Friday, 20th September 2024

ನಶೆಮುಕ್ತ ಕರ್ನಾಟಕಕ್ಕಾಗಿ ದೊಡ್ಡ ಮೀನುಗಳಿಗೆ ಗಾಳ ಹಾಕಿ

ಅಭಿವ್ಯಕ್ತಿ

ವಿನುತಾ ಗೌಡ

ಪಾಬ್ಲೋ ಎಸ್ಕೋಬಾರ್ ಎಂಬ ಹೆಸರನ್ನು ಕೆಲ ವರ್ಷಗಳ ಹಿಂದಿನವರೆಗೂ ಕೆಲವರು ಮಾತ್ರ ಕೇಳಿದ್ದರು. ಆದರೆ ಯಾವಾಗ
ನೆಟ್‌ಫ್ಲಿಕ್ಷ್‌ನಲ್ಲಿ ‘ನಾರ್ಕೋಸ್’ ಎಂಬ ವೆಬ್ ಸರಣಿ ಜನಪ್ರಿಯವಾಯಿತೋ ಆಗ ದಕ್ಷಿಣ ಅಮೆರಿಕಾ ಖಂಡದ ಕೊಲಂಬಿಯಾದ ಪಾಬ್ಲೋ ಎಸ್ಕೋಬಾರ್ ಜಾಗತಿಕವಾಗಿ ಖ್ಯಾತನಾದ. ಅತನ ಹೆಸರಿನ ಟೀ ಶರ್ಟ್‌ಗಳು ಬಂದವು.

ಯುವಕರ ಲ್ಯಾಪ್‌ಟಾಪ್‌ಗಳ ಸ್ಕ್ರೀನ್ ಸೇವರ್‌ಗಳಲ್ಲಿ ಎಸ್ಕೋಬಾರ್ ರಾರಾಜಿಸಿದ! ಇಂದು ಆತನ ಹೆಸರು ಎಷ್ಟು ಚಿರಪರಿಚಿತವೆಂದರೆ ಪಾಬ್ಲೋ ಎಸ್ಕೋಬಾರ್ ಎಂಬಾತ ಯಾವುದೋ ದೇಶದ ಮಹಾನ್ ಹೋರಾಟಗಾರನೋ, ಪರಿವರ್ತನೆಯ ಹರಿಕಾರನೋ ಅಥವಾ ಹೆಸರಾಂತ ಕ್ರೀಡಾಪಟು ವೇನೋ ಎಂಬಷ್ಟು ಖ್ಯಾತ. ತನ್ನ ಮರಣದ 17 ವರ್ಷದ ನಂತರ ಕೂಡಾ
ಖ್ಯಾತನಾದ ಆ ಮನುಷ್ಯ ವಿಶ್ವದ ಅತಿ ದೊಡ್ಡ ಮಾದಕ ವಸ್ತುಗಳ ಕುಖ್ಯಾತ ದೊರೆ ಮತ್ತು ಶ್ರೀಮಂತ ಕ್ರಿಮಿನಲ್ ಆಗಿದ್ದ. ವಿಶ್ವದ ಅತಿ ದೊಡ್ಡ ಕೊಕೇನ್ ಸರಬರಾಜುಗಾರನಾಗಿದ್ದ ಎಸ್ಕೋಬಾರ್ 80 ಮತ್ತು 90ರ ದಶಕದಲ್ಲಿ ಅಮೆರಿಕಾವನ್ನು ಎಷ್ಟು ಗೋಳಾಡಿಸಿದ್ದನೆಂದರೆ ಅಮೆರಿಕಾ ದ ಅರ್ಥ ವ್ಯವಸ್ಥೆಯನ್ನೇ ಆತ ಅಲ್ಲಾಡಿಸಿದ್ದ. ಜಗತ್ತು ಕೊಲಂಬಿಯಾವನ್ನು ‘ಮರ್ಡರ್ ಕ್ಯಾಪಿಟಲ್ ಆಫ್ ವರ್ಲ್‌ಡ್‌’ ಎಂದು ಕರೆಯುವಂತೆ ಮಾಡಿದ.

ಆತ ಎಂಥಾ ಚಾಲಾಕಿಯಾಗಿದ್ದನೆಂದರೆ ಕೊಲಂಬಿಯಾದ ಪಾರ್ಲಿಮೆಂಟಿಗೂ ಪ್ರವೇಶಿಸಿದ. ಕೊನೆಗೆ ಶರಣಾಗುವ ಪರಿಸ್ಥಿತಿ ಬಂದಾಗ ಆತ ತಾನು ನಿರ್ಮಿಸಿದ ಜೈಲಿನಲ್ಲೇ ತನ್ನನ್ನಿಡುವುದಾಗಿ ಒಪ್ಪಿದರೆ ಶರಣಾಗುವೆ ಎಂದು ಷರತ್ತು ಹಾಕಿ ಶರಣಾಗತನಾದ. ಆರಂಭದಲ್ಲಿ ಎಸ್ಕೋಬಾರನ ಆಟಾಟೋಪಗಳನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದ ವ್ಯವಸ್ಥೆ ವಿಶ್ವದಲ್ಲಿ ಮಾದಕ ವಸ್ತುಗಳ ನಾಶಕ್ಕಾಗಿ ಎಸ್ಕೋಬಾರ್ ನಾಶವಾಗಲೇಬೇಕು, ನಾಳಿನ ಭವಿಷ್ಯಕ್ಕಾಗಿ ಆತನನ್ನು ಎನ್ ಕೌಂಟರ್ ಮಾಡಲೇ ಬೇಕು’ ಎಂದು ಆದೇಶ
ಹೊರಡಿಸಿತು.

ಎಸ್ಕೋಬಾರನ ಅಂತ್ಯದ ನಂತರ ಅಮಲಿನ ಲೋಕದ ಒಂದು ದೊಡ್ಡ ಅಧ್ಯಾಯದ ಅಂತ್ಯವಾಯಿತು. ಅಂದರೆ ಸಮಾಜ ಶುದ್ಧವಾಗಲು ವ್ಯವಸ್ಥೆ ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳಲೇಬೇಕು. ಒತ್ತಡ, ಸಮಜಾಯಿಷಿ, ಕಾಲಹರಣ, ಪ್ರದರ್ಶನ, ರಾಜಕಾರಣದ ಕೆಸರೆರಚಾಟ ಎಲ್ಲದರಿಂದಲೂ ಹೊರಬಂದ ವ್ಯವಸ್ಥೆ ಮಾತ್ರ ಅಂಥಾ ದಿಟ್ಟ ನಿರ್ಧಾರ ಗಳನ್ನು ಕೈಗೊಳ್ಳಬಲ್ಲದು.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಜಾಲ ಮತ್ತು ಕ್ರಮಗಳನ್ನು ವಾರದಿಂದ ಗಮನಿಸಿದಾಗ ಅನಿಸುವು ದಿಷ್ಟು ಮತ್ತು ನೆನಪಾಗುವುದು ಅದೇ ಕೊಲಂಬಿಯಾ ದ ಪಾಬ್ಲೋ ಎಸ್ಕೋಬಾರ್. ಏಕೆಂದರೆ ಅಂದು ಕೊಲಂಬಿಯಾದಲ್ಲಿ ಏನೇನು ನಡೆಯಿತೋ ಅವೆಲ್ಲವೂ ಆರಂಭದಲ್ಲಿ ಇಲ್ಲಿ ನಡೆದಂತೆಯೇ ನಡೆದಿತ್ತು.

ಅಲ್ಲೂ ಯಾವುದೋ ಪಾಪ್ ಸಿಂಗರ್ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧಿತನಾಗಿದ್ದ. ಆತನಿಂದ ಮತ್ತಷ್ಟು ಪೆಡ್ಲರ್‌ಗಳು ಬಂಧಿತರಾಗಿದ್ದರು. ಕೊನೆಗೆ ಅದು ಮುಟ್ಟಿದ್ದು ಎಸ್ಕೋಬಾರನ ಸಾಮ್ರಾಜ್ಯಕ್ಕೆ. ಇದು ಕೊಲಂಬಿಯಾ ಮಾತ್ರವಲ್ಲ. ಜಗತ್ತಿನ  ಎಲ್ಲಾ ದೇಶಗಳ ಮಾದಕ ಲೋಕದಲ್ಲಿ ನಡೆಯುವ ಕಥೆ. ಆರಂಭದಲ್ಲಿ ಮನರಂಜನಾ ಕ್ಷೇತ್ರ, ಅನಂತರ ಬುಡಮೇಲಾಗುವ ಆರ್ಥ ವ್ಯವಸ್ಥೆ, ಮಾದಕ ವಸ್ತುಗಳ ಜಾಲದಲ್ಲಿ ಸುಳಿಯಲ್ಲಿ ಸಿಲುಕುವ ಆಡಳಿತ, ಕಾಣದ ಕೈಗಳ ನಿಯಂತ್ರಣ ಮತ್ತು ಅವೆಲ್ಲಕ್ಕಿಂತಲೂ
ಹೆಚ್ಚಾಗಿ ದಾರಿ ತಪ್ಪಿದ ಯುವ ಜನಾಂಗ – ಇವೆಲ್ಲವೂ ಮಾದಕ ವಸ್ತುಗಳ ಕೂಪಕ್ಕೆ ಬಿದ್ದ ಎಲ್ಲಾ ದೇಶಗಳ ಸಾಮಾನ್ಯ ದೃಶ್ಯ. ಹಾಗಾಗಿ ನಮಗೆ ಯಾರೋ ಚಿತ್ರರಂಗದ ಇಬ್ಬರ ಬಂಧನವೂ ಅಪಾಯಕಾರಿ ನಡೆ ಎಂದೇ ಎನಿಸುತ್ತದೆ.

ಕರ್ನಾಟಕದಲ್ಲೀಗ ಮಾದಕ ವಸ್ತುಗಳ ತನಿಖೆಗಳು ಸಿನಿಮಾ ರಂಗ, ರಾಜಕಾರಣದ ಸುತ್ತ ತಿರುಗುತ್ತಿದೆ. ಇಂದು ಮಾದಕ ವಸ್ತುಗಳು ಮಾನವ ಕುಲಕ್ಕೆ ಹೇಗೆ ಕಂಟಕ, ಮಾರಕ ಎಂಬುದರ ವಿವರಣೆಯ ಅಗತ್ಯಕ್ಕಿಂತಲೂ ಅದರ ಜಾಲಗಳು ಹೇಗೆ ಹಬ್ಬುತ್ತವೆ ಎಂಬುದರ ವಿಶ್ಲೇಷಣೆ ಈ ಹೊತ್ತಿನ ಆವಶ್ಯಕತೆಯಾಗಿ ಕಾಣಿಸುತ್ತದೆ. ಏಕೆಂದರೆ ಯಾವ ದೇಶವೇ ಇರಲಿ, ಯಾವ ಕಾಲವೇ ಇರಲಿ ಮಾದಕ ವಸ್ತುಗಳು ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುವುದರ ಆರಂಭ ಮನರಂಜನಾ ಕ್ಷೇತ್ರದ ಮೂಲಕವೇ. ಅಷ್ಟಕ್ಕೂ
ವ್ಯಸನಿಗಳ ಪ್ರಕಾರ ನಶೆಯೂ ಒಂದು ಮನರಂಜನೆಯೇ!

ಅದರೆ ಚಿತ್ರರಂಗದ ಯಾರೋ ಕೆಲವರ ಬಂಧನದ ಸುದ್ದಿಯನ್ನು ಇಡೀ ಚಿತ್ರರಂಗಕ್ಕೆ ಆರೋಪಿಸಬಾರದು ಎಂಬ ವಾದವೂ ಕೇಳಿಬರುತ್ತಿದೆ. ನಿಜ, ಯಾರೋ ಕೆಲವರ ವ್ಯಸನವನ್ನು ಎಲ್ಲರಿಗೂ ಆರೋಪಿಸುವುದು ತಪ್ಪು. ಆದರೆ ಯಾರೋ ಕೆಲವರ ವ್ಯಸನ ಇಡೀ ಚಿತ್ರರಂಗಕ್ಕೇ ಕಳಂಕ ತರುತ್ತದೆ ಎಂಬುದೂ ಕೂಡಾ ಅಷ್ಟೇ ನಿಜ. ಮನರಂಜನಾ ಕ್ಷೇತ್ರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿರುವುದು ಈ ಕಾರಣಕ್ಕೆ. ಕ್ರೀಡಾ ಕ್ಷೇತ್ರದಲ್ಲಿ ಡೂಪಿಂಗ್ ಪ್ರಕರಣವನ್ನುಇಡೀ ಕ್ರೀಡಾ ರಂಗ ಹೇಗೆ ಕಳಂಕ ಎಂದು ಭಾವಿಸುತ್ತದೋ ಹಾಗೆಯೇ ಮನರಂಜನಾ ಕ್ಷೇತ್ರ ಕೂಡಾ ಭಾವಿಸುವವರೆಗೆ ಮಾದಕ ಪದಾರ್ಥಗಳ ಜಾಲದ ವಾಸನೆ ಅದಕ್ಕೆ
ಅಂಟಿಕೊಂಡೇ ಇರುತ್ತದೆ. ಒಂದು ಕಾಲದಲ್ಲಿ ಇದೇ ಕನ್ನಡ ಚಿತ್ರರಂಗದಲ್ಲಿ ಸಿಗರೇಟ್ ಸೇದುವವನು ಖಳನಾಯಕ ಮಾತ್ರ ಎಂಬ ಧೋರಣೆ ಇತ್ತು. ಡಾ.ರಾಜ್ ಕುಮಾರ್ ಅವರಂಥ ನಾಯಕ ನಟರು ಸಿಗರೇಟು ಸೇದುವುದನ್ನು ಪ್ರೇಕ್ಷಕರು ಕಲ್ಪನೆ ಕೂಡಾ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿಯೇನು? ಸಿಗರೇಟು ಮಾತ್ರವಲ್ಲ ನೇರ ಕೊಕೇನ್, ಬ್ರೌನ್ ಶುಗರ್, ಗಾಂಜಾಗಳನ್ನು ಸೇವಿಸುವ ಪಾತ್ರಗಳು ಯಾವ ಬಿಡೆಯೂ ಇಲ್ಲದೆ ಪ್ರದರ್ಶನವಾಗುತ್ತವೆ. ಒಟಿಟಿ ವೇದಿಕೆಗಳಲ್ಲಂತೂ ಯಾವ
ಅಡ್ಡಿಯೂ ಇಲ್ಲದೆ ಅವನ್ನು ವೈಭವವಾಗಿ, ಮಾದಕವಾಗಿ, ಆಧುನಿಕತೆಯ ರೂಪಕವಾಗಿ ತೋರಿಸಲಾಗುತ್ತದೆ.

ಚಿತ್ರಗಳು ಸಮಾಜಕ್ಕೆ ಸಂದೇಶ ನೀಡುವ ಸಾಧನಗಳಲ್ಲ ಎಂದು ಎಷ್ಟೇ ಹೇಳಿಕೊಂಡರೂ ಸಿನಿಮಾಗಳಿಗೆ ಸಮಾಜವನ್ನು ಪ್ರಭಾವಿತಗೊಳಿಸುವ ಶಕ್ತಿಯಂತೂ ಇದೆ ಎನ್ನುವುದನ್ನು ಒಪ್ಪಿಕೊಳ್ಳುವ ಯಾರಿಗೇ ಆದರೂ ಇದು ಸರಿ ಎಂದು ಎನಿಸುತ್ತದೆ ಯೇ? ಪರದೆಯ ಹೊರಗೆ ನಟ ಡ್ರಗ್ಸ್ ತೆಗೆದುಕೊಳ್ಳಲಿ, ಬಿಡಲಿ. ಆದರೆ ಸಿನಿಮಾದ ಒಂದು ಪಾತ್ರ ಮಾಡುವ ಡ್ರಗ್ಸ್ ಸೇವನೆ ಸಮಾಜವನ್ನು ತಪ್ಪು ದಾರಿಗೆ ತರುತ್ತದೆ. ಹಾಗಾಗಿ ಸಿನಿಮಾ ರಂಗ ಈ ಆರೋಪಕ್ಕೆ ನೊಂದುಕೊಳ್ಳುವುದು ಅಥವಾ ಆಕ್ರೋಶ ಗೊಳ್ಳುವ ಬದಲು ಗಂಭೀರ ಚಿಂತನೆಗೆ ತೊಡಗಬೇಕಾಗಿದೆ. ಮಾದಕ ವಸ್ತುಗಳ ಪ್ರಕರಣವನ್ನು ಚಿತ್ರರಂಗಕ್ಕೆ ಜೋಡಿಸಬೇಡಿ ಎನ್ನುವ ಒಂದು ವರ್ಗದ ಬಗ್ಗೆೆ ಆಶ್ಚರ್ಯವೆನಿಸುತ್ತದೆ.

ಏಕೆಂದರೆ ಈ ವರ್ಗ ಸಿನಿಮಾ ಸಂದೇಶ ನೀಡುವ ಮಾರ್ಗವಲ್ಲ ಎನ್ನುತ್ತದೆ. ಆದರೆ ಸಿನಿಮಾ ಸೃಷ್ಟಿಸುವ ಕಲಾಕೃತಿಗಳು ಸಮಾಜದಲ್ಲಿ ಸಂವೇದನೆಯೊಂದನ್ನು ಅರಳಿಸುತ್ತದೆ. ಅಂಥವನನ್ನು ಕಲಾವಿದ ಎಂದು ಸಮಾಜವೂ ಗುರುತಿಸುತ್ತದೆ. ಆದರೆ ಆ ಕಲಾವಿದರು ಜೂಜು – ಮಾದಕ ವಸ್ತುಗಳ ಬಳಕೆಯಂಥ ಪಾತ್ರಗಳನ್ನು ಮಾಡುತ್ತಾರೆ. ಇಂಥ ಪ್ರಕರಣಗಳು ಸುದ್ದಿಯಾದಾಗ
ಚಿತ್ರರಂಗಕ್ಕೂ ಅದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಇದೆಷ್ಟು ಸರಿ? ಮಾದಕ ವಸ್ತುಗಳ ಜಾಲದ ಇತಿಹಾಸ ಅವರ ವಾದಕ್ಕೆ
ಸಂಪೂರ್ಣ ವಿರುದ್ಧವಾಗಿಯೇ ಇದೆ. ಸಮಾಜವನ್ನು ಕಾಡುವ ಪಿಡುಗುಗಳಲ್ಲಿ ಮಾದಕ ವಸ್ತುಗಳದ್ದು ಅಗ್ರಸ್ಥಾನ. ಏಕೆಂದರೆ ಇದು ಕೇವಲ ಮಾದಕ ವ್ಯಸನಿಯೊಬ್ಬನ ಪ್ರಶ್ನೆಯಲ್ಲ. ಅದು ಏಕಕಾಲಕ್ಕೆ ವ್ಯಕ್ತಿಯನ್ನೂ, ಕುಟುಂಬವನ್ನೂ, ಸಮಾಜವನ್ನೂ,
ದೇಶವನ್ನೂ ಕಿತ್ತು ತಿನ್ನುತ್ತದೆ. ಜಗತ್ತಿನ ಎಲ್ಲಾ ದೇಶಗಳೂ ಇಂದು ಯುವಜನಾಂಗದ ಶಕ್ತಿಯ ಮೇಲೆ ತನ್ನ ಶಕ್ತಿಯನ್ನು
ನಿರ್ಧರಿಸುತ್ತದೆ. ಹಾಗಾದರೆ ಯುವ ಜನಾಂಗ ಎತ್ತ ಸಾಗಬೇಕು? ಯಾವ ದೇಶದಲ್ಲಿ ಆರೋಗ್ಯವಂತರ ಸಂಖ್ಯೆ ಹೆಚ್ಚಿರುತ್ತದೋ ಆ ದೇಶ ವಿಶ್ವರಂಗದಲ್ಲಿ ಬಲಿಷ್ಠವಾಗಿರುತ್ತದೆ. ಆದರೆ ಅದೇ ಯುವ ಜನಾಂಗದ ಆರೋಗ್ಯವನ್ನು ವೇಗವಾಗಿ ಹಾಳುಮಾಡುವ ಮಾದಕ ವಸ್ತುಗಳು ತಾಂಡವವಾಡುವ ದೇಶಕ್ಕೆ ಯಾವ ಭವಿಷ್ಯವಿದೆ? ಸುಮ್ಮನೆ ಒಮ್ಮೆ ಕಲ್ಪನೆ ಮಾಡಿಕೊಳ್ಳಿ, ಚಂದ್ರ ಗುಪ್ತ ಮೌರ್ಯನ ಸಾಮ್ರಾಜ್ಯದಲ್ಲಿ, ಕೃಷ್ಣದೇವರಾಯನ ಸಾಮ್ರಾಜ್ಯದಲ್ಲಿ ಮಾದಕ ವಸ್ತುಗಳು ಎಗ್ಗಿಲ್ಲದೆ ನಡೆದಿದ್ದರೆ ಅವು ಸುವರ್ಣ ಯುಗಗಳಾಗಿ ಇತಿಹಾಸದಲ್ಲಿ ಸ್ಥಾನ ಪಡೆದುಕೊಳ್ಳುತ್ತಿತ್ತೇ? ಈ ಭಯಾನಕ ಸತ್ಯವನ್ನು ಇಂದು ಎಲ್ಲರೂ ಗಂಭೀರವಾಗಿ
ಚಿಂತಿಸಬೇಕಾಗಿದೆ.

ಸದ್ಯ ನಡೆಯುತ್ತಿರುವ ಪ್ರಕರಣಗಳು ಏಕಾಏಕಿ ನಡೆದವುಗಳೇ? ಇದಕ್ಕೆ ಮುನ್ನ ಮಾದಕ ವಸ್ತುಗಳ ವಿರುದ್ಧ ಸಮರ ಸಾರಲು ಸಾಧ್ಯವೇ ಇರಲಿಲ್ಲವೇ? ಯಾಕಿರಲಿಲ್ಲ? ಯಾವಾಗ ಬೆಂಗಳೂರು ಜಾಗತಿಕ ರಂಗದಲ್ಲಿ ಹೆಸರಾಗತೊಡಗಿತೋ ಆಗಲೇ ಮಾದಕ ವಸ್ತುಗಳ ಘಾಟು ಇಲ್ಲಿ ಹೊಡೆಯಲಾರಂಭಿಸಿದೆ. 2005ರಲ್ಲೇ ಬೆಂಗಳೂರಿನಲ್ಲಿ ಪಬ್ ಸಂಸ್ಕೃತಿ ಆರಂಭವಾಗಿತ್ತು. ಕ್ರಮೇಣ ಅದೆಷ್ಟು ತೀವ್ರವಾಗಿ ವ್ಯಾಾಪಿಸಿತು ಎಂದರೆ ಅದನ್ನು ಆಧುನಿಕ ಬೆಂಗಳೂರಿನ ಸಂಸ್ಕೃತಿ ಎಂದು ಅದನ್ನು ದೇಶಾದ್ಯಂತ
ಬಣ್ಣಿಸಲಾಯಿತು. ಆದರೆ ಈ ಪಬ್‌ಗಳಲ್ಲಿ ನಡೆಯುತ್ತಿದ್ದಿದ್ದೇನು? ಕೆಲಸದ ಒತ್ತಡದಿಂದ ಪಬ್‌ಗಳಿಗೆ ಬರುತ್ತಿದ್ದ ಮೇಲ್ವರ್ಗದ ಮತ್ತು ದುಬಾರಿ ಸಂಬಳದ ಜನರ ಚಟಕ್ಕೆ ಅದು ವೇದಿಕೆಯಾಯಿತು. ನಾಯಿ ಕೊಡೆಗಳಂತೆ ಪಬ್ ಗಳು ಹುಟ್ಟಿಕೊಂಡಂತೆ ಅಲ್ಲಿ ಮಾದಕ ವಸ್ತುಗಳೂ ಹೆಚ್ಚಾದವು.

ಬಡ ಮತ್ತು ಕೆಳವರ್ಗದ ಯುವಕರು  ಮೇಲ್ವರ್ಗದ ಜನರ ಗೆಳೆತನದ ಮೂಲಕ ಪೆಡ್ಲರ್ ಗಳಾದರು. ಆರಂಭದಲ್ಲಿ ಬೆಂಗಳೂರಿನ ಎಂಜಿ ರಸ್ತೆಯಿಂದ ಆರಂಭವಾದ ಪಬ್‌ಗಳು ಕ್ರಮೇಣ ಕೋರಮಂಗಲ, ಇಂದಿರಾ ನಗರಗಳಿಗೂ ವ್ಯಾಾಪಿಸಿತು. ಕಾಲೇಜುಗಳ
ಸಮೀಪದಲ್ಲೇ ಪಬ್‌ಗಳನ್ನು ಆರಂಭಿಸಲಾಯಿತು. ಅಲ್ಲದೆ ಹುಕ್ಕಾ ಬಾರ್‌ಗಳು ಬೆಂಗಳೂರಿನಾದ್ಯಂತ ಹುಟ್ಟಿಕೊಂಡವು.
ಇವೆಲ್ಲವೂ ಶಾಲಾ ಕಾಲೇಜುಗಳಿಗೆ ಅತೀ ಸುೀಪದಲ್ಲೇ ಆರಂಭವಾದವು. ಅಂದರೆ ಆರಂಭದಲ್ಲೇ ಇವನ್ನೆಲ್ಲಾ ಚಿವುಟಿ ಹಾಕುವ ಎಲ್ಲಾ ಅವಕಾಶಗಳು ವ್ಯವಸ್ಥೆೆಗಳಿಗಿದ್ದವು.

ಮಂಗಳೂರು ಪಬ್ ದಾಳಿ ಮತ್ತು ಗೋಕರ್ಣದ ರೇವ್ ಪಾರ್ಟಿಗಳ ಮಾತಿಗಳೂ ಕೂಡಾ ಮುಂದೊಂದು ದಿನ ಇವು ರಾಕ್ಷಸಾಕಾರವಾಗಿ ಬೆಳೆದು ನಿಲ್ಲುತ್ತವೆ ಎಂಬ ಅರಿವು ಅಂದಿನ ಪೊಲೀಸ್ ವ್ಯವಸ್ಥೆಗೂ ಇತ್ತು, ರಾಜಕಾರಣಕ್ಕೂಇತ್ತು. ಇಂದು ಬೆಂಗಳೂರು ಯಾವ ಪರಿಯಲ್ಲಿ ಮಾದಕ ವಸ್ತುಗಳ ಕೂಪವಾಗಿದೆಯೆಂದರೆ 20ಲಕ್ಷದಿಂದ 30 ಲಕ್ಷದಷ್ಟು ಯುವಜನತೆ ಗಾಂಜಾ ವ್ಯಸನಿಗಳಾಗಿದ್ದಾರೆ ಎನ್ನಲಾಗುತ್ತಿದೆ!

ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ವಹಿವಾಟುಗಳು ಕುಸಿದಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ 6 ರಿಂದ 8 ಕೋಟಿ ರು. ಮೌಲ್ಯದ ಮಾದಕ ವಸ್ತುಗಳ ವಹಿವಾಟು ನಡೆದಿದೆ ಎಂದರೆ ರಾಜ್ಯದಲ್ಲಿ ಅದ್ಯಾವ ಪರಿಯಲ್ಲಿ ಮಾದಕ ಜಾಲ ಸಕ್ರೀಯವಾಗಿರಬಹುದು?
ಈಗ ಇಬ್ಬರು ನಟಿಯರು, ಒಂದಿಷ್ಟು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಆದರೆ ಇಷ್ಟರಿಂದಲೇ ಬೆಂಗಳೂರು ಅಥವಾ ಕರ್ನಾಟಕ ನಶೆಮುಕ್ತವಾಗುವುದಿಲ್ಲ. ಈಗ ಬಂಧನಕ್ಕೊಳಗಾದವರು ನಶೆಯ ಲೋಕದ ಕೊನೆಯ ಕೊಂಡಿಗಳೆ ಹೊರತು ಕಿಂಗ್‌ಪಿನ್‌ಗಳಲ್ಲ. ಅವರೆಲ್ಲರೂ ಸುಖವಾಗಿ ಓಡಾಡಿಕೊಂಡಿದ್ದಾರೆ. ಗಾಂಜಾಕ್ಕಿಂತ ದುಬಾರಿಯಾಗಿರುವ ಮಾದಕ ವಸ್ತುಗಳು ಬಿಟ್ ಕಾಯಿನ್‌ನಿಂದ
ಮಾತ್ರ ನಡೆಯುತ್ತವೆ. ಅಂದರೆ ಇದರ ಜಾಲ ತುಂಬಾ ಮೇಲ್ಮಟ್ಟದಲ್ಲಿದೆ. ಪ್ರಭಾವಿಗಳ ಕೈಯಲ್ಲಿದೆ. ಅದನ್ನು ಮಟ್ಟಹಾಕದೆ ಯಾವ ಮ್ಯಾಜಿಕ್ ಕೂಡಾ ನಡೆಯುವುದಿಲ್ಲ. ಈಗ ನಡೆಯುತ್ತಿರುವುದೆಲ್ಲಾ ಒಂದಿಷ್ಟು ದಿನಗಳ ಆರ್ಭಟ ಗಳು ಮಾತ್ರ.

ಬೆಂಗಳೂರಿನಲ್ಲಿ ಇಷ್ಟು ನಡೆಯುತ್ತಿರುವುದಕ್ಕೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಬಿಸಿಯೇ ಕಾರಣ ಹೊರತು ಬೇರೇನಿಲ್ಲ.
ಒಂದು ವೇಳೆ ಆ ಪ್ರಕರಣ ನಡೆಯದೇ ಇರುತ್ತಿದ್ದರೆ ಈ ಬಂಧನಗಳೂ ನಡೆಯುತ್ತಿರಲಿಲ್ಲ. ಯಾವಾಗ ಈ ನಟಿಯರ ಹೊರತಾಗಿ ನಶೆಯ ವಿರುದ್ಧ ಹೋರಾಟ ನಡೆಯುತ್ತದೋ ಅದು ನಿಜವಾದ ನಶೆಮುಕ್ತ ಹೋರಾಟವಾಗಲಿದೆ. ದೊಡ್ಡ ಮೀನುಗಳನ್ನು ಗಾಳಕ್ಕೆ ಸಿಲುಕಿಸುವುದೊಂದೇ ನಶೆಮುಕ್ತ ಕರ್ನಾಟಕಕ್ಕೆ ಮುನ್ನುಡಿಯಾಗಲಿದೆ.