Sunday, 8th September 2024

ಭಕ್ತಮನದಿ ಘನವಾದ ಶ್ರೀ ಶಿವರಾತ್ರಿ ರಾಜೇಂದ್ರರು

– ಧರ್ಮನಂದನ

‘ವೃಕ್ಷಕಲ್ಲ ವೃಕ್ಷದ ಫಲವು, ನದಿಯ ನೀರು ನದಿಗಲ್ಲ; ಸಂತನ ಬದುಕು ಸಂತನಿಗಲ್ಲ, ಅದು ಲೋಕದ ಹಿತಕೆ’ ಎಂಬ ಕಬೀರರ ನುಡಿಯಂತೆ, ತ್ಯಾಗ ಮತ್ತು ಸೇವೆ ಎಂಬ ಆದರ್ಶಗಳನ್ನು ಧ್ಯೇಯವಾಗಿಸಿಕೊಂಡು ತಮ್ಮಿಡೀ ಬದುಕನ್ನು ಲೋಕ ಕಲ್ಯಾಣಕ್ಕಾಗಿ ಮುಡಿಪಿಟ್ಟವರು, ಸಮಾಜಸೇವೆ ಮತ್ತು ಬಡವರ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀಮನ್ಮಹಾರಾಜ ರಾಜಗುರುತಿಲಕ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಸಂಸ್ಥಾಪಿಸಿದ ಸುತ್ತೂರು ಶ್ರೀಮಠದ ೨೩ನೇ ಜಗದ್ಗುರುಗಳಾದ ಶಿವರಾತ್ರಿ ರಾಜೇಂದ್ರ ಶ್ರೀಗಳು, ಶ್ರೀಮತಿ ಮರಮ್ಮಣ್ಣಿ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದಂಪತಿಯ ಕಾರಣಿಕ ಮಗುವಾಗಿ ೧೯೧೬ರ ಆಗಸ್ಟ್ ೨೯ ರಂದು ಜನಿಸಿದರು. ಅವರ ಬಗ್ಗೆ ಬರೆಯುವುದಾಗಲೀ, ಮಾತಾಡುವುದಾಗಲೀ ಒಂದು ಪುಣ್ಯದ ಕೆಲಸವೇ ಸರಿ. ಆದರೆ ಬರೆಯುವಾಗ ‘ಕೊಡದೊಳಗೆಷ್ಟು ನಿಲ್ವುದು ಸಮುದ್ರಜಲಂ’ ಎಂಬ ಭಾವ ಮೂಡುತ್ತದೆ.

ಪೂಜ್ಯರ ವ್ಯಕ್ತಿತ್ವ ಎಲ್ಲರನ್ನೂ ಬೆರಗುಗೊಳಿಸುವಷ್ಟು ಮಹತ್ತರವಾದುದು. ಕಾಯಕಸಿದ್ಧರಾಗಿ, ಕರ್ಮಯೋಗಿ ಯಾಗಿ, ಸೇವಾವ್ರತಿಗಳಾಗಿ, ಮಾತೃಹೃದಯಿಗಳಾಗಿ ವಿವಿಧ ಕಣ್ಣಿಗೆ ವಿವಿಧವಾಗಿ ಅವರು ಕಾಣಬಹುದು. ಮನುಷ್ಯಜನ್ಮವೇ ಸುಕೃತವೆಂದು ಭಾವಿಸಿದ್ದ ಪೂಜ್ಯರು, ಮಾನವನಾಗಿ ಹುಟ್ಟಿದ ಮೇಲೆ ಸಮಾಜದ ಸೇವೆ ಮಾಡುವುದೇ ಸೌಭಾಗ್ಯವೆಂದು ಅರಿತಿದ್ದರು. ‘ಅವಕಾಶ ಒದಗಿಬಂದಾಗ ಸೇವೆ ಮಾಡುವವನೇ ಪುಣ್ಯವಂತ’ ಎಂದು ಅವರು ಹೇಳಿದ್ದಾರೆ. ತಮ್ಮ ಜೀವಿತದ ಅಂತ್ಯದವರೆಗೂ ಸೇವೆಯನ್ನೇ ಉಸಿರಾಗಿಸಿಕೊಂಡಿದ್ದ ಪರಮ ಪೂಜ್ಯರ ಬದುಕೇ ಒಂದು ವಿಸ್ಮಯ! ಕಾಯಕದ ಮಹಿಮೆ ಸಾರಿದ ಈ ಸಂತನ ಬದುಕು ನೂರು ಕಾವ್ಯಗಳಿಗೆ ಸಮ. ಪೂಜ್ಯರು ಸಾರಿದ ತತ್ತ್ವ, ಬದುಕಿದ ಪರಿ ನಾಡಿಗೇ ಮಾದರಿ. ‘ಸೋಹಂ ಎಂದೆನಿಸದೆ ದಾಸೋಹಂ ಎಂದೆನಿ ಸಯ್ಯಾ’ ಎಂಬ ಅಲ್ಲಮನ ವಚನಸಾರವನ್ನು ಚಾಚೂ ತಪ್ಪದೆ ಕಾಯಕರೂಪಕ್ಕಿಳಿಸಿದ ಪೂಜ್ಯರು, ‘ಇಹದ ಬದುಕು ಪರದಲ್ಲಿಯೂ ಸಲ್ಲುವಂತಾಗಬೇಕಾದರೆ, ಇಹದಲ್ಲಿ ಪರಿಶುದ್ಧವಾದ, ಪ್ರಾಮಾಣಿಕವಾದ ಬದುಕನ್ನು ಬಾಳಬೇಕು’ ಎಂದು ತಿಳಿಸಿಕೊಟ್ಟರು.

ಶಿವರಾತ್ರಿ ರಾಜೇಂದ್ರರಿಗೆ ಕೇವಲ ೧೨ ವರ್ಷ ವಿದ್ದಾಗಲೇ, ೧೯೨೮ರ -ಬ್ರವರಿ ೨೪ರಂದು ಪಟ್ಟಾಭಿಷೇಕ ಮಾಡಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ವ್ಯವಸ್ಥೆ ಮಾಡಲಾಯಿತು. ಹಿಂದಿನ ಬಾಲಕ ಶಿವರಾತ್ರಿ ರಾಜೇಂದ್ರರು ಈಗ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಾಗಿದ್ದರು. ಸೋಮಶೇಖರ ಸ್ವಾಮಿಗಳಿಂದಾಗಿ ಅವರಿಗೆ ಮೈಸೂರಿನ ಪಂಚಗವಿ ಮಠಾಧ್ಯಕ್ಷರಾಗಿದ್ದ ಶ್ರೀ ಗೌರೀಶಂಕರ ಸ್ವಾಮಿಗಳ ಘನಪಾಂಡಿತ್ಯ, ಭಾಷಾಪ್ರೌಢಿಮೆಗಳ ಬಗ್ಗೆ ತಿಳಿದುಬಂದು, ತಾವೂ ಅವರಂತಾಗಬೇಕು ಎಂದು ಯಾರಿಗೂ ಹೇಳದೆ ಕಾಶಿಗೆ ಪ್ರಯಾಣಿಸಿ ಗೌರೀಶಂಕರ ಸ್ವಾಮಿಗಳನ್ನು ಭೇಟಿಮಾಡಿದರು. ಇವರನ್ನು ಅತ್ಯಂತ ಪ್ರೀತಿಯಿಂದ ನೋಡಿದ ಶ್ರೀಗಳು ಮುಗುಳ್ನಗುತ್ತಾ, ‘ನಿಮ್ಮ ಈ ಹಂಬಲ ಒಳ್ಳೆಯದೇ, ಪಾಂಡಿತ್ಯ ಪಡೆಯುವುದು ಉತ್ತಮ ಸಾಧನೆಯೂ ಹೌದು. ಆದರೆ ಅದಕ್ಕಿಂತಲೂ ಶ್ರೇಷ್ಠವಾದುದನ್ನು ಸಾಧಿಸಲೆಂದೇ ನೀವು ಜನ್ಮತಳೆದವರು. ನಿಮ್ಮಿಂದ ಸಮಾಜ ಅಪೂರ್ವವಾದುದನ್ನು ನಿರೀಕ್ಷಿಸುತ್ತಿದೆ. ನಮ್ಮ ದೇಶದಲ್ಲಿ ಅಸಂಖ್ಯಾತ ಜನ ಅನ್ನ, ಅರಿವು, ಆಶ್ರಯವಿಲ್ಲದೆ ಬಳಲುತ್ತಿದ್ದಾರೆ.

ಇಂಥ ಜನರನ್ನು ಉದ್ಧಾರ ಮಾಡುವುದು ಅತ್ಯಗತ್ಯ. ಈ ಕಾರ್ಯ ನಿಮಗಾಗಿ ಕಾಯುತ್ತಿದೆ. ನೀವೊಬ್ಬರೇ ವಿದ್ವಾಂಸರಾದರೆ ಸಾಕೇ? ಯೋಚಿಸಿ ನೋಡಿ!’ ಎಂದರು. ಗೌರೀಶಂಕರ ಸ್ವಾಮಿಗಳ ಮಾತು ಕೇಳಿ ರಾಜೇಂದ್ರ
ಶ್ರೀಗಳು ಮೈಸೂರಿಗೆ ಹಿಂದಿರುಗಿ ಗ್ರಾಮೀಣ ಬಡಮಕ್ಕಳ ಶ್ರೇಯೋ ಭಿವೃದ್ಧಿಗೆ ಶ್ರಮಿಸಲು ಸಂಕಲ್ಪಿಸಿದರು. ತಾವು ಓದುವಾಗ ಜತೆಗಿದ್ದ ಬಡವಿದ್ಯಾರ್ಥಿಗಳ ಕಷ್ಟ ನೋಡಿ, ತಮ್ಮ ಖರ್ಚಿಗೆ ಕೊಟ್ಟ ಹಣವನ್ನೇ ಉಳಿಸಿ ಅವರಿಗೆ ನೆರವಾಗುತ್ತಿದ್ದರು. ಆ ವಯಸ್ಸಿನಲ್ಲಿಯೇ, ಬಡವರ ಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭಿಸುವ ಬಯಕೆಯನ್ನು ಹಿರಿಯರ ಮುಂದೆ ವ್ಯಕ್ತಪಡಿಸಿದಾಗ, ‘ಈಗಾಗಲೇ ಒಂದು ವಿದ್ಯಾರ್ಥಿನಿಲಯವಿದೆ,
ಮತ್ತೊಂದು ಮಾಡಲು ಇದು ಸಕಾಲವಲ್ಲ’ ಎಂದಿದ್ದರು. ಆದರೂ ರಾಜೇಂದ್ರ ಶ್ರೀಗಳ ಮನಸ್ಸು ಕೇಳಲಿಲ್ಲ. ಹೇಗೋ ಕಷ್ಟಪಟ್ಟು ೧೯೪೧ರ ಸೆಪ್ಟೆಂಬರ್ ೧೯ರಂದು ಶ್ರೀಮಠದ ಆಶ್ರಯದಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದರು. ರಾಜೇಂದ್ರ ಮಹಾಸ್ವಾಮಿಗಳು ಯಾವುದೇ ಬಂಡವಾಳವನ್ನಿಟ್ಟುಕೊಂಡು ಸಂಸ್ಥೆಯನ್ನು ಕಟ್ಟಲಿಲ್ಲ. ಅವರು ಶಾಲೆಗಳನ್ನು ಕಟ್ಟಿದ್ದು ನಗರ ಪ್ರದೇಶಗಳಿಂದ ದೂರವಿದ್ದ ಕುಗ್ರಾಮಗಳಲ್ಲಿ. ವಿದ್ಯೆ ಕಲಿಯಲು ಕಷ್ಟಪಡುತ್ತಿದ್ದವರನ್ನು ನೋಡಿ ಅವರ ಅಂತರಂಗ ಮಿಡಿಯುತ್ತಿತ್ತು. ಇಂಥವರಿಗೆ ಶ್ರೀಗಳು ಊರುಗೋಲಾದರು, ಅದೂ ಸ್ವಾತಂತ್ರ್ಯ ಪೂರ್ವ ದಲ್ಲಿ. ಒಂದೇ ಒಂದು ವಿದ್ಯಾರ್ಥಿನಿಲಯದಿಂದ ಪ್ರಾರಂಭವಾದ ಪೂಜ್ಯರ ಜನಹಿತ ಕಾರ್ಯವಿಂದು ೩೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿರುವುದು ಸಾಮಾನ್ಯ ಸಂಗತಿಯಲ್ಲ. ಈಗಲೂ ಸುತ್ತೂರು ಸಂಸ್ಥೆಯಲ್ಲಿ ಈ ಪವಾಡ ನಡೆಯುತ್ತಲೇ ಇದ್ದು, ಇಂದು ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರರಾಜ್ಯಗಳು ಮತ್ತು ದೇಶದ ಗಡಿಯಾಚೆಗೂ ಅದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಹೆಮ್ಮೆಯ ಸಂಗತಿ.

ಆದರೆ, ಕಟ್ಟುವುದು ಸುಲಭ, ನಿರ್ವಹಿಸುವುದು ಕಷ್ಟ. ಈ ನಿಟ್ಟಿನಲ್ಲಿ ಪೂಜ್ಯರು ಪಟ್ಟ ಬವಣೆ ಅಷ್ಟಿಷ್ಟಲ್ಲ. ಒಮ್ಮೆ ವಿದ್ಯಾರ್ಥಿನಿಲಯದಲ್ಲಿ ರಾತ್ರಿ ಅಡುಗೆಗೆ ಅಕ್ಕಿ ಇರಲಿಲ್ಲ. ಸಂಬಂಧಪಟ್ಟವರು ಗುರುಗಳಿಗೆ ತಿಳಿಸಿದ್ದರು. ದಿನಸಿ ಅಂಗಡಿಯವ ಸಾಲ ಕೊಡಲು ನಿರಾಕರಿಸಿದ. ಅನೇಕ ಅಂಗಡಿಗಳಿಗೆ ಹೋದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ತಮ್ಮ ಕೊರಳಲ್ಲಿದ್ದ ಚಿನ್ನದ ಕರಡಿಗೆಯನ್ನು ಅಡ ವಿಟ್ಟು ೮೦೦ ರು. ಸಾಲಪಡೆದು, ದವಸ-ಧಾನ್ಯ ಖರೀದಿಸಿ ಹಾಸ್ಟೆಲ್‌ಗೆ ಕಳಿಸಿದರು. ಶ್ರೀಗಳು ಹೀಗೆ ಸಮಾಜದ ಹಿತಕ್ಕಾಗಿ ದುಡಿದು ದೇಹವನ್ನು ಶ್ರೀಗಂಧದಂತೆ ಸವೆಸಿದರು. ಪೂಜ್ಯರ ಲೋಕಹಿತ ಕಾರ್ಯಗಳು ಮೈಸೂರು ಮಹಾರಾಜರ ಗಮನವನ್ನೂ ಸೆಳೆದವು. ಸಂಸ್ಥೆಯ ಆಶ್ರಯದ ನೂರಾರು ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳಲು ೧೯೫೪ರಲ್ಲಿ ‘ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ’ ವನ್ನು ಸ್ಥಾಪಿಸಿದರು. ಅದು ಕಾಲಾನಂತರದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಮುನ್ನಡೆಯಿತು.

ಇದರಡಿ ಯಲ್ಲಿ ಮುನ್ನೆಲೆಗೆ ಬಂದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಸಂಶೋಧನಾ ಕೇಂದ್ರ, ಬಡವರ ಆರೋಗ್ಯಕ್ಕಾಗಿ ಆಸ್ಪತ್ರೆ, ಕಲಾಪ್ರಚಾರಕ್ಕಾಗಿ ಕಲಾಮಂಟಪ, ಶಾಸೀಯ ಸಂಗೀತದ ಪ್ರೋತ್ಸಾಹಕ್ಕಾಗಿ ಸಂಗೀತಸಭಾ, ದುಡಿಯುವವರ ಕಲ್ಯಾಣಕ್ಕಾಗಿ ಕನ್ಸ್ಯೂಮರ್ ಕೋ-ಆಪರೆಟಿವ್ ಸೊಸೈಟಿ ಮುಂತಾದವು ಜಗದ್ಗುರುಗಳ ಪರಿಪೂರ್ಣ ಜೀವನದೃಷ್ಟಿಗೆ ಹೆಗ್ಗುರುತುಗಳಾಗಿವೆ. ಮಠ- ಮಾನ್ಯಗಳಿಗೆ ಯಾವತ್ತೂ ಹೋಗದ ರಾಷ್ಟ್ರಕವಿ ಕುವೆಂಪು ಅವರು ವೈಜ್ಞಾನಿಕ ಮನೋಭಾವದ, ವಿಚಾರಕ್ರಾಂತಿಗೆ ಕರೆಕೊಟ್ಟ, ಪ್ರಗತಿಪರ ಚಿಂತನೆಯ ಧೀಮಂತ ಸಾಹಿತಿಗಳು. ಪೂಜ್ಯರ ಪೀಠಾರೋಹಣದ ೫೦ನೇ ವರ್ಷದ ಶುಭ ಸಮಾರಂಭಕ್ಕೆ ಆಗಮಿಸಿದ ಅವರು, ‘ನಾನು ಬಂದಿರುವುದು ನಿಮ್ಮಲ್ಲನೇಕರಿಗೆ ಹೇಗೋ ಹಾಗೆಯೇ ನನಗೂ ಆಶ್ಚರ್ಯವನ್ನುಂಟುಮಾಡಿದೆ! ಅದಕ್ಕೆ ಕಾರಣ, ಶ್ರೀ ರಾಮಕೃಷ್ಣ ಮಹಾಸಂಘವನ್ನುಳಿದು ಬೇರಾವ ಮಠ, ದೇವಸ್ಥಾನಗಳಿಗೆ ಹೋಗಿ ಅಲ್ಲಿನ ಕಾರ್ಯಕ್ರಮಗಳಲ್ಲಿ ನಾನು ಇದುವರೆಗೂ ಭಾಗವಹಿಸದೇ ಇದ್ದದ್ದು! ಇಂದು ಈ ಸಮಾರಂಭಕ್ಕೆ ಅತ್ಯಂತ ಪ್ರೀತಿಯಿಂದ ಆಗಮಿಸಿದ್ದೇನೆ.
ಇದಕ್ಕೆ ರಾಜೇಂದ್ರ ಶ್ರೀಗಳ ವ್ಯಕ್ತಿತ್ವ, ದೂರದರ್ಶಿತ್ವದ ಕಾರ್ಯಕ್ರಮಗಳು ಮತ್ತು ಸಾಧನೆಯೇ ಕಾರಣ’ ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಇದು ಶ್ರೀಗಳ ಘನ ಅಧ್ಯಾತ್ಮಿಕ ವ್ಯಕ್ತಿತ್ವ ಮತ್ತು ಸೇವಾಮನೋಭಾವಕ್ಕೆ
ದ್ಯೋತಕ.

ಪೂಜ್ಯರ ನಿಷ್ಠಾವಂತ ಸಾಧನೆಯನ್ನು ಭಕ್ತರು ಬಣ್ಣಿಸಿದಾಗ, ‘ಇದರಲ್ಲಿ ನಮ್ಮ ಹೆಚ್ಚುಗಾರಿಕೆಯೇನಿಲ್ಲ. ಎಲ್ಲವೂ ಶ್ರೀ ಶಿವರಾತ್ರೀಶ್ವರರ ಕೃಪೆ ಮತ್ತು ಭಕ್ತರ ಸಹಕಾರ-ಸಹಾನುಭೂತಿಗಳಿಂದ ಸಾಧ್ಯವಾಗಿದೆ’ ಎನ್ನುವ ಮೂಲಕ ತಮಗೆ ಸಂದ ಶ್ರೇಯಸ್ಸನ್ನು ತಮ್ಮ ಗುರುಗಳಿಗೆ ಮತ್ತು ಭಕ್ತರಿಗೆ ಅರ್ಪಿಸುತ್ತಿದ್ದುದು ಅವರ ನಿರಹಂಕಾರ ಸ್ವಭಾವಕ್ಕೆ ನಿದರ್ಶನ. ಒಮ್ಮೆ ಪೂಜ್ಯರು ತಮ್ಮ ಅಂಗಿಯ ಹರಿದ ಭಾಗಕ್ಕೆ ಸೂಜಿ-ದಾರದಿಂದ ಹೊಲಿಗೆ ಹಾಕಿಕೊಳ್ಳುತ್ತಿದ್ದರು. ಆಗ ಅಲ್ಲಿಗೆ ಬಂದ ಭಕ್ತರಾದ ನಾಟಕಕಾರ ಸಿ.ಅಂಕಪ್ಪನವರು ತಮಗಿದ್ದ ಸಲುಗೆಯಿಂದಾಗಿ ಕೊಂಚ ಹಾಸ್ಯಮಯವಾಗಿ, ‘ಹರಿದ ಅಂಗಿಯನ್ನು ಹೊಲಿದು ತೊಡುವ ಬಡತನ ನಿಮಗೇನು ಬಂದಿದೆ ಬುದ್ಧೀ? ದೊಡ್ಡ ಮಠದ ಜಗದ್ಗುರುಗಳೂ, ಅನೇಕ ಸಂಸ್ಥೆಗಳ ಸಂಸ್ಥಾಪಕರೂ ಆದ ನಿಮಗೆ ಬಡತನವೇ?’ ಎಂದರು. ಆಗ ಪೂಜ್ಯರು, ‘ಹೊಸದಾಗಿ ಬಟ್ಟೆ ಕೊಳ್ಳಲು, ಹೊಸ ಅಂಗಿ ಹೊಲಿಸಿಕೊಳ್ಳಲು
ನಮ್ಮದೆನ್ನುವುದು ಇಲ್ಲೇನಿದೆ? ಎಲ್ಲಾ ಭಕ್ತರದು, ಸಮಾಜದ್ದು. ಅಲ್ಲದೆ ಈ ಅಂಗಿ ನಮ್ಮ ಪ್ರಿಯಭಕ್ತರು ಕೊಟ್ಟದ್ದು, ಅದಕ್ಕೇ ಇಷ್ಟು ಬೇಗ ನಿವೃತ್ತಿ ಕೊಡಲು ಬಯಸುವುದಿಲ್ಲ’ ಎಂದರು. ಈ ಮಾತು ಅಂಕಪ್ಪನವರ ಮನವನ್ನಾವರಿಸಿತ್ತು. ಶ್ರೀಗಳ ಔದಾರ್ಯ, ವಿಶ್ವವಿಶಾಲ ದೃಷ್ಟಿಕೋನ, ಭಾವೈಕ್ಯತೆಯ ಚಿಂತನೆಗಳು ಮನನೀಯವಾದವು.

ಸುತ್ತೂರು ಶ್ರೀಕ್ಷೇತ್ರವಿಂದು ಅಂತಾರಾಷ್ಟ್ರೀಯ ಕೀರ್ತಿಯ ಧಾರ್ಮಿಕ ಕೇಂದ್ರವಾಗಿದೆ. ಇದಕ್ಕೆ ಕಾರಣ, ಇಂದಿನ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕೂಡ ತಮ್ಮ ಗುರುಗಳಂತೆ ಸೇವೆಯ
ಸದಾಶಯವನ್ನು ಮುಂದಿಟ್ಟುಕೊಂಡು, ತಮ್ಮ ಕಾರ್ಯ ಕ್ಷಮತೆ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿರುವುದು. ತಮ್ಮ ಗುರುಗಳನ್ನು ಕುರಿತು ಅವರಾಡಿರುವ ಮಾತೊಂದು ಇಲ್ಲಿ ಉಲ್ಲೇಖನೀಯ: ‘ಅವರು ಪ್ರಬುದ್ಧ ಪ್ರವಚನ ಮಾಡಲಿಲ್ಲ, ಬರಿಯ ಬಾಯಿಮಾತಿನ ಹಿತವಚನ ಹೇಳಲಿಲ್ಲ. ಯಾವುದೇ ಪ್ರಚಾರದ ಹಂಗಿಲ್ಲದೆ ಹಸಿದವರಿಗೆ ಅನ್ನವನ್ನು ಇಕ್ಕಿದ್ದು, ಬುದ್ಧಿಗೆ ಹೃದಯಕ್ಕೆ ಅರಿವಿನ ಸಂಸ್ಕಾರವನ್ನು ಕೊಟ್ಟಿದ್ದು ಅವರು ಮಾಡಿದ ಬಹುದೊಡ್ಡ ಮೌನಕ್ರಾಂತಿ’. ಈ ಮಾತು ಕೇವಲ ಒಂದು ನುಡಿಚಿತ್ರವಲ್ಲ, ಪೂಜ್ಯ ಶ್ರೀ ರಾಜೇಂದ್ರ ಮಹಾಸ್ವಾಮಿಗಳೇ ಅಲ್ಲಿ ಸಾಕ್ಷಾತ್ಕಾರವಾದಂತಿದೆ. ಈ ಶಕ್ತಿಗೆ ನೆರವಾಗಿರುವ ಪ್ರಾತಃಸ್ಮರಣೀಯರಾದ ರಾಜೇಂದ್ರ ಶ್ರೀಗಳ ನೆನಪು ಇಂದಿಗೂ ಭಕ್ತರಲ್ಲಿ ಕರ್ತೃತ್ವ ಶಕ್ತಿಯನ್ನು ಮೂಡಿಸುತ್ತದೆ. ಆಗಸ್ಟ್ ೨೯ರ ದಿನವಾದ ಇಂದು, ಪೂಜ್ಯ ಶಿವರಾತ್ರಿ
ರಾಜೇಂದ್ರ ಶ್ರೀಗಳ ೧೦೮ನೇ ಜಯಂತಿಯ ಶುಭಸಂದರ್ಭದಲ್ಲಿ, ಆ ದಿವ್ಯಚೇತನವನ್ನು ನೆನೆದು ಅವರು ಹಾಕಿಕೊಟ್ಟ ಆದರ್ಶದ ಹಾದಿಯಲ್ಲಿ ಮುನ್ನಡೆಯಲು ಸಂಕಲ್ಪಿಸೋಣ.
(ಲೇಖಕರು ಸುತ್ತೂರು ಶೀ ಕ್ಷೇತದ ಭಕ್ತರು)

Leave a Reply

Your email address will not be published. Required fields are marked *

error: Content is protected !!