Thursday, 28th November 2024

ಬುದ್ದಿಜೀವಿಗಳ ಇಬ್ಬಂದಿತನ ಮತ್ತು ಜಾಣಕುರುಡು

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ವಿವಿಧ ದೇಶಗಳಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹಿಂಸಾಚಾರ, ದೊಂಬಿ, ನರಮೇಧಗಳಿಗೆ ಲೆಕ್ಕವಿಲ್ಲ. ಆದರೆ, ಕೆಲವು ಕೃತ್ಯಗಳು ಮಾತ್ರ ಜಾಗತಿಕವಾಗಿ ಪ್ರಚಾರವನ್ನು ಪಡೆಯುತ್ತವೆ, ಕೆಲವು ಹಿಂಸಾಚಾರಗಳು ಮಾತ್ರ ಖಂಡಿಸಲ್ಪಡುತ್ತವೆ. ಮಿಕ್ಕಂತೆ, ಕೆಲ ದೇಶಗಳಲ್ಲಿ ನಡೆಯುತ್ತಿರುವ
ಎಷ್ಟೋ ಹಿಂಸಾಚಾರಗಳು ಬೆಳಕಿಗೆ ಬರುವುದೇ ಇಲ್ಲ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವಿಚಾರಗಳನ್ನು ಜಗತ್ತಿನ ಮುಂದೆ ಇಡಬೇಕಾದ ಪತ್ರಕರ್ತರು ಹಾಗೂ ಆಕ್ಟಿವಿಸ್ಟ್‌ಗಳು ಹೊಂದಿರುವ ಪಕ್ಷಪಾತ ಧೋರಣೆಯಿಂದಾಗಿ ಜಗತ್ತಿನಲ್ಲಿ ನಡೆದ ಬಹಳಷ್ಟು ಘನಘೋರ ಘಟನೆಗಳು ಜನರನ್ನು ತಲುಪುವುದೇ ಇಲ್ಲ. ನಿಷ್ಪಕ್ಷಪಾತ ಧೋರಣೆಯ ಮಾಧ್ಯಮಗಳು ಇಂದು ವಿರಳ.

ಜಗತ್ತಿನ ಬಹುತೇಕ ಪತ್ರಕರ್ತರು ಹಾಗೂ ಆಕ್ಟಿವಿಸ್ಟ್‌ಗಳು ಎಡಚಿಂತನೆಗಳಿಂದ ಪ್ರಭಾವಿತರಾಗಿರುವುದು ಕಂಡುಬರುತ್ತದೆ. ಸುದ್ದಿಗಳ ಸತ್ಯಾಸತ್ಯತೆ ಏನೇ ಇರಲಿ, ತಮ್ಮ ಚಿಂತನೆಗೆ ಪೂರಕವಾಗಿರುವ ವಿಚಾರಗಳನ್ನು ಮಾತ್ರವೇ ಅವರು ಪ್ರಚುರಪಡಿಸುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ನಿರೂಪಣೆಗಳನ್ನು ಹೆಣೆಯುವುದರಲ್ಲಿ ಇವರು ಸಿದ್ಧಹಸ್ತರು.

ಆಧುನಿಕ ಜಗತ್ತಿನ ಇತಿಹಾಸದಲ್ಲಿ ಭಾರಿ ನರಮೇಧಗಳನ್ನು ನಡೆಸಿದವರ ಪಟ್ಟಿಯಲ್ಲಿ ಜರ್ಮನಿಯ ನಾಜಿ ನಾಯಕ ಅಡಾಲ್ ಹಿಟ್ಲರ್, ಕಾಂಬೋಡಿಯಾ ದ ಪೋಲ್ ಪಾಟ್ ಹಾಗೂ ಖೆಮರ್ ರೋಗ್, ಇಟಲಿಯ ಫ್ಯಾಸಿಸ್ಟ್ ನಾಯಕ ಬೆನಿಟೊ ಮುಸೊಲಿನಿ ಮುಂತಾ ದವರ ಹೆಸರು ಎದ್ದುಕಾಣುತ್ತದೆ. ಆದರೆ ಇವರೆಲ್ಲರಿಗಿಂತಲೂ ಹೆಚ್ಚು ಜನರನ್ನು ಸಾಯಿಸಿದ್ದ ಕಮ್ಯುನಿಸ್ಟ್ ನಾಯಕರಾದ ವ್ಲಾದಿಮಿರ್ ಲೆನಿನ್, ಜೋಸೆಫ್ ಸ್ಟಾಲಿನ್, ಮಾವೋ ಝೆಡಾಂಗ್, ಚೆಗುವೆರಾ ಮೊದಲಾದವರು ಮಾತ್ರ ಆದರ್ಶ ವ್ಯಕ್ತಿಗಳಾಗಿ ಆರಾಧಿಸಲ್ಪಡುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ಕಮ್ಯುನಿಸ್ಟ್ ಕ್ರಾಂತಿಯ ಹೆಸರಿನಲ್ಲಿ ಸಾಯಿಸಲ್ಪಟ್ಟವರ ಸಂಖ್ಯೆ ೧೦ ಕೋಟಿಯನ್ನು ಮೀರುತ್ತದೆ. ಕಮ್ಯುನಿಸಂ ಹೆಸರಿನಲ್ಲಿ ನಡೆದ ನರಮೇಧಗಳ ಬಗ್ಗೆ ಮಾನವಹಕ್ಕುಗಳ ವಕ್ತಾರರಿಗೆ ಯಾವುದೇ ವಿಷಾದಗಳಿಲ್ಲ.

ಇಲ್ಲಿ ಧಾರ್ಮಿಕ ಹಿತಾಸಕ್ತಿಗಳೂ ಬಹುದೊಡ್ಡ ಕೆಲಸವನ್ನು ಮಾಡುತ್ತವೆ. ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವ್ಯಕ್ತಿಗಳು ಗಲಭೆಗಳಲ್ಲಿ ಸಾಯಿಸಲ್ಪಟ್ಟರೆ ಅದು ಜಾಗತಿಕ ಸುದ್ದಿಯಾಗಿಬಿಡುತ್ತದೆ. ಮಣಿಪುರ ರಾಜ್ಯದಲ್ಲಿ ಇತ್ತೀಚೆಗೆ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ ನಡೆದ ಸಂಘರ್ಷವನ್ನೇ ತೆಗೆದುಕೊಳ್ಳೋಣ. ಈ ಸಂಘರ್ಷದಲ್ಲಿ ಸುಮಾರು ೬೦ ಸಾವಿರ ಮಂದಿ ಮನೆ-ಮಠಗಳನ್ನು ಕಳೆದುಕೊಂಡಿ ದ್ದಾರೆ, ೨೨೪ ಮಂದಿ ಸಾವಿಗೀಡಾಗಿದ್ದಾರೆ. ಸತ್ತವರಲ್ಲಿ ಮೈತೇಯಿಗಳೂ ಇದ್ದಾರೆ, ಕುಕಿಗಳೂ ಇದ್ದಾರೆ.

ಬಹುತೇಕ ಮೈತೇಯಿಗಳು ಹಿಂದೂಧರ್ಮಕ್ಕೆ ಹಾಗೂ ಕುಕಿಗಳು ಕ್ರೈಸ್ತಮತಕ್ಕೆ ಸೇರಿದವರು. ಈ ಗಲಭೆಯಲ್ಲಿ ಕುಕಿಗಳ ಚರ್ಚುಗಳೂ, ಮೈತೇಯಿಗಳ
ದೇವಸ್ಥಾನಗಳೂ ನಾಶವಾಗಿವೆ. ಆದರೆ ಈ ವೇಳೆ ಮೈತೇಯಿಗಳನ್ನು ಅಪರಾಧಿಗಳನ್ನಾಗಿಯೂ, ಕುಕಿಗಳನ್ನು ಸಂತ್ರಸ್ತರನ್ನಾಗಿಯೂ ಬಿಂಬಿಸಲಾಯಿತು.
ಕುಕಿ ಸಮುದಾಯದ ಮಹಿಳೆಯರನ್ನು ನಿರ್ವಸರನ್ನಾಗಿಸಿದ ಪ್ರಕರಣದ ನಂತರ ಇಡೀ ಗಲಭೆಯ ತಪ್ಪನ್ನು ಮೈತೇಯಿ ಜನಾಂಗದ ತಲೆಗೆ ಕಟ್ಟಲಾಯಿತು.

ಮಣಿಪುರದಲ್ಲಿ ಜನಾಂಗೀಯ ಕಲಹ ನಡೆದುದು ಇದೇ ಮೊದಲ ಬಾರಿಗೆ ಏನಲ್ಲ. ಕುಕಿಗಳು ಮತ್ತು ನಾಗಾಗಳ ನಡುವೆ ನಡೆಯುತ್ತಿರುವ ರಕ್ತಪಾತಕ್ಕೆ
ದಶಕಗಳ ಇತಿಹಾಸವೇ ಇದೆ. ಈ ಸಂಘರ್ಷದಿಂದಾಗಿ ತಿಂಗಳುಗಟ್ಟಲೆ ರಸ್ತೆತಡೆ ಮತ್ತು ಮುಷ್ಕರಗಳು ನಡೆಯುತ್ತಿದ್ದವು. ಆದರೆ, ಕುಕಿ ಮತ್ತು ನಾಗಾಗಳೀರ್ವರೂ ಕ್ರೈಸ್ತ ಮತಾನುಯಯಿಗಳಾಗಿರುವುದರಿಂದ ಅವರ ನಡುವಿನ ಗಲಭೆಗಳು ಅಂತಾರಾಷ್ಟ್ರೀಯ ಬಿಡಿ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗುತ್ತಲೇ ಇರಲಿಲ್ಲ; ಆದರೆ ಕಳೆದ ವರ್ಷ ಮೈತೇಯಿಗಳು ಹಾಗೂ ಕುಕಿಗಳ ನಡುವೆ ನಡೆದ ಜನಾಂಗೀಯ ಕಲಹವು ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು.

ಮಣಿಪುರದಲ್ಲಿ ಅಲ್ಪಸಂಖ್ಯಾತರಾದ ಕ್ರೈಸ್ತರ ಮೇಲೆ ಬಹುಸಂಖ್ಯಾತ ಹಿಂದೂಗಳು ನಡೆಸುತ್ತಿರುವ ದಾಳಿಯೆಂಬಂತೆ ಬಿಂಬಿಸಲ್ಪಟ್ಟಿತು. ಚರ್ಚುಗಳಿಗಿರುವ ಅಂತಾರಾಷ್ಟ್ರೀಯ ಜಾಲ, ಜಾಗತಿಕ ಮಾಧ್ಯಮಗಳಿಗೆ ಭಾರತದ ಹಾಗೂ ಹಿಂದೂ ಧರ್ಮದ ಮೇಲಿರುವ ಪೂರ್ವಗ್ರಹ, ನರೇಂದ್ರ ಮೋದಿ ಸರಕಾರವನ್ನು ಯಾವುದಾದರೂ ನೆಪದಲ್ಲಿ ಹಣಿಯಬೇಕೆಂಬ ಭಾರತದ ವಿಪಕ್ಷಗಳ ಹಠ ಈ ಎಲ್ಲ ಕಾರಣಗಳಿಂದಾಗಿ ಮಣಿಪುರ ಗಲಭೆಯು
‘ಕ್ರೈಸ್ತರ ಮೇಲಿನ ಹಿಂದೂ ಪ್ರಾಬಲ್ಯದ ಹೇರಿಕೆ’ ಎಂಬಂತೆ ಜಾಗತಿಕ ಸುದ್ದಿಯಾಗಿ ಬಿತ್ತರಿಸಲ್ಪಟ್ಟಿತು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಿಖ್ ಹಾಗೂ ಕ್ರೈಸ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ-ದೌರ್ಜನ್ಯಗಳಿಗೆ ಇಡೀ ಪ್ರಪಂಚವಿಂದು ಕಿವುಡಾಗಿ ಕೂತಿದೆ. ಪಾಕಿಸ್ತಾನದ ಜನಸಂಖ್ಯೆಯ ಕೇವಲ ಶೇ.೨.೧೭ರಷ್ಟು ಮಂದಿ (ಸುಮಾರು ೫೨ ಲಕ್ಷ) ಹಿಂದೂಗಳು. ಆದರೆ ಇವರ ಬಲವಂತದ ಮತಾಂತರ ಕಾರ್ಯ ಮುಂದುವರಿದಿದೆ. ಅಲ್ಲಿ ಇದರ ವಿರುದ್ಧ ಯಾವುದೇ ಕಾನೂನು-ಕಾಯ್ದೆ ಇಲ್ಲ. ಪಾಕಿಸ್ತಾನದಲ್ಲಿ ಪ್ರತಿವರ್ಷ ೧೦೦೦ಕ್ಕಿಂತಲೂ ಹೆಚ್ಚು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿ ಮುಸಲ್ಮಾನರಿಗೆ ವಿವಾಹ ಮಾಡಿಕೊಡಲಾಗುತ್ತಿದೆ. ಇಂಥ ಹೆಣ್ಣುಮಕ್ಕಳಿಗೆ ಅಲ್ಲಿ ಯಾವುದೇ ರೀತಿಯ ಕಾನೂನು ನೆರವು ಸಿಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಗರ್ಪಾರ್ಕರ್ ಹೆಸರಿನ ಹಳ್ಳಿಯಿಂದ ರಾಜಿತಾ ಮೇಘ್ವಾರ್ ಎಂಬ ೧೬ ವರ್ಷದ ಹೆಣ್ಣು ಮಗಳನ್ನು ಆಶಿಕ್ ಅಹ್ಮದಾನಿ ಎಂಬಾತ ಅಪಹರಿಸಿದ.

ಈಕೆಯನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿ ಅಂದೇ ಆಕೆಯ ಇಚ್ಛೆಗೆ ವಿರುದ್ಧವಾಗಿ ಸೈಯದ್ ನವಾಜ್ ಅಲಿ ಎಂಬ ಮುಸಲ್ಮಾನನೊಂದಿಗೆ ಆಕೆಯ ವಿವಾಹವನ್ನು ಮಾಡಲಾಯಿತು. ‘ಇದಕ್ಕೆ ಒಪ್ಪದಿದ್ದರೆ ನಿನ್ನ ಹೆತ್ತವರನ್ನು ಕೊಲೆಮಾಡಲಾಗುವುದು’ ಎಂದು ಆಕೆಯನ್ನು ಹೆದರಿಸಲಾಗಿತ್ತು. ಎರಡು ತಿಂಗಳ ನಂತರ ಆಕೆ ಅವರ ಬಂಧನದಿಂದ ಹೇಗೋ ತಪ್ಪಿಸಿಕೊಂಡು ತಾಯಿಮನೆಗೆ ಸೇರಿದರೂ, ಪೊಲೀಸರು ಪುನಃ ಆಕೆಯನ್ನು ವಶಕ್ಕೆ ತೆಗೆದುಕೊಂಡರು. ಕೋರ್ಟಿನಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರು ಆಕೆಯನ್ನು ತಾಯಿಮನೆಯ ಬದಲಿಗೆ ಸರಕಾರ ನಡೆಸುವ ಶೆಲ್ಟರ್ ಹೋಮ್‌ಗೆ ಕಳುಹಿಸಿದರು.

ತಾಯಿಮನೆಗೆ ಕಳುಹಿಸುವಂತೆ ಆಕೆ ಮತ್ತು ಆಕೆಯ ಹೆತ್ತವರು ಅತ್ತುಕರೆದು, ನೆಲದಲ್ಲಿ ಹೊರಳಾಡಿ ನ್ಯಾಯಾಲಯವನ್ನು ಬೇಡುತ್ತಿದ್ದ ವಿಡಿಯೋ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇಸ್ಲಾಮಿಗೆ ಮತಾಂತರಿಸಲ್ಪಟ್ಟ ಕಾರಣ, ಹಿಂದೂಗಳಾದ ಹೆತ್ತವರ ಮನೆಗೆ ಆಕೆಯನ್ನು ಕಳುಹಿಸುವಂತಿಲ್ಲ ಎಂಬ ಕಾರಣ ನೀಡಿ ಆಕೆಯನ್ನು ಅಲ್ಲಿನ ನ್ಯಾಯಾಲಯವು ಹೀಗೆ ಆಶ್ರಯ ಕೇಂದ್ರಕ್ಕೆ ಕಳುಹಿಸಿತು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರಕ್ಕೆ ಇದೊಂದು ಉದಾಹರಣೆಯಷ್ಟೇ!

ಪ್ರತಿವರ್ಷ ಇಂಥ ಪ್ರಕರಣಗಳು ಸಾವಿರ ಸಂಖ್ಯೆಯಲ್ಲಿ ನಡೆಯುತ್ತಿದ್ದರೂ, ಈ ಕುರಿತಾಗಿ ಯಾವ ಜಾಗತಿಕ ಮಾಧ್ಯಮಗಳೂ ವರದಿ ಮಾಡುವುದಿಲ್ಲ. ಈ ಅಮಾಯಕ ಹೆಣ್ಣು ಮಕ್ಕಳ ಪರವಾಗಿ ಯಾವ ಸೀವಾದಿಗಳೂ ಸೊಲ್ಲೆತ್ತುವುದಿಲ್ಲ. ಜಗತ್ತಿನ ಇತಿಹಾಸದಲ್ಲೇ ಅತಿಹೆಚ್ಚು ಬಾರಿ ಧಾರ್ಮಿಕ ಕಿರುಕುಳ ಮತ್ತು ನರಮೇಧವನ್ನು ಅನುಭವಿಸಿದ ‘ಯಝೀದಿ’ ಎಂಬ ಹೆಸರಿನ ಸಣ್ಣ ಧಾರ್ಮಿಕ ಸಮುದಾಯವಿದೆ; ಜಾಗತಿಕ ಮಟ್ಟದಲ್ಲಿ ೧೦ ಲಕ್ಷದಷ್ಟು ಜನಸಂಖ್ಯೆ ಯಿರುವ ಸಮುದಾಯವಿದು. ನವಿಲಿನ ಮೇಲೆ ಕುಳಿತಿರುವ ದೇವರನ್ನು ಆರಾಧಿಸುವ ಯಝೀದಿ ಸಮುದಾಯದ ೫ ಲಕ್ಷ ಮಂದಿ ಇರಾಕಿನ ಉತ್ತರ ಭಾಗವಾದ ಸಿಂಜಾರಾ ಪರ್ವತ ಪ್ರದೇಶದ ಆಸುಪಾಸಿನಲ್ಲಿ ವಾಸಿಸುತ್ತಿದ್ದರು. ೨೦೧೪ರಲ್ಲಿ ಐಸಿಸ್ ಉಗ್ರರು ಇವರ ಮೇಲೆರಗಿ ಗಂಡಸರು, ಮಕ್ಕಳು ಮತ್ತು ವಯಸ್ಸಾದವರು ಸೇರಿದಂತೆ ೫,೦೦೦ ಮಂದಿಯನ್ನು ಕೊಂದರು.

೧೦,೦೦೦ ಹೆಣ್ಣು ಮಕ್ಕಳನ್ನು ಅಪಹರಿಸಿ ಲೈಂಗಿಕ ಜೀತದಾಳುಗಳನ್ನಾಗಿಸಿ ಅವರನ್ನು ಐಸಿಸ್ ಉಗ್ರರಿಗೆ ಹಂಚಲಾಯಿತು. ಆ ಹೆಣ್ಣುಮಕ್ಕಳು ಉಗ್ರರಿಂದ ಅನುಭವಿಸಿದ ಅತ್ಯಾಚಾರ, ಹಿಂಸೆಗೆ ಲೆಕ್ಕವಿಲ್ಲ. ಉಗ್ರರು ಇಂಥ ಓರ್ವ ಹೆಂಗಸನ್ನು ನಾಲ್ಕು ದಿನ ಅನ್ನ ಹಾಕದೆ ಉಪವಾಸ ಕೆಡವಿ, ಕೊನೆಗೆ ಆಕೆಗೆ ತಿಳಿಯದಂತೆ ಆಕೆಯ ಹಸುಳೆಯನ್ನು ಕೊಂದು, ಅದರ ಮಾಂಸದ ಅಡುಗೆಯನ್ನೇ ಆಕೆಗೆ ತಿನ್ನಿಸಿ ಕ್ರೌರ್ಯದ ಪರಮಾವಧಿಯನ್ನು ಮೆರೆದರು. -ರ್ಯಾಲ್ ಹೆಸರಿನ ಹೆಣ್ಣುಮಗಳನ್ನು ಲೈಂಗಿಕ ಜೀತದಾಳನ್ನಾಗಿಸಿ ವಿವಿಧ ವ್ಯಕ್ತಿಗಳಿಗೆ ೬ ಬಾರಿ ಮಾರಲಾಯಿತು. ನೌರ್ ಎಂಬ ಗರ್ಭಿಣಿಯು ಮಗುವಿಗೆ ಜನ್ಮ ನೀಡಿದ ನಂತರ ಅದಕ್ಕೆ ಹಾಲೂಡಿಸಲೂ ಬಿಡದೆ ೭ ಬಾರಿ ಆಕೆಯನ್ನು ಮಾರಾಟ ಮಾಡಿದರು.

೨೦೧೪ರಲ್ಲಿ ನಾಡಿಯಾ ಮುರಾದ್ ಹೆಸರಿನ ೨೧ ವರ್ಷದ ಹೆಣ್ಣುಮಗಳನ್ನು ಅಪಹರಿಸಿದ ಉಗ್ರರು ಆಕೆಯ ಮೇಲೆ ಸರಣಿ ಅತ್ಯಾಚಾರವೆಸಗಿ ಬಲವಂತ ವಾಗಿ ಇಸ್ಲಾಮಿಗೆ ಮತಾಂತರಿಸಿದರು. ಆಕೆ ೨೦೧೫ರಲ್ಲಿ ಉಗ್ರರ ವಶದಿಂದ ಹೇಗೋ ತಪ್ಪಿಸಿಕೊಂಡು ಜರ್ಮನಿ ಸೇರಿ ಅಲ್ಲಿ ಆಶ್ರಯ ಪಡೆದು, ಐಸಿಸ್ ಉಗ್ರರ ವಶದಲ್ಲಿರುವ ಯಝೀದಿ ಹೆಣ್ಣು ಮಕ್ಕಳ ರಕ್ಷಣೆಯ ಕೆಲಸವನ್ನು ಆರಂಭಿಸಿದಳು. ಇವಳ ಸೇವೆಗೆ ೨೦೧೮ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ದೊರಕಿತು.

ಇದುವರೆಗೆ ೭,೦೦೦ ಯಝೀದಿ ಮಹಿಳೆಯರನ್ನು ಉಗ್ರರ ವಶದಿಂದ ಬಿಡಿಸಿಲಾಗಿದೆಯಾದರೂ, ಮಿಕ್ಕ ೩,೦೦೦ ಮಂದಿ ಅವರ ವಶದಲ್ಲಿ ಲೈಂಗಿಕ ಜೀತದಾಳುಗಳಾಗೇ ಉಳಿದುಕೊಂಡಿದ್ದಾರೆ. ಆದರೆ ಈ ಘೋರಘಟನೆಗಳ ಕುರಿತಾಗಿ ಜಾಗತಿಕ ಮಾಧ್ಯಮಗಳಾಗಲೀ, ಸ್ತ್ರೀವಾದಿಗಳಾಗಲೀ ಬಾಯಿ ತೆರೆಯಲೇ ಇಲ್ಲ. ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವ ಅಲ್ಪ ಸಂಖ್ಯಾತ ಹಿಂದೂಗಳ ಹತ್ಯೆ ಮತ್ತು ಹಿಂಸೆಯ ವಿಚಾರದಲ್ಲಿ ಕೂಡ ಬಹುತೇಕ ಜಾಗತಿಕ ಮಾಧ್ಯಮಗಳು ಕಣ್ಣುಮುಚ್ಚಿ ಕೂತಿವೆ. ಪ್ಯಾಲೆಸ್ತೀನಿನ ಮೇಲೆ ಇಸ್ರೇಲ್ ದಾಳಿಮಾಡಿದಾಗ ಅತಿರಂಜಿತವಾಗಿ ವರದಿ ಮಾಡುತ್ತಿದ್ದ ಅಲ್ ಜಝೀರಾ, ಬಿಬಿಸಿ ಮೊದಲಾದ ಜಾಗತಿಕ ಮಾಧ್ಯಮಗಳು, ಬಾಂಗ್ಲಾದ ಹಿಂದೂ ನರಮೇಧದ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ.

ಅಲ್ಲಿನ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್, ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದೆ’ ಎಂದು ಸ್ವತಃ
ಒಪ್ಪಿಕೊಂಡಿದ್ದಾರೆ. ಆದರೆ, ಪ್ಯಾಲೆಸ್ತೀನಿನ ರಾಫಾದ ಮೇಲೆ ಇಸ್ರೇಲ್ ದಾಳಿಮಾಡಿದಾಗ ‘ಆಲ್ ಐಸ್ ಆನ್ ರಾಫಾ’ ಎಂದು ಮರುಗಿದ್ದ, ಇಸ್ರೇಲ್ ವಿರುದ್ಧ
ಮೆರವಣಿಗೆ ಮಾಡಿ ಪ್ರತಿಭಟಿಸಿದ್ದ ಭಾರತೀಯ ಕಮ್ಯುನಿಸ್ಟರು, ಕಾಂಗ್ರೆಸ್, ಟಿಎಂಸಿ ಮೊದಲಾದ ಜಾತ್ಯತೀತರು, ಸಾಹಿತಿಗಳು ಮತ್ತು ಬುದ್ಧಿಜೀವಿಗಳು,
ಬಾಲಿವುಡ್ ಮಂದಿಗೆ ಬಾಂಗ್ಲಾದಲ್ಲಿ ಹಿಂದೂಗಳಿಗೊದಗಿದ ದುಸ್ಥಿತಿ ಕಾಣಿಸುತ್ತಲೇ ಇಲ್ಲ.

ಅಲ್ಲಿನ ಹಿಂದೂ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರವನ್ನು ಭಾರತದ ಸ್ತ್ರೀವಾದಿಗಳು ಪ್ರತಿಭಟಿಸುವುದಿರಲಿ, ಆ ಕುರಿತು ಖಂಡನಾ ಹೇಳಿಕೆಯನ್ನೂ ಕೊಟ್ಟಿಲ್ಲ. ಇದು ನಮ್ಮ ಬುದ್ಧಿಜೀವಿಗಳ, ಕಮ್ಯುನಿಸ್ಟರ ಮತ್ತು ಸೀವಾದಿಗಳ ಇಬ್ಬಂದಿತನವನ್ನು ಎತ್ತಿತೋರಿಸುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)