ಸಾಧಕರ ವೇದಿಕೆ
ಶ್ರೀಪಾದ ಸಿರಸಿಂಗಿ
ಬಹುಶಃ ಜಾಗತಿಕ ಮಟ್ಟದಲ್ಲಿ ಇಂಥದೊಂದು ಪ್ರತಿಷ್ಠಿತ ಪ್ರಶಸ್ತಿ ಬರುವವರೆಗೆ ಬಂಟ್ವಾಳ ಜಯಂತ ಬಾಳಿಗ ಅವರ ಹೆಸರನ್ನು ಭಾರತದಲ್ಲಿ ಹೆಚ್ಚಿನವರು ಕೇಳಿರಲಿಲ್ಲ. ಭಾರತದಲ್ಲೇಕೆ, ಕರ್ನಾಟಕದಲ್ಲೇ ಎಷ್ಟೋ ಜನರಿಗೆ ಇವರ ಹೆಸರು ಗೊತ್ತಿರಲಿಲ್ಲ. ಇವರಿಗೆ 9.3 ಕೋಟಿ ರುಪಾಯಿ ಮೌಲ್ಯದ, ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ‘ದಿ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ’ ಲಭಿಸಿದೆ ಎಂದು ತಿಳಿದಾಗ ಇವರ ಹೆಸರಿನಲ್ಲಿರುವ ‘ಬಂಟ್ವಾಳ’ವನ್ನು ನೋಡಿ, ಓಹೋ ಇವರು ಕನ್ನಡಿಗರಿರಬಹುದು ಎಂದು ಇಂಟರ್ನೆಟ್‌ನಲ್ಲಿ ಹುಡುಕಿದವರೇ ಹೆಚ್ಚು! ಹಾಗೆ ಹುಡುಕಿದವರಿಗೆ ಗೊತ್ತಾದ ಅಚ್ಚರಿಯ ಸಂಗತಿಯೆಂದರೆ ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಬಹುದೊಡ್ಡ ಸಾಧಕ
ಎಂಬ ವಿಚಾರ.
ಕನ್ನಡಿಗರ ತಾಕತ್ತು ಹಾಗೂ ಶ್ರೇಷ್ಠತೆಯಿದು. ನಮ್ಮ ನೆಲದಿಂದ ವಿದೇಶಗಳಿಗೆ ಹೋಗಿ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ ಎಷ್ಟೋ ಮಂದಿ ಇವತ್ತಿಗೂ ಎಲೆಮರೆಯ ಕಾಯಿಯಂತಿದ್ದಾರೆ. ಅಂಥವರಲ್ಲಿ ಜಯಂತ ಬಾಳಿಗ ಕೂಡ ಒಬ್ಬರು. ಕುಟುಂಬದ ಮೂಲ ಬಂಟ್ವಾಳವಾದರೂ ಇವರು ಜನಿಸಿದ್ದು ಚೆನ್ನೈನಲ್ಲಿ. ಮೂಲತಃ ಇಲೆಕ್ಟ್ರಿಕಲ್ ಎಂಜಿನಿಯರ್. 2024ನೇ ಸಾಲಿನ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ ಸಂದಿರುವುದಕ್ಕೆ ಇವರು ಮಾಡಿರುವ ಸಾಧನೆ ಯೇನು ಗೊತ್ತಾ? ಜಗತ್ತಿನಲ್ಲಿ ವಿದ್ಯುಚ್ಛಕ್ತಿ ಹಾಗೂ ಪೆಟ್ರೋಲ್ ಬಳಕೆ ಗಣನೀಯವಾಗಿ ತಗ್ಗುವಂತೆ ಮಾಡಿರುವುದು. ತಾಪಮಾನದ ಏರಿಕೆ ಹಾಗೂ ಕಾರ್ಬನ್ ಡೈಆಕ್ಸೈಡ್‌ನ ಬಿಡುಗಡೆ ದಿನೇದಿನೆ ಹೆಚ್ಚುತ್ತಿರುವುದು ಇಡೀ ಜಗತ್ತನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿರುವ ಈ ದಿನಗಳಲ್ಲಿ ಇವರ ಸಾಧನೆ ಮುಂದಿನ ಹಲವು ತಲೆಮಾರುಗಳನ್ನು ಪ್ರಭಾವಿಸುವ ಹಾಗೂ ಭೂಮಿಯನ್ನು ಮನುಷ್ಯನ ವಾಸಕ್ಕೆ ಯೋಗ್ಯವಾಗಿ ಉಳಿಸುವ ಬಹುದೊಡ್ಡ ಕೊಡುಗೆ ಯಾಗಿ ಪರಿಗಣಿತವಾಗಿದೆ.
76 ವರ್ಷದ ಬಂಟ್ವಾಳ ಜಯಂತ ಬಾಳಿಗ ಅವರಿಗೆ ಸಂದಿರುವ ಪ್ರಶಸ್ತಿಯ ಮೌಲ್ಯ 1 ಮಿಲಿಯನ್ ಯುರೋಗಳು.
ಅಂದರೆ ಹೆಚ್ಚುಕಮ್ಮಿ 9.3 ಕೋಟಿ ರುಪಾಯಿ. ಇದು ಜಗತ್ತಿನ ಅತಿದೊಡ್ಡ ಪ್ರಶಸ್ತಿಯೆಂದು ಪರಿಗಣಿತವಾಗುವ ನೊಬೆಲ್ ಪ್ರಶಸ್ತಿಯ ಮೊತ್ತಕ್ಕಿಂತ ಅಜಮಾಸು ಒಂದು ಕೋಟಿ ರುಪಾಯಿಯಷ್ಟು ಹೆಚ್ಚು ಎಂಬುದನ್ನು ಗಮನಿಸಿ ದರೆ ಈ ಪ್ರಶಸ್ತಿಯ ಮೌಲ್ಯವೇನು ಎಂಬುದು ನಮಗೆ ಅರ್ಥವಾದೀತು. ಈ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಬಾಳಿಗ ಅವರು ಜಗತ್ಪ್ರಸಿದ್ಧ ಸಂಶೋಧಕರಾದ ಟಿಮ್ ಬರ್ನರ್ಸ್ ಲೀ ಮುಂತಾದ ಸಾಧಕರ ಸಾಲಿಗೆ ಸೇರ್ಪಡೆ ಯಾಗಿದ್ದಾರೆ. ಟಿಮ್ ಬರ್ನರ್ಸ್ ಲೀ ಅವರು ‘ವರ್ಲ್ಡ್ ವೈಡ್ ವೆಬ್’ (ಡಬ್ಲ್ಯುಡಬ್ಲ್ಯು ಡಬ್ಲ್ಯು) ಕಂಡು ಹಿಡಿಯುವ ಮೂಲಕ ಇಂಟರ್ನೆಟ್ ಲೋಕದಲ್ಲಿ ಬಹುದೊಡ್ಡ ಆವಿಷ್ಕಾರ ಮಾಡಿದ ಸಾಧಕ. ೨೦೦೪ರಲ್ಲಿ ಇವರಿಗೆ ಮೊದಲ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ ಸಂದಿತ್ತು.
ಬೆಂಗಳೂರಿನಿಂದ ಸಾಧನೆಯ ಪಯಣ
ಜಯಂತ ಬಾಳಿಗ ಅವರ ಸಾಧನೆಯ ಶುರುವಾತು ಇರುವುದು ಬೆಂಗಳೂರಿನಲ್ಲಿ. ಇಲ್ಲಿನ ಪ್ರತಿಷ್ಠಿತ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ ಅವರ ವಿದ್ಯಾಭ್ಯಾಸ ಶುರುವಾಯಿತು. ನಂತರ ಜಗತ್ಪ್ರಸಿದ್ಧ ಟೆಕ್ನೋಕ್ರಾಟ್‌ಗಳನ್ನು ಹುಟ್ಟು ಹಾಕುವುದಕ್ಕೆ ಖ್ಯಾತಿ ಪಡೆದ ಮದ್ರಾಸ್ ಐಐಟಿಯಿಂದ ಅವರು 1969 ರಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದರು. ಬಳಿಕ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್‌ನ ರೆನ್‌ಸೆಲಿಯರ್ ಪಾಲಿಟೆಕ್ನಿಕ್ ಇನ್ ಸ್ಟಿಟ್ಯೂಟ್ ನಿಂದ 1971ರಲ್ಲಿ ಎಂ.ಎಸ್. ಸ್ನಾತಕೋತ್ತರ ಪದವಿಯನ್ನೂ, 1974ರಲ್ಲಿ ಪಿಎಚ್‌ಡಿ ಪದವಿಯನ್ನೂ ಗಳಿಸಿದರು. ಆಮೇಲೆ ಅಮೆರಿಕದಲ್ಲೇ ನೆಲೆಸಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಬಾಳಿಗ ತಮ್ಮ ಸಾಧನೆಯ ಕ್ರೆಡಿಟ್ ನೀಡುವುದು ಐಐಟಿ ಮದ್ರಾಸ್‌ಗೆ. ಅವರ ಪ್ರಕಾರ ಭಾರತದ ಐಐಟಿಗಳು ಪ್ರತಿ ಭಾವಂತರನ್ನು ಹುಟ್ಟುಹಾಕುವ ಕಾರ್ಖಾನೆಗಳಿದ್ದಂತೆ. ‘ಐಐಟಿಗಳು ಬಹಳ ಕಠಿಣ ಹಾಗೂ ಶಿಸ್ತುಬದ್ಧ ಶಿಕ್ಷಣ ಸಂಸ್ಥೆಗಳು. ಅಲ್ಲಿನ ಸಿಲೆಬಸ್‌ಗಳು, ಅಲ್ಲಿ ಬಳಸುವ ಬೋಧನೆಯ ಕ್ರಮ ಹಾಗೂ ಅಲ್ಲಿನ ಪ್ರಾಕ್ಟಿಕಲ್ ತರಬೇತಿ ಗಳನ್ನು ಬೇರಾವ ಶಿಕ್ಷಣ ಸಂಸ್ಥೆಗಳಿಗೂ ಹೋಲಿಸಲು ಸಾಧ್ಯವಿಲ್ಲ. ಮದ್ರಾಸ್ ಐಐಟಿಯಲ್ಲಿ ಸಿಕ್ಕ ಅನುಭವ ನನ್ನ ಸಾಧನೆಗೆ ಗಟ್ಟಿಯಾದ ತಳಪಾಯ ಹಾಕಿಕೊಟ್ಟಿತು’ ಎನ್ನುತ್ತಾರೆ ಬಾಳಿಗ.
ಈ ತಳಪಾಯವೇ ಬಾಳಿಗ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಪಮ ಸಂಶೋಧನೆಯನ್ನು ಕೈಗೊಳ್ಳಲು ಮೂಲ ಭೂತ ಕಾರಣವಾಯಿತು. ಇನ್ಸುಲೇಟೆಡ್ ಗೇಟ್ ಬೈಪೋಲಾರ್ ಟ್ರಾನ್ಸಿಸ್ಟರ್ (ಐಜಿಬಿಟಿ) ಎಂಬ ವಿನೂತನ ಆವಿಷ್ಕಾರವನ್ನು ಅವರು ಮಾಡುವ ಮೂಲಕ ಜಗತ್ತು ಇಂಧನವನ್ನು ಬಳಸುವ ರೀತಿ ಯನ್ನೇ ಶಾಶ್ವತವಾಗಿ ಬದಲಾವಣೆ ಮಾಡಿದರು.
೧೦ ಡಾಲರ್‌ನೊಂದಿಗೆ ಅಮೆರಿಕಕ್ಕೆ!
ಕುತೂಹಲಕರ ಸಂಗತಿಯೆಂದರೆ ಜಯಂತ ಬಾಳಿಗ ಅವರು 1969ರಲ್ಲಿ ಅಮೆರಿಕಕ್ಕೆ ಹೋಗುವಾಗ ಅವರ ಕಿಸೆಯಲ್ಲಿ ಇದ್ದುದು ಬರೀ 10ಡಾಲರ್. ಇಂದು ಒಂದು ಅಮೆರಿಕನ್ ಡಾಲರ್‌ಗೆ 84 ರುಪಾಯಿ ಮೌಲ್ಯವಿದೆ. ಆದರೆ ಅವರು ಅಮೆರಿಕಕ್ಕೆ ಹೋದಾಗ ಒಂದು ಡಾಲರ್‌ನ ಮೌಲ್ಯ 7.5 ರುಪಾಯಿ. ಅಂದರೆ ಆ ಕಾಲದಲ್ಲಿ ಬಾಳಿಗ ಇಲ್ಲಿಂದ ತೆಗೆದು ಕೊಂಡು ಹೋಗಿದ್ದು 75 ರುಪಾಯಿ. ಏಕೆಂದರೆ ಭಾರತದ ವಿದೇಶಿ ಮೀಸಲು ಬಹಳ ಕಡಿಮೆಯಿತ್ತು. ಹೀಗಾಗಿ ದೇಶ ದಿವಾಳಿಯಾಗುವುದನ್ನು ತಪ್ಪಿಸಲು ವಿದೇಶಕ್ಕೆ ಹೋಗುವವರಿಗೆ ಗರಿಷ್ಠ ಇಷ್ಟೇ ಹಣವನ್ನು ತೆಗೆದು ಕೊಂಡು ಹೋಗಲು ಸರಕಾರ ಅನುಮತಿ ನೀಡುತ್ತಿತ್ತು.
‘1969ರಲ್ಲಿ ಭಾರತ ಸರಕಾರವು ಅಮೆರಿಕಕ್ಕೆ ಹೋಗುವವರಿಗೆ ಕೇವಲ 10 ಡಾಲರ್ ತೆಗೆದುಕೊಂಡು ಹೋಗಲು ಅನುಮತಿ ನೀಡುತ್ತಿತ್ತು. ಹೀಗಾಗಿ ನಾನೂ ವಿಧಿಯಿಲ್ಲದೆ ಅಷ್ಟೇ ಹಣ ತೆಗೆದುಕೊಂಡು ಹೋಗಿದ್ದೆ. 75 ರುಪಾಯಿ ತೆಗೆದುಕೊಂಡು ಅಮೆರಿಕಕ್ಕೆ ಹೋಗುವುದು ಅಂದರೆ ಬರಿಗೈಯಲ್ಲಿ ಹೋದಂತೆ’ ಎಂದು ನೆನಪಿಸಿಕೊಳ್ಳುತ್ತಾರೆ ಬಾಳಿಗ. ನ್ಯೂಯಾರ್ಕ್‌ನ ರೆನ್‌ಸೆಲಿಯರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಆ ದಿನಗಳಲ್ಲಿ ಭಾರತೀಯ
ವಿದ್ಯಾರ್ಥಿಗಳನ್ನು ಕೇವಲವಾಗಿ ನೋಡುತ್ತಿದ್ದರು.
ಏಕೆಂದರೆ, ತಮ್ಮಲ್ಲಿರುವ ಬಹಳ ಕಠಿಣವಾದ ಸಿಲೆಬಸ್ ಅನ್ನು ಅರಗಿಸಿಕೊಳ್ಳಲು ಭಾರತೀಯರಿಗೆ ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಹೀಗಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಅಷ್ಟು ಸುಲಭಕ್ಕೆ ಪ್ರವೇಶವನ್ನೇ ನೀಡುತ್ತಿರಲಿಲ್ಲ. ಆದರೆ ಬಾಳಿಗ ತಮ್ಮ ಪ್ರತಿಭೆಯಿಂದ ಪ್ರವೇಶ ಗಿಟ್ಟಿಸಿಕೊಂಡಿದ್ದೂ ಅಲ್ಲದೆ, ಪರೀಕ್ಷೆಯಲ್ಲಿ 4.0 ಜಿಪಿಎ ಶ್ರೇಣಿ ಪಡೆದು ಅಮೆರಿಕದ ಶಿಕ್ಷಣ ಕ್ಷೇತ್ರವೇ ಹುಬ್ಬೇರಿಸುವಂತೆ ಮಾಡಿದರು. ಅವರ ಈ ಸಾಧನೆಯ ಬಳಿಕ ಅಮೆರಿಕನ್ನರಿಗೆ ಭಾರತೀಯ ವಿದ್ಯಾರ್ಥಿಗಳು ಯಾರಿಗೂ ಕಡಿಮೆಯಿಲ್ಲ ಎಂಬುದು ಮನವರಿಕೆಯಾಯಿತು. ಹೀಗಾಗಿ ರೆನ್‌ಸೆಲಿಯರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಹೆಚ್ಚೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕ ತೊಡಗಿತು.
ಬಾಳಿಗ ಅವರ ಆವಿಷ್ಕಾರದ ಮಹತ್ವ
ನ್ಯೂಯಾರ್ಕ್‌ನ ಆ ಪ್ರತಿಷ್ಠಿತ ಪಾಲಿಟೆಕ್ನಿಕ್‌ನಲ್ಲಿ ಲಭಿಸಿದ ತಾಂತ್ರಿಕ ಲೋಕದ ಜ್ಞಾನವು ಬಾಳಿಗ ಅವರಿಗೆ ಇನ್ಸು ಲೇಟೆಡ್ ಬೈಪೋಲಾರ್ ಟ್ರಾನ್ಸಿಸ್ಟರ್‌ನ ಆವಿಷ್ಕಾರದಲ್ಲಿ ಸಾಕಷ್ಟು ನೆರವಾಯಿತು. ಅಂಥದೊಂದು ಅಪರೂಪದ ತಂತ್ರಜ್ಞಾನವನ್ನು ಕಂಡುಹಿಡಿಯುವ ಮೂಲಕ ಅವರು ಜಗತ್ತಿನ ಎಲ್ಲಾ ದೇಶಗಳ ತಂತ್ರಜ್ಞರು ತಮ್ಮತ್ತ ತಿರುಗಿ ನೋಡುವಂತೆ ಮಾಡಿದರು. ಅವರ ಸಂಶೋಧನೆಯು ಬಹಳ ಬೇಗ ಜಗತ್ತಿನಾದ್ಯಂತ ಬಳಕೆಯಾ ಗತೊಡಗಿತು. ವಿದ್ಯುತ್ ಮತ್ತು ಪೆಟ್ರೋಲ್ ಬಳಸಿ ಶಕ್ತಿಯನ್ನು ಉತ್ಪಾದನೆ ಮಾಡುವ ಎಲ್ಲಾ ಉಪಕರಣಗಳಲ್ಲೂ ಈ ಆವಿಷ್ಕಾ ರವು ಅವಿಭಾಜ್ಯ ಅಂಗವಾಯಿತು. ಏಕೆಂದರೆ ಇದನ್ನು ಬಳಸಿದರೆ ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುವ ಪ್ರಮಾಣ ಬಹಳ ಕಡಿಮೆಯಾಗುತ್ತಿತ್ತು. ಹೀಗಾಗಿ ಪರಿಸರ ವಿಜ್ಞಾನಿಗಳ ವಲಯದಲ್ಲಂತೂ ಬಾಳಿಗ ರಾತ್ರೋರಾತ್ರಿ ಹೀರೋ ಆಗಿಬಿಟ್ಟಿದರು.
ಏನಿದು ಐಜಿಬಿಟಿ ಸೆಮಿಕಂಡಕ್ಟರ್?
ಐಜಿಬಿಟಿ ಎಂಬುದು ಒಂದು ರೀತಿಯ ಸ್ವಿಚ್. ಇದೊಂದು ಸೆಮಿಕಂಡಕ್ಟರ್. ಇನ್ವರ್ಟರ್ ಸರ್ಕ್ಯೂಟ್‌ಗಳಲ್ಲಿ ಡಿಸಿ ವಿದ್ಯುತ್ತನ್ನು ಎಸಿ ವಿದ್ಯುತ್ತಾಗಿ ಪರಿವರ್ತಿಸಲು ಇದನ್ನು ಬಳಸಲಾಗುತ್ತದೆ. ಸಣ್ಣ ಮೋಟರ್‌ಗಳಿಂದ ಹಿಡಿದು ದೊಡ್ಡ ಮೋಟರ್ ಗಳವರೆಗೆ ಎಲ್ಲಾ ಉಪಕರಣಗಳಲ್ಲೂ ಇದು ಬಳಕೆಯಾಗುತ್ತದೆ. 1980ರ ದಶಕದಲ್ಲಿ ಬಾಳಿಗ ಅವರು ಈ ಸೆಮಿಕಂಡಕ್ಟರ್ ಕಂಡುಹಿಡಿದ ಬಳಿಕ ಇದು ಜಗತ್ತಿನ ಇಲೆಕ್ಟ್ರಾನಿಕ್ ಸಾಧನಗಳು ಹಾಗೂ ಮೋಟಾರು ವಾಹನ ಗಳಲ್ಲಿ ಕಡ್ಡಾಯವಾಗಿ ಬಳಕೆ ಯಾಗುವ ಉಪಕರಣವಾಗಿದೆ.
ಇಂದು ನಾವು ಬಳಸುವ ಪ್ರತಿಯೊಂದು ಪೆಟ್ರೋಲ್ ಅಥವಾ ವಿದ್ಯುಚ್ಛಕ್ತಿ ಚಾಲಿತ ವಾಹನಗಳು, ಏರ್ ಕಂಡೀಷನರ್ ಗಳು, ರೆಫ್ರಿಜರೇಟರ್ ಗಳು, ಇಲೆಕ್ಟ್ರಾನಿಕ್ ಉಪಕರಣಗಳು ಈ ಸೆಮಿಕಂಡಕ್ಟರನ್ನು ಹೊಂದಿರುತ್ತವೆ. ಇವುಗಳನ್ನು ಬಳಸುವುದರಿಂದ ಈ ಉಪಕರಣಗಳು ಕಾರ್ಬನ್ ಹೊರಸೂಸುವ ಪ್ರಮಾಣ ಬಹುದೊಡ್ಡ ಪ್ರಮಾಣದಲ್ಲಿ ಕಡಿಮೆ ಯಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಕಳೆದ 30 ವರ್ಷಗಳಲ್ಲಿ ಐಜಿಬಿಟಿ ಸೆಮಿ ಕಂಡಕ್ಟರ್ ಬಳಕೆಯಿಂದಾಗಿ ೮೨ ಗಿಗಾಟನ್‌ನಷ್ಟು ಕಾರ್ಬನ್ ಹೊಗೆಯು ವಾತಾವರಣಕ್ಕೆ ಬಿಡುಗಡೆ ಯಾಗುವುದು ತಪ್ಪಿದೆ. 1 ಗಿಗಾಟನ್ ಅಂದರೆ ೧೦೦ ಕೋಟಿ ಟನ್. ಇದು 10000 ಬೃಹತ್ ವಿಮಾನಗಳ ತೂಕಕ್ಕೆ ಸಮ. ಇದರ 82 ಪಟ್ಟು ಹೆಚ್ಚು ತೂಕದ ಇಂಗಾಲದ ಹೊಗೆ ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ಈವರೆಗೆ ಜಯಂತ ಬಾಳಿಗ ಅವರ ಸಂಶೋಧನೆಯು ತಪ್ಪಿಸಿದೆ!
ಅಂದರೆ ಈ ಭೂಮಂಡಲಕ್ಕೆ ಹಾಗೂ ಮನುಕುಲಕ್ಕೆ ಅವರು ಮಾಡಿದ್ದು ಎಷ್ಟು ದೊಡ್ಡ ಉಪಕಾರ ಎಂಬುದನ್ನು ಇದರಿಂದ ಊಹಿಸಬಹುದು. ಬಾಳಿಗ ಅವರು ಸಾಧನೆ ಮಾಡಿದ್ದು ಅಮೆರಿಕದಲ್ಲಿ. ಅವರು ತಮ್ಮ ಜೀವಿತದ ಬಹುತೇಕ ಫಲಪ್ರದ ವರ್ಷಗಳನ್ನು ಕಳೆದಿರುವುದು ಕೂಡ ಅದೇ ದೇಶದಲ್ಲಿ. ಆದರೆ ಅವರಿಗೆ ತಮ್ಮ ತಾಯ್ನೆಲದ
ಬಗ್ಗೆ ಅಪಾರ ಅಭಿಮಾನ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆಗುತ್ತಿರುವ
ಬೆಳವಣಿಗೆಗಳ ಬಗ್ಗೆ ಅವರಿಗೆ ಖುಷಿಯಿದೆ. ಆದರೆ, ಭಾರತ ಈ ಕ್ಷೇತ್ರದಲ್ಲಿ ಸಾಗಬೇಕಾದ ದಾರಿ ಇನ್ನೂ ಬಹಳ ದೂರವಿದೆ ಎಂದೂ ಅವರು ಹೇಳುತ್ತಾರೆ.
ಏಕೆಂದರೆ ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಭಾರತ ಇನ್ನೂ ಅಂಬೆಗಾಲಿಡುತ್ತಿದೆ. ‘ಸೆಮಿಕಂಡಕ್ಟರ್ ಕ್ಷೇತ್ರ
ದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಬಳಿಕ ನಾನು ಭಾರತಕ್ಕೆ ಮರಳಿ ಹೋಗಬಹುದಿತ್ತು. ಆದರೆ ಆ ಕಾಲದಲ್ಲಿ ಭಾರತದಲ್ಲಿ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಬೇಕಾದ ಶುದ್ಧ ಅನಿಲ, ಶುದ್ಧ ನೀರು, ಅನಿಯಮಿತ ವಿದ್ಯುತ್ ಪೂರೈಕೆಯಂಥ ಮೂಲಸೌಕರ್ಯಗಳು ಇರಲಿಲ್ಲ. ಹೀಗಾಗಿ ಅಮೆರಿಕದಲ್ಲೇ ಉಳಿದು ನನ್ನ ಸಂಶೋಧನೆ ಮುಂದು ವರಿಸಿದೆ.
ಆದರೆ, ಸರಿಯಾದ ಬಂಡವಾಳ ಹೂಡಿಕೆಯೊಂದಿಗೆ ಭಾರತದಲ್ಲೂ ಇಂದು ಸೆಮಿಕಂಡಕ್ಟರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸಾಧ್ಯವಿದೆ. ಭಾರತದಲ್ಲಿ ಎಷ್ಟೊಂದು ಪ್ರತಿಭಾವಂತರಿದ್ದಾರೆ ಅಂದರೆ, ನನ್ನ ತಾಯ್ನಾಡು ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ಗಳ ಉತ್ಪಾದನಾ ಹಬ್ ಆಗಬಹುದು’ ಎಂದು ಜಯಂತ ಬಾಳಿಗ ಹೇಳುತ್ತಾರೆ. ಬಾಳಿಗ ಅವರಿಗೆ ಸಂದಿರುವ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿಯು ಸೆಮಿಕಂಡಕ್ಟರ್ ಕ್ಷೇತ್ರಕ್ಕೂ, ಭಾರತಕ್ಕೂ ಹೆಮ್ಮೆ ತಂದಿದೆ. ಅಕ್ಟೋಬರ್ 30ರಂದು ಫಿನ್‌ಲೆಂಡ್‌ನಲ್ಲಿ
ಬಾಳಿಗ ಅವರಿಗೆ ಸಂದಿರುವ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿಯು ಸೆಮಿಕಂಡಕ್ಟರ್ ಕ್ಷೇತ್ರಕ್ಕೂ, ಭಾರತಕ್ಕೂ ಹೆಮ್ಮೆ ತಂದಿದೆ. ಅಕ್ಟೋಬರ್ 30ರಂದು ಫಿನ್‌ಲೆಂಡ್‌ನಲ್ಲಿ ಅಲ್ಲಿನ ಅಧ್ಯಕ್ಷರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಭಿನಂದನೆಗಳು ಬಂಟ್ವಾಳ ಜಯಂತ ಬಾಳಿಗ!
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)