ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವುದು ಹೇಗೆ? ಬಹುಶಃ ಸಾಧ್ಯವಿಲ್ಲ. ಏಕೆಂದರೆ ಸ್ವಾತಂತ್ರ್ಯ ಗಾಳಿಯಲ್ಲಿರುತ್ತದೆ. ಅದೊಂದು ಸ್ಪೂರ್ತಿಯೇ ಹೊರತು ಬರಹವಲ್ಲ. ಸ್ವಾತಂತ್ರ್ಯವೆಂದರೆ ನಾವು ಉಸಿರಾಡುವುದು ಹಾಗೂ ಅನುಭವಿಸುವುದು. ಸ್ವಾತಂತ್ರ್ಯವೆಂಬುದೊಂದು ಸ್ಪರ್ಶಮಣಿ ಅಥವಾ ಅಮೃತವೇ ಹೊರತು ಅದು ಔಷಧವಲ್ಲ. ಸ್ವಾತಂತ್ರ್ಯವು ೨೧ನೇ ಶತಮಾನದ ಆಧುನಿಕತೆಯ ಆಧಾರ ಸ್ತಂಭ. ಅದೊಂದು ಮಾನವ ಹಕ್ಕು. ಅದಕ್ಕಿರುವ ಒಂದೇ
ಒಂದು ಅಪಾಯಕಾರಿ ಶತ್ರು ಯಾರು ಗೊತ್ತಾ? ಮನುಷ್ಯನ ನಡವಳಿಕೆ! ನಮ್ಮ ನಡವಳಿಕೆ ಯಾವುದಾದರೂ ವಿಷಯದಲ್ಲಿ ಅತಿ ಎಂಬಂಥ ಸ್ತರಕ್ಕೆ ಹೋಗಿ ಸಮಾಜವನ್ನು ಅಧಃಪತನದತ್ತ ಎಳೆಯುತ್ತಿದ್ದರೆ ಅದೇ ಸ್ವಾತಂತ್ರ್ಯದ ಶತ್ರು.
ಹೀಗಾಗಿ ಯಾವುದೇ ಅಮೂಲ್ಯ ಸಂಪತ್ತನ್ನು ನಾವು ಹೇಗೆ ನಿರಂತರವಾಗಿ ಮತ್ತು ಸುಸ್ಥಿರ ರೂಪದಲ್ಲಿ, ನಮ್ಮ ಸಾಮಾನ್ಯ ಜ್ಞಾನವನ್ನು ಬಳಸಿ ರಕ್ಷಿಸಿಕೊಳ್ಳಬೇಕೋ ಹಾಗೆಯೇ ಸ್ವಾತಂತ್ರ್ಯವನ್ನೂ ರಕ್ಷಿಸಿಕೊಳ್ಳಬೇಕು. ಸ್ವಾತಂತ್ರ್ಯವೆಂಬುದು ನಮ್ಮ ಮನಸ್ಸಿನ ಪಾಲಕ. ಅದು ನಮ್ಮ ತಲೆಯನ್ನು ಎತ್ತಿ ಹಿಡಿಯುತ್ತದೆ. ವಿಶ್ವಕವಿ ರವೀಂದ್ರನಾಥ್ ಟ್ಯಾಗೋರರು ಭಾರತೀಯರು ತಲೆ ಎತ್ತಿ ನಡೆಯುವುದನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಧಣಿಗಳು ನೋಡ ಬೇಕೆಂದು ಬಯಸಿದ್ದರು.
ಭಾರತೀಯರ ಮನಸ್ಸನ್ನು ಸರಿಯಾಗಿ ಓದುವ ವಿಧಾನ ಅದೇ ಆಗಿತ್ತು. ಸರ್ವಾಧಿಕಾರಿಗಳು ಮಾತ್ರ ಯಾವಾಗಲೂ ತಮ್ಮ ಪ್ರಜೆಗಳು ನೆಲ ನೋಡುತ್ತಾ ತಲೆ ತಗ್ಗಿಸಿ ಬದುಕಬೇಕೆಂದು ಬಯಸುತ್ತಾರೆ. ಸ್ವಾತಂತ್ರ್ಯದಲ್ಲಿ ಸಮಕಾಲೀನ ಭಾರತೀಯರು ಅನುಭವಿಸಿದಷ್ಟು ಖುಷಿಯನ್ನು ಅನುಭವಿಸುವ ಅತ್ಯಂತ ಕಡಿಮೆ ದೇಶಗಳು ಜಗತ್ತಿನಲ್ಲಿವೆ. ಆದರೆ ನಾವು ಇಲ್ಲಿಯವರೆಗೆ ಆಕಸ್ಮಿಕವಾಗಿ ಬಂದು ತಲುಪಿಲ್ಲ. ರವೀಂದ್ರನಾಥ್ ಟ್ಯಾಗೋರರು ಸ್ವಾತಂತ್ರ್ಯ ಹೋರಾಟದ
ಕಾಲದ ಪ್ರವಾದಿಯಾಗಿದ್ದರೆ, ಮೋಹನದಾಸ್ ಗಾಂಧಿಯವರು ಸ್ವಾತಂತ್ರ್ಯದ ಆರ್ಕಿಟೆಕ್ಟ್ ಹಾಗೂ ವಿನ್ಯಾಸಕಾರನಾಗಿದ್ದರು.
ಗಾಂಧೀಜಿ ಆರಂಭಿಸಿದ ಮೊದಲ ರಾಷ್ಟ್ರೀಯ ಆಂದೋಲನವಾದ ಅಸಹಕಾರ ಚಳವಳಿಯು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅತ್ಯುತ್ಕ ಷ್ಟ ಕೊಡುಗೆ. ೧೯೨೦ರಿಂದ ೧೯೨೨ರ ನಡುವೆ ಅವರು ಅಸಹಕಾರ ಚಳವಳಿ ನಡೆಸಿದರು. ಅದು ಭಾರತೀಯರನ್ನು ಭಯದಿಂದ
ಬಿಡುಗಡೆಗೊಳಿಸಿತು. ಬ್ರಿಟಿಷ್ ದಾಸ್ಯದಿಂದ ಭಾರತ ಬಿಡುಗಡೆ ಪಡೆಯಬೇಕು ಅಂದರೆ ಮೊದಲು ಭಯದಿಂದ ಬಿಡುಗಡೆ ಪಡೆಯುವುದು ಅತ್ಯಂತ ಅಗತ್ಯವಾಗಿತ್ತು.
ಗಾಂಧೀಜಿಯವರ ಅಸಹಕಾರ ಚಳವಳಿ ಆ ಕೆಲಸ ಮಾಡಿತು. ೧೯೨೦ ಇಲ್ಲದೆ ೧೯೪೭ ಬರಲು ಸಾಧ್ಯವಿರಲಿಲ್ಲ. ೧೯೩೧ರಲ್ಲಿ ಕರಾಚಿ ಕಾಂಗ್ರೆಸ್ ಅಧೀವೇಶನಕ್ಕಾಗಿ ಗಾಂಧೀಜಿ ‘ಸ್ವಾತಂತ್ರ್ಯದ ಕೈಪಿಡಿ’ ಬರೆದರು. ಅದು ನಂತರ ೧೯೫೦ರಲ್ಲಿ ಸ್ವತಂತ್ರ ಭಾರತವು ಅಂಗೀಕರಿಸಿದ ಸಂವಿಧಾನದ ಮೂಲಭೂತ ತತ್ವವಾಗಿ ರೂಪಾಂತರಗೊಂಡಿತು. ವಯಸ್ಕರ ಮತದಾನವು ಸ್ವಾತಂತ್ರ್ಯದ ಎದೆಬಡಿತವಿದ್ದಂತೆ. ತಮ್ಮನ್ನು ತಾವು ಅತ್ಯಂತ ಹಿರಿಯ ಪ್ರಜಾಪ್ರಭುತ್ವ ಎಂದು ಕರೆದುಕೊಳ್ಳುವ ದೇಶಗಳು ಕೂಡ ತಮ್ಮ ದೇಶದ ಎಲ್ಲಾ ಪ್ರಜೆಗಳಿಗೆ ಒಂದೇ ಸಲ ಮತದಾನದ ಹಕ್ಕು ನೀಡಿರಲಿಲ್ಲ. ಅವು ಹಂತ ಹಂತವಾಗಿ ಜನರಿಗೆ ಮತದಾನದ ಹಕ್ಕು ನೀಡಿದ್ದವು. ಏಕೆಂದರೆ ಆ ದೇಶಗಳು ತಮ್ಮ ಎಲ್ಲಾ ಪ್ರಜೆಗಳೂ ಸಮಾನರು ಎಂಬುದನ್ನು ನಂಬಿರಲಿಲ್ಲ.
ಬ್ರಿಟನ್ ಕೂಡ ೨೦ನೇ ಶತಮಾನದ ಮೂರನೇ ದಶಕದವರೆಗೆ ಒಂಥರಾ ಉಸಿರುಗಟ್ಟಿದ ‘ಮಿತಜನತಂತ್ರ’ ಅಥವಾ ‘ಸ್ವಲ್ಪಜನಾಽಪತ್ಯ’ ಆಗಿತ್ತು. ಅದು ಅಲ್ಲಿಯವರೆಗೆ ಪ್ರಜಾಪ್ರಭುತ್ವದ ಲಕ್ಷಣಗಳನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಹೊಂದಿತ್ತೇ ಹೊರತು ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರ ಆಗಿರಲಿಲ್ಲ. ಏಕೆಂದರೆ ಅಲ್ಲಿ ೧೯೨೮ರವರೆಗೂ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಫ್ರೆಂಚ್ ಮಹಿಳೆಯರು ೧೯೭೧ರ ಕ್ರಾಂತಿಯುಗದಿಂದಲೇ ಮತದಾನದ ಹಕ್ಕು ಪಡೆದಿದ್ದರು, ಆದರೆ ಅದಕ್ಕಾಗಿ ಅವರು ೧೫೭ ವರ್ಷಗಳ ಕಾಲ ಕಾದಿದ್ದರು.
ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಈ ವಿಷಯದಲ್ಲಿ ತಾರತಮ್ಯ ಅಥವಾ ವಿಕಲ್ಪಗಳು ಇರಲೇ ಇಲ್ಲ. ದೇಶದಲ್ಲಿ ೧೯೫೨ರಲ್ಲಿ ನಡೆದ ಮೊದಲ ಚುನಾವಣೆಯಿಂದಲೇ ಪ್ರತಿಯೊಬ್ಬ ಭಾರತೀಯನಿಗೂ ಸಮಾನವಾಗಿ ಮತದಾನದ ಹಕ್ಕು ನೀಡಲಾಗಿತ್ತು. ಹಾಗೆ ಎಲ್ಲರಿಗೂ ಮತದಾನದ ಹಕ್ಕು ನೀಡುವುದು ಅಪಾಯಕಾರಿ ಎಂದು ವಿನ್‌ಸ್ಟನ್ ಚರ್ಚಿಲ್‌ರಂಥ ಬ್ರಿಟಿಷ್ ದಾರ್ಶನಿಕರು ಉಪದೇಶ ಮಾಡಿದ್ದರು. ಅನಕ್ಷರತೆ ಹಾಗೂ ಬಡತನದಲ್ಲಿ ತೊಳಲಾಡುತ್ತಿರುವ ಭಾರತದ ಜನಸಾಮಾನ್ಯರಿಗೆ ಮುಕ್ತವಾಗಿ ತಮ್ಮ ನಾಯಕನನ್ನು ಆಯ್ಕೆ ಮಾಡುವ ಸಾಮರ್ಥ್ಯ ಇಲ್ಲ ಎಂಬುದು ಅವರ
ಅಭಿಪ್ರಾಯವಾಗಿತ್ತು.
ಆದರೆ ಈ ಸಮಸ್ಯೆಗಳು ಭಾರತೀಯರನ್ನು ಯಾವ ರೀತಿಯಲ್ಲೂ ‘ದಡ್ಡರನ್ನಾಗಿ’ ಮಾಡಲಿಲ್ಲ. ಏನೋ ದೊಡ್ಡ ರಾಜಕೀಯ ಅನಾಹುತವಾಗುತ್ತದೆ, ಅಲ್ಲೋಲಕಲ್ಲೋಲ ಉಂಟಾಗುತ್ತದೆ ಎಂದು ಚರ್ಚಿಲ್ ನಿರೀಕ್ಷಿಸಿದ್ದರು. ಆದರೆ ಅದರ ಬದಲಿಗೆ ಭಾರತೀಯರು ದೇಶದ ರಾಜಕೀಯ ಆಡಳಿತಕ್ಕೆ
ಸುಸ್ಥಿರತೆಯನ್ನು ತಂದುಕೊಟ್ಟರು. ಪ್ರಜಾಪ್ರಭುತ್ವವೆಂದರೆ ಚುನಾವಣೆ. ಆದರೆ ಚುನಾವಣೆಗಳು ಮಾತ್ರ ಪ್ರಜಾಪ್ರಭುತ್ವ ಅಲ್ಲ. ಜನರು ಬಯಸುತ್ತಿದ್ದರೂ ಅವರಿಗೆ ಸರಕಾರವನ್ನು ಬದಲಾಯಿಸಲು ಆಗದಿದ್ದರೆ ಅಂಥ ಚುನಾವಣೆಗಳು ಭ್ರಮೆಯಿದ್ದಂತೆ.
ಸಾಕಷ್ಟು ದೇಶಗಳಲ್ಲಿ ಪ್ರಜಾಪ್ರಭುತ್ವದ ಸೋಗಿನಲ್ಲಿ ಸರ್ವಾಧಿಕಾರ ನಡೆಸುತ್ತಿರುವ ನಿರಂಕುಶ ಪ್ರಭುಗಳು ಚುನಾವಣೆಯ ಫಲಿತಾಂಶವನ್ನೇ ಬದಲಿಸಿ ಬಿಡುತ್ತಾರೆ. ಅಂಥ ಕಡೆ ರಾಜಕೀಯ ನಿರ್ವಾತ ಮನೆಮಾಡಿರುತ್ತದೆ. ಪ್ರಕೃತಿಯು ಹೇಗೆ ನಿರ್ವಾತ ಸ್ಥಿತಿಯನ್ನು ಇಷ್ಟಪಡುವುದಿಲ್ಲವೋ ಹಾಗೆಯೇ ರಾಜಕೀಯ ಪ್ರಕೃತಿ ಕೂಡ ನಿರ್ವಾತವನ್ನು ನೋಡಿದರೆ ಅಸಹ್ಯಪಡುತ್ತದೆ. ಈ ವರ್ಷದ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಕ್ರಿಯಾಶೀಲ ವಿಪಕ್ಷಗಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ, ತಮ್ಮ ಕೈಲಾದಷ್ಟು ಸೀಟುಗಳನ್ನು ಗೆದ್ದಿದ್ದರೆ, ಅಥವಾ ಬಹುಮತವನ್ನೇ
ಪಡೆದಿದ್ದರೆ ಈಗ ನಡೆದಂಥ ದಂಗೆ ಬಹುಶಃ ಅಲ್ಲಿ ನಡೆಯುತ್ತಿರಲಿಲ್ಲ. ಯಾವುದೇ ಪ್ರಜಾಸತ್ತಾತ್ಮಕ ಸರಕಾರದ ಅಸಲಿತನವು ಚುನಾವಣೆಯ ವಿಶ್ವಾಸಾರ್ಹತೆಯ ಮೇಲೆ ನೇರವಾಗಿ ಅವಲಂಬಿತವಾಗಿದೆ.
ಬಾಂಗ್ಲಾದೇಶ ಹಾಗೂ ಭಾರತವೆರಡೂ ಈ ವರ್ಷವೇ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿದ್ದವು. ಜನವರಿಯಲ್ಲಿ ಚುನಾವಣೆಯ ಫಲಿತಾಂಶ ಸುದ್ದಿಮನೆಗಳನ್ನು ತಲುಪಿದಾಗ ಢಾಕಾದಲ್ಲಿ ಯಾವ ವಿಪ್ಲವದ ಸುಳಿವೂ ಇರಲಿಲ್ಲ. ಏಕೆಂದರೆ ಅದೊಂದು ಮುಗಿದ ಅಧ್ಯಾಯ ಎಂಬಂತೆ ಫಲಿತಾಂಶ ವನ್ನು ನೋಡಲಾಗುತ್ತಿತ್ತು. ದೆಹಲಿಯಲ್ಲಿ ಮತದಾರರು ಆಡಳಿತಾರೂಢ ಪಕ್ಷಕ್ಕೆ ಎಷ್ಟು ಬೇಕೋ ಅಷ್ಟು ಚಾಟಿ ಬೀಸಿ, ವಿಪಕ್ಷಗಳಿಗೆ ಒಂದಷ್ಟು
ಜೀವ ತುಂಬಿ, ಚುನಾವಣಾ ಸಮೀಕ್ಷೆಗಳ ಅಂದಾಜನ್ನು ಹೊಸಕಿಹಾಕಿ, ಮತ್ತೊಮ್ಮೆ ಭಾರತೀಯ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿದ್ದರು.
ಸರಕಾರ ಮತ್ತು ವಿರೋಧ ಪಕ್ಷಗಳೆರಡೂ ಹೊಸ ಜನಾದೇಶವನ್ನು ಅರ್ಥ ಮಾಡಿಕೊಂಡು, ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಹಾರಗಳನ್ನು ಎಂದಿನಂತೆ ಮುನ್ನಡೆಸುವ ಬೃಹತ್ ಕಾರ್ಯಕ್ಕೆ ಚಾಲನೆ ನೀಡಿದ್ದವು. ಇತಿಹಾಸದ ಬಿಕ್ಕಳಿಕೆಗಳಿಗೆ ಪ್ರಜಾಪ್ರಭುತ್ವ ಗುರಾಣಿಯಿದ್ದಂತೆ. ಮುಕ್ತ ಮನಸ್ಸುಗಳು ರೂಪಿಸಿದ ಚೌಕಟ್ಟಿನಲ್ಲಿ ವಿಭಿನ್ನ ಸಿದ್ಧಾಂತಗಳು ಸಹಬಾಳ್ವೆಯಿಂದ ಮುನ್ನಡೆಯುವಂತೆ ಹಾಗೂ ಶಾಂತಿಯುತ ಅಧಿಕಾರ ಹಸ್ತಾಂತರ ಗಳಿಗೆ ಅನುವು ಮಾಡಿಕೊಡುವಂತೆ ಪ್ರಜಾಪ್ರಭುತ್ವವು ನೋಡಿಕೊಳ್ಳುತ್ತದೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಇಸ್ಪೀಟ್ ಆಟದ ರಾಣಿಯಂತಾಗಿದ್ದರು. ಎಲ್ಲಿ ಚಾಕು ಸಾಕಾಗಿತ್ತೋ ಅಲ್ಲಿ ಈಟಿ ಬಳಸುವ ತಪ್ಪು ಮಾಡಿದರು.
ಜನರಿಗೆ ಉಂಟಾಗಿದ್ದ ಬಳಲಿಕೆ, ಆಡಳಿತದಲ್ಲಿನ ಏಕತಾನತೆ, ಶೇಖ್ ಹಸೀನಾ ಮೊದಲ ಬಾರಿ ಪ್ರಧಾನಿಯಾದಾಗ ಹುಟ್ಟಿಯೂ ಇರದಿದ್ದ ಹಾಗೂ ಕೊನೆಯ ಬಾರಿ ಪ್ರಧಾನಿಯಾಗಿ ಅಧಿಕಾರ ಆರಂಭಿಸಿದಾಗ ಐದು ವರ್ಷದವರಾಗಿದ್ದ ಈಗಿನ ಹೊಸ ತಲೆಮಾರಿನ ಯುವಜನರ ಆಶೋತ್ತರಗಳು ಇವೆಲ್ಲವೂ ಸೇರಿ, ಹೆಪ್ಪುಗಟ್ಟಿ, ಚಂಡಮಾರುತದ ರೂಪ ಪಡೆದು, ಗಾಳಿಗೆ ವಿಷ ಬೆರೆಸಿದಂತೆ ಎಲ್ಲರನ್ನೂ ಸಮ್ಮೋಹಗೊಳಿಸಿ, ಕೊನೆಗೆ ಆಕೆಗೆ ಅತ್ಯಂತ ಕೆಟ್ಟ ಶಿಕ್ಷೆ ನೀಡಿದವು. ನಾನಿದನ್ನು ಬರೆಯುತ್ತಿರುವಾಗ ಬಾಂಗ್ಲಾದೇಶದಿಂದ ಸಾವಿನ ಕತೆಗಳು, ದಂಗೆಯ ಸುದ್ದಿಗಳು, ಮತೀಯ ಹಿಂಸಾಚಾರದ ಮಾಹಿತಿಗಳು ಬಂದು ರಾಶಿಬೀಳುತ್ತಿವೆ.
ಆದರೆ ಬಾಂಗ್ಲಾದೇಶಿ ಜನರ ಜಾತ್ಯತೀತ ಸ್ಪೂರ್ತಿಗೆ ತಕ್ಕಂತೆ ಹೊಸ ಆಡಳಿತಗಾರರು ಆದಷ್ಟು ಬೇಗ ವ್ಯವಸ್ಥೆಯನ್ನು ಮರುಸ್ಥಾಪಿಸುತ್ತಾರೆ ಎಂಬ ಆಶಾಭಾವನೆ ಇದೆ. ಸೇನೆಯಾಗಲೀ ಅಥವಾ ಮಧ್ಯಂತರ ಸರಕಾರವಾಗಲೀ ಪ್ರಜಾಸತ್ತಾತ್ಮಕವಾಗಿರಲು ಸಾಧ್ಯವಿಲ್ಲ. ಅವರು ಬಿಕ್ಕಟ್ಟು ನಿಭಾಯಿಸುವ ಮ್ಯಾನೇಜರ್‌ಗಳಾಗಬಹುದು ಅಷ್ಟೆ. ಹೀಗಾಗಿ ಅವರು ನೋವುನಿವಾರಕ ಮಾತ್ರೆಗಳೇ ಹೊರತು ಪರಿಹಾರವೂ ಅಲ್ಲ, ಉತ್ತರವೂ ಅಲ್ಲ. ಬಾಂಗ್ಲಾದೇಶ ವನ್ನು ಸರಿಯಾದ ದಿಸೆಯಲ್ಲಿ ಮುನ್ನಡೆಸುವ ಏಕೈಕ ಮಂತ್ರದಂಡವೆಂದರೆ ಇನ್ನೊಂದು ಚುನಾವಣೆ.
ಯುದ್ಧಗಳು ಹೆಡ್‌ಲೈನುಗಳನ್ನು ಹುಟ್ಟುಹಾಕುತ್ತವೆ. ಆದರೆ, ಶಾಂತಿಯುತ ಬದಲಾವಣೆ ಯಾವಾಗಲೂ ಸೌಮ್ಯವಾಗಿ, ಕಡಿಮೆ ನಾಟಕೀಯವಾಗಿ ನಡೆಯುತ್ತದೆ. ಹೀಗಾಗಿ ಅದು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗುವ ಬೋರಿಂಗ್ ಪಾಠವಾಗುತ್ತದೆ. ೨೧ನೇ ಶತಮಾನದ ಅತ್ಯಂತ ಪ್ರಮುಖ ಸಂಘರ್ಷವು ಭೂಭಾಗಕ್ಕಾಗಿ ಅಥವಾ ಗಡಿಗಾಗಿ ನಡೆಯುವುದಿಲ್ಲ. ಎಲ್ಲಿಯವರೆಗೆ ಭೂಮಿ ಇರುತ್ತದೆಯೋ ಅಲ್ಲಿಯವರೆಗೂ ಗಡಿ ಅಥವಾ ಭೂಮಿಯ ಸಂಘರ್ಷ ಇರುತ್ತದೆಯಾದರೂ, ಹೊಸ ತಲೆಮಾರಿನ ಸಂಘರ್ಷಗಳು ಸಿದ್ಧಾಂತದ ಮೇಲೆ, ದೇಶದ ಅಂತಃಸತ್ವವಾಗಿರುವ ಸ್ವಾತಂತ್ರ್ಯವೆಂಬ ಸಂಸ್ಕ ತಿಯ
ಮೇಲೆ, ಸುಧಾರಣೆಯ ಆಶೋತ್ತರಗಳ ಮೇಲೆ ಹಾಗೂ ನಿರಂಕುಶ ಪ್ರಭುತ್ವದ ಧೋರಣೆಗಳ ಮೇಲೆ ನಡೆಯುತ್ತವೆ.
೨೦ನೇ ಶತಮಾನವು ಯಾವುದೇ ದೇಶವನ್ನು ಕಟ್ಟಲು ಸ್ವಾತಂತ್ರ್ಯವೇ ಸರಿಯಾದ ತಳಹದಿ ಎಂಬಂತೆ ನೋಡಿತು. ಜನರಿಗೆ ಸ್ವಾತಂತ್ರ್ಯವಿದ್ದರೆ ಮಾತ್ರ
ಬದುಕಿಗೊಂದು ಅರ್ಥವಿದೆ ಎಂಬುದನ್ನು ಮನ ಗಂಡಿತು. ಎರಡನೇ ಮಹಾಯುದ್ಧದವರೆಗೆ ಒಂದು ದೇಶವು ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಿ ಅದನ್ನು ವಶಪಡಿಸಿಕೊಳ್ಳುವುದು ಕಾನೂನುಬದ್ಧವಾಗಿತ್ತು ಎಂಬುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಹೀಗಾಗಿ ಭಾರತದಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಬ್ರಿಟಿಷ್ ಆಳ್ವಿಕೆಯು ಅನೈತಿಕವಾಗಿತ್ತೇ ಹೊರತು, ಅಕ್ರಮವಾಗಿರಲಿಲ್ಲ. ಭಾರತ ದೊಡ್ಡ ಹೋರಾಟ ನಡೆಸಿ ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಿದ ಮೇಲೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಬ್ರಿಟಿಷ್ ಸಾಮ್ರಾಜ್ಯಶಾಹಿ ಯುಗ ಕೊನೆಗೊಂಡಿತು.
ದೇಶಗಳು ಸ್ವಾತಂತ್ರ್ಯ ಗಳಿಸಿದ ಮೇಲೆ ಅವು ತಮ್ಮ ಜನರಿಗೆ ಸ್ವಾತಂತ್ರ್ಯವನ್ನು ನಿರಾಕರಿಸಲು ಸಾಧ್ಯವಿರಲಿಲ್ಲ. ತನ್ನ ಜನರಿಗೆ ಸರಪಳಿ ಹಾಕಿ ಬಂಧಿಸಿಡುವು ದಕ್ಕಾಗಿ ಭಾರತ ಬ್ರಿಟಿಷ್ ಸರಪಳಿಯಿಂದ ಮುಕ್ತಿ ಪಡೆಯಲಿಲ್ಲ. ಆದರೂ, ಅನೇಕ ವಸಾಹತೋತ್ತರ ದೇಶಗಳಲ್ಲಿ ಸ್ವಾತಂತ್ರ್ಯವೆಂಬುದು ಪ್ರಭಾವಿಗಳ ಕೈಯಲ್ಲಿ ಸಿಲುಕಿ ಅಣಕವಾಯಿತು. ಆದರೆ ಅದು ಬಹಳ ಕಾಲ ನಡೆಯಲಿಲ್ಲ. ಜಗತ್ತಿನ ಎಂಟುನೂರು ಕೋಟಿ ಜನಸಂಖ್ಯೆಯಲ್ಲಿ ಈ ವರ್ಷ ಕನಿಷ್ಠ ಪಕ್ಷ ಮೂರನೇ ಒಂದರಷ್ಟು ಜನರು ಒಂದೋ ಮತದಾನ ಮಾಡಿದ್ದಾರೆ ಅಥವಾ ಸದ್ಯದಲ್ಲೇ ಮಾಡುವವರಿದ್ದಾರೆ.
ಬಾಂಗ್ಲಾದೇಶ, ಭೂತಾನ್, ತೈವಾನ್, ಕೊಮೊರಸ್ ಮತ್ತು ಫಿನ್‌ಲೆಂಡ್ ಜನವರಿಯಲ್ಲಿ; ಎಲ್ ಸಾಲ್ವಡರ್, ಅಜರ್‌ಬೈಜನ್, ಪಾಕಿಸ್ತಾನ, ಇಂಡೋನೇಷ್ಯಾ ಹಾಗೂ ಬೆಲಾರಸ್ ಫೆಬ್ರವರಿಯಲ್ಲಿ; ರಷ್ಯಾ, ಐರ್‌ಲೆಂಡ್, ಪೋರ್ಚುಗಲ್, ಸೆನೆಗಲ್ ಹಾಗೂ ಸ್ಲೋವೇಕಿಯಾ ಮಾರ್ಚ್‌ನಲ್ಲಿ; ಭಾರತ, ದಕ್ಷಿಣ ಕೊರಿಯಾ, ಕ್ರೋವೇಷಿಯಾ, ಈಕ್ವೆಡಾರ್ ಮತ್ತು ಟೋಗೋ ಏಪ್ರಿಲ್‌ನಲ್ಲಿ; ಇರಾನ್, ದಕ್ಷಿಣ ಆಫ್ರಿಕಾ, ಚಾಡ್, ಲಿಥುವೇನಿಯಾ ಮತ್ತು ಪನಾಮಾ ಮೇ ತಿಂಗಳಲ್ಲಿ; ಮೆಕ್ಸಿಕೋ, ಫ್ರಾನ್ಸ್, ಬಲ್ಗೇರಿಯಾ, ಮಂಗೋಲಿಯಾ ಮತ್ತು ಐಸ್‌ಲ್ಯಾಂಡ್ ಜೂನ್‌ನಲ್ಲಿ; ಬ್ರಿಟನ್, ರ‍್ವಾಂಡಾ, ವೆನಿಜುವೆಲಾದಲ್ಲಿ ಜುಲೈನಲ್ಲಿ ಚುನಾವಣೆಗಳು ನಡೆದಿವೆ.
ಯಾವ ತಿಂಗಳನ್ನೂ ಖಾಲಿ ಬಿಡಬಾರದು ಎಂಬ ಕಾರಣಕ್ಕಾಗಿ ಕಿರಿಬತಿಯಲ್ಲಿ ಆಗಸ್ಟ್‌ನಲ್ಲಿ ಚುನಾವಣೆ ನಡೆಯುತ್ತಿದೆ! ಶ್ರೀಲಂಕಾ, ಅಲ್ಜೀರಿಯಾ ಮತ್ತು ಆಸ್ಟ್ರಿಯಾದಲ್ಲಿ ಸೆಪ್ಟೆಂಬರ್‌ನಲ್ಲಿ, ಲಿಥುವೇನಿಯಾ (ಪುನಃ), ಟ್ಯುನೀಷಿಯಾ, ಮೊಜಾಂಬಿಕ್, ಮೊಲ್ಡಾವಾ, ಜಾರ್ಜಿಯಾ ಮತ್ತು ಉರುಗ್ವೆಯಲ್ಲಿ ಅಕ್ಟೋಬರ್‌ನಲ್ಲಿ ಚುನಾವಣೆಗಳು ನಡೆಯಲಿವೆ. ಜಗತ್ತೇ ಕುತೂಹಲದಿಂದ ಕಾಯುತ್ತಿರುವ ಅಮೆರಿಕದ ಚುನಾವಣೆ ನವೆಂಬರ್‌ನಲ್ಲಿ ನಡೆಯುತ್ತದೆ.
ಯಾರೂ ಅಷ್ಟಾಗಿ ಗಮನಿಸದ ಪಲಾವು, ಸೋಮಾಲಿಲ್ಯಾಂಡ್, ರೊಮೇನಿಯಾ, ನಮೀಬಿಯಾ, ಮಾರಿಷಸ್, ಘಾನಾ ಹಾಗೂ ದಕ್ಷಿಣ ಸುಡಾನ್‌ನಲ್ಲಿ
ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.
ನಾನಿಲ್ಲಿ ಸ್ವಿಜರ್‌ಲೆಂಡ್‌ನ ಹೆಸರು ಹೇಳಿಲ್ಲ. ಏಕೆಂದರೆ ಅಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ (ಬಹುತೇಕ ನಿಜ) ಒಂದಲ್ಲಾ ಒಂದು ಚುನಾವಣೆ ನಡೆಯುತ್ತಿರುತ್ತದೆ. ಯುರೋಪಿನ ರಾಜಕೀಯ ಜೀವನದಲ್ಲಿ ನಾನಾ ರೀತಿಯ ಚುನಾವಣೆಗಳ ಗದ್ದಲ ನಿರಂತರವಾಗಿ ನಡೆಯುತ್ತಿರುವುದು ಸರ್ವೇ ಸಾಮಾನ್ಯ. ಭಯೋತ್ಪಾದನೆ ಹಾಗೂ ಮೂಲಭೂತವಾದದ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಹೊರಗೆ ಬಂದು ತನ್ನನ್ನು ತಾನು ಮರು
ಅನ್ವೇಷಣೆ ಮಾಡಿಕೊಂಡಿರುವ ಆಫ್ರಿಕಾದ ಸೋಮಾಲಿಲ್ಯಾಂಡ್‌ನಲ್ಲಿ ಆಗುತ್ತಿರುವ ಬದಲಾವಣೆ ನಿಜವಾದ ಪ್ರಜಾಪ್ರಭುತ್ವದ ಜಯ. ಇಲ್ಲೂ ಅಪವಾದಗಳು ಇವೆ. ಪಾಕಿಸ್ತಾನದಲ್ಲಿರುವುದು ‘ಪಾರ್ಟ್-ಟೈಂ’ಪ್ರಜಾಪ್ರಭುತ್ವ. ಅಲ್ಲಿನ ಜನರು ಚುನಾಯಿತ ಸರಕಾರ ಹಾಗೂ ಚುನಾಯಿತವಲ್ಲದ
ಮಿಲಿಟರಿ ಸರಕಾರದ ನಡುವೆ ಆಗಾಗ ಹೊಂದಾಣಿಕೆ ಮಾಡಿಕೊಳ್ಳುತ್ತಿರಬೇಕಾಗುತ್ತದೆ.
ಒಂದು ವರ್ಷ ಜೈಲಿನಲ್ಲಿ ಕೊಳೆತ ನಂತರ ಅಲ್ಲಿನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಾನು ಮಿಲಿಟರಿ ಜತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಅಧಿಕಾರದಲ್ಲಿರಲು ಸಾಧ್ಯವಿರಲಿಲ್ಲ ಎಂದು ಬಹಳ ಬೇಸರದಿಂದ ಒಪ್ಪಿಕೊಂಡಿದ್ದರು. ವೆನಿಜುವೆಲಾದ ಚುನಾವಣೆಗಳು ಸೂಪರ್‌ಪವರ್ ದೇಶಗಳ ನಡುವಿನ ಸಂಘರ್ಷದ ಉಪ-ಷಡ್ಯಂತ್ರದಂತೆ ಆಗಿವೆ. ಆದರೆ ಬ್ರೆಜಿಲ್‌ನಲ್ಲಿ ಮತದಾನದಲ್ಲಾದ ಸಣ್ಣ ವ್ಯತ್ಯಾಸ ಕೂಡ ಅಗಾಧ ಬದಲಾವಣೆಗೆ ಕಾರಣವಾಗುತ್ತದೆ.
ಕೇವಲ ಒಂದು ಶೇಕಡಾವಾರಿಗಿಂತ ಕಡಿಮೆ ಮತದಿಂದ ಅಲ್ಲಿ ಸರಕಾರ ಬದಲಾಗಿ ಲುಲಾ ಡ ಸಿಲ್ವಾ ಅಧಿಕಾರಕ್ಕೆ ಬಂದಿದ್ದಾರೆ. ಚುನಾವಣೆ ಶಾಂತಿಯುತ ವಾಗಿ ನಡೆದಿದೆ ಎಂಬ ಕಾರಣಕ್ಕೆ ಅಧಿಕಾರದಲ್ಲಾದ ಬಹುದೊಡ್ಡ ಬದಲಾವಣೆಯನ್ನು ದೇಶ ಮೌನವಾಗಿ ಒಪ್ಪಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಏಕೆ ಇಷ್ಟು ಬಲಿಷ್ಠವಾಗಿದೆ ಅಂದರೆ ಇದು ಸಾಕಷ್ಟು ಷಡ್ಯಂತ್ರ ಹಾಗೂ ಅಡೆತಡೆಗಳ ಒತ್ತಡವನ್ನು ಮೀರಿ ಸುದೀರ್ಘ ಅವಽಯಲ್ಲಿ ಪ್ರೌಢಾವಸ್ಥೆಯನ್ನು ತಲುಪಿದೆ.
ಅಮೆರಿಕನ್ನರು ೧೭೭೬ರಲ್ಲೇ ಸ್ವಾತಂತ್ರ್ಯ ಗಳಿಸಿದರು. ಆದರೆ, ಅಲ್ಲಿನ ಮೂಲನಿವಾಸಿಗಳಾದ ಇಂಡಿಯನ್ನರಿಗೆ ಮತ್ತು ಕಪ್ಪು ವರ್ಣೀಯರಿಗೆ ಅದನ್ನು ಮುಂದಿನ ಎರಡು ಶತಮಾನಗಳ ಕಾಲ ನಿರಾಕರಿಸಿದ್ದರು. ದೇಶವನ್ನು ಗೆದ್ದವರಿಗೆ ಇಂಡಿಯನ್ನರು ಮತ್ತು ಕರಿಯರು ಮನುಷ್ಯರಂತೆ ಕಂಡಿರಲಿಲ್ಲ.
ಬ್ರಿಟಿಷರು ತಮ್ಮ ರಾಷ್ಟ್ರೀಯವಾದದ ಪ್ರಧಾನ ಮೌಲ್ಯವೆಂದರೆ ಸ್ವಾತಂತ್ರ್ಯ ಎಂದು ನಂಬಿದ್ದರು. ಆದರೆ ಅದನ್ನೊಂದು ಸಿದ್ಧಾಂತವಾಗಿ ಪರಿಗಣಿಸಿರ ಲಿಲ್ಲ.
ಹೀಗಾಗಿ ಅಲ್ಲಿನ ಡೆಮಾಕ್ರೆಟ್‌ಗಳು ಜನಸಾಮಾನ್ಯರನ್ನು ಬಹಳ ಸಂತೋಷದಿಂದ ಗುಲಾಮರನ್ನಾಗಿ ಮಾಡಿಕೊಂಡು, ಜಗತ್ತಿನಾದ್ಯಂತ ಇರುವ ಆರ್ಥಿಕತೆಗಳನ್ನು ಅಪರೂಪದ ಕ್ರೌರ‍್ಯದೊಂದಿಗೆ ಶೋಷಣೆ ಮಾಡಿದರು. ಬ್ರಿಟಿಷರು ಇಂಗ್ಲಿಷ್ ಭಾಷೆಯ ಮೂಲಕ ಎಲ್ಲವನ್ನೂ ನಿಯಂತ್ರಿಸಿದರು. ಹೀಗಾಗಿ ವಾಸ್ತವವನ್ನು ತಮಗೆ ಬೇಕಾದಂತೆ ಕಲಾತ್ಮಕವಾಗಿ ಮುಚ್ಚಿಟ್ಟು ಸ್ವಾರ್ಥ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇವತ್ತಿಗೂ ಇಂಗ್ಲಿಷ್ ಮೂಲಕ ಚರ್ಚೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ತಂತ್ರಗಾರಿಕೆ ಚಾಲ್ತಿಯಲ್ಲಿದೆ.
೧೯೪೫ರಲ್ಲಿ ಭಾರತದಲ್ಲಿ ನಡೆದ ಚುನಾವಣೆಯನ್ನು ಬ್ರಿಟಿಷ್ ರಾಜ್ ವ್ಯವಸ್ಥೆಯು ನಂತರ ನಡೆದ ಅಮಾನವೀಯ ದೇಶ ವಿಭಜನೆಗೆ ಸಮರ್ಥನೆಯಂತೆ
ದುರ್ಬಳಕೆ ಮಾಡಿಕೊಂಡಿತು (ಒಂದು ವೇಳೆ ಏಕೀಕೃತ ಭಾರತವು ಫೆಡರಲ್ ಪ್ರಜಾಪ್ರಭುತ್ವದ ಮಾದರಿಯಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದರೆ ಪಾಕಿಸ್ತಾನ ಮತ್ತು
ಬಾಂಗ್ಲಾದೇಶಗಳು ಆಗಾಗ ಅಸ್ಥಿರತೆಗೆ ಜಾರಿ ನಮಗೆ ತೊಂದರೆ ಕೊಡುವುದು ತಪ್ಪುತ್ತಿತ್ತು). ಆಗ ನಡೆದ ಮೋಸದ ಚುನಾವಣೆಯು ಶೇ.೧೦ರಷ್ಟು ಜನರಿಗೆ
ಮಾತ್ರ ಮತದಾನದ ಅವಕಾಶ ನೀಡಿತ್ತು ಎಂಬ ವಿಷಯವನ್ನು ಬ್ರಿಟಿಷರು ಜಾಣತನದಿಂದ ಮುಚ್ಚಿಟ್ಟರು. ಆ ಚುನಾವಣೆಯಲ್ಲಿ ಶ್ರೀಮಂತರಿಗೆ
ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು.
ಹೀಗಾಗಿ ಅದರ ಫಲಿತಾಂಶವು ಭಾರತೀಯರ ಜನಾದೇಶ ಆಗಿರಲೇ ಇಲ್ಲ. ದೇಶ ವಿಭಜಕರ ಆದೇಶ ಅದಾಗಿತ್ತು. ಆ ಫಲಿತಾಂಶವನ್ನು ಕೂಡ ಬಹಳ ಸುಲಭವಾಗಿ ತಿರುಚಬಹುದಾಗಿತ್ತು. ಭಾರತದ ಪ್ರಜಾಪ್ರಭುತ್ವದ ಶಕ್ತಿ ಏನೆಂಬುದು ಅತ್ಯಂತ ಕೆಟ್ಟ ಗಳಿಗೆಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ೧೯೭೫ರಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದಾಗ ಭಾರತೀಯರು ಮತ್ತೆ ೧೯೭೭ರಲ್ಲಿ ಪ್ರಜಾಪ್ರಭುತ್ವದ ಮೂಲಕವೇ ಸ್ವಾತಂತ್ರ್ಯವನ್ನು ಮರಳಿ ಪಡೆದುಕೊಂಡರು. ಅದಕ್ಕಾಗಿ ಹಿಂಸಾಚಾರ ನಡೆಸುವ, ತೀವ್ರವಾದಿ ಪ್ರಯತ್ನಗಳಿಗೆ ಕೈಹಾಕುವ ಅಗತ್ಯವೇ ಬೀಳಲಿಲ್ಲ.
ಸಂವಿಧಾನವೇ ಜನರನ್ನು ರಕ್ಷಿಸಿತು ಮತ್ತು ಜನರು ತಮ್ಮ ಸಂವಿಧಾನವನ್ನು ರಕ್ಷಿಸಿಕೊಂಡರು. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಾವೊಬ್ಬ ಪ್ರಜಾಪ್ರಭುತ್ವವಾದಿ ಎಂಬ ವಿಷಯದಲ್ಲಿ ಬಹಳ ಹೆಮ್ಮೆಯಿತ್ತು. ಆದರೂ ಅವರು ಹಿಂಸಾಚಾರ ಮತ್ತು ಹಿಂಸಾತ್ಮಕ ಕ್ರಾಂತಿಗೆ ಅವಕಾಶ ನೀಡುವ ಮೊದಲ ಸಾಂವಿಧಾನಿಕ ತಿದ್ದುಪಡಿಯ ಯಜಮಾನಿಕೆಯನ್ನು ವಹಿಸಿದ್ದರು. ಸ್ವಾತಂತ್ರ್ಯವನ್ನು ಬೇಜವಾಬ್ದಾರಿಯಿಂದ ಬಳಸಿಕೊಂಡರೆ ಅದು ಕುಸಿಯುತ್ತದೆ ಎಂಬ ಬಗ್ಗೆ ಆಗ ಚರ್ಚೆಯೇ ನಡೆಯಲಿಲ್ಲ. ಆಗೇನಾದರೂ ವಿವಾದವಾಗುವುದಿದ್ದರೆ ಅದು ತಪ್ಪು ನಿರ್ಧಾರದ ಬಗ್ಗೆ ಆಗುತ್ತಿತ್ತು.
ಉದಾಹರಣೆಗೆ, ಭಾರತೀಯ ಚಿತ್ರರಂಗದ ಮುತ್ಸದ್ದಿ ಬಲರಾಜ್ ಸಾಹ್ನಿ ಅವರು ಕಮ್ಯುನಿಸ್ಟ್ ಪಕ್ಷಕ್ಕೆ ಬೆಂಬಲ ನೀಡಿದ ಕಾರಣಕ್ಕೆ ಅವರನ್ನು ಬಂಧಿಸಿದ ವಿಚಾರ ದೊಡ್ಡ ವಿವಾದವಾಗಿತ್ತು. ೧೯೫೧ರಲ್ಲಿ ಪ್ರಸಿದ್ಧ ಕವಿ ಹಾಗೂ ಸಿನಿಮಾ ಗೀತರಚನೆಕಾರ ಮಜ್ರೂಹ್ ಸುಲ್ತಾನ್‌ಪುರಿ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ‘ನೆಹರು ಬ್ರಿಟಿಷ್ ಕಾಮನ್ವೆಲ್ತ್‌ನ ಗುಲಾಮ’ ಎಂದು ಅವರು ಹೇಳಿದ್ದರು. ‘ಭಾರತದ ಈ ನಾಯಕ ಇನ್ನೊಬ್ಬ ಹಿಟ್ಲರ್ ಆಗಿದ್ದಾನೆಯೇ?’ ಎಂದು ಕೇಳಿದ್ದರು. ಅದಕ್ಕೆ ಕ್ಷಮೆ ಕೇಳಲು ಅವರು ಒಪ್ಪಲಿಲ್ಲ. ಹೀಗಾಗಿ ಎರಡು ವರ್ಷ ಜೈಲುಶಿಕ್ಷೆ ಅನುಭವಿಸಿದರು.
ಜೈಲಿನಿಂದ ಹೊರಬಂದ ನಂತರ ಅವರು ತಲೆಯೆತ್ತಿ ಹೆಮ್ಮೆಯಿಂದ ಓಡಾಡಿದರು. ‘ನರ್ತಿಸಬೇಕೆಂದರೆ ಕಾಲಿಗೆ ಕಟ್ಟಿರುವ ಸರಪಳಿಯನ್ನು ನೋಡಬೇಡಿ’ ಎಂಬಂಥ ಅದ್ಭುತ ಸಾಲುಗಳನ್ನು ಬರೆದ ಮಾಂತ್ರಿಕ ಕವಿ ಅವರು. ಭಾರತೀಯರಿಗೆ ಸ್ವಾತಂತ್ರ್ಯದ ಸೂಕ್ಷ್ಮಗಳು ಗೊತ್ತಿವೆ. ನಾವು ಚುನಾಯಿತ ನಾಯಕನಿಗೆ ಗೌರವ ನೀಡಿ, ಅವರಿಂದಲೂ ಅಷ್ಟೇ ಗೌರವವನ್ನು ನಿರೀಕ್ಷಿಸುತ್ತೇವೆ. ನಮಗೆ ಗೊಂದಲಗಳಿಲ್ಲ. ನಾವು ನೆಹರು ಅವರಿಂದ ಕವಿತೆಯನ್ನು ಬಯಸುವು ದಿಲ್ಲ ಮತ್ತು ಸಾಹ್ನಿ ಅಥವಾ ಮಜ್ರೂಹ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುವುದಿಲ್ಲ.
ನಮಗೆ ಸ್ವಾತಂತ್ರ್ಯದ ರಸ್ತೆಗಳು ಮತ್ತು ಅವು ಒಂದಕ್ಕೊಂದು ಸಂಧಿಸುವ ವೃತ್ತ ಅಥವಾ ಚೌಕಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ನಮಗೆ ನಿಷ್ಠೆ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ ಗೊತ್ತಿದೆ. ನಾವು ನಮ್ಮ ರಾಷ್ಟ್ರಧ್ವಜದ ಮುಂದೆ ಹಾಗೂ ಪವಿತ್ರ ರಾಜಕೀಯ ಗ್ರಂಥವಾದ ಸಂವಿಧಾನಕ್ಕೆ ತಲೆಬಾಗು ತ್ತೇವೆ. ಅಧಿಕಾರಶಾಹಿಗೆ ಕುರುಡಾಗಿ ತಲೆಬಾಗುವ ಪ್ರವೃತ್ತಿಯನ್ನು ಶತಮಾನಗಳ ಫ್ಯೂಡಲಿಸಂ ಮತ್ತು ಸಾಮ್ರಾಜ್ಯಶಾಹಿತನವು ಕೊನೆಗಾಣಿಸಿದೆ.
ಮಾರ್ಕ್ಸಿಸಂ ಎಷ್ಟು ಶಾಂತಿಯುತವಾಗಿ ಅಧಿಕಾರಕ್ಕೆ ಬಂದಿತ್ತೋ ಅಷ್ಟೇ ಶಾಂತವಾಗಿ ಅಽಕಾರದಿಂದ ನಿರ್ಗಮಿಸಿರುವುದು ಭಾರತದಲ್ಲಿ ಮಾತ್ರ. ಕಳೆದ ಶತಮಾನದ ಉದ್ದಕ್ಕೂ ಮಾರ್ಕ್ಸಿಸ್ಟ್‌ಗಳು, ಟ್ರಾಟ್‌ಸ್ಕಿಯಿಸ್ಟ್‌ಗಳು, ಸ್ಟಾಲಿನಿಸ್ಟ್‌ಗಳು ಹಾಗೂ ಮಾವೋಯಿಸ್ಟ್‌ಗಳು ಕ್ರಾಂತಿಕಾರಿ ಆರ್ಥಿಕ ವಿಮೋಚನೆಯ ಹೋರಾಟದ ಭ್ರಮೆಯನ್ನು ಜನರ ಮನಸ್ಸಿನಿಂದ ಹೊರಹಾಕುವುದಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಿ ಮುಗಿಸಿದರು.
ದಮನಿತರ ಧ್ವನಿಯ ಹೆಸರಿನ ಅಸವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬಾರದು ಎಂಬುದನ್ನು ತೋರಿಸಿಕೊಟ್ಟರು. ನೀವು ನಡೆಸಬೇಕಾದ
ಚಿಂತನೆಯನ್ನು ರಾಜ್ಯವು ನಿಮಗಾಗಿ ನಡೆಸುತ್ತದೆ. ಮಾರ್ಕ್ಸಿಸಂನಿಂದ ಭಾರತವನ್ನು ಬದಲಾಯಿಸಲು ಆಗಲಿಲ್ಲ. ಮಾರ್ಕ್ಸಿಸ್ಟ್‌ಗಳನ್ನು ಭಾರತ ಬದಲಿಸಿತು. ಇದಕ್ಕೆ ಸಂಪೂರ್ಣ ವ್ಯತಿರಿಕ್ತ ಎಂಬಂತೆ ಮಾರ್ಕ್ಸ್, ಮಾವೋ ಜೆಡಾಂಗ್ ಮತ್ತು ಸರ್ವಾಧಿಕಾರಿ ಡೆಂಗ್ ಕ್ಸಿಯಾಪಿಂಗ್ ಅವರು ಚೀನಿಯರನ್ನೇ ಬದಲಾಯಿಸಿದರು. ಚುನಾವಣೆಯ ಪಟ್ಟಿಯಲ್ಲಿ ಚೀನಾದ ಗೈರುಹಾಜರಿ ಈಗಲೂ ಎದ್ದು ಕಾಣುತ್ತದೆ. ಆದರೆ ಎಲ್ಲಿಯವರೆಗೆ ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ.
ಇವತ್ತಿಗೂ ಚುನಾವಣೆಯಿಂದ ವಿನಾಯಿತಿ ಪಡೆದ ಏಕೈಕ ಪ್ರಮುಖ ದೇಶ ಚೀನಾ. ಅಲ್ಲಿ ಇಡೀ ದೇಶವು ಚೈನೀಸ್ ಕಮ್ಯುನಿಸ್ಟ್ ಪಕ್ಷದ ಗುಲಾಮನಂತೆ ವರ್ತಿಸುತ್ತದೆ. ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ಮಿ ದೇಶಕ್ಕೆ ಸೇರಿದ್ದಲ್ಲ, ಬದಲಿಗೆ ಕಮ್ಯುನಿಸ್ಟ್ ಪಾರ್ಟಿಗೆ ಸೇರಿದ್ದು. ಜನರಿಗೆ ಶಾಶ್ವತವಾಗಿ ಸ್ವಾತಂತ್ರ್ಯ ವನ್ನು ನಿರಾಕರಿಸಬಹುದು ಎಂದು ಭಾವಿಸಿದ್ದ ಬೇರೆಲ್ಲರೂ ಅದು ಸುಳ್ಳು ಎಂಬುದನ್ನು ಬೇಗ ಮನವರಿಕೆ ಮಾಡಿಕೊಂಡರು. ಸರ್ವಾಧಿಕಾರ ಯಾವತ್ತೂ
ಶಾಶ್ವತವಲ್ಲ. ಸರ್ವಾಧಿಕಾರಿಗಳು ಒತ್ತಡವಿದ್ದಂತೆ. ಅವರಿಗೆ ಜನರ ನಡುವಿನ ಸಂವಹನಕ್ಕೆ ಇರುವ ಶಕ್ತಿಯ ಅರಿವಿದೆ.
ಹೀಗಾಗಿ ಅವರು ಭಯ ಮತ್ತು ಸೆನ್ಸಾರ್‌ಶಿಪ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಅದು ದಿವಾಳಿತನದ ಕಡೆಗೆ ನಿಧಾನವಾಗಿ ಕೊಂಡೊಯ್ಯುವ ದೊಡ್ಡ ರಸ್ತೆ ಎಂಬುದನ್ನು ಒಪ್ಪಲು ಅವರು ಸಿದ್ಧರಿಲ್ಲ. ಸ್ವಾತಂತ್ರ್ಯದ ಎಂಜಿನ್ ನಡೆಯುವುದೇ ಮಾತಿನಿಂದ. ಪ್ರಸಿದ್ಧರು ಮತ್ತು ಕುಪ್ರಸಿದ್ಧರ ಬಗ್ಗೆ ಜನರು
ಮಾತನಾಡುತ್ತಾರೆ. ಬದುಕಿರುವವರ ನಡುವೆ ಮತ್ತು ತಲೆಮಾರುಗಳಿಂದ ಬಂದ ಅನುಭವಗಳ ಬಗ್ಗೆ ಮಾತುಕತೆ ನಡೆಯುತ್ತದೆ. ಸ್ವಾತಂತ್ರ್ಯದ ಐದನೇ ಆಧಾರಸ್ತಂಭ ಎಂದು ಪ್ರಸಿದ್ಧಿ ಪಡೆದಿರುವ ಮಾಧ್ಯಮಗಳು ಟೀ ಅಂಗಡಿ, ಬಸ್ ನಿಲ್ದಾಣ ಹಾಗೂ ರೈಲ್ವೆ ಪ್ಲಾಟ್-ರಂಗಳಿಗಿಂತ ಬಹಳ ಹಿಂದಿವೆ.
ಏಕೆಂದರೆ ಅಲ್ಲಿ ಭೇಟಿಯಾಗುವ ಅಪರಿಚಿತರ ನಡುವೆಯೇ ಸಾರ್ವಜನಿಕ ಅಭಿಪ್ರಾಯಗಳೆಂಬ ಸುನಾಮಿಗಳು ನಿಧಾನವಾಗಿ ರೂಪುಗೊಳ್ಳುತ್ತವೆ.
ತಂತ್ರಜ್ಞಾನಗಳು ಬರುವುದಕ್ಕೂ ಬಹಳ ಮೊದಲೇ ಮುಕ್ತ ಸಾಮಾಜಿಕ ವ್ಯವಸ್ಥೆಯಿರುವ ದೇಶಗಳಲ್ಲಿ ಸೋಷಿಯಲ್ ಮೀಡಿಯಾಗಳಿದ್ದವು. ಭಾರತೀಯ ರಿಗೆ ಮಾತನಾಡುವುದು ಬಹಳ ಇಷ್ಟ. ಅದೇ ಸ್ವಾತಂತ್ರ್ಯ. ಭಯವಿಲ್ಲದೆ ಮಾತನಾಡುವುದೇ ನಿಜವಾದ ಸ್ವಾತಂತ್ರ್ಯ. ಟ್ಯಾಗೋರರು ಕೂಡ ಅದನ್ನೇ ಬರೆದಿದ್ದಾರೆ. ‘ಸ್ವಾತಂತ್ರ್ಯದ ಆ ಸ್ವರ್ಗಕ್ಕೆ ನನ್ನ ದೇಶವನ್ನು ಮುನ್ನಡೆಸು’. ನಡಿಗೆ ಮುಂದುವರೆದಿದೆ.
(ಲೇಖಕರು ಹಿರಿಯ ಪತ್ರಕರ್ತರು)