Thursday, 28th November 2024

ದಿಢೀರ್‌ ಅಂಧತ್ವ: ಕಾರಣಗಳು ಹಲವು

ವೈದ್ಯ ವೈವಿಧ್ಯ

drhsmohan@gmail.com

ಚಿಕ್ಕ ವಯಸ್ಸಿನ ಶಾಲೆಯ ಉಪಾಧ್ಯಾಯರೊಬ್ಬರು ಒಂದು ಕಣ್ಣು ಒಮ್ಮಲೇ ಕಾಣಿಸುವುದಿಲ್ಲ, ಒಂದು ಭಾಗವೆಲ್ಲ ಕಪ್ಪು ಕಪ್ಪಾಗಿ ಕಾಣುತ್ತದೆ ಎಂಬ ತೊಂದರೆಯಿಂದ ನಮ್ಮ ಕ್ಲಿನಿಕ್‌ಗೆ ಬಂದರು. ಅವರನ್ನು ವಿವರವಾಗಿ ಪರೀಕ್ಷಿಸಲಾಯಿತು. ಅವರ ಈ ಲಕ್ಷಣಕ್ಕೆ ಅವರ ಬಲಗಣ್ಣಿನ ಅಕ್ಷಿಪಟಲದ ಅಪಧಮನಿಯ ಮುಚ್ಚುವಿಕೆ ಕಾರಣ ಎಂಬುದು ವಿವರವಾದ ಪರೀಕ್ಷೆಯಿಂದ ಗೊತ್ತಾಗಿ ಕೂಡಲೇ ಚಿಕಿತ್ಸೆ ಮಾಡಲಾಯಿತು.

ಆದರೆ ಆ ಹೊತ್ತಿಗಾಗಲೇ ಆಪ್ಟಿಕ್ ನರವು ರಕ್ತ ಪೂರೈಕೆಯಿಂದ ವಂಚಿತ ವಾಗಿ ಬಹಳ ಸಮಯವಾಗಿದ್ದರಿಂದ ನಿಶ್ಚೇತನ ಗೊಂಡಿತ್ತು. ಅವರಿಗೆ ಈ ಕಾಯಿಲೆಗೆ ಕಾರಣೀಕರ್ತುವಾದ ರಕ್ತನಾಳಗಳ ಬೇರೊಂದು ಕಾಯಿಲೆ ಇದ್ದುದು ಗೊತ್ತಾಗಿ ಅದಕ್ಕೂ ಚಿಕಿತ್ಸೆ ಮಾಡಲಾಯಿತು. ಆದರೂ ನಾಲ್ಕು ತಿಂಗಳುಗಳ ನಂತರ ಇದೇ ಉಪಾಧ್ಯಾಯರು ಮತ್ತೊಂದು ಕಣ್ಣು ಸಹ
ಕಾಣುವುದಿಲ್ಲ ಎಂದು ಬಂದರು. ಆಗಲೂ ವಿವರವಾದ ಪರೀಕ್ಷೆಯಿಂದ ಎಡಗಣ್ಣಿಗೂ ಬಲಗಣ್ಣಿನಂತೆ ಅಕ್ಷಿಪಟಲದ ಅಪಧಮನಿ ಮುಚ್ಚುವಿಕೆ ಆಗಿದ್ದು ದೃಢವಾಗಿ ಮಾಡಬೇಕಾದ ಚಿಕಿತ್ಸೆ ಮಾಡಿದರೂ ಅವರ ದೃಷ್ಟಿಯನ್ನು ಹಿಂತಿರುಗಿ ಪಡೆಯಲಾಗಲಿಲ್ಲ ಎಂಬುದು ತೀರಾ ಬೇಸರದ ಸಂಗತಿ.

ಇದೇ ಉಪಾಧ್ಯಾಯರು ಈಗಲೂ ದೊಣ್ಣೆ ಹಿಡಿದುಕೊಂಡು ಅತೀ ಚಿಕ್ಕ ವಯಸ್ಸಿನಲ್ಲಿಯೇ (೩೧ ವರ್ಷ) ಅಂಧತ್ವ ಹೊಂದಿ ತಮ್ಮ ಸರ್ಕಾರಿ ನೌಕರಿ ಕಳೆದುಕೊಂಡು ಪರದಾಡುತ್ತಿರುವ ಸನ್ನಿವೇಶ ತೀರಾ ದುಃಖಕರ. ಇದು ದಿಢೀರ್ ಅಂಧತ್ವ ಕಾಣಿಸಿ ಕೊಳ್ಳುವ ಒಂದು ಬಗೆ. ದಿಢೀರ್ ಅಂಧತ್ವ ಎಂದರೆ ಅಲ್ಲಿಯವರೆಗೆ ಸರಿಯಾಗಿ ಕಾಣಿಸುತ್ತಿದ್ದ ಒಂದು ಕಣ್ಣು ಒಮ್ಮೆಲೇ
ಕಾಣಿಸುವುದಿಲ್ಲ ಎಂದು ಕೆಲವೇ ಕ್ಷಣಗಳಲ್ಲಿ ಆಗುವ ಮಾರ್ಪಾಡು. ಕಣ್ಣಿನ ಈ ರೋಗ ಲಕ್ಷಣಕ್ಕೆ ಹಲವಾರು ಕಾರಣಗಳಿವೆ. ದೃಷ್ಟಿ ಪರಿಪೂರ್ಣವಾಗಿರಲು ಅಗತ್ಯವಾದ ಪಾರದರ್ಶಕ ಪಟಲ ಕಾರ್ನಿಯಾ ಅಪಘಾತಕ್ಕೀಡಾಗಿ ದಿಢೀರ್ ಪಾರದರ್ಶಕ ಗುಣ ಕಳೆದುಕೊಳ್ಳುವುದರಿಂದ ಆಗಬಹುದು.

ಅಕ್ಷಿಪಟಲ ಬೆಳಕನ್ನು ಗೃಹಿಸುವ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಆಗಬಹುದು. ದೃಷ್ಟಿ ನರವಾದ ಆಪ್ಟಿಕ್ ನರದಲ್ಲಿ ಆಗುವ ವಿವಿಧ ವ್ಯತ್ಯಾಸಗಳಿಂದ ಈ ತೊಂದರೆ ಉಂಟಾಗಬಹುದು. ಒಂದು ರೀತಿಯ ಗ್ಲೊಕೋಮ ಕಾಯಿಲೆಯಲ್ಲಿ ಈ ರೀತಿಯ ಲಕ್ಷಣ ಉಂಟಾಗಬಹುದು. ಅಕ್ಷಿಪಟಲಕ್ಕೆ ಪೂರೈಕೆ ಮಾಡುವ ರಕ್ತನಾಳಗಳು ತೊಂದರೆಗೀಡಾಗುವುದರಿಂದ ಈ ರೀತಿ ದಿಢೀರ್
ಅಂಧತ್ವ ಬರಬಹುದು ಅಥವಾ ಬೆಳಕನ್ನು ಒಳಗೆ ಸಾಗಿಸಲು ನೆರವಾಗುವ ಕಣ್ಣಿನ ಬೆಳಗಿನ ದ್ರವಗಳಾದ ಕಾಚೀರಸ (ವಿಟ್ರಿಯಸ್) ಅಥವಾ ಏಕ್ವಿಯಸ್ ದ್ರವಗಳು ವಿವಿಧ ಕಾರಣಗಳಿಂದ ಪಾರದರ್ಶಕತನವನ್ನು ಕಳೆದುಕೊಂಡು ಬೆಳಕು
ಅಕ್ಷಿಪಟಲದ ಮೇಲೆ ಕೇಂದ್ರೀಕೃತವಾಗದೇ ಅಂಧತ್ವ ಉಂಟಾಗಬಹುದು.

ಸಾಮಾನ್ಯವಾಗಿ ಅಪಘಾತದ ಕಾರಣಗಳನ್ನು ಬಿಟ್ಟರೆ ದಿಢೀರ್ ಅಂಧತ್ವ ಒಂದು ಕಣ್ಣಿನಲ್ಲಿ ಬರಲು ಕಾರಣಗಳು ಹೀಗಿವೆ :
ಅಕ್ಷಿ ಪಟಲದ ಅಪಧಮನಿಯ ಮುಚ್ಚುವಿಕೆ, ಅಕ್ಷಿ ಪಟಲದ ಅಭಿಧಮನಿಯ ಮುಚ್ಚುವಿಕೆ, ಅಕ್ಷಿ ಪಟಲ ಬೇರ್ಪಡುವಿಕೆ, ಸಂಕುಚಿತ
ಕೋನದ ಗ್ಲೊಕೋಮ, ಒಂದು ರೀತಿಯ ತಾರಕೆಯ ಸೋಂಕು, ಕಣ್ಣಿನ ನರದ ಸೋಂಕು-ಪ್ಯಾಪಿಲೈಟಿಸ್, ಕಾಚೀರಸದಲ್ಲಿ
ರಕ್ತ ಹೆಪ್ಪುಗಟ್ಟುವಿಕೆ.

ಅಕ್ಷಿಪಟಲದ ಅಪಧಮನಿಯ ಮುಚ್ಚುವಿಕೆ : ಸಾಮಾನ್ಯವಾಗಿ ೨೫-೪೦ ವರ್ಷದವರಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಒಂದು
ಕಣ್ಣಿನಲ್ಲಿ ಕಾಣಿಸಿಕೊಂಡರೂ ಮತ್ತೊಂದು ಕಣ್ಣಿಗೂ ಬರುವ ಸಾಧ್ಯತೆ ಇದೆ. ಈ ಲೇಖನದ ಆರಂಭದಲ್ಲಿ ತಿಳಿಸಿದ್ದು ಅಂತಹುದೇ
ಒಂದು ಉದಾಹರಣೆ. ಕೆಲವೊಮ್ಮೆ ವಿವಿಧ ರಕ್ತನಾಳದ ಕಾಯಿಲೆಗಳೂ ಇದಕ್ಕೆ ಕಾರಣವಾಗಬಹುದು.

ಉದಾ : ಇಳಿ ವಯಸ್ಸಿನಲ್ಲಿ ಬರುವ ಸಾಮಾನ್ಯ ರೋಗಗಳಾದ ರಕ್ತನಾಳದ ಸ್ಲೀರೋಸಿಸ್, ರಕ್ತದ ಏರುಒತ್ತಡ, ಧೂಮಪಾನಿ ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ರಕ್ತನಾಳ ಮುಚ್ಚುವಿಕೆಯಂತಹ ಕಾಯಿಲೆಯಾದ ಬರ್ಗರ‍್ಸ್ ಕಾಯಿಲೆಗಳಲ್ಲಿ ಇದು ಹೆಚ್ಚು. ಈ ರೀತಿಯ ರಕ್ತನಾಳದ ಮುಚ್ಚುವಿಕೆ ಅಕ್ಷಿಪಟಲದ ಪ್ರಧಾನ ಅಪಧಮನಿಯಲ್ಲಿಯೇ ಕಾಣಿಸಿಕೊಳ್ಳಬಹುದು ಅಥವಾ ಅದರ ಅಽನದ ಸಣ್ಣ ಸಣ್ಣ ರಕ್ತನಾಳಗಳಲ್ಲೂ ಕಾಣಿಸಿಕೊಳ್ಳಬಹುದು. ಇದರ ಪರಿಣಾಮ ಎಂದರೆ ಅಕ್ಷಿಪಟಲಕ್ಕೆ ರಕ್ತ ಪೂರೈಕೆ ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ನಿಂತು, ಅಂತಹ ಅಕ್ಷಿಪಟಲ ಸಾವನ್ನು ಹೊಂದುತ್ತದೆ.

ಅಂದರೆ ಇದರ ಅರ್ಥ ಅಂತಹ ಕಣ್ಣು ಅಂಧತ್ವ ಹೊಂದುತ್ತದೆ. ಈ ಹಂತದಲ್ಲಿ ಅಕ್ಷಿಪಟಲವನ್ನು ನೇತ್ರ ವೈದ್ಯ ಪರೀಕ್ಷಿಸಿದಾಗ
ದೊಡ್ಡ ದೊಡ್ಡ ಅಪಧಮನಿಗಳು ಸಣ್ಣ ಸಣ್ಣ ದಾರಗಳಂತೆ ಕಾಣಿಸಿಕೊಳ್ಳುತ್ತವೆ. ಸಣ್ಣ ಸಣ್ಣ ಅಪಧಮನಿಗಳು ಕಾಣಿಸಿಕೊಳ್ಳು ವುದೇ ಇಲ್ಲ. ಇದಾಗಿ ಕೆಲವೇ ಗಂಟೆಗಳಲ್ಲಿ ಅಕ್ಷಿಪಟಲ ತನ್ನ ಎಂದಿನ ಹೊಳಪನ್ನು ಕಳೆದುಕೊಂಡು ಸಂಪೂರ್ಣವಾಗಿ ಬಿಳಿಚಿಕೊಳ್ಳುತ್ತದೆ. ಅಕ್ಷಿಪಟಲದ ಮಧ್ಯಭಾಗದ ಮಚ್ಚೆ ಅಥವಾ ಮ್ಯಾಕ್ಯುಲದ ಭಾಗದಲ್ಲಿ ಕೆಂಬಣ್ಣದ ದೃಷ್ಟಿಯ ಬೊಟ್ಟಿನ ರೀತಿಯ ಚುಕ್ಕೆ ಕಾಣಿಸಿಕೊಳ್ಳುತ್ತದೆ. ತಕ್ಷಣ ಚಿಕಿತ್ಸೆ ಕೈಗೊಂಡರೆ ಸ್ವಲ್ಪ ಪ್ರಮಾಣದ ದೃಷ್ಟಿ ಉಳಿಸಬಹುದು.

ಅಕ್ಷಿಪಟಲದ ಅಭಿಧಮನಿಯ ಮುಚ್ಚುವಿಕೆ : ಸಾಮಾನ್ಯವಾಗಿ ಈ ಕಾಯಿಲೆ ವಯಸ್ಸಾದ ವ್ಯಕ್ತಿಗಳಲ್ಲಿ-ಹೃದಯ ಮತ್ತು ರಕ್ತನಾಳದ ತೊಂದರೆ ಇರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಲ್ಲಿಯವರೆಗೆ ಸ್ಪಷ್ಟವಾಗಿ ಕಾಣುತ್ತಿದ್ದ ಕಣ್ಣು ಒಮ್ಮೆಲೇ ಒಂದು ಕಣ್ಣಿನಲ್ಲಿ ಕಾಣಿಸುವುದಿಲ್ಲ ಎಂದು ಆರಂಭವಾಗಬಹುದು. ಇಲ್ಲವೇ ದೃಷ್ಟಿಯ ಯಾವುದೇ ಒಂದು ಭಾಗದಲ್ಲಿ ಕಾಣುವುದಿಲ್ಲವೆಂದು ಶುರುವಾಗುತ್ತದೆ. ಈ ಸಂದರ್ಭದಲ್ಲಿ ಪರೀಕ್ಷೆ ಮಾಡಿದಾಗ ಅಕ್ಷಿಪಟಲದ ತುಂಬಾ ರಕ್ತಸ್ರಾವದ
ತುಣುಕು ಗಳು, ಎಲ್ಲಾ ಅಭಿಧಮನಿಗಳು ವಿಪರೀತವಾಗಿ ಹಿಗ್ಗಿಕೊಂಡಿರುವುದು ಕಾಣುತ್ತದೆ.

ಒಮ್ಮೆ ಯಾವುದೇ ಒಂದು ಸೆಳೆ ಈ ರೀತಿಯ ಕಾಯಿಲೆಗೆ ತುತ್ತಾದಾಗ ದೃಷ್ಟಿಗೆ ಅಂತಹ ವಿಪರೀತವಾದ ತೊಂದರೆ ಆಗದೆ ಇರಬಹುದು. ಆದರೆ ಕ್ರಮೇಣ ಮುಚ್ಚುವಿಕೆ ಮಧ್ಯ ಭಾಗದ ಅಕ್ಷಿಪಟಲಕ್ಕೆ ಸಂಬಂಧಪಟ್ಟ ಅಭಿಧಮನಿಗೆ ಆವರಿಸಿದಾಗ ಕಣ್ಣು ಅಂಧತ್ವ ಹೊಂದುತ್ತದೆ. ಈ ಕಾಯಿಲೆಯಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದರ ಚಿಕಿತ್ಸೆ ನಿರಾಶಾದಾಯಕ. ಮತ್ತೊಂದು
ಗಂಭೀರವಾದ ಸಮಸ್ಯೆ ಎಂದರೆ ಈ ರೀತಿಯ ಅಭಿಧಮನಿಯ ಮುಚ್ಚುವಿಕೆಗೆ ಪಾತ್ರವಾದ ಕಣ್ಣು ಎರಡು ಮೂರು ತಿಂಗಳು ಗಳಲ್ಲಿ ತೀವ್ರತರವಾದ ಗಂಭೀರವಾದ ಗ್ಲೊಕೋಮಾ ಕಾಯಿಲೆಗೆ ತಿರುಗಬಹುದು. ಆಗ ಸೂಕ್ತ ಚಿಕಿತ್ಸೆ ಮಾಡಬೇಕು. ಮತ್ತೊಂದು ಕಣ್ಣನ್ನೂ ಆಗಾಗ ಪರೀಕ್ಷಿಸಬೇಕಾಗುತ್ತದೆ.

ಅಕ್ಷಿಪಟಲ ಬೇರ್ಪಡುವಿಕೆ (Retinal Detachment) : ಅಕ್ಷಿಪಟಲ ಬೇರ್ಪಡುವಿಕೆ ಎಂದರೆ ಅದರ ಹೊರಗಿನ ಮತ್ತು ಒಳಗಿನ ಪದರಗಳು ವಿವಿಧ ಕಾರಣಗಳಿಂದ ಬೇರೆಯಾಗುವ ಕ್ರಿಯೆ. ಒಂದು ಕಣ್ಣಿನಲ್ಲಿ ದಿಢೀರ್ ಅಂಧತ್ವ ಉಂಟಾಗಲು ಇದು ಒಂದು ಪ್ರಮುಖ ಕಾರಣ. ಸಮೀಪ ದೃಷ್ಟಿ (Myopia) ದೋಷ ಇರುವವರಲ್ಲಿ ಇದು ಹೆಚ್ಚು. ವಿವಿಧ ಅಪಘಾತಗಳಿಂದಲೂ ಉಂಟಾಗುವುದರಿಂದ ಗಂಡಸರಲ್ಲಿ ಹೆಚ್ಚು. ಮುಂಜಾಗ್ರತಾ ಕ್ರಮ ಅಂದರೆ ಸಮೀಪ ದೃಷ್ಟಿ ದೋಷವಿರುವವರು ಕನಿಷ್ಠ ಆರ
ತಿಂಗಳಿಗೊಮ್ಮೆ ಸೂಕ್ತ ನೇತ್ರ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು.

ಕಣ್ಣಿನ ಮುಂದೆ ಹಲವಾರು ಕಪ್ಪು ಚುಕ್ಕೆಗಳು ಇದ್ದದ್ದು ಒಮ್ಮೆಲೇ ಜಾಸ್ತಿಯಾದಾಗ ಕೂಡಲೇ ಪರೀಕ್ಷಿಸಿಕೊಳ್ಳಬೇಕು. ದೃಷ್ಟಿಯ
ಯಾವುದೇ ಭಾಗದಲ್ಲಿ ಮಿಂಚು ಹೊಡೆದಂತೆ ಅನಿಸಿದಾಗ ಅಥವಾ ಪ್ರಖರತೆ ಒಮ್ಮೆಲೇ ಕೆಲವು ಕ್ಷಣ ಜಾಸ್ತಿಯಾದಂತೆ ಅನಿಸಿದಾಗ ಕೂಡಲೇ ನೇತ್ರ ವೈದ್ಯರ ಸಲಹೆ ಅಗತ್ಯ. ಇದರ ಚಿಕಿತ್ಸೆ ಎಂದರೆ ಶಸ್ತ್ರಚಿಕಿತ್ಸೆಯೇ ಸರಿ. ಇತ್ತೀಚಿನವರೆಗೆ ಅಕ್ಷಿಪಟಲ ಬೇರ್ಪಡುವಿಕೆ ಆದರೆ ಕಣ್ಣು ಸಂಪೂರ್ಣ ಅಂಧತ್ವ ಹೊಂದುತ್ತದೆ ಎಂಬ ಭಾವನೆ ಇತ್ತು.

ಆದರೆ ಆಧುನಿಕ ವೈದ್ಯಕೀಯ ವಿಜ್ಞಾನದ ಪ್ರಗತಿಯಿಂದಾಗಿ ಇಂತಹ ನಿರಾಶಾದಾಯಕ ಸ್ಥಿತಿ ಈಗ ಇಲ್ಲ. ಹೆಚ್ಚಿನ ಕೇಂದ್ರಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ಮಾಡುವ ವ್ಯವಸ್ಥೆ ಈಗ ಲಭ್ಯವಿದೆ.

ಸಂಕುಚಿತ ಕೋನದ ಗ್ಲೊಕೋಮಾ : ದಿಢೀರನೆ ಕಣ್ಣು ಕೆಂಪಾಗುವುದು, ನೋವು ಬರುವುದು ತಲೆನೋವು, ಒಂದು ಕಣ್ಣಿನಲ್ಲಿ ಒಮ್ಮೆಲೇ ದೃಷ್ಟಿ ಇಲ್ಲದಂತಾಗುವುದು – ಈ ರೀತಿಯ ಲಕ್ಷಣಗಳಲ್ಲಿ ಕಾಣಿಸಿಕೊಳ್ಳುವ ಸಂಕುಚಿತ ಕೋನದ ಗ್ಲೋಕೋಮ ಹೆಂಗಸರಲ್ಲಿ ಹೆಚ್ಚು. ಮಾನಸಿಕ ಒತ್ತಡ ಇರುವವರಲ್ಲಿ, ಚಿಂತೆ ಹೆಚ್ಚು ಮಾಡುವವರಲ್ಲಿ ಸಹಿತ ಜಾಸ್ತಿ. ಸಾಮಾನ್ಯ ೫೦-೬೦ ವರ್ಷಗಳ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಇದರಲ್ಲಿ ಮೊದಲು ಕಣ್ಣು ಸ್ವಲ್ಪ ಮಂಜಾಗುತ್ತದೆ. ಬೆಳಗಿನ ಸುತ್ತ ಬಣ್ಣ ಬಣ್ಣದ ಚಕ್ರಗಳು ಕಾಣಿಸಿಕೊಳ್ಳಬಹುದು.

ಕೆಲವೊಮ್ಮೆ ಈತ ತಲೆನೋವು ಈ ಎಲ್ಲಾ ಲಕ್ಷಣಗಳು ಕೆಲವು ದಿನ ಆಗಾಗ ಕಾಣಿಸಿಕೊಂಡು ಒಂದು ದಿನ ಇದಕ್ಕಿದ್ದ ಹಾಗೆ ಕಣ್ಣಿನಲ್ಲಿ ವಿಪರೀತ ನೋವು, ಒಂದೇ ಬಾರಿಗೆ ಕಣ್ಣು ಕಾಣಿಸುವುದಿಲ್ಲ, ಮಿತಿಮೀರಿದ ತಲೆನೋವು, ವಾಂತಿ ಎಂದು ರೋಗಿಯು
ವೈದ್ಯನಲ್ಲಿ ಬಂದಾಗ ವಿವರವಾದ ಪರೀಕ್ಷೆಯಿಂದ ಗೊತ್ತಾಗುವ ಅಂಶ ಎಂದರೆ-ಕಣ್ಣು ವಿಪರೀತ ಕೆಂಪಾಗಿರುವುದು, ದೃಷ್ಟಿ ಕಡಿಮೆಯಾಗಿರುವುದು, ಕಣ್ಣಿನ ಒತ್ತಡ ತೀರಾ ಜಾಸ್ತಿಯಾಗಿರುವುದು.

ಸಾಮಾನ್ಯವಾಗಿ ಕಣ್ಣಿನ ಒತ್ತಡ ೧೫-೨೦ ಮಿ.ಮೀ, ಪಾದರಸ ಇರುತ್ತದೆ. ಈ ರೀತಿಯ ಗ್ಲೊಕೋಮದಲ್ಲಿ ಒತ್ತಡ ೫೦-೬೦ ರಷ್ಟಾಗಬಹುದು. ಒತ್ತಡ ಹೆಚ್ಚಾಗಲು ಕಾರಣ ಏಕ್ವಿಯಸ್ ದ್ರವ ಮುಂಭಾಗದ ಗೂಡಿನಿಂದ ಹಿಂಭಾಗದ ಗೂಡಿನ ಭಾಗಕ್ಕೆ
ಹೋಗುವ ಜಾಗದಲ್ಲಿ ಉಂಟಾಗುವ ತೀವ್ರ ಅಡಚಣೆ.

ಚಿಕಿತ್ಸೆ : ಆರಂಭದಲ್ಲಿ ಕಣ್ಣಿನ ಒತ್ತಡ ಕಡಿಮೆ ಮಾಡಿ ನಂತರ ಶಸ್ತ್ರಕ್ರಿಯೆ.

ದಿಢೀರ್ ತಾರಕೆಯ ಸೋಂಕು : ಒಮ್ಮೇಲೆ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ದಿಢೀರ್ ಕಣ್ಣು ಕಾಣುವುದಿಲ್ಲ
ಎಂದು ಆಗುವುದು- ಈ ಎಲ್ಲಾ ಲಕ್ಷಣಗಳಿಂದ ಆರಂಭವಾಗುವ ಇನ್ನೊಂದು ರೋಗ ತಾರಕೆಯ ಸೋಂಕು (ಐಜಿbಟ್ಚqsಜಿಠಿಜಿo) ಬಹಳ ಮುಖ್ಯವಾದುದು. ಹೆಚ್ಚಿನ ಸಂದರ್ಭಗಳಲ್ಲಿ ಕೆಂಗಣ್ಣಿನ ಇತರ ಕಾರಣವಾದ ಕಂಜಂಟವೈಟಿಸ್ ಎಂದು ಇದನ್ನು ತಿಳಿದುಕೊಂಡು ಸಾಮಾನ್ಯ ಜನರು ಉಪೇಕ್ಷೆ ಮಾಡುತ್ತಾರೆ. ಹಾಗಾಗಿ ಈ ರೋಗ ಕಂಡುಹಿಡಿಯುವ ಹೊತ್ತಿಗೆ ಸುಮಾರು ವಿಳಂಬವಾಗುತ್ತದೆ. ಆದುದರಿಂದ ಈ ರೋಗದ ಪತ್ತೆ ಆದಷ್ಟು ಬೇಗ ಆದರೆ ಚಿಕಿತ್ಸೆ ಮಾಡುವುದು ಬಹಳ ಸುಲಭ.

ಕಣ್ಣಿನ ನರದ ಸೋಂಕು, ಪ್ಯಾಪಿಲೈಟಿಸ್, ಆಪ್ಟಿಕ್  ನ್ಯೂರೈಟಿಸ್ : ವಿವಿಧ ಕಾರಣಗಳಿಂದ ದೃಷ್ಟಿ ನರವಾದ ಆಪ್ಟಿಕ್ ನರ ಸೋಂಕಿಗೆ ಒಳಗಾಗಬಹುದು. ಈ ಕಾರಣಗಳಲ್ಲಿ ಮುಖ್ಯವಾದವುಗಳು ಎಂದರೆ-ಮೂಗಿನ ಬದಿಗಿರುವ ಸೈನಸ್ ಭಾಗದ ಸೋಂಕು, ಹಲ್ಲುಗಳ ಸೋಂಕು, ದೇಹದ ಇತರ ಯಾವುದೇ ಭಾಗದ ಸೋಂಕು ಆಗಿರಬಹುದು. ಒಟ್ಟಿನಲ್ಲಿ ಪರಿಣಾಮ
ಎಂದರೆ ದಿಢೀರ್ ಒಂದು ಕಣ್ಣು ಕಾಣದೆ ಇರುವುದು ಎಂಬ ಲಕ್ಷಣದೊಂದಿಗೆ ಆರಂಭವಾಗುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಒಂದೇ ಕಣ್ಣು ಈ ರೀತಿ ಸೋಂಕಿಗೆ ಒಳಗಾಗುವುದಾದರೂ ಕೆಲವೊಮ್ಮೆ ಎರಡೂ ಕಣ್ಣು ಸಹಿತ
ಒಳಗಾಗಬಹುದು. ಆಗ ಕಣ್ಣಿನ ಅಕ್ಷಿಪಟಲವನ್ನು ಪರೀಕ್ಷಿಸಿದಾಗ ಕೆಲವೊಂದು ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಕಣ್ಣಿನ ನರ-ಆಪ್ಟಿಕ್ ನರದ ಭಾಗ ಉಬ್ಬಿಕೊಂಡಿರುವಂತೆ ಕಾಣಿಸಿಕೊಳ್ಳುತ್ತಿದ್ದು ಅದರ ಅಂಚುಗಳು ಮಸಕಾಗುತ್ತವೆ. ಈ ರೋಗದ
ಪ್ರಾಮುಖ್ಯತೆ ಎಂದರೆ ಆದಷ್ಟೂ ಬೇಗ ರೋಗ ಪತ್ತೆ ಹಚ್ಚುವುದರಿಂದ ಸೂಕ್ತವಾದ ಮತ್ತು ಪರಿಣಾಮಕಾರಿಯದ ಚಿಕಿತ್ಸೆ ಮಾಡಬಹುದು.

ಸಂಪೂರ್ಣ ಅಂಧತ್ವ ಹೊಂದಿದೆ ಎಂದು ಭಾವಿಸಿದ ಕಣ್ಣನ್ನೂ ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ತರಬಹುದು. ಈ ಎಲ್ಲಾ ಕಾರಣಗಳಿಂದ ದಿಢೀರ್ ಅಂಧತ್ವ ಲಕ್ಷಣ ಕಂಡಾಗ ಸರಿಯಾದ ಕಾಯಿಲೆಯ ಪತ್ತೆ ಮತ್ತು ಚಿಕಿತ್ಸೆ ತೀರಾ ಅವಶ್ಯಕ.