Wednesday, 4th December 2024

ನಮ್ಮ ದೇಹದಲ್ಲೊಂದು ಆಟೋಪೈಲಟ್

ಹಿಂದಿರುಗಿ ನೋಡಿದಾಗ

ನಮ್ಮ ಹೊರಜಗತ್ತಿನ ಮಾಹಿತಿಯನ್ನು ನಮಗೆ ಸದಾ ಒದಗಿಸುವ ವಿಶೇಷ ಇಂದ್ರಿಯಗಳು-ಜ್ಞಾನೇಂದ್ರಿಯಗಳು. ಸಾಂಪ್ರದಾಯಿಕವಾಗಿ ನಾವು ಐದು
ಜ್ಞಾನೇಂದ್ರಿಯಗಳಿವೆ ಎಂದು ನಂಬಿದ್ದೇವೆ. ದೃಷ್ಟಿಶಕ್ತಿಯನ್ನು ನೀಡುವ ಕಣ್ಣು, ಶ್ರವಣಶಕ್ತಿಯನ್ನು ನೀಡುವ ಕಿವಿ, ಘ್ರಾಣಶಕ್ತಿಯನ್ನು ನೀಡುವ ಮೂಗು, ರಸನಶಕ್ತಿ ಯನ್ನು ನೀಡುವ ನಾಲಿಗೆ ಹಾಗೂ ನಾನಾ ರೀತಿಯ ಸ್ಪರ್ಶ ಸಂವೇದನೆಗಳನ್ನು ತಿಳಿಸುವ ಚರ್ಮ. ಆದರೆ ಆಧುನಿಕ ವಿಜ್ಞಾನಿಗಳು ನಮಗೆ ವಿಶೇಷ ಜ್ಞಾನ ನೀಡುವುದಕ್ಕಿಂತಲೂ ಹೆಚ್ಚಿನ ಇಂದ್ರಿಯಗಳಿವೆ ಎನ್ನುತ್ತ, ೨೧ ವಿಶೇಷ ಇಂದ್ರಿಯಗಳ ಪಟ್ಟಿಯನ್ನು ನೀಡುತ್ತಾರೆ.

ಆದರೆ ಅವರು ೨೧ಕ್ಕೇ ತೃಪ್ತರಾಗಿಲ್ಲ. ೨೧ ವಿಶೇಷ ಇಂದ್ರಿಯಗಳನ್ನು ಮೀರಿಯೂ ಹಲವು ಇಂದ್ರಿಯಗಳಿರಬಹುದೇ ಎಂದು ಹುಡುಕಾಟ ನಡೆಸುತ್ತ, ಪಟ್ಟಿಯನ್ನು ೩೩ರ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಅಧ್ಯಯನಗಳು, ವಿಶೇಷ ಜ್ಞಾನೇಂದ್ರಿಯಗಳ ಪಟ್ಟಿಯನ್ನು ೩೩ನ್ನು ಮೀರಿಸುತ್ತವೆಯೋ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ನಾವು ನಮಗೆ ೨೧ ವಿಶೇಷ ಜ್ಞಾನೇಂದ್ರಿಯಗಳಿವೆ ಎಂದು ಪರಿಭಾವಿಸಬಹುದು.
ನಾವು ಸಾಂಪ್ರದಾಯಿಕ ಪಂಚೇಂದ್ರಿಯಗಳಲ್ಲಿ ಕಣ್ಣುಗಳ ಮೂಲಕ ನಮ್ಮ ಹೊರಜಗತ್ತಿನ ಶೇ.೮೦ ಮಾಹಿತಿಯನ್ನು ಪಡೆಯುತ್ತೇವೆ.

ಉಳಿದ ಶೇ.೨೦ ಮಾಹಿತಿಯಲ್ಲಿ ಶೇ.೧೦ರಷ್ಟು ಮಾಹಿತಿಯನ್ನು ಕಿವಿಯ ಮೂಲಕ ಹಾಗೂ ಶೇ.೧೦ ಮಾಹಿತಿಯನ್ನು ಇತರ ಇಂದ್ರಿಯಗಳ ಮೂಲಕ ಪಡೆಯುತ್ತೇವೆ. ಕಿವಿಗಳನ್ನು ಉಭಯಾಂಗಗಳೆನ್ನಬಹುದು. ಇವು ನಮಗೆ ಶ್ರವಣಶಕ್ತಿಯನ್ನುಒದಗಿಸುವುದರ ಜತೆಗೆ ನಮ್ಮ ಶರೀರದ ಸಮತೋಲನೆಯನ್ನು ಕಾಪಾಡುವ ವಿಶೇಷ ಭಾಗವನ್ನೂ ತನ್ನೊಳಗೆ ಅಡಕಗೊಳಿಸಿಕೊಂಡಿದೆ. ದೃಷ್ಟಿ ಸಾಮರ್ಥ್ಯವಿಲ್ಲದ ಅಂಧನಿಂದ ಈ ಸುಂದರ ಜಗತ್ತು ದೂರವಾಗುತ್ತದೆ.
ಶ್ರವ್ಯ ಜಗತ್ತನ್ನು ಆಲಿಸಲಾಗದ ಕಿವುಡನಿಂದ ನಾದಮಯ ಜಗತ್ತು ದೂರವಾಗುವುದರ ಜತೆಯಲ್ಲಿ ಮನುಷ್ಯ- ಮನುಷ್ಯನ ನಡುವೆ ಬೆಳೆಯಬಹುದಾದ ಮಧುರ ಸಂಪರ್ಕವೂ ದೂರವಾಗುತ್ತದೆ.

ಒಂದು ಮಗು ಚೆನ್ನಾಗಿ ಮಾತನಾಡಬೇಕಾದರೆ, ಅದಕ್ಕೆ ಅದರ ಕಿವಿಗಳು ಚೆನ್ನಾಗಿ ಕೇಳಬೇಕು. ಒಂದು ವೇಳೆ ಆ ಮಗುವಿಗೆ ಮಾತನಾಡುವ ಒಳ್ಳೆಯ ಸಾಮರ್ಥ್ಯವಿದ್ದೂ, ಕಿವಿಗಳು ಕೇಳದಿದ್ದರೆ, ಆ ಮಗುವು ಭಾಷೆಯನ್ನು ಸಮರ್ಪಕವಾಗಿ ಕಲಿಯಲಾರದು. ಪರಿಣಾಮಕಾರಿ ಸಂವಹನವು ಅಸಾಧ್ಯವಾಗಿ ಬಿಡುತ್ತದೆ. ಒಂದು ಸತ್ಯವನ್ನು ಮನಗಾಣಬೇಕು. ಸಂಗೀತವನ್ನು ಕಿವಿಯು ಕೇಳುವುದಿಲ್ಲ. ವಾಸ್ತವದಲ್ಲಿ ಕೇಳುವುದು, ಅನುಭವಿಸುವುದು ಹಾಗೂ ಆನಂದಿಸುವುದು ಮಿದುಳು (ಹಾಗೂ ಬಹುಶಃ ಮಿದುಳಿನಲ್ಲಿಯೇ ಇರುವ ಮನಸ್ಸು). ಕಿವಿಯು ಕೇವಲ ಶಬ್ದವನ್ನು ಯಾಂತ್ರಿಕವಾಗಿ ರವಾನಿಸುವ ಸಾಧನ ಮಾತ್ರ!

ಹೊರಗಿನಿಂದ ಬರುವ ಶಬ್ದದ ಅಲೆಗಳನ್ನು ವರ್ಧಿಸಿ ಹಾಗೂ ವಿದ್ಯುದಾವೇಗಗಳನ್ನಾಗಿ ಪರಿವರ್ತಿಸಿ, ಶ್ರವಣ-ಶಂಖು ನರದ(ವೆಸ್ಟಿಬ್ಯುಲೋಕಾಕ್ಲಿಯಾರ್ ನರ್ವ್)
ಮೂಲಕ ಮಿದುಳಿನ ಎಡ ಅರೆಗೋಳದಲ್ಲಿರುವ ಶ್ರವಣ ಕ್ಷೇತ್ರಕ್ಕೆ(ಆಡಿಟರಿಏರಿಯ)ರವಾನಿಸುತ್ತದೆ. ಈ ಶ್ರವಣಕ್ಷೇತ್ರವು ಸಂಗೀತವನ್ನು ಅರ್ಥೈಸಿ, ಅದರ ಆಸ್ವಾದವು ನಮಗೆ ದೊರೆಯುವಂತೆ ಮಾಡುತ್ತದೆ. ಮನುಷ್ಯನ ಮಿದುಳಿನಲ್ಲಿ ಎರಡು ಅರೆಗೋಳಗಳಿವೆ. ಎಡ ಅರೆಗೋಳ ಮತ್ತು ಬಲ ಅರೆಗೋಳ. ಎಡ ಅರೆಗೋಳವು ಬಲಗಿವಿಯನ್ನು ಒಳಗೊಂಡಂತೆ, ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ.

ಹಾಗೆಯೇ ಎಡಗಿವಿಯಲ್ಲಿನ ಬಲ ಅರೆಗೋಳವು ದೇಹದ ಎಡಭಾಗವನ್ನು ನಿಯಂತ್ರಿಸುತ್ತದೆ. ಎರಡೂ ಕಿವಿಗಳ ಶ್ರವಣ ಸಾಮರ್ಥ್ಯವು ಹೆಚ್ಚೂಕಡಿಮೆ ಒಂದೇ ಸ್ವರೂಪದ್ದಾಗಿದ್ದರೂ, ಕಾರ್ಯಸ್ವರೂಪ ಸ್ವಲ್ಪ ಭಿನ್ನವಾಗಿದೆ. ಬಲಗಿವಿಯು ಭಾಷಣ, ವಿಜ್ಞಾನ, ಗಣಿತ, ತರ್ಕ ಮುಂತಾದ ವಿಚಾರಗಳನ್ನು ಪರಿಣಾಮಕಾರಿಯಾಗಿ ಗ್ರಹಿಸುತ್ತದೆಯಂತೆ. ಎಡಗಿವಿಯು ಸಂಗೀತ, ಭಾವನಾತ್ಮಕ ವಿಚಾರ, ಅಂತಃಪ್ರeಯ ವಿಷಯಗಳನ್ನು ಹೆಚ್ಚು ಗ್ರಹಿಸುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚಿನ ವಿವರಣೆ
ಬೇಕಾಗಬಹುದು. ಎಡ ಅರೆಗೋಳಕ್ಕೆ ತರ್ಕ, ಗಣಿತ, ವಿಜ್ಞಾನ, ಭಾಷಣ ಮುಂತಾದವನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸುವ ಗುಣ ಹುಟ್ಟಿನಿಂದ ಬಂದಿರುತ್ತದೆ. ಹಾಗೆಯೇ ಬಲ ಅರೆಗೋಳಕ್ಕೆ ಸಂಗೀತ, ಭಾವನೆಗಳು, ಅಂತಃಪ್ರಜ್ಞೆ ಮುಂತಾದ ವಿಚಾರಗಳ ಮಹತ್ವವನ್ನು ಅರಿಯುವ ಸಾಮರ್ಥ್ಯವು ಜನ್ಮತಃ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕಿವಿಗಳು ಭಿನ್ನ ವಿಚಾರಗಳನ್ನು ಪರಿಣಾಮಕಾರಿಯಾಗಿ ರವಾನಿಸಬಲ್ಲವು. ಆದರೆ ನಾವು ಸರಿಯಾಗಿ ಹಾಗೂ ನಿಖರವಾಗಿ ಆಲಿಸಲು ಎರಡೂ ಕಿವಿಗಳು ಅಗತ್ಯ ಎನ್ನುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ.

ಮನುಷ್ಯರಲ್ಲಿ ಎರಡು ಕಿವಿಗಳಿವೆ. ಎರಡೂ ಕಿವಿಗಳು ಮುಖದ ಎರಡು ಪಾರ್ಶ್ವಗಳಲ್ಲಿ ಸಮಾನಾಂತರವಾಗಿರುವಂತೆ ಕಾಣುತ್ತದೆ. ವಾಸ್ತವದಲ್ಲಿ ನಮ್ಮ ಬರಿಗಣ್ಣಿಗೆ ಕಾಣುವುದು ಕಿವಿಯ ಹೊರ ೧/೩ ಭಾಗ ಮಾತ್ರ. ಉಳಿದ ೨/೩ ಭಾಗವು ಕಪಾಲಮೂಳೆಗಳ ಭದ್ರಕೋಟೆಯಲ್ಲಿ ಸುಭದ್ರವಾಗಿದೆ. ಇನ್ನು ನಮ್ಮ ಕಿವಿಯು ಅದ್ಭುತ ಆಟೋ ಪೈಲಟ್! ಆಟೋ ಪೈಲಟ್‌ಎಂದರೆ ಏನು? ಸುದೀರ್ಘ ವಿಮಾನ ಪ್ರಯಾಣ ದಲ್ಲಿ, ಪೈಲಟ್‌ಗಳು ವಿಮಾನ ಹಾರಿಸುವ ಕಾರ್ಯಗಳನ್ನು ಸ್ವಯಂಚಾಲಿತ ಯಂತ್ರದ ವಶಕ್ಕೆ ಒಪ್ಪಿಸಿ, ತಾವು ವಿಶ್ರಾಂತಿ ತೆಗೆದುಕೊಳ್ಳುವುದು ಅಪರೂಪವಲ್ಲ. ಇದನ್ನೇ ಆಟೋ ಪೈಲಟ್ ಎನ್ನುವುದು. ಹಾಗೆಯೇ ನಮ್ಮ ಶರೀರದ ನಾನಾ
ರೀತಿಯ ಚಲನವಲನಗಳಲ್ಲಿ ಕಿವಿಗಳು ತಮ್ಮ ಆಟೋಪೈಲಟ್ ಕೆಲಸವನ್ನು ನಮಗರಿವಿಲ್ಲದಂತೆಯೇ ಮಾಡುತ್ತಿರುತ್ತವೆ.

ನಡೆಯುವಾಗ, ಓಡುವಾಗ, ಕುಣಿಯುವಾಗ, ಕುಪ್ಪಳಿಸುವಾಗ, ಲಾಗಾ ಹಾಕುವಾಗ, ನರ್ತಿಸುವಾಗ, ಜಿಮ್ನಾಸ್ಟಿಕ್ ಮಾಡುವಾಗ ನಮ್ಮ ದೇಹವು ಮೂಲ ಸ್ಥಿತಿಯನ್ನು ಕಾದಿಟ್ಟುಕೊಳ್ಳುತ್ತವೆ. ನಮ್ಮ ಕಿವಿಯ ಮತ್ತೊಂದು ಆಟೋಪೈಲಟ್ ಗುಣವನ್ನು ನಾವು ಗಮನಿಸಬೇಕು. ಈಗ ನಿಮ್ಮ ಕೋಣೆಯಲ್ಲಿ ನೀವು ಕುಳಿತಿದ್ದೀರಿ. ಈಗ ಗಮನವಿಟ್ಟು ನಿಮ್ಮ ಸುತ್ತಮುತ್ತಲಿನ ಎಲ್ಲ ರೀತಿಯ ಶಬ್ದಗಳನ್ನು ಆಲಿಸಲು ಪ್ರಯತ್ನಿಸಿ. ಹೊರಗಡೆ ತರಕಾರಿ ಮಾರುವನ ಶಬ್ದ, ನಡುಮನೆಯ ಟಿವಿ ಶಬ್ದ, ಅಡುಗೆ ಮನೆಯ ಕುಕ್ಕರ್ ವಿಸಲ್ ಶಬ್ದ, ಕಿಟಕಿಯ ಹೊರಗೆ ಇಣಚಿ ಕೂಗುತ್ತಿರುವುದು, ಹೊರಗೆ ಮಕ್ಕಳು ಆಟವಾಡುತ್ತಿರುವುದು, ವೇಗವಾಗಿ ಮೋಟರ್ ಬೈಕ್ ಹೋಗುವುದು… ಎಷ್ಟೆಲ್ಲ ಶಬ್ದಗಳನ್ನು ನೀವು ಆಲಿಸುತ್ತಿದ್ದೀರಿ.

ಆದರೆ ಹೀಗೆ ಗಮನ ಹರಿಸುವುದಕ್ಕೂ ಮೊದಲು, ಈ ಎಲ್ಲ ಶಬ್ದಗಳೂ ನಿಮ್ಮ ಸುತ್ತಮುತ್ತಲು ಇದ್ದವು. ನಿಮ್ಮ ಕಿವಿ ಅವನ್ನೆಲ್ಲ ಕರಾರುವಾಕ್ಕಾಗಿ ಕೇಳುತ್ತಿದ್ದವು. ಆದರೆ ನಿಮ್ಮ ಮಿದುಳು ಯಾವ ಶಬ್ದವನ್ನು ಆಲಿಸಬೇಕು, ಯಾವ ಶಬ್ದವನ್ನು ನಿರ್ಲಕ್ಷಿಸಬೇಕು ಎನ್ನುವ ವಿವೇಚನೆ ತೋರುತ್ತದೆ. ಅನಗತ್ಯ ಶಬ್ದಗಳಿದ್ದರೂ ಅವುಗಳ
ಕಡೆಗೆ ನಿಮ್ಮ ಗಮನ ಸೆಳೆಯುವುದಿಲ್ಲ. ಇದು ಕಿವಿಯ ಅತ್ಯಂತ ಗಮನೀಯ ಲಕ್ಷಣ. ನಮ್ಮ ಮಿದುಳು ಪರಿಸರದಲ್ಲಿರುವ ಎಲ್ಲ ಶಬ್ದಗಳಿಗೆ ಸಮಾನ ಆದ್ಯತೆಯನ್ನು ನೀಡಿ ಅವನ್ನು ಕೇಳಲಾರಂಭಿಸಿದರೆ, ನಮಗೆ ಹುಚ್ಚು ಹಿಡಿಯುವುದು ಮಾತ್ರ ಬಾಕಿ!

ನಮ್ಮ ಕಿವಿಯು ದಿನದ ೨೪ ಗಂಟೆಗಳ ಕಾಲ ಪರಿಸರದ ಎಲ್ಲ ಶಬ್ದಗಳನ್ನು ಕಿವಿಗೆ ರವಾನಿಸುತ್ತಲೇ ಇರುತ್ತದೆ. ನಾವು ನಿದ್ರಿಸುವಾಗಲೂ ನಮ್ಮ ಕಿವಿ ಜಾಗೃತವಾಗಿರುತ್ತದೆ. ಆದರೆ, ನಾವು ನಿದ್ರೆ ಮಾಡುವಾಗ, ನಮ್ಮ ಮಿದುಳು ಹೊರಗಿನ ಶಬ್ದಗಳನ್ನು ಕೇಳಿಸಿಕೊಳ್ಳುವುದಿಲ್ಲ. ಕಿವಿಗಳು ಶಬ್ದವನ್ನು ರವಾನಿಸು ತ್ತಿದ್ದರೂ, ನಮ್ಮ ಮಿದುಳು ಇದು ನಿದ್ರೆ ಮಾಡುವ ಸಮಯ, ಶಬ್ದಗಳನ್ನು ಕೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ತೀರ್ಮಾನಿಸಿ, ಎಲ್ಲ ಅನಗತ್ಯ ಶಬ್ದಗಳನ್ನು ನಿರ್ಲಕ್ಷಿಸುತ್ತದೆ. ತುಂಬಾ ಮುಖ್ಯವಾದ ಶಬ್ದವಿದ್ದರೆ -ನಡುರಾತ್ರಿಯಲ್ಲಿ ಮೊಬೈಲ್ ಫೋನ್ ರಿಂಗಣಿಸಿದರೆ-ಮಾತ್ರ ಮಿದುಳು ಎಚ್ಚೆತ್ತುಕೊಳ್ಳುತ್ತದೆ.

ಮನುಷ್ಯನ ಶ್ರವಣ ಸಾಮರ್ಥ್ಯವು ಮಿತವಾದದ್ದು. ೨೦ ಹರ್ಟ್ಜ್‌ನಿಂದ ೨೦ ಸಾವಿರ ಹರ್ಟ್ಜ್‌ಗಳ ವ್ಯಾಪ್ತಿಯಲ್ಲಿದೆ. ನಮ್ಮ ಕಿವಿಗಳಲ್ಲಿರುವ ೨೦,೦೦೦ ನರರೋಮಗಳು (ಹೇರ್ ಸೆಲ್ಸ್) ನಮಗೆ ಷ್ಟೂ ಶಬ್ದಗಳನ್ನು ಅರ್ಥೈಸುತ್ತವೆ. ೨೦ ಹರ್ಟ್ಜ್ ಗಿಂತಲೂ ಕಡಿಮೆ ವ್ಯಾಪ್ತಿಯವನ್ನು ಅವಶ್ರವಣ ತರಂಗಳು
ಅಥವ ಇನ್- ಸೌಂಡ್ ವೇವ್ಸ್ ಎನ್ನುತ್ತೇವೆ. ಆನೆಗಳು ಸಾಮಾನ್ಯವಾಗಿ ಈ ಅವಶ್ರವಣ ತರಂಗಗಳನ್ನು ನಡೆಸಿ ಕಿಲೋಮೀಟರ್‌ಗಟ್ಟಲೇ ದೂರ ಇತರ ಆನೆಗಳೊಂದಿಗೆ ಸಂಭಾಷಣೆ ನಡೆಸಬಲ್ಲವು. ೨೦ಸಾವಿರ ಹರ್ಟ್ಜ್ ಮೀರಿರುವ ತರಂಗಗಳಿಗೆ ಶ್ರವಣಾತೀತ ತರಂಗಗಳು ಅಥವಾ ಅಲ್ಟ್ರಾಸೌಂಡ್ ವೇವ್ಸ್ ಎನ್ನುತ್ತೇವೆ. ಸಾಮಾನ್ಯವಾಗಿ ಬಾವಲಿಗಳು ಈ ವಿಶೇಷ ತರಂಗಗಳ ನೆರವಿನಿಂದ ಸಂಭಾಷಣೆಯನ್ನು ಮಾತ್ರವಲ್ಲ, ಅಡ್ಡಿ ಆತಂತಕಗಳನ್ನು ನೋಡಿ ಅವುಗಳಿಂದ
ತಪ್ಪಿಸಿಕೊಂಡು ಬದುಕಬಲ್ಲವು. ಹಾಗಾಗಿ ಜೀವಜಗತ್ತಿನಲ್ಲಿ ನನ್ನ ಸಮ ಯಾರೂ ಇಲ್ಲ ಎಂದು ಬೀಗುತ್ತಿರುವ ನಾವು, ನಮ್ಮ ಶಬ್ದ ಜಗತ್ತನ್ನು ಮೀರಿರುವ ಅದ್ಭುತ ಶಬ್ದ ಜಗತ್ತು ಪ್ರಕೃತಿಯಲ್ಲಿದೆ ಎನ್ನುವ ತಿಳಿವನ್ನು ಪಡೆದು ಸ್ವಲ್ಪ ನಮ್ರತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ನಮಗೆ ತಿಳಿಯದ ಬಣ್ಣಗಳು, ನಮಗೆ ತಿಳಿಯದ ವಾಸನೆಗಳು, ನಮಗೆ ತಿಳಿಯದ ರುಚಿಗಳು ಹಾಗೂ ಅನೇಕ ವಿಶೇಷ ಶಕ್ತಿಸಾಮರ್ಥ್ಯಗಳು  ಉದಾ:ವಿದ್ಯುತ್ತನ್ನುಉತ್ಪಾದಿಸುವ ಶಕ್ತಿ) ಜೀವಜಗತ್ತಿನ
ಜೀವಿಗಳಲ್ಲಿರುವುದನ್ನು ತಿಳಿದ ಮೇಲಾದರೂ ನಮ್ಮ ಅಹಂಕಾರವನ್ನು ಮಿತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ.

ಪ್ರಾಚೀನ ಜಗತ್ತಿನಲ್ಲಿ ಪಂಚೇಂದ್ರಿಯಗಳ ಅಸ್ತಿತ್ವದ ಬಗ್ಗೆ ಮೊದಲ ಬಾರಿಗೆ ಗ್ರೀಸ್ ದೇಶದ ಅರಿಸ್ಟಾಟಲ್ (ಕ್ರಿ.ಪೂ. ೩೮೪-ಕ್ರಿ.ಪೂ.೩೨೨) ದಾಖಲಿಸಿದ. ಆದರೆ, ಶ್ರವಣ- ಸಮತೋಲನಗಳ ಸಾಮರ್ಥ್ಯವನ್ನು ತಿಳಿಸುವ ಕಿವಿಯ ಅಂಗರಚನೆಯ ಅಧ್ಯಯನವನ್ನು ನಮ್ಮ ಪೂರ್ವಜರು ಮಾಡಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ. ಪ್ರಾಚೀನ ಜಗತ್ತಿನ ಅಂಗರಚನಾ ವಿಜ್ಞಾನಿ ಗ್ಯಾಲನ್ ಸಹ ಕಿವಿಯ ಬಗ್ಗೆ ಏನನ್ನೂ ಹೇಳುವುದಿಲ್ಲ. ಹಾಗಾಗಿ ಕಿವಿಯ ಕ್ರಮಬದ್ಧ ಅಧ್ಯಯನಕ್ಕಾಗಿ ನಾವು ಪುನರುತ್ಥಾನದ (ರಿನೇಸಾನ್ಸ್) ಕಾಲದವರೆಗೆ ಕಾಯಬೇಕಾಯಿತು. ಆಂಡ್ರಿಯಸ್ ವೆಸಾಲಿಯಸ್ (೧೫೧೪-೧೫೬೪) ನನ್ನುಆಧುನಿಕ ಅಂಗರಚನ ವಿಜ್ಞಾನದ ಪಿತಾಮಹ ಎಂದು ಗೌರವಿಸಿದ್ದೇವೆ. ವೆಸಾಲಿ ಯಸ್, ಕಿವಿಯನ್ನುಅಧ್ಯಯನ ಮಾಡಬೇಕಾದರೆ, ಅದನ್ನು ಕಪಾಲದಿಂದ ಪ್ರತ್ಯೇಕಿಸಿಯೇ ಅಧ್ಯಯನ ಮಾಡಬೇಕೆಂದ.

ಇವನ ಮಾತು ಸತ್ಯ. ಇಂದಿಗೂ ನಾವು ಕಿವಿಯನ್ನುಅಧ್ಯಯನ ಮಾಡಬೇಕಾದರೆ, ಅದನ್ನು ತಲೆಬುರುಡೆಯಿಂದ ಪ್ರತ್ಯೇಕಿಸಬೇಕಾದದ್ದು ಅನಿವಾರ್ಯ. ವೆಸಾಲಿಯಸ್ ಮೊದಲು ಪ್ರಾಣಿಗಳ ಕಿವಿಯನ್ನು ಅಧ್ಯಯನ ಮಾಡಿದ. ಆನಂತರ ಅವುಗಳ ರಚನೆಯನ್ನು ಮನುಷ್ಯರ ಕಿವಿಯೊಡನೆ ಹೋಲಿಸಲಾರಂಭಿಸಿದ. ಅವನ ಅಧ್ಯಯನ ವಿಧಾನವು ಸರಿಯಾಗಿ ದ್ದರೂ ಸಹ, ಕಿವಿಯ ಆಳವಾದ ಅಧ್ಯಯನವನ್ನು ಅವನು ನಡೆಸಲಿಲ್ಲ. ಕಿವಿಯ ಬಗ್ಗೆ ಆಳವಾದ ಒಳನೋಟವನ್ನು
ನೀಡಿದ ಕೀರ್ತಿ ಇಟಾಲಿಯನ್ ವೈದ್ಯ ಗೇಬ್ರಿಯಲ್ -ಲೋಪಿಯೋ ದಿ ಮೊಡೇನ (೧೫೨೩-೧೫೬೨)ಅವರಿಗೆ ಸಲ್ಲುತ್ತದೆ. ಹಂಗರಿ-ಆಸ್ಟ್ರಿಯದ ವೈದ್ಯಆಡಮ್ ಪೋಲಿಟ್ಜರ್ (೧೮೩೫-೧೯೨೦) ಎಂಬಾತ ಕಿವಿಯ ಇತಿಹಾಸದ ಬಗ್ಗೆ ಮೊದಲ ಬಾರಿಗೆ ಸಮಗ್ರ ಮಾಹಿತಿ ಸಂಗ್ರಹಿಸಿದ.

-ಲೋಪಿಯೊ ಕಿವಿ ತಮಟೆಯ (ಟಿಂಪಾನಿಕ್ ಮೆಂಬ್ರೇನ್) ಬಗ್ಗೆ ವಿಸ್ತೃತ ವರ್ಣನೆ ನೀಡಿದ. ಶಬ್ದಗ್ರಹಣ ಹಾಗೂ ಶಬ್ದರವಾನೆ ಯಲ್ಲಿ ಪಾಲುಗೊಳ್ಳುವ ಮೂರು ಕಿರುಮೂಳೆಗಳನ್ನು (ಸುತ್ತಿಮೂಳೆ=ಮ್ಯಾಲಿಯಸ್, ಅಡಿಮೂಳೆ=ಇಂಕಸ್ ಹಾಗೂ ರಿಕಾಪುಮೂಳೆ=ಸ್ಟೇಪಿಸ್) ಗುರುತಿಸಿ ಅವುಗಳ ಕೆಲಸವನ್ನು ವಿವರಿಸಿದ. ಕಿವಿಯಲ್ಲಿರುವ ಎರಡು ಗವಾಕ್ಷಿಗಳ ಬಗ್ಗೆ (ದುಂಡುಗವಾಕ್ಷಿ=ರೌಂಡ್ ವಿಂಡೋ ಮತ್ತು ಅಂಡಗವಾಕ್ಷಿ=ಓವಲ್ ವಿಂಡೋ) ನಾಲಿಗೆಯಿಂದ ರುಚಿ ಸಂವೇದನೆಗಳನ್ನು ಕೊಂಡೊಯ್ಯುವ ಕಾರ್ಡಟಿಂಪಾನಿ ನರ, ಅಂತರ್ಕರ್ಣ (ಲ್ಯಾಬರಿಂತ್) ಅರೆಚಂದ್ರನಳಿಕೆ (ಸೆಮಿ-ಸರ್ಕ್ಯುಲರ್ ಕೆನಾಲ್ಸ್), ಕಾಕ್ಲಿಯ ಮತ್ತು ಶ್ರವಣ-ಶಂಕು ನರವನ್ನು ವಿವರಿಸಿದ.

ಕಿವಿಗೆ ಸಂಬಂಧಪಟ್ಟ ಎಲ್ಲ ಸ್ನಾಯುಗಳನ್ನು ಗುರುತಿಸಿ, ಅವು ಕೆಲಸ ಮಾಡುವ ರೀತಿಯ ಬಗ್ಗೆ ಮಾಹಿತಿಯನ್ನು ನೀಡಿದ. ಇದೇ ಕಾಲಮಾನದಲ್ಲಿ ಬದುಕಿದ್ದ ಬಾರ್ಥಲೋಮಿಯೋಯು ಸ್ಟಾಷಿಯೋ ಎನ್ನುವ ವೈದ್ಯನು ಗಂಟಲು, ಕಿವಿ ಮತ್ತು ಪರಿಸರದಒತ್ತಡವನ್ನು ಹತೋಟಿಯಲ್ಲಿಡುವಕರ್ಣ-ಕಂಠ ನಳಿಕೆಯನ್ನು (ಯುಸ್ಟೇಷಿಯನ್‌ಕೆನಾಲ್) ವಿವರಿಸಿದ.