Tuesday, 22nd October 2024

ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚಾಯಿತೇನು ?

ಅಶ್ವತ್ಥಕಟ್ಟೆ

ranjith.hoskere@gmail.com

ಮುಡಾ, ವಾಲ್ಮೀಕಿ ಹಗರಣಗಳ ವಿರುದ್ಧ ಬಿಜೆಪಿ-ಜೆಡಿಎಸ್ ನಾಯಕರ ದೋಸ್ತಿ ಪಾದಯಾತ್ರೆ ಮುಕ್ತಾಯವಾಗಿದೆ. ಪಾದಯಾತ್ರೆಯ ಆರಂಭದಿಂದಲೂ ಹತ್ತು ಹಲವು ಗೊಂದಲ ಗೋಜಲುಗಳಿದ್ದರೂ ಆ ಎಲ್ಲದರ ನಡುವೆ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ‘ಬೃಹತ್’ ಸಮಾವೇಶದೊಂದಿಗೆ ಪಾದಯಾತ್ರೆಗೆ ಇತಿಶ್ರೀ ಹಾಡಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪಾದಯಾತ್ರೆಗೆ ಮುಂದಾಗಿದ್ದ ಬಿಜೆಪಿ ಈ ಪಾದಯಾತ್ರೆ ಯಿಂದ ಗಳಿಸಿಕೊಂಡಿದ್ದೇನು ಎನ್ನುವುದು ಇದೀಗ ಬಹುತೇಕರ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಮುಂದಿನ ಆರು ತಿಂಗಳಲ್ಲಿ ಯಾವುದೇ ಚುನಾವಣೆ ಗಳಿಲ್ಲದ ಸಮಯದಲ್ಲಿ ಈ ಪಾದಯಾತ್ರೆಯನ್ನು ಆರಂಭಿಸಿದ್ದು ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಎತ್ತಿದ್ದರು. ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ ನಾಲ್ಕು ದಶಕದ ಸುದೀರ್ಘ ರಾಜಕಾರಣದಲ್ಲಿ ಮೊದಲ ಬಾರಿಗೆ ಎದುರಾಗಿರುವ ‘ಭ್ರಷ್ಟಾಚಾರ’ದ ಆರೋಪಕ್ಕೆ ಇನ್ನಷ್ಟು ಗಟ್ಟಿ ಧ್ವನಿ ಯನ್ನು ಸೇರಿಸಬೇಕು ಎನ್ನುವ ಉದ್ದೇಶ ಬೆಂಗಳೂರು- ಮೈಸೂರು ಪಾದಯಾತ್ರೆಗೆ ಪ್ರಮುಖ ಕಾರಣ ಎನ್ನುವುದು ಬಿಜೆಪಿಗರ ವಾದ.

ಆದರೆ ಪಾದಯಾತ್ರೆ ಘೋಷಣೆಯಾದ ದಿನದಿಂದ ಹಿಡಿದು ಮುಕ್ತಾಯದ ದಿನದವರೆಗೆ ಗಮನಿಸಿದರೆ, ರಾಜ್ಯ ಬಿಜೆಪಿಯ ಪಾದಯಾತ್ರೆಗೆ ಸ್ವಪಕ್ಷದಲ್ಲಿಯೇ
ಬಹುದೊಡ್ಡ ವಿರೋಧ ವ್ಯಕ್ತವಾಗಿತ್ತು. ಇದಾದ ಬಳಿಕ ‘ದೋಸ್ತಿ’ಗಳಾಗಿರುವ ಜೆಡಿಎಸ್‌ನೊಂದಿಗೂ ದೊಡ್ಡ ಪ್ರಮಾಣದಲ್ಲಿ ಮನಸ್ತಾಪ ಮೂಡಿತ್ತು. ಈ ಮನಸ್ತಾಪವನ್ನು ಕೇಂದ್ರದ ನಾಯಕರು ‘ನಿಭಾಯಿಸಿ’ದರೂ, ರಾಜ್ಯ ಮಟ್ಟದಲ್ಲಿ ಶುರುವಾಗಿದ್ದ ಗೊಂದಲ ಇಡೀ ಪಾದಯಾತ್ರೆಯಲ್ಲಿ ಮುಂದುವರೆ ಯಿತು ಎನ್ನುವುದು ಸ್ಪಷ್ಟ.

ದೋಸ್ತಿಗಳ ನಡುವಿನ ಭಿನ್ನಮತದ ಬಗ್ಗೆ ಮಾತನಾಡುವುದಕ್ಕಿಂತ ಮೊದಲು, ಬಿಜೆಪಿಯೊಳಗೆ ‘ಹೊಗೆಯಾಡುತ್ತಿದ್ದ’ ಅಸಮಾಧಾನದ ಬುಗ್ಗೆ ಯಾವ ರೀತಿಯಲ್ಲಿ ಸ್ಫೋಟವಾಯಿತು ಎನ್ನುವುದನ್ನು ಗಮನಿಸಬೇಕು. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ದಿನದಿಂದಲೂ, ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧಿಸಿಕೊಂಡು ಬಂದಿದ್ದರು. ಪಾದಯಾತ್ರೆ ಘೋಷಣೆ ಮಾಡು ತ್ತಿದ್ದಂತೆ, ಯತ್ನಾಳ್ ಬೆನ್ನಿಗೆ ರಮೇಶ್ ಜಾರಕಿಹೊಳಿ ನಿಂತು, ‘ವಿಜಯೇಂದ್ರ ಅವರನ್ನು ನಮ್ಮ ರಾಜ್ಯಾಧ್ಯಕ್ಷನೆಂದು ಸ್ವೀಕರಿಸಿಲ್ಲ.

ನಮ್ಮದೇನಿದ್ದರೂ ಪಕ್ಷದ ವರಿಷ್ಠರ ಬಳಿಯೇ ಮಾತು’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದರು. ಇದಾದ ಕೆಲವೇ ದಿನದಲ್ಲಿ, ಯತ್ನಾಳ್, ಜಾರಕಿ ಹೊಳಿ ಪಾಳಯದಲ್ಲಿ ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಕಾಣಿಸಿಕೊಂಡರು. ಈ ರೀತಿ ಕಾಣಿಸಿಕೊಂಡ ಕೆಲವೇ ದಿನದಲ್ಲಿ ವಿಜಯೇಂದ್ರ ನೇತೃತ್ವ ದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆಯೂ ಆರಂಭವಾಯಿತು. ಆದರೆ ಬಿಜೆಪಿಯ ಬಹುತೇಕ ಹಿರಿಯ ನಾಯಕರು ಈ ಪಾದಯಾತ್ರೆಯಲ್ಲಿ ಕಾಣಿಸಿ ಕೊಳ್ಳಲಿಲ್ಲ.

ಪ್ರತಾಪ್ ಸಿಂಹ ಒಂದೆರೆಡು ದಿನ ಕಾಣಿಸಿಕೊಂಡರೂ, ‘ಪ್ರತ್ಯೇಕ ತಂಡ’ವಾಗಿಯೇ ಬಹುಪಾಲು ಸಮಯ ಕಳೆದರು. ವಿಜಯೇಂದ್ರ ಅವರಿಗೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಬಂಡಾಯವಾಗಿಯೇ ಮುಂದುವರೆದು ಟೀಕಿಸುತ್ತಿದ್ದರೂ ಹೆಚ್ಚು ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈವರೆಗೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಒಪ್ಪಿಕೊಳ್ಳದಿದ್ದರೂ, ಬಹಿರಂಗವಾಗಿ ಅಸಮಾಧಾನ ಹೊರಹಾಕದೇ ‘ತಟಸ್ಥ’ರಾಗಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಹಲವು ನಾಯಕರು, ಬೆಂಗಳೂರು-ಮೈಸೂರು ಪಾದಯಾತ್ರೆ ಪೂರ್ಣಗೊಂಡ ಮರುದಿನವೇ ‘ಬಂಡಾಯದ ಕ್ಯಾಂಪ್’ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರುವುದು  ಆತಂಕಕ್ಕೆ ಕಾರಣವಾಗಿದೆ.

ಬಂಡಾಯದ ಕ್ಯಾಂಪ್ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ರಾಜ್ಯ ಬಿಜೆಪಿಗೆ ತಲೆಬಿಸಿಯಾಗಿದೆ. ಆದರೆ ಈ ರೀತಿ ಬಹಿರಂಗವಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿರುವ ನಾಯಕರ ವಿರುದ್ಧ ಪಕ್ಷದ ವರಿಷ್ಠರೂ ಯಾವುದೇ ಕ್ರಮವಹಿಸುತ್ತಿಲ್ಲ. ಇನ್ನೊಂದೆಡೆ ವಿಜಯೇಂದ್ರ ವಿರುದ್ಧ ೧೨ ಅಂಶಗಳ ಆರೋಪವನ್ನು ಮುಂದಿಟ್ಟುಕೊಂಡು ಬಂಡಾಯ ನಾಯಕರು ವರಿಷ್ಠರನ್ನು
ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ.

ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಾದಯಾತ್ರೆ ಆರಂಭಿಸಿದ್ದು, ಈ ವಿರೋಧಿ ಪಡೆ ಗಟ್ಟಿಯಾಗಲು ಮತ್ತೊಂದು ಕಾರಣವಾಗಿರುವು ದರಿಂದ, ಪಾದಯಾತ್ರೆಯಿಂದ ಲಾಭಕ್ಕಿಂತ ವೈಯಕ್ತಿಕ ವಾಗಿ ವಿಜಯೇಂದ್ರ ಹಾಗೂ ಆರ್.ಅಶೋಕ್‌ರಿಗೆ ನಷ್ಟವೇ ಆಗಿದೆ ಎನ್ನುವುದು ಸದ್ಯದ ಮಾತು.
ಇದು ಬಿಜೆಪಿಯೊಳಗಿನ ಆಂತರಿಕ ಕಿತ್ತಾಟವಾದರೆ, ಮೈತ್ರಿ ಪಕ್ಷದ ನೆರವಿನೊಂದಿಗೆ ಪಾದಯಾತ್ರೆ ಆರಂಭಿಸಲು ಸಜ್ಜಾಗಿದ್ದ ಬಿಜೆಪಿಗೆ ಪಾದಯಾತ್ರೆ ಆರಂಭಕ್ಕೂ ಮೊದಲೇ ಆಘಾತ ಕಾದಿತ್ತು.

ಮೇಲ್ನೋಟಕ್ಕೆ ಪ್ರೀತಂಗೌಡ ಇದ್ದಾರೆ ಎನ್ನುವ ಕಾರಣಕ್ಕೆ ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವ ಸಂದೇಶವನ್ನು ರವಾನಿಸಿತು. ಜೆಡಿಎಸ್ ಬಾರದಿದ್ದರೂ, ಪಾದಯಾತ್ರೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿತ್ತು. ಆದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಇಲ್ಲದೇ ಪಾದಯಾತ್ರೆ ಮಾಡಿದರೆ ಸರಿಹೋಗುವುದಿಲ್ಲ. ಇದರೊಂದಿಗೆ ದೋಸ್ತಿಗಳಾಗಿ ಸರಕಾರದ ವಿರುದ್ಧ ನಡೆಸಿದ ಮೊದಲ ಪಾದಯಾತ್ರೆಯಲ್ಲಿಯೇ ಎರಡೂ ಪಕ್ಷದ ನಾಯ
ಕರು ಕಾಣಿಸಿಕೊಳ್ಳದಿದ್ದರೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎನ್ನುವ ಕಾರಣಕ್ಕೆ ‘ವರಿಷ್ಠ’ರ ಸಮ್ಮುಖದಲ್ಲಿ ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕುವಂತೆ ಸರ್ಕಸ್ ಮಾಡಲಾಯಿತು. ಈ ಎಲ್ಲ ಗೊಂದಲಗಳ ಬಳಿಕ ನಡೆದ ಪಾದಯಾತ್ರೆಯಲ್ಲಿ, ಕುಮಾರಸ್ವಾಮಿ ಅವರಿದ್ದಾಗ ಬಿಜೆಪಿ ನಾಯಕರೊಂದಿಗೆ
ಜತೆಜತೆಯಾಗಿ ಹೆಜ್ಜೆ ಹಾಕುತ್ತಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಪ್ರತ್ಯೇಕವಾಗಿಯೇ ನಡೆದಿರುವುದು ದೋಸ್ತಿಗಳ ದೋಸ್ತಿಯಲ್ಲಿನ ಹುಳುಕನ್ನು ಬಹಿರಂಗಪಡಿಸಿದೆ.

ಸಪಕ್ಷೀಯ, ಮೈತ್ರಿಕೂಟದಲ್ಲಾಗಿರುವ ಈ ಎಲ್ಲ ಬೆಳವಣಿಗೆಯನ್ನೂ ಮೀರಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ವಿಜಯೇಂದ್ರ ಆಂಡ್ ಟೀಂ ಹಲವು ಪ್ರಯತ್ನ ನಡೆಸಿತ್ತು. ಆದರೆ, ಬಿಜೆಪಿಯ ಪಾದಯಾತ್ರೆಗೆ ಟಕ್ಕರ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರಂಭಿಸಿದ ಜನಾಂದೋಲನ ಯಾತ್ರೆಯ ಮೂಲಕ ಬಿಜೆಪಿ-ಜೆಡಿಎಸ್ ನಾಯಕರು ಏನು ಮಾತಾಡಬೇಕು ಎನ್ನುವುದನ್ನು ಒಂದು ದಿನ ಮೊದಲೇ ಕಾಂಗ್ರೆಸ್ ತೀರ್ಮಾನಿಸುವಂಥ ವಾತಾವರಣ ಸೃಷ್ಟಿಯಾಯಿತು. ಪಾದಯಾತ್ರೆಗೂ ಮುನ್ನಾದಿನ ಆರಂಭ ವಾದ ಜನಾಂದೋಲನ ಯಾತ್ರೆಯಲ್ಲಿ ದೇವೇಗೌಡ ಹಾಗೂ ಯಡಿಯೂರಪ್ಪ ಕುಟುಂಬಕ್ಕೆ ಡಿ.ಕೆ.ಶಿವಕುಮಾರ್ ಟಾರ್ಗೆಟ್ ಮಾಡಿದ್ದರು.

ಇದರ ಫಲವಾಗಿ ಪಾದಯಾತ್ರೆಯ ಉದ್ದಕ್ಕೂ ಏಕವಚನ ಪ್ರಯೋಗ, ವೈಯಕ್ತಿಕ ದಾಳಿಯಲ್ಲಿಯೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು. ಇದಿಷ್ಟೇ ಅಲ್ಲದೇ, ಬಿಜೆಪಿ, ಜೆಡಿಎಸ್ ಅವಽಯಲ್ಲಿನ ಭ್ರಷ್ಟಾಚಾರವನ್ನು ಕಾಂಗ್ರೆಸ್ ಬಯಲಿಗೆ ಎಳೆಯುವ ಮೂಲಕ ಜನರ ಕಣ್ಣಲ್ಲಿ ಪ್ರತಿಪಕ್ಷವೇ ವಿಲನ್ ರೀತಿ ಕಾಣಿಸಲು ಶುರುವಾಯಿತು. ಇದರಿಂದಾಗಿ, ಬಿಜೆಪಿ-ಜೆಡಿಎಸ್ ನಾಯಕರಿಗೆ, ತಮ್ಮ ಮೇಲೆ ಬರುತ್ತಿರುವ ಆರೋಪವನ್ನು ಸರಿಪಡಿಸಿಕೊಳ್ಳುವಲ್ಲಿಯೇ ಇಡೀ ಪಾದಯಾತ್ರೆ ಮುಕ್ತಾಯವಾಗಿತ್ತು. ಈ ಮೂಲಕ ಮುಡಾ, ವಾಲ್ಮೀಕಿ ಹಗರಣ ಸೇರಿದಂತೆ ಹಲವು ಪ್ರಕರಣದ ಬಗ್ಗೆ ಮಾತನಾಡಬೇಕಿದ್ದ ಬಿಜೆಪಿ ಈ ಎಲ್ಲವನ್ನು ಬದಿಗಿಟ್ಟು, ‘ನಮ್ಮ ಕಾಲದಲ್ಲಿ ಭ್ರಷ್ಟಾಚಾರವಾಗಿಲ್ಲ’ ಎನ್ನುವುದನ್ನು ಹೇಳುವಲ್ಲಿಯೇ ಕಾಲ ಕಳೆಯುವ ಸ್ಥಿತಿ ನಿರ್ಮಾಣ ವಾಯಿತು. ಹಾಗೆ ನೋಡಿದರೆ, ಈ ಪಾದಯಾತ್ರೆಯ ಮೂಲಕ ವಿಜಯೇಂದ್ರ ನೇತೃತ್ವದ ಬಿಜೆಪಿಯ ‘ಯುವ’ ಪಡೆ ಗಟ್ಟಿಯಾಗಲಿದೆ. ಪಕ್ಷದಲ್ಲಿರುವ ಗೊಂದಲಗಳು ನಿವಾರಣೆಯಾಗಲಿವೆ ಎಂದೇ ಅನೇಕರು ಭಾವಿಸಿದ್ದರು.

ಆದರೆ ಪಾದಯಾತ್ರೆಯ ಬಳಿಕ ಸಮಸ್ಯೆ ತಿಳಿಯಾಗುವ ಬದಲು, ಕಾರ್ಮೋಡದ ರೀತಿ ಕಾಣಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ, ಪದಾಧಿಕಾರಿಗಳು, ಪ್ರತಿಪಕ್ಷ ನಾಯಕರಿಗೆ ಮಾಹಿತಿ ನೀಡದೇ, ಮತ್ತೊಂದು ಪಾದಯಾತ್ರೆಗೆ ಬಿಜೆಪಿಯ ‘ಸಮಾನ ಮನಸ್ಕ’ ತಂಡ ಸಜ್ಜಾಗಿದೆ. ಇದು ರಾಜ್ಯ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಇತ್ತ ಬೆಂಗಳೂರು-ಮೈಸೂರು ಪಾದಯಾತ್ರೆಯ ಉದ್ಘಾಟನೆ ಮಾಡುವ ಸಮಯದಲ್ಲಿ, ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೂಡಲಸಂಗಮದಿಂದ-ಬಳ್ಳಾರಿಗೆ ಪಾದಯಾತ್ರೆಗೆ ಸಿದ್ಧತೆ ಆರಂಭಿಸಿದ್ದರು.

ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಸರಕಾರದ ವಿರುದ್ಧದ ಇನ್ನೊಂದು ಪಾದಯಾತ್ರೆಯಾಗಿದ್ದರೂ, ಆಂತರ್ಯದಲ್ಲಿ ಈ ಪಾದಯಾತ್ರೆಯನ್ನು ಕಾಂಗ್ರೆಸ್
ಸರಕಾರ ವಿರುದ್ಧ ಮಾಡುವುದಕ್ಕಿಂತ ಹೆಚ್ಚಾಗಿ ಪಕ್ಷದೊಳಗಿನ ‘ಬಂಡಾಯ ನಾಯಕತ್ವ’ವನ್ನು ಬಹಿರಂಗ ಪಡಿಸುವ ಉದ್ದೇಶವೇ ಹೆಚ್ಚಾಗಿತ್ತು. ಇದರೊಂದಿಗೆ ಏನೇ ಆದರೂ ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ ಎನ್ನುವ ನಾಯಕರ ಸಂಖ್ಯೆ ‘ಹೆಚ್ಚಾಗುತ್ತಲೇ’ ಹೋಗಿದ್ದು ರಾಜ್ಯ
ಬಿಜೆಪಿಗೆ ಸಂಕಷ್ಟವನ್ನು ತಂದಿಟ್ಟಿದೆ. ಯಾವುದೇ ಒಂದು ಪಕ್ಷ ಪಾದಯಾತ್ರೆಯನ್ನು ಆರಂಭಿಸಿದರೆ ಅದರಿಂದ ಆಗಬಹುದಾದ ‘ಲಾಭ’ದ ಬಗ್ಗೆ ಯೋಚನೆ
ನಡೆಸುತ್ತದೆ. ಪಾದಯಾತ್ರೆ ಆರಂಭಕ್ಕೂ ಮೊದಲು ಯಾರನ್ನು ಟಾರ್ಗೆಟ್ ಮಾಡಲಾಗಿದೆಯೋ ಅವರನ್ನು ಕನಿಷ್ಠ ‘ಇಕ್ಕಟ್ಟಿಗೆ’ ಸಿಲುಕಿಸುವ ಕೆಲಸ ವನ್ನಾದರೂ ಆಯಾ ಪಾದಯಾತ್ರೆಗಳು ಮಾಡಿರುವುದು ಸ್ಪಷ್ಟ.

ಆದರೆ ಇದೇ ಮೊದಲ ಬಾರಿಗೆ ಯಾರ ವಿರುದ್ಧ ಜನಾಂದೋಲನ ಸೃಷ್ಟಿಸಬೇಕು ಎನ್ನುವ ಉದ್ದೇಶದೊಂದಿಗೆ ಬಿಜೆಪಿ-ಜೆಡಿಎಸ್ ಪಾದ ಯಾತ್ರೆ ಆರಂಭಿಸಿತ್ತೋ, ಪಾದಯಾತ್ರೆಯು ಅಂತಿಮ ಗೊಳ್ಳುವ ವೇಳೆ, ಅದೇ ಪಕ್ಷ ಹಾಗೂ ನಾಯಕರೇ ಬಿಜೆಪಿ-ಜೆಡಿಎಸ್ ಮೇಲೆ ಸಾಲು ಸಾಲು ಆರೋಪಗಳನ್ನು
ಹೋರಿಸಿ, ಇಕಟ್ಟಿಗೆ ಸಿಲುಕಿಸಿದ್ದರು. ಪಾದಯಾತ್ರೆಯ ಪ್ರಹಸನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿ- ಜೆಡಿಎಸ್‌ನಲ್ಲಿ ಒಳಜಗಳ ಒಂದು ಕಡೆಯಿಂದ ಡ್ಯಾಮೇಜ್ ಮಾಡಿದರೆ, ಇನ್ನೊಂದೆಡೆ ದೋಸ್ತಿಗಳ ಪಾದಯಾತ್ರೆ ಆರಂಭಿಸುವ ಮೊದಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನಾಂದೋಲನ ಯಾತ್ರೆಗೆ ಚಾಲನೆ ನೀಡಿದರು. ಜನಾಂದೋಲನ ಯಾತ್ರೆಯ ‘ನಾಡಿ’ ಅರಿಯುವಲ್ಲಿ ಮೊದಲ ದಿನವೇ ದೋಸ್ತಿ ನಾಯಕರು ವಿಫಲವಾಗಿದ್ದರಿಂದ ಇಡೀ ಪಾದಯಾತ್ರೆ, ಕಾಂಗ್ರೆಸ್ ಹಾಕಿಕೊಟ್ಟ ‘ದಾರಿಯಲ್ಲಿ’ಯೇ ಸಾಗಿ ಮುಕ್ತಾಯಗೊಂಡಿತು ಎಂದರೆ ತಪ್ಪಾಗುವುದಿಲ್ಲ.

ಮುಂದಿನ ಮೂರೂವರೆ ವರ್ಷ ಸರಕಾರದ ವಿರುದ್ಧ ಜನಾಂದೋಲನ ಮೂಡಿಸುವ ಹೊರತಾಗಿ ಇನ್ನೇನನ್ನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿದ್ದರೂ, ಪಕ್ಷ ಸಂಘಟನೆಯನ್ನು ಗಟ್ಟಿ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಆರಂಭಿಸಿದ್ದ ಈ ಪಾದಯಾತ್ರೆ ಆರಂಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸನ್ನು ತುಂಬಿತ್ತು. ಆದರೆ ಇದನ್ನು ಬೇರುಮಟ್ಟಕ್ಕೆ ಮುಟ್ಟಿಸುವುದು ಹೇಗೆ ಎನ್ನುವ ವಿಷಯದಲ್ಲಿ ವಿಜಯೇಂದ್ರ ನೇತೃತ್ವದ ನೂತನ ಅನನುಭವಿ ಪಡೆ ಎಡವಿತೇ? ಎನ್ನುವುದು ಅನೇಕರ ಮುಂದಿರುವ ಬಹು ದೊಡ್ಡ ಪ್ರಶ್ನೆಯಾಗಿದೆ.

ಇಡೀ ಪಾದ ಯಾತ್ರೆಯಲ್ಲಿ ಪಡೆದು ಕೊಳ್ಳುವುದಕ್ಕಿಂತ, ಕಳೆದುಕೊಳ್ಳುವ ರೀತಿಯಲ್ಲಿ ‘ಹೆಜ್ಜೆ’ ಹಾಕಿದ ಬಿಜೆಪಿ ಪಡೆ ಇನ್ನಾದರೂ, ಹಿರಿಯರ ‘ಮಾರ್ಗ ದರ್ಶನ’ ಪಡೆಯಬೇಕಿದೆ. ಹತ್ತು ಚೂರಾಗಿ ಹೋಗಿರುವ ಪಕ್ಷವನ್ನು ಇನ್ನಾದರೂ ಸಂಘಟಿಸುವ ನಿಟ್ಟಿನಲ್ಲಿ ನಾಯಕರು ಚಿಂತಿಸಬೇಕಿದೆ. ಒಡೆದು
ಹೋಳಾಗಿರುವ ಪಕ್ಷವನ್ನು ಸರಿದಾ ರಿಗೆ ತರುವುದು ರಾಜ್ಯ ನಾಯಕತ್ವದಿಂದ ತೀರಾ ಕಷ್ಟದ ಕೆಲಸವಾಗಿರುವುದರಿಂದ, ಇನ್ನಾದರೂ ಪಕ್ಷದ ವರಿಷ್ಠರು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಇಲ್ಲದಿದ್ದರೆ, ಮುಂದಿನ ಕೆಲವೇ ವರ್ಷದಲ್ಲಿ ದಕ್ಷಿಣ ಭಾರತದ ಹೆಬ್ಬಾಗಿಲು ಎನಿಸಿ ಕೊಂಡಿದ್ದ ಕರ್ನಾಟಕ ದಲ್ಲಿಯೇ ಬಿಜೆಪಿ ಸಂಘಟನೆ ಛಿದ್ರವಾಗುವುದು ಸ್ಪಷ್ಟ.