Wednesday, 27th November 2024

Yagati Raghu Nadig Column: ವರ್ತಮಾನದ ಹೆಗಲೇರಿದ ಚಂದಮಾಮನ ಬೇತಾಳ !

ರಸದೌತಣ

ಯಗಟಿ ರಘು ನಾಡಿಗ್

‘ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ, ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂಬ ಚಲನಚಿತ್ರ ಗೀತೆಯ ಅರ್ಥವನ್ನು ತನ್ನದೇ ರೀತಿಯಲ್ಲಿ ಗ್ರಹಿಸಿದ ಮರಿ‌ ಪುಢಾರಿಯು, ಅದನ್ನು ತನ್ನ ಮಹತ್ವಾಕಾಂಕ್ಷೆಯ ಈಡೇರಿಕೆಗೆ ತಕ್ಕಂತೆ ಬಳಸಿಕೊಂಡಿದ್ದು ಅವನ ಜಾಣ್ಮೆಯೋ ಅಥವಾ ವ್ಯವಸ್ಥೆಯು ಹಿಡಿದಿರುವ ಅಡ್ಡದಾರಿಯ ದ್ಯೋತಕವೋ?!

ಛಲ ಬಿಡದ ತ್ರಿವಿಕ್ರಮ’ ಎಂದೇ ಹೆಸರಾದ ರಾಜಾ ವಿಕ್ರಮಾದಿತ್ಯನು ಎಂದಿನಂತೆ ದಟ್ಟಾರಣ್ಯವನ್ನು ಪ್ರವೇಶಿಸಿ, ಸುತ್ತಲೂ ಒಮ್ಮೆ ಕಣ್ಣುಹಾಯಿಸಿದಾಗ, ದೂರದಲ್ಲಿ ಕಾಣುತ್ತಿದ್ದ ಒಂಟಿ ಹುಣಿಸೇಮರದಲ್ಲಿ ಶವವೊಂದು ನೇತಾಡುತ್ತಿತ್ತು. ಅದನ್ನು ಮರದಿಂದ ಕೆಳಗಿಳಿಸಿ ಹೆಗಲಿಗೇರಿಸಿಕೊಂಡ ವಿಕ್ರಮಾದಿತ್ಯ ‘ರಾಜಾಧಿರಾಜನಾಗಿದ್ದು ಕೊಂಡೂ ಹೀಗೆ ಹೆಣ ಹೊರಬೇಕಾಗಿ ಬಂತಲ್ಲಾ’ ಎಂದು ಜೋರಾಗಿ ಗೊಣಗುತ್ತಲೇ ಹೆಜ್ಜೆಹಾಕತೊಡಗಿದ. ಆಗ ಆ ಶವದೊಳಗಿದ್ದ ಬೇತಾಳವು, “ಎಲೈ ರಾಜನೇ, ‘ಚಂದಮಾಮ’ ಕಥೆಯಲ್ಲಿ ಬರುತ್ತಿದ್ದ ಪ್ರಕಾರ ನೀನು ಶವವನ್ನು ಹೊತ್ತು ಮೌನವಾಗಿ ಹೆಜ್ಜೆಹಾಕಬೇಕು; ಆದರಿಲ್ಲಿ ನೀನು ಮೌನವಾಗಿರದೆ ಗೊಣಗುತ್ತಾ ನಡೆಯುತ್ತಿರುವೆ ಎಂದರೆ ಅದು ಈ ಕಾಲದ ಮಹಿಮೆಯೇ ಇರಬೇಕು.

ಇರಲಿ ಬಿಡು, ‘ಕಾಲಾಯ ತಸ್ಮೈ ನಮಃ’ ಎಂದು ನಾನೂ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ. ನೀವು ಮನುಷ್ಯರೇ ಹೀಗೆ, ನಿಯಮವನ್ನು ಬೇಗ ಮುರಿದುಬಿಡುತ್ತೀರಿ; ಆದರೆ ನಾವು ಬೇತಾಳಗಳು ಹಾಗಲ್ಲ, ವಿಕ್ರಮಾದಿತ್ಯನ ಹೆಗಲೇರಿದ ಮೇಲೆ ಅವನಿಗೊಂದು ಕಥೆ ಹೇಳಲೇಬೇಕು ಎಂಬುದು ‘ಚಂದಮಾಮ’ ಕಾಲದಿಂದಲೂ ಬೆಳೆದುಬಂದಿರುವ ಅಲಿಖಿತ ಸಂಪ್ರದಾಯ. ನೀನು ಹೊತ್ತಿರುವ ಹೆಣದ ‘ಹೆಣಭಾರ’ದ ದಣಿವು ನಿನಗಾಗದಿರಲೆಂದು ಕಥೆಯೊಂದನ್ನು ಪೇಳುತ್ತೇನೆ, ಕೇಳುವಂಥವನಾಗು. ಅಂದ ಹಾಗೆ, ಇದು ಹಿಂದೆ ಯಾವಾಗಲೋ ನಡೆದ ಕಥೆಯಲ್ಲ; ಮುಂದೊಮ್ಮೆ ಹೀಗೆ ನಡೆಯುತ್ತದೆ ಎಂದು ನಿನ್ನೆಯಷ್ಟೇ ನನಗೆ ಕನಸಿನಲ್ಲಿ ಕಾಣಿಸಿದ್ದು” ಎಂದಿತು.

ಇದನ್ನೂ ಓದಿ: ISL 2024: ಗೆಲುವಿನ ಶುಭಾರಂಭ ಕಂಡ ಬೆಂಗಳೂರು ಎಫ್‌ಸಿ

ಆಗ ವಿಕ್ರಮಾದಿತ್ಯನು, ‘ಬೇತಾಳಗಳಿಗೂ ಕನಸು ಬೀಳುತ್ತೆ ಅಂತ ಗೊತ್ತಿರಲಿಲ್ಲ; ಓಕೆ, ಪ್ರೊಸೀಡ್’ ಎನ್ನುತ್ತಾ
ಗೋಣು ಹಾಕಿದ್ದಕ್ಕೆ ಬೇತಾಳವು ಕಥೆಯನ್ನು ಹೇಳತೊಡಗಿತು: ಎಲೈ ರಾಜನೇ, ‘ಕರ್-ಡ್ರಾಮಾ’ ಎಂಬ ರಾಜ್ಯವನ್ನು
ರಾಜನೊಬ್ಬ ಆಳುತ್ತಿದ್ದ. ಅದರ ರಾಜಧಾನಿ ತಂಗಳೂರು. ಅದೇನು ಕಾರಣವೋ ಗೊತ್ತಿಲ್ಲ, ಅವನನ್ನು ರಾಜನ
ಪಟ್ಟದಿಂದ ಕೆಳಗಿಳಿಸಲಾಗುತ್ತದೆ ಎಂಬ ‘ಕೋಳಿಸುದ್ದಿ’ ಹಬ್ಬಿತು. ಆಗ ಶತ್ರುರಾಜ್ಯದ ‘ಪ್ರೀತ್ಯತೀತ ಜಟಕಾದಳ’ ರಾಜವಂಶದ ವಯೋವೃದ್ಧ ರಾಜನು ತನ್ನ ಸೋಮಾರಿ ಮಗನನ್ನು ಕರೆದು, “ಕಂದಾ, ಪಕ್ಕದ ‘ಕರ್-ಡ್ರಾಮಾ’
ರಾಜ್ಯದಲ್ಲಿ ಅರಾಜಕತೆ ತಲೆದೋರಿದೆ. ಅದರ ಮೇಲೆ ನಾವು ದಂಡೆತ್ತಿ ಹೋಗಲು ಇದುವೇ ಸುಸಮಯ. ಆ
ರಾಜ್ಯವು ನಮಗೆ ವಶವಾದರೆ ನಮ್ಮ ಸಾಮ್ರಾಜ್ಯವೂ ವಿಸ್ತರಣೆಯಾದಂತಾಗುತ್ತದೆ, ನಿನ್ನ ‘ಅನ್‌ಎಂಪ್ಲಾಯ್
ಮೆಂಟ್ ಪ್ರಾಬ್ಲಮ್ಮೂ’ ಪರಿಹಾರವಾಗುತ್ತದೆ.

ಅಂದರೆ, ಆ ರಾಜ್ಯಕ್ಕೆ ನೀನೇ ರಾಜನಾಗುವೆ. ಹಾಗೆಂದ ಮಾತ್ರಕ್ಕೆ ರಾಜನಾಗುವುದು ಸುಲಭದ ಮಾತಲ್ಲ; ಜ್ಞಾನ, ದಕ್ಷತೆ, ಅರ್ಹತೆ, ಯೋಗ್ಯತೆ, ಭಾಷಾಶುದ್ಧಿ, ಚಿತ್ತಶುದ್ಧಿ, ಕುದುರೆ ಸವಾರಿ, ಕತ್ತಿವರಸೆ ಇತ್ಯಾದಿ ಮೂಲಭೂತ ಕೌಶಲ ಗಳನ್ನು ನೀನು ಕಲಿಯಬೇಕಾಗುತ್ತದೆ. ಆದ್ದರಿಂದ, ನೀನು ಈಗಿಂದೀಗಲೇ ‘ಡ್ರೋನ್’ಆಚಾರ್ಯ ಮತಾಪು
ಅವರಲ್ಲಿಗೆ ಹೋಗಿ, ಈ ಎಲ್ಲ ಕೌಶಲಗಳನ್ನೂ ಕಲಿತು ಬಾ. ಇದರಲ್ಲಿ ಯಶಸ್ವಿಯಾದಲ್ಲಿ, ಪಕ್ಕದ ರಾಜ್ಯದಲ್ಲಿ ನಿನಗೆ
ಪಟ್ಟಾಭಿಷೇಕ” ಎಂದು ಹೇಳಿ ‘ಯುವರಾಜ’ ನಾಮಾಂಕಿತ ತನ್ನ ಮಗನ ನಿಲುವಂಗಿ ಜೇಬಿಗೆ ೫ ಲಕ್ಷ ಚಿನ್ನದ
ವರಹಗಳನ್ನು ತುರುಕಿ, “ಈ ಹಣ ನಿನ್ನ ತರಬೇತಿಯ ಶುಲ್ಕಕ್ಕೆ; ಇದನ್ನು ಬೇರಾವುದಕ್ಕೂ ಬಳಸಬಾರದು,
ಇದರಿಂದ ಏನನ್ನೂ ಖರೀದಿಸಬಾರದು” ಎಂದು ಷರತ್ತು ಹಾಕಿ ಅವನನ್ನು ಬೀಳ್ಕೊಟ್ಟ. ಆದರೆ ಆ ಮಗನೋ, ಅಪ್ಪ
‘ಏತಿ’ ಅಂದರೆ ತಾನು ‘ಪ್ರೇತಿ’ ಅನ್ನೋ ಜಾಯಮಾನದವ.

ಹೀಗಾಗಿ ಅಪ್ಪ ಹೇಳಿದಂತೆ ‘ಡ್ರೋನ್ ’ಆಚಾರ್ಯ ಮತಾಪು ಅವರ ಬಳಿ ಬರದೆ, ನೇರವಾಗಿ ತಂಗಳೂರಿನ ‘ಸ್ಮಾಲ್‌ ಪೇಟೆ’ಗೆ ತೆರಳಿದ. ಅಲ್ಲಿನ ವಸಭಂಡಾರವೊಂದಕ್ಕೆ ನುಗ್ಗಿ, ಒಂದು ದೊಡ್ಡ ಟವೆಲ್ ಅನ್ನೂ, ಚಿಕ್ಕ ಗಾತ್ರದ ೩೦ ಟವೆಲ್‌ಗಳನ್ನೂ ಖರೀದಿಸಿದ. ನಂತರ, ಭವ್ಯ ವಸತಿಗೃಹವೊಂದಕ್ಕೆ ತೆರಳಿ ಒಂದು ದೊಡ್ಡ ಕೋಣೆಯನ್ನು ಬುಕ್ ಮಾಡಿದ. ಸಾಲದೆಂಬಂತೆ, ಸನಿಹದ ಇಲೆಕ್ಟ್ರಾನಿಕ್ ಮಳಿಗೆಗೆ ಭೇಟಿಯಿತ್ತು ಒಂದಷ್ಟು ‘ಪೆನ್ ಡ್ರೈವ್’ಗಳನ್ನು ಖರೀದಿಸಿ ನಿಲುವಂಗಿಯ ಜೇಬಿನಲ್ಲಿ ಇಟ್ಟುಕೊಂಡ- ಇಷ್ಟು ಹೇಳಿ ಆ ಬೇತಾಳವು ಕಥೆಯನ್ನು ನಿಲ್ಲಿಸಿ, “ಎಲೈ ರಾಜನೇ, ಈಗ ನಿನಗೊಂದಿಷ್ಟು ಪ್ರಶ್ನೆಯಿದೆ.

ಮುದಿರಾಜ ಅಪ್ಪನು ಅಷ್ಟು ಕಟ್ಟುನಿಟ್ಟಾಗಿ ಹೇಳಿದ್ದರೂ ಅವನ ಮಗನು ತರಬೇತಿಗೆಂದು ‘ಡ್ರೋನ್ ’ಆಚಾರ್ಯ ಮತಾಪು ಅವರಲ್ಲಿಗೆ ಹೋಗದೆ ತಂಗಳೂರಿನ ‘ಸ್ಮಾಲ್‌ಪೇಟೆ’ಗೆ ತೆರಳಿದ್ದೇಕೆ? ತೆರಳಿದ್ದು ಸಾಲದೆಂಬಂತೆ ಅಲ್ಲಿನ ವಸ್ತ್ರ ಭಂಡಾರಕ್ಕೆ ನುಗ್ಗಿದ್ದೇಕೆ? ನುಗ್ಗಿದ್ದು ಸಾಲದೆಂಬಂತೆ ಅಲ್ಲಿ ಒಂದು ದೊಡ್ಡ ಟವೆಲ್, ೩೦ ಸಣ್ಣ ಟವೆಲ್‌ಗಳನ್ನು ಖರೀದಿಸಿದ್ದೇಕೆ? ನಂತರ ಭವ್ಯ ವಸತಿಗೃಹಕ್ಕೆ ತೆರಳಿ ದೊಡ್ಡ ಕೋಣೆಯನ್ನು ಬುಕ್ ಮಾಡಿಸಿದ್ದೇಕೆ? ಅಷ್ಟಕ್ಕೇ ಸುಮ್ಮನಾಗದೆ ಇಲೆಕ್ಟ್ರಾನಿಕ್ ಮಳಿಗೆಯಲ್ಲಿ ಪೆನ್‌ಡ್ರೈವ್‌ಗಳನ್ನು ಖರೀದಿಸಿದ್ದೇಕೆ? ಈ ಪ್ರಶ್ನೆಗಳಿಗೆ ಉತ್ತರ ಹೇಳದಿದ್ದರೆ, ದೇಗುಲದ ಮುಂದೆ ಈಡುಗಾಯಿ ಒಡೆದಾಗ ತೆಂಗಿನಕಾಯಿಯು ಚೂರುಚೂರಾಗುವಂತೆ ನಿನ್ನ ತಲೆ ಒಡೆದು ಸಾವಿರ ಹೋಳಾಗುತ್ತದೆ, ಎಚ್ಚರ” ಎಂದು ಆವಾಜ್ ಹಾಕಿತು. ಬೇತಾಳನ ಮಾತಿಗೆ ರಾಜಾ ವಿಕ್ರಮಾದಿತ್ಯನು ವಿಲನ್ ವಜ್ರಮುನಿಯಂತೆ ಒಮ್ಮೆ ಗಹಗಹಿಸಿ ನಕ್ಕು, “ಎಲೈ ಬೇತಾಳನೇ, ‘4ಜಿ, 5ಜಿ-ಕಾಲ’ ಬಂದಿದ್ದರೂ ನೀನಿನ್ನೂ ‘ಅಜ್ಜಿ-ಕಾಲ’ದಲ್ಲೇ ಇದ್ದೀಯಲ್ಲಾ? ‘ಚಂದಮಾಮ’ ಕಾಲದಲ್ಲಿದ್ದ ನಿನ್ನ ಮೈಂಡ್‌ಸೆಟ್ ಇನ್ನೂ ಬದಲಾಗಿ ಲ್ಲವಲ್ಲಾ? ಇನ್ನಾದರೂ ಅಪ್‌ಡೇಟ್ ಆಗು.

‘ಕರ್ -ಡ್ರಾಮಾ’ ಸಾಮ್ರಾಜ್ಯದಲ್ಲಿ ಅರಾಜಕತೆ ಉಂಟಾಗಬಹುದು ಎಂದು ಭಾವಿಸಿದ್ದ ಶತ್ರುರಾಜ್ಯದ ಮುದಿರಾಜನು,
ಆ ಸಂದರ್ಭವನ್ನು ಬಳಸಿಕೊಂಡು ಅದರ ಮೇಲೆ ಆಕ್ರಮಣ ಮಾಡಿ ವಶಕ್ಕೆ ತೆಗೆದುಕೊಂಡು, ಅಲ್ಲಿನ ಸಿಂಹಾ
ಸನದಲ್ಲಿ ತನ್ನ ಮಗನನ್ನು ರಾಜನನ್ನಾಗಿ ಪ್ರತಿಷ್ಠಾಪಿಸಬೇಕು ಎಂದು ಬಯಸಿ, ಅದಕ್ಕೆ ಪೂರ್ವಭಾವಿಯಾಗಿ ‘ರಾಜಾರ್ಹ ಯೋಗ್ಯತೆಗಳನ್ನು’ ಸಂಪಾದಿಸಲು ತರಬೇತಿ ಪಡೆಯುವಂತೆ ಮಗನಿಗೆ ೫ ಲಕ್ಷ ಚಿನ್ನದ ವರಹಗಳನ್ನೂ
ನೀಡಿದ್ದು ಸರಿಯೇ. ಆದರೆ ಬೇತಾಳವೇ, ಆ ಮಗ ಸೋಮಾರಿ ಆಗಿದ್ದನೇ ಹೊರತು, ವ್ಯವಹಾರ ಜ್ಞಾನ ಇಲ್ಲದವ ನಾಗಿರಲಿಲ್ಲ.

ತನ್ನ ಕಾಲಘಟ್ಟದಲ್ಲಿ ರಾಜಸಿಂಹಾಸನವನ್ನೇರಲು ಜ್ಞಾನ, ದಕ್ಷತೆ, ಅರ್ಹತೆ, ಯೋಗ್ಯತೆ, ಭಾಷಾಶುದ್ಧಿ, ಚಿತ್ತಶುದ್ಧಿ, ಕುದುರೆ ಸವಾರಿ, ಕತ್ತಿವರಸೆ ಇತ್ಯಾದಿ ಅರ್ಹತೆಗಳ ಅಗತ್ಯವಿಲ್ಲ ಎಂಬುದು ಆ ‘ಪ್ರಾಕ್ಟಿಕಲ್ ಮೈಂಡ್‌ಸೆಟ್’ ಸೋಮಾರಿ ಮಗನಿಗೆ ಗೊತ್ತಿತ್ತು. ರಾಜಕಾರಣದ ವಿಷಯದಲ್ಲಿ ಸಾಕಷ್ಟು Street Smart ಆಗಿದ್ದ ಅವನಿಗೆ ಸಿಂಹಾಸನ ಏರುವುದು ಹೇಗೆಂಬುದು ಗೊತ್ತಿತ್ತು. ಹೀಗಾಗಿ ತಂಗಳೂರಿನ ‘ಸ್ಮಾಲ್‌ಪೇಟೆ’ಗೆ ತೆರಳಿ ಅಲ್ಲಿನ ವಸ್ತ್ರ ಭಂಡಾರದಿಂದ ಒಂದಷ್ಟು ಟವೆಲ್‌ಗಳನ್ನು ಖರೀದಿಸಿದ. ಆ ಪೈಕಿ ದೊಡ್ಡ ಟವೆಲ್ಲು ತಾನು ನೇರವಾಗಿ ನೆರೆರಾಜ್ಯದ ಸಿಂಹಾಸನದ ಮೇಲೆ ಹಾಕಲಿಕ್ಕೆಂದು, ಮಿಕ್ಕ ೩೦ ಟವೆಲ್ಲುಗಳು ತಾನು ಹೇಳಿದಂತೆ ಕೇಳುವ ಮಿಕ್ಕ ಮಂತ್ರಿಗಳಿಗೆಂದು.

ಇನ್ನು, ಅಲ್ಲಿಂದ ಆತ ಭವ್ಯ ವಸತಿಗೃಹಕ್ಕೆ ತೆರಳಿ ದೊಡ್ಡ ಕೋಣೆಯನ್ನು ಕಾದಿರಿಸಿದ್ದು ಕೂಡ, ತನ್ನ ಬೆಂಬಲಿಗ ರನ್ನು ಅಲ್ಲಿ ಕೂಡಿಹಾಕಿ ‘ಪಲ್ಲಂಗಸುಖ’ ಸೇರಿ ದಂತೆ ‘ನವರಂಗಿ’ ಆತಿಥ್ಯವನ್ನೂ ಕೊಡಿಸಿ, ತನ್ನ ಪರವಾಗಿ ಬೆಂಬಲ ಸೂಚಿಸುವಂತೆ ಅವರನ್ನು ಕಟ್ಟುಬೀಳಿಸು ವುದಕ್ಕೆಂದು. ಇಷ್ಟು ಸಾಲದೆಂಬಂತೆ, ಆತ ಮಳಿಗೆಯಲ್ಲಿ ಪೆನ್‌ಡ್ರೈವ್ ಗಳನ್ನು ಖರೀದಿಸಿದ್ದು ಏಕೆ ಗೊತ್ತೇ? ತನ್ನ ಬೆಂಬಲಿಗರೆ ನಿಸಿಕೊಂಡವರು ಮುಂದೊಮ್ಮೆ ಉಲ್ಟಾ ಹೊಡೆದರೆ, ವಸತಿಗೃಹದಲ್ಲಿ ಅವರಾಡುವ ‘ನವರಂಗಿ’ ಆಟಗಳನ್ನು ಅವರಿಗೆ ಗೊತ್ತಾಗದಂತೆ ರೆಕಾರ್ಡ್ ಮಾಡಿ ಕೊಂಡು ತರುವಾಯದಲ್ಲಿ ಅದನ್ನಿಟ್ಟುಕೊಂಡು ಅವರನ್ನು ‘ಬ್ಲ್ಯಾಕ್ ಮೇಲ್’ ಮಾಡುವುದಕ್ಕೆ. ಇದಕ್ಕೆಲ್ಲಾ ಆಗುವ ವೆಚ್ಚ ವನ್ನು ಆತ ತನ್ನ ಮುದಿತಂದೆ ನೀಡಿದ್ದ ೫ ಲಕ್ಷ ಚಿನ್ನದ ವರಹಗಳಲ್ಲಿ ನಿಭಾಯಿಸಿದ್ದ. ಗದ್ದುಗೆಯೇರಲು ಬೆಂಬಲಿಗ ರಿಗೆ ವಸತಿ ಗೃಹ ವಾಸ, ಅಲ್ಲಿನ ‘ನವರಂಗಿ’ ಆತಿಥ್ಯ ಒದಗಿಸಿದರೆ ಸಾಕೆಂಬುದು ಅವನಿಗೆ ಗೊತ್ತಿತ್ತು. ಎಲೈ ಬೇತಾಳವೇ, ನೀನಿನ್ನೂ ‘ಚಂದಮಾಮ’ ಕಾಲದಲ್ಲೇ ಇದ್ದೀಯ, ರಾಜಕಾರಣ ಈಗ ಬದಲಾಗಿದೆ. ಇನ್ನಾದರೂ ಅಪ್‌ಡೇಟ್ ಆಗು” ಎಂದು ಹೇಳಿ ಬೇತಾಳನತ್ತ ನೋಡಿ ಗೇಲಿಮಾಡಿ ನಕ್ಕ.

ರಾಜಾ ವಿಕ್ರಮಾದಿತ್ಯನ ಉತ್ತರ ರೂಪದ ಸಮರ್ಥನೆಗೆ ತೃಪ್ತಿಯಾಗದಿದ್ದರೂ, ಇನ್ನಷ್ಟು ಹೊತ್ತು ಅವನ ಹೆಗಲ
ಮೇಲಿದ್ದರೆ ಬದಲಾದ ರಾಜಕಾರಣದ ಬಗ್ಗೆ ಇನ್ನೇನಾದರೂ ಪಿಟೀಲು ಕುಯ್ದು ಕೊರೆದು ತನ್ನ ಮಿದುಳನ್ನು ‘ಕರಪ್ಟ್’ ಮಾಡಿಬಿಡುತ್ತಾನೆ ಎಂದು ಬೆದರಿದ ಬೇತಾಳವು ವಿಕ್ರಮಾದಿತ್ಯನಿಂದ ನುಣುಚಿಕೊಂಡು ಹಾರಿಹೋಗಿ ಮತ್ತೆ ಶವವಾಗಿ, ಆ ಒಂಟಿ ಹುಣಿಸೇಮರದ ಕೊಂಬೆಯಲ್ಲಿ ನೇತಾಡತೊಡಗಿತು!!

(ಲೇಖಕರು ಪತ್ರಕರ್ತರು)