ಪ್ರಚಲಿತ
ಡಾ.ಕೆ.ಸತೀಶ್ ಪಾಟೀಲ್
ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಎದ್ದಿರುವ ಆಂತರಿಕ ದಂಗೆಯ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ.
ಅದರಲ್ಲಿಯೂ ಬಾಂಗ್ಲಾದ ಈ ಬೆಳವಣಿಗೆ ಬಗ್ಗೆ ಭಾರತ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿದೆ. ನೆರೆರಾಷ್ಟ್ರದಲ್ಲಾಗುತ್ತಿರುವ ಈ ಅರಾಜಕತೆಗೆ ಭಾರತ ವೇಕೆ ತಲೆಕೆಡಿಸಿಕೊಳ್ಳಬೇಕು ಎನ್ನುವ ಆಲೋಚನೆ ಬರುವುದು ಸಾಮಾನ್ಯ.
ಆದ್ದರಿಂದ ಬಾಂಗ್ಲಾದೇಶದ ಸದ್ಯದ ಆಂತರಿಕ ದಂಗೆ ಮತ್ತು ಭಾರತದ ಪಾತ್ರದ ಬಗ್ಗೆ ಪರಿಶೀಲಿಸುವುದು ಅವಶ್ಯಕ. ಹಾಗೆ ನೋಡಿದರೆ, ಭಾರತ ಬಾಂಗ್ಲಾ ದೇಶದ ನಡುವಿನ ಸಂಬಂಧ ಬಾಂಗ್ಲಾ ಉದಯದಲ್ಲಿ ಭಾರತ ದೇಶದ ಪಾತ್ರ ಪ್ರಮುಖವಾಗಿತ್ತು. ಆದರೆ ಸದ್ಯದ ಬಾಂಗ್ಲಾದೇಶದಲ್ಲಿನ ಆಂತರಿಕ ಬಿಕ್ಕಟ್ಟಿಗೆ ಕಾರಣವಾದ ತಕ್ಷಣದ ಅಂಶಗಳತ್ತ ಗಮನಿಸಿದಾಗ ಆವಾಮಿ ಲೀಗ್ ಪಕ್ಷದ ನಾಯಕಿ ಶೇಖ್ ಹಸೀನಾ ನೇತೃತ್ವದ ಸರಕಾರ ಮಾಡಿದ ೧೯೭೧ರ ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ತ್ಯಾಗ ಮಾಡಿದ ಹೋರಾಟಗಾರರ ಕುಟುಂಬಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ.೩೦ ರಷ್ಟು ಮೀಸಲು ಜಾರಿಗೊಳಿಸುವ ಅವರ ನಿರ್ಧಾರದ ವಿರುದ್ಧ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ಆರಂಭಿಸಿ, ಅದರ ವಿರುದ್ಧದ ಹೋರಾಟ ಉಗ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೆರೆಯುವಂತೆ ಮಾಡಿತು.
ಹಾಗಾದರೆ ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದ ಈಗಿನ ಬಿಕ್ಕಟ್ಟಿನಲ್ಲಿ ಭಾರತದ ಪಾತ್ರವೇನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಹುಡುಕಲು, ಬಾಂಗ್ಲಾದೇಶದ ಮತ್ತು ಭಾರತ ನಡುವಿನ ಸಂಬಂಧದ ಇತಿಹಾಸವನ್ನು ಒಮ್ಮೆ ಅವಲೋಕಿಸುವುದು ಸೂಕ್ತ. ಈಗಿನ ಬಾಂಗ್ಲಾದೇಶ ಮೊದಲು ಪಾಕಿಸ್ತಾನದ ಭಾಗವಾಗಿತ್ತು. ಅದರಲ್ಲಿ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ಎಂಬ ಎರಡು ಪ್ರದೇಶಗಳು ಇದ್ದವು. ಪಶ್ಚಿಮ ಪಾಕಿಸ್ತಾನ ವೆಂದರೆ ಈಗಿನ ಪಾಕಿಸ್ತಾನ, ಪೂರ್ವ ಪಾಕಿಸ್ತಾನ ಎಂದರೆ ಈಗಿನ ಬಾಂಗ್ಲಾದೇಶ. ಈ ಎರಡು ಪ್ರದೇಶಗಳ ಮಧ್ಯೆ ಪ್ರಾರಂಭದಿಂದಲೂ ಸಹಕಾರ ಇರಲಿಲ್ಲ.
ಪಶ್ಚಿಮ ಪಾಕಿಸ್ತಾನ ಪೂರ್ವ ಪಾಕಿಸ್ತಾನವನ್ನು ಸಂಪೂರ್ಣ ನಿರ್ಲಕ್ಷಿಸಿತು. ಆಗ ಪೂರ್ವ ಪಾಕಿಸ್ತಾನದ ಜನರ ಸೌಲಭ್ಯಗಳಿಗಾಗಿ ಮತ್ತು ಜನರ ಹಕ್ಕು ಗಳಿಗಾಗಿ ಈ ಪ್ರದೇಶ ಅಭಿವೃದ್ಧಿಗಾಗಿ ಹೋರಾಟ ಮಾಡಲು ಭಂಗ ಬಂದು ಶೇಕ್ ಮುಜ್ಬೂರ್ ರೆಹಮಾನ್ ಇವರ ನಾಯಕತ್ವದಲ್ಲಿ ಅವಾಮಿ ಲೀಗ್ ಪಕ್ಷವು ಸ್ಥಾಪನೆ ಯಾಯಿತು. ಈ ಪಕ್ಷ ನಿರಂತರವಾಗಿ ಪಶ್ಚಿಮ ಪಾಕಿಸ್ತಾನದ ಆಡಳಿತ ವಿರೋಚ ಹೋರಾಟ ಮಾಡಿಕೊಂಡು ಬಂದಿತ್ತು. ಡಿಸೆಂಬರ್ ೧೯೭೧ರಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಒಟ್ಟು ೩೦೦ ಸ್ಥಾನ ಗಳಲ್ಲಿ ೧೬೦ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಪ್ರಾಂತೀಯ ಸಭೆಗಳಲ್ಲಿ ಸ್ಪಷ್ಟ ಬಹುಮತ ಪಡೆದಿತ್ತು ಆದರೆ ಪಶ್ಚಿಮ ಪಾಕಿಸ್ತಾನದ ಯಾಯ ಖಾನ್ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿ
ದರು. ಆಗ ಅವಾಮಿ ಲೀಗ್ ಪಕ್ಷದ ನಾಯಕ ಶೇಕ್ ಮುಜಬುರ್ ಕಾನೂನು ಭಂಗ ಚಳುವಳಿಗೆ ಜನತೆಗೆ ಕರೆ ನೀಡಿದರು. ಆಗ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಈ ಹೋರಾಟವನ್ನು ಹತ್ತಿಕ್ಕಲು ಪಾಕಿಸ್ತಾನದ ಜನರಲ್ ಟಿಕ್ಕಾ ಖಾನ್ ಅವರು ಸೈನಿಕ ಕ್ರಮ ಕೈಗೊಂಡರು. ಪೂರ್ವ ಪಾಕಿಸ್ತಾನದ ಅಮಾನಕ ಜನ, ಮಹಿಳೆ ಹಾಗೂ ಮಕ್ಕಳ ಮೇಲೆ ದಬ್ಬಾಳಿಕೆ ನಡೆಸಿ ಹಿಂಸಾಚಾರ ಮಾಡಿತು. ಆಗ ಈ ಹಿಂಸಾಚಾರದಿಂದ ಭಯಭೀತಗೊಂಡ ಸಾವಿರಾರು ಜನರು ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಆಗ ಅದು ಭಾರತಕ್ಕೆ ನಿರಾಶ್ರಿತರ ಸಮಸ್ಯೆಯಾಗಿ ಮಾರ್ಪಾಟಾಯಿತು.
ಇದರಿಂದಾಗಿ ಭಾರತದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿತು. ಆಗ ಭಾರತ ಬಾಂಗ್ಲಾದಲ್ಲಿನ ಈ ಬೆಳವಣಿಗೆಯನ್ನು ವಿಶ್ವದ ರಾಷ್ಟ್ರಗಳ ಗಮನ ಸೆಳೆಯಲು ಪ್ರಯತ್ನಿಸಿತು. ಭಾರತದ ಬೇಡಿಕೆಯಾದ ತಕ್ಷಣವೇ ಆವಾಮಿ ಲೀಗ್ ಪಕ್ಷಕ್ಕೆ ಅಧಿಕಾರ ಹಸ್ತಾಂತರ ಮಾಡಬೇಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ತಡೆಯ ಬೇಕು ಎಂದು ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು ಎಂಬುದಾಗಿತ್ತು ಆದರೆ ಭಾರತದ ಈ ಪ್ರಯತ್ನ ವಿಫಲವಾಯಿತು. ನಂತರ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ನಿರಾಶ್ರಿತರ ಸಮಸ್ಯೆ ಬಗೆಹರಿಸಲು ಭಾರತ ಈ ಪಾಕಿಸ್ತಾನದ ಬಿಕ್ಕಟ್ಟಿನಲ್ಲಿ ಭಾಗವಹಿಸಬೇಕಾಯಿತು.
ಮುಜಬೂರ್ ರೆಹಮಾನ್ ರಚಿಸಿದ ಮುಕ್ತ ವಾಹಿನಿಗಳೊಂದಿಗೆ ಸೇರಿ ಬಾಂಗ್ಲಾದಲ್ಲಿ ಪಶ್ಚಿಮ ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿ ಪಾಕಿಸ್ತಾನ ಸೈನ್ಯವನ್ನು ಪೂರ್ವ ಪಾಕಿಸ್ತಾನದಿಂದ ಓಡಿಸಿ ಬಾಂಗ್ಲಾ ದೇಶದ ಉದಯಕ್ಕೆ ಕಾರಣವಾಯಿತು. ನಂತರ ಬಾಂಗ್ಲಾದೇಶಕ್ಕೆ ಅಪಾರ ಪ್ರಮಾಣದ ಆಹಾರ
ಹಣಕಾಸಿನ ನೆರವನ್ನು ಒದಗಿಸಿತು. ಈ ಹೊಸ ಬಾಂಗ್ಲಾದೇಶದ ಉದಯದಲ್ಲಿ ಭಾರತ ದೇಶ ವಹಿಸಿದ ಪಾತ್ರ ಮತ್ತು ತ್ಯಾಗವನ್ನು ಬಾಂಗ್ಲಾದೇಶದ ನಾಯಕ ಶೇಖ್ ಮುಜಾಬುರ್ ರೆಹಮಾನ್ ಮುಕ್ತ ಕಂಠದಿಂದ ಪ್ರಸಂಶೆ ವ್ಯಕ್ತಪಡಿಸಿದರು. ಹೀಗೆ ಬಾಂಗ್ಲಾದೇಶದ ಉದಯದಲ್ಲಿ ಭಾರತ ನಿರ್ಣಾಯಕ
ಪಾತ್ರವಹಿಸಿತು.
ಈಗಿನ ಸದ್ಯದ ಬಾಂಗ್ಲಾದಲ್ಲಿನ ದಂಗೆಯನ್ನು ಅವಲೋಕಿಸಿದಾಗ ಹಿಂದೂ ದೇವಾಲಯಗಳ ನಾಶ, ಬಾಂಗ್ಲಾದೇಶದ ಜನಕ ಭಂಗ ಬಂದು ಶೇಖ್ ಮುಜಬೂರ್ ರೆಹಮಾನ್ ಪ್ರತಿಮೆ ಧ್ವಂಸದ ಹಿಂಸಾತ್ಮಕ ಹೋರಾಟವನ್ನು ನೋಡಿದರೆ ಇದರ ಹಿಂದೆ ಮೂಲಭೂತವಾದಿಗಳ ಕೈವಾಡ ಇರುವುದು
ಸ್ಪಷ್ಟವಾಗುತ್ತದೆ. ಆದರೀಗ ಗಮನಿಸುವ ಅಂಶವೆಂದರೆ ಪಾಕಿಸ್ತಾನವು ಬಾಂಗ್ಲಾದೇಶದ ಮೇಲೆ ಪ್ರಭಾವ ಬೀರಲು ಮತ್ತು ಬಾಂಗ್ಲಾದೇಶದ ಮೇಲೆ ಇರುವ ಭಾರತದ ಪ್ರಭಾವ ಕಡಿಮೆಗೊಳಿಸಲು ಪ್ರಯತ್ನಿಸುತ್ತಾ ಬಂದಿದೆ. ಈಗಿನ ಬಾಂಗ್ಲಾದಲ್ಲಿನ ಹಿಂಸಾಚಾರವನ್ನು ನೋಡಿದರೆ ಇದರ ಹಿಂದೆ ಪಾಕಿಸ್ತಾನದ ಐಎಸ್‌ಐ ಕೈವಾಡದ ಶಂಕೆಯನ್ನು ಉಂಟುಮಾಡುತ್ತದೆ.
ವಿದ್ಯಾರ್ಥಿಗಳ ಮೀಸಲಾತಿ ಹೋರಾಟವಾಗಿದ್ದರೆ ಅದು ಬೇರೆ, ವಿದ್ಯಾರ್ಥಿಗಳ ಬೇಡಿಕೆ ಈಡೇರಿದ ನಂತರವೂ ಈ ಹಿಂಸಾಚಾರ ಮುಂದುವರೆದಿರುವು ದನ್ನು ನೋಡಿದಾಗ ಇದರಲ್ಲಿ ಮೂಲಭೂತವಾದಿಗಳ ಕೈವಾಡವಿದೆ ಎನ್ನುವ ಅನುಮಾನಗಳು ಬಲವಾಗಿ ಕಾಡುತ್ತದೆ. ಈಗಿನ ಸನ್ನಿವೇಶದಲ್ಲಿ ಬಾಂಗ್ಲಾದಲ್ಲಿನ ಹಿಂಸಾಚಾರಕ್ಕೆ ನಲುಗಿದ ಜನ ಭಯಭೀತರಾಗಿ ಭಾರತದ ಗಡಿ ಪ್ರವೇಶಿಸಲು ಗಡಿಯಲ್ಲಿ ಬಂದು ನಿಂತಿರುವುದನ್ನು ನೋಡಿದಾಗ ಎಲ್ಲಿ ಮತ್ತೆ ೧೯೭೧ರ ಇತಿಹಾಸ ಮರುಕಳಿಸಲಿದೆ ಎಂಬ ಅನುಮಾನ ಮೂಡುತ್ತದೆ.
ಸಹಜವಾಗಿ ಇದು ಭಾರತಕ್ಕೆ ಮತ್ತೆ ನಿರಾಶ್ರಿತರ ಸಮಸ್ಯೆಯಾಗಿ ಮಾರ್ಪಡಾಗುತ್ತದೆ ಎನ್ನುವ ಅನುಮಾನ ಮೂಡುತ್ತಿದೆ. ಈ ನಡುವೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ. ಬಂಗಾಳಕೊಲ್ಲಿಯಲ್ಲಿ ನ ಸೆಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕ
ಕೇಳಿತ್ತು. ಆದರೆ ದ್ವೀಪವನ್ನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕೆ ಅಮೆರಿಕ ಸಂಚು ಮಾಡಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದಿದ್ದಾರೆ. ಈ ಹೇಳಿಕೆ ಯಲ್ಲಿ ಎಷ್ಟು ಸತ್ಯವಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ. ಆದರೆ ದಕ್ಷಿಣ ಏಷ್ಯಾದಲ್ಲಿ ತಮ್ಮ ಪ್ರಭಾವವನ್ನು ಬೀರಲು ಅಮೆರಿಕ ಮೊದಲಿ ನಿಂದಲೂ ಪ್ರಯತ್ನಿಸುತ್ತಿರುವುದು ಸುಳ್ಳಲ್ಲ.
ಇನ್ನು ಒಂದು ಗಮನಿಸಬೇಕಾಗಿರುವ ಸಂಗತಿ ಎಂದರೆ ಬಾಂಗ್ಲಾದೇಶದ ಮಾಜಿ ಪ್ರಧಾನಿಗೆ, ಭಾರತ ಸರಕಾರ ತಮ್ಮ ದೇಶದಲ್ಲಿ ಅವರಿಗೆ ಆಶ್ರಯ ನೀಡಿದ್ದನ್ನು ಬಾಂಗ್ಲಾದೇಶದ ವಿರೋಧ ಪಕ್ಷವು ತೀವ್ರವಾಗಿ ವಿರೋಧಿಸುತ್ತಿದೆ. ಇತಿಹಾಸವನ್ನು ನೋಡಿದಾಗ ಚೀನಾ ದಾಳಿಯಿಂದ ಟಿಬೆಟ್ ತೊರೆದು
ಬಂದ ದಲೈಲಾಮ ಮತ್ತು ಅವರ ಸಹಚರರನ್ನು ಭಾರತವು ಆಶ್ರಯ ನೀಡಿದ್ದಕ್ಕೆ ಚೀನಾ ಭಾರತ ಎರಡು ರಾಷ್ಟ್ರಗಳ ಮಧ್ಯೆ ತೀವ್ರವಾದ ವಿರಸಕ್ಕೆ ಕಾರಣವಾಗಿತ್ತು. ಈಗ ಅದೇ ರೀತಿ ಬಾಂಗ್ಲಾದೇಶದ ನೂತನ ಸರ್ಕಾರದ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಬರಬಹುದು. ಈ ನಿಟ್ಟಿನಲ್ಲಿ ಭಾರತವು ಸೂಕ್ಷ್ಮ ಹೆಜ್ಜೆಯನ್ನು ಇಡಬೇಕಾಗಿದೆ.
ದಕ್ಷಿಣ ಏಷ್ಯಾದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಭಾರತ ದೇಶವು ಬಾಂಗ್ಲಾದೇಶದ ಈ ಬಿಕ್ಕಟ್ಟಿನಲ್ಲಿ ಮೌನವಹಿಸುವುದೇ ಉತ್ತಮ. ಏಕೆಂದರೆ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ ಭಾರತದ ವಿರೋದಿ ರಾಷ್ಟ್ರವಾಗಿದೆ. ಇನ್ನು ನೇಪಾಳದಲ್ಲಿ ಮಾವೋವಾದಿಗಳು ಚೀನಾದ ಪರವಿದ್ದು, ಭಾರತದ ವಿರೋಧಿ ಭಾವನೆಯನ್ನು ಹೊಂದಿದ್ದಾರೆ. ಹೀಗಿರುವಾಗ ಬಾಂಗ್ಲಾದೇಶದೊಂದಿಗೆ ಭಾರತ ಉಗ್ರ ನೀತಿಯನ್ನ ಅನುಸರಿಸಿದರೆ ದಕ್ಷಿಣ ಏಷ್ಯಾ ದಲ್ಲಿ ಭಾರತ ಆಯಕಟ್ಟಿನ ದೃಷ್ಟಿಯಿಂದ ಪ್ರಮುಖವಾಗಿರುವ ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧ ಮುಂದುವರಿಸುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಈಗಾಗಲೇ ಭಾರತ ವಿರೋಧಿ ಚೀನಾ, ಪಾಕಿಸ್ತಾನಗಳು ಭಾರತದ ವಿರುದ್ಧ ಸದಾ ಕತ್ತಿಮಸೆಯುತ್ತಿವೆ. ಇದರೊಂದಿಗೆ ಬಾಂಗ್ಲಾದೇಶ ಭಾರತದ ವಿರೋಧಿ ಪಾಳಯ ಸೇರಿಕೊಂಡರೆ ಭಾರತಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆ ಹರಡಲು
ಪಾಕಿಸ್ತಾನ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ದೃಷ್ಟಿಯಲ್ಲಿ ಈಗಿನ ದಂಗೆ ಪಾಕಿಸ್ತಾನಕ್ಕೆ ವರವಾಗಲು ಬಿಡಬಾರದು. ಈ ಮಧ್ಯ ಬಾಂಗ್ಲಾದೇಶದ ಹಿಂಸಾಚಾರಕ್ಕೆ ಕಾರಣವಾಗಿರುವ ಹೋರಾಟವನ್ನು ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನುಸ್ ಸ್ವಾಗತಿಸಿ ಬೆಂಬಲಿಸಿದ್ದಾರೆ. ಅವರ
ನಡೆ ಭಾರತದೊಂದಿಗೆ ಭವಿಷ್ಯದಲ್ಲಿ ಯಾವ ನೀತಿ ಅನುಸರಿಸುತ್ತಾರೆ ಎಂಬುದನ್ನು ಕೂಡ ಅಷ್ಟೇ ಮಹತ್ವದ್ದಾಗಿದೆ.
ಒಟ್ಟಿನಲ್ಲಿ ಬಾಂಗ್ಲಾದೇಶದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸಿ ಪ್ರಜಾಸತ್ತಾತ್ಮಕ ಸರಕಾರ ರಚನೆಯಾಗಿ ಈಗಿನ ಬಾಂಗ್ಲಾದೇಶದ ಮೂಲಭೂತವಾದಿಗಳ ಉಪಟಳ ಕಡಿಮೆಯಾಗಲಿ ಭವಿಷ್ಯದಲ್ಲಿ ಮೊದಲಿನಂತೆ ಭಾರತದೊಂದಿಗೆ ಬಾಂಗ್ಲಾ ದೇಶದ ಸ್ನೇಹ ಸಹಕಾರ ಸಂಬಂಧ ಮುಂದುವರೆಯಲಿ ಎನ್ನು ವುದು ಭಾರತದ ನಿರೀಕ್ಷೆಯಾಗಿದೆ.
(ಲೇಖಕರು: ರಾಜಕೀಯ ವಿಶ್ಲೇಷಕರು
ಹಾಗೂ ಪ್ರಾಧ್ಯಾಪಕರು)