Saturday, 21st September 2024

ಆರಂಭಿಕ ವಿಶ್ವಾಸ, ನಂಬಿಕೆ ಮೂಡಿಸಲು ಯಶಸ್ವಿಯಾದ ಬೊಮ್ಮಾಯಿ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಇನ್ನು ಎರಡು ದಿನಗಳಾದರೆ, ಬಸವರಾಜ ಬೊಮ್ಮಾಯಿ ಅವರು ನಮ್ಮ ರಾಜ್ಯದ ಇಪ್ಪತ್ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳುಗಳಾಗುತ್ತವೆ. ಅರವತ್ತು ದಿನಗಳ ಅವಽಯಲ್ಲಿ ಒಬ್ಬ ಮುಖ್ಯಮಂತ್ರಿಯ ಅಧಿಕಾರ ವೈಖರಿ, ದಕ್ಷತೆ, ಕಾರ್ಯಶೈಲಿ, ಸಾಧನೆಗಳನ್ನು ಅಳೆಯಲು ಸಾಧ್ಯ ವಿಲ್ಲ.

ಅಲ್ಲದೇ ಅದು ಸರಿಯಾದ ಕ್ರಮವೂ ಅಲ್ಲ. ಸಾಮಾನ್ಯವಾಗಿ ಆರು ತಿಂಗಳುಗಳ ನಂತರ, ಇಂಥ ವಿಮರ್ಶನ ಕಾರ್ಯ ಮಾಡುವುದು ಸಹಜ. ಆದರೆ ಈಗಿನ ದಿನಗಳಲ್ಲಿ ಸ್ವಲ್ಪ ಮುಂಚಿತವಾಗಿ ಅಂದ್ರೆ, ನೂತನ ಸರಕಾರ ನೂರು ದಿನ ತುಂಬಿದಾಗ ಮಾಡುತ್ತಾರೆ. ಆದರೆ ಎರಡು ತಿಂಗಳು ಮುಗಿಯುತ್ತಿದ್ದಂತೆ, ಒಂದು ಸರಕಾರವನ್ನು ಒರೆಗಲ್ಲಿಗೆ ಹಚ್ಚುವುದು ತಪ್ಪೇನೂ ಅಲ್ಲ.

ಒಂದು ಸರಕಾರ ಯಾವ ದಿಕ್ಕಿಗೆ ಹೊರಟಿದೆ, ಅದರ ಆದ್ಯತೆಗಳೇನು, ಮುಖ್ಯಮಂತ್ರಿಗಳ ಆತ್ಮವಿಶ್ವಾಸದ ಮಟ್ಟ ಹೇಗಿದೆ, ಅವರು ಇಟ್ಟ ಆರಂಭಿಕ ಹೆಜ್ಜೆಗಳು ಹೇಗಿವೆ… ಈ ರೀತಿಯ ಆರಂಭದ ಸಂಗತಿಗಳಿಂದ ಒಂದು ಸರಕಾರದ ಹಣೆಬರಹವನ್ನು ಬರೆದುಬಿಡಬಹುದು. ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಿ ದ್ದಂತೆ, ಅವರ ಮುಂದಿನ ದೊಡ್ಡ ಸವಾಲೆಂದರೆ, ಸಚಿವ ಸಂಪುಟ ರಚನೆ ಕಸರತ್ತು ಮತ್ತು ಖಾತೆ ಹಂಚಿಕೆ. ಇದರಲ್ಲಿ ಬೊಮ್ಮಾಯಿ ಅವರು ಯಶಸ್ಸು ಸಾಧಿಸಿದರು. ಯಾವಾಗ ಉಪಮುಖ್ಯಮಂತ್ರಿಗಳನ್ನು ಇಟ್ಟುಕೊಳ್ಳದೇ ಸಂಪುಟ ರಚನೆಯಾಯಿತೋ, ಆಗಲೇ ಅವರು ತಮ್ಮ ಸಾರ್ವಭೌಮತ್ವವನ್ನು ಪ್ರತಿಷ್ಠಾಪಿಸಿದ ಸಂದೇಶ ಕಳಿಸಿದರು.

ಖಾತೆ ಹಂಚಿಕೆಯಲ್ಲೂ ಹೇಳಿಕೊಳ್ಳುವಂಥ ಅಪಸ್ವರ ಕೇಳಿ ಬರಲಿಲ್ಲ. ಒಂದಿಬ್ಬರ ಅಸಮಾಧಾನಗಳೂ ಕ್ರಮೇಣ ಶಮನವಾದವು. ಆದರೆ ಒತ್ತಡಕ್ಕೆ ಮಣಿದು ಖಾತೆಗಳನ್ನು ಅದಲುಬದಲು ಮಾಡಲು ಅವಕಾಶ ನೀಡಲಿಲ್ಲ. ಸಂಪುಟ ರಚನೆಯಲ್ಲಿ ಎಲ್ಲರನ್ನೂ ಸಮಾಧಾನ ಮಾಡಲು ಸಾಧ್ಯವಿಲ್ಲ. ಈಗಲೂ ಅಂಥ ಅಸಮಾಧಾನಗಳಿವೆ. ಅವುಗಳಿಗೆ ಮುಖ್ಯಮಂತ್ರಿಯೊಬ್ಬರನ್ನೇ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪಕ್ಷ, ಹೈಕಮಾಂಡ್ ಮತ್ತು ಇನ್ನಿತರ ಕಾರಣಗಳಿರುತ್ತವೆ. ಹೇಗಿದ್ದರೂ ಇನ್ನೂ ನಾಲ್ಕು ಸ್ಥಾನಗಳು ಖಾಲಿಯಿವೆ. ಮುಂಬರುವ ದಿನಗಳಲ್ಲಿ ಅವುಗಳನ್ನು ಭರ್ತಿ ಮಾಡಿ, ಆಗ ಆ ಅಸಮಾಧಾನವನ್ನೂ ಪರಿಹರಿಸುವ ಅವಕಾಶವಂತೂ ಇದ್ದೇ ಇದೆ. ಆದರೆ ಬೊಮ್ಮಾಯಿ ಅವರು ಈ ಎಲ್ಲಾ ಹಂತಗಳಲ್ಲಿ ವರಿಷ್ಠರನ್ನು ಹೇಳಿದಂತೆ ನಡೆ ದಿರುವುದರಿಂದ, ಅವರ ತಲೆನೋವನ್ನು ಕಡಿಮೆ ಮಾಡಿದೆ.

ಹಾಗೆ ನೋಡಿದರೆ, ಅವರು ಉಪಾಯವಾಗಿ ಯಾವ ಹೊಸ ತಲೆಬಿಸಿಯನ್ನು ಸೃಷ್ಟಿಸಿಕೊಂಡಿಲ್ಲ ಮತ್ತು ಹಳೆಯದನ್ನು ಮತ್ತಷ್ಟು ಬಿಸಿಯಾಗಲು ಅವಕಾಶ ನೀಡಿಲ್ಲ.
ಬೊಮ್ಮಾಯಿ ಅವರಿಗೆ æ mandate ಇಲ್ಲ ಎಂಬುದು ಸ್ಪಷ್ಟ. ಈ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯದ ಜನ, ಬೊಮ್ಮಾಯಿ ಅವರ ಮುಖ ನೋಡಿ ಮತ ನೀಡಿದ್ದರಿಂದ ಅಲ್ಲ. ಇಂಥ ಸರಕಾರವನ್ನು ನಿಭಾಯಿಸಲು ಸಾಕಷ್ಟು ಚಾಕಚಕ್ಯತೆ ಬೇಕು. ಕಾರಣ ಹಿಂದಿನ ಸರಕಾರದ ಒಳಿತು-ಕೆಡುಕಗಳ ಹೊರೆ(ಬ್ಯಾಗೇಜ್) ಯನ್ನು ಹೊರಬೇಕಾಗುತ್ತದೆ. ಹಿಂದಿನ ಸರಕಾರದ ಬಗ್ಗೆ ಇದ್ದ ಅಭಿಪ್ರಾಯಗಳನ್ನು ಸಂಪೂರ್ಣ ಅಳಿಸಿ, ಹೊಸ ಅಭಿಪ್ರಾಯ ರೂಪಿಸಬೇಕಾಗುತ್ತದೆ. ಈ ಅವಧಿಯಲ್ಲಿ
ಸಾಕಷ್ಟು ರಾಜಕೀಯ ಸ್ಥಿತ್ಯಂತರಗಳಾಗುತ್ತವೆ. ಆಗಲೇ ಹೊಸ ಸರಕಾರ ಹಳಿ ತಪ್ಪುವುದು ಮತ್ತು ಯಡವಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಬೊಮ್ಮಾಯಿ ಅವರ ರಾಜಕೀಯ ಪ್ರಬುದ್ಧತೆ ಅಗ್ನಿಪರೀಕ್ಷೆಗೊಳಗಾಗುವುದು ಇಲ್ಲೇ.

ಅವರು ಇಲ್ಲಿಯ ತನಕ, ಅಂಥ ಯಾವ ಅಪಸವ್ಯಗಳನ್ನು ಮಾಡದೇ ಇರುವುದು. ಯಡಿಯೂರಪ್ಪನವರ ಸಹಕಾರ ಮತ್ತು ಆಶೀರ್ವಾದವಿಲ್ಲದೇ ತಮ್ಮ ಹಾದಿ ಸುಗಮವಲ್ಲ ಎಂಬುದು ಅವರಿಗೆ (ಯಡಿಯೂರಪ್ಪನವರ) ಇಷ್ಟು ವರ್ಷಗಳ ಹತ್ತಿರದ ಒಡನಾಡಿಯಾಗಿ ಗೊತ್ತಿದೆ. ಯಡಿಯೂರಪ್ಪನವರ ಪಟ್ಟುಗಳೇನು ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರಗಳೇನಲ್ಲ. ಹಿರಿಯರಾಗಿ ಮತ್ತು ಇನ್ನೂ ರಾಜಕೀಯವಾಗಿ ಸಕ್ರಿಯ ರಾಗಿಯೇ ಇರುವ ಯಡಿಯೂರಪ್ಪನವರನ್ನು ಎದುರು ಹಾಕಿ ಕೊಂಡು ಅಧಿಕಾರ ನಡೆಸುವುದು ಸುಲಭವಲ್ಲ. ಮುಖ್ಯಮಂತ್ರಿ ಯಾಗಿ ಬರೀ fire fighting ಮತ್ತು damage control ಕಸರತ್ತುಗಳಲ್ಲೇ ತೊಡಗಿರ ಬೇಕಾಗುತ್ತದೆ ಎಂಬುದು ಅವರಿಗೆ ಗೊತ್ತು.

ಹೀಗಾಗಿ ಯಡಿಯೂರಪ್ಪನವರ ಜತೆ ಇಲ್ಲಿ ತನಕ ಬೊಮ್ಮಾಯಿ ಒಂದು ಉತ್ತಮ ಬಾಂಧವ್ಯ ಕಾಪಾಡಿ ಕೊಂಡಿದ್ದಾರೆ. ಹಾಗೆಂದು ಅವರು ತಮ್ಮ ಸ್ವಂತ ವ್ಯಕ್ತಿತ್ವ ವನ್ನೂ ಉಳಿಸಿಕೊಂಡಿದ್ದಾರೆ. ‘ಕಾವೇರಿ’ಯಿಂದ ಎಲ್ಲಾ ಆದೇಶಗಳು ಬರುತ್ತವೆ ಎಂಬ ಸಂದೇಶವನ್ನು ಅವರು ಕೊಟ್ಟಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಬೆನ್ನುಹುರಿ ಗಟ್ಟಿಯಾಗಿದೆ ಎಂದು ಅವರು ಪ್ರದರ್ಶಿಸಿದ್ದಾರೆ. ಈ ಮಧ್ಯೆ ಪಕ್ಷದ ಹೈಕಮಾಂಡ್ ನಾಯಕರ ಆದೇಶದಂತೆಯೂ ಹೆಜ್ಜೆ ಹಾಕುತ್ತಿದ್ದಾರೆ. ಈ ಸರಕಾರ ನಿರಾತಂಕ ವಾಗಿ ಸಾಗಲು, ಯಡಿಯೂರಪ್ಪ ಮತ್ತು ಹೈಕಮಾಂಡ್ ನಾಯಕರ ಕೃಪಾಶೀರ್ವಾದಗಳು ಸಮ-ಸಮ ಬೇಕು. ಈ ಸರಕಾರ ಅಸ್ತಿತ್ವಕ್ಕೆ ಬರುವಾಗಲೇ, ಮುಖ್ಯ ಮಂತ್ರಿಗಳಿಗೆ ಅರ್ಥವಾಗಿರುವ ಸಂಗತಿಗಳಿವು. ಹೀಗಾಗಿ ಅವರು ಈ ನಿಟ್ಟಿನಲ್ಲಿ ಅತ್ಯಂತ ಸಮಚಿತ್ತದ ಹೆಜ್ಜೆಗಳನ್ನಿಡುತ್ತಿದ್ದಾರೆ.

ಬೊಮ್ಮಾಯಿ ಬೆನ್ನಿಗೆ ಹೈಕಮಾಂಡ್ ನಾಯಕರು ನಿಂತಿರುವುದು ಸ್ಪಷ್ಟ. ಅಷ್ಟಕ್ಕೂ ಈ ಸರಕಾರ ಹೈಕಮಾಂಡ್ ಬೀಜಮಂತ್ರದಿಂದ ಹುಟ್ಟಿದ ಸರಕಾರ.  ಮುಖ್ಯ ಮಂತ್ರಿಯಾಗಿ ಒಂದೂವರೆ ತಿಂಗಳ ಅವಧಿಯಲ್ಲಿ, ಬೊಮ್ಮಾಯಿ ಮೂರು ಸಲ ದಿಲ್ಲಿಗೆ ಹೋಗಿ ಬಂದರು. ಪ್ರಧಾನಿಯವರು ಸುಮಾರು ಮುಕ್ಕಾಲು ಗಂಟೆ ಇವರಿಗೆ ಸಮಯವನ್ನು ಕೊಟ್ಟರು. ಆ ಅವಧಿಯಲ್ಲಿ ಅವರಿಗೆ ಸಾಕಷ್ಟು ‘ಬೌದ್ಧಿಕ್’ ನೀಡಿರಲಿಕ್ಕೂ ಸಾಕು. ಯಡಿಯೂರಪ್ಪನವರಿಗೆ ಸಿಗದ ಈ ‘ಕೃಪೆ’ಯನ್ನು ಪಡೆಯಲು ಬೊಮ್ಮಾಯಿ ಯಶಸ್ವಿಯಾಗಿದ್ದಾರೆ.

ಯಡಿಯೂರಪ್ಪನವರನ್ನು ಪದಚ್ಯುತಗೊಳಿಸಿದರೆ ಗಾಯತರು ಕೋಪಗೊಳ್ಳುತ್ತಾರೆ ಎಂಬ ಗುಮ್ಮವನ್ನು, ಮತ್ತೊಬ್ಬ ಲಿಂಗಾಯತ ನಾಯಕನನ್ನೇ ಮುಖ್ಯಮಂತ್ರಿ ಯಾಗಿ ಮಾಡುವ ಮೂಲಕ ಹೊಡೆದೋಡಿಸಿದ ಹೈಕಮಾಂಡ್ ನಾಯಕರ ಲೆಕ್ಕಾಚಾರಕ್ಕೆ ಪೂರಕವಾಗಿ ಬೊಮ್ಮಾಯಿ ಅವರೂ ನಡೆಯುತ್ತಿರುವುದು, ಅಧಿಕಾರ ಪಲ್ಲಟ ಸುಸೂತ್ರವಾಗಿ ನಡೆಯಲು ಕಾರಣವಾಯಿತು. ಇಂಥ ಸನ್ನಿವೇಶದಲ್ಲಿ ಬೊಮ್ಮಾಯಿ ಅವರಲ್ಲದೇ ಬೇರೆ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರೂ, ಅದು ಸಮರ್ಪಕ ನಿರ್ಧಾರ ಎಂದು ಅನಿಸಿಕೊಳ್ಳುತ್ತಿರಲಿಲ್ಲವೇನೋ? ಇವೆಲ್ಲಕ್ಕೂ ಪೂರಕ ಎಂಬಂತೆ, ಬೊಮ್ಮಾಯಿ ಅವರ ನಡೆ-ನುಡಿ ಒಬ್ಬ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕುದಾದುದಾಗಿದೆ.

ಮೂಲತಃ ಬೊಮ್ಮಾಯಿ ಅಽಕಾರದ ಪ್ರಭಾವಳಿಯನ್ನು ಹತ್ತಿರದಿಂದ, ತಮ್ಮ ಆರಂಭದ ದಿನಗಳಿಂದಲೇ ನೋಡಿದವರು. ಅವರ ತಂದೆಯವರಾದ ಎಸ್.ಆರ್. ಬೊಮ್ಮಾಯಿಯವರು ಮಂತ್ರಿಯಾದವರು, ಮುಖ್ಯಮಂತ್ರಿಯಾದವರು ಮತ್ತು ಕೇಂದ್ರದಲ್ಲಿ ಸಚಿವರಾದವರು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾದವರು. ತಂದೆಯವರ ಅಽಕಾರದ ದಿನಗಳನ್ನು ಸನಿಹದಿಂದ ನೋಡಿದ ಬಸವರಾಜ ಬೊಮ್ಮಾಯಿ ಅವರಿಗೆ, ಅವರ ತಂದೆಯವರ ನಂತರ, ಆ ಅನುಭವ ಸಿಕ್ಕಿದ್ದು ಯಡಿಯೂರಪ್ಪನವರ ಸಾಮೀಪ್ಯದಿಂದ. ಯಡಿಯೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಂದಿನಿಂದ, ಮೊನ್ನೆ ಮೊನ್ನೆಯವರೆಗೂ, ಬೊಮ್ಮಾಯಿ ಅವರು ಅವರಿಗೆ ಕೈನೆರವಾಗಿದ್ದರು.

ಹೀಗಾಗಿ ಅವರಿಗೆ ಜನ – ಸಮಸ್ಯೆ (Men-Matters) ಗಳ ಬಗ್ಗೆ ಅರಿವಿದೆ. ಅಲ್ಲದೇ ಅವರು ಬಿಜೆಪಿಯ ಎಲ್ಲಾ ಸರಕಾರಗಳಲ್ಲೂ ಮಹತ್ವವಾದ ಖಾತೆಗಳನ್ನು ನಿಭಾಯಿಸಿದವರು. ಈಗ ಅವರಿಗೆ ಆ ಅನುಭವ ಪ್ರಯೋಜನಕ್ಕೆ ಬರುತ್ತಿದೆ. ಅನೇಕರಿಗೆ ಮುಖ್ಯಮಂತ್ರಿ ಸ್ಥಾನ ತಡವಾಗಿ ಅಥವಾ ಸಿದ್ಧರಾಗುವುದಕ್ಕಿಂತ ಮುಂಚಿತವಾಗಿ ಒದಗಿ ಬರುತ್ತದೆ. ಆದರೆ ಬೊಮ್ಮಾಯಿ ಅವರಿಗೆ, ಅತ್ಯಂತ ಸಮರ್ಪಕ ಕಾಲದಲ್ಲಿ, ಅನುಭವ, ಪ್ರಬುದ್ಧತೆ ಪಕ್ವವಾಗಿರುವಾಗಲೇ ಈ ಸ್ಥಾನ ಸಿಕ್ಕಿದೆ.

ಅದರ ಜತೆಗೆ ವಯಸ್ಸು ಅವರ ಪರವಾಗಿದೆ. ಅಂದುಕೊಂಡಿದ್ದನ್ನು ಉತ್ಸಾಹದಿಂದ ಮಾಡುವ ಕ್ರಿಯಾಶೀಲ ಮನಸ್ಸು ಜಾಗೃತವಾಗಿರುವಾಗ, ಈ ಮಹತ್ವದ ಪದವಿ ಮತ್ತು ಜವಾಬ್ದಾರಿ ಅವರಿಗೆ ಒಲಿದು ಬಂದಿದೆ. ಇದು ಅವರಿಗೆ ಅಯಾಚಿತವಾಗಿ ಒದಗಿ ಬಂದಿರುವ ಪೂರಕ ಸಂಗತಿಗಳು. ಬೊಮ್ಮಾಯಿ ಅವರಿಗೆ ಇದಕ್ಕಿಂತ ಸಮರ್ಪಕ ಕಾಲದಲ್ಲಿ ಜೀವನಾಕಾಂಕ್ಷಿ ಪದವಿ ಅರಸಿ ಬರಲು ಸಾಧ್ಯವೇ ಇಲ್ಲ. ಈ ದೃಷ್ಟಿಯಿಂದ ಅವರು ಅದೃಷ್ಟಶಾಲಿಗಳೇ. ಯಾವುದೇ ಪ್ರಯತ್ನ, ಪವಾಡವಿಲ್ಲದೇ, ಕಸರತ್ತುಗಳಿಲ್ಲದೇ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ.

ಕಳೆದ ಎರಡು ತಿಂಗಳ ಅವರ ನಡೆ-ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಕಾರಾತ್ಮಕ ಸಂದೇಶಗಳನ್ನು ಕಳುಹಿಸಲು ಯಶಸ್ವಿಯಾಗಿದ್ದಾರೆ ಎಂದು ಹೇಳ ಬಹುದು. ರು ಉತ್ತಮ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುತ್ತಾರೆ ಅಂದ್ರೆ, ಅವರು ಪ್ರತಿಪಕ್ಷಗಳ ನಾಯಕರ ಕೆಲಸವನ್ನು ಹಗುರ ಮಾಡುತ್ತಾರೆ. ಪತ್ರಿಕಾ ಗೋಷ್ಠಿಗೆ ಕಡಿಮೆ ಸರಕುಗಳನ್ನು ನೀಡುತ್ತಾರೆ. ಆ ನಿಟ್ಟಿನಲ್ಲಿ ಬೊಮ್ಮಾಯಿ ಅವರು, ಪ್ರತಿಪಕ್ಷಗಳ ನಾಯಕರ ಕೆಲಸವನ್ನು ಬಹಳ ಕಮ್ಮಿ ಮಾಡಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯನವರಲ್ಲಿದ್ದ ಉತ್ಸಾಹ ಈಗ ತುಸು ಕಮ್ಮಿಯಾಗಿದೆ. ಅವರಿಗೆ ಸರಕಾರವನ್ನು ಕಚ್ಚುವ ಅವಕಾಶಗಳು ಹೆಚ್ಚು ಸಿಗುತ್ತಿಲ್ಲ.

ಬೊಮ್ಮಾಯಿ ಅವರು ಪ್ರತಿಪಕ್ಷಗಳ ಬಾಯಿಗೆ ಬೀಳದಂತೆ ಹುಷಾರಾಗಿ ಕಾಲಿಡುತ್ತಿದ್ದಾರೆ. ಈ ಎರಡು ತಿಂಗಳಲ್ಲಿ, ಅವರು ಹೆಚ್ಚು ಟೀಕೆಗೆ ಗುರಿಯಾಗುವಂಥ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಅಷ್ಟರಮಟ್ಟಿಗೆ ಪ್ರತಿಪಕ್ಷಗಳ ನಾಯಕರ ಬಾಯಿಗೆ ವಿಶ್ರಾಂತಿ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಯಾರೇ ಅಧಿಕಾರ ವಹಿಸಿಕೊಂಡಾಗ, ಅವರು ಅನುಭವಿಸುವ ಅಗ್ನಿಪರೀಕ್ಷೆಯೆಂದರೆ, ಸದನವನ್ನು ಎದುರಿಸುವುದು. ಸದನದಲ್ಲಿ ಇಡೀ ಸಂಪುಟದ ಸದಸ್ಯರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಸಹ ಪರೀಕ್ಷೆಗೊಳಗಾಗುತ್ತದೆ.

ಪ್ರತಿಪಕ್ಷಗಳ ಸದಸ್ಯರು, ನಾಯಕರು ಎತ್ತುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ, ಮೊನ್ನೆ ನಡೆದ ವಿಧಾನಮಂಡಲ ಕಾರ್ಯಕಲಾಪಗಳಲ್ಲಿ ಬೊಮ್ಮಾಯಿ ಅವರ performance ಸಮಾಧಾನಕಾರವಾಗಿತ್ತು. ಸರಕಾರದ ವಿರುದ್ಧ ಯಾವುದೇ ಪ್ರಮುಖ ಆರೋಪಗಳು ಇಲ್ಲದಿರು ವುದೂ ಅದಕ್ಕೆ ಕಾರಣವಿರಬಹುದು. ಆದರೂ ಸದನವನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸ ಅವರಲ್ಲಿತ್ತು ಎಂಬುದನ್ನು ಅವರು ಒಂದಕ್ಕಿಂತ ಹೆಚ್ಚು ಸಂದರ್ಭ ಗಳಲ್ಲಿ ಸಾಬೀತುಪಡಿಸಿದರು.

ರಾಜಕಾರಣ ಎನ್ನುವದು ಪ್ರತಿಕ್ಷಣವೂ ಬದಲಾಗುವ ಮೋಡವಿದ್ದಂತೆ. ಇಂದು ಇದ್ದ ವಾತಾವರಣ ನಾಳೆ ಇರುವುದಿಲ್ಲ. ಮುಖ್ಯಮಂತ್ರಿಯಾದವರ ಮುಂದೆ
ಪ್ರತಿದಿನವೂ ಹೊಸ ಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ನಿಭಾಯಿಸುವುದು ಅವರಿಗೆ ಅನುಗಾಲದ ಸವಾಲೇ. ಇದೇನೇ ಇರಲಿ, ಯಾವುದೇ ಸರಕಾರ ಅಸ್ತಿತ್ವಕ್ಕೆ ಬಂದಾಗ, ಜನರ ನಿರೀಕ್ಷೆಗಳು ಇದ್ದೇ ಇರುತ್ತವೆ. ಇದಕ್ಕೆ ಪೂರಕವಾಗಿ, ಸರಕಾರದ ನಡೆಗಳೂ ಇರಬೇಕು. ಬೊಮ್ಮಾಯಿ
ಸರಕಾರ ಈ ನಿಟ್ಟಿನಲ್ಲಿ ಉತ್ತಮ ಆರಂಭ ಮಾಡಿದೆ ಎಂದು ಹೇಳಬಹುದು. ತಾವು no nonsense ಮುಖ್ಯಮಂತ್ರಿ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

‘ಹೇಗಿದೆ ಬೊಮ್ಮಾಯಿ ಆಡಳಿತ?’ ಎಂದು ಯಾರಾದರೂ ಕೇಳಿದರೆ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಲು ಬಯಸದವರು, ಕೆಟ್ಟದ್ದನ್ನು ಹೇಳಲು, ಟೀಕೆಗಳನ್ನು ಮಾಡಲು ಅವಕಾಶ ಇಲ್ಲದ ರೀತಿಯಲ್ಲಿ ಅವರ ಆಡಳಿತವಿದೆ ಎಂಬುದನ್ನು ಒಪ್ಪಲೇಬೇಕು. ಆರಂಭ ಚೆನ್ನಾಗಿದ್ದರೆ, ಮುಂದಿನ ಪಯಣ ನಿರಾತಂಕ
ವಾಗಿರುತ್ತದೆ, ಸುಗಮವಾಗಿರುತ್ತದೆ. ಅಷ್ಟರಮಟ್ಟಿಗಿನ ವಿಶ್ವಾಸ ಮತ್ತು ನಂಬಿಕೆಯನ್ನು ಮೂಡಿಸಲು ಬೊಮ್ಮಾಯಿ ಯಶಸ್ವಿಯಾಗಿದ್ದಾರೆ, ನಿಸ್ಸಂದೇಹವಾಗಿ.

ಹೇರ್ ಕಟಿಂಗ್ ಕುರಿತು..

ನಮ್ಮ ಜೀವನದಲ್ಲಿ ಕೂದಲು ಕತ್ತರಿಸುವುದು (Hair Cutting) ಸಹ ಬಹಳ ಪ್ರಮುಖವಾದ ಸಂಗತಿಗಳಲ್ಲೊಂದು. ಈ ಬಗ್ಗೆ ಅನೇಕರು ವಿಪರೀತ ತಲೆ ಕೆಡಿಸಿಕೊಳ್ಳುತ್ತಾರೆ. ಇದಕ್ಕಾಗಿಯೇ Invest in your hair, it is the crown you never take off ಎಂದು ಹೇಳಿದ್ದು. ಅದರಲ್ಲೂ ಈ ಸೆಲಿ ಗೀಳು ಆರಂಭವಾದ ನಂತರ Your hair is 90 percent of your selfie ಎಂದು ಹೇಳುವುದುಂಟು.

ಹೇರ್ ಕಟಿಂಗ್ ಬಗ್ಗೆ ಕೆಲವು ಸಂಗತಿಗಳು. ಪ್ರತಿ ಯಶಸ್ವಿ ಪುರುಷನ ಹಿಂದೆ, ಒಬ್ಬಳು ಮಹಿಳೆ ಇರುತ್ತಾಳೆ ಎಂಬುದು ನಿಮಗೆ ಗೊತ್ತಿದೆ. ಅದೇ ರೀತಿ, ಪ್ರತಿ
ಸುಂದರ ಹೆಂಗಸಿನ ಹಿಂದೆ, ಒಬ್ಬಳು ಹೇರ್ ಡ್ರೆಸ್ಸೆರ್ ಇರುತ್ತಾಳೆ. ಜೀವನ ಎಂಬುದು ಕ್ಷಣಿಕ. ನಿಮ್ಮ ಪ್ರತಿ ಕೂದಲಿನಲ್ಲಿ ಪ್ರಾಣ ಇದೆ ಎಂದು ಭಾವಿಸಿ. ನಿಮ್ಮ ಕೂದಲು ಎದ್ದು ನಿಂತಿದೆಯೆಂದರೆ, ಅದನ್ನು ಯಾರು ಬೇಕಾದರೂ ಸುಲಭವಾಗಿ ಕತ್ತರಿಸಬಹುದು. ಕೂದಲು ಇಲ್ಲದವರೂ ತಮ್ಮ ತಲೆಯನ್ನು ಆಗಾಗ ನೇವರಿಸಿ ಕೊಳ್ಳುತ್ತಾರೆ.

ನಿಮ್ಮ ಜೀವನ ಪರಿಪೂರ್ಣವಾಗಿರಲು ಸಾಧ್ಯವಿದೆ. ಆದರೆ ಈ ಮಾತು ಕೂದಲಿಗೆ ಅನ್ವಯವಾಗುವುದಿಲ್ಲ. ಜೀವನದಲ್ಲಿ ತಂದೆ-ತಾಯಿಯನ್ನು ಎರವಲು ತರಲು ಸಾಧ್ಯವಿಲ್ಲ. ಆದರೆ ಕೂದಲನ್ನು ತರಬಹುದು. ಹೆಂಗಸು ತನ್ನ ಕೂದಲನ್ನು ಕತ್ತರಿಸಿಕೊಳ್ಳಲು ನಿರ್ಧರಿಸಿದ್ದಾಳೆ ಅಂದ್ರೆ, ಅವಳು ತನ್ನ ಜೀವನವನ್ನು ಬದಲಿಸಲು ತೀರ್ಮಾನಿಸಿದ್ದಾಳೆ ಎಂದರ್ಥ. ಜೀವನದಲ್ಲಿ ತಂದೆ-ಮಗನಿಗೆ ಭಿನ್ನಾಭಿಪ್ರಾಯ ಬರುವುದೇ ಕೂದಲು ಕತ್ತರಿಸುವ ವಿಷಯದಲ್ಲಿ. ಮಗ ತಂದೆಯ ಮಾತನ್ನು ಎಷ್ಟೇ ಪಾಲಿಸಿದರೂ, ಹೇರ್  ಲ್ ವಿಷಯದಲ್ಲಿ ಮಾತ್ರ ಇಬ್ಬರ ನಡುವೆ ಒಂದೇ ಅಭಿಪ್ರಾಯವಿರುವುದಿಲ್ಲ.

ನಿಮ್ಮ ಸೌಂದರ್ಯ ನಿರ್ಧಾರವಾಗುವುದು ಕೊನೆ ಹೇರ್ ಕಟ್ ನಿಂದ ಮಾತ್ರ. ನಮ್ಮ ಹೊರತಾಗಿ ನಮ್ಮ ಹೇರ್ ಸ್ಟೈಲ್ ಬೇರೆಯವರಿಗೆ ಇಷ್ಟವಾಗುವುದಿಲ್ಲ.
ಹೇರ್ ಕಟ್ ಮಾಡಿಸಿಕೊಂಡ ಒಂದು ವಾರದ ನಂತರವೇ ಕೂದಲು ಸರಿಯಾಗಿ ಸೆಟ್ ಆಗುತ್ತದೆ. ಕೂದಲು ಮತ್ತು ನೀರಿಗೆ ಸಾಮ್ಯತೆಯಿದೆ. ಇವೆರಡೂ ಸಮೃದ್ಧ ವಾಗಿ ಇದ್ದಾಗ ಯಾರಿಗೂ ಅದರ ಪ್ರಾಮುಖ್ಯ ಅರಿವಾಗುವುದಿಲ್ಲ. ಇಲ್ಲದಿದ್ದಾಗಲೇ ಪೇಚಾಡುವುದು. ಗಂಡಸರು ವಯಸ್ಸಾದಂತೆ ಸುಂದರವಾಗಿ ಕಾಣುವುದಿಲ್ಲ. ಕಾರಣ ಅವರ ಕೂದಲು ಉದುರಲಾರಂಭಿಸುತ್ತದೆ.

ವಿಗ್ ಧರಿಸುವುದರ ಒಂದು ಲಾಭವೆಂದರೆ, ಹೇರ್ ಸ್ಟೈಲ್ ಯಾವತ್ತೂ ಒಂದೇ ರೀತಿ ಇರುತ್ತದೆ ಮತ್ತು ಕೂದಲು ಯಾವತ್ತೂ ಉದುರುವುದೇ ಇಲ್ಲ. ಕೂದಲು ಇರುವವರು ಮತ್ತು ಇಲ್ಲದಿರುವವರು, ಕೂದಲಿನ ಬಗ್ಗೆ ಯೋಚಿಸುತ್ತಾರೆ. ಕನ್ನಡಿ ಮುಂದೆ ನಿಂತವರು ಕೂದಲನ್ನು ಸರಿಪಡಿಸಿಕೊಳ್ಳದೇ ಕದಲುವುದಿಲ್ಲ. ಕೂದಲು ಕತ್ತರಿಸಿಕೊಳ್ಳುವ ವಿಷಯದಲ್ಲಿ ಚಿಕ್ಕಮಗುವಿಗೂ ಮತ್ತು ದೊಡ್ಡವರಿಗೂ ಇರುವ ವ್ಯತ್ಯಾಸವೇನೆಂದರೆ, ಮೊದಲ ಬಾರಿಗೆ ಕೂದಲು ಕತ್ತರಿಸಿಕೊಳ್ಳುವಾಗ ಚಿಕ್ಕ ಮಗು ಅಳುತ್ತದೆ. ಇದೇ ಬೇಸರ ದೊಡ್ಡವರಿಗೆ ಕೊನೆಯಲ್ಲಾಗುತ್ತದೆ. ಕೆಲವರಿಗೆ ಹೇಳಲು, ತೋರಿಸಿಕೊಳ್ಳಲು ಏನೂ ಇರುವುದಿಲ್ಲ. ಅಂಥವರು ಪದೇ ಪದೆ ತಮ್ಮ ಕೂದಲನ್ನು ಸರಿಪಡಿಸಿಕೊಳ್ಳುತ್ತಿರುತ್ತಾರೆ.