ಅಲೆಮಾರಿಯ ಡೈರಿ
mehandale100@gmail.com
‘ಬಕೆಟ್ ಲಿಸ್ಟ್’ ಎನ್ನಿಸಿಕೊಳ್ಳುವ ನಿಜವಾದ ಬಕೆಟ್‌ನಲ್ಲಿ ಇದು ಇರಬೇಕಾದದ್ದೇ. ಕಾರಣ ನಿಮಗೆ ಚಾರಣ ಆಗಬೇಕಾ? ಪಾತಾಳಕ್ಕೆ
ಹೋದರೂ ಸಿಗದ 33 ಕೋಟಿ ದೇವತೆಗಳನ್ನು ಪ್ರತಿಧಿಸುವ ದೇವರುಗಳ ಸಾಲು ಸಾಲು ದರ್ಶನ ಬೇಕಾ? ರಾಮಗಂಗಾ, ಸರಯು ಮತ್ತು ಗುಪ್ತಗಂಗೆಯರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಬೇಕಾ? ಸ್ಕಂದ ಪುರಾಣದಲ್ಲೂ ದಾಖಲಾಗಿದ್ದ ಅಪೂರ್ವ ಜಾಗವೊಂದರ ಮೇಲೆಲ್ಲ ಕೈಯಾಡಿಸಬೇಕಾ? ಶಂಕರಾಚಾರ್ಯ ಎನ್ನುವ ಯತಿವರ್ಯರು ಅದೆಷ್ಟು ಬಾರಿ ಈ ಸಂಪೂರ್ಣ ಹಿಂದೂಸ್ತಾನ ಸುತ್ತಿದ್ದರೋ, ಅದರಂದು ಎಂಬಂತೆ ಇಲ್ಲೂ ತಮ್ಮದೊಂದು ಅಲೌಕಿಕ ಛಾಪು ಮೂಡಿಸಿದ್ದಾರಲ್ಲ, ಅದೇ ಕಲ್ಲಿನ ಇಳಿಕೆಯಲ್ಲಿ ನುಸುಳಿ ಇಳಿದು ಮೋಕ್ಷದಾಯಕ ಸ್ವರ್ಗದ ಬಾಗಿಲನ್ನು ದಾಟುವ ಹೆಬ್ಬಾಗಿಲಿಗೆ ಕೈಯಿಕ್ಕಿ ಬರಬೇಕಾ?
ಇದೆಲ್ಲ ಇತ್ತೀಚಿನ ಕತೆಯಾಯಿತು, ಸೀದಾ ತ್ರೇತಾಯುಗಕ್ಕೆ ಹೋಗೋಣ.
ಆಗಿನ ರಾಜ ನಳನಿಂದ ರಿತುಪರ್ಣನವರೆಗೂ, ಇಲ್ಲಿನ ಶಿವನಿಗೆ ನಡೆದುಕೊಳ್ಳುತ್ತಿದ್ದ ಐತಿಹ್ಯ ಇದೆಯಲ್ಲ, ಆ ಶಿವನ ತಲೆಯ ಮೇಲೆ ಬೀಳುವ ಅಭಿಷೇಚನಕ್ಕೆ ಕೈಯೊಡ್ಡಿ ಪುನೀತರಾಗ ಬೇಕಾ? ಈ ರಿತುಪರ್ಣ ನಳನ ಕತೆಯಲ್ಲಿ ಬರುವ ಧೀಮಂತ ನಾಯಕ.
ಇದರ ಹೊರತಾಗಿ ಪಾಂಡವರು ಕೈಲಾಸ ಯಾತ್ರೆಯ ಮೊದಲ ಪರ್ವದಲ್ಲಿ ಕಾಲಿಟ್ಟ ನೆಲದಲ್ಲಿ ನೀವು ಕಾಲಿಟ್ಟು ದಿವ್ಯಸಾನಿಧ್ಯ ಹೊಂದಬೇಕಾ? ನಿಮಗೆ ‘ಚಾರ್‌ಧಾಮ್ ಯಾತ್ರಾ’ ಮಾಡುವ ಅಂದರೆ ಅದೇ ಕೇದಾರ, ಬದರಿ, ಗಂಗೋತ್ರಿ ಮತ್ತು ಯಮುನೋತ್ರಿ ಗಳ ದರ್ಶನ ಮಾಡುವ, ಆ ಹೆಬ್ಬಂಡೆಯ ಮೇಲೇರಿ ನಿಲ್ಲುವ, ಹತ್ತುವ ತಾಕತ್ತಿಲ್ಲದೆ ಹುಳ್ಳಗಾಗಿದ್ದೀರಾ? ತಲೆಬಿಸಿ ಬಿಟ್ಟು ಇಲ್ಲಿ ಬನ್ನಿ.
ಏಕಕಾಲಕ್ಕೆ ನಾಲ್ಕು ದಿಶೆಯಲ್ಲಿ ತಿರುಗಿ ನಿಂತ ಶಿವನ ಚತುರ್ದಿಶಾ ದರ್ಶನ, ಅವೆಲ್ಲದರ ಪುಣ್ಯ ನಿಮಗೆ ಮರಳಿ ಕೊಡಿಸುತ್ತದೆ. ಚಾರ್‌ಧಾಮ್ ಮಿನಿಯೇಚರ್ ಇಲ್ಲಿನ ಗುಹೆ ಯಲ್ಲಿ ಎದ್ದು ನಿಂತಿದೆ. ಅದನ್ನೊಂದು ಸುತ್ತು ಸುತ್ತಿದರೆ ಸಾಕು ಪುಣ್ಯಪ್ರಾಪ್ತಿಯಂತೆ. ಸಮುದ್ರ ಮಟ್ಟದಿಂದ ೪೦೦೦ ಅಡಿ ಎತ್ತರದಲ್ಲಿ ಪರ್ವತ ಶಿಖರಗಳ ಮಧ್ಯೆ ನಿಮ್ಮದೊಂದು ದಿವ್ಯ ಸಂಸಾರ ಕಳೆಯಬೇಕಾ? ಸರಿ ಅದೂ ಆಗುತ್ತದೆ.
ಹಾಗಿದ್ದರೆ ಎಲ್ಲ ಬಿಡಿ, ಉತ್ತರಾಖಂಡನ ಪಿತೋರ್‌ಗಢ ಜಿಲ್ಲೆಗೆ ಹೊರಡಿ. ಇದೆಲ್ಲ ಒಂದೇ ಜಾಗದಲ್ಲಿ ಲಭ್ಯ, ಅದು ಪಾತಾಳ ಭುವನೇಶ್ವರ.. ಗುಪ್ತಗಂಗೆಯ ಸಂಗ… ಬಹುಶಃ ಭಾರತದ ಅತಿಹೆಚ್ಚು ಐತಿಹ್ಯ ಮತ್ತು ನಂಬುಗೆಯ ಜತೆಗೆ ಅಧಿಕೃತ ಎನ್ನಬಲ್ಲ ಮಾಹಿತಿಯುಕ್ತ ಪೌರಾಣಿಕ, ಐತಿಹಾಸಿಕ ಮತ್ತು ಕಲಿಯುಗದಲ್ಲೂ ಮಹತ್ವ ಹೊಂದಿರುವ ಸ್ಥಳವೇನಾದರೂ ಇದ್ದರೆ ಅದು ಆದಿ
ಶಂಕರಾಚಾರ್ಯರು 11ನೇ ಶತಮಾನದಲ್ಲಿ ಹೊರತೆಗೆದು ಮತ್ತೊಮ್ಮೆ ಸರ್ವ ಹಿಂದೂಗಳಿಗೆ ರೋಮಾಂಚನವಾಗಿಸಿದ ನೆಲ, ಗುಪ್ತಗಂಗೆ ಇರುವ ಪಾತಾಳ ಭುವನೇಶ್ವರ.
ಹೇಳಿಕೇಳಿ ಉತ್ತರ ಭಾರತದ ನದಿಯಿಂದ ಹಿಡಿದು ಗಿರಿಶಿಖರಗಳೆಲ್ಲ, ಹೆಚ್ಚಿನ ಪೌರಾಣಿಕ ಮತ್ತು ಈಶ್ವರನ ವಾಸಸ್ಥಾನವಾಗಿಯೇ
ಗುರುತಿಸಿಕೊಳ್ಳುವ ಐತಿಹ್ಯದಲ್ಲಿ ಪಾತಾಳ ಭುವನೇಶ್ವರ ಕೂಡ ಹೊರತಾಗಿಲ್ಲ. ಪರಿಸರ ಮತ್ತು ಸರ್ವಋತು ತಾಣವಾಗಿ ಇದು ವಿಭಿನ್ನವೆನಿಸಿಕೊಳ್ಳುತ್ತದೆ. ಗುಹೆಯನ್ನು ಹೊಕ್ಕುಬರುವ ಅಲ್ಲಿನ ಹಲವಾರು ನಿಸರ್ಗ ನಿರ್ಮಿತ ವಿಸ್ಮಯಗಳನ್ನು ಗಮನಿಸುವಾಗ ಅದು ಕೇವಲ ಪ್ರವಾಸವಾಗುವುದಿಲ್ಲ. ಅಪರೂಪಕ್ಕೆ ನಿಮ್ಮ ನೆನಪಿಗೆ ಒತ್ತುಕೊಟ್ಟು ನಿಲ್ಲುವ ಹಸಿರಿನ ಅಭಿವ್ಯಕ್ತಿಯಾಗುತ್ತದೆ.
ಉತ್ತರಾಖಂಡದ ಪಿತೋರ್‌ಗಢ ಜಿಯ ಗಂಗೋಲಿಹಾಟ್‌ನಿಂದ ಕೇವಲ 14 ಕಿ.ಮೀ. ದೂರದ ಪಾತಾಳ ಭುವನೇಶ್ವರ ಒಂದು ಧಾರ್ಮಿಕ ಕ್ಷೇತ್ರವಾದರೂ ಚಾರಣಿಗರ, ಪರಿಸರ ಪ್ರವಾಸಿಗರ ಆಪ್ತನೆಲವೂ ಹೌದು. ಕಾರಣ, ಮೇಲೆ ಹೇಳಿದಂತೆ ಇದೊಂದು ಪ್ಯಾಕೇಜ್. ಈಶ್ವರ ತನ್ನ ಗಣಗಳ ಜತೆ ನೆಲೆಸಿರುವ ನೆಲದಲ್ಲಿ ಚಾರಣಕ್ಕೂ ಹೇರಳ ಅವಕಾಶ ಇರುವ ಪ್ರಕೃತಿಯ ನೆಲೆ. ಸುಮಾರು 200 ಮೀ. ಉದ್ದ ಮತ್ತು 100 ಅಡಿಗೂ ಮಿಗಿಲು ನೆಲದ ಒಳಗೆ ಹುದುಗಿರುವ ಈ ಗುಹಾಸಮೂಹಕ್ಕೆ ನಾಲ್ಕಾರು ಪ್ರವೇಶ ದ್ವಾರ ಗಳಿದ್ದರೂ ಅದನ್ನೆಲ್ಲ ಯಾವ್ಯಾವುದೋ ಕಾರಣಕ್ಕಾಗಿ ಲಾಕ್ ಮಾಡಿರಿಸಿದ್ದಾರೆ.
ಕೇಳಿದರೆ ಅವಕ್ಕೂ ಒಂದೊಂದು ಕತೆ ಇಲ್ಲ ಪುತುಕ್ಕನೆ ಉದುರುತ್ತವೆ. ಮಾತು ಮಾತಿಗೆ ಇಲ್ಲಿ ಪಾಂಡವರು-ಕೌರವರು, ಈಶ್ವರ-ಗಣಪತಿ ಸೇರಿದಂತೆ ಸಾಲುಸಾಲು ಪುರಾಣ ಪ್ರಸಿದ್ಧರ ದಾಖಲಾತಿ ಲಭ್ಯವಾಗುತ್ತಿರುತ್ತದೆ. ಅವರ ಹೆಸರಿನ ಜೀವನವೂ ನಡೆಯು ತ್ತಿದೆ. ವೈಜ್ಞಾನಿಕವಾಗಿ ಇಲ್ಲಿನ ಶಿಲಾರಚನೆಗಳೆಲ್ಲ ಸ್ಟಾಲಕ್ಟೈಟ್ ಗಳೆಂದು ಗುರುತಿಸಲ್ಪಟ್ಟಿದ್ದು, ಸುಣ್ಣದ ಕಲ್ಲಿನ ಜತೆ ನೀರಿನ ಮಿಶ್ರಣದ ತೊಟ್ಟಿಕ್ಕುವಿಕೆಯಿಂದಾದ ಮನೋಹರವಾದ ರಚನೆಗಳು ಒಳಭಾಗದಲ್ಲಿ ಲಭ್ಯ. ವಾಹನ ನಿಲ್ಲಿಸಲಾಗುವ ಜಾಗ ದಿಂದ ಸುಮಾರು 1 ಕಿ.ಮೀ. ನಡೆದು ನೂರಿನ್ನೂರು ಮೆಟ್ಟಿಲು ಏರಿದರೆ ನಾಲ್ಕಾರು ದ್ವಾರಗಳ ಪಾತಾಳ ಭುವನೇಶ್ವರ ಎನ್ನುವ ಬಾಯ್ದೆರದ ಗುಹೆಯ ಎದುರಿಗೆ ನಿಲ್ಲುತ್ತೀರಿ.
ಇಲ್ಲಿಂದ ಒಳಕ್ಕೆ ಹೆಜ್ಜೆಯಿಟ್ಟ ಮೊದಲ ಮಾನವನೆಂದರೆ ತ್ರೇತಾಯುಗದ ಸೂರ್ಯವಂಶದ ಮಹಾರಾಜ ರಿತುಪರ್ಣನಂತೆ.
ಇದನ್ನು ಸ್ಕಂದಪುರಾಣದ ಮಾನಸ್ಕಂದದ ೧೦೩ನೆಯ ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಅಲ್ಲಿ ಒಳಗಿದ್ದ ರಾಕ್ಷಸರನ್ನು
ಸಂಹರಿಸಲು ಸ್ವತಃ ಶೇಷನಾಗನೇ ಈ ಗುಹೆಯ ಒಳದಾರಿಗಳ ಮರ್ಮಗಳನ್ನು ತಿಳಿಸಿದನಂತೆ. ಹಾಗೆ ಸುರಕ್ಷಿತವಾದ ದ್ವಾರವೇ ಈಗಲೂ ಪಾತಾಳ ಭುವನೇಶ್ವರದ ಮುಖ್ಯದ್ವಾರವಾಗಿ ನಿಮ್ಮನ್ನು ಸ್ವಾಗತಿಸುತ್ತದೆ.
ನಾಲ್ಕು ದ್ವಾರಗಳನ್ನು ರಣದ್ವಾರ, ಮೋಕ್ಷದ್ವಾರ, ಪಾಪದ್ವಾರ ಮತ್ತು ಧರ್ಮದ್ವಾರ ಎಂಬ ಹೆಸರಿನಿಂದ ಗುರುತಿಸಿಟ್ಟಿದ್ದಾರೆ. ರಾವಣನ ವಧೆಯ ನಂತರ, ಅವನು ಬಳಸುತ್ತಿದ್ದ ರಣದ್ವಾರವನ್ನು ಮುಚ್ಚಲಾಗಿದ್ದು ಅದನ್ನು ಮತ್ತೆ ತೆರೆದಿಲ್ಲವಂತೆ. ಇನ್ನೊಂದು ಪಾಪ ದ್ವಾರವಾಗಿದ್ದು ಅದಕ್ಕೂ ಶಾಶ್ವತವಾಗಿ ಮುಚ್ಚಲಾಗಿದೆ. ಕೇವಲ ಮೋಕ್ಷದ್ವಾರ ಮತ್ತು ಧರ್ಮದ್ವಾರಗಳಿದ್ದು ನಮ್ಮೆಲ್ಲ ಓಡಾಟ ಧರ್ಮದ್ವಾರದಲ್ಲಿ. ನೋಡಿ, ನೀವು ಹೆಜ್ಜೆಯಿಟ್ಟರೆ ಧರ್ಮ ದ್ವಾರದ ಪುಣ್ಯಪ್ರಾಪ್ತಿ ಎನ್ನುವ ನಂಬಿಕೆಯ ಕತೆಗಳಿಗೆ ಇಲ್ಲಿ ಹುಲುಸಾದ ಬೆಳೆ.
ಕಾಳಿಮಾತೆ, ಐರಾವತ ಹಾಗೂ ಇಂದ್ರ ಈ ದ್ವಾರದ ಮೇಲ್ಭಾಗದಿಂದ ಬೆಟ್ಟದ ಮಧ್ಯೆ ನೆಲೆಸಿದ್ದು ಕಾಯುತ್ತಾರೆನ್ನುವುದಕ್ಕೆ ಕುರುಹು ಎನ್ನುವಂತೆ ಆನೆಯ ದೇಹದ ಕೆಳಭಾಗದಲ್ಲಿ ನಾವು ನಿಂತಿರುತ್ತೇವೆ. ವಿಶಾಲ ದೇಹದ ನಾಲ್ಕು ಕಾಲು, ಕೆಳಭಾಗ ನಮ್ಮ ನೆತ್ತಿಯ ಮೇಲಿರುತ್ತದೆ. ಒಳಕ್ಕೆ ಇಳಿಯುವುದು ಸುಲಭವಲ್ಲದ ಕಾರಣ ಕಬ್ಬಿಣದ ಚೈನುಗಳ ಆಸರೆ ಮತ್ತು ಆದಷ್ಟೂ ಕಾಲಿಗೆ ಆಸರೆಯಾಗುವಂತೆ ಇಳಿಕೆಯ ಮೆಟ್ಟಿಲನ್ನು ಕಡೆಯಲಾಗಿದ್ದರೂ ದೂರ ದೂರದ ಹೆಜ್ಜೆಗೆ ಕಾಲು ನಿಲುಕದೆ ಅಕ್ಷರಶಃ ಹೊಸೆದು ಕೊಂಡು ಒಳಕ್ಕಿಳಿದಿದ್ದೇ ನಾನು ಕೂಡಾ.
ನೂರಡಿಗೂ ಆಳದ ನೆಲದಲ್ಲಿ ನೀರು, ಕೆಸರು, ಕುಂಕುಮ, ಹೂವು ಇತ್ಯಾದಿಗಳ ಕಚಪಚವನ್ನೆಲ್ಲ ಗಣಿಸಬಾರದು. ಸ್ಥಳಗಳು ಧಾರ್ಮಿಕವಾಗಿzಗ ಇದೆಲ್ಲ ಸಹಜ. ಸುಮ್ಮನೆ ನಮಗೆ ಅಗತ್ಯದ ನಿಸರ್ಗವನ್ನು ಆವರಿಸಿಕೊಂಡು ಹೊರಡಬೇಕು. ಇಲ್ಲಿಂದ ಮುಂದಕ್ಕೆ ದುರ್ಗಮವಾಗುವ ಗುಹೆಯ ಒಳಭಾಗಕ್ಕೆ ಚಲಿಸಿದವರಿಲ್ಲ. ಆದರೆ ಹಾಗೆ ಕಿರಿದಾದ ದಾರಿ ಮುಂದೆ ಮತ್ತೆ ತೆರೆದು ಕೊಂಡು ಅಲ್ಲಿಂದ ನೇರವಾಗಿ ಕೈಲಾಸ ಮಾನಸ ಪರ್ವತದವರೆಗೂ ಹೋಗುತ್ತದಂತೆ ಎಂದು ನಂಬಲಾಗಿದೆ.
ಕತೆಗಳೂ ಹೇರಳ. ಪಾತಾಳಕ್ಕಿಳಿದ ಮೇಲೆ ನೇರ ಕೈಲಾಸದ ದಾರಿ ಇದು. ಇಲ್ಲಿಂದಲೇ ಪಾಂಡವರೂ ಕೈಲಾಸ ತಲುಪಿದರಲ್ಲ ಎನ್ನುವ ವರಾತ ಬೇರೆ. ‘ನೋಡಿ, ಈ ಕಲ್ಲಿನ ಹಾಸುಗಳಿವೆಯಲ್ಲ ಇಲ್ಲಿಯೇ ಇದರ ಮೇಲೆಯೇ ಪಾಂಡವರು ವಿಶ್ರಮಿಸಿ, ಧ್ಯಾನ ಗೈದು ಮುಂದುವರಿದಿದ್ದರು’ ಎನ್ನುವುದಕ್ಕೆ ವಿರಾಜಮಾನವಾಗಿರುವ ದೊಡ್ಡಬಂಡೆ ಬೇರೆ. ಹಾಗೆ ಅವರೆಲ್ಲ ಇಲ್ಲಿಗೆ ಬರಲು ಛೋಟಾ ಚಾರ್‌ಧಾಮ್ ಕಾರಣ ಎಂಬ ವಿಪುಲ ಸಮರ್ಥನೆಗಳಿವೆ.
ಅಷ್ಟೇಕೆ ಗಣಪತಿಯ ತಲೆ ಕತ್ತರಿಸಿದ ಕತೆಗೂ ಈ ಗುಹೆಗೂ ಅವಿನಾಭಾವ ಸಂಬಂಧವಿದೆ. ಕತ್ತರಿಸಲ್ಪಟ್ಟ ತಲೆಯ ಎಂಟು ಭಾಗ ಗಳೇ ಇಲ್ಲಿ ಬ್ರಹ್ಮಕಮಲಗಳಾಗಿ ಅರಳಿದ ಐತಿಹ್ಯಕ್ಕೆ ನೀವು ಹೌದು ಅನ್ನಲೇಬೇಕು. ಪ್ರತಿ ಶಿಲೆಯ ಮೇಲೊಂದು ಕತೆ ಹೊಂದಿರುವ ಆದರೆ ಚೆಂದದ ಹಸಿರು ಪರಿಸರದ ಪಾತಾಳ ಭುವನೇಶ್ವರದಲ್ಲಿ ನಿಕ್ಕಿಯಾಗಿ ನೆಲೆ ಸೇರುವ ದೇವಾನುದೇವತೆಗಳ ಪೈಕಿ ಅಗ್ರಪೂಜೆ ಯ ಗಣೇಶ, ಸ್ವಯಂಭೂ ಶಿವಲಿಂಗ, ಛೋಟಾ ಚಾರ್‌ಧಾಮ, ಬ್ರಹ್ಮ ಮತ್ತು ಸರಸ್ವತಿಯರ ಸಂಕೇತವಾಗಿ ಹಂಸ, ಐರಾವತ ಅದಕ್ಕೂ ಕೆಳಗೆ ಒಂದು ಚಿಕ್ಕ ಕಲ್ಯಾಣಿ ತರಹದ ನಿರ್ಮಾಣ ನಟ್ಟುನಡುವೆ ಗುಹೆಯಲ್ಲಿದ್ದು ನೀರು ನಿರಂತರ ಚಿಲುಮೆ ಇಲ್ಲಿ.
ಗಾಮ್ಗೋಲಿ ಹಾಟ್, ಚಿಕೋರಿ ಮತ್ತು ಬೇರಿಂಗ್‌ನಲ್ಲಿ ಸಿಗುವ ಕೆಂಡರೊಟ್ಟಿ, ದಾಲ್ ಹಸಿ ಈರುಳ್ಳಿ ನಿಮ್ಮ ನೆಚ್ಚಿನ -ಡ್ಡಿ ಲಿಸ್ಟ್ ಸೇರುವುದರಲ್ಲಿ ಅನುಮಾನವಿಲ್ಲ. ಆಫ್ ಕೋರ್ಸ್ ಚಹ ಮರೆಯುವುದಾದರೂ ಹೇಗೆ. ಹಿತಮಿತವಾದ ಚಳಿಗೆ ಇಲ್ಲ ಕೆಂಡದ ಮೇಲೆ ಕುದಿಯುತ್ತಲೇ ಇರುವ ಕೆಟ್ಲಿ ನಿಮ್ಮನ್ನು ಕರೆಕರೆದು ಚಾಯ್ ಕುಡಿಸದೆ ಇರಲಾರದು. ನೆಟ್‌ನಲ್ಲಿ ಈಗೀಗ ಇದರ ಲಿಂಕ್ ಕೂಡಾ ಲಭ್ಯವಿದೆ. ನಾನು ಇಲ್ಲ ಸುತ್ತಾಡುವಾಗ ನನಗೆ ಲಿಂಕ್ ಸಾಯಲಿ ಗೂಗಲ್ ಎಂದರೇನೆಂದೇ ಗೊತ್ತಿರಲಿಲ್ಲ.
ಇದರ ಹೊರತಾಗಿಯೂ ಇದೆ ಸರಯು ಮತ್ತು ಇತರ ನದಿತೀರಕ್ಕೆ ಚಾಚಿಕೊಂಡಿರುವ ಸೆರ್ಘಾಟ್, ಧನ್ಕೇಟ್, ಸಭಾಕೋಟ್, ಕುಂಜ್ ಕಿಮೋಲಾ ಸೇರಿದಂತೆ ಚೆಂದದ ಕಣಿವೆ ಅಂಚಿನಲ್ಲಿ ಚದುರಿದಂತೆ ಬಿದ್ದ ಹಲವು ಹಳ್ಳಿಗಳು; ಪೇಯಿಂಗ್ ಗೆಸ್ಟ್ ಆಗಿ ತಂಗಲು ಅನುಕೂಲವಿದ್ದು ಅದ್ಭುತ ಅನುಭವಕ್ಕೆ ಡೌಟೇ ಇಲ್ಲ. ಆದಷ್ಟೂ ಹಿತಮಿತವಾದ ವಾತವರಣ ಸಹಿತ ಖುಷಿಯಿಂದ ಕಳೆಯಲು ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಅತ್ಯುತ್ತಮ ಸಮಯ. ಅಲ್ಲಲ್ಲಿ ಹಳ್ಳಿಗಳ ಭಾಗದಲ್ಲಿ ಈಗಲೂ ಲಭ್ಯವಿರುವ ಬಿಸಿನೀರ ಬುಗ್ಗೆಯ
ಚಿಲುಮೆಗೆ ತಲೆಗೆ ಇಪ್ಪತ್ತು (ಆಗಿನ ದರ) ಕೊಟ್ಟು ಹೋಟೆಲಿ ನಲ್ಲಿ ಏನೆಂದರೂ ಲಭ್ಯವಾಗದ ಬಿಸಿನೀರ ಮೋದ ಅನುಭವಿಸಿ.
ಹೊರಬರುತ್ತಿದ್ದಂತೆ ಚಹ ಹೀರಿಕೊಳ್ಳಿ, ಅತ್ಲಾಗೆ ನಡೆದು ಕೆಂಡರೊಟ್ಟಿ ತಿನ್ನಿ, ಆಯಾಸ ಆಗುತ್ತಿದ್ದರೆ ಗೆಸ್ಟ್ ರೂಮ್ ಹೊಕ್ಕು ರಜಾಯಿ ಒಳಗೆ ಸೇರಿಕೊಳ್ಳಿ. ಮಲಗುವ ಮೊದಲು ಮತ್ತೊಮ್ಮೆ ಅಲೆಮಾರಿಯಾಗಲಾ? ಎಂದು ಮನಸ್ಸು ಯೋಚಿಸದಿದ್ದರೆ ನನಗೊಂದು ಕರೆಮಾಡಿ.