Thursday, 28th November 2024

ಕರುಳಿನ ಜೀವಿ ಮೆದುಳಿನಲ್ಲಿ ಪ್ರಭಾವ ಬೀರುವುದೇ ?

ವೈದ್ಯ ವೈವಿಧ್ಯ

drhsmohan@gmail.com

ಈ ರೀತಿಯ ಕರುಳಿನ ಬದಲಾವಣೆಗೆ ಬಳಸುವ ಬ್ಯಾಕ್ಟೀರಿಯಾಗಳು ಅಥವಾ ಔಷಧಿಗಳು ಕೆಲವು ವ್ಯಕ್ತಿಗಳ ಮೆದುಳಿನಲ್ಲಿ ಬದಲಾವಣೆ ತರಲು ಶಕ್ಯವಾಗುತ್ತವೆ, ಮತ್ತೆ ಕೆಲವು ವ್ಯಕ್ತಿಗಳಲ್ಲಿ ಈ ರೀತಿಯ ನಿರೀಕ್ಷಿತ ಬದಲಾವಣಿ ಕಂಡು ಬರುವುದಿಲ್ಲ. ಸಂಶೋಧಕರು ಕರುಳು ಮತ್ತು ಮೆದುಳಿನ ಸ್ಕ್ಯಾನಿಂಗ್ ಮಾಡುವ ಅಧ್ಯಯನವನ್ನು ಕೈಗೊಳ್ಳುವ ಸನ್ನಾಹದಲ್ಲಿದ್ದಾರೆ.

ನಮ್ಮ ದೇಹದ ಯಾವುದೋ ಒಂದು ಭಾಗದ ಸಣ್ಣ ಬದಲಾವಣೆ ದೇಹದ ಮತ್ತೆಲ್ಲೋ ಇರುವ ಅಂಗದಲ್ಲಿ ಗಮನಾರ್ಹವಾದ ಪ್ರಭಾವ ಬೀರುತ್ತದೆ. ಹಲವಾರು ಅಧ್ಯಯನಗಳಿಂದ ಇದು ದೃಢೀಕರಣಗೊಂಡಿದೆ. ನಮ್ಮ ಕರುಳಿನ ಭಾಗದಲ್ಲಿರುವ ಸಣ್ಣ ಸಣ್ಣ ಸೂಕ್ಷ್ಮ ಜೀವಿಗಳು ನಮ್ಮ ಮೆದುಳಿನ ಮೇಲೆ ದಟ್ಟವಾದ ಪ್ರಭಾವ ಬೀರುತ್ತವೆ. ಇದರ ಸ್ಪಷ್ಟವಾದ ಚಿತ್ರಣ, ದೃಢೀಕರಣ ಸರಿಯಾಗಿ ಇನ್ನೂ ಲಭ್ಯವಾಗಿಲ್ಲ.

ದೇಹದ ಪ್ರತಿರೋಧ ವ್ಯವಸ್ಥೆ, ಕರುಳಿನಿಂದ ಮೆದುಳಿಗೆ ಸಂಪರ್ಕ ಕಲ್ಪಿಸುವ ವೇಗಸ್ ನರದ ಶಾಖೆಗಳು, ದೇಹದ ಜೀಣಾಂಗ ವ್ಯೂಹದ ಕರ್ತವ್ಯವನ್ನು ಪ್ರಭಾವಿಸುವ ನರಗಳ ಮೂಲಕ – ಹೀಗೆ ಇವೆರಡರ ಮಧ್ಯೆ ಸಂಪರ್ಕ ಮತ್ತು ಪ್ರಭಾವವಿರಬಹುದು ಎಂದು ಹಲವು ಅಧ್ಯಯನಗಳು ತಿಳಿಸುತ್ತವೆ. ಇವೆರಡು ಮಂಡಲಗಳ ಸಂಬಂಧ ಸರಿಯಾಗಿ ಅರ್ಥವಾದರೆ ಅದರ ಪರಿಣಾಮ ಬಹಳ ಅನುಕೂಲಕರ ಎಂದು ತಜ್ಞರ ಅಭಿಪ್ರಾಯ.

ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ – ಬೇರೆ ಸೂಕ್ಷ್ಮ ಜೀವಿಗಳನ್ನು ಹೊಸದಾಗಿ ಸೇರಿಸಿ ಅಥವಾ ಈಗಾಗಲೇ ಅಲ್ಲೇ ಇರುವ ಕೆಲವು ಸೂಕ್ಷ್ಮ ಜೀವಿಗಳನ್ನು ಹೆಚ್ಚಾಗುವಂತೆ ಪ್ರೇರೇಪಿಸಿ ಮನುಷ್ಯನ ಮಾನಸಿಕ
ತೊಂದರೆಗಳಾದ ಆತಂಕ ಪರಿಸ್ಥಿತಿ ಮತ್ತು ಮಾನಸಿಕ ಖಿನ್ನತೆ ಇವುಗಳನ್ನು ಚಿಕಿತ್ಸೆ ಮಾಡಬಹುದು ಎಂದು ವೈದ್ಯ ವಿಜ್ಞಾನಿ ಗಳು ಆಶಾಭಾವನೆ ಇಟ್ಟುಕೊಂಡಿದ್ದಾರೆ. ಈ ರೀತಿಯ ಔಷಧಗಳಿಗೆ ಸೈಕೋಬಯಾಟಿಕ್ಸ್ ಎನ್ನಲಾಗುತ್ತದೆ. ಔಷಧಿಗಳು ಮತ್ತು ಸೈಕೋಥೆರಪಿಗೆ ಒಳಗಾಗುವ ಮೇಲಿನ ಗುಂಪಿನ ಹಲವು ರೋಗಿಗಳು ಎಂದಿನ ರೀತಿಯ ಚಿಕಿತ್ಸೆಗೆ ಬಗ್ಗುವುದಿಲ್ಲ.

ಅಂಥವರಲ್ಲಿ ಕರುಳಿನ ಬ್ಯಾಕ್ಟೀರಿಯಾಗಳಲ್ಲಿ ಬದಲಾವಣೆ ಮಾಡುವುದರಿಂದ ಎಂದಿನ ಚಿಕಿತ್ಸೆಗೆ ಪೂರಕವಾಗಿ ಇದು ಪ್ರಯೋಜನವಾಗಬಹುದೇ ಎಂದು ಪಾರ್ಕ್ ವಿಶ್ವವಿದ್ಯಾನಿಲಯದ ಪ್ರೊ. ಜಾನ್ ಕ್ರಯಾನ್ ಪ್ರಯತ್ನಿಸುತ್ತಿದ್ದಾರೆ. ಸೂಕ್ಷ್ಮ ಜೀವಿಗಳನ್ನು ಹೊಂದಿರದ ಇಲಿಗಳ ಕರುಳಿಗೆ ಒಳ್ಳೆಯ ರೀತಿಯ ಬ್ಯಾಕ್ಟೀರಿಯಾಗಳನ್ನು ಪೂರೈಸಲಾಯಿತು. ಆನಂತರ ಅವುಗಳಲ್ಲಿ ಒತ್ತಡದ ಪರಿಸ್ಥಿತಿ ಆತಂಕದ ಸನ್ನಿವೇಶ ಮತ್ತು ಖಿನ್ನತೆ ಕಡಿಮೆಯಾಗಿರುವುದನ್ನು ಗುರುತಿಸಲಾಯಿತು. ಆದರೆ ಇಲಿಯ ದೇಹದ ಸೂಕ್ಷ್ಮ ಜೀವಿಗಳಿಗೂ ಮಾನವ ದೇಹದ ಸೂಕ್ಷ್ಮ ಜೀವಿಗಳಿಗೂ ವ್ಯತ್ಯಾಸವಿರುವುದರಿಂದ ಅಲ್ಲಿನ ಎಲ್ಲಾ ಸಂಗತಿ ಇಲ್ಲಿಯೂ ಹೊಂದುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಇನ್ನೊಬ್ಬ ನರರೋಗ ತಜ್ಞ ವೈದ್ಯ ಡಾ. ಭೀಷ್ಮ ದೇಬ ಚಕ್ರವರ್ತಿ ಅಭಿಪ್ರಾಯ ಪಡುತ್ತಾರೆ.

ಆದರೂ ಇತ್ತೀಚಿನ ಹಲವು ಅಧ್ಯಯನಗಳು ಕರುಳಿನ ಸೂಕ್ಷ್ಮ ಜೀವಿಗಳು ಮೆದುಳಿನ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ ಎನ್ನುತ್ತವೆ. ಪ್ರೊಬಯಾಟಿಕ್ಸ್ ಗುಂಪಿಗೆ ಸೇರಿದ ಬೈಫಿಡೋ ಬ್ಯಾಕ್ಟೀರಿಯಾ ಮತ್ತು ಲ್ಯಾಕ್ಟೋಬ್ಯಾಸಿಲ್ಲೈ – ದೇಹದ ದೃಷ್ಟಿಯಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು. ಇವುಗಳನ್ನು ಸೇವಿಸುವುದರಿಂದ ವ್ಯಕ್ತಿಯ ಮಾನಸಿಕ ಒತ್ತಡವು ಗಮನಾರ್ಹವಾಗಿ ಕಡಿಮೆಯಾ ಗುತ್ತದೆ ಎನ್ನಲಾಗಿದೆ. ಹಾಗೆಯೇ ಇದು ವ್ಯಕ್ತಿಯ ಮಾನಸಿಕ ಉದ್ವೇಗವನ್ನು ನಿಯಂತ್ರಣದಲ್ಲಿಡುತ್ತದೆ. ಮೇಲೆ ತಿಳಿಸಿದ ಪ್ರೊಬಯಾಟಿಕ್ಸ್ ಗಳನ್ನು ಸೇವಿಸುವುದರಿಂದ ವ್ಯಕ್ತಿಯ ಋಣಾತ್ಮಕ ಅಥವಾ ನೆಗೆಟಿವ್ ಮೂಡ್‌ನ ಪರಿಸ್ಥಿತಿಯನ್ನು ಗಮನಾರ್ಹ ವಾಗಿ ಕಡಿಮೆ ಮಾಡುತ್ತದೆ ಎಂದು ಮತ್ತೊಂದು ಅಧ್ಯಯನ ತಿಳಿಸುತ್ತದೆ.

ಬೈಫಿಡೋಬ್ಯಾಕ್ಟೀರಿಯಂ ಲಾಂಗಮ್ ಎಂಬ ಬ್ಯಾಕ್ಟೀರಿಯಾವನ್ನು ಇರಿಟಬಲ್ ಬವೆಲ್ ಸಿಂಡ್ರೋಮ್ ಎಂಬ ಕರುಳಿನ ದೀರ್ಘ ಕಾಲೀನ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಕೊಟ್ಟಾಗ ಅವರ ಮಾನಸಿಕ ಖಿನ್ನತೆ ಗಮನಾರ್ಹವಾಗಿ ಕಡಿಮೆಯಾಗಿರುವ ವಿಚಾರ ಇನ್ನೊಂದು ಅಧ್ಯಯನದಲ್ಲಿ ಕಂಡು ಬಂದಿದೆ. ಹಾಗೆಯೇ ನರಗಳ ಡಿಜನರೇಟಿವ್ ಕಾಯಿಲೆ ಏಮಯೋಟ್ರೋಪಿಕ್ ಲ್ಯಾಟರಲ್ ಸ್ಲೀರೋಸಿಸ್‌ನ ಮೇಲೆ ಕರುಳಿನ ಸೂಕ್ಷ್ಮ ಜೀವಿಗಳ ಪ್ರಭಾವ ಗೋಚರಿಸಿದೆ. ಸೂಕ್ಷ್ಮವಾದ ಮತ್ತು ಅನುಕೂಲಕರ ಕರುಳಿನ ಸೂಕ್ಷ್ಮಜೀವಿಗಳು ಇಲ್ಲದಿದ್ದಾಗ ಈ ಕಾಯಿಲೆ ಶೀಘ್ರವಾಗಿ ಮುಂದುವರಿದು ವ್ಯಕ್ತಿಯ ನರಗಳ ದೌರ್ಬಲ್ಯತೆ ಬಹಳಷ್ಟು ಜಾಸ್ತಿ ಯಾಗುವುದು ಗಮನಕ್ಕೆ ಬಂದಿದೆ.

ಹಾಗೆಯೇ ಅಕ್ಕರ್ ಮಾನ್ಸಿಯಾ ಮ್ಯೂಸಿನಿಫಿಲ ಎಂಬ ಕರುಳಿನ ಸ್ನೇಹಿ ಬ್ಯಾಕ್ಟೀರಿಯಾವನ್ನು ಈ ಕಾಯಿಲೆಯ ವ್ಯಕ್ತಿಗಳಿಗೆ ಕೊಟ್ಟಾಗ ಅವರ ವರ್ತನೆ ಧನಾತ್ಮಕವಾಗಿ ವೃದ್ಧಿಸಿದೆ. ಅಲ್ಲದೆ ಅವರ ವಿಟಮಿನ್ ಬಿ ೩ ಯ ಅಂಶ ದೇಹದಲ್ಲಿ ಅಧಿಕವಾಗಿ
ಮಾಂಸಖಂಡಗಳ ಶಕ್ತಿ ಗಮನಾರ್ಹವಾಗಿ ವೃದ್ಧಿಯಾಗಿರುವುದು ಕಂಡು ಬಂದಿದೆ. ಹಾಗೆಯೇ ಎಎಲ್‌ಎಸ್ ರೋಗಿಗಳಲ್ಲಿ ವಿಟಮಿನ್ ಬಿ ೩ ಅಂಶ ಗಮನಾರ್ಹವಾಗಿ ಕಡಿಮೆ ಇರುವುದು ಕಂಡುಬಂದಿದ್ದು ಆ ವಿಟಮಿನ್ ಅನ್ನು ಈ ಕಾಯಿಲೆಯ
ವ್ಯಕ್ತಿ ಗಳ ದೇಹಕ್ಕೆ ಪೂರೈಸಲು ಚಿಂತನೆ ನಡೆದಿದೆ.

ಕರುಳಿನ ಈ ಸೂಕ್ಷ್ಮಜೀವಿಗಳ ಸಂಕೇತಗಳ ಹೊರತಾಗಿ ಮೆದುಳಿನ ಕರ್ತವ್ಯ ಪೂರ್ಣವಾಗುವುದಿಲ್ಲ, ಹಾಗಾಗಿ ಆ ಜೀವಿಗಳು ಮೆದುಳಿನ ಬರೀ ಮಿತ್ರರಲ್ಲ ಮೆದುಳಿಗೆ ಲಾಭ ತರುವ ಮಿತ್ರರು ಎಂದು ಮೊದಲು ಉಲ್ಲೇಖಿಸಿದ ಪ್ರೊ. ಕ್ರಯಾನ್ ಅಭಿಪ್ರಾಯ ಪಡುತ್ತಾರೆ. ಯಾವ ಸೂಕ್ಷ್ಮಜೀವಿಗಳು ಯಾವ ಕಾಯಿಲೆಯಲ್ಲಿ ಪರಿಣಾಮ ಬೀರುತ್ತವೆ, ಪ್ರಭಾವ ಬೀರುವುದು  ಸೂಕ್ಷ್ಮಜೀವಿ ಗಳೇ ಹೌದಾ ಅಥವಾ ಅವುಗಳು ಉತ್ಪನ್ನ ಮಾಡುವ ರಾಸಾಯನಿಕ ವಸ್ತುಗಳು ಪ್ರಭಾವ ಬೀರುವುದೋ ಎಂಬ ಪ್ರಶ್ನೆ ಈ
ಹಂತದಲ್ಲಿ ಮೂಡುತ್ತದೆ. ಕ್ರಯಾನ್‌ರ ಪ್ರಕಾರ ಹಲವಾರು ರಾಸಾಯನಿಕಗಳು ಪ್ರಭಾವ ಬೀರುತ್ತವೆ.

ಜೀವನದ ಆರಂಭದ ಹಂತದಲ್ಲಿ ಪ್ರಭಾವ ಬೀರುವ ರಾಸಾಯನಿಕಗಳು ವ್ಯಕ್ತಿ ಮುಂದೆ ವಯಸ್ಕನಾದಾಗ ಈ ಮಟ್ಟದ ಪ್ರಭಾವ ಹೊಂದಿಲ್ಲದೇ ಇರಬಹುದು. ಅಲ್ಲದೆ ಇದರಲ್ಲಿ ಸರಿಯಾದ ಕಾರ್ಯಕಾರಣ ಸಂಬಂಧ ವಿಜ್ಞಾನಿಗಳಿಗೆ ಇನ್ನೂ ಅರ್ಥವಾಗಿಲ್ಲ.
ಮಾನಸಿಕ ಖಿನ್ನತೆ ಇರುವ ವ್ಯಕ್ತಿಗಳು ದಿಢೀರ್ ತಮ್ಮ ಆಹಾರ ಪದ್ಧತಿಯನ್ನು ಬದಲಿಸಬಹುದು ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಮನಶಾಸ್ತ್ರ ವಿಭಾಗದ ನರರೋಗ ತಜ್ಞ ಡಾ. ಫಿಲಿಪ್ ಬರ್ನೆಟ್ ಅಭಿಪ್ರಾಯ ಪಡುತ್ತಾರೆ.

ಅಂಥವರು ಮಾನಸಿಕವಾಗಿ ತೀವ್ರ ಖಿನ್ನತೆ ಹೊಂದಿದ್ದರೆ ಅವರು ಆಹಾರ ಸೇವಿಸುವ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಾರೆ ಎಂದು ಡಾ. ಬರ್ನೆಟ್ ನುಡಿಯುತ್ತಾರೆ. ಕರುಳಿನಲ್ಲಿನ ಸೂಕ್ಷ್ಮಜೀವಿಗಳ ರೀತಿ ಪ್ರಮಾಣ ಮತ್ತು ಪ್ರಭೇದ ಗಳು ಭಿನ್ನ ವ್ಯಕ್ತಿಗಳಲ್ಲಿ ಭಿನ್ನ ರೀತಿಯದಾಗಿರುತ್ತವೆ. ವ್ಯಕ್ತಿಯ ಆಹಾರ ಕ್ರಮ, ಕರುಳಿನಲ್ಲಿನ ಭಿನ್ನ ರೀತಿಯ ವಾತಾವರಣ, ಕರುಳಿನಲ್ಲಿನ ಉರಿಯೂತ, ಅದರೊಳಗಿನ ಸೂಕ್ಷ್ಮ ಮ್ಯೂಕಸ್ ಪದರದಲ್ಲಿ ಆಗುವ ತರಹೇವಾರಿ ವ್ಯತ್ಯಾಸ ಗಳು, ಸೂಕ್ಷ್ಮಜೀವಿ ಗಳಲ್ಲಿನ ರಾಸಾಯನಿಕಗಳ ಮಟ್ಟ, ಎಲ್ಲದಕ್ಕಿಂತ ಮಿಗಿಲಾಗಿ ವ್ಯಕ್ತಿ ವ್ಯಕ್ತಿ ಗಳಲ್ಲಿರುವ ಜೆನೆಟಿಕ್ ವ್ಯತ್ಯಾಸಗಳು-ಈ ಎಲ್ಲಾ ಕಾರಣಗಳಿಂದ ಭಿನ್ನ ವ್ಯಕ್ತಿಗಳ ಕರುಳಿನಲ್ಲಿನ ಸೂಕ್ಷ್ಮ ಜೀವಿಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.

ಮತ್ತೊಂದು ಆಶ್ಚರ್ಯಕರವಾದ ವಿಚಾರವನ್ನು ತಮ್ಮ ಅಧ್ಯಯನದಲ್ಲಿ ಕಂಡುಕೊಂಡದ್ದನ್ನು ಪ್ರೊ.ಕ್ರಯಾನ್ ತಿಳಿಸುತ್ತಾರೆ. ಚಿಕ್ಕ ವಯಸ್ಸಿನ ಪ್ರಾಣಿಗಳ ಕರುಳಿನಿಂದ ಸೂಕ್ಷ್ಮಜೀವಿಗಳನ್ನು ತೆಗೆದು ಅದನ್ನು ವಯಸ್ಸಾದ ಪ್ರಾಣಿಗಳಿಗೆ ಕೊಟ್ಟಾಗ ಆ ಪ್ರಾಣಿಯ ಮೆದುಳಿನಲ್ಲಿ ವಯಸ್ಸಾಗುವಾಗ ಕಂಡುಬರುವ ಬದಲಾವಣೆಗಳು ಅದೃಶ್ಯವಾಗಿ ಚಿಕ್ಕ ವಯಸ್ಸಿನ ರೀತಿಯಲ್ಲಿ ಮೆದುಳಿನಲ್ಲಿನ ಅಂಗಾಂಶಗಳು ಕಂಡುಬಂದವು. ಈ ರೀತಿಯ ಬದಲಾವಣೆ ಮನುಷ್ಯರಲ್ಲಿ ಕಂಡುಬರುವುದೇ ಎಂದು ತಿಳಿಯಲು ಹಲವು ಅಧ್ಯಯನಗಳು ನಡೆಯುತ್ತಿವೆ.

ಕ್ರಯಾನ್ ಮತ್ತು ಸಂಗಡಿಗರು ಕಳೆದ ವರ್ಷ ಕೈಗೊಂಡ ಒಂದು ಸಂಶೋಧನೆ ಇಲ್ಲಿ ಉಲ್ಲೇಖನಿಯ. ಸರಿಯಾಗಿ ಹುದುಗು ಬಂದ ಪದಾರ್ಥಗಳು, ಇಡಿಯ ಕಾಳುಗಳು, ಸೇಬು, ಬಾಳೆಹಣ್ಣು – ರೀತಿಯ ಹಣ್ಣುಗಳು, ಈರುಳ್ಳಿ ಮತ್ತು ಕೆಲವು ತರಕಾರಿ ಗಳು ಇವನ್ನೆಲ್ಲ ಸೇರಿಸಿ ಆಹಾರವನ್ನು ಸಿದ್ಧಪಡಿಸಿದರು. ಮುಖ್ಯ ಉದ್ದೇಶ ನಾರಿನ ಪದಾರ್ಥ ಒಳಗೊಂಡ ಆಹಾರ ಸೇವಿಸಿ ದಾಗ ಕರುಳಿನಲ್ಲಿ ಒಳ್ಳೆಯ ರೀತಿಯ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುತ್ತವೆ. ಈ ರೀತಿಯ ಆಹಾರವನ್ನು ನಾಲ್ಕು ವಾರ ಸೇವಿಸಿದ ವ್ಯಕ್ತಿಗಳಲ್ಲಿ ಮಾನಸಿಕ ಒತ್ತಡದ ಪ್ರಮಾಣ ಎಂದಿನಂತೆ ಸಹಜ ಆಹಾರ ಸೇವಿಸುವ ವ್ಯಕ್ತಿಗಳಿಗಿಂತ ತುಂಬಾ ಕಡಿಮೆ ಪ್ರಮಾಣದಲ್ಲಿತ್ತು. ಎರಡು ಗುಂಪಿನ ವ್ಯಕ್ತಿಗಳ ಕರುಳಿನಲ್ಲಿನ ಸೂಕ್ಷ್ಮಜೀವಿಗಳ ರೀತಿಯಲ್ಲಿ ಸಮಾನತೆ ಇದ್ದರೂ ಅವು ಉತ್ಪನ್ನ ಮಾಡುವ ರಾಸಾಯನಿಕ ವಸ್ತುಗಳ ರೀತಿಯಲ್ಲಿ ತುಂಬಾ ಭಿನ್ನತೆ ಇತ್ತು.

ಕರುಳಿನಲ್ಲಿನ ಬ್ಯಾಕ್ಟೀರಿಯಾಗಳನ್ನು ಸೂಕ್ತ ವಿಧಾನಗಳಿಂದ ಬದಲಿಸುವುದರಿಂದ ಮಾನಸಿಕ ಆರೋಗ್ಯಕ್ಕೆ ಲಾಭವಿದೆಯೇ ಎಂಬುದನ್ನು ತಿಳಿಯಲು ಬರ್ನೆಟ್ ಮತ್ತು ಸಹೋದ್ಯೋಗಿಗಳು ಪ್ರಯೋಗ ಕೈಗೊಳ್ಳುತ್ತಿದ್ದಾರೆ. ಮಾನಸಿಕ ಸಮಸ್ಯೆ ಇರುವ ಕೆಲವು ವ್ಯಕ್ತಿಗಳಲ್ಲಿ ಪ್ರಿಬಯೋಟಿಕ್ ಔಷಧಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕ್ರಮ ಮತ್ತು ವೇಗಗಳಲ್ಲಿ ಬಹಳಷ್ಟು ಉತ್ತಮ ಬೆಳವಣಿಗೆ ಗಮನಿಸಿದ್ದಾರೆ. ಬಹುಶಃ ಮಾನಸಿಕ ಸಮಸ್ಯೆಗೆ ವ್ಯಕ್ತಿಗಳು ಸೇವಿಸುತ್ತಿರುವ ಔಷಧಗಳಿಗೆ ಅವರ ಮೆದುಳು ಸ್ಪಂದಿಸುವ ರೀತಿ ಉತ್ತ ಮವಾಗಿದ್ದರಿಂದ ಈ ಪರಿಣಾಮ ಉಂಟಾಗುತ್ತದೆ.

ಅಮೆರಿಕಾದ ಇನ್ನೊಂದು ಇತ್ತೀಚಿನ ಅಧ್ಯಯನದಲ್ಲಿ ಆಟಿಸಂ ಕಾಯಿಲೆ ಇರುವ ಹದಿಹರೆಯದವರಿಗೆ ಈ ವ್ಯಕ್ತಿಗಳ ಕರುಳಿ ನಲ್ಲಿನ ರಾಸಾಯನಿಕಗಳ ಬದಲಾವಣೆಗೆ ನಿರ್ದಿಷ್ಟ ಔಷಧಿ ಬಳಸಿದರು. ೮ ವಾರಗಳ ಚಿಕಿತ್ಸೆಯ ನಂತರ ಅವರಲ್ಲಿ ಆತಂಕ ಮತ್ತು ಚಿಂತೆಯ ಪ್ರಮಾಣ ಹಾಗೂ ಆ ವ್ಯಕ್ತಿಗಳ ಸಿಡಿಮಿಡಿಗುಡಿ ಯುವಿಕೆ ತೀವ್ರ ರೀತಿಯಲ್ಲಿ ಕಡಿಮೆ ಯಾಯಿತು.
ಈ ಸಂಶೋಧಕರು ಮತ್ತೊಂದು ಅಂಶ ಕಂಡುಕೊಂಡಿದ್ದಾರೆ. ಈ ರೀತಿಯ ಕರುಳಿನ ಬದಲಾವಣೆಗೆ ಬಳಸುವ ಬ್ಯಾಕ್ಟೀರಿಯಾ ಗಳು ಅಥವಾ ಔಷಧಿಗಳು ಕೆಲವು ವ್ಯಕ್ತಿಗಳ ಮೆದುಳಿನಲ್ಲಿ ಬದಲಾವಣೆ ತರಲು ಶಕ್ಯವಾಗುತ್ತವೆ, ಮತ್ತೆ ಕೆಲವು ವ್ಯಕ್ತಿಗಳಲ್ಲಿ ಈ ರೀತಿ ಯ ನಿರೀಕ್ಷಿತ ಬದಲಾವಣಿ ಕಂಡು ಬರುವುದಿಲ್ಲ.

ಮೊದಲು ತಿಳಿಸಿದ ಚಕ್ರಬರ್ತಿ ಎಂಬ ಸಂಶೋಧಕರು ಕರುಳು ಮತ್ತು ಮೆದುಳಿನ ಸ್ಕ್ಯಾನಿಂಗ್ ಮಾಡುವ ಒಂದು ಬೃಹತ್ ಅಧ್ಯಯನವನ್ನು ಕೈಗೊಳ್ಳುವ ಸನ್ನಾಹದಲ್ಲಿದ್ದಾರೆ. ಅದು ಗ್ಯಾಮಾ ಅಮೈನೋಬ್ಯುಟೆರಿಕ್ ಆಮ್ಲವೆಂಬ (ಗ್ಯಾಬಾ) ನರಗಳ ವಾಹಕಕ್ಕೆ ಮುಖ್ಯ ಒತ್ತು ಕೊಟ್ಟು ಅವರ ಸಂಶೋಧನೆ ತೊಡಗಲಿದೆ. ಈ ವಾಹಕ ಮೆದುಳಿನಲ್ಲಿ ಉತ್ಪನ್ನವಾಗುತ್ತದೆ,
ಬಾಲ್ಯದ ನರಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೆ ಕೆಲವೊಂದು ಕ್ರಿಯೆಗಳು ಒಮ್ಮೆಲೇ ನಿಲ್ಲುವಂತೆ ಮಾಡಲು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ.

ಉದಾ: ಒಮ್ಮೆಲೇ ಕಾರಿನ ಬ್ರೇಕ್ ಹಾಕುವುದು. ಈ ಗ್ಯಾಬಾ ಮಟ್ಟದಲ್ಲಿ ವ್ಯತ್ಯಾಸವಾದಾಗ ಅಂತಹ ವ್ಯಕ್ತಿ ಸ್ಕಿಜೋಫ್ರೀನಿಯಾ,
ಆಟಿಸಂ, ಮಾನಸಿಕ ಖಿನ್ನತೆ, ಆತಂಕದ ಮನಸ್ಥಿತಿ – ಈ ರೀತಿಯ ಕಾಯಿಲೆಗಳಿಗೆ ಒಳಗಾಗಬಹುದು. ಈ ಅಧ್ಯಯನದಲ್ಲಿ ಭಾಗವಹಿಸುವವರಿಗೆ ಕರುಳಿನಲ್ಲಿ ಗ್ಯಾಬಾ ಉತ್ಪಾದಿಸುವ ಬ್ಯಾಕ್ಟೀರಿಯಾಗಳನ್ನು ಕೊಟ್ಟು ನಂತರ ಅಂತಹ ವ್ಯಕ್ತಿಯ ಮೆದುಳಿನ ಚಟುವಟಿಕೆ ಮತ್ತು ಆತನ ವರ್ತನೆಯನ್ನು ಮಾನಿಟರ್ ಮಾಡಲಾಗುತ್ತದೆ. ಕರುಳಿನ ಕೆಲವು ನಿರ್ದಿಷ್ಟ ಬ್ಯಾಕ್ಟೀರಿ ಯಾಗಳು ಮೆದುಳಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿಯಲು ಈ ಅಧ್ಯಯನ ನಡೆಸಲಾಗು ತ್ತಿದೆ.

ನಮ್ಮ ಆಹಾರದಲ್ಲಿ ನಾರಿನ ಅಂಶ ಜಾಸ್ತಿ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ ಅವು ಪ್ರಿಬಯೋಟಿಕ್ ರೀತಿಯಲ್ಲಿ ಕೆಲಸ ಮಾಡಿ ಒಳ್ಳೆಯ ಬ್ಯಾಕ್ಟೀರಿಯಾಗಳ ಅಭಿವೃದ್ಧಿಗೆ ಸಹಾಯ ಮಾಡುತ್ತವೆ. ಮಾನಸಿಕ ಖಿನ್ನತೆ ಮತ್ತು ವ್ಯಾಕುಲತೆ ಹೊಂದಿರುವ ಜನರಲ್ಲಿ ಈ ರೀತಿಯ ಅಂಶಗಳು ಕಡಿಮೆ ಇರುವುದು ಗೊತ್ತಾಗಿದೆ. ಹಾಗೆಯೇ ಸಂಸ್ಕರಿಸಿದ ಆಹಾರ ಮತ್ತು ಸಿಹಿ ಪದಾರ್ಥಗಳನ್ನು ಕಡಿಮೆ ಮಾಡಬೇಕು.

ಕರುಳಿನ ಸೂಕ್ಷ್ಮಜೀವಿಗಳು ಮತ್ತು ಮೆದುಳಿನ ಸಂಬಂಧ ಈ ಬಗೆಗೆ ಇನ್ನೂ ಬಹಳಷ್ಟು ವಿಚಾರಗಳು ಗೊತ್ತಾಗಬೇಕಷ್ಟೆ.