Thursday, 28th November 2024

ಗುಟುಕಿರದ ನೆಲದಲ್ಲಿ ಕ್ಯಾಂಗರೂ ಇಲಿ ಆಗಬೇಕೇನು ?

ಸುಪ್ತ ಸಾಗರ

rkbhadti@gmail.com

ಈ ಸಂದರ್ಭದಲ್ಲಿ ಬ್ಲಾಗ್ ಒಂದರಲ್ಲಿ ಓದಿದ ಸಾಲುಗಳು ನೆನಪಾಗುತ್ತಿವೆ. ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ ‘ಹ್ಯೂಮಾನಿಟಿ ಅಂಡ್ ನೇಚರ್’ ಕೃತಿಯಲ್ಲಿ ೧೫ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು ೧೭ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು
ಎಂದು ಅಭಿಪ್ರಾಯ ಪಡುತ್ತಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬ ಮಹಾನುಭಾವನೊಬ್ಬ ‘ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ’ ಎಂದು ವಾದಿಸಿದ್ದಾನಂತೆ. ಹಣೆಬರ, ಮುಂದೊಂದು ದಿನ ನಾವು ಬಾಯಾರಿ, ಬಳಲಿ ಬೆಂಡಾಗಿದ್ದಾಗ ಗುಟುಕು ನೀರು ಕುಡಿಯಬೇಕಾದರೂ ಎಲ್ಲಿಯೋ, ಯಾವ ದೇಶದ ಕುಳಿತಿರುವ ದೊಣ್ಣೆ ನಾಯಕನ ಅಪ್ಪಣೆಯನ್ನು ಬೇಡ ಬೇಕಾದ ಪರಿಸ್ಥಿತಿ ಬಂದೊದಗಿ ದಾಗ ಇವರಿಗೆಲ್ಲ ತಮ್ಮದು ಎಂಥ ಮೂರ್ಖತವೆಂಬುದು ಅರ್ಥವಾದೀತು.

ಇದರಲ್ಲಿ ಅತಿಶಯವೇನೂ ಇಲ್ಲ. ಅಥವಾ ಇದು ಅತಿರಂಜಿತ ಕಲ್ಪನೆಯೂ ಅಲ್ಲ. ನೀರಿನ ಖಾಸಗೀಕರಣ ದಟ್ಟವಾಗುತ್ತಿರುವ ದಿನಗಳಲ್ಲಿ ಮುಂದೊದಗಬಹುದಾದ ಸುದೀರ್ಘ ಜಲಕಷ್ಟದ ದಿನಗಳನ್ನು ಊಹಿಸಿಕೊಂಡರೆ ಪ್ರಾಯಶಃ ಇನ್ನೂ ಕಠಿಣ ಪದಗಳಲ್ಲಿ ಇದನ್ನು ಬಣ್ಣಿಸಬೇಕಾಗುತ್ತದೇನೋ!

ಅಂತರ್ಜಲವೆಂಬುದು ಬತ್ತಿ ಬರಡಾಗುತ್ತಿದ್ದರೂ ನಗರಗಳು ಬೆಳೆಯುತ್ತಲೇ ಇವೆ. ನದಿಗಳು ಕಣ್ಮರೆಯಾಗಿ ಹೋಗುತ್ತಿರು ವಾಗಲೇ ಮೇಲಿಂದ ಮೇಲೆ ಬೃಹತ್ ಒಡ್ಡುಗಳ ಸಂಖ್ಯೆ ಹೆಚ್ಚುತ್ತಿವೆ. ಮಳೆ ನೀರಿನ ಒಂದು ಹನಿಯನ್ನೂ ಹಿಡಿದಿಟ್ಟುಕೊಳ್ಳಲು ಯೋಚಿಸದೇ ನಿರ್ಲಕ್ಷಿಸುತ್ತಲೇ ನೀರಿನ ಖಾಸಗೀಕರಣದ ಮಾತನಾಡುತ್ತಿದ್ದೇವೆ. ಒಂದೆಡೆ ನದಿ- ಜಲ ವಿವಾದಗಳು ನಿತ್ಯದ ಸುದ್ದಿಯಾಗುತ್ತಿರುವುದನ್ನು ಕಂಡರೆ ನದಿಗಳ ಜೋಡಣೆಯ ಹೆಸರಿನಲ್ಲಿ, ನೀರಿನ ಹಂಚಿಕೆಯ ವಿಚಾರದಲ್ಲಿ ರಸ್ತೆರಸ್ತೆಗಳಲ್ಲಿ ರಕ್ತದ ಓಕುಳಿಯೇ ಹರಿದೀತು.

ಹಿರಿಯ ಪತ್ರಕರ್ತ, ವಿeನ ಬರಹಗಾರ ನಾಗೇಶ್ ಹೆಗಡೆಯವರು ಹೇಳುತ್ತಿದ್ದರು- ‘ಹಿಂದೆಲ್ಲ ನಮ್ಮ ಪುರಾಣಗಳಲ್ಲಿ ಜನಪದ ದಲ್ಲಿ ಬರುತ್ತಿದ್ದ ಕತೆಗಳನ್ನೆಲ್ಲ ಬದಲಿಸಬೇಕಾಗಿ ಬರಬಹುದು. ಮಹಾಭಾರತದಲ್ಲಿ ಕೊಳದಿಂದ ಮೇಲೆದ್ದು ಬರುವ ಯಕ್ಷ, ಯುಧಿಷ್ಠಿರನ ಸತ್ಯ ಪರೀಕ್ಷೆ ಮಾಡಿದ್ದನಂತೆ. ಈಗ ಕೊಳದಿಂದ ಆತ ಎದ್ದು ಬಂದರೆ ಯಾವ ಪ್ರಶ್ನೆಯನ್ನೂ ಕೇಳದೆ ಅಲ್ಲಿನ ದುರ್ನಾತಕ್ಕೆ ಮೂಗುಮುಚ್ಚಿಕೊಂಡು ಮುಳುಗಲಿದ್ದಾನೆ. ಕೊಡದಲ್ಲಿ ನೀರಿದೆಯೆಂದು ಭಾವಿಸಿ ಪಂಚತಂತ್ರದ ಕಾಗೆ ಅಲ್ಲಿ ಇಲ್ಲಿಂದ ಜಲ್ಲಿಕಲ್ಲುಗಳನ್ನು ತಂದುತಂದು ತುಂಬುತ್ತಿರುವಾಗ ಬಾಯಾರಿಕೆಯ ಜತೆ ಬಳಲಿಕೆಯೂ ಸೇರಿ ಅದರ ಪ್ರಾಣಪಕ್ಷಿ ಹಾರಿಹೋಗುತ್ತದೆ.

ನೀರಿನ ಬಗೆಗಿನ ಯಾವ ಕಥೆಯೂ ಇನ್ನು ಸುಂದರವಾಗಿರಲು ಸಾಧ್ಯವೇ ಇಲ್ಲ. ಅಂಥ ಪರಿಸ್ಥಿತಿಗೆ ಬಂದು ತಲುಪಿಬಿಟ್ಟಿದ್ದೇವೆ’.
ಈ ನೀರೆಂಬುದೇ ಮಾಯೆ. ಅದರಷ್ಟು ಚಂಚಲೆ ಮತ್ತೊಂದಿಲ್ಲ. ಭೂಮಿಯ ಮೇಲಿನ ಪರಿಸರವ್ಯೂಹದಲ್ಲಿ ಜೀವಿಗಳು ಬದುಕಲು ಈ ಮಾಯೆಯ ಅವಲಂಬನೆ ಇಲ್ಲದೇ ಸಾಧ್ಯವೇ ಇಲ್ಲ. ಎಲ್ಲೋ ಓದಿದ ನೆನಪು. ಜೀವಿಗಳಲ್ಲಿ ಕಾಂಗರೂ ಇಲಿ ಮಾತ್ರವೇ ನೀರನ್ನು ಮುಟ್ಟದೇ ಬದುಕುವಂಥದ್ದು. ಅದು ಜೀವನ ಪರ್ಯಂತ ನೀರನ್ನೇ ಕುಡಿಯುವುದಿಲ್ಲವಂತೆ.

ಹಾಗೆಂದು ಅದು ನೀರಿಲ್ಲದೇ ಬದುಕುತ್ತದೆ ಎಂಬುದು ತಪ್ಪು. ಅದರ ಶರೀರದಲ್ಲಿಯೇ ಸಾಕಷ್ಟು ನೀರು ಇದ್ದೇ ಇರುತ್ತದೆ. ಜತೆಗೆ ಅದು ಸೇವಿಸುವ ಆಹಾರದಲ್ಲಿರುವ ತುಸು ಪ್ರಮಾಣದ ನೀರಿನ ಅಂಶವೇ ಅದರ ಬೆಳವಣಿಗೆಗೆ ಸಾಕಾಗುತ್ತದೆ. ಅದು ಬಿಟ್ಟರೆ ಬೇರಾವ ಜೀವಿಯೂ ನೀರಿಲ್ಲದೆ ಜೀವಿಸಲು ಸಾಧ್ಯವೇ ಇಲ್ಲ. ಹೀಗಾಗಿ ಭೂಮಿಯ ಮೇಲೆ ಬದುಕಿರುವ ಬಿಲಿಯ ಗಟ್ಟಲೆ ಜೀವಿಗಳಿಗೆ ಇರುವ ಕುಡಿಯುವ ನೀರು ಒಂದೇ ಮೂಲವನ್ನು ನಾವು ಎಷ್ಟು ಜತನ ಮಾಡಬೇಕಿತ್ತು ಎಂಬುದನ್ನು ಯೋಚಿಸಿ. ಭೂಗರ್ಭದಲ್ಲಿ ಅಡಗಿರುವ ಅಂತರ್ಜಲ, ಕೆರೆ, ಹೊಳೆ, ಹಳ್ಳ, ನದಿಗಳಲ್ಲಿರುವ ನೀರೇ ಎಲ್ಲ ಜೀವಿಗಳ ಬದುಕಿಗೆ ಆಧಾರ. ಅದನ್ನೇ ನಾವು ಬರಿದು ಮಾಡಿದ್ದೇವೆ.

ಇನ್ನೊಂದು ಸತ್ಯ ಗೊತ್ತೇ? ನಮ್ಮೆದುರಿರುವ ವಿಶ್ವದಲ್ಲಿ ಇರುವ ಸೌರವ್ಯೂಹಗಳೆಷ್ಟೋ. ಒಂದೊಂದೂ ಸೌರವ್ಯೂಹದಲ್ಲೂ ಅನೇಕ ಗ್ರಹಗಳು, ಉಪಗ್ರಹಗಳು ಇರುತ್ತವೆ. ನಮ್ಮ ಸೌರವ್ಯೂಹದಲ್ಲಿ ಮಂಗಳ, ನೆಪ್ಚೂನ್, ಯುರೇನಸ್ ಮತ್ತಿತರ ಗ್ರಹಗಳಲ್ಲಿ ನೀರಿರುವ ಕುರುಹುಗಳು ದೊರೆತಿದೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಅಸಲಿಗೆ ಜೀವಿಗಳು ಉಪಯೋಗಿಸುವ
ಸ್ಥಿತಿಯಲ್ಲಿ ಅಂದರೆ ದ್ರವರೂಪದಲ್ಲಿ ನೀರಿರುವ ಗ್ರಹವೆಂದರೆ ಈವರೆಗೆ ಇರುವುದು ಭೂಮಿ ಒಂದೇ. ಇದೇ ಕಾರಣಕ್ಕೆ
ಭೂಮಿಯನ್ನು ಬಯೋಸ್ಪಿರ್ಯ ಅಥವಾ ಜೀವಗೋಲ ಎನ್ನುತ್ತಾರೆ.

ಭೂಮಿಯ ಮೇಲೆ ನೀರು ಯಾವಾಗ ಉದ್ಭವಿಸಿತು ಎಂಬುದು ಇವತ್ತಿಗೂ ವಿವಾದದ ಸಂಗತಿಯೇ. ಆದರೆ, ಹೇಗೋ ಉದ್ಭವಿಸಿದ ನೀರಿನ ಶೇ.೯೭ಭಾಗ (ಅಂದರೆ ೧,೩೮೬, ೦೦೦,೦೦೦ ಕಿ.ಮೀ) ಸಮುದ್ರ, ಮಹಾಸಾಗರಗಳಲ್ಲಿದೆ. ಉಳಿದ ಶೇ.೩ ಭಾಗ ಕೆರೆ, ಹಳ್ಳ-ಕೊಳ್ಳ, ನದಿಗಳಲ್ಲಿ, ಅಂತರ್ಜಲದ ರೂಪದಲ್ಲಿ, ಧ್ರುವ ಪ್ರದೇಶ ಮತ್ತು ಹಿಮಾಲಯದಲ್ಲಿ ಹಿಮದ ರೂಪದಲ್ಲಿ ನೀರು ಇದೆ. ಭೂಮಿಯ ಮೇಲೆ ಇಷ್ಟೆಲ್ಲ ನೀರಿದ್ದರೂ, ಕುಡಿಯಲು ದೊರೆಯುವ ನೀರು ಕೇವಲ ಶೇ.೦.೦೦೭ರಷ್ಟು ಮಾತ್ರ.

ಸಮುದ್ರ, ಮಹಾಸಾಗರಗಳಲ್ಲಿ ಅಗಾಧ ಪ್ರಮಾಣದ ನೀರು ತುಂಬಿದ್ದರೂ, ಆದರಲ್ಲಿ ಶೇ.೩.೩ ರಷ್ಟು ಉಪ್ಪು ಕರಗಿರುವು ದರಿಂದ ಮಾನವನಿಗಾಗಲೀ ಅಥವಾ ಯಾವುದೇ ಭೂಚರ ಜೀವಿಗೆ ಕುಡಿಯಲು ಯೋಗ್ಯವಲ್ಲ. ಸಮುದ್ರದ ಈ ಉಪ್ಪು ನೀರು ರುಚಿಯೂ ಇರುವುದಿಲ್ಲ, ಆರೋಗ್ಯಕ್ಕೆ ಹಾನಿಕರವೂ ಕೂಡ. ಕುಡಿಯಲಷ್ಟೇ ಏಕೆ, ಅದು  ಕೃಷಿಗೆ ಕೂಡ ಉಪಯೋಗಕ್ಕೆ ಬಾರದು. ನಾವು ಕುಡಿಯುತ್ತಿರುವುದು ಸಿಹಿ ನೀರನ್ನು. ಹಾಗೆಂದು ನೀರೇನೂ ಸಿಹಿ ಇರುವುದಿಲ್ಲ.

ವೈಜ್ಞಾನಿಕವಾಗಿ ಶುದ್ಧ ನೀರು (ಪೊಟಬಲ್ ವಾಟರ್) ಎಂದು ಕರೆಸಿಕೊಳ್ಳುವ ನೀರಿಗೆ ಯಾವ ರುಚಿಯೂ ಇರುವುದಿಲ್ಲ. ಅಷ್ಟೇ ಅಲ್ಲ, ಅದಕ್ಕೆ ಯಾವುದೇ ರುಚಿಯಾಗಲಿ, ಬಣ್ಣವಾಗಲಿ, ವಾಸನೆಯಾಗಲಿ ಇಲ್ಲ. ಇದೊಂದು ತಟಸ್ಥ ದ್ರವ. ಜಲಜನಕ ಮತ್ತು ಆಮ್ಲಜನಕಗಳು ಸೇರಿ ತಯಾರಾದ ಒಂದು ಸಂಯುಕ್ತ ರಸಾಯನ. ಅದರಲ್ಲಿ ಅಲ್ಪ ಪ್ರಮಾಣದ ಖನಿಜಗಳು, ಲವಣಗಳು, ಕರಗಿ ರೇಕು. ಅತ್ಯಲ್ಪ ಪ್ರಮಾಣದ ಧಾತುಗಳ ಕಣಗಳು (ಮೆಟಲ್ಸ), ಸಾವಯವ ರಸಾಯನಗಳು ನೀರಿನಲ್ಲಿ ಕರಗಿದ್ದರೂ ಅದು
ಕುಡಿಯಲು ಯೋಗ್ಯವಾಗಿರಬಹುದು. ಆದರೆ ಲವಣರಹಿತ ವಾದ ಅತ್ಯಂತ ಪರಿಶುದ್ಧ ನೀರು ಕುಡಿಯಲು ಯೋಗ್ಯವಲ್ಲ.

ಲವಣರಹಿತ ಪರಿಶುದ್ಧ ನೀರನ್ನು ಕುಡಿದರೆ, ಅದು ನಮ್ಮ ಜಠರದ ಮೂಲಕ ಸಾಗುವಾಗ ಶರೀರದಲ್ಲಿರುವ ಲವಣಗಳನ್ನು ಹೀರಿಕೊಂಡು ಬಿಡುತ್ತದೆ. ವಿಷಯುಕ್ತವಸ್ತುಗಳು, ಮಲಿನಕಗಳು, ನೀರಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿದ್ದರೂ ಅದನ್ನು ಕುಡಿಯಬಾರದು. ಸೂಕ್ಷ್ಮ ಜೀವಿಗಳು, ಕಣಗಳು ನೀರಿನಲ್ಲಿದ್ದರೂ ಅದನ್ನು ಕುಡಿಯಬಾರದು. ವಿಶ್ವಸಂಸ್ಥೆಯ ಅಂಗವಾದ ಆರೋಗ್ಯ ಮತ್ತು ಕೃಷಿಸಂಸ್ಥೆಯು (ಎಫ್ಎಓ) ಕುಡಿಯುವ ನೀರಿನಲ್ಲಿರಬಹುದಾದ ಘಟಕಗಳ ಪಟ್ಟಿಯನ್ನೇ ನೀಡಿದೆ. ಆದರೆ ಇವತ್ತು ನಾವು ಕುಡಿಯುತ್ತಿರುವ ನೀರು ಈ ಎಲ್ಲ ಮಾನದಂಡವನ್ನೂ ಮೀರಿದ್ದು.

ಯಾವುದೇ ಖನಿಜ ಅಥವಾ ಲವಣ ಈ ಪಟ್ಟಿಯಲ್ಲಿ ನೀಡಿದ ಪ್ರಮಾಣಕ್ಕಿಂತ ಹೆಚ್ಚಾದರೆ ಅದು ಕುಡಿಯಲು ಯೋಗ್ಯವಲ್ಲ. ಅಂಥ ಮಲೀನ ನೀರನ್ನು ಕುಡಿಯುವುದರಿಂದ ಬಗೆಬಗೆಯ ರೋಗಗಳು ಕಾಣಿಸಿಕೊಳ್ಳುತ್ತವೆ. ಅನೇಕ ಕಾರ್ಖಾನೆಗಳು, ಉದ್ದಿಮೆಗಳು ಬಳಸಿದ ನೀರನ್ನು ನದಿ, ಹೊಳೆ, ಹಳ್ಳಗಳಿಗೆ ಬಿಡುವುದು ವಾಡಿಕೆ. ಅದರಿಂದ ಶುದ್ಧ ನೀರು ಮಲಿನವಾಗುತ್ತದೆ. ಆಧುನಿಕ ಕೃಷಿಯಲ್ಲಿ ಬಳಸುವ ರಸಗೊಬ್ಬರಗಳು, ಕೀಟನಾಶಕಗಳು ಕೂಡ ಸಮೀಪದಲ್ಲಿರುವ ಸಿಹಿನೀರಿನ ತಾಣಗಳಲ್ಲಿರುವ ಶುದ್ಧ ನೀರನ್ನು ಮಲಿನಗೊಳಿಸುತ್ತವೆ.

ಶುದ್ಧ ನೀರು ಕೆರೆ-ಕೊಳಗಳಲ್ಲಿ, ಹೊಳೆ-ಹಳ್ಳಗಳಲ್ಲಿ, ನದಿಗಳಲ್ಲಿ ಹಾಗೂ ಅಂತರ್ಜಲದಲ್ಲಿ ಮಾತ್ರ ದೊರೆಯುತ್ತದೆ. ಅದು ಕುಡಿಯಲು ಯೋಗ್ಯವಾದುದು. ಬಾವಿ, ಚಿಲುಮೆ ಗಳಲ್ಲಿಯೂ ಕುಡಿಯುವ ನೀರು ದೊರಕುತ್ತದೆ. ಕಾಲಕಾಲಕ್ಕೆ ಮಳೆಯಾಗು ತ್ತಿದ್ದರೆ ಅಗಾಧ ಪ್ರಮಾಣದಲ್ಲಿ ಸಮುದ್ರ- ಮಹಾಸಾಗರಗಳಲ್ಲಿ ಸಂಗ್ರಹವಾದ ಉಪ್ಪು ನೀರು ಶುದ್ಧಗೊಂಡು ಭೂಮಿಯನ್ನು ಸೇರುತ್ತದೆ, ಭೂಮಿಯ ಮೇಲಿನ ಸಿಹಿನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದರೆ ತೆರೆದ ಕೆರೆ, ಕೊಳ, ನದಿಗಳ ನೀರು ಶುದ್ಧವಾಗಿದೆ ಎನಿಸಿದರೂ ಅದರಲ್ಲಿ ಸೂಕ್ಷ್ಮ ಜೀವಿಗಳು, ವಿಷಕಾರಕ ವಸ್ತುಗಳೂ ಸೇರಿರುವ ಸಾಧ್ಯತೆ ಗಳಿರಬಹುದು. ಈ ಸ್ಥಳಗಳಲ್ಲಿ ದೊರೆಯುವ ನೀರನ್ನು ಶುದ್ಧೀಕರಿಸಿ ಕುಡಿಯಬಹುದು.

ಹಿಮದಗಡ್ಡೆಯ ರೂಪದಲ್ಲಿರುವ ನೀರು ಕೂಡ ದಾಹ ತಣಿಸುವುದಿಲ್ಲ. ಯಾವುದೇ ರೀತಿಯಲ್ಲಿ ನೋಡಿದರೂ ನೀರೊಂದು
ವಿಚಿತ್ರ, ವಿಲಕ್ಷಣ ಗುಣವನ್ನು ಹೊಂದಿರುವ ದ್ರವ. ಹಾಗೆಂದು ಅದು ದ್ರವವೇ ಅಂದರೆ ದ್ರವವಲ್ಲ. ಅದು ಅನಿಲವೂ ಹೌದು, ಘನ ವಸ್ತುವೂ ಹೌದು.ಬೇರೆ ಯಾವುದೇ ದ್ರವದಲ್ಲೂ ಕಾಣದಂಥ ವಿಲಕ್ಷಣ ಗುಣಧರ್ಮ ನೀರಿಗಿದೆ. ಇನ್ನು ಅದರ ಆಳಕ್ಕೆ ಇಳಿದರೆ ಅದೊಂದು ವಿಸ್ಮಯದ ಬೇರೆಯದೇ ಅದ ಪ್ರಪಂಚ. ನೀರು ಶೂನ್ಯ ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೆಪ್ಪುಗಟ್ಟುತ್ತದೆ, ನೂರು ಡಿಗ್ರಿಯಲ್ಲಿ ಕುದಿಯುತ್ತದೆ ಎಂಬುದನ್ನು ವಿಜ್ಞಾನದಲ್ಲಿ ಓದಿದ್ದೇವೆ.

ಆದರೆ ಇದಷ್ಟೇ ಸತ್ಯವಲ್ಲ. ಶೂನ್ಯ ಮತ್ತು ನೂರರ ನಡುವೆ ಇನ್ನೂ ಏನೇನೋ ಅಚ್ಚರಿಗಳಿವೆ ನೀರಿನಲ್ಲಿ. ೪,೩೫,೭೪ ಡಿಗ್ರಿ ಸೆಲ್ಸಿಯಸ್‌ನಲ್ಲಿ ಅದು ಪ್ರದರ್ಶಿಸುವ ವಿಲಕ್ಷಣ ಗುಣಗಳು ಅರ್ಥವಾಗಬೇಕೆಂದರೆ ವಿಜ್ಞಾನದ ಪದವಿಯೇ ಬೇಕು. ಅಥವಾ ಅದೂ ಸಾಲದಾಗುತ್ತದೆ. ಬ್ರಹ್ಮಾಂಡ ಹೇಗೆ ಅಸ್ತಿತ್ವಕ್ಕೆ ಬಂತು, ಅದರ ತುಬೆಂಲ್ಲ ಹಾಸುಹೊಕ್ಕಾಗಿರುವ ಕಪ್ಪುದ್ರವ್ಯಗಳು ಎಂಥವು, ವಿಶ್ವದ ನಾಲ್ಕೂ ಬಲಗಳನ್ನು ಒಂದಾಗಿಸಬಲ್ಲ ಸಮೀಕರಣ ಸೂತ್ರವೇನಾದರೂ ಇದೆಯೆ, ಇವೇ ಮುಂತಾದ ಘನ
ವಿದ್ವಾಂಸರ ಅರಿವಿಗೆ ಈಗಲೂ ದಕ್ಕಿಲ್ಲದ ಪ್ರಶ್ನೆಗಳ ಸಾಲಿನಲ್ಲಿ ನೀರೂ ನಿಲ್ಲುತ್ತದೆ.

ನಾಗೇಶ್ ಹೆಗಡೆಯವರೇ ಇದನ್ನು ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ- ‘ಕಡುಬನ್ನು ಸಲೀಸಾಗಿ ನುಂಗಬಲ್ಲವರ ಗಂಟಲಲ್ಲಿ ನೀರಿಳಿಯುವುದು ಕಷ್ಟವೇಕೆಂಬ ಪ್ರಶ್ನೆಗೆ ಉತ್ತರಿಸಲು ವಿಜ್ಞಾನಿಗಳು ಈಗಲೂ ತಿಣುಕುತ್ತಿದ್ದಾರೆ’. ಎಂಥ ಸತ್ಯವಲ್ಲವೇ?
ಇನ್ನು ದಾರ್ಶನಿಕರು ನೀರನ್ನು ಎಲ್ಲಕ್ಕಿಂತ ಮೃದು, ಎಲ್ಲಕ್ಕಿಂತ ಕಠಿಣ, ಎಲ್ಲಕ್ಕಿಂತ ಮೇಲು, ಎಲ್ಲಕ್ಕಿಂತ ಕೆಳಗಿನದ್ದು, ಎಲ್ಲವನ್ನೂ ಪೋಷಿಸುವಂಥದ್ದು… ಹೀಗೆ ಏನೇನೋ ಬಣ್ಣಿಸಿದ್ದಾರೆ.

ಒಟ್ಟಾರೆ ಮೊದಲೇ ಹೇಳಿದಂತೆ ನೀರು ಮಾಯೆ. ಅದು ಪ್ರತಿಯೊಬ್ಬರ ದೇಹದೊಳಕ್ಕೂ ಹೊಕ್ಕು ಹೊರಬಿದ್ದು ಆಟವಾಡಿಸುತ್ತದೆ. ನಮ್ಮ ಬೆವರು, ಕಣ್ಣೀರು, ತ್ಯಾಜ್ಯ, ವಿಷ, ಅಮೃತ, ಸಂಸ್ಕೃತಿ, ಸರಕು, ಸಮಸ್ತ ಅಸವಾಗಿಯೂ ನಿಲ್ಲುವ
ನೀರಿಗೆ ಸಮನಾದ ಮತ್ತೊಂದು ಈ ಜಗತ್ತಿನಲ್ಲಿಲ್ಲ. ಇಂಥ ನೀರನ್ನು ಹಾಳಗೆಡವಿಬಿಟ್ಟಿದ್ದೇವೆ. ಭೂಮಿಯ ಪಾತಳಿಯ
ಲ್ಲಿದ್ದ ಗಂಗೆ ಇಂದು ಪಾತಾಳಕ್ಕಿಳಿದಿದ್ದಾಳೆ. ನೀರು ಮನೆಯ ಮಗಳಾಗೇಕಿತ್ತು, ನಾವು ಮಾರಿಯನ್ನಾಗಿಸಿದ್ದೇವೆ. ಪೂಜಿಸಿ
ಪೋಷಿಸಬೇಕಿತ್ತು. ಆಕೆಯೇ ಪುತ್ಕರಿಸುತ್ತಿದ್ದಾಳೆ. ಎಲ್ಲರನ್ನೂ ತಣಿಸೇಕಿದ್ದ ನೀರನ್ನೇ ಕುದಿಸಿ ಉದ್ದಿಮೆ ಕಟ್ಟಿದ್ದೇವೆ. ಕೈಗಾರಿಕೆ
ಗಳನ್ನು ಬೆಳೆಸಿದ್ದೇವೆ. ನಮ್ಮನ್ನು ಪೊರೆಯುವ ನೀರನ್ನು ಹಣ ಗಳಿಸುವ ದಂಧೆಗೆ ಬಳಸಿದ್ದರ ಪರಿಣಾಮ ಇವತ್ತು ಅನು
ಭವಿಸುವಂತಾಗಿದೆ.

ಬೇಕಾಬಿಟ್ಟಿ ಬಳಸಿದ್ದರ ಫಲ ಉಣ್ಣುತ್ತಿದ್ದೇವೆ. ಅದನ್ನು ಕೊಳೆಗೊಳಿಸಿದ್ದರ ಪಾಪವನ್ನು ತೊಳೆದು ಕೊಳ್ಳಲು ನಮಗೆ ಬೇರೆ ನೀರಿಲ್ಲ. ಮನುಕುಲ ಮರುಗು ವಂತಾಗಿದೆ. ನೀರ ಸ್ವಾವಲಂಬನೆಯೊಂದೇ ನಮ್ಮನ್ನು ಈ ಮರುಕದಿಂದ ಪಾರು ಮಾಡಬಲ್ಲುದು ಎಂಬುದನ್ನು ನೆನಪಿಡಿ. ರಾಜ್ಯದಲ್ಲಿ ಮಳೆಯ ಅಂಕಿ-ಅಂಶ ಗಮನಿಸಿದರೆ ನೆಲ ದಾಳದಲ್ಲಿ ಶೇಖರಗೊಳ್ಳುವ ನೀರಿನ ಮೊತ್ತ ೧೬,೧೮,೩೮೮ ದಶಲಕ್ಷ ಘನ ಮೀಟರ್. ಇದರಲ್ಲಿ ಕೃಷಿ, ಕೈಗಾರಿಕೆ, ಕುಡಿಯಲು ಮತ್ತಿತರ ಬಳಕೆಗೆ ಶೇ. ೨೦ರಷ್ಟು ಅಂತರ್ಜಲ ಬಳಕೆಯಾಗುತ್ತದೆ.

ಅಂದರೆ ಎನಿಲ್ಲವೆಂದರೂ ಸುಮಾರು ೩.೨೫ ದಶಲಕ್ಷ ಘನಮೀಟರ್ನಷ್ಟು ನೀರು. ಇದು ಬಿಟ್ಟು ರಾಜ್ಯ ದಲ್ಲಿರುವ ಅಂದಾಜು ೯ ಲಕ್ಷ ಬಾವಿ/ ಕೊಳವೆಬಾವಿಗಳಿಂದ ಶೇ. ೭೦ರಷ್ಟು ಅಂತರ್ಜಲ ಬಳಕೆಯಾಗುತ್ತಿದೆ. ಅದರ ಮೊತ್ತ ಸುಮಾರು ೧೦ ದಶಲಕ್ಷ ಘನ ಮೀಟರ್. ಅದೆಲ್ಲದರಿಂದ ಹೊರತಾಗಿ ವೈಜ್ಞಾನಿಕವಾಗಿ ಅಂತರ್ಜಲದಲ್ಲಿ ಶೇ. ೬೫ಕ್ಕಿಂತ ಹೆಚ್ಚು ಭಾಗವನ್ನು  ಬಳಸುವಂತಿಲ್ಲ. ಹಾಗೂ ಬಳಸಿದ್ದರ ಪರಿಣಾಮವೇ ಕಪ್ಪು ವಲಯಗಳು ನಿರ್ಮಾಣವಾದದ್ದು. ಇದು ರಾಜ್ಯ ಮರುಭೂಮಿಯಾಗಿ ಮಾರ್ಪಡುತ್ತಿರುವ ಸೂಚನೆ.

ಹಿಂದೆಲ್ಲ, ಪೌರಾಣಿಕ ಯುಗದಲ್ಲಿ ದೇವತೆಗಳನ್ನು ಒಲಿಸಿಕೊಂಡು, ವರುಣಾರಾಧನೆಯಿಂದ ಮಳೆ ತರಿಸುತ್ತಿದ್ದರಂತೆ. ಅಂಥ ದೃಷ್ಟಾಂತಗಳನ್ನು ಓದಿದ್ದೇವೆ. ಹಳ್ಳಿಗಳಲ್ಲಿ ಇಂದಿಗೂ ಹಲವು ಜಾನಪದೀಯ ಆಚರಣೆಗಳಿವೆ. ಅದು ನಂಬಿಕೆ. ಇನ್ನು ಮೋಡಗಳನ್ನು ಚದುರಿಸಿ ಬೇಕೆಂದಾಗ ಮಳೆ ಸುರಿಸುವ ಸಾಹಸದ ಭ್ರಮೆಯೂ ವೈಜ್ಞಾನಿಕ ಯುಗದಲ್ಲಿ ಸಾಗಿದೆ. ಆದರೆ ನೂರಕ್ಕೆ ನೂರು ಸತ್ಯವೆಂದರೆ ತೀರಾ ಒಣಗಿದ ನೆಲವನ್ನು, ಅದರಾಳವನ್ನು ಮತ್ತೆ ಒದ್ದೆ ಮಾಡಬಹುದಾದ ಏಕೈಕ ಮಾರ್ಗವಿದ್ದರೆ ಅದು ಮಳೆನೀರು ಸಂಗ್ರಹ.

ಅದು ಬಹು ಸುಲಭ ತಂತ್ರ ಸಹ. ಇದು ಪ್ರತಿಯೊಬ್ಬರೂ ವೈಯಕ್ತಿಕ ಮಟ್ಟದಲ್ಲಿ ಪ್ರತಿಯೊಬ್ಬರಿಂದಲೂ ಆಗಬೇಕಿರುವುದು.
ಇದಕ್ಕಾಗಿ ಸರ್ಕಾರ, ಸಂಘ-ಸಂಸ್ಥೆಗಳನ್ನು ಕಾಯುವುದರಲ್ಲಿ ಅರ್ಥವಿಲ್ಲ. ಅದರ ಅಗತ್ಯವೂ ಇಲ್ಲ. ಹೆಚ್ಚೆಂದರೆ ಸರ್ಕಾರ,
ಸಂಘ-ಸಂಸ್ಥೆಗಳು ಯೋಜನೆಗಳನ್ನು ರೂಪಿಸ ಬಹುದು. ಆದರೆ ಅದರಲ್ಲಿ ಪಾಲ್ಗೊಂಡು ಪ್ರಯತ್ನಿಸಿದರೆ ಮಾತ್ರ ನಮ್ಮ
ಭೂಜಲದ ಕಣಜ ಮರುಭರ್ತಿಯಾಗಲು ಸಾಧ್ಯ. ಅಂಥ ಅರಿವು ನಮ್ಮಲ್ಲಿ ಇನ್ನಾದರೂ ಮೂಡಲಿ.