Thursday, 26th December 2024

ಬ್ಯಾಂಕ್‌ಗಳಲ್ಲಿ ವಾರಕ್ಕೆ ೫ ದಿನಗಳ ಕೆಲಸ ಭರಿಸಬಹುದೇ ?

ಸಂವಾದ

ರಮಾನಂದ ಶರ್ಮಾ

ramanandsharma28@gmail.com

ಮುಂದಿನ ದಿನಗಳಲ್ಲಿ ದೇಶಾದ್ಯಂತ ಬ್ಯಾಂಕುಗಳೂ ವಾರದಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸುವ ಸಾದ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ನೌಕರ ಸಂಘಟನೆಗಳ ಒಕ್ಕೂಟ ಮತ್ತು ಭಾರತೀಯ ಬ್ಯಾಂಕುಗಳ ಸಂಘ (ಐbಜಿZ ಆZh ಅooಟ್ಚಜಿZಠಿಜಿಟ್ಞ -ಐಆಅ)ದ ಮಧ್ಯೆ ಒಡಂಬಡಿಕೆಯಾಗಿದ್ದು,
ಸದ್ಯದಲ್ಲಿಯೇ ಐಬಿಎ ತನ್ನ ಶಿಫಾರಸನ್ನು ಹಣಕಾಸು ಮಂತ್ರಾಲಯಕ್ಕೆ ಕಳಿಸಲಿದೆ.

ಹಣಕಾಸು ಮಂತ್ರಾಲಯವು ವ್ಯಾಪಾರೋದ್ಯಮ ಸಂಘಗಳು ಮತ್ತು ಇನ್ನಿತರ ಸ್ಟೇಕ್ ಹೋಲ್ಡರ್‌ಗಳೊಡನೆ ಸಮಾಲೋಚಿಸಿ ತನ್ನ ಒಪ್ಪಿಗೆ ನೀಡುತ್ತಿದೆ. ಈ ಪ್ರಕ್ರಿಯೆಗೆ ಸುಮಾರು ೨ ತಿಂಗಳು ಬೇಕಾಗುತ್ತದೆ. ಬಹುಶಃ ಮೇ ತಿಂಗಳಿನಿಂದ ಹೊಸ ವ್ಯವಸ್ಥೆ ಜಾರಿಯಾಗಬಹುದು ಎನ್ನುವ ಆಶಾಭಾವನೆಯಲ್ಲಿ ಬ್ಯಾಂಕ್ ಸಿಬ್ಬಂದಿ ಇದ್ದಾರೆ. ಸಾಮಾನ್ಯವಾಗಿ ಐಬಿಎನ ಶಿಫಾರಸಿಗೆ ಹಣಕಾಸು ಮಂತ್ರಾಲಯ ಸಮ್ಮತಿ ನೀಡುವುದರಿಂದ ಬ್ಯಾಂಕ್ ಸಿಬ್ಬಂದಿ ಯಲ್ಲಿ ಭರವಸೆ ಮೂಡಿದೆ. ಆದರೆ, ‘ಸ್ಟೇಕ್ ಹೋಲ್ಡರ್ಸ್ ಜತೆ ಸಮಾಲೋಚಿಸಿ’ ಎನ್ನುವ ವಾಕ್ಯ ಕೆಲವರಲ್ಲಿ ಅಧೈರ್ಯ ಮೂಡಿಸಿದ್ದು, ಸಾರ್ವಜನಿಕರು ಮತ್ತು ವ್ಯಾಪಾರೋ ಧ್ಯಮ ಸಂಘಟನೆಗಳು ಪ್ರತಿರೋಧವನ್ನು ಒಡ್ಡುವುದನ್ನು ಅಲ್ಲಗೆಳೆಯಲಾಗದು. ಅಂತೆಯೇ ಇನ್ನೊಂದು ಐದು ದಿನಗಳ ವಾರಕ್ಕೆ ಇನ್ನೊಂದು ಹೆಜ್ಜೆಬಾಕಿ ಇದೆ ಎನ್ನಲಾಗುತ್ತಿದೆ.

ಬ್ಯಾಂಕ್ ಸಿಬ್ಬಂದಿಗೆ ದೊರಕುವ ಈ ಕೊಡುಗೆ ಹಿಂದೆ ಹಲವು ವರ್ಷಗಳ ಹಗ್ಗ- ಜಗ್ಗಾಟ, ಪ್ರತಿಭಟನೆ, ಮುಷ್ಕರಗಳ ಸುದೀರ್ಘ ಹೋರಾಟದ ಇತಿಹಾಸ ಇದೆ. ಐಬಿಎ ಕೂಡ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವಾಗ ಸಾಕಷ್ಟು ಸಮಯ ತೆಗೆದುಕೊಂಡಿದೆ. ಈ ಕೊಡುಗೆ ಬ್ಯಾಂಕುಗಳಿಗೆ ಜನಸಾಮಾನ್ಯರು ಭಾವಿಸುವಂತೆ ಉಚಿತವಾಗಿ ಬರದೇ, ನಷ್ಟವಾಗುವ ದಿನಗಳ ಕೆಲಸದ ಅವಧಿಯನ್ನು, ಕೆಲಸದ ದಿನಗಳಲ್ಲಿ ಪ್ರತಿದಿನ ೪೦ ನಿಮಿಷ ಹೆಚ್ಚಿಗೆ ಕೆಲಸ ಮಾಡಿ ಸರಿದೂಗಿಸುವಂತೆ ಮಾಡಲಾಗಿದೆ. ಈಗ ಪ್ರತಿ ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕುಗಳಿಗೆ ರಜೆ ಇರುತ್ತಿದ್ದು,ಈ ಪ್ರಸ್ತಾಪ ಜಾರಿಗೆ ಬಂದರೆ, ಮುಂದಿನ ದಿನಗಳಲ್ಲಿ ಬ್ಯಾಂಕುಗಳೂ ವಾರದಲ್ಲಿ ಆರು ದಿನದ ಬದಲಿಗೆ ಐದು ದಿನ ಕೆಲಸಮಾಡುತ್ತವೆ.

ಬ್ಯಾಂಕುಗಳ ಪರಿಷ್ಕೃತ ಸಮಯ ಬೆಳಗ್ಗೆ ೯.೫೦ ರಿಂದ ಸಂಜೆ ೫.೩೦ರವರೆಗೆ ಇರಲಿದೆ ಮತ್ತು ನಗದು ವಹಿವಾಟು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೪ ಮತ್ತು ನಗದು ರಹಿತ ವಹಿವಾಟುಗಳು ೪.೩೦ರವರೆಗೆ ಇರುತ್ತದೆ. ವಾರದಲ್ಲಿ ಐದು ದಿನಗಳ ಕೆಲಸ ಬ್ಯಾಂಕ್ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿದ್ದು, ಅದು ಸನ್ನಿಹಿತವಾದಂತೆ ಕಾಣುತ್ತಿದೆ. ಬ್ಯಾಂಕುಗಳೂ ಇನ್ನಿತರ ವಲಯಗಳಂತೆ ಎರಡು ದಿನಗಳ ವಾರಾಂತ್ಯವನ್ನು ಅನುಭವಿಸುವ ದಿನಗಳನ್ನು ಕಾಣಬ ಹುದು.

ವಾರದಲ್ಲಿ ಐದು ದಿನಗಳ ಕೆಲಸ ಮತ್ತು ದೀರ್ಘ ವಾರಾಂತ್ಯದ ರಜೆಗಳು ವಿದೇಶಗಳಲ್ಲಿ, ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ನಾರ್ಮ. ಸ್ಪೇನ್, ಐರ್ಲೆಂಡ್, ಐಸ್‌ಲ್ಯಾಂಡ್, ಸ್ಕಾಟ್‌ಲೆಂಡ್, ನ್ಯೂಜಿಲೆಂಡ್, ಯುಎಇ, ಜಪಾನ್ ಮತ್ತು ಬೆಲ್ಜಿಯಂ ಐದು ದಿನಗಳ ಕೆಲಸದಿಂದ ವಾರಕ್ಕೆ ನಾಲ್ಕುದಿನಗಳ ವ್ಯವಸ್ಥೆಗೆ ಬದಲಾಗಿವೆ. ಭಾರತದಲ್ಲೂ ಇದೇನು ಹೊಸ ಪರಿಕಲ್ಪನೆಯಲ್ಲ. ಬಹುತೇಕ ಕೇಂದ್ರ-ರಾಜ್ಯ ಸರಕಾರದ ಕಚೇರಿಗಳು, ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೋರೇಟ್ ಹೌಸ್‌ಗಳು, ಐಟಿ ಕಂಪನಿಗಳು, ಕೆಲವು ಸ್ಕೂಲ್‌ಗಳು, ವಿಮಾ ಕಚೇರಿಗಳು, ನಿಗಮ ಮಂಡಲಿಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ವಾರದಲ್ಲಿ ಐದೇ ದಿನ ಕೆಲಸಮಾಡುತ್ತವೆ. ಇಡೀ ದೇಶವೇ ಐದು ದಿನಗಳ ಕೆಲಸದ ವಾರದತ್ತ ದಾಪುಗಾಲು ಹಾಕುತ್ತಿರುವಾಗ ಬ್ಯಾಂಕುಗಳನ್ನು ಈ ವ್ಯವಸ್ಥೆಯಿಂದ ಹೊರಗಿಟ್ಟಿದ್ದೇಕೆ ಎಂದು ಬ್ಯಾಂಕ್ ಸಿಬ್ಬಂದಿ ಸಂಘಟನೆಗಳು ಕೆಲಕಾಲದಿಂದ ಒತ್ತಾಯಿಸುತ್ತಿದ್ದವು ಮತ್ತು
ಮೂರು -ನಾಲ್ಕು ಬಾರಿ ಒಂದು ದಿನದ ಮುಷ್ಕರವನ್ನೂ ನಡೆಸಿದ್ದವು.

ಬ್ಯಾಂಕುಗಳು ನಿತ್ಯ ಜೀವನದ ಹಣಕಾಸು ವ್ಯವಸ್ಥೆಯ ನರನಾಡಿಯಾಗಿದ್ದು, ವಾರಾಂತ್ಯದಲ್ಲಿ ಎರಡು ದಿನ ಮುಚ್ಚಲು ಸಾಧ್ಯವಿಲ್ಲ ಎಂದು ಭಾರತೀಯ
ಬ್ಯಾಂಕುಗಳ ಸಂಘ ಮತ್ತು ಸರಕಾರ ಈ ಬೇಡಿಕೆಯನ್ನು ತಳ್ಳಿ ಹಾಕುತ್ತಿವೆ. ಇಂಥ ಕ್ರಮಕ್ಕೆ ಜನಸಾಮಾನ್ಯರ ಮತ್ತು ವ್ಯಾಪಾರೋದ್ಯಮಗಳ ತೀರ ವಿರೋಧವಿದೆ ಎಂದು ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದವು. ಡಿಜಿಟಲೀಕರಣದಿಂದ ಬ್ಯಾಂಕುಗಳಲ್ಲಿ ಇತ್ತೀಚೆಗೆ ಗ್ರಾಹಕರ ಭೇಟಿ ಕಡಿಮೆಯಾಗುತ್ತಿದ್ದು, ಸುಮಾರು ಶೇ.೬೦-೭೦ ವ್ಯವಹಾರಗಳು ಡಿಜಿಟಲೀಕರಣದಿಂದ ಆಗುತ್ತಿದೆ.

ದಿನನಿತ್ಯದ ವ್ಯವಹಾರಗಳಿಗೆ ಗ್ರಾಹಕರಿಗೆ ಏಟಿಎಂ, ಸಿಡಿಎಂ, ಯುಪಿಐ ಪೇಮೆಂಟ್ ಸಿಸ್ಟಮ, ಕ್ಯೂಆರ್ ಕೋಡ್‌ಗಳು, ನೆಟ್ ಬ್ಯಾಂಕಿಂಗ್ ಲಭ್ಯವಿದ್ದು, ಜನಸಾಮಾನ್ಯರಿಗೆ ಅಂಥ ತೊಂದರೆಯಾಗುವುದಿಲ್ಲ, ತೊಂದ ರೆಯಾದರೂ ಅದು ಕನಿಷ್ಟವಾಗಿ ಇರುತ್ತದೆ. ಇತರ ಇಲಾಖೆಗಳಲ್ಲಿ ರಜೆಯಾದರೆ
ಎಲ್ಲವೂ ಬಂದ್ ಆಗಿರುತ್ತದೆ. ಆದರೆ ಬ್ಯಾಂಕುಗಳಲ್ಲಿ ರಜೆಯಾದರೂ ಹಲವು ಬೇಸಿಕ್ ಸೌಲಭ್ಯಗಳು ದೊರಕುತ್ತಿದೆ ಎನ್ನುವುದು ಬ್ಯಾಂಕ್ ಕಾರ್ಮಿಕ ಸಂಘಗಳ ವಾದ. ಇದರಲ್ಲಿ ಅರ್ಥವಿಲ್ಲದಿಲ್ಲ.

ಒಂದು ಲೆಕ್ಕಾಚಾರದ ಪ್ರಕಾರ ಕಚೇರಿಗಳನ್ನು ಅರ್ಧದಿನ ತೆರೆಯುವುದಕ್ಕಿಂತ ಕಚೇರಿಗಳನ್ನು ತೆರೆದಾಗಲೇ ಇನ್ನೊಂದು ಅರ್ಧ -ಮುಕ್ಕಾಲು ತಾಸು
ಹೆಚ್ಚಿನ ಕೆಲಸಮಾಡಿಸುವುದು ಲೇಸು ಎನ್ನುವ ತರ್ಕ ಕೂಡ ಇದೆಯಂತೆ. ಕಚೇರಿ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿಯ ಸಾರಿಗೆ ವೆಚ್ಚವನ್ನು ಉಳಿಸಬಹುದು ಎನ್ನುವ ಲೆಕ್ಕ ಇದರ ಹಿಂದೆನದು. ನಮ್ಮ ದೇಶದ ವಿಶೇಷವೆಂದರೆ, ಇಲ್ಲಿ ನಮ್ಮತನಕ್ಕಿಂತ ವಿದೇಶಿ ಪರಿಕಲ್ಪನೆಗೆ, ಅದರಲ್ಲೂ ಮುಖ್ಯವಾಗಿ ಡಿಛಿoಠಿ ಜಿo ಚಿಛಿoಠಿ ಹೆಚ್ಚು ಮೇಳೈಸುತ್ತದೆ. ಪಶ್ಚಿಮ ರಾಷ್ಟ್ರಗಳಲ್ಲಿ ಮಾಡುವುದನ್ನು, ಕಣ್ಣು ಮುಚ್ಚಿ ಅನುಸರಿಸುವುದರಲ್ಲಿ ಮತ್ತು
ನಕಲು ಮಾಡುವದರಲ್ಲಿ ನಾವು ನಿಸ್ಸೀಮರು.

ಅಲ್ಲಿ ನಡೆಯುವುದನ್ನು, ಇಲ್ಲಿ ನಕಲು ಮಾಡುವುದು,ಅಳವಡಿಸಿಕೊಳ್ಳುವುದು ಲಾಗಾಯ್ತನಿಂದ ನಡೆದು ಬಂದಿದೆ. ಅದು ಇಲ್ಲಿನ ಸಾಮಾಜಿಕ, ಆರ್ಥಿಕ ಧಾರ್ಮಿಕ ಪರಿಸ್ಥಿತಿ ಮತ್ತು ಪರಂಪರೆಗೆ ಹೊಂದಿಕೊಳ್ಳಬಹುದೇ, ನಮ್ಮ ಬದುಕಿನ ವೈಖರಿಗೆ ಅದು ಸಾಟಿಯಾಗಬಹುದೇ ಎನ್ನುವ ಚಿಂತನೆ
ಮಾಡದೇ, ಕೋಣ ಕರುಹಾಕಿತು ಎಂದರೆ, ಅದನ್ನು ಕಟ್ಟಿಹಾಕು ಎನ್ನುವ ಆಟಿಟ್ಯೂಡ್ ಇದಕ್ಕೆ ಕಾರಣ. ಪಾಶ್ಚಿಮಾತ್ಯ ಜೀವನ ಕ್ರಮಕ್ಕೂ ನಮ್ಮ ಜೀವನ ಕ್ರಮಕ್ಕೂ ಅಜಗಜಾಂತರವಿದ್ದು, ಅದನ್ನು ಬಹುಭಾಷಾ, ಬಹುಸಂಸ್ಕೃತಿ, ವಿಭಿನ್ನ ಜೀವನ ಕ್ರಮ ಇರುವ ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ.

ವಿದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಾರಾಂತ್ಯಕ್ಕೆ ವಿಶೇಷ ಅರ್ಥ ಮತ್ತು ಮಹತ್ವ ಇದೆ. ವಾರದ ಮೊದಲ ಐದು ದಿನ ಕೆಲಸ ಮಾಡಿ ಮುಂದಿನ ಎರಡು ದಿನ ವಿಶ್ರಾಂತಿ ಪಡೆದು, ದಣಿವಾರಿಸಿಕೊಂಡು, ಐದು ದಿನಗಳ ಕೆಲಸದ ಆಯಾಸ-ಒತ್ತಡವನ್ನು ಕಳೆದುಕೊಂಡು ಸೋಮವಾರ ಫ್ರೆಶ್ ಆಗಿ ಕೆಲಸಕ್ಕೆ ಹಾಜರಾಗಬೇಕು ಎನ್ನುವ ಚಿಂತನೆ ಅಲ್ಲಿ ಪ್ರಚಲಿತ ಇದೆ. ಅದಕ್ಕೂ ಮಿಗಿಲಾಗಿ ವಿದೇಶಗಳಲ್ಲಿ ನಮ್ಮ ದೇಶದಷ್ಟು ಸಾರ್ವಜನಿಕ ರಜೆಗಳು ಇರುವುದಿಲ್ಲ. ನಮ್ಮಲ್ಲಿ, ೫೨ ಭಾನುವಾರ, ೩೦ಹಕ್ಕಿನ ರಜೆಗಳು, ೧೨ ಕ್ಯಾಷುವಲ್ ರಜೆಗಳು, ೩೦ ಮೆಡಿಕಲ್ ರಜೆಗಳು ಮತ್ತು ೧೫ ಧಾರ್ಮಿಕ ಮತ್ತು ಹಬ್ಬ-ಹರಿದಿನಗಳು, ಜನ್ಮ ದಿನಗಳು, ಸುಮಾರು ೩೨ ಜಯಂತಿಗಳು, ಬಂದ್‌ಗಳು ಮತ್ತು ಮಂತ್ರಿ ಮಹೋದಯರ ನಿಧನದ ನಿಮಿತ್ತ ನೀಡುವ ರಜೆಗಳನ್ನು ಸೇರಿಸಿದರೆ ವರ್ಷದಲ್ಲಿ ಸುಮಾರು ೧೫೦ ದಿನಗಳ ರಜೆ ಇರುತ್ತವೆ.

ಇದಾವುದೂ ಇಲ್ಲದ ವಿದೇಶಗಳಲ್ಲಿ ವಾರಾಂತ್ಯ ಎರಡು ದಿನಗಳ ರಜೆ ನೀಡುವುದರಲ್ಲಿ ಅಂಥ ವಿಶೇಷ ಕಾಣುವುದಿಲ್ಲ. ಅದರೆ, ಭಾರತದಲ್ಲಿ ಇದು ದೇಶಕ್ಕೆ ದುಬಾರಿಯಾಗುತ್ತದೆ. ಒಂದು ದಿನದ ರಜೆಯ ಬದಲಿಗೆ ದಿನಾಲು ಅರ್ಧ ತಾಸು ಹೆಚ್ಚಿನ ಕೆಲಸ ಉದ್ಯೋಗಿಗಳ ಪ್ರೊಡ ಕ್ಟಿವಿಟಿಯಲ್ಲಿ ಅಂಥ ಹೆಚ್ಚಳ ಸಾದ್ಯವೇ ಎನ್ನುವುದು ಇನ್ನು ಚರ್ಚಾಸ್ಪದವಾಗಿದೆ. ಹಾಗೆಯೇ ಒಂದು ದಿನ ಹೆಚ್ಚಿನ ರಜೆ ನೀಡುವುದರಿಂದ ಕಚೇರಿಗಳ ನಿರ್ವಹಣಾ ವೆಚ್ಚದಲ್ಲಿ ಉಳಿತಾಯವಾಗುತ್ತದೆ ಎನ್ನುವುದೂ ತಾರ್ಕಿಕ ಎನಿಸುವುದಿಲ್ಲ.

ಇನ್ನೊಂದು ದಿನ ಕಚೇರಿಗೆ ಬರುವ ಬದಲಿಗೆ ಬಂದ ದಿನ ಇನ್ನೊಂದು ಅರ್ಧ ತಾಸು ಸಮಯವನ್ನು ಹೆಚ್ಚಿಗೆ ಕಚೇರಿಯಲ್ಲಿ ಕಳೆಯಬಹುದು
ಎನ್ನುವ ಮಾತು ಕೇಳಬಹುದು. ಕೆಲಸದ ವಿಚಾರದಲ್ಲಿ ಅಂತಹ ಬದಲಾವಣೆ ಕಾಣಿಸದು ಎನ್ನಲಾಗುತ್ತದೆ. ಐಟಿ ವಲಯದ ಬಹುತೇಕ ಕೆಲಸಗಳು ವಿದೇಶಗಳಿಗೆ ಸಂಬಂಧಿಸಿದ್ದು, ವಿದೇಶಗಳಲ್ಲಿ ಕಚೇರಿಗಳು ಮುಚ್ಚಿದರೆ ಅದರ ಪರಿಣಾಮ ಈ ದೇಶದ ಐಟಿ ವಲಯಕ್ಕೂ ಆಗುತ್ತದೆ. ಅಂತೆಯೇ ಐಟಿ ವಲಯವು ಐದು ದಿನಗಳ ವಾರವನ್ನು ಅಳವಡಿಸಿ ಕೊಂಡಿರುವುದರಲ್ಲಿ ಅರ್ಥವಿದೆ.

ಆದರೆ, ಇದನ್ನು ಉಳಿದ ವಲಯಗಳಿಗೂ ವಿಸ್ತರಿಸಿರುವುದು ಸರಿಯಾದ ಕ್ರಮವಲ್ಲ ಎನ್ನುವ ಅಭಿಪ್ರಾಯದಲ್ಲಿ ತೂಕವಿದೆ. ಈ ನಿಟ್ಟಿನಲ್ಲಿ ಸರಕಾರ ಆಳವಾದ ಹೋಮ್ ವರ್ಕ್ ಮಾಡಿದಂತೆ ಕಾಣುವುದಿಲ್ಲ. ಮೊದಲ ಹೆಜ್ಜೆ ಇಡುವಾಗ ಸರಕಾರ ಇದರ ದೂರಗಾಮಿ ಪರಿಣಾಮವನ್ನು ಅದ್ಯಯನ ಮಾಡಬೇಕಿತ್ತು. ವಿಮಾ ವಲಯಕ್ಕೆ ಐದು ದಿನಗಳ ವಾರವನ್ನು ನೀಡುವಾಗ ಮುಂದೊಂದು ದಿನ ಗ್ರಾಹಕರೇ ಮುಖ್ಯವಾಗಿರುವ ಬ್ಯಾಂಕಿಂಗ್
ವಲಯದಿಂದಲೂ ಇಂಥ ಬೇಡಿಕೆ ಬರಬಹುದು ಎಂದು ಚಿಂತಿಸಿಲ್ಲ ವೇನೋ? ಇಂಥ ಕ್ರಮಗಳು ಮತ್ತು ಉದಾರ ನೀತಿಗಳು ಒಂದು ರೀತಿಯ ಸಮೂಹ ಸನ್ನಿ ಅಥವಾ ಸಾಂಸರ್ಗಿಕ ರೋಗವಿದ್ದಂತೆ ಬಹುಬೇಗ ಹರಡುತ್ತದೆ.

ಒಂದು ವಲಯಕ್ಕೆ ಅನ್ವಯ ಮಾಡಿದರೆ, ದಿನಬೆಳಗಾಗುವುದರೊಳಗಾಗಿ ಇನ್ನೊಂದು ವಲಯದಿಂದ ಬೇಡಿಕೆ ಬರುತ್ತದೆ. ಈಗ ಈ ದೇಶದಲ್ಲಿ ಆಗಿದ್ದೂ ಅದೇ: ಮುಂದಿನ ದಿನಗಳಲ್ಲಿ ಬಹುತೇಕ ಕೃಷಿ ಕಾರ್ಮಿಕರನ್ನು ಹೊರತುಪಡಿಸಿ ಎಲ್ಲ ವಲಯಗಲ್ಲೂ ಇದು ಪಸರಿಸುವ ಸಾದ್ಯತೆ ಕಾಣುತ್ತದೆ. ಮನೆ ಕೆಲಸದವರೂ ಕನಿಷ್ಠ ವಾರದಲ್ಲಿ ಒಂದು ದಿನದ ರಜೆಯನ್ನು ಕೇಳಬಹುದು. ಈ ನಿಟ್ಟಿನಲ್ಲಿ ಈಗಾಗಲೇ ವರದಿಗಳು ಇವೆ. ಒಂದು ಸೌಲಭ್ಯವನ್ನು ನೀಡಿ
ಅದನ್ನು ಅಷ್ಟು ಸುಲಭವಾಗಿ ಹಿಂತೆಗೆದುಕೊಳ್ಳುವುದು ಪ್ರಚಲಿತ ಕಾನೂನಿನಡಿಯಲ್ಲಿ ಕಷ್ಟ ಸಾಧ್ಯ. ಅದಕ್ಕೆ ಅಪಾರ ಬೆಲೆ ತೆರಬೇಕು. ಅಂತೆಯೇ ಒಂದು ಸೌಲಭ್ಯವನ್ನು ನೀಡುವಾಗ ಸುದೀರ್ಘ ಮತ್ತು ಆಳವಾದ ಚಿಂತನೆ ಬೇಕಾಗುತ್ತದೆ.

ದೇಶದಲ್ಲಿ ಪ್ರೊಡಕ್ಟಿವಿಟಿಯನ್ನುಹೆಚ್ಚಿಸಲು ೧೨ ತಾಸಿನವರೆಗೆ ಕೆಲಸ ಮಾಡಬೇಕು ಎನ್ನುವ ಚಿಂತನೆ ಚಿಗುರೊಡೆಯುತ್ತಿರುವಾಗ ಈ ದೇಶ ಇಂಥ ಐದು
ದಿನಗಳ ವಾರವನ್ನು ಭರಿಸಬಹುದೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಮುಂದೊಂದು ದಿನ ಇದು ನಾಲ್ಕು ದಿನಗಳ ವಾರಕ್ಕೆ ವಿಸ್ತಾರವಾಗದಿರಲಿ ಎಂದು ಜನಸಾಮಾನ್ಯರು ಅಶಿಸುತ್ತಾರೆ.