಾರ’ ಎಂದು ವೇದಿಕೆಯಿಂದ ಇಳಿದು, ಸನ್ಮಾನದ ಜತೆಗೆ ಕೊಟ್ಟ ಹಾರ, ಶಾಲು, ಹಣ್ಣುಗಳನ್ನೆಲ್ಲಾ ಅಲ್ಲಿಯೇ ಬಿಟ್ಟು ಹೊರಟು ಹೋದರು. ಇಡೀ ಸಭೆ ಒಂದು ಕ್ಷಣ ದಂಗಾಗಿ ಹೋಯಿತು.

ಪಾಟೀಲ ಪುಟ್ಟಪ್ಪ ಮತ್ತು ಕಾಗದ

ಧಾರವಾಡದ ಸೆಕೆಂಡ್ ಹ್ಯಾಂಡ್ ಪುಸ್ತಕ ವ್ಯಾಪಾರಿ ಶಿವಪುತ್ರಪ್ಪ ಶಾಬಾದಿ ಅವರು ಪಾಟೀಲ ಪುಟ್ಟಪ್ಪನವರ ಹಸ್ತಾಕ್ಷರಗಳನ್ನು ಕಳಿಸಿಕೊಟ್ಟಿದ್ದಾರೆ. ಹ್ಯಾಂಡ್ ಬಿಲ್ ನ ಒಂದು ಮಗ್ಗುಲಿಗೆ ಬರೆದ ಬರಹವದು. ಅದನ್ನು ಓದುವಾಗ ನನಗೆ, ಪಾಟೀಲ ಪುಟ್ಟಪ್ಪನವರು ಬರೆದಿದ್ದು ನೆನಪಾಯಿತು. ಪಾಟೀಲ ಪುಟ್ಟಪ್ಪನವರಿಗೆ ಬರೆಯಲು ದೊಡ್ಡ ಕಾಗದಗಳೇ ಬೇಕಿರಲಿಲ್ಲ. ಯಾವ ಕಾಗದವಾದರೂ ಆಗುತ್ತಿತ್ತು. ಅವರಿಗೆ ಬಂದ ಪತ್ರದ ಖಾಲಿ ಭಾಗಗಳನ್ನು ಅವರು ಎತ್ತಿಡುತ್ತಿದ್ದರು.

ಲಕೋಟೆಗಳನ್ನು ಕತ್ತರಿಸಿ, ಅವುಗಳ ಒಳಭಾಗದಲ್ಲಿ ಬರೆಯುತ್ತಿದ್ದರು. ಯಾವುದೇ ಹ್ಯಾಂಡ್ ಬಿಲ್ ಸಿಕ್ಕರೂ, ಅದನ್ನು ಜೋಪಾನವಾಗಿ ಸಂಗ್ರಹಿಸಿ ಇಟ್ಟು ಕೊಳ್ಳುತ್ತಿದ್ದರು. ಅದರ ಒಂದು ಮಗ್ಗುಲಿನಲ್ಲಿ ಬರೆಯುತ್ತಿದ್ದರು. ಅವರಿಗೆ ಯಾವುದೇ ಆಮಂತ್ರಣ ಪತ್ರ, ಕರೆಯೋಲೆಗಳ ಖಾಲಿ ಭಾಗದಲ್ಲಿ ಅವರು ಬರೆಯುತ್ತಿದ್ದರು. ಹಮಾಮ್ ಸೋಪ್ ಮತ್ತು ಊದುಬತ್ತಿ ಸುತ್ತಿಕೊಂಡ ಕಾಗದವನ್ನು ಸಹ ಅವರು ಸುಮ್ಮನೆ ಬಿಸಾಕುತ್ತಿರಲಿಲ್ಲ. ಅದರ ಒಳಭಾಗದಲ್ಲಿ ಏನಾದರೂ ಬರೆಯಲು ಸಾಧ್ಯವಾಗುವುದಾದರೆ, ಅದನ್ನು ಎತ್ತಿಟ್ಟುಕೊಳ್ಳುತ್ತಿದ್ದರು.

ಅವರಿಗೆ ಬರುತ್ತಿದ್ದ ಅಂಚೆ ಕಾರ್ಡಿನಲ್ಲಿ ಖಾಲಿ ಜಾಗವಿದ್ದರೂ ಅದರಲ್ಲಿ, ’ಅನುಭವ ಇರುವಲ್ಲಿ ಅಮೃತತ್ವ ಇರುತ್ತದೆ’ ಎಂಬ ಉಕ್ತಿಯನ್ನು ಬರೆಯಲು ಉಪಯೋಗಿಸು ತ್ತಿದ್ದರು. ’ಪಾಟೀಲ ಪುಟ್ಟಪ್ಪನವರಿಗೆ ಬಸ್ ಟಿಕೆಟ್ ಸಿಕ್ಕರೂ ಬಿಸಾಡುವುದಿಲ್ಲ. ಅದರಲ್ಲೇ ಸಂಪಾದಕೀಯ ಬರೆಯುತ್ತಾರೆ’ ಎಂದು ಅವರ ಕಾರ್ಯಾಲಯದಲ್ಲಿರುವ ಸಿಬ್ಬಂದಿ ತಮಾಷೆ ಮಾಡುತ್ತಿದ್ದರು. ಗೋಡೆಗೆ ತಗುಲಿ ಹಾಕಿದ ಕ್ಯಾಲೆಂಡರನ್ನು ಅವರು ಬಿಸಾಡುತ್ತಿರಲಿಲ್ಲ. ಒಂದು ಮಗ್ಗುಲು ಖಾಲಿಯಾದ ಕ್ಯಾಲೆಂಡರನ್ನು ಎಲ್ಲಿಯೇ ಕಂಡರೂ ಅವರು ನಿಸ್ಸಂಕೋಚದಿಂದ ಕೇಳಿ ಇಟ್ಟುಕೊಳ್ಳುತ್ತಿದ್ದರು. ಅದರ ಒಂದು ಮಗ್ಗುಲಿನಲ್ಲಿ ಬರೆಯಲು ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದರು.

ನಾಲ್ಕು ಸಾಲು ಬರೆಯುವಷ್ಟು ಬಿಳಿ ಜಾಗ ಸಿಕ್ಕರೂ ಅವರು ಅಂಥ ಕಾಗದವನು ಉಪಯೋಗಿಸದೇ ಬಿಸಾಡುತ್ತಿರಲಿಲ್ಲ. ಅವರು ಏನೇ ಬರೆದರೂ ಅದರಲ್ಲಿ ಚಿತ್ಕಾಟು ಇರುತ್ತಿರಲಿಲ್ಲ. ಪಾಟೀಲ ಪುಟ್ಟಪ್ಪನವರು ರೈಲು, ಬಸ್ಸಿನಲ್ಲಿ ಪ್ರಯಾಣಿಸುವಾಗಲೂ ಬರೆಯುತ್ತಿದ್ದರು. ಅವರು ಮೂಡಿಗಾಗಿ ಎಂದೂ ಕಾದು ಕುಳಿತಿರು ತ್ತಿರಲಿಲ್ಲ. ಅವರು ಕರೆದಾಗ ಮೂಡು ಬರುತ್ತಿತ್ತು.

ಇದನ್ನು ಬರೆದವರು ಯಾರೋ?!

ಕೆಲವು ವರ್ಷಗಳ ಹಿಂದೆ, ನಾನು ಕುಮಟಾದಿಂದ ಹೊನ್ನಾವರಕ್ಕೆ ಹೋಗುವಾಗ, ಹಳದಿಪುರಕ್ಕಿಂತ ಮುನ್ನ ಸಿಗುವ ನದಿ ಉಕ್ಕಿ ಹರಿಯುತ್ತಿತ್ತು. ಇನ್ನು ಸ್ವಲ್ಪ ಮೇಲೇರಿದ್ದರೆ, ನೀರು ಉಕ್ಕಿ ಸೇತುವೆ ಮೇಲೆ ಹರಿಯುತ್ತಿತ್ತು. ಆಗ ಸೇತುವೆಯ ಪಕ್ಕದಲ್ಲಿ ಒಂದು ಫಲಕ ಕಾಣಿಸಿತು. ಅದರ ಮೇಲೆ, ’ಒಂದು ವೇಳೆ ಈ ಫಲಕ ಕಾಣಿಸದಿದ್ದರೆ, ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದರ್ಥ’ ಎಂದು ಬರೆದಿತ್ತು.

ಯಾವ ಪುಣ್ಯಾತ್ಮ ಈ ಫಲಕವನ್ನು ಬರೆದಿರಬಹುದು? ಅದನ್ನು ಬರೆದವನನ್ನು ಜೀವನದಲ್ಲಿ ಒಂದು ಸಲವಾದರೂ ಭೇಟಿ ಮಾಡಬೇಕು. ಇದೆ ರೀತಿಯ ಇನ್ನೊಂದು ಫಲಕದ ಬಗ್ಗೆ ಚಾರ್ಲ್ಸ್ ಥಾಮಸ್ ಎಂಬುವವರು ಪತ್ರಿಕೆಯೊಂದರಲ್ಲಿ ಪ್ರಸ್ತಾಪಿಸಿದ್ದಾರೆ. ಅದೇನೆಂದರೆ,  If its in stock, that means we have it.  (ನಮ್ಮ ದಾಸ್ತಾನಿನನಲ್ಲಿ ಇದೆ ಅಂದ್ರೆ, ಆ ಸಾಮಾನು ನಮ್ಮಲ್ಲಿ ಇದೆ ಎಂದರ್ಥ) ಇದನ್ನು ಬರೆದವನೂ ಮಹಾ ಬುದ್ಧಿವಂತನೇ ಇರಬೇಕು.

ನಿಜಲಿಂಗಪ್ಪನವರ ಮಾತೃಪ್ರೇಮ

ಇತ್ತೀಚೆಗೆ ಪಾಟೀಲ ಪುಟ್ಟಪ್ಪನವರ ಆತ್ಮಕತೆಯನ್ನು ಓದುತ್ತಿದ್ದೆ. ಅದರಲ್ಲಿ ಅವರು ನಿಜಲಿಂಗಪ್ಪ ನವರು ಮತ್ತು ಅವರ ತಾಯಿಯ ಬಗ್ಗೆ ಬರೆದಿದ್ದರು. ಅದಕ್ಕಿಂತ ಮುನ್ನ ನಾನು ಆ ವಿಷಯವನ್ನು ಎಲ್ಲಿಯೂ ಓದಿ ರಲಿಲ್ಲ. ಬೇರೆಯವರಿಂದಲೂ ತಿಳಿದಿ ರಲಿಲ್ಲ. ಅದೇ ನೆಂದರೆ, ನಿಜ ಲಿಂಗಪ್ಪ ಮತ್ತು ಅವರ ತಾಯಿಯ ಒಂದು ಅನೂಹ್ಯ ಸಂಬಂಧ.

ನಿಜಲಿಂಗಪ್ಪನವರ ಆಯಿಯ ಹೆಸರು ನೀಲಮ್ಮ. ನಿಜಲಿಂಗಪ್ಪನವರಿಗೆ ತಾಯಿ ಅಂದ್ರೆ ಪಂಚಪ್ರಾಣ. ನೀಲಮ್ಮನವರಿಗೂ ಮಗ ಅಂದ್ರೆ ಮುಗಿಯಿತು. ಇದು ಎಲ್ಲಾ
ತಾಯಿ-ಮಗನ ಸಂಬಂಧದಂತಲ್ಲ. ನೀಲಮ್ಮನವರಿಗೆ ನಿಜಲಿಂಗಪ್ಪನವರು ಸದಾ ಹತ್ತಿರದಲ್ಲಿಯೇ ಇರಬೇಕು. ಅವರು ಮುಖ್ಯಮಂತ್ರಿಯಾದರೂ, ’ಇಂದಾದರೂ ನೀನು ನನ್ನ ಜೊತೆಗೇ ಇರಬಾರದಾ?’ ಎಂದು ಕೇಳುತ್ತಿದ್ದರಂತೆ.

ಒಂದು ದಿನ ನಿಜಲಿಂಗಪ್ಪನವರು, ಪ್ರವಾಸ ನಿಮಿತ್ತ ದಿಲ್ಲಿಗೆ ಹೊರಟಾಗ ತಾಯಿಗೆ, ’ಇನ್ನು ಮೂರು ದಿನ ಮನೆಯಲ್ಲಿ ಇರೊಲ್ಲ’ ಎಂದು ಹೇಳಿದರಂತೆ. ಆಗ ನೀಲಮ್ಮನವರಿಗೆ ಏನು ಅನಿಸಿತೋ ಏನೋ, ಏನೂ ಮಾತಾಡದೇ ಒಳ ನಡೆದರಂತೆ. ತಾಯಿ ವರ್ತನೆಯಿಂದ ನಿಜಲಿಂಗಪ್ಪನವರು ಕಸಿವಿಸಿಗೊಳಗಾದರು. ತಾಯಿ ಎಂದೂ ಹಾಗೆ ವರ್ತಿಸಿದವರಲ್ಲ. ನಿಜಲಿಂಗಪ್ಪನವರು ತಾಯಿ ಬಳಿ ಹೋಗಿ, ’ನಾನು ದಿಲ್ಲಿಗೆ ಹೋಗುವುದಿಲ್ಲ’ ಎಂದರಂತೆ. ಆಗಲೇ ತಾಯಿ ಸಮಾಧಾನ ದಿಂದ ನಕ್ಕಿದ್ದು. ನಿಜಲಿಂಗಪ್ಪನವರು ತಮ್ಮ ಹೆಂಡತಿಗೆ, ಯಾವತ್ತೂ ತಮ್ಮ ತಾಯಿಯ ಮನಸ್ಸನ್ನು ನೋಯಿಸಿ, ವ್ಯಥೆಯುಂಟು ಮಾಡಬಾರದು ಎಂದು ಹೇಳುತ್ತಿದ್ದರಂತೆ.

ಟಾಯ್ಲೆಟ್ ಪೇಪರ್ ಸ್ವಗತ
ಎಲ್ಲರಿಗೂ ಒಂದು ಕಾಲ ಬರುತ್ತೆ ಅಂತ ಹೇಳೋದನ್ನು ಕೇಳಿದ್ದೆ. ಆದರೆ ಆ ಕಾಲ ಯಾವಾಗ ಬರುತ್ತೆ ಅಂತ ನಾನು ಇಷ್ಟು ದಿನ ಕಾದೂ ಕಾದು, ಇನ್ನು ನನಗೆ ಆ ಒಳ್ಳೆಯ ಕಾಲ ಬರುವುದೇ ಇಲ್ಲ ಎಂದು ಭಾವಿಸಿದ್ದೆ. ನನ್ನ ಮಹತ್ವ ಗೊತ್ತಾಗಲು ಆ ಕರೋನಾ ವೈರಸ್ಸೇ ಬರಬೇಕಾಯ್ತು, ಅಂತೂ ನನ್ನ ಮಹತ್ವ ಏನು ಎಂಬುದು ಈಗ ಜಗತ್ತಿಗೇ ಗೊತ್ತಾಗಿದೆ.

ನೋಡಿದ್ರಾ.. ಅಮೆರಿಕದಲ್ಲಿ ಜನ ಅಕ್ಕಿ ಬೇಳೆಗಾಗಿ ಹೊಡೆದಾಡಲಿಲ್ಲ, ನೀರು – ಹಾಲಿಗಾಗಿ ಹೊಡೆದಾಡಲಿಲ್ಲ, ನನಗಾಗಿ ಹೊಡೆದಾಡಿದರು. ಇಟಲಿ, ಸ್ಪೇನ್ ಸೇರಿದಂತೆ ಎಲ್ಲಾ ದೇಶಗಳ ಡಿಪಾರ್ಟಮೆಂಟ್ ಸ್ಟೋರ್ಸುಗಳಲ್ಲಿ ಜನ ಮುಗಿಬಿದ್ದು ಖರೀದಿಸಿದ್ದೇ ನನ್ನನ್ನು. ಅವರೂ ಸಹ ಅಕ್ಕಿ – ಬೇಳೆಗಳನ್ನು ದಾಸ್ತಾನು ಮಾಡಿಟ್ಟುಕೊಂಡಿಲ್ಲ. ಹಾಗೆ ಮಾಡಿಟ್ಟುಕೊಂಡಿದ್ದು ನನ್ನನ್ನು. ಜನರಿಗೆ ಉಪವಾಸ ಇರೋದು ಗೊತ್ತಿದೆ. ಆದರೆ ನಾನಿಲ್ಲದೇ ಅವರ ಬದುಕು ದುಸ್ತರ. ಇಷ್ಟು ದಿನ ನನ್ನನ್ನು ನೋಡಿ ಟೂತ್ ಬ್ರಷ್ ಹಂಗಿಸುತ್ತಿತ್ತು. ನಿನಗಿಂತ ನಾನೇ ವಾಸಿ ಎಂದು ಹೇಳುತ್ತಿತ್ತು. ಈಗ ಅದಕ್ಕೂ ನನ್ನ ಮಹತ್ವವೇನು ಎಂಬುದು ಗೊತ್ತಾಗಿದೆ. ಒಂದೇ ರೂಮಿನಲ್ಲಿದ್ದರೂ ಅದು ನನ್ನ ಬಳಿ ಮಾತಾಡುವುದನ್ನೇ ಬಿಟ್ಟಿದೆ. ಇದೇ ಮೊದಲ ಬಾರಿಗೆ ಜನರಿಗೆ ನ್ಯೂಸ್ ಪೇಪರ್ ಗಿಂತ ಟಾಯ್ಲೆಟ್ ಪೇಪರೇ ಮುಖ್ಯ ಎಂದು ಅನಿಸಿದೆ. ನ್ಯೂಸ್ ಪೇಪರ್ ಇಲ್ಲದೇ ಕಳೆಯಬಲ್ಲರು. ನಾನಿಲ್ಲದೇ ಕಳೆಯಲಿ ನೋಡೋಣ ? ನನಗಂತೂ ನ್ಯೂಸ್ ಪೇಪರ್ ನಲ್ಲಿ ಒರೆಸಿಕೊಂಡವರ ಗೋಳನ್ನು ನೋಡಲಾಗುವುದಿಲ್ಲ.

ಮೊದಲೆಲ್ಲ ನನ್ನನ್ನು ಖರೀದಿಸುವಾಗ ಜನ ನನ್ನ ಬೆಲೆ ನೋಡುತ್ತಿದ್ದರು. ಎಷ್ಟೆಂದರೂ ಒರೆಸಿ ಬಿಸಾಡುವ ವಸ್ತುವಿಗೆ ಇಷ್ಟೆಲ್ಲಾ ಕೊಡಬೇಕು ಎಂದು ಯೋಚಿಸು ತ್ತಿದ್ದರು. ಈಗ ಬೆಲೆ ಎಷ್ಟಾದರೇನು, ಮುಗಿಬಿದ್ದು ಖರೀದಿಸುತ್ತಾರೆ. ಮೊನ್ನೆ ಯಾರೋ ಹೇಳುತ್ತಿದ್ದರು, ಹತ್ತು ಡಾಲರ್ ಚಿಲ್ಲರೆ ಇರಲಿಲ್ಲವಂತೆ. ’ಅದನ್ನು ಕೊಡುವ ಬದಲು ಎರಡು ಟಾಯ್ಲೆಟ್ ರೋಲ್ ಕೊಡ್ರಿ’ ಅಂದರಂತೆ. ಅಷ್ಟಕ್ಕೂ ಆ ಅಂಗೈ ಅಗಲದ ಡಾಲರ್ ನಲ್ಲಿ ಒರೆಸಿಕೊಳ್ಳೋಕಾಗುತ್ತಾ ? ಗೊತ್ತಿರಲಿ, ನಾನು ಬೇಕೇ ಬೇಕು.

ಬರೆದಿದ್ದೇ ಬೇರೆ, ಅರ್ಥವೇ ಬೇರೆ

ಅಹಮದಾಬಾದಿನ ವಿ.ರಂಗನಾಥನ್ ಅವರು ಹೊಸ ವರ್ಷದ ಮುನ್ನಾ ದಿನ ವಡಸರ್ ದಲ್ಲಿರುವ ಇಂಡಿಯನ್ ಏರ್ ಫಾರ್ಸ್ ಕ್ಯಾಂಪ್ ಗೆ ಸ್ಕ್ವಾಡ್ರನ್ ಲೀಡರ್ ಆದ ತಮ್ಮ ಅಳಿಯನ ಜತೆಗೆ ಹೋಗಿದ್ದರಂತೆ. ಅಲ್ಲಿನ ಮುಖ್ಯ ದ್ವಾರದಲ್ಲಿ ನೇತು ಹಾಕಿದ್ದ ಒಂದು ಫಲಕವನ್ನು ನೋಡಿ ಒಂದು ಕ್ಷಣ ಆಶ್ಚರ್ಯಚಕಿತರಾಗಿ ನಿಂತರಂತೆ.

ಆ ಫಲಕದಲ್ಲಿ ಬರೆದಿತ್ತು – Trespassers will be shot. Survivors will be shot again. ಈ ಫಲಕ ನೋಡಿ ಫಕ್ಕನೆ ನಕ್ಕ ರಂಗನಾಥನ್, ಅಲ್ಲಿಯೇ ಇದ್ದ ಸೆಕ್ಯೂರಿಟಿ ಗಾರ್ಡ್ ಗೆ ಈ ಫಲಕದಲ್ಲಿ ಬರೆದಿರುವ ಸಾಲಿನ ಅರ್ಥ ಕೇಳಿದರಂತೆ. ಅದಕ್ಕೆ ಆತ ಹೇಳಿದ್ದು – ’ಅತಿಕ್ರಮಣ ಮಾಡಿ ಯಾರಾದರೂ ಒಳಗೆ ಬಂದರೆ ಅಥವಾ ಒಳ ನುಸುಳಿ ಬಂದರೆ ಅವರ ಮೇಲೆ ಗುಂಡು ಹಾರಿಸಲಾಗುವುದು. ಒಂದು ವೇಳೆ ಗುಂಡು ಹಾರಿಸಿದ್ದು ತಗುಲದಿದ್ದರೆ ಮತ್ತೊಮ್ಮೆ ಗುಂಡು ಹಾರಿಸ ಲಾಗುವುದು ಎಂದರ್ಥ.’ ರಂಗನಾಥನ್ ಮತ್ತೊಮ್ಮೆ ಇಂಗ್ಲಿಷಿನಲ್ಲಿ ಬರೆದಿದ್ದನ್ನು ಓದಿ, ಜೋರಾಗಿ ನಕ್ಕರಂತೆ.

ಪ್ರವಾಸಕ್ಕೆ ಹೋಗುವಾಗ..
ವಿದೇಶಗಳಿಗೆ ಹೋದಾಗ ಅಥವಾ ಯಾವುದೇ ಅಪರಿಚಿತ ಜಾಗಕ್ಕೆ ಹೋದಾಗ ಅಲ್ಲಿನ ಸೂಚನೆಗಳನ್ನು ಪಾಲಿಸಬೇಕಾದುದು ನಿಯಮ ಮತ್ತು ಸುರಕ್ಷಿತ ಕೂಡ.
ಯಾರೂ ಸಹ ಸುಖಾಸುಮ್ಮನೆ ಸೂಚನೆಗಳನ್ನೂ ಬರೆದಿರುವುದಿಲ್ಲ. ವಿದೇಶಗಳಿಗೆ ಹೋದಾಗ ಈ ಫಲಕ ಗಳೇ ನಮ್ಮ ಆಪ್ತ ಸಂಗಾತಿ. ವಿದೇಶಗಳಿಗೆ ಹೋದಾಗ ಕೆಲವು ಕಡೆ ಗೈಡ್ ಗಳ ಸಹಾಯವಿಲ್ಲದೆ ಹೋಗಬಹುದು. ಆದರೆ ಇನ್ನು ಕೆಲವು ಕಡೆ ಅವರಿಲ್ಲದೇ ಹೋಗಲೇಬಾರದು. ಉದಾಹರಣೆಗೆ, ವನ್ಯಪ್ರಾಣಿಗಳ ವೀಕ್ಷಣೆ ಅಥವಾ ವೈಲ್ಡ್ ಲೈಫ್ ಸಫಾರಿಗೆ ಹೋಗುವಾಗ ಜತೆಯಲ್ಲಿ ನುರಿತ ಮಂದಿ ಜತೆ ಹೋಗಲೇಬೇಕು.

ನಾನು ರವಾಂಡಾಕ್ಕೆ ಹೋದಾಗ ಅಲ್ಲಿನ ವಿಖ್ಯಾತ ಗೊರಿಲ್ಲಾ ಸಫಾರಿಗೆ ಹೋಗಿದ್ದೆ. ಸಫಾರಿಗೆ ತೆರಳುವ ಮುನ್ನ ನಮ್ಮ ವರ್ತನೆ, ನಡವಳಿಕೆ ಕುರಿತಂತೆ ಅರ್ಧ ಗಂಟೆ ಪಾಠ ಮಾಡಲಾಗುತ್ತದೆ. ಅದನ್ನು ಚಾಚೂ ತಪ್ಪದೇ ಪಾಲಿಸಲೇಬೇಕು. ಸ್ವಲ್ಪ ಎಡವಟ್ಟಾದರೂ ಅಪಾಯ ತಪ್ಪಿದ್ದಲ್ಲ. ಕಾಡಿನಲ್ಲಿ ಹಠಾತ್ತನೆ ಗೊರಿಲ್ಲಾ ಎದುರಾದರೆ ಯಾವ ರೀತಿ ವರ್ತಿಸಬೇಕು ಎಂಬ ಬಗ್ಗೆ ಮೊದಲೇ ತಿಳಿಸಿರುತ್ತಾರೆ. ಆದರೆ ಕೆಲವರು ಅತಿ ಉತ್ಸಾಹದಲ್ಲಿ ಗೊರಿಲ್ಲಾ ಜತೆ ಸೆಲಿ ತೆಗೆಸಿಕೊಳ್ಳಲು ಹೋಗುತ್ತಾರೆ. ಆಗ ಗೊರಿಲ್ಲಾ ವಿಚಿತ್ರವಾಗಿ ವರ್ತಿಸಿದ್ದುಂಟು. ಅದರ ಹತ್ತಿರ ಕುಳಿತು ಫೋಟೋ ತೆಗೆಸಿಕೊಳ್ಳುವ ಚಪಲ ಕೆಲವರಿಗೆ. ಆಗಲೂ ಅದು ದಾಳಿ
ಮಾಡಬಹುದು.

ವಿದೇಶಗಳಿಗೆ ಹೋದಾಗ, ಕಾಡಿನಲ್ಲಿ ಸಂಚರಿಸುವಾಗ, ಜನವಸತಿ ಇಲ್ಲದ ಕಡೆಗಳಲ್ಲಿ ಹೋಗುವಾಗ ಜತೆಗಾರರಿಲ್ಲದೇ ಹೋಗಲೇಬಾರದು. ನೀವು ಎಷ್ಟೇ ಸಾಹಸಿಯಾಗಿರಬಹುದು, ಛಲವಂತರಾಗಿರಬಹುದು, ಆದರೆ ನಿಮ್ಮ ಜತೆಗೆ ಮತ್ತೊಬ್ಬರು ಇರಲೇಬೇಕು. ಯಾವ ಕಾರಣಕ್ಕೂ ಒಬ್ಬರೇ ಹೋಗುವ ಸಾಹಸ
ಮಾಡಲೇಬಾರದು. ಯಾವ ಕ್ಷಣದಲ್ಲಿ ಎಂಥ ಸಂದರ್ಭ ಎದುರಾಗಬಹುದು ಎಂಬುದನ್ನು ಹೇಳಲಾಗದು. ಯಾವತ್ತೂ ಆ ಪ್ರದೇಶ, ಭಾಷೆ ಗೊತ್ತಿರುವ ವ್ಯಕ್ತಿ ನಿಮ್ಮ ಜತೆಯಲ್ಲಿದ್ದರೆ ಎಷ್ಟೋ ಧೈರ್ಯ ಮತ್ತು ಸುರಕ್ಷಿತ.

ಅನೇಕರು ಭಿನ್ನ ಅನುಭವ ಪಡೆಯಲು ಏಕಾಂಗಿ ಪಯಣ ಮಾಡುವುದುಂಟು. ಈಗಿನ ಕಾಲದಲ್ಲಿ ಹುಡುಗಿಯರು ವಿದೇಶಗಳಿಗೆ ಒಬ್ಬಂಟಿಯಾಗಿ, ಪ್ರವಾಸಿಕರಾಗಿ
ಹೋಗುವುದುಂಟು. ಇದು ತಪ್ಪೇನಲ್ಲ. ಇದೊಂದು ರೀತಿಯಲ್ಲಿ ಅದ್ಭುತ ಅನುಭವ ಕೊಡುತ್ತದೆ. ಹೀಗೆ ಹೋದಾಗಲೂ ಯಾವ ಪ್ರದೇಶಕ್ಕೆ ಒಬ್ಬರೇ ಹೋಗಬೇಕು,
ಎಲ್ಲಿ ಮತ್ತೊಬ್ಬರ ಜತೆಗೆ ಹೋಗಬೇಕು ಎಂಬ ವಿವೇಚನೆ ಇರಬೇಕು. ಏಕಾಂಗಿ ಪಯಣ ಅದ್ಭುತ ಅನುಭವ ಕೊಡುತ್ತದೆಂದು ಎಲ್ಲಾ ಕಡೆ ಒಬ್ಬರೇ ಹೋಗಲಾಗುವು ದಿಲ್ಲ. ಅಂಥ ತಾಣಗಳಿಗೆ ಹೋದಾಗ ಅನಗತ್ಯ ಅಪಾಯವನ್ನು ಆಹ್ವಾನಿಸಬಾರದು.