ನಮ್ಮ ಹಳ್ಳಿಮನೆಯ ಹತ್ತಿರ ೨ ತೋಡು ಗಳಿವೆ; ಮೊದಲನೆಯದು ಸಣ್ಣದು, ಎರಡನೆಯದು ದೊಡ್ಡದು. ಮಳೆಗಾಲದಲ್ಲಷ್ಟೇ ಜೀವ ತಳೆವ ಸಣ್ಣತೋಡಿನ ಒಡನಾಟಕ್ಕಿಂತಲೂ, ಹೆಚ್ಚು ಕಾಲ ನೀರು ಹರಿಯುವ ದೊಡ್ಡ
ತೋಡಿನ ಜತೆಗಿನ ನಮ್ಮ ಬಾಂಧವ್ಯ ಹೆಚ್ಚು ಅರ್ಥಪೂರ್ಣ, ನಾಸ್ಟಾಲ್ಜಿಕ್. ಆದರೆ, ಈ ಎರಡೂ ತೋಡುಗಳು ಒಂದಕ್ಕೊಂದು ಪೂರಕವಾಗಿದ್ದು, ಮಳೆರಾಯನ ಕೃಪೆಯಿಂದಷ್ಟೇ ಜೀವ ತುಂಬಿಕೊಳ್ಳುವುದರಿಂದಾಗಿ, ದೊಡ್ಡತೋಡಿನ ವಿಚಾರ ಹೇಳುವಾಗಲೆಲ್ಲಾ, ನಡುನಡುವೆ ಸಣ್ಣತೋಡಿನ ನೀರು ಹರಿದುಬರುತ್ತದೆ!
ನಮ್ಮ ಮನೆ ಎದುರಿನಲ್ಲೇ ಗದ್ದೆಗಳು; ಎಷ್ಟು ಹತ್ತಿರ ಎಂದರೆ, ಚಾವಡಿ ದಾಟಿ ಹೊರಬಂದರೆ ಸಿಗುವ ಪುಟ್ಟ ಕೊಟ್ಟಿಗೆಯನ್ನು ಹಾದು ಮುಂದಡಿಯಿಟ್ಟರೆ, ನೇರವಾಗಿ ಹೆಜ್ಜೆ ಬೀಳುವುದು ಅಗೇಡಿಗದ್ದೆಗೆ! ಆ ಅಗೇಡಿಯ ಅಂಚಿನ ಮೇಲೆ ನಡೆದು, ಮುಂದಿನ ಎರಡುಮುಡಿ ಗದ್ದೆ ಅಂಚಿನ ಮೇಲೆ ಬ್ಯಾಲೆನ್ಸ್ ಮಾಡುತ್ತಾ ನಡೆದರೆ ದೊಡ್ಡತೋಡು ಸಿಗುತ್ತದೆ. ಜೂನ್ ಮೊದಲ ವಾರ, ಮಳೆನೀರಿನಿಂದ ತುಂಬಿಕೊಳ್ಳುವ ದೊಡ್ಡತೋಡು, ಮುಂದಿನ ೮ ತಿಂಗಳ ಕಾಲ ಹರಿಯುತ್ತಲೇ ಇರುತ್ತದೆ. ಅಕ್ಟೋಬರ್-ನವೆಂಬರ್‌ನಲ್ಲಿ ಮಳೆ ನಿಂತು, ಚಳಿಗಾಲ ಆರಂಭವಾದರೂ, ಇನ್ನೂ ಸುಮಾರು ೩ ತಿಂಗಳು ಅದರಲ್ಲಿ ನೀರಿರುವುದು ಒಂದು ಚೋದ್ಯ. ಆ ತೋಡು
ಹರಿದುಬರುವ ದಾರಿಯಲ್ಲಿರುವ ಹರನಗುಡ್ಡೆ, ಉಪಾಯ್ದರ ಬೆಟ್ಟುಗುಡ್ಡೆ ಮತ್ತು ಇತರ ಹಾಡಿಗಳಲ್ಲಿನ ಮರಗಳ ಕೃಪೆಯಿಂದಾಗಿ, ಅದರಲ್ಲಿ ಹಲವು ವಾರಗಳ ಕಾಲ ಉಜರುನೀರು ಹರಿಯುತ್ತಲೇ ಇರುತ್ತದೆ. ಮಾರ್ಚ್-ಎಪ್ರಿಲ್-ಮೇ ತಿಂಗಳಲ್ಲಿ ದೊಡ್ಡ ತೋಡು ಪೂರ್ತಿ ಬತ್ತುತ್ತದೆ; ಆದರೂ, ಅದರ ಪಾತಳಿಯ ಮರಳನ್ನು ೨ ಅಡಿ ಬಗೆದರೆ, ನೀರುಸಿಗುತ್ತದೆ. ಬಿರುಬೇಸಗೆಯ ಮೇ ತಿಂಗಳಲ್ಲಿ ಆ ನೀರನ್ನು ಕೊಡದಲ್ಲೆತ್ತಿ ತೆಂಗಿನ ಗಿಡಗಳಿಗೆ ಹಾಕುತ್ತಿದ್ದೆವು. ದೊಡ್ಡತೋಡು, ನಮ್ಮ ಮನೆ ಎದುರಿನಿಂದ ಮುಂದುವರಿದು, ೩-೪ ಕಿ.ಮೀ. ಹರಿದು, ಹೆರಬೈಲು ಹೊಳೆ ಸೇರುತ್ತದೆ. ಕೆಳಗೆ ಹೋದಂತೆಲ್ಲಾ, ನೀರಿನ ಆಶ್ರಯ ಜಾಸ್ತಿಯಾಗುತ್ತಾ ಹೋಗಿ, ಬೇಸಗೆಯಲ್ಲೂ ಅದರಲ್ಲಿ ಸ್ವಲ್ಪ ನೀರು ಇರುವುದು ಸಾಮಾನ್ಯ ಸಂಗತಿ.
ಶಿವರಾತ್ರಿ ಕಳೆದ ನಂತರ, ಸುಮಾರು ಫೆಬ್ರವರಿ ತಿಂಗಳಲ್ಲಿ ನಮ್ಮ ಮನೆಯೆದುರಿನ ದೊಡ್ಡತೋಡು ಪೂರ್ತಿ ಒಣಗುತ್ತದೆ; ಆಗ ಅದರ ಮುಖ್ಯ ಉಪಯೋಗವೆಂದರೆ, ಬಹುಜನರು ಉಪಯೋಗಿಸಬಲ್ಲ ಬಯಲು ಶೌಚಾಲಯದ ಸ್ವರೂಪ! ಗದ್ದೆ ಬೈಲಿನ ಮಟ್ಟಕ್ಕಿಂತ ೪ ಅಡಿ ತಗ್ಗಿನಲ್ಲಿದ್ದುದರಿಂದ ಮತ್ತು ಅದರ ಒಂದು ಅಂಚಿನಲ್ಲಿ ದಟ್ಟವಾಗಿ ಪೊದೆಸ್ವರೂಪದ ಗಿಡಗಳು ಬೆಳೆದು ಗುಬಸಲು ಆಗಿದ್ದರಿಂದ, ಬೇಸಗೆಯ ಶೌಚಾಲಯವಾಗಿ ಉಪಯೋಗಿಸಲು ಆ ಪೊದೆಗಳೇ ಮರೆ ನೀಡುತ್ತವೆ. ತೋಡಿನ ಇನ್ನೊಂದು ಬದಿಯಲ್ಲಿ, ಉದ್ದಕ್ಕೂ ಹಾಡಿ, ಹಕ್ಕಲು, ಗುಡ್ಡೆ. ೮ ತಿಂಗಳ ಕಾಲ ದೊಡ್ಡತೋಡಿನಲ್ಲಿ ನೀರಿದ್ದರೂ, ಅದನ್ನು ಜನರು ಕೃಷಿಗೆ ಉಪಯೋಗಿಸುತ್ತಿದ್ದುದು ನವೆಂಬರ್ ನಂತರವಷ್ಟೇ. ಏಕೆಂದರೆ, ಜೂನ್‌ನಲ್ಲಿ ನಮ್ಮೂರಿನಲ್ಲಿ ಆರಂಭವಾಗುವ ಜಡಿಮಳೆಯಿಂದಾಗಿ, ಬತ್ತದ ಪೈರಿಗೆ ಬೇರಾವ ನೀರೂ ಬೇಡ. ವಾಸ್ತವವೆಂದರೆ, ಆಗ ಸುರಿವ ಮಳೆನೀರು ಅಗತ್ಯ ಕ್ಕಿಂತ ಜಾಸ್ತಿ. ಮಳೆ ಬೀಳುತ್ತಿರುವಾಗಲೇ, ಕಂಬಳಿ ಕೊಪ್ಪೆ ಹೊದ್ದು ಹೂಟಿ ಮಾಡಿ, ಗೊರಬು ಹೊದ್ದು ನಾಟಿ ಮಾಡಿ, ಒಂದಷ್ಟು ಗೊಬ್ಬರ ಹಾಕಿ ಬತ್ತ ಬೆಳೆಯಲು ಪ್ರಯತ್ನಿಸಿದರೆ, ಹಾಕಿದ ಗೊಬ್ಬರವೆಲ್ಲಾ ಮಳೆನೀರಿಗೆ ತೊಳೆದು ಹೋಗಿ, ತೋಡುಗಳನ್ನು ಸೇರುವ ಬೈಲು ನಮ್ಮದು. ಹಾಗೂ ಹೀಗೂ ಮಳೆಯ ನಡುವೆಯೇ ಬೆಳೆಯುವ ಮೊದಲ ಬೆಳೆ ಅಕ್ಟೋಬರ್ನಲ್ಲಿ ಕುಯಿಲಿಗೆ ಬಂದಾಗ, ಕೈಗೆ ಸಿಗುವ ಬತ್ತ
ಅಷ್ಟಕ್ಕಷ್ಟೇ. ಎರಡನೆಯ ಬತ್ತದ ಬೆಳೆಯಷ್ಟು ಮೊದಲ ಬೆಳೆಯಲ್ಲಿ ಸಿಗುವುದಿಲ್ಲ. ಎರಡನೆಯ ಬೆಳೆಯ ಆರಂಭವು ದೀಪಾವಳಿಯ ಸಮಯದಲ್ಲಿ.
ಆಗ ದೊಡ್ಡತೋಡಿಗೆ ‘ಕಟ್ಟು’ ಹಾಕಿ, ನೀರು ನಿಲ್ಲಿಸಿ, ಗದ್ದೆಗೆ ಹರಿಸುವ ಕ್ರಮ ನಮ್ಮ ಬೈಲಿನಲ್ಲಿತ್ತು (ಈಗದು ಕಡಿಮೆಯಾಗಿದೆ). ಅಕ್ಕಪಕ್ಕದ ಆರೆಂಟು ಕೃಷಿಕರು ಸೇರಿ ಕಟ್ಟುಹಾಕುತ್ತಿದ್ದರು. ಅದು ಒಂದು ದಿನದ ಕೆಲಸ. ಮೊದಲಿಗೆ ಮರದ ತೊಲೆ, ಗಳ, ಅಡಕೆಯ ದಪ್ಪ ದಬ್ಬೆಗಳನ್ನು ತೋಡಿಗೆ ಅಡ್ಡಲಾಗಿ ಜೋಡಿಸುತ್ತಾರೆ; ಆಗ ತೋಡಿನಲ್ಲಿ ತಿಳಿನೀರು ಹರಿಯುತ್ತಲೇ ಇರುತ್ತದೆ. ಒಂದೆರಡು ದೊಡ್ಡ ಮರದ ಕಾಂಡಗಳನ್ನು ಸಹ ಅಡ್ಡಲಾಗಿ ಇಡಬೇಕು; ಇದು ಕಟ್ಟಿಗೆ ಬಲ ತುಂಬುತ್ತದೆ. ನಂತರ ಪಕ್ಕದ ಹಕ್ಕಲಿನ ಗಿಡಗಳ ರೆಂಬೆಕೊಂಬೆಗಳನ್ನು ಕಡಿದು, ಅಡರು ಮಾಡಿ, ಆ ಮರದ ತುಂಡುಗಳ ನಡುವೆ ಸಿಕ್ಕಿಸುತ್ತಾರೆ; ನಂತರ, ಪಕ್ಕದಲ್ಲೇ ಇರುವ
ದರೆಯ ಮಣ್ಣನ್ನು ತರಿದು ಹೆಡಿಗೆಗಳಲ್ಲಿ ತುಂಬಿ ಆ ಜಾಗಕ್ಕೆ ಸುರಿಯುತ್ತಾರೆ. ಪೂರ್ತಿ ಮಣ್ಣನ್ನು ತುಂಬಿ, ನೀರನ್ನು ತಡೆಯುವ ಕಟ್ಟು ಸಿದ್ಧವಾಗುವ ಹೊತ್ತಿಗೆ ಸಂಜೆಯಾಗುತ್ತದೆ. ಮರುದಿನ ಬೆಳಗಿನ ಹೊತ್ತಿಗೆ ಕಟ್ಟಿನ ತುಂಬಾ ನೀರು ತುಂಬಿಕೊಳ್ಳುತ್ತದೆ. ಅದು ಗದ್ದೆಗೆ ಬರಲು ಒಂದು ನೀರ್‌ಕಡು ಮಾಡುತ್ತಾರೆ. ಯಾವಾಗ ನೀರಿನ ಅಗತ್ಯವಿರುತ್ತದೋ, ಆಗೆಲ್ಲಾ ನೀರನ್ನು ಹರಿಸಿ, ಬತ್ತ ಬೆಳೆಯುತ್ತಾರೆ. ಒಂದು ಕಟ್ಟಿನ ನೀರು ಹತ್ತಾರು ಗದ್ದೆಗಳಿಗೆ ಸಾಕು. ಪ್ರತಿವರ್ಷ ಮಳೆ ಒಂದೇ ರೀತಿ ಇರದು; ದೀಪಾವಳಿಯ ವೇಳೆ ಮಳೆ ಬಂದರೆ, ಆ ವರ್ಷದ ಎರಡನೆಯ ಬೆಳೆಗೆ ನೀರು ಬೇಕಷ್ಟಾಯಿತು; ಆದರೆ ಒಂದೊಂದು ವರ್ಷ ಮಳೆಗಾಲ ಬೇಗನೆ ಮುಗಿದಿರು
ತ್ತದೆ; ಅಂಥ ವರ್ಷಗಳಲ್ಲಿ, ಕಟ್ಟಿನಲ್ಲಿ ಸಂಗ್ರಹವಾದ ನೀರನ್ನು ಜೋಪಾನದಿಂದ ಉಪಯೋಗಿಸಿ, ಬೆಳೆ ಬೆಳೆಯಬೇಕು. ದೊಡ್ಡತೋಡು ಹರಿದು ಮುಂದೆ ಸಾಗಿದ ಭಾಗದ ಕೆಲವು ರೈತರಿಗೆ, ಅಂಥ ವರ್ಷ ನೀರಿನ ಕೊರತೆಯಾದರೆ ಒಂದು ಕಿತಾಪತಿ ಮಾಡುತ್ತಾರೆ. ಇದಕ್ಕೆ ರಾತ್ರಿಯೇ ಪ್ರಶಸ್ತ.
ಇದೊಂದು ರೀತಿಯ ನೀರಿನ ಕಳ್ಳತನ. ದೊಡ್ಡ ಮರದ ಸ್ವಾಟೆ ಹಿಡಿದು (ದಪ್ಪನೆಯ ಕೋಲು) ನಿಶ್ಶಬ್ದವಾಗಿ ಕತ್ತಲಿನಲ್ಲೇ ನಡೆಯುತ್ತಾ, ಮೇಲ್ಭಾಗದ ಕಟ್ಟಿನ ಮಧ್ಯಕ್ಕೆ ಒಂದು ತೂತು ಮಾಡುತ್ತಾರೆ. ಅದರ ಮೂಲಕ
ನೀರು ನಿಧಾನವಾಗಿ ತೋಡಿನಲ್ಲಿ ಕೆಳಗೆ ಹರಿದು, ತುಸು ದೂರದಲ್ಲಿನ ಕೆಳಭಾಗದ ಕಟ್ಟಿನಲ್ಲಿ ತುಂಬಿಕೊಳ್ಳುತ್ತದೆ; ಆ ಕಟ್ಟಿಗೂ ಅಂಥ ಒಂದು ಸಣ್ಣತೂತು ಮಾಡಿರುತ್ತಾರೆ; ಹೀಗೆ ನಾಲ್ಕಾರು ಕಟ್ಟುಗಳಿಗೆ ತೂತು
ಮಾಡಿ, ಕೆಳಭಾಗದ ಕೆಲವರು ತಮ್ಮ ಕಟ್ಟಿನಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ! ಮೇಲ್ಭಾಗದಲ್ಲಿರುವ ಕಟ್ಟಿನ ಪಕ್ಕದ ಮನೆಯವರು ಬೆಳಗ್ಗೆ ಬಂದು ನೋಡಿದರೆ, ನೀರಿನ ಸಂಗ್ರಹ ಅರ್ಧಕ್ಕರ್ಧ ಖಾಲಿ! ಕೂಡಲೆ,
ಕಿಡಿಗೇಡಿಗಳು ಮಾಡಿದ ತೂತನ್ನು ಮುಚ್ಚುತ್ತಾರೆ; ಸಂಜೆಯೊಳಗೆ ಪುನಃ ಕಟ್ಟಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಇದನ್ನು ಕಿತಾಪತಿ ಎಂದ್ದಿದ್ದೇಕೆಂದರೆ, ಕಟ್ಟಿನಲ್ಲಿ ಸಣ್ಣ ತೂತನ್ನು ಮಾಡಿ ನೀರನ್ನು ಹರಿಸುತ್ತಾರೆಯೇ
ಹೊರತು, ಕಟ್ಟಿನ ಸ್ವರೂಪವನ್ನು ನಾಶಮಾಡುವುದಿಲ್ಲ, ಅನಾಹುತವನ್ನೂ ಮಾಡುವುದಿಲ್ಲ; ಮರುದಿನ ಆ ತೂತನ್ನು ಮುಚ್ಚಿದಾಗ ನೀರು ತುಂಬಿಕೊಳ್ಳುತ್ತದೆ; ಕಿತಾಪತಿ ಮಾಡಿದವರಿಗೂ ಆ ರಾತ್ರಿ ಸ್ವಲ್ಪ ನೀರು ಸಿಗುತ್ತದೆ. ಇಂಥ ‘ಕಿತಾಪತಿ’ಗಳನ್ನು ಮೇಲ್ಭಾಗದ ಕಟ್ಟಿನವರು ಉದಾರವಾಗಿ ಕ್ಷಮಿಸುತ್ತಿದ್ದರೇ ಹೊರತು ಜಗಳಕ್ಕೆ ಹೋಗುತ್ತಿರಲಿಲ್ಲ. ನಮ್ಮ ಮನೆಯಿಂದ ಸುಮಾರು ೧೦೦ ಅಡಿ ದೂರದಲ್ಲಿರುವ ದೊಡ್ಡತೋಡಿನ ಕಥೆ ಹೇಳುತ್ತಾ ಹೋದರೆ, ಅದು ಸುದೀರ್ಘ ‘ಜಲಕಥನ’ವೇ ಆದೀತು!
ಜೂನ್-ಜುಲೈನಲ್ಲಿ ಚೆನ್ನಾಗಿ ಮಳೆಯಾಗುವಾಗ, ಆ ತೋಡಿನ ತುಂಬಾ ರಭಸದ ಕೆಂಪನೆಯ ನೀರು. ನಾಲ್ಕಾರು ದಿನ ಎಡೆಬಿಡದೆ ಮಳೆಸುರಿದಾಗ, ಒಮ್ಮೊಮ್ಮೆ ನೆರೆ ಬಂದು, ಗದ್ದೆ-ತೋಡು ಎಲ್ಲವೂ ಒಂದಾಗುವುದುಂಟು. ಆಗಸ್ಟ್ ನಂತರ, ಮಳೆ ಕಡಿಮೆಯಾದರೂ, ೨-೩ ವಾರ ಮಳೆ ಬಾರದೇ ಇದ್ದರೂ, ದೊಡ್ಡತೋಡಿನಲ್ಲಿ ನೀರು ಹರಿಯುತ್ತಲೇ ಇರುತ್ತದೆ! ಅದು ಉಜರು ನೀರು (ಝರಿ ನೀರು). ತೋಡು ಹರಿಯುವ ದಾರಿಯುದ್ದಕ್ಕೂ ಒಂದು ಭಾಗದಲ್ಲಿರುವ ಹಾಡಿ, ಹಕ್ಕಲು, ಕಾಡಿನ ನೆಲದಿಂದ ಹರಿದುಬರುವ ಉಜರು ನೀರು ಅದು. ಆ ರೀತಿ ಹೆಚ್ಚು ಹೆಚ್ಚು ಕಾಲ ಉಜರು ನೀರು ಹರಿಯುತ್ತಿದ್ದರೆ, ಸುತ್ತಲಿನ ಜಲಮೂಲ ಆರೋಗ್ಯಕರವಾಗಿದೆ ಎಂದರ್ಥ. ನಾನಾ ರೀತಿಯ ಮರ, ಗಿಡ, ಬಳ್ಳಿಗಳು ನೆಲದಾಳಕ್ಕೆ ಬಿಟ್ಟುಕೊಂಡ ಬೇರುಗಳ ಜಾಲದಲ್ಲಿ ಸಂಗ್ರಹಿತ ನೀರು, ಉಜರು ನೀರಿನ ರೂಪದಲ್ಲಿ ಹಲವು ವಾರ ಹರಿಯುತ್ತಲೇ ಇರುತ್ತದೆ. ಗಿಡಮರಗಳ ಸಂದಿಯಿಂದ ಹರಿದುಬರುವ ಆ ಶುದ್ಧ ನೀರನ್ನು ನೇರವಾಗಿ ಕುಡಿಯಬಹುದು! ಆದರೆ, ನಮ್ಮ ಮನೆ ಎದುರಿನ ದೊಡ್ಡತೋಡಿನುದ್ದಕ್ಕೂ ಅಲ್ಲಲ್ಲಿ ಕೆಲವು ಮನೆಗಳು ಇರುವುದರಿಂದ, ನೇರವಾಗಿ ಕುಡಿಯಲು ಪ್ರಶಸ್ತ ಅಲ್ಲ ಎಂದೇ ಹೇಳಬಹುದು. ಕೆಲವರು ಆ ಹರಿವ ನೀರಿನಲ್ಲಿ ಪಾತ್ರೆ ತೊಳೆಯುವುದು, ಕೋಣಗಳ ಮೈ ತೊಳೆಯುವುದು ಮಾಡುತ್ತಿದ್ದರು. ಜುಳುಜುಳು ಎಂದು ಹರಿವ ಆ ತಿಳಿನೀರು ನೋಡಲು ಆಹ್ಲಾದಕರ; ಆದರೆ ನಮ್ಮ ಹಳ್ಳಿಯ ಜನರಿಗೆ ಆ ‘ಸಲಿಲ ಸೌಂದರ್ಯ’ವನ್ನು ನೋಡಿ ಆಸ್ವಾದಿಸುವಷ್ಟು ವ್ಯವಧಾನವಿರಲಿಲ್ಲ.
ಕಷ್ಟದ ದಿನಚರಿ; ಪ್ರತಿದಿನ ಬೆಳಗ್ಗೆ, ಆ ತೋಡನ್ನು ಶೌಚಾಲಯವಾಗಿಯೂ ಬಳಸುತ್ತಿದ್ದರು! ಅವರ ದೃಷ್ಟಿಯಲ್ಲಿ ಅದು ಅನಿವಾರ್ಯವೂ ಆಗಿತ್ತು. ಆಗಿನ ದಿನಗಳಲ್ಲಿ ಮನೆಗೊಂದು ಶೌಚಾಲಯ ಇರಲಿಲ್ಲವಲ್ಲ! ಅಷ್ಟೇಕೆ, ಸಾಕಷ್ಟು ಶುಚಿಕರ ಎಂದು ಅಂದುಕೊಳ್ಳುವ ನಮ್ಮ ಮನೆಯಲ್ಲೂ ಅಂದು ಶೌಚಾಲಯ ಇರಲಿಲ್ಲ. ಆ ಕೆಲಸಕ್ಕೆ ತೋಡಿನ ನೀರೇಗತಿ; ನಾವು ಹೆಚ್ಚಾಗಿ ಉಪಯೋಗಿಸುತ್ತಿದ್ದುದು ಸಣ್ಣ ತೋಡನ್ನು; ಸಣ್ಣಗೆ ಹರಿವ ಅದರ ನೀರನ ಮೇಲೆ ಎರಡು ಕಲ್ಲುಗಳನ್ನಿಟ್ಟು ಕುಳಿತು ಆ ಕೆಲಸ ಮುಗಿಸುತ್ತಿದ್ದೆವು. ತೋಡಿನ ನೀರು ಬತ್ತಿದ ನಂತರ, ಅಲ್ಲೇ ಮೇಲ್ಭಾಗದಲ್ಲಿದ್ದ ಹಕ್ಕಲಿಗೆ ಹೋಗುವ ಕ್ರಮ. ಪಾಯಿಖಾನೆಗೆ ಪ್ರತ್ಯೇಕವಾಗಿ ಪುಟ್ಟ ಕಟ್ಟಡ ನಿರ್ಮಿಸುವ ತನಕ, ಇದೇ ನಮ್ಮ ದಿನಚರಿ! ಸಣ್ಣತೋಡು ನಮ್ಮ ಮನೆಯಿಂದ ಸುಮಾರು ೫೦ ಅಡಿ ದೂರದಲ್ಲಿದೆ. ಜೂನ್‌ನಿಂದ ಅಕ್ಟೋಬರ್ ತನಕ ಮಾತ್ರ ಅದರಲ್ಲಿ ನೀರಿನ ಹರಿವು. ದೊಡ್ಡತೋಡು
ಮತ್ತು ಸಣ್ಣತೋಡುಗಳು ಅಕ್ಕ-ತಂಗಿಯರಿದ್ದಂತೆ. ನಮ್ಮ ಮನೆಯ ಹಿಂದಿನಿಂದ ಹರಿದು ಸಾಗುವ ಸಣ್ಣತೋಡು, ಎದುರಾಗುವ ಗದ್ದೆಬಯಲನ್ನು ಇಬ್ಭಾಗ ಮಾಡುತ್ತಾ ಉತ್ತರಕ್ಕೆ ಸಾಗಿ, ದೊಡ್ಡ ತೋಡನ್ನು ಸೇರಿಕೊಳ್ಳುತ್ತದೆ. ಕರೆಯುವುದು ಸಣ್ಣ ತೋಡು ಎಂದಾದರೂ, ಮಳೆಗಾಲದಲ್ಲಿ ಅದರ ರಭಸ ಕಡಿಮೆಯೇನಲ್ಲ! ಸೊಪ್ಪಿನ ಅಣೆ, ಬೋಳುಗುಡ್ಡ ಮೊದಲಾದ ಪ್ರದೇಶಗಳ ಮಳೆನೀರು, ಅದರಲ್ಲಿ ತುಂಬಿ ಹರಿದು, ಸಣ್ಣ ನೆರೆಯನ್ನೇ ಸೃಷ್ಟಿಸುತ್ತದೆ.
ಆ ಕೆಂಪನೆಯ ನೀರು ತುಂಬಿದ ಸಣ್ಣತೋಡು, ರಭಸದಿಂದ ದೊಡ್ಡತೋಡನ್ನು ಸೇರಿಕೊಳ್ಳುವ ಜಾಗದಲ್ಲಿ ಒಂದು ಗುಂಡಿ ಬಿದ್ದಿದೆ. ಜಡಿಮಳೆ ಕಡಿಮೆಯಾದಾಗ, ಉಜರು ನೀರು ಇನ್ನೂ ಹರಿಯುತ್ತಿರುವ ಸೆಪ್ಟೆಂಬರ್ ಸಮಯದಲ್ಲಿ, ಈ ಗುಂಡಿಯಲ್ಲಿ ಈಜುವ ಮಜವೇ ಮಜ! ಎರಡು ತೋಡುಗಳಿಂದ ಹರಿದುಬರುವ ತಿಳಿಯಾದ ನೀರು,ಆ ಗುಂಡಿಯಲ್ಲಿ ತುಂಬಿದಾಗ ೩-೪ ಅಡಿ ಆಳದ ಪುಟಾಣಿ ಈಜುಕೊಳವೇ ಅಲ್ಲಿ ನಿರ್ಮಾಣ
ವಾಗುತ್ತದೆ. ನಾವು ಮಕ್ಕಳು ಒಮ್ಮೊಮ್ಮೆ ಮಧ್ಯಾಹ್ನ ಆ ಗುಂಡಿಯಲ್ಲಿ ಮುಳುಗಿ ಸ್ನಾನ ಮಾಡುವುದಿತ್ತು. ಜಾಸ್ತಿ ಈಜುವಷ್ಟು ಜಾಗ ಅಲ್ಲಿಲ್ಲ; ಕಾಲು ಬಡಿಯುತ್ತಾ, ಈಜುವಂತೆ ನಟಿಸುತ್ತಾ, ಒಂದು ಗಂಟೆ ಆ ನೀರಿನಲ್ಲಿ ಹೊರಳಾಡಿದರೆ, ಅದೇನೋ ಆನಂದ, ಉಲ್ಲಾಸ. ಒಮ್ಮೊಮ್ಮೆ ನಮ್ಮ ಜತೆ, ಅಕ್ಕಪಕ್ಕದ ಮನೆಗಳವರ ಕೋಣಗಳು, ಹಸುಗಳೂ ಈ ಗುಂಡಿಯಲ್ಲಿ ಮೀಯುತ್ತಿದ್ದುದುಂಟು! ಸುಮಾರು ೨ ಕಿ.ಮೀ. ದೂರದಿಂದ ಹರಿದು
ಬರುವ ದೊಡ್ಡತೋಡಿನಲ್ಲಿ ಸಾಕಷ್ಟು ಮೀನುಗಳಿದ್ದವು; ಕಾಣಿ, ಕರ್ಸೆ ಹೆಸರಿನ ಅವೆಲ್ಲವೂ ಸಣ್ಣ ಗಾತ್ರ ದವು. ಅವನ್ನು ಹಿಡಿಯುವುದು ಕೆಲವರ ಹವ್ಯಾಸ. ಗಾಳ ಹಾಕಿ ಹಿಡಿಯುವುದು ಒಂದು ವಿಧಾನ; ಬಿದಿರಿನ ಕಡ್ಡಿಗಳ ಕೂಣಿಯಲ್ಲಿ ಮೀನು ಹಿಡಿಯುವುದು ಇನ್ನೊಂದು ವಿಧಾನ. ಜತೆಗೆ, ಕಾಡಿನ ಅದಾವುದೋ ಕಾಯಿಯನ್ನು ಜಜ್ಜಿ ತೋಡಿನ ನೀರಿಗೆ ಹಾಕಿ, ಆಗ ಪ್ರಜ್ಞೆ ತಪ್ಪುವ ಮೀನುಗಳನ್ನು ಸಹ ಹಿಡಿಯುತ್ತಿದ್ದರು.
ಮಳೆಗಾಲ ಪ್ರಾರಂಭ ವಾದಾಗ, ನೆರೆನೀರಿನಲ್ಲಿ ಬಹುದೂರದಿಂದ ಈಜಿ ನಮ್ಮ ತೋಡುಗಳಿಗೆ, ಬೈಲಿಗೆ ಬರುವ ‘ಹತ್‌ಮೀನು’ ಗಳನ್ನು ಹಿಡಿಯು ವುದೆಂದರೆ ಅದೊಂದು ಹಬ್ಬ. ಮಳೆ ಸುರಿಯುತ್ತಿ ರುವಾಗಲೇ, ತೋಡು ಮತ್ತು ಗದ್ದೆಗಳಿಗೆ ನುಗ್ಗಿ ಬರುವ ಮೀನುಗಳನ್ನು ಹಿಡಿಯುವ ಹಬ್ಬ. ಮಳೆಗಾಲದ ಚಕ್ರವೇ ಬದಲಾಗಿರುವ ಈಗಿನ ಸಂದರ್ಭದಲ್ಲಿ, ನಮ್ಮ ಹಳ್ಳಿಯ ತೋಡಿನ ನೀರಿನ ನೆನಪುಗಳು, ಒಂದು ಪ್ರಲಾಪದ ರೀತಿ ಕಾಣಿಸ
ಬಹುದು. ಈ ವರ್ಷ, ಆಗಸ್ಟ್‌ನಲ್ಲೇ ಮಳೆ ಕಡಿಮೆಯಾಗಿದ್ದುದರಿಂದ, ಸಣ್ಣತೋಡು ಮತ್ತು ದೊಡ್ಡ ತೋಡು ಎರಡರಲ್ಲೂ ಹೆಚ್ಚು ನೀರಿಲ್ಲವಂತೆ. ಅವು ಹರಿದುಬರುವ ದಾರಿಯುದ್ದಕ್ಕೂ ಇದ್ದ ಕಾಡು ಪ್ರದೇಶ ಇಂದು ಸಾಕಷ್ಟು ಕಣ್ಮರೆಯಾಗಿದೆ; ಇದ್ದರೂ, ಅಲ್ಲೆಲ್ಲಾ ಅಕೇಶಿಯಾ ಮರಗಳ ಹಾವಳಿ. ದೈತ್ಯ ಕಳೆಯ ರೀತಿ ಬೆಳೆದುಕೊಂಡಿರುವ ಅಕೇಶಿಯಾದ ಬೇರುಗಳು, ಹೆಚ್ಚು ಪ್ರಮಾಣದ ನೀರನ್ನು ಹಿಡಿದಿಡ ಲಾರವು; ಆದ್ದರಿಂದ, ಸಹಜಕಾಡು ಇದ್ದಾಗ ಹರಿಯುತ್ತಿದ್ದ ಉಜರು ನೀರು ಈಗ ಹರಿಯುತ್ತಿಲ್ಲ. ಇಂದಿನ ಒಣಗಿದ ತೋಡುಗಳು, ಬತ್ತಿದ ಝರಿಗಳು ಮುಂದಿನ ಕಷ್ಟಕರ ದಿನಗಳನ್ನುಸೂಚಿಸುತ್ತಿವೆ.