Friday, 20th September 2024

Shashidhara Halady Column: ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಸುಂದರವಾದ ಬೆಳದಿಂಗಳ ರಾತ್ರಿ. ಮನೆಯ ಮುಂದೆ ಹರಡಿರುವ ವಿಶಾಲದ ಗದ್ದೆ ಬೈಲಿನುದ್ದಕ್ಕೂ ಚೆಲ್ಲಿದ ತಿಂಗಳ ಬೆಳಕಿನ ಸ್ನಿಗ್ಧ ಸೌಂದರ್ಯ. ಬಾನಿನಿಂದ ಸಣ್ಣಗೆ ಸುರಿವ ಇಬ್ಬನಿಯ ತಂಪು, ಆ ಬೆಳದಿಂಗಳ ಪಾನಕ್ಕೆ ಮಧುವಿನ ರುಚಿಯನ್ನು ಸೇರಿಸಿದಂತಿತ್ತು. ಮೋಡ-ಗಾಳಿಯಿಲ್ಲದ ಶುಭ್ರ ಆಗಸದಲ್ಲಿ ಚಂದಿರನ ಬಿಳಿ ಬಿಂಬವು ರಾಜನಂತೆ
ರಾರಾಜಿಸುತ್ತಿತ್ತು. ಅಂಬರದ ವೈಶಾಲ್ಯದುದ್ದಕ್ಕೂ ಅಲ್ಲಲ್ಲಿ ಮಿನುಗುತ್ತಿದ್ದ ನಕ್ಷತ್ರದ ಹೊಳಪು, ಚಂದಿರನ ಸೊಗಸಿಗೆ ಪ್ರಭಾವಳಿಯನ್ನು ಹೊದಿಸಿದಂತಿತ್ತು.

ಇಂಥ ಕಾವ್ಯಾತ್ಮಕ ಇರುಳಿನ ಅನುಭವದ ನಡುವೆ, ಒಮ್ಮೆಗೇ ‘ಟ್ರ್ಯಾಂಟ್ ಟ್ರ್ಯಾಂಟ್’ ಎಂಬ, ತುಸು ತೀಕ್ಷ್ಣ ದನಿಯ ಕೂಗನ್ನು ಹೊರಡಿಸಿ, ನಮ್ಮನ್ನು ಸಣ್ಣಗೆ ಬೆಚ್ಚಿಬೀಳಿಸುವ ಹಕ್ಕಿಯೇ ಟಿಟ್ಟಿಭ. ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ. ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಗೆ ತೀಕ್ಷ್ಣವಾಗಿ, ದೊಡ್ಡ ದನಿಯಲ್ಲಿ ಕೂಗಿ,
ಎಲ್ಲರನ್ನೂ ಬೆಚ್ಚಿಬೀಳಿಸಲು! ಬಯಲಿನುದ್ದಕ್ಕೂ ಸುರಿವ ಬೆಳದಿಂಗಳ ರಾಶಿಯನ್ನೇ ನೋಡುತ್ತಾ ಮೌನ ವಾಗಿರುವ ಹಕ್ಕಿ, ಅದೆಲ್ಲಿಂದಲೋ ಸ್ಪೂರ್ತಿ ತುಂಬಿ ಬಂದಂತೆ, ಒಮ್ಮೆಗೇ ತೀಕ್ಷ್ಣದನಿಯಲ್ಲಿ ಕೂಗಿದಂತೆ ಅನಿಸುತ್ತದೆ!

ಅದೇನು ಬೆಳದಿಂಗಳನ್ನೇ ಕುಡಿಯಿತೆ? ಆಗಸದಿಂದ ಇಳಿದ ಇಬ್ಬನಿಯ ತಂಪು, ಅದರ ಕಲ್ಪನಾ ವಿಲಾಸವನ್ನು ಗರಿ ಗೆದರಿಸಿತೆ? ನಮ್ಮ ಪುರಾತನ ಕವಿಗಳು ಟಿಟ್ಟಿಭವನ್ನು ಕಂಡೇ, ಚಕೋರ-ಚಕ್ರವಾಕ ಎಂಬ ಹಕ್ಕಿಗಳನ್ನು ವರ್ಣಿಸಿರ ಬೇಕು; ಚಕೋರವು ಬೆಳದಿಂಗಳನ್ನು ಕುಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ ಎಂಬ ಆ ‘ಕವಿಸಮಯ’ ಅದೆಷ್ಟು ಸೊಗಸು! ‘ಚಕೋರಂಗೆ ಚಂದ್ರಮನ ಬೆಳಗಿ(ಕಿ)ನ ಚಿಂತೆ’ ಎಂದು ವಚನ ಕಾರರು ನುಡಿದಾಗಲೂ, ಬೆಳದಿಂಗಳ ರಾತ್ರಿಯಲ್ಲಿ, ಬಯಲ ನಡುವೆ ಕುಳಿತು ಆಗಾಗ ಕೂಗುವ ಟಿಟ್ಟಿಭವನ್ನೇ ನೆನಪಿಸಿಕೊಂಡಿರಬಹುದು.

ಟಿಟ್ಟಿಭ (ರೆಡ್ ವಾಟಲ್ಡ್ ಲ್ಯಾಪ್‌ವಿಂಗ್) ಎಂಬುದು ನಮ್ಮ ರಾಜ್ಯದ ಎಲ್ಲೆಡೆ ಕಾಣಸಿಗುವ ಹಕ್ಕಿ. ಬಯಲು ಪ್ರದೇಶ, ಕೆರೆಯಂಗಳ, ಹೊಲದ ಬದು, ಗುಡ್ಡಗಾಡು ಪ್ರದೇಶಗಳಲ್ಲಿ ಇರುವ ಇದು ಚುರುಕಾಗಿ ಓಡುವ, ವೇಗವಾಗಿ ಹಾರಬಲ್ಲ ಹಕ್ಕಿ. ನಮ್ಮ ಹಳ್ಳಿಯಲ್ಲಿ ಇದನ್ನು ಕರೆಯುವುದು ‘ಟ್ರ್ಯಾಂಟ್ರಕ್ಕಿ’ ಎಂದು!

ವರ್ಷದ ಕೆಲವು ಸಮಯದಲ್ಲಿ ಹಗಲು-ರಾತ್ರಿಯ ವ್ಯತ್ಯಾಸವಿಲ್ಲದೇ ಎಡೆಬಿಡದೆ ‘ಟ್ರ್ಯಾಂ ಟ್ರ್ಯಾಂ’ ಎಂದು ಕೂಗುವ ಇದರ ಗಂಟಲಿನ ಶಬ್ದವನ್ನು ಕಂಡೇ ‘ಟ್ರ್ಯಾಂಟ್ರಕ್ಕಿ’ ಎಂದು ಹೆಸರಿಸಿರಬೇಕು, ನಮ್ಮ ಹಳ್ಳಿಯವರು. ಉದ್ದನೆಯ ಕಾಲುಗಳು, ಪಾರಿವಾಳದ ಗಾತ್ರ, ಬೂದು ದೇಹ, ಹೊಟ್ಟೆಯ ಭಾಗ ಬಿಳಿ, ತಲೆ ಮತ್ತು ಕುತ್ತಿಗೆಯ ಭಾಗ ಕಪ್ಪು, ಕಣ್ಣಿನ ಕೆಳಭಾಗದಲ್ಲಿ ಕೆಂಪನೆಯ ಜೋತಾ ಡುವ ಚರ್ಮಗಳಿಂದ ಕೂಡಿದ ಈ ಹಕ್ಕಿಯನ್ನು ತೀರಾ ಸುಂದರ ಹಕ್ಕಿ ಎನ್ನಲಾ ಗದು.

ಸಾಮಾನ್ಯವಾಗಿ ಎರಡು ಅಥವಾ ಮೂರು ಹಕ್ಕಿಗಳು ಗದ್ದೆ ಕೊಯ್ಲಾದ ನಂತರ ಬಯಲಿ ನುದ್ದಕ್ಕೂ ಓಡಾಡುತ್ತಾ, ಹಾರಾಡುತ್ತಾ ಇರುತ್ತವೆ. ‘ಟ್ರ್ಯಾಂಟ್ ಟ್ರ್ಯಾಂಟ್’ ಎಂದು ಟಿಟ್ಟಿಭಗಳು ಬೆದರಿದಂತೆ ಕೂಗುವುದಕ್ಕೆ ವಿಶೇಷ ಕಾರಣವೂ
ಉಂಟು. ಚಳಿಗಾಲ ಕಳೆದ ನಂತರ, ಇವು ಗೂಡು ಕಟ್ಟಿ ಮೊಟ್ಟೆಯಿಟ್ಟು, ಮರಿ ಮಾಡುವ ಕಾಲ. ಆದರೆ, ಇವುಗಳ ಗೂಡು ಬಹಳ ವಿಚಿತ್ರ- ನೆಲದ ಮೇಲಿನ ತಗ್ಗು, ಒಂದೆರಡು ಕಸಕಡ್ಡಿಯ ಬೇಲಿ, ಅಷ್ಟೆ! ನಮ್ಮೂರಿನ ಗದ್ದೆಗಳಲ್ಲಿ ಬತ್ತದ ಕೊಯ್ಲಾದ ನಂತರ, ಒಣಗಿದ ಗದ್ದೆಯ ನಡುವಿನ ಯಾವುದೋ ಒಂದು ಜಾಗದಲ್ಲಿ, ಬತ್ತದ ಕೂಳೆ, ಮಣ್ಣು ಹೆಂಟೆಯ ನಡುವೆಯೇ ಗೂಡಿನ ಸ್ವರೂಪ ನಿರ್ಮಿಸಿ, ಮೊಟ್ಟೆ ಇಡುತ್ತದೆ. ಈ ಮೊಟ್ಟೆಗಳ ಬಣ್ಣವು ಹೇಗಿರುತ್ತ ದೆಂದರೆ, ಅದೇ ಗದ್ದೆನೆಲದ ತದ್ರೂಪು- ಒಣಗಿದ ನೆಲದ ಬಣ್ಣಕ್ಕೆ ಹೊಂದುವ ಬಣ್ಣ ಆ ಮೊಟ್ಟೆಗಳದ್ದು. ಮರಿಯಾದ ಮೇಲಂತೂ, ಇನ್ನಷ್ಟು ಹೋಲಿಕೆ.

ಯಾರೇ ಹತ್ತಿರ ಹೋದರೂ, ಬೇಗನೆ ಕಣ್ಣಿಗೆ ಬೀಳದಂಥ ರೆಕ್ಕೆಯ ವಿನ್ಯಾಸ ಆ ಮರಿಗಳದ್ದು. ಸುತ್ತಲಿನ ಬಣ್ಣದ ಶೇ.90ರಷ್ಟು ಹೋಲಿಕೆ ಇರುವ ಟಿಟ್ಟಿಭನ ಮರಿಗಳಿರುವ ಗೂಡನ್ನು ಬರಿಗಣ್ಣಿನಿಂದ ಸಾಮಾನ್ಯವಾಗಿ ಪತ್ತೆ ಮಾಡಲು ಅಸಾಧ್ಯ! ಆದರೆ, ಮನುಷ್ಯರಾಗಲಿ, ಬೇರಾವುದೇ ಪ್ರಾಣಿಯಾಗಲೀ ಗೂಡಿನ ಬಳಿ ಸುಳಿದ ತಕ್ಷಣ, ಟಿಟ್ಟಿಭ
ಹಕ್ಕಿಗಳು ಒಂದೇ ಸಮನೆ ‘ಟ್ರ್ಯಾಂಟ್ ಟ್ರ್ಯಾಂಟ್’ ಎಂದು ಕೂಗಲು ಆರಂಭಿಸುತ್ತವೆ. ತಮ್ಮ ಗೂಡಿನಿಂದ ತುಸು ದೂರ ನಿಂತು, ಬೇರೆಲ್ಲೋ ನೋಡುತ್ತಾ, ಒಂದೇ ಸಮನೆ ಕೂಗುತ್ತಾ, ಅತ್ತಿತ್ತಾ ಹಾರಾಡುತ್ತಾ, ಸನಿಹ ಸುಳಿದವರ ಏಕಾಗ್ರತೆಗೆ
ಭಂಗ ತರಲು ಯತ್ನಿಸುತ್ತವೆ, ತಲೆ ತಿನ್ನುತ್ತವೆ, ಅವರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತವೆ.

ಆ ಮೂಲಕ, ತಮ್ಮ ಗೂಡನ್ನು, ಮರಿಗಳನ್ನು ರಕ್ಷಿಸಿಕೊಳ್ಳುತ್ತವೆ. ಗೂಡನ್ನು ರಕ್ಷಿಸುವ ಕಾಯಕದಲ್ಲಿ, ಈ ಟಿಟ್ಟಿಭ ಗಳು ಎಷ್ಟು ಹೊತ್ತು ಬೇಕಾದರೂ, ಕರ್ಕಶವಾಗಿ ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಇರಬಲ್ಲವು. ಇವುಗಳ ಇಂಥ ವಿಚಿತ್ರ ವರ್ತನೆಯನ್ನು ಕಂಡು, ನಮ್ಮೂರಿನ ಗಂಟಿ ಮೇಯಿಸುವ ಮಕ್ಕಳು, ಒಂದು ನುಡಿಗಟ್ಟನ್ನು ರೂಪಿಸಿದ್ದಾರೆ- ‘ಟ್ರ್ಯಾಂಡ್ರಕ್ಕಿ ಮೊಟ್ಟೆ ಮುಟ್ತೆ, ಟ್ರ್ಯಾಂಡ್ರಕ್ಕಿ ಮೊಟ್ಟೆ ಮುಟ್ತೆ’ ಎಂದು. ನಾಲಗೆ ಹೊರಳಿಸುವ ವ್ಯಾಯಾಮ ಬಿಟ್ಟರೆ, ಈ ನುಡಿಗಟ್ಟಿಗೆ ಬೇರೆ ವಿಶೇಷ ಅರ್ಥವಿದ್ದಂತಿಲ್ಲ.

ಬೇಸಗೆಯ ಕಾಲದ ಬೆಳದಿಂಗಳ ರಾತ್ರಿಯಲ್ಲಂತೂ, ಇವುಗಳ ಕೂಗು ಇನ್ನಷ್ಟು ಜಾಸ್ತಿ. ಆದರೆ ಇವು ಹಗಲಿನ ಹಕ್ಕಿಗಳು, ನಿಶಾಚರಿಗಳಲ್ಲ. ಆದರೂ, ರಾತ್ರಿ ಹತ್ತರ ಸಮಯದಲ್ಲೂ ಟ್ಯಾಂಟ್ರಕ್ಕಿ ಕೂಗನ್ನು ಕೇಳಿದರೆ ಅಚ್ಚರಿಯಿಲ್ಲ, ಬಹುಶಃ, ನರಿಯೋ, ಯಾವುದಾದರೂ ಹಾವೋ ಅದರ ಗೂಡಿನ ಹತ್ತಿರ ಸುಳಿದಿರಬೇಕು; ಎಡೆಬಿಡದೆ ತೀಕ್ಷ್ಣವಾಗಿ
ಕೂಗುತ್ತಾ, ಅವುಗಳನ್ನು ದೂರ ಓಡಿಸುವ ಉಪಾಯವನ್ನು ಟಿಟ್ಟಿಭ ಅನುಸರಿಸಿರಬಹುದು. ಬೇಸಗೆಯಲ್ಲೇ ಅವು ಗೂಡು ಮಾಡಿ, ಮರಿ ಮಾಡುವುದರಿಂದಾಗಿ, ಆ ಸಮಯದಲ್ಲಿ ಅವುಗಳ ಕೂಗನ್ನು ರಾತ್ರಿಯಲ್ಲೋ, ಬೆಳಗಿನ ಜಾವದಲ್ಲೋ ಕೇಳಬಹುದು. ಬೇರೆ ಸಮಯದಲ್ಲಿ ಕಡಿಮೆ.

ಬೆಳದಿಂಗಳ ರಾತ್ರಿಯಲ್ಲಿ, ನಮ್ಮ ಹಳ್ಳಿಯಲ್ಲಿ ಪದೇ ಪದೆ ಕೂಗುವ ಇನ್ನೊಂದು ಹಕ್ಕಿ ಎಂದರೆ ನೆತ್ತಿಂಗ (ನೈಟ್‌ ಜಾರ್). ಟಿಟ್ಟಿಭ ಹಕ್ಕಿಯನ್ನು ನಿಶಾಚರಿ ಎನ್ನುವಂತಿಲ್ಲ; ಆದರೆ, ನೆತ್ತಿಂಗಗಳು ಅವಶ್ಯವಾಗಿ ನಿಶಾಚರಿ ಹಕ್ಕಿಗಳು. ಎಷ್ಟರ ಮಟ್ಟಿಗೆ ಎಂದರೆ, ನೆತ್ತಿಂಗವನ್ನು ಜನಸಾಮಾನ್ಯರು ನೋಡಿರುವ ಸಾಧ್ಯತೆಯೇ ಕಡಿಮೆ. ರಾತ್ರಿಯಿಡೀ ಹಾರಾಡುತ್ತಾ, ನೂರಾರು ಕೀಟಗಳನ್ನು ಹಿಡಿದು ತಿನ್ನುವ ನೆತ್ತಿಂಗಗಳು, ರೈತರ ಮಿತ್ರರು ಎಂದೇ ಹೇಳಬಹುದು. ನೆತ್ತಿಂಗಗಳ ಕುರಿತಾದ ಇನ್ನೊಂದು ಕುತೂಹಲಕಾರಿ ವಿಚಾರವಿದೆ. ಬಹುಶಃ ಇದು ಅವುಗಳ ನಿಶಾಚರ ಜೀವನ ಕ್ರಮಕ್ಕೆ ಸಂಬಂಧಿಸಿದ್ದೂ ಆಗಿರಬಹುದು. ನೆತ್ತಿಂಗಗಳಲ್ಲಿ ಹಲವು ಪ್ರಭೇದಗಳಿದ್ದರೂ, ಮೇಲ್ನೋಟಕ್ಕೆ ಅವೆಲ್ಲವೂ ಒಂದೇ ರೀತಿ ಕಾಣುತ್ತವೆ!

ಅಂದರೆ, ಎರಡು ಪ್ರಭೇದದ ನೆತ್ತಿಂಗಗಳನ್ನು ಅಕ್ಕಪಕ್ಕದಲ್ಲಿಟ್ಟರೆ, ಒಂದೇ ಸ್ವರೂಪ, ಒಂದೇ ದೇಹವಿನ್ಯಾಸ. ಹಾಗಿದ್ದರೆ, ಅವುಗಳ ಭಿನ್ನತೆಯನ್ನು ಪತ್ತೆ ಮಾಡುವುದು ಹೇಗೆ ಎಂದು ನೀವು ಕೇಳಬಹುದು. ನೆತ್ತಿಂಗಗಳ ಧ್ವನಿ ಮತ್ತು ಅವು ಕೂಗುವ ರೀತಿಯೇ ಅವುಗಳ ಪ್ರತ್ಯೇಕತೆಯ ಪ್ರಮುಖ ಗುರುತು. ನಮ್ಮ ಹಳ್ಳಿಯಲ್ಲಿ, ಬೆಳದಿಂಗಳ ರಾತ್ರಿಯಲ್ಲಿ, ಗದ್ದೆಬಯಲಿನ ಪಕ್ಕದ ಪೊದೆಗಳಲ್ಲಿ, ಹಕ್ಕಲಿನ ಅಂಚಿನಲ್ಲಿ, ಸಣ್ಣ ತೋಡಿನ ಪಕ್ಕದಲ್ಲಿ ಕುಳಿತು,
ಆಗಾಗ, ನಿರಂತರವಾಗಿ ಕೂಗುವ ನೆತ್ತಿಂಗವೊಂದಿದೆ.

ಅದು ಕೂಗುವ ರೀತಿಯನ್ನು ‘ಚುಂ ಚುಳಕ್’ ಎಂದು ಬರೆಯಬಹುದೇನೋ. ಒಂದೆರಡು ನಿಮಿಷಗಳ ಅಂತರದಲ್ಲಿ, ನಿರಂತರವಾಗಿ ಆ ರೀತಿ ಕೂಗುತ್ತಲೇ ಇರುವ ಈ ನೆತ್ತಿಂಗದ ಧ್ವನಿಯು ಕರ್ಕಶವೇ ನಲ್ಲ; ಬದಲಿಗೆ ತುಸು ಇಂಪಾಗಿದೆ ಎಂತಲೇ ಹೇಳಬಹುದು. ಈ ರೀತಿಯ ಧ್ವನಿಯನ್ನು ಹೊರಡಿಸುವುದು ‘ಜೆರ್ಡಾನ್ಸ್ ನೈಟ್‌ಜಾರ್’ ಎಂದು ಪತ್ತೆ
ಮಾಡಲು, ನನಗೆ ಹಲವು ವರ್ಷಗಳೇ ಬೇಕಾದವು!

ಆಗೆಲ್ಲಾ ಪುಸ್ತಕಗಳಲ್ಲಿರುವ ವರ್ಣನೆಯ ಸಹಾಯದಿಂದಲೇ ಈ ರೀತಿಯ ಹವ್ಯಾಸವನ್ನು ಮುಂದುವರಿಸುವ ಅನಿವಾರ್ಯತೆ ಇತ್ತಲ್ಲ. ಈಗಿನ ದಿನಗಳಲ್ಲಿ, ಅಂತರ್ಜಾಲದಲ್ಲಿ ಲಭ್ಯವಿರುವ ಹಕ್ಕಿಗಳ ಕೂಗಿನ ಡಾಟಾಬೇಸ್‌ ನಿಂದಾಗಿ, ಸುಲಭವಾಗಿ ವಿವಿಧ ಪ್ರಭೇದಗಳನ್ನು ಗುರುತಿಸಲು ಸಾಧ್ಯ. ನಮ್ಮ ಹಳ್ಳಿಮನೆಯ ಸರಹದ್ದಿನಲ್ಲೇ ವಾಸಿಸುವ ‘ಜೆರ್ಡಾನ್ಸ್ ನೈಟ್‌ಜಾರ್’, ಸಾಮಾನ್ಯವಾಗಿ ಹಸಿರು ಜಾಸ್ತಿ ಇರುವ ಗದ್ದೆ, ತೋಟ, ಕಾಡಂಚಿನ ಪ್ರದೇಶ ಗಳಲ್ಲಿ ವಾಸುಸುವಂಥದ್ದು.

ರಾತ್ರಿ ಮಾತ್ರ ಕೇಳಸಿಗುವ ಈ ಹಕ್ಕಿಯನ್ನು, ಒಮ್ಮೊಮ್ಮೆ ನೋಡುವ ಅವಕಾಶ ಸಿಗುತ್ತಿತ್ತು. ಮನೆಯ ಹತ್ತಿರದ ಪೇರಳೆ
ಮರಕ್ಕೆ ಅದು ಬಂದಾಗ, ವಿದ್ಯುತ್ ದೀಪದ ಬೆಳಕಿನಲ್ಲಿ ಒಮ್ಮೊಮ್ಮೆ ಕಾಣಿಸುತ್ತಿತ್ತು. ಹಗಲಿನಲ್ಲಿ ಅದನ್ನು ನೋಡುವ ಸಾಧ್ಯತೆ ತೀರಾ ಎಂದರೆ ತೀರಾ ಕಡಿಮೆ; ಏಕೆಂದರೆ, ಅದರ ದೇಹದ ವಿನ್ಯಾಸವು, ಅದು ವಿಶ್ರಾಂತಿ ತೆಗೆದುಕೊಳ್ಳುವ ಮರದ ಕೊಂಬೆಯ ವಿನ್ಯಾಸದೊಂದಿಗೆ ಹೊಂದಿಕೊಂಡು, ಒಂದು ರೀತಿಯಲ್ಲಿ ಅದು ಹಗಲಿನಲ್ಲಿ ‘ಅದೃಶ್ಯ’ವಾಗಿಬಿ
ಡುತ್ತದೆ! ಇದಕ್ಕೇ ಇರಬೇಕು, ಈ ನೆತ್ತಿಂಗಕ್ಕೆ ನಮ್ಮ ಹಳ್ಳಿಯವರು ಹೆಸರನ್ನೇ ಇಟ್ಟಿಲ್ಲ!

ಯಾವ್ಯಾವುದೋ ಜೀವಿಗಳಿಗೆ ಚಿತ್ರವಿಚಿತ್ರ ಹೆಸರನ್ನಿಟ್ಟಿರುವ ನಮ್ಮ ಜನಪದರು, ನೆತ್ತಿಂಗಕ್ಕೆ ಸ್ಥಳೀಯ ಹೆಸರ ನ್ನಿಟ್ಟಿಲ್ಲ ಎಂದರೆ, ಅದು ಅವರಿಗೆ ತೀರಾ ಅಪರಿಚಿತ ಎಂದೇ ಅರ್ಥ. ಅದಕ್ಕೆ ಮುಖ್ಯ ಕಾರಣ ಅದರ ರಾತ್ರಿಯ
ದಿನಚರಿ ಮತ್ತು ಹಗಲಿನಲ್ಲಿ ಸುತ್ತಲಿನ ಗಿಡಮರಗಳ ವಿನ್ಯಾಸದೊಂದಿಗೆ ಸಂಪೂರ್ಣ ಮಿಳಿತಗೊಳ್ಳುವ ದೇಹ ವಿನ್ಯಾಸ.

ನಮ್ಮ ರಾಜ್ಯದ ಬಯಲು ಸೀಮೆಯಲ್ಲಿ ಸಾಮಾನ್ಯವಾಗಿ ವಾಸಿಸುವ ನೆತ್ತಿಂಗದ ಪ್ರಭೇದವನ್ನು ‘ಇಂಡಿಯನ್ ನೈಟ್‌ಜಾರ್’ ಎಂದು ಹೆಸರಿಸಿದ್ದಾರೆ. ಇದರ ಕೂಗು ಸಹ ತುಸು ವಿಶಿಷ್ಟ. ಅದನ್ನು ಸಲೀಂ ಅಲಿಯವರು ‘ಹಿಮ ಗಟ್ಟಿದ ನೆಲದ ಮೇಲೆ ಚಿಕ್ಕ ಕಲ್ಲನ್ನು ಉರುಳಿಸಿಬಿಟ್ಟಾಗ ಉಂಟಾಗುವ ಸದ್ದು’ ಎಂದು ಹೋಲಿಸಿ, ವರ್ಣಿಸಿದ್ದಾರೆ. ಇಂಥ ಖಚಿತವಾದ, ಚಿತ್ರಕ ಭಾಷೆಯ ವರ್ಣನೆಗೆ ಸಲೀಂ ಅಲಿಯವರು ಪ್ರಸಿದ್ಧರು ಮತ್ತು ಅವರಿಂದ ಮಾತ್ರ ಅದು ಸಾಧ್ಯ! ಅರಸೀಕೆರೆ ಸುತ್ತಲಿನ ಪ್ರದೇಶದಲ್ಲಿ ಇಂಡಿಯನ್ ನೈಟ್‌ಜಾರ್ ಪ್ರಭೇದದ ನೆತ್ತಿಂಗದ ಕೂಗನ್ನು ನಾನು ಕೇಳಿದ್ದುಂಟು. ಹಿಮದ ನೆಲದ ಮೇಲೆ ಎಂದು ಸಲಿಂ ಅಲಿಯವರು ವರ್ಣಿಸಿದ್ದನ್ನು ಕಲ್ಪಿಸಿಕೊಂಡು, ಸಣ್ಣ ದುಂಡು ಗಲ್ಲನ್ನು ಇನ್ನೊಂದು ವಿಶಾಲವಾದ ಕಲ್ಲಿನ ಮೇಲೆ ಉರುಳಿಸಿಬಿಟ್ಟಂತೆ ಆ ಸದ್ದು ಇರುತ್ತದೆಂಬುದನ್ನು ಗಮನಿಸಿದೆ.

ನಮ್ಮ ರಾಜ್ಯದ ಕಾಡು ಪ್ರದೇಶದಲ್ಲಿ ‘ಜಂಗಲ್ ನೈಟ್‌ಜಾರ್’ ಎಂಬ ಇನ್ನೊಂದು ಪ್ರಭೇದದ ನೆತ್ತಿಂಗವೂ ಇದೆ. ಆದರೆ, ಈ ಎಲ್ಲಾ ನೆತ್ತಿಂಗಗಳು ಕಟ್ಟಾ ನಿಶಾಚರಿಗಳು ಮತ್ತು ಜನಸಾಮಾನ್ಯರ ಅರಿವಿನಿಂದ ದೂರವಿರುವ ಜೀವಿಗಳು. ರಾತ್ರಿಯ ಹೊತ್ತಿನಲ್ಲಿ ಅವು ಕೂಗುವುದನ್ನು ಕೇಳಿಸಿಕೊಂಡೇ, ನೆತ್ತಿಂಗಗಳ ಇರವನ್ನು ತಿಳಿದು ಕೊಳ್ಳಬೇಕು. ನಮ್ಮ ಹಳ್ಳಿಯ ಬೆಳದಿಂಗಳ ರಾತ್ರಿಯಲ್ಲಿ ತೀರಾ ಸಾಮಾನ್ಯವಾಗಿ ‘ಕಾಣ ಸಿಗುವ’ ಮತ್ತು ಧ್ವನಿ
ಹೊರಡಿಸುವ ಹಕ್ಕಿಗಳೆಂದರೆ ಗೂಬೆಗಳು.

ದೊಡ್ಡ ಗಾತ್ರದ ದೇಹವನ್ನು ಹೊತ್ತು, ಅವು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಾಡುವುದನ್ನು
ಸಹ ಬೆಳದಿಂಗಳ ರಾತ್ರಿಯಲ್ಲಿ ಕಾಣಬಹುದು. ಅವುಗಳನ್ನು ನೋಡುವುದಕ್ಕಿಂತಲೂ ಹೆಚ್ಚಾಗಿ, ಅವುಗಳ ದನಿಯು ಹೆಚ್ಚು ಪರಿಚಿತ. ಬೆಳದಿಂಗಳು ಇಲ್ಲದ ಸಮಯದಲ್ಲೂ ನಮ್ಮ ಮನೆ ಸುತ್ತಲೂ ಮೀನು ಗೂಬೆಗಳು ಕೂಗುವುದನ್ನು ಕೇಳಬಹುದು. ‘ಊಂ ಹೂಂ ಊಂ’ ಎಂಬ ಮೂರು ಭಾಗದ ಆಳವಾದ ದನಿಯ ‘ಮೀನು ಗೂಬೆ’ (ಬ್ರೌನ್ ಫಿಶ್
ಔಲ್)ಯ ಕೂಗು, ನಮ್ಮ ಹಳ್ಳಿಯ ಜನರಿಗೆ ತೀರಾ ಚಿರಪರಿಚಿತ. ಗೂಬೆ ನೆತ್ತಿಂಗಗಳ ಲೋಕ ನಿಜಕ್ಕೂ ನಿಗೂಢ.

ಇದನ್ನೂ ಓದಿ: Shashidhara Halady Column: ಹಳ್ಳಿಯ ಹಸುಗೂಸಿನ ಹೊಟ್ಟೆ ತಂಪು !