ಶಾರದಾಂಬಾ ವಿ.ಕೆ.
ದೂರದ ಬಂಗಾಳದಲ್ಲಿ ರಾತ್ರಿ 11.30ರ ಸಮಯ. ಭಾಷೆ ಹೊಸತು, ಜನ ಹೊಸತು, ದಾರಿ ಹೊಸತು. ಆ ರಾತ್ರಿ ಯಲ್ಲೂ ನಮ್ಮಪ್ಪ ಒಬ್ಬ ರಿಕ್ಷಾದವನನ್ನು ಒತ್ತಾಯಿಸಿ ಮನೆಯನ್ನು ಹುಡುಕಿಸಿದ್ದು ಹೇಗೆ ಗೊತ್ತಾ!
ಈ ಘಟನೆ ನಡೆದು ಸುಮಾರು 38 ವರ್ಷಗಳು ಕಳೆದಿದ್ದರೂ, ತೀರಾ ಇತ್ತೀಚೆಗೆ ನಡೆದ ಹಾಗೆ ನನ್ನ ನೆನಪಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ನನ್ನಪ್ಪ. ಅವರ ಸಮಯಪ್ರಜ್ಞೆ ಸದಾ ಸ್ಮರಣೀಯ. ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನವರಿಗೆ ಬಡ್ತಿ ದೊರೆತು ದೂರದ ಕಲ್ಕತ್ತಾ ನಗರಕ್ಕೆ ವರ್ಗವಾಯಿತು. ನಾವು ಹೋಗಿ ಸ್ವಲ್ಪ ದಿನದ ನನ್ನ ಅತ್ತೆ, ಅಪ್ಪ, ಅಮ್ಮ ಬಂದಿಳಿದರು.
ಅಪ್ಪನಿಗೆ ಊರು ನೋಡುವ, ಅಕ್ಕಪಕ್ಕದ ಜನರೊಂದಿಗೆ ಮಾತನಾಡುವ ಹಂಬಲ. ಹೋಟೆಲ್ ಉದ್ಯಮಿಯಾದ ಅವರಿಗೆ ತಕ್ಕಮಟ್ಟಿಗೆ ಹಿಂದಿ, ತಮಿಳು, ತೆಲುಗು ಬರುತ್ತಿತ್ತು. ತಮ್ಮ ಹರುಕು ಮುರುಕು ಹಿಂದಿಯಲ್ಲಿ ಸುತ್ತ ಮುತ್ತ ಇದ್ದವರೊಂದಿಗೆ, ಹತ್ತಿರದ ಅಂಗಡಿಗಳಿಗೆ ಹೋಗಿ ಮಾತನಾಡಿಸುತ್ತಿದ್ದರು. ಇವರ ಅರ್ಧ ಹಿಂದಿ ಅರ್ಧ ಕನ್ನಡ ಮಿಶ್ರಿ ಭಾಷೆಗೆ ಅವರ ಬೆಂಗಾಲಿ ಉತ್ತರ ಕೇಳಲು ಮಜಾ ಇರುತ್ತಿತ್ತು. ಆ ಸಮಯದಲ್ಲಿ ಹೇಮಾಮಾಲಿನಿ ಅಭಿನಯಿಸಿದ ‘ರಜಿಯಾ ಸುಲ್ತಾನ್’ ಚಲನಚಿತ್ರ ಬಿಡುಗಡೆ ಆಗಿದ್ದಷ್ಟೇ.
ಹೇಮಾಮಾಲಿನಿ ಅಭಿನಯದ ಸಿನೆಮಾ ಅಂದರೇ ಅಪ್ಪನಿಗೆ ಅಚ್ಚು ಮೆಚ್ಚು. ನೋಡಬೇಕೆನ್ನುವ ಆಸೆ . ಒಂದು ಶನಿವಾರ ಸಂಜೆ 5 ಕಿ.ಮೀ. ದೂರದ ಸಿನಿಮಾ ಟಾಕೀಸಿಗೆ ಅತ್ತೆ, ಅಪ್ಪ, ಅಮ್ಮ, ನನ್ನ 6 ವರ್ಷದ ಮಗನೊಂದಿಗೆ ಟ್ರಾಮ್‌ನಲ್ಲಿ ಹೋದೆವು . ಆ ಅನುಭವವೂ ಹೊಸದು ಎಲ್ಲರಿಗೂ. ಖುಷಿ ಖುಷಿ ಯಿಂದ ಪ್ರಯಾಣ ಮಾಡಿದೆವು. ವಾಪಸು ಹೋಗುವಾಗ ಸೈಕಲ್ ರಿಕ್ಷಾದಲ್ಲಿ ಹೋಗುವುದು ಎಂದು ಮಾತಾಡಿಕೊಂಡಿದ್ದೆವು . ಟಾಕೀಸ್ ಬಳಿ ಹೋಗಿ ನೋಡಿದರೆ ಹೌಸ್ ಫುಲ್! ಛೇ. ಎಲ್ಲರಿಗೂ ಬೇಸರ, ನಿರಾಸೆ.
ನಮಗಾದ ನಿರಾಸೆ ನೋಡಿ ಪತಿರಾಯರು ಅ ಯಾರ ಬಳಿಯೋ ವ್ಯವಹರಿಸಿ ಬ್ಲಾಕ್ ನಲ್ಲಿ 6 ಟಿಕೆಟ್ ಖರೀದಿಸಿದರು. ಒಳ ಹೋಗುವಾಗ ನೋಡಿದರೆ ಐದು ಸೀಟ್ ಮಾತ್ರಾ ಅಲ್ಪಸ್ವಲ್ಪ ಹತ್ತಿರ ಇತ್ತು. ಒಂದು ಬಾಲ್ಕನಿ ಟಿಕೆಟ. ಆಗ ಅಪ್ಪ ‘ನೀವೆ ಒಟ್ಟಿಗೆ ಇರೀ … ನಾನು ಬಾಲ್ಕನಿಗೆ ಹೋಗುವೆ’ನೆಂದು ಹೊರಟರು.
ನಡುರಾತ್ರಿಯಲ್ಲಿ ದಾರಿ ಹುಡುಕಿದ್ದು ತುಂಬಾ ದೊಡ್ಡ ಸಿನಿಮಾ ಆದ್ದರಿಂದ ಮುಗಿಯುವಾಗ ಗಂಟೆ ರಾತ್ರಿ 11.30 ರ ಮೇಲೆ ಆಗಿತ್ತು. ಎಲ್ಲರೂ ಹೊರಬಂದರೂ ಅಪ್ಪನ ಸುಳಿವಿಲ್ಲ. ಕೊನೆಯ ಪ್ರದರ್ಶನ ಆದ್ದರಿಂದ ಹಾಲ್ ಪೂರ್ತಿ ಖಾಲಿಯಾಗಿತ್ತು. ಅವರು ಮನೆಗೆ ಹೋಗಿರಬಹುದು ಎಂದು ಊಹಿಸಿ ನಾವುಗಳು ಎರಡು ಸೈಕಲ್ ರಿಕ್ಷಾ ಮಾಡಿ ಮನೆಗೆ ಬಂದೆವು. ಆದರೆ ಮನೆಯ ಹತ್ತಿರವೂ ಅಪ್ಪ ಇರಲಿಲ್ಲ. ಆಗ ಎಲ್ಲರಿಗೂ ಗಾಬರಿ ಶುರುವಾಯಿತು. ಕಾಣದ ಊರು, ಭಾಷೆ, ಜನ ಎಲ್ಲವೂ ಹೊಸದು. ಎಲ್ಲಿ ಅಂತ ಹುಡುಕುವುದು? ಮನೆಯಿಂದ ರಸ್ತೆಗೆ, ರಸ್ತೆಯಿಂದ ಮನೆಗೆ ನಮ್ಮೆಲ್ಲರ ಆತಂಕದ ಓಡಾಟ ನಡೆದಿತ್ತು.
ಅಂತೂ ಇಂತೂ 12.30 ರ ಹೊತ್ತಿಗೆ ಒಂದು ಸೈಕಲ್ ರಿಕ್ಷಾದಲ್ಲಿ ಬಂದಿಳಿದ ಅಪ್ಪ. ಅಳಿಯನನ್ನು ಕರೆದು ‘೧೦ ರೂಪಾಯಿ ಕೊಡಿ’ ಎಂದು ತೆಗೆದುಕೊಂಡು ರಿಕ್ಷಾದವನಿಗೆ ಕೊಟ್ಟು ಕಳಿಸಿದರು. ನಡೆದದ್ದೇನು ? ಸಿನಿಮಾ ಮುಗಿದ ಬಳಿಕ ಬಾಲ್ಕನಿಯಲ್ಲಿ
ಕುಳಿತವರನ್ನು ಹಿಂದಿನ ಬಾಗಿಲಿನಿಂದ ಬಿಟ್ಟಿದ್ದಾರೆ. ಅಲ್ಲೂ ಸಹಾ ಒಂದು ದೊಡ್ಡ ರಸ್ತೆ ಇರುವುದರಿಂದ ಅಲ್ಲಿಯೇ ನಾವು
ಇಳಿದ ಜಾಗ ಎಂದು ಅಪ್ಪ ಕಾಯುತ್ತಾ ನಿಂತಿದ್ದಾರೆ. ಜನರೆ ಖಾಲಿಯಾದರೂ ನಮ್ಮ ಸುಳಿವೂ ಇಲ್ಲದೇ, ಅವರನ್ನು ಬಿಟ್ಟು
ಹೊರಟಿದ್ದೇವೆ ಎಂದುಕೊಂಡು ಸೈಕಲ್‌ರಿಕ್ಷಾ ಮಾಡಿ ‘ಭವಾನಿ ಸಿನೆಮಾ ಚಲೋ’ ಎಂದಿದ್ದಾರೆ.
ನಮ್ಮ ಮನೆಗೆ ಅರ್ಧ ಕಿ. ಮೀ. ದೂರದಲ್ಲಿ ‘ಭವಾನಿ’ ಎನ್ನುವ ಒಂದು ಸಣ್ಣ ಸಿನೆಮಾ ಹಾಲ್ ಇದ್ದದ್ದು ನೋಡಿ ನೆನಪಿಟ್ಟು ಕೊಂಡಿದ್ದಾರೆ. ಭವಾನಿ ಟಾಕೀಸ್ ಬಳಿ ರಿಕ್ಷಾದವನು ‘ಇಳೀರೀ…’ ಎಂದಾಗ, ಇವರು ನಮ್ಮ ಮನೆಯ ಕಡೆ ದಾರಿ ತೋರಿಸಿದ್ದಾರೆ. ‘ಅಲ್ಲಿಗೆ ಬರುವುದಿಲ್ಲ, ದುಡ್ಡುಕೊಟ್ಟು …ಇ ಇಳಿಯಿರಿ’ ಅಂತ ಬೆಂಗಾಲಿ ಭಾಷೆಯಲ್ಲಿ ಅವನು, ಇಳಿಯಲ್ಲ… ನಿನಗೆ ಕೊಡಲು ಹಣ ಇಲ್ಲ…ಅಂತ ಇವರ ಕನ್ನಡ ಹಿಂದಿ ಮಿಶ್ರಿತ ಭಾಷೆ.
‘ಪೈಸಾ ನಹೀ, ಘರ್ ಚಲೋ’ಎಂದು ಶರ್ಟ್‌ನ ಖಾಲಿಜೇಬು ತೋರಿಸಿದ್ದಾರೆ. ಪಂಚೆ ಉಟ್ಟ ಇವರ ಒಳಜೇಬು ಅವನಿಗೆ ಕಾಣಿಸ ಲಿಲ್ಲ. ಇವರ ಬಳಿ ನಿಜವಾಗಿಯೂ ದುಡ್ಡು ಇಲ್ಲ ಎಂದುಕೊಂಡು, ಅವರ ಮಾತಿನಂತೆ ಬೇರೆ ದಾರಿ ಇಲ್ಲದೆ ಮನೆವರೆಗೆ ತಂದು ಬಿಟ್ಟು , ಅಳಿಯನಿಂದ ಪಡೆದು ಮಾವ ಕೊಟ್ಟ ಹಣವನ್ನು ತೆಗೆದುಕೊಂಡು ದೊಡ್ಡ ನಮಸ್ಕಾರ ಹಾಕಿ ಹೋದ.
ನಡೆದ ಘಟನೆಯಲ್ಲಿ ಯಾರದ್ದೂ ತಪ್ಪಿಲ್ಲ. ಹಾಗಾಗಿ ಯಾರಿಗೆ ಯಾರೂ ಬೈದುಕೊಳ್ಳದೆ ಒಂದು ಗಂಟೆ ರಾತ್ರಿಯ ಸಮಯದಲ್ಲಿ ನಗೆಯ ಅಲೆಗಳೊಂದಿಗೆ ಮಾತುಗಳನ್ನು ಆಡುತ್ತಾ ಊಟ ಮಾಡಿದೆವು. ಕಲ್ಕತ್ತಾದಂತಹ ದೊಡ್ಡ ನಗರ, ಭಾಷೆ ಹೊಸತು, ಜಾಗ ಹೊಸತು, ರಾತ್ರಿ ವೇಳೆಯಲ್ಲಿ ಧೈರ್ಯಗೆಡದೆ ಮನೆವರೆಗೆ ದಾರಿ ಹುಡುಕಿಕೊಂಡು ಬಂದದ್ದು ಅಪ್ಪನ ದೊಡ್ಡ ಸಾಹಸವೇ. ಅವರ ಆತ್ಮಸ್ಥೈರ್ಯ, ಎದೆಗಾರಿಕೆ, ಛಲ ಎಲ್ಲವೂ ಮೆಚ್ಚುವಂತಹದ್ದು. ನಿಜಜೀವನದಲ್ಲೂ ಅವರು ಸಾಹಸಿ! ಸಣ್ಣ ಊರಿನಲ್ಲಿದ್ದ ತಮ್ಮ
ಹೊಟೇಲ್ ಉದ್ಯಮದಲ್ಲೇ ಬದುಕುಕಟ್ಟಿಕೊಂಡು, ಯಶಸ್ವೀ ಜೀವನ ನಡೆಸಿದ ಧೀಮಂತ.