Monday, 16th September 2024

ದರ್ಜಿ ಹಕ್ಕಿಗಳ ಕೂಗು, ಸೂರಕ್ಕಿಗಳ ಯಾತನೆ

ಶಶಾಂಕಣ

shashidhara.halady@gmaiil.com

ಈ ಪುಟಾಣಿ ಹಕ್ಕಿಗಳ ಕುರಿತು ಎಷ್ಟು ಬರೆದರೂ ಕಡಿಮೆ. ನಮ್ಮರಾಜ್ಯದ ಎಲ್ಲಾ ಕಡೆ ಕಾಣಸಿಗುವ ಇವು ಮನೆಯ ಹತ್ತಿರವೇ ಗೂಡು ಕಟ್ಟುವುದುಂಟು! ಅವೇ ಸೂರಕ್ಕಿಗಳು. ಸುಂದರ ಹೊಳೆಯುವ ದೇಹದ, ಉದ್ದ ಕೊಕ್ಕಿನ, ಚಟುವಟಿಕೆಯ ಪುಟಾಣಿ ಹಕ್ಕಿಗಳು.

ಮನೆ ಸುತ್ತಮುತ್ತಲಿನ ದಾಸವಾಳ ಮೊದಲಾದ ಹೂವುಗಳ ಮೇಲೆ ಕುಳಿತು, ತನ್ನ ಉದ್ದನೆಯ ಕೊಕ್ಕನ್ನು ಆ ಹೂವಿನ ಬುಡಕ್ಕೆ ತೂರಿಸಿ, ಮಕರಂದ ಹೀರುವುದು ಅವುಗಳ ನೆಚ್ಚಿನ ಹವ್ಯಾಸ. ನಮ್ಮ ಹಳ್ಳಿಯ ಮನೆಯಲ್ಲಿ ಸೂರಕ್ಕಿಯೊಂದು ಗೂಡುಕಟ್ಟಿ, ಮರಿಮಾಡುವುದನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿತ್ತು. ಕೆಲವು ಹಕ್ಕಿಗಳಿಗೆ ಮನುಷ್ಯನ ಸಾಂಗತ್ಯ ಎಂದರೆ ಇಷ್ಟ. ಬಹುಷಃ, ಮನುಷ್ಯರ ಮನೆಯ ಸುತ್ತಮುತ್ತಲೇ ಗೂಡುಕಟ್ಟಿದರೆ ಭಯ ಕಡಿಮೆ ಎಂಬ ಅಭಿಮತವೂ ಅವುಗಳ ಲ್ಲಿರಬೇಕು! ಇಲ್ಲವಾದರೆ, ನಮ್ಮ ಮನೆಯ ಉಪ್ಪರಿಗೆ ಕಿಟಿಕಿಯ ಹತ್ತಿರವೇ, ಪ್ರತಿವರ್ಷವೂ ಗೂಡುಕಟ್ಟುತ್ತಿದ್ದ ಆ ಸೂರಕ್ಕಿಯ ಧೈರ್ಯವನ್ನು ಹೇಗೆಂದು ವಿಶ್ಲೇಷಿಸುವುದು!

ನಮ್ಮ ಮನೆಯಲ್ಲಿ ಹಳೆಯ ಕಾಲದ ಒಂದು ಫಿಲಿಪ್ಸ್ ರೇಡಿಯೋ ಇತ್ತು. ಬ್ಯಾಟರಿ ಸೆಲ್ ಶಕ್ತಿಯಿಂದ ಹಾಡು ಕೇಳಿಸುತ್ತಿದ್ದ ಆ ರೇಡಿಯೋವನ್ನು ನಮ್ಮ ತಂದೆ, ಚಾವಡಿಯಲ್ಲಿ ಪ್ರತಿಷ್ಠಾಪಿಸಿದ್ದರು. ಆಗಿನ ಕಾಲದ ರೇಡಿಯೋಗಳಿಗೆ ಏರಿಯಲ್ ಎಂಬ ಸಂಪರ್ಕ ಬೇಕಿತ್ತು. ಅಂದರೆ, ಮನೆಯ ಉಪ್ಪರಿಗೆಯ ತುದಿಯಲ್ಲಿ, ಉದ್ದನೆಯ ವಯರಿನ ವಿನ್ಯಾಸವನ್ನು ಅಳವಡಿಸಿ, ಅದನ್ನು ಸಂಪರ್ಕಿಸುವ ವಯರನ್ನು ರೇಡಿಯೋದ ಹಿಂಭಾಗದಲ್ಲಿರದ್ದ ರಂಧ್ರದಲ್ಲಿ ಅಳವಡಿಸಿದಾಗ ಮಾತ್ರ, ಅದು ದೂರದ ಭದ್ರಾವತಿ ಸ್ಟೇಷನ್‌ನ ತರಂಗಗಳನ್ನು ಗ್ರಹಿಸುತ್ತಿತ್ತು.

ಉಪ್ಪರಿಗೆಯಲ್ಲಿ ತೂಗು ಹಾಕಿದ್ದ ಏರಿಯಲ್ ತಂತಿಗಳಿಗೆ ಸಂಪರ್ಕ ನೀಡುವ ಒಂದು ಕಪ್ಪನೆಯ ವಯರು ಉದ್ದಕ್ಕೂ ಇಳಿಬಂದು, ಚಾವಡಿಯಲ್ಲಿದ್ದ ರೇಡಿಯೋಕ್ಕೆ ಸಿಕ್ಕಿಕೊಂಡಿತ್ತು. ಈ ಕಪ್ಪನೆಯ ವಯರನ್ನು ಕಂಡರೆ, ಆ ಸೂರಕ್ಕಿ ದಂಪತಿಗಳಿಗೆ ಅದೇನೋ ಪ್ರೀತಿ, ವಿಶ್ವಾಸ. ಉಪ್ಪರಿಗೆಯ ಹೊರಭಾಗದ ಗೋಡೆಯಿಂದ ಇಳಿಬಂದಿದ್ದ ಆ ವಯರಿಗೆ ತಮ್ಮ ಗೂಡನ್ನು ಅಂಟಿಸಿದ ಅವುಗಳ ಕೌಶಲ ವಿಶಿಷ್ಟ.

ತರಗಲೆ, ಬೂರುಗದ ಹತ್ತಿಯ ಚೂರು, ಜೇಡರ ಬಲೆ ಮೊದಲಾದ ಚಿಕ್ಕಪುಟ್ಟ ಸಾಮಗ್ರಿಗಳಿಂದ ತಯಾರಿಸಿದ ಆ ಗೂಡಿಗೆ ಒಂದು ಪ್ರವೇಶದ್ವಾರ. ನಮ್ಮ ಮನೆಯ ಎದುರಿನಲ್ಲಿ ಸದಾ ನೀರಿನಿಂದ ತುಂಬಿರುತ್ತಿದ್ದ ಅಗೇಡಿಯ ಮೇಲೆ ಜೋತಾಡು ವಂತಿದ್ದ ಆ ಗೂಡಿನ ಪ್ರವೇಶ ದ್ವಾರವು, ಬಯಲಿನ ಕಡೆಗೆ ತೆರೆದುಕೊಂಡಿತ್ತು. ಆ ಪುಟಾಣಿ ಸೂರಕ್ಕಿ, ತನ್ನ ಉದ್ದನೆಯ ಕೊಕ್ಕನ್ನು ಹೊರಗೆ ಚಾಚಿಕೊಂಡು, ಆ ಗೂಡಿನಲ್ಲಿ ಹುದುಗಿ ಕುಳಿತಿತ್ತು!

ಮೊಟ್ಟೆಯಿಟ್ಟು, ಆ ಮೊಟ್ಟೆಗಳಿಗೆ ಕಾವುಕೊಡಲು ಕುಳಿತಿತ್ತು ಎನಿಸುತ್ತದೆ. ನಮ್ಮ ಮನೆಯ ಮುಂಭಾಗದ ಜಗಲಿಯಲ್ಲಿ ನಿಂತರೆ, ಸುಮಾರು ಎಂಟು ಅಡಿ ದೂರದಲ್ಲಿ, ಆರೇಳು ಅಡಿ ಎತ್ತರದಲ್ಲಿ ಇದ್ದ ಆ ತೂಗಾಡುವ ಗೂಡು ನಮಗೆಲ್ಲಾ ಸ್ಪಷ್ಟವಾಗಿ
ಕಾಣಿಸುತ್ತಿತ್ತು. ಎಷ್ಟು ಸ್ಪಷ್ಟ ಎಂದರೆ, ಆ ಸೂರಕ್ಕಿ ಹೊರಗೆ ಚಾಚಿದ್ದ ಒಂದಿಂಚು ಉದ್ದದ ಕೊಕ್ಕಿನ ವಿನ್ಯಾಸ, ಆ ಕೊಕ್ಕಿನ ತುದಿಯಿಂದ ಆಗಾಗ ಹೊರಗೆ ಚಾಚುತ್ತಿದ್ದ ತೆಳ್ಳನೆಯ ನಾಲಗೆಯಂತಿರುವ ಹೀರುಕೊಳವೆ ಕಾಣಿಸುವಷ್ಟು! ಸೂರಕ್ಕಿಗಳಿಗೆ ಹೂವುಗಳ ಮಕರಂದವೇ ಮುಖ್ಯ ಆಹಾರ.

ಕಪ್ಪನೆಯ ಕೊಕ್ಕಿನ ತುದಿಯಿಂದ ಆ ಸೂರಕ್ಕಿ ಆಗಾಗ ಹೊರಕ್ಕೆ ಚಾಚುತ್ತಿದ್ದ ಹೀರುಕೊಳವೆಯನ್ನು ನೋಡಿ, ನನಗೆ, ನನ್ನ ತಂಗಿಯರಿಗೆ ಅಚ್ಚರಿ! ನಮ್ಮ ಹಳ್ಳಿಯಲ್ಲಿ ಅಂದು ಗೂಡು ಕಟ್ಟಿದ್ದು ಲೋಟೆನ್ಸ್ ಸನ್‌ಬರ್ಡ್ ಅಥವಾ ಲೋಟೆನ್ಸ್ ಸೂರಕ್ಕಿ.
ಈ ಹೆಸರನ್ನು ನಾನು ನಂತರದ ದಿನಗಳಲ್ಲಿ ಸಲೀಂ ಆಲಿಯವರ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕ ಓದಿ, ಪತ್ತೆ ಮಾಡಿದೆ. ಲೋಟೆನ್ಸ್ ಸನ್‌ಬರ್ಡ್ ಬಹುಮಟ್ಟಿಗೆ ಪರ್ಪಲ್ ಸನ್‌ಬರ್ಡ್ ರೀತಿಯೇ ಇದ್ದರೂ, ಗಾತ್ರದಲ್ಲಿ ತುಸು ದೊಡ್ಡದು.

ಮಾಮೂಲಿ ಸೂರಕ್ಕಿಯ ಕೊಕ್ಕು ಅರ್ಧ ಇಂಚು ಉದ್ದನೆಯದಾಗಿದ್ದರೆ, ಲೋಟೆನ್ಸ್ ಸೂರಕ್ಕಿಯ ಕೊಕ್ಕು ಸುಮಾರು ಮುಕ್ಕಾಲು ಇಂಚು ಉದ್ದ. ಗಂಡು ಹಕ್ಕಿ ಪೂರ್ಣ ಕಪ್ಪು. ಹೆಣ್ಣು ಹಕ್ಕಿ ತುಸು ಮಾಸಲು ಬಣ್ಣ. ಈ ಹಕ್ಕಿಯನ್ನು ಗುರುತಿಸಲು ಹೆಚ್ಚು ಸಹಕಾರಿಯಾಗುವುದು ಅದು ಕೂಗುವ ಶೈಲಿ. ಇದು ತುಸು ಕರ್ಕಶ ದನಿಯಿಂದ ಕೂಗುತ್ತದೆ. ನಮ್ಮ ಮನೆಯ ಜಗಲಿಯ
ಮೇಲಿದ್ದ ವಯರಿಗೆ ಗೂಡು ಕಟ್ಟಿ, ಆ ಸೂರಕ್ಕಿ ದಂಪತಿಗಳು ಮೊಟ್ಟಯಿಟ್ಟು ಮರಿ ಮಾಡಿ, ಮರಿಗಳಿಗೆ ಹಾರಲು ಕಲಿಸಿ ಕರೆದುಕೊಂಡು ಹೋದವು!

ಅಚ್ಚರಿ ಎಂದರೆ, ಮುಂದಿನ ವರ್ಷವೂ ಅದೇ ವಯರಿಗೆ ಆ ಸೂರಕ್ಕಿಗಳು ತಮ್ಮ ಗೂಡನ್ನು ಅಂಟಿಸಿದ್ದವು. ಆದರೆ ಆ ವರ್ಷ ಒಂದು ಪುಟ್ಟ ಅನಾಹುತವಾಯಿತು. ಆಗಿನ್ನೂ ಗೂಡು ಶೇ.೯೦ರಷ್ಟು ಮುಗಿದಿತ್ತು ಅಥವಾ ಪೂರ್ತಿಯಾಗಿತ್ತೋ ಸರಿಯಾಗಿ
ನೆನಪಿಲ್ಲ. ದೀಪಾವಳಿ ಹಬ್ಬ ಬಂತು. ಆಗಿನ ದಿನಗಳಲ್ಲಿ ಪಟಾಕಿಗಳನ್ನು ಸುಡುವುದೆಂದರೆ ನಮ್ಮಪ್ಪನಿಗೆ ವಿಪರೀತ ಹುಚ್ಚು. ಕನಿಷ್ಟ ಒಂದು ಡಜನ್ ಬಿರುಸು, ರಾಕೆಟ್, ಬಿಡಿಪಟಾಕಿ, ಆಟಂ ಬಾಂಬ್, ಲಕ್ಷ್ಮಿ ಪಟಾಕಿಗಳನ್ನು ತಂದು ಹಬ್ಬದ ರಾತ್ರಿ ಸುಡುವುದರಲ್ಲಿ ಅವರಿಗಿದ್ದ ಉತ್ಸಾಹ ಎಷ್ಟೆಂದರೆ, ಅಷ್ಟು ಉತ್ಸಾಹ ನನಗೂ ಇರಲಿಲ್ಲ!

ಆ ರಾತ್ರಿ ಗದ್ದೆಗೆ ದೀಪ ಹಚ್ಚಿ ಬಂದ ನಂತರ, ಹಲವು ಪಟಾಕಿ ಸುಟ್ಟು ನಂತರ, ಒಂದೆರಡು ಬಿರುಸುಗಳನ್ನು ಹಕ್ಕಿ ಗೂಡಿನ ಕೆಳಗೆ, ಜಗಲಿಯ ಮೇಲೆ ಇಟ್ಟು ಹಚ್ಚಿದರು ನಮ್ಮಪ್ಪ. ‘ಆ ಜಗಲಿಯ ಮೇಲೆ ಬಿರುಸನ್ನಿಟ್ಟು ಹಚ್ಚಬೇಡಿ, ಅಲ್ಲೇ ಮೇಲೆ ಸೂರಕ್ಕಿಯ ಗೂಡು ಇದೆ’ ಎಂದು ನಾನು ಕೂಗಿಕೊಂಡೆ. ‘ಏನೂ ಆಗಲ್ಲ ಬಿಡು, ಗೂಡು ತುಂಬಾ ಮೇಲಿದೆ’ ಎಂದು, ಬಿರುಸಿಗೆ ಬೆಂಕಿ ಹಚ್ಚಿದರು. ಬರ್ ಎಂದು ಮೇಲಕ್ಕೆ ನೆಗೆದ ಬಿರುಸಿನ ಕಿಡಿಗಳು ಸೂರಕ್ಕಿಯ ಗೂಡಿಗೆ ತಗುಲಿದವು.

ಒಂದೇ ಕ್ಷಣದಲ್ಲಿ ಸೂರಕ್ಕಿಯ ಗೂಡು ಭಸ್ಮ! ಪಾಪ, ಮರುದಿನ ಬೆಳಿಗ್ಗೆ ಅಲ್ಲೇ ಸುತ್ತ ಮುತ್ತ ಹಾರಾಡುತ್ತಿದ್ದ ಸೂರಕ್ಕಿಗಳು,
ತಮ್ಮ ಉರಿದು ಹೋದ ಗೂಡನ್ನು ಕಂಡು ಮರುಗಿದವೋ ಏನೋ. ಅವುಗಳ ಗೂಡೇ ಸುಟ್ಟು ಹೋಯಿತು, ಇನ್ನು ನಮ್ಮ ಮನೆಯ ಹತ್ತಿರ ಅವು ಗೂಡು ಕಟ್ಟುವುದಿಲ್ಲವೇನೋ ಎಂದುಕೊಂಡೆ ನಾನು! ಆದರೆ, ಸೂರಕ್ಕಿಗಳು ಯಾವುದೇ ಭಯವಿಲ್ಲದೇ,
ಮರುವರ್ಷವೂ ಅದೇ ಜಾಗದಲ್ಲಿ ತಮ್ಮ ಗೂಡು ಕಟ್ಟಿದವು. ನಮ್ಮ ಮನೆಯ ಪರಿಸರದ ಮೇಲೆ, ಆ ಕಪ್ಪನೆಯ ವಯರಿನ ಮೇಲೆ ಆ ಸೂರಕ್ಕಿಗಳಿಗಿದ್ದ ವಿಶ್ವಾಸ ಕಂಡು ನಮಗೆಲ್ಲಾ ಹೆಮ್ಮೆ. ಆದರೆ ಅವುಗಳಿಗರ ಅದಾವುದೇ ಭಾವನಾತ್ಮಕ ನಂಟು
ಇದ್ದಿರಲಾರದು, ತಮ್ಮ ಮನಸಿನ ಮಾತಿನಂತೆ ಅವು ಅಲ್ಲಿ ಗೂಡು ಕಟ್ಟಿದ್ದವು. ಆದರೆ ಈ ವರ್ಷ ಮತ್ತೊಂದು ಗಂಡಾಂತರ ಕಾದಿತ್ತು.

ನಮ್ಮ ಹಳ್ಳಿ ಮನೆಯ ಮಾಡಿಗೆ ಒಂದು ದೊಡ್ಡ ಹಲಸಿನ ಮರದ ಕೊಂಬೆಗಳು ಚಾಚಿಕೊಂಡಿರುವುದು ಮಾಮೂಲು.
ಅಲ್ಲಿನ ದೊಂಬೆ ಹೆಂಚಿನ ಉದ್ದನೆಯ ಸಂದಿಯಲ್ಲಿ ಇಲಿಗಳು ವಾಸಿಸುತ್ತಿದ್ದುದು ಸಹ ಸಾಮಾನ್ಯ. ರಾತ್ರಿ ಹೊತ್ತು ಇಲಿಗಳು ಮಾಡಿನ ತುದಿಯಲ್ಲಿ ಅತ್ತಿಂದಿತ್ತ ಓಡಾಡುವ ಸದ್ದು ಕೇಳುತ್ತಾ ನಿದ್ದೆ ಮಾಡುತ್ತಿದ್ದೆವು ನಾವು! ಆ ಇಲಿಗಳನ್ನು ಹುಡುಕಿಕೊಂಡು ಹಗಲಿನ ಹೊತ್ತಿನಲ್ಲಿ ನಾಗರ ಹಾವುಗಳು ಸಹ ಬರುತ್ತಿದ್ದವು!

ನಮ್ಮೂರಿನವರು ಆ ಹಾವಿಗೆ ಅದೆಷ್ಟು ಗೌರವ, ಭಯ, ಭಕ್ತಿ ತೋರುತ್ತಿದ್ದರೆಂದರೆ, ಅದನ್ನು ದೇವರ ಹಾವು ಎಂದು ಕರೆದು, ಅದಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳುತ್ತಿದ್ದರು! ಮನೆಯ ಮಾಡಿನ ಮೇಲೆ ಹಾವು ನಿಧಾನವಾಗಿ ಸಂಚರಿಸುತ್ತಾ, ಇಲಿಗಳ ವಾಸನೆಯನ್ನು ಗ್ರಹಿಸಲು ತನ್ನ ನಾಲಗೆಯನ್ನು ಝಳಪಿಸುತ್ತಾ ಓಡಾಡುವುದನ್ನು ನಾನು ಹಲವು ಬಾರಿ ಕಂಡಿದ್ದೆ. ‘ಅದು ಅದರ ಪಾಡಿಗೆ ಬಂದು ಹೋಗುತ್ತದೆ, ನಮಗೆ ಏನೂ ಮಾಡುವುದಿಲ್ಲ’ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ!
ಆ ವರ್ಷ ಮಾತ್ರ, ಆ ರೀತಿ ಉಪ್ಪರಿಗೆಯ ಮಾಡಿನ ಮೇಲೆ ಇಲಿಗಳನ್ನು ಹುಡುಕುತ್ತಾ ಬಂದ ಒಂದು ನಾಗರಹಾವು, ನಿಧಾನವಾಗಿ ಸೂರಕ್ಕಿಯ ಗೂಡಿನ ಕಡೆ ಚಲಿಸಿತು.

ಅದು ಗೂಡಿನ ಕಡೆ ನಿಧಾನವಾಗಿ ಚಲಿಸಿ, ವಯರಿಗೆ ಅಂಟಿಕೊಂಡಿದ್ದ ಸೂರಕ್ಕಿಯ ಗೂಡನ್ನು ಪತ್ತೆ ಮಾಡಿಯೇ ಬಿಟ್ಟಿತು. ವಯ
ರನ್ನು ಮತ್ತು ಗೋಡೆಯನ್ನೇ ಆಧಾರ ಮಾಡಿಕೊಂಡು, ಆ ಹಾವು ಹಕ್ಕಿಗೂಡಿನ ಬಾಯನ್ನು ಗುರುತಿಸಿ, ಅದರೊಳಗೆ ಇಣುಕಿತು! ಹತ್ತಿರದಲ್ಲೇ ಇದ್ದ ಸೂರಕ್ಕಿಗಳು ಜೋರಾಗಿ ಕೂಗುತ್ತಾ, ಅತ್ತಿತ್ತ ಹಾರಾಡುತ್ತಾ ಆರ್ತನಾದ ಮಾಡುತ್ತಿದ್ದವು. ಆ
ನಾಗರಹಾವು ಸೂರಕ್ಕಿಯ ಗೂಡಿಗೆ ಭೇಟಿ ಇತ್ತಾಗ, ಅಲ್ಲಿ ಮೊಟ್ಟೆ ಇತ್ತೋ ಇಲ್ಲವೋ ನನಗೆ ಸ್ಪಷ್ಟವಾಗಿ ಗೊತ್ತಿಲ್ಲ; ಹಾವು ಮೊಟ್ಟೆಯನ್ನು ನುಂಗಿದ್ದನ್ನು ಸಹ ನಾನು ಕಣ್ಣಾರೆ ನೋಡಿರಲಿಲ್ಲ.

ಆದರೆ, ಆ ಎರಡು ಹಕ್ಕಿಗಳು ಅತ್ತಿಂದಿತ್ತ ಹಾರಾಡುತ್ತಾ, ಸನಿಹದ ಮಾವಿನ ಮರದ ಟೊಂಗೆಯ ಮೇಲೆ ಒಮ್ಮೊಮ್ಮೆ ಕುಳಿತು, ಮತ್ತೆ ಇತ್ತ ಹಾರಿ ಬರುತ್ತಾ, ಕೂಗುತ್ತಿದ್ದ ಪರಿಯನ್ನು ಕಂಡರೆ ಮಾತ್ರ, ಏನೋ ದೊಡ್ಡ ಅನಾಹುತ ಆಗಿರಲೇ ಬೇಕು ಎನಿಸಿತು. ಕೆಲವು ನಿಮಿಷಗಳ ನಂತರ ಹಾವು ಕೆಳಗಿಳಿದು, ತನ್ನ ಪಾಡಿಗೆ ಹೊರಟು ಹೋಯಿತು.

ಸೂರಕ್ಕಿಗಳಿಗೆ ತಮ್ಮ ಗೂಡಿಗೆ ಭೇಟಿಕೊಟ್ಟ ಆ ನಾಗರಹಾವನ್ನು ಕಂಡು ಏನು ಅನಿಸಿತೋ, ಎಷ್ಟು ಭಯಪಟ್ಟವೋ! ಆ ದಿನ ತಮ್ಮ ಗೂಡನ್ನೇ ಬಿಟ್ಟು ಹೋದವು. ಮಾತ್ರವಲ್ಲ, ಮುಂದೆಂದೂ ಆ ವಯರಿಗೆ ಅಂಟಿದಂತೆ ತಮ್ಮ ಗೂಡನ್ನು ಕಟ್ಟಲೇ ಇಲ್ಲ. ದೀಪಾವಳಿ ದಿನ ಬೆಂಕಿ ತಗುಲಿ ಗೂಡು ಭಸ್ಮ ವಾದರೂ, ಅವು ಬೆದರಲಿಲ್ಲ. ಆದರೆ ನಾಗರಹಾವು ತಮ್ಮ ಗೂಡಿಗೆ ಭೇಟಿಕೊಟ್ಟದ್ದನ್ನು ಕಂಡು ಹೆದರಿ ದವು. ನಂತರದ ವರ್ಷಗಳಲ್ಲಿ ನಮ್ಮ ಮನೆಯ ಸುತ್ತ ಮುತ್ತ ಲೋಟೆನ್ಸ್ ಸೂರಕ್ಕಿಗಳುವ ಮತ್ತು ಇತರ ಪ್ರಭೇದದ ಸೂರಕ್ಕಿಗಳು ಹಾರಾಡುವುದನ್ನು ಕಂಡಿದ್ದೆನಾದರೂ, ಆ ಜಾಗದಲ್ಲಿ ಗೂಡು ಕಟ್ಟಲಿಲ್ಲ.

ಮನೆಯ ಕಿಟಿಕಿಗೆ ತಾಗಿಕೊಂಡಂತೆ ಕಟ್ಟಿದ್ದ ಸೂರಕ್ಕಿಯ ಗೂಡನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದರೂ, ಅಂದು ಅದರ ಛಾಯಾಚಿತ್ರ ತೆಗೆಯುವ ಅವಕಾಶ ನನಗಿರಲಿಲ್ಲ. ಅಂದಿನ ದಿನಗಳಲ್ಲಿ ನಮ್ಮ ಹಳ್ಳಿಯಲ್ಲೇ ಯಾರ ಬಳಿಯಲ್ಲೂ
ಕ್ಯಾಮೆರಾ ಇರಲಿಲ್ಲ! ನಂತರದ ದಶಕಗಳಲ್ಲಿ, ನಾನು ಉದ್ಯೋಗಸ್ಥನಾದ ನಂತರ, ಒಂದು ಫಿಲಂ ಕ್ಯಾಮೆರಾ ಕೊಂಡು ಕೊಂಡೆ.

‘ಹಕ್ಕಿಯ ಗೂಡು ಕಂಡರೆ ತಿಳಿಸು, ಫೋಟೋ ತೆಗೆಯುತ್ತೇನೆ’ ಎಂದು ತಾರಿಕಟ್ಟೆಯಲ್ಲಿದ್ದ ಬಂಧು, ರಾಜಣ್ಣನಿಗೆ ಹೇಳಿದ್ದೆ.
‘ಮನೆಯ ಹತ್ತಿರವೇ ಪುಟಾಣಿ ಹಕ್ಕಿಯೊಂದು ಗೂಡು ಕಟ್ಟಿದೆ, ಫೋಟೋ ತೆಗೆಯಬಹುದು, ಬಾ’ ಎಂದು ತಿಳಿಸಿದ. ಅದೇ ಶನಿವಾರ ಕ್ಯಾಮೆರಾ ಮತ್ತು ಲೆನ್ಸ್ ಹೊತ್ತು ತಾರಿಕಟ್ಟೆಗೆ ಹೋದೆ. ರಾಜಣ್ಣನ ಮನೆಯ ಎದುರು ತುಸು ದೂರದಲ್ಲಿದ್ದ ತೇಗದ
ಗಿಡದಲ್ಲಿ ದರ್ಜಿ ಹಕ್ಕಿಯೊಂದು ಗೂಡುಕಟ್ಟಿತ್ತು. ಒಂದು ಬೆರಳಷ್ಟು ಉದ್ದವಿದ್ದ ಆ ದರ್ಜಿಹಕ್ಕಿಗೆ ಅದೆಷ್ಟು ಧೈರ್ಯವೆಂದರೆ, ನೆಲದಿಂದ ಕೇವಲ ಮೂರು ಅಡಿ ಎತ್ತರದಲ್ಲಿ, ಎರಡು ತೇಗದ ಎಲೆಗಳನ್ನು ತನ್ನ ಕೊಕ್ಕಿನಿಂದಲೇ ಹೊಲಿದು ಗೂಡು
ಕಟ್ಟಿ, ಮರಿ ಮಾಡಿತ್ತು.

ಆ ಗೂಡಿನ ಫೋಟೋ ಕ್ಲಿಕ್ಕಿಸಲು ನನಗೆ ಅನುಕೂಲವಾಗಲೆಂದು, ಸುತ್ತಲಿನ ಕುರುಚಲು ಗಿಡಗಳನ್ನು ರಾಜಣ್ಣ ಚೊಕ್ಕಟ ಮಾಡಿದ್ದ. ‘ಹಾಗೆ ಮಾಡಬಾರ ದಿತ್ತು, ಹಕ್ಕಿಗೆ ಹೆದರಿಕೆ ಆಗುತ್ತೆ’ ಎಂದೆ ನಾನು. ಆ ಗೂಡಿನ ಬಳಿ ಹೋಗಿ ನೋಡಿದಾಗ, ಎರಡು ಮರಿಗಳಿದ್ದವು. ನಾವಿಬ್ಬರೂ ಗೂಡಿನ ಹತ್ತಿರ ಸುಳಿದಾಡುವುದನ್ನು ಕಂಡು ತಾಯಿ ಹಕ್ಕಿಗೆ ಗಾಬರಿಯಾಗಿರಬೇಕು. ಆಚೀಚಿನ ಗಿಡಗಳಲ್ಲಿ ಕುಳಿತು, ಜೋರಾಗಿ ಕೂಗತೊಡಗಿತು. ನಾನು ಕ್ಯಾಮೆರಾ ಫೋಕಸ್ ಮಾಡಲು ಆರಂಭಿಸಿದೆ.

‘ಇನ್ನೂ ಒಂದೆರಡು ಎಲೆ, ಗೆಲ್ಲು ತೆಗೆದು ಹಾಕಿ, ಇನ್ನಷ್ಟು ಜಾಗ ಮಾಡಿಕೊಡಲೆ?’ ಎಂದು ರಾಜಣ್ಣ ಕೇಳಿದ. ‘ಖಂಡಿತಾ ಬೇಡ, ಆ ಹಕ್ಕಿಗೆ ತೊಂದರೆ ಆಗುತ್ತದೆ’ ಎಂದೆ. ಸ್ಪಷ್ಟವಾಗಿ ಚಿತ್ರ ತೆಗೆಯಲು ಇನ್ನಷ್ಟು ಹತ್ತಿರ ಹೋದೆ. ತಾಯಿ ಹಕ್ಕಿ ಇನ್ನಷ್ಟು ತೀವ್ರವಾಗಿ ಕೂಗತೊಡಗಿತು. ತನ್ನ ಮರಿಗಳಿಗೆ ಅಪಾಯ ಮಾಡಲು ಬಂದಿದ್ದೇನೆ ಎಂದೇ ಅದು ಗ್ರಹಿಸಿರಬೇಕು. ನಾನಿನ್ನೂ ಗೂಡಿನ ಒಂದೇ ಒಂದು ಫೋಟೋ ತೆಗೆದಿರಲಿಲ್ಲ, ಅದೇಕೋ ಒಮ್ಮೆಗೇ ಮನಸ್ಸು ಕಲವಿಲವಾಯಿತು. ಆ ಪುಟಾಣಿ ಮರಿಗಳ ಹತ್ತಿರ ಹೋಗಿ, ಅವುಗಳ ದಿನಚರಿಗೆ ಭಂಗ ತರುವಂತೆ ನಾನು ಫೋಟೋ ತೆಗೆಯಬೇಕೆ? ನಾವಿಬ್ಬರೂ ಅಷ್ಟು ಹತ್ತಿರ
ಸುಳಿದಾಡಿದ್ದನ್ನು ಕಂಡು, ತಾಯಿ ಹಕ್ಕಿ, ಬೆದರಿ, ಖಾಯಂ ಆಗಿ ಆ ಜಾಗವನ್ನು ತೊರೆದರೆ, ಆ ಕ್ಷಣದಿಂದಲೇ ಆ ಮರಿಗಳು ಅನಾಥವಾಗಬಹುದಲ್ಲವೆ? ನಾನು ಫೋಟೋ ತೆಗೆಯುವುದು ಮುಖ್ಯವೇ ಅಥವಾ ಆ ಹಕ್ಕಿಗೂಡಿನ ಮರಿಗಳು ತಾಯಿಯ
ಆರೈಕೆ ಪಡೆದು, ಬೆಳೆಯುವುದು ಮುಖ್ಯವೆ? ಅದೇಕೋ ಆ ಕ್ಷಣದಲ್ಲಿ, ನಮ್ಮ ಹಳ್ಳಿ ಮನೆಯಲ್ಲಿ ಅಂದು ನಾಗರಹಾವನ್ನು ತಮ್ಮ ಗೂಡಿನ ಬಳಿ ಕಂಡು ಬೆದರಿ, ಆರ್ತನಾದ ಮಾಡುತ್ತಿದ್ದ ಲೋಟೆನ್ಸ್ ಸೂರಕ್ಕಿ ದಂಪತಿಯ ನೆನಪಾಯಿತು.

ನಾಗರಹಾವು ತಮ್ಮ ಗೂಡಿಗೆ ಭೇಟಿ ನೀಡಿದ್ದನ್ನು ಕಣ್ಣಾರೆ ಕಂಡ ಆ ಹಕ್ಕಿಗಳು ಆರ್ತನಾದ ಮಾಡಿ ಗೌಜು ಎಬ್ಬಿಸಿದ್ದು ಮಾತ್ರ ವಲ್ಲ, ಆ ನಂತರ ಆ ಜಾಗವನ್ನೇ ಬಿಟ್ಟು ದೂರ ಹೊರಟುಹೋದವಲ್ಲ! ದರ್ಜಿ ಹಕ್ಕಿಯ ಕೂಗನ್ನು ಕೇಳಿ, ನನ್ನ ಕಿವಿಯಲ್ಲಿ ಸೂರಕ್ಕಿಗಳ ಯಾತನೆ ಅನುರಣನಿಸಿತು.

ರಾಜಣ್ಣನಿಗೆ ಹೇಳಿದೆ ‘ಫೋಟೋ ತೆಗೆಯುವುದಿಲ್ಲ ಮಾರಾಯ, ಈ ಹಕ್ಕಿ ತನ್ನ ಮರಿಗಳನ್ನು ಕ್ಷೇಮವಾಗಿ ಬೆಳೆಸಲಿ’. ಕ್ಯಾಮೆರಾ
ಮತ್ತು ಲೆನ್ಸ್‌ನ್ನು ಬ್ಯಾಗಿಗೆ ಸೇರಿಸಿದೆ. ಆ ದರ್ಜಿ ಹಕ್ಕಿಯ ಮರಿಗಳು ಬೆಳೆಯಲಿ ಎಂದು ಆಶಿಸಿ, ಆ ಗೂಡಿನ ಒಂದೇ ಒಂದು ಫೋಟೋ ಚಿತ್ರಿಸಿದೇ ವಾಪಸಾದೆ.