Thursday, 28th November 2024

ಹದ್ದು, ಹಾವುಗಳಿಲ್ಲದ ನಾಡಿನಲ್ಲೀಗ ಬರೀ ಚಿರತೆ ಕಾಟ

ಸುಪ್ತ ಸಾಗರ

rkbhadti@gmail.com

ಯಾಕೆ ಹೀಗೆ? ಇದ್ದಕ್ಕಿದ್ದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಯಾಕೆ? ನಮ್ಮ ಮನೆಯಲ್ಲಿ ನಮಗೆ ಬೇಕಷ್ಟು ಆಹಾರ ಸಿಗುತ್ತಿಲ್ಲವೆಂದ ದಾಸನ ಪದಗಳು ಮೇಲೆ ಸಹಜವಾಗಿ ಪಕ್ಕದ ಮನೆಯತ್ತ ಮಕ್ಕಳು ಮುಖ ಮಾಡುತ್ತಾರೆ. ಹಾಗೆಯೇ ಪ್ರಾಣಿಗಳ ವಿಚಾರದಲ್ಲೂ ಆಗುತ್ತಿರುವುದು.

ರಾಜ್ಯದಲ್ಲೀಗ ಚಿರತೆಯ ಮಾತಾದರೆ, ದೇಶದ ತುಂಬೆಲ್ಲ ಚೀತಾದ ಸುದ್ದಿ. ಹೌದು, ರಾಜ್ಯದಲ್ಲಿ ಚಿರತೆಗಳ ಹಾವಳಿ ದಿನದಿನಕ್ಕೂ ಹೆಚ್ಚಾಗುತ್ತಿರುವ ನಡುವೆ, ಪ್ರತಿ ವರ್ಷ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಲು ಭಾರತ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಕಳೆದ ವರ್ಷ ನಮೀಬಿಯಾದಿಂದ ಕುನೋ ರಾಷ್ಟ್ರೀಯ ಪಾರ್ಕ್‌ಗೇ ಬಂದ ಎಂಟು ಚೀತಾಗಳ ಜತೆಯೇ ಇದೀಗ ನಾಡಿದ್ದು, ಫೆಬ್ರವರಿ 18 ಕ್ಕೆ ಇವುಗಳೂ ಬಂದು ಸೇರಿಕೊಳ್ಳಲಿವೆಯಂತೆ. ಬರಲಿ ಬಿಡಿ, ಒಳ್ಳೆಯ ಸುದ್ದಿ. ಆದರೆ ನಮ್ಮ ರಾಜ್ಯದ ಪಾಡು ನೋಡಿ. ಉತ್ತರದಿಂದ ದಕ್ಷಿಣದವರೆಗೆ ಯಾವುದೇ ಜಿಲ್ಲೆಯನ್ನು ನೋಡಿ, ಅಲ್ಲೊಂದು ಚಿರತೆ ಕ್ವಾಟ್ಲೆ ಕೊಡುತ್ತಲೇ ಇದೆ.

ಇವನ್ನೆಲ್ಲ ಗಮನಿಸಿದಾಗ ತೇಜಸ್ವಿಯವರ ‘ಮುನಿಶಾಮಿ ಮತ್ತು ಮಾಗಡಿ ಚಿರತೆ’ಯ ಕಥೆ ನೆನಪಾಗುತ್ತಿದೆ. ಒಂದು ಕಾಲದಲ್ಲಿ, ತೇಜಸ್ವಿಯವರು ಈ ಕಥೆ ಬರೆಯವ ಕಾಲಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುತ್ತಮುತ್ತಲೂ ಚಿರತೆಗಳು ಸಮೃದ್ಧ ವಾಗಿದ್ದುದು ನಿಜ. ಆದರೀಗ ಆ ಪರಿಸ್ಥಿತಿ ರಾಜ್ಯದ ಬಹುತೇಕ ಜಿಲ್ಲೆಗಳನ್ನು ಆವರಿಸಿಕೊಂಡು ಬಿಟ್ಟಿದೆ. ಹೀಗೇಕಾಯಿತು? ತುಮಕೂರಿನ ಕುಣಿಗಲ, ರಾಮನಗರ ಜಿಲ್ಲೆಯಲ್ಲಿ ಅಧಿಕವಾಗಿದ್ದ ಚಿರತೆಗಳ ಕಾಟ ಈಗ ರಾಜ್ಯಾದ್ಯಂತ ವಿಸ್ತರಿಸಿದ್ದು ಹೇಗೆ? ಇದ್ದಕ್ಕಿದ್ದಂತೆ ರಾಜ್ಯದಲ್ಲಿ ಚಿರತೆ ಸಂತತಿ ಗಣನೀಯವಾಗಿ ಹೆಚ್ಚಳವಾಗಿ ಬಿಟ್ಟಿತೆ? ಅಥವಾ ಕಾಡಿನ ಪ್ರಮಾಣ ರಾಜ್ಯದಲ್ಲಿ ಅಷ್ಟೊಂದು ಹೆಚ್ಚಿತೇ? ಅಥವಾ ಅರಣ್ಯ ಪ್ರದೇಶಗಳಲ್ಲಿ ಮಾನವನ ಹಸ್ತಕ್ಷೇಪದ ಪರಿಣಾಮವೇ? ಸತ್ಯ ಹೇಳಬೇಕೆಂದರೆ ಇವೆಲ್ಲವೂ ಹೌದಾದರೂ, ನಮ್ಮ ಕಾಡಿನಲ್ಲಿ ನಮ್ಮ ಹಸ್ತಕ್ಷೇಪದ ಸ್ವಯಂಕೃತಾಪರಾಧದ ಪಾಲೇ ಹೆಚ್ಚಿದೆ.

ದೇಶದಲ್ಲಿ ಚಿರತೆ ಸಂತತಿ ಶೇ.60ರಷ್ಟು ವೃದ್ಧಿಸಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತವೆ. ಸಚಿವಾಲಯದ ಮಾಹಿತಿ ಪ್ರಕಾರ, 2021 ರಲ್ಲಿ ಕರ್ನಾಟಕದಲ್ಲಿ 1783 ಚಿರತೆಗಳಿದ್ದು, ಮಧ್ಯಪ್ರದೇಶ (3421) ಹೊರತುಪಡಿಸಿದರೆ ಅತಿಹೆಚ್ಚು ಚಿರತೆಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿ ದಾಖಲಾಗಿದೆ. ಐದು ವರ್ಷ ಹಿಂದೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ ತಂಡ ನಡೆಸಿದ ಅಧ್ಯಯನದ ಪ್ರಕಾರ ರಾಜ್ಯದಲ್ಲಿ 2500ಕ್ಕೂ ಅಧಿಕ ಚಿರತೆಗಳಿವೆ.

ಸಾಮಾನ್ಯವಾಗಿ ಕುರುಚಲು ಕಾಡು, ಗುಡ್ಡಗಾಡು ಪ್ರದೇಶ, ಪಾಳುಬಿದ್ದ ಜಮೀನುಗಳಲ್ಲಿ ಪೊದೆಗಳನ್ನು ಅರಸಿ ವಾಸಿಸುವ ಚಿರತೆ ಗಳಿಗೆ ಅಗತ್ಯ ಪ್ರಮಾಣ ಆವಾಸಸ್ಥಾನ ಸಿಗುತ್ತಿಲ್ಲ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳೇ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಅರಣ್ಯಾಧಿಕಾರಿಯೊಬ್ಬರು ಹೇಳುವ ಪ್ರಕಾರ, ಮಾಗಡಿ ವ್ಯಾಪ್ತಿಯಲ್ಲಿನ ಕುರುಚಲು ಕಾಡಿಗೆ ಕೇವಲ 300 ಚಿರತೆ ಗಳನ್ನು ಸಾಕುವ ಸಾಮರ್ಥ್ಯ ಇದೆ. ಆದರೆ, ಈ ಪ್ರದೇಶದಲ್ಲಿ ೮೦೦ಕ್ಕೂ ಅಧಿಕ ಚಿರತೆಗಳು ವಾಸವಾಗಿವೆ.

ಇಂಥ ಚಿರತೆಗಳಿಗೀಗ ಸ್ವತಂತ್ರವಾಗಿ ಓಡಾಡುವಷ್ಟು ಖಾಸಗಿ ಕಾಡುಉಳಿದಿಲ್ಲ. ಇಕೋ ಟೂರಿಸಂನ ಹೆಸರಿನಲ್ಲಿ ಅರಣ್ಯದಲ್ಲಿ ಮಾನವ ಹಸ್ತಕ್ಷೆಪ ಹೆಚ್ಚುತ್ತಿದೆ. ರೆಸಾರ್ಟ್, ಟ್ರೆಕ್ಕಿಂಗ್, ಜಲಸಾಹಸ ಕ್ರೀಡೆಗಳ ಹೆಸರಿನಲ್ಲಿ ದಟ್ಟ ಕಾಡೊಳಗೂ ಜನರು ಲಗ್ಗೆ ಇಡುವಂತಾಗಿದೆ. ಇದರಿಂದ ಏಕಾಂತಕ್ಕೆ ಭಂಗ ಬಂದು ಚಿರತೆ ಅಂತಲೇ ಅಲ್ಲ, ಎಲ್ಲ ರೀತಿಯ ವನ್ಯಮೃಗಗಳೂ ನಾಡಿನತ್ತ ನುಗ್ಗುತ್ತಿವೆ. ಇನ್ನು ಹೆಚ್ಚುತ್ತಿರುವ ನಗರಗಳ ಸಂಖ್ಯೆ, ಅವುಗಳ ವಿಚಿತ್ರ ವ್ಯಸ್ನಗಳೂ ಚಿರತೆ ಹಾವಳಿಗೆ ಕಾರಣ. ನಗರಗಳ ಹೊರ ವಲಯದ ಕಾಡಂಚಿನಲ್ಲಿ ಮಾಂಸದ ತ್ಯಾಜ್ಯಗಳ ಬೇಕಾಬಿಟ್ಟಿ ವಿಲೇವಾರಿಯಿಂದಾಗಿ, ಅದರಿಂದ ಆಕರ್ಷಿತವಾಗುವ ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ.

ಹೀಗೆ ಬರುವ ಚಿರತೆಗಳು ನಾಡಂಚಿನಲ್ಲಿ ಸಮೃದ್ಧವಾಗಿ ದೊರೆವ ನಾಯಿಗಳು, ಕುರಿ-ಕೋಳಿಗಳತ್ತ ಕಣ್ಣು ಹಾಯಿಸುತ್ತವೆ. ಕೊನೆಗೆ ಏನೂ ಸಿಗದಿzಗ ಆಹಾರ ಅರಸಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ. ಹೊಸ ವಾತಾವರಣಕ್ಕೆ ಬೇಗ ಹೊಂದಿಕೊಳ್ಳುವ ಚಿರತೆ ಗಳು ಕಬ್ಬಿನಗದ್ದೆ, ಹೊಲ, ಬೆಟ್ಟ-ಗುಡ್ಡ ಎಲ್ಲವನ್ನೂ ವಾಸಾಣ ಮಾಡಿಕೊಂಡು ಇಲ್ಲೇ ವಾಸಿಸಲಾರಂಭಿಸಿರುವುದರಲ್ಲೂ ಅಚ್ಚರಿ ಇಲ್ಲ. ಊರಿನಲ್ಲಿ ಚಿರತೆ ಹಾವಳಿ ಹೆಚ್ಚಿದ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಬೋನುಗಳನ್ನು ಇರಿಸಿ ಹಿಡಿಯುವ ಕೆಲಸಕ್ಕೆ ಮುಂದಾಗುತ್ತದೆ. ಈ ರೀತಿ ಹಿಡಿದ ಚಿರತೆಗಳನ್ನು ಏನು ಮಾಡಲಾಗುತ್ತಿದೆ, ಎಲ್ಲಿಬಿಡಲಾಗುತ್ತಿದೆ ಎಂಬುದು ಪಾರದರ್ಶಕ ವಾಗಿಲ್ಲ.

ಹಿಡಿದ ಚಿರತೆಗಳನ್ನು ದೂರದ ಕಾಡಿಗೆ ಬಿಡಲಾಗುತ್ತಿದೆ ಎಂದು ಇಲಾಖೆ ಹೇಳುತ್ತದೆ. ಆದರೆ, ಹೀಗೆ ಬಿಟ್ಟ ಚಿರತೆಗಳು ಮೂಲ ಸ್ಥಳಕ್ಕೆ ಮರಳಿ ಬರುತ್ತಿವೆಯೇ ಎಂಬ ಕುರಿತೂ ಸ್ಪಷ್ಟತೆ ಇಲ್ಲ. ಚಿರತೆ ಅಂತಲೇ ಅಲ್ಲ, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ಹೆಚ್ಚುತ್ತಿದೆ. ಚಿರತೆಯಂಥವು ಅಪರೂಪದ ಹಾಗೂ ಕ್ರೂರ ಮೃಗವಾಗಿರುವುದರಿಂದ ಹೆಚ್ಚು ಸುದ್ದಿಯಾಗುತ್ತಿದೆ. ಹಾವು, ಹಂದಿ, ಇಲಿ, ನವಿಲು, ಮಂಗ, ಜಿಂಕೆ, ಕಾಡೆಮ್ಮೆ, ಆನೆಗಳ ಹಾವಳಿಯೂ ಗ್ರಾಮೀಣ ಪ್ರದೇಶದಲ್ಲಿ ವಿಪರೀತವಾಗಿದೆ.

ಹತ್ತು ಹಲವಾರು ಸಮಸ್ಯೆಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕೃಷಿಕರನ್ನು ಬಾಽಸುತ್ತಿರುವ ಇಂಥ ಸಂಕಷ್ಟವನ್ನು ಕೇಳುವವ ರಿಲ್ಲವಾಗಿದೆ. ಪ್ರಾಣಿಗಳ ಹಾವಳಿಯಿಂದ ಪ್ರತಿ ವರ್ಷ ಶೇ.60-68ರಷ್ಟು ಬೆಳೆ ನಷ್ಟವನ್ನು ಕೃಷಿಕರು ಕಾಣುತ್ತಿದ್ದಾರೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಒಂದು ಸಮೀಕ್ಷೆಯ ಪ್ರಕಾರ ಪ್ರತಿ ಕೃಷಿ ಕುಟುಂಬ ಸರಾಸರಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಮೊತ್ತದ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಲೆಕ್ಕ ನೋಡಿ, ಒಂದು ಎಕರೆ ಹೊಲದಲ್ಲಿ ಕನಿಷ್ಠ ಮೂರು ಚೀಲ ಭತ್ತವನ್ನು ಇಲಿಗಳು ತಿಂದು ಹಾಳು ಮಾಡುತ್ತಿದೆ. ಕನಿಷ್ಠ ಒಂದು ಟ್ರ್ಯಾಕ್ಟರ್ ಹುಲ್ಲನ್ನು ಕಡಿದು ತುಂಡು ಮಾಡಿ ಗೊಬ್ಬರವಾಗಿಸುತ್ತಿದೆ. ಒಂದು ಎಕರೆ ತೋಟದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ ಒಂದು ಕ್ವಿಂಟಲ್‌ನಷ್ಟು ಅಡಕೆಯನ್ನು ಮಂಗಗಳು ನಾಶ ಮಾಡುತ್ತಿವೆ.

ವರ್ಷಕ್ಕೆ ಒಂದು ಸಾವಿರ ಕೊನೆಗಳನ್ನು ಬೆಳೆಯುವ ಮುನ್ನವೇ ತಿಂದು ಹಾಕುತ್ತಿವೆ. ತೆಂಗು, ಏಲಕ್ಕಿ, ಹಣ್ಣುಗಳು, ತರಕಾರಿ, ಕೋಕೋ ಹೀಗೆ ಪ್ರತಿಯೊಂದಕ್ಕೂ ಬಾಧೆಗಳಿವೆ. ಯಾಕೆ ಹೀಗೆ? ಇದ್ದಕ್ಕಿದ್ದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಯಾಕೆ? ನಮ್ಮ ಮನೆಯಲ್ಲಿ ನಮಗೆ ಬೇಕಷ್ಟು ಆಹಾರ ಸಿಗುತ್ತಿಲ್ಲವೆಂದ ಮೇಲೆ ಸಹಜವಾಗಿ ಪಕ್ಕದ ಮನೆಯತ್ತ ಮಕ್ಕಳು ಮುಖ ಮಾಡು ತ್ತಾರೆ. ಹಾಗೆಯೇ ಪ್ರಾಣಿಗಳ ವಿಚಾರದಲ್ಲೂ ಆಗುತ್ತಿರುವುದು.

ಗಮನಿಸ ಬೇಕಾದುದೆಂದರೆ ಪ್ರಾಣಿಗಳು ಈ ಪರಿಸರದ ಅವಿಭಾಜ್ಯ ಅಂಗ. ನಾವು ಹಲವಾರು ರೀತಿಯಲ್ಲಿ ಪ್ರಾಣಿಗಳನ್ನು
ಅವಲಂಬಿಸಿದ್ದೇವೆ. ಪ್ರಾಣಿಗಳೂ ಪರಸ್ಪರ ಒಂದಕ್ಕೊಂದು ಅವಲಂಬಿಸುತ್ತಿರುತ್ತವೆ. ಎಲ್ಲವೂ ನಿಸರ್ಗವನ್ನು ಅವಲಂಬಿ
ಸಿವೆ. ನಿಸರ್ಗ ತನ್ನೊಡಲಿನ ಜೀವಿಗಳ ಸಮತೋಲನ ಕಾಪಾಡಿಕೊಳ್ಳುವಲ್ಲಿ ತಮ್ಮದೇ ವ್ಯವಸ್ಥೆಯನ್ನು ಹೊಂದಿರುತ್ತವೆ. ನಮ್ಮ ಆಧುನೀಕರಣ, ಅಭಿವೃದ್ಧಿ ಹೆಸರಿನ ಚಟುವಟಿಕೆ, ಸ್ವಾರ್ಥದ ಹೆಸರಿನಲ್ಲಿ ನಡೆಸುತ್ತಿರುವ ಹಸ್ತಕ್ಷೇಪದಿಂದಾಗಿ ನಿಸರ್ಗದ ಸಮತೋಲನ ತಪ್ಪುತ್ತಿದೆ. ಕೆಲವು ಸಾಮಾನ್ಯ ಸಂಗತಿಗಳನ್ನು ನಿರ್ಲಕ್ಷಿಸುವುದರಿಂದಾಗಿ ಸ್ವತಃ ನಮ್ಮನ್ನು ನಾವು ಸಂಕಷ್ಟಕ್ಕೆ ಈಡು ಮಾಡಿಕೊಳ್ಳುತ್ತಿದ್ದೇವೆ.

ಒಂದು ಸಣ್ಣ ಅವಲೋಕನ ಮಾಡೋಣ: ಇತ್ತೀಚಿನ ದಿನಗಳಲ್ಲಿ ಬೇರೆಬೇರೆ ಕಾರಣಕ್ಕೆ ನಮ್ಮ ಪರಿಸರದಲ್ಲಿನ ಕೇರೆ ಹಾವುಗಳು ಕಣ್ಮರೆಯಾಗುತ್ತಿವೆ. ಮನೆಯ ಸುತ್ತ ಮುತ್ತ, ಗದ್ದೆ ತೋಟಗಳಲ್ಲಿ ಎಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಿರುಪದ್ರವಿ, ವಿಷರಹಿತ ರೈತಮಿತ್ರ ಕೇರೆ ಹಾವುಗಳ ವಿನಾಶಕ್ಕೆ ಪ್ರಮುಖ ಕಾರಣ ಅವನ್ನು ಕಂಡಲ್ಲಿ ಕೇರೆವ ನಮ್ಮ ಪ್ರವೃತ್ತಿ ಹಾಗೂ ಗ್ರಾಮೀಣ ಭಾಗದಲ್ಲಿ ನವಿಲುಗಳು, ಕಾಳಿಂಗ ಸರ್ಪಗಳಮಥ ವಿಷಕಾರಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ.

ಹಳ್ಳಿಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕಾಡುಗಳು ನಾಶವಾಗುತ್ತಿದ್ದಂತೆಯೇ ಆಹಾರದ ಹುಡುಕಾಟಕ್ಕೆ ಬಿದ್ದ ನವಿಲು, ಕಾಳಿಂಗ ಸರ್ಪದಂಥವು ಜಮೀನಿಗೆ ಬರತೊಡಗಿದವು. ಇವಕ್ಕೆ ಕೇರೆ ಹಾವುಗಳು ಬಲಿಯಾಗಿವೆ. ಇದರ ಫಲವಾಗಿ ಗುಡ್ಡದ ಇಲಿಗಳನ್ನು ನಿಯಂತ್ರಿಸುವವರಿಲ್ಲದೇ, ಹಾವಳಿ ಹೆಚ್ಚಾಗಿ ವಿಪರೀತವಾಗಿ ಭತ್ತದ ಗದ್ದೆಗಳು ನಾಶವಾಗುತ್ತಿವೆ. ಆಹಾರ ಧಾನ್ಯಗಳು ಕೊಳ್ಳೆ ಹೋಗುತ್ತಿವೆ.

ಕೊಯ್ಲಿಗೆ ಸಿದ್ಧವಾದ ಪೈರುಗಳನ್ನು ನಾಜೂಕಾಗಿ ಕತ್ತರಿಸುತ್ತಿರುವ ಇಲಿ ಹಾಗೂ ಹೆಗ್ಗಣಗಳು ಬಹುತೇಕ ಇಳುವರಿಯನ್ನು ನಾಶ ಮಾಡುತ್ತಿವೆ. ಸೀಮಿತ ಪ್ರದೇಶದಲ್ಲಿ ಇಲಿಗಳ ಸಂಖ್ಯೆ ಸಾವಿರಾರು ಆಗುತ್ತಿರುವುದು ಭತ್ತ ಸೇರಿದಂತೆ ಧಾನ್ಯಗಳ ಬೆಳೆಗಾರರರನ್ನು ಚಿಂತೆಗೀಡುಮಾಡಿದೆ. ಕೇರೆಹಾವುಗಳು ಹೆಚ್ಚಾಗಿದ್ದ ಸನ್ನಿವೇಶದಲ್ಲಿ ಅವುಗಳು ಇಲಿಗಳನ್ನು ನಿಯಂತ್ರಿಸುತ್ತಿದ್ದವು. ಆದರೆ ಇತ್ತಿಚಿನ ಎರಡು ದಶಕಗಳಲ್ಲಿ ಕೇರೆ ಹಾವುಗಳು ಇಲ್ಲವೇ ಇಲ್ಲ ಎನ್ನಿಸುವಷ್ಟು ಕಡಿಮೆಯಾಗಿವೆ. ಇದರಿಂದ ಬೆಳೆ ನಷ್ಟವೂ ಹೆಚ್ಚುತ್ತಿದೆ.

ಮಲೆನಾಡಿನ ಕೃಷಿಕ ಆಂಜನೇಯ ಗೌಡ ಅವರ ಪ್ರಕಾರ ‘ಹೆಗ್ಗಣಗಳು ಬಂದು ಹುಲ್ಲು ಬಣವೆಯಲ್ಲಿ ಗೂಡು ಹಾಕುತ್ತಿವೆ. ಹುಲ್ಲು ಪಿಂಡಿಗಳನ್ನೆಲ್ಲ ಕತ್ತರಿಸಿ ಹಾಕಿವೆ. ಕಂಡಕಂಡಲ್ಲಿ ನೆಲವನ್ನು ಅಗೆದು ಗೆಣಸು, ಗಡ್ಡೆಗಳನ್ನು ತಿಂದು ಹಾಳು ಮಾಡುತ್ತಿವೆ. ಆಹಾರ ಹುಡುಕುವ ಭರದಲ್ಲಿ ತೋಡುವ ಬಿಲದ ಮೂಲಕ ಹೊಲದಲ್ಲಿನ ನೀರು, ಸಾರಾಂಶ ಸೋರಿ ಹೋಗುತ್ತಿದೆ. ರಾತ್ರಿ ಬೆಳೆಗಾಗುವು ದರೊಳಗೆ ಇಡೀ ಹೊಲದ ಬೆಳೆಗಳೆಲ್ಲ ಬುಡಮೇಲಾಗುತ್ತಿದೆ. ಇಲಿ ಹೆಗ್ಗಣಗಳನ್ನು ಹಿಡಿದು, ತಿಂದು ಹತೋಟಿ ಮಾಡುತ್ತಿದ್ದ ಕೇರೆ ಹಾವುಗಳು ಕಾಣೆಯಾಗಿರುವುದೇ ಅವುಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗಿದೆ.

ಕೇರೆ ಹಾವುಗಳ ನಾಶದಿಂದ ಆಗಿರುವ ಇನ್ನೊಂದು ಸಮಸ್ಯೆ ವಿಷಕಾರಿ ಹಾವುಗಳು ಸಂಖ್ಯೆ ಹೆಚ್ಚಿರುವುದು. ಸರ್ಪಗಳ ಮರಿ-ಮೊಟ್ಟೆಗಳನ್ನೂ ತಿಂದು ನಿಯಂತ್ರಿಸುತ್ತಿದ್ದ ಕೇರೆ ಹಾವುಗಳ ಸಂಖ್ಯೆ ಕಡಿಮೆ ಆಗುತ್ತಿದ್ದಂತೆಯೇ ಅವುಗಳ ಸಂತತಿ ಹೆಚ್ಚಾಗಿದೆ. ಅದೇ ರೀತಿ ದೊಡ್ಡ ಹಾವುಗಳು ಕೇರೆ ಹಾವುಗಳನ್ನು ತಿನ್ನಲು ಊರಿಗೆ ನುಗ್ಗತೊಡಗಿದವು. ಹೀಗಾಗಿ ಎಂದರಲ್ಲಿ ಕೃಷಿಕರು ಹಾವು ಗಳ ಕಡಿತಕ್ಕೆ ಒಳಗಾಗುತ್ತಿದ್ದಾರೆ.

ಕಾಳಿಂಗ ಸರ್ಪದಂಥ ವಿಷದ ಹಾವುಗಳು ಹಿಂದಿನಿಂದಲೂ ಇದ್ದವು. ಆದರೆ ಅಪರೂಪಕ್ಕೊಮ್ಮೆ ತೋಟದ, ಊರಿನ ಕಾಣಿಸಿ ಕೊಳ್ಳುತ್ತಿದ್ದ ಅವು ಹತ್ತಾರು ಚದರ ಕಿಲೋಮೀಟರ್ ವ್ಯಾಪ್ತಿಯ ವಲಯದಲ್ಲಿ ಒಂದರಂತೆ ಓಡಾಡಿಕೊಂಡು ಬದುಕುತ್ತಿದ್ದವು. ಇತ್ತೀಚೆಗೆ ಅವುಗಳ ಸಂಖ್ಯೆ ಅಸಹಜವಾಗಿ ವೃದ್ಧಿಸಿದ್ದಕ್ಕೆ ಕಾರಣ, ಕಾಡಿನ ಪ್ರಮಾಣ ಕಡಿಮೆ ಆಗಿರುವುದು. ರಸ್ತೆ, ಹೆದ್ದಾರಿಗಳಿಗಾಗಿ ಕಾಡಿನ ವಲಯಗಳೂ ಇಬ್ಭಾಗವಾಗಿ ಕಿರಿದಾಗತೊಡಗಿದವು.

ಅವುಗಳ ಆಹಾರ ಕ್ರಮದಲ್ಲಿ ಪ್ರಥಮ ಆದ್ಯತೆಯಾದ ಕೇರೆ ಹಾವುಗಳು ಬಲಿಯಾಗತೊಡಗಿದವು. ವಿಸ್ತಾರವಾದ ಹಾಗೂ ನುಣು ಪಾದ ರಸ್ತೆಯನ್ನು ಸುಲಭದಲ್ಲಿ ತೆವಳಿ ದಾಟಲಾಗದೇ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುವ ಜೀವಿಗಳಲ್ಲಿ ಕೇರೆ ಹಾವುಗಳೇ ಸಂಖ್ಯೆಯೇ ಅಧಿಕ. ಮಿತಿಮೀರಿದ ನಾಗರಿಕ ಚಟುವಟಿಕೆಗಳು ನಿಸರ್ಗದ ಸಮತೋಲನಗಳನ್ನು ಬುಡಮೇಲು ಮಾಡುತ್ತಿವೆ. ಅದರ ದುಷ್ಪರಿಣಾಮಗಳನ್ನು ಹಳ್ಳಿಗಳ ರೈತರು ಎದುರಿಸಬೇಕಾಗಿದೆ. ಇನ್ನು ನವಿಲುಗಳು ಹೆಚ್ಚಿರುವುದು ಸಹ ಕೇರೆಹಾವುಗಳ ಸಂಖ್ಯೆ ಕಡಿಮೆಯಾಗಿ ರಬಹುದು ಕಾಗೋಡಿನ ಕೃಷಿಕ ಬಿಳಿಯಪ್ಪ.

ಬೃಹತ್ ನೀರಾವರಿ ಯೋಜನೆಗಳ ಅಬ್ಬರದಲ್ಲಿ ಬಹುತೇಕ ದಟ್ಟಾರಣ್ಯಗಳು ಮುಳುಗಡೆಯಾಗಿದೆ. ಕೃಷಿ ಭೂಮಿ ವಿಸ್ತರಣೆಗೆ ಕಾಡುಗಳು ನೆಲಸಮವಾಗಿದೆ. ಕಾಡಿನಲ್ಲಿ ಆಹಾರ ಕಂಡುಕೊಂಡಿದ್ದ ಪ್ರಾಣಿಗಳು ಅಲ್ಲಿಂದ ಖಿರಿಗೆ ನುಗ್ಗಲಾರಂಭಿಸಿವೆ. ಹೀಗಾಗಿ ಮಲೆನಾಡಿನ ಭಾಗದಲ್ಲಿ ಕಾಡುಕೋಣ, ಕಾಡು ಹಂದಿಗಳು, ಆನೆಗಳ ಹಾವಳಿಯೂ ವಿಪರೀತವಾಗಿವೆ ಎನ್ನುತ್ತಾರೆ ಶಿರಸಿಯ ವಿ.ಪಿ.ಹೆಗಡೆ.

ಇನ್ನು ಮಂಗಗಳ ಹಾವಳಿ ಸಹ ಹೆಚ್ಚಲು ಇದೇ ಕಾರಣ. ಕಾಡು ಕಡಿಮೆ ಆಯಿತು. ಹೀಗಾಗಿ ಅಲ್ಲಿ ಸಿಗುತ್ತಿದ್ದ ಕಾಡಿನ ಹಣ್ಣುಗಳು ಇಲ್ಲವಾಯಿತು. ಮಂಗಗಳಿಗೆ ಆಹಾರವಿಲ್ಲದೇ ಊರಿನ ನುಗ್ಗಲಾರಂಭಿಸಿದವು. ಇಲ್ಲಿ ಕಷ್ಟಪಡದೇ ತೋಟದಲ್ಲಿ ಸುಲಭದಲ್ಲಿ ಸಿಗುವ ಹಣ್ಣು-ಕಾಯಿಗಳ ರುಚಿಗೆ ಮನಸೋತು ಇಲ್ಲೇ ಉಳಿದುಬಿಟ್ಟಿವೆ. ಮಂಗಗಳು ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು,
ಮನುಷ್ಯರ ಭಯವೇ ಇಲ್ಲದಂತೆ ಮನೆಯೊಳಕ್ಕೆ ನುಗ್ಗಲಾರಂಭಿಸಿವೆ. ಮಲೆನಾಡು ಭಾಗದಲ್ಲಿ ಬೆರಳೆಣಿಕೆಯಷ್ಟಿದ್ದ ಕೆಂಪು ಮೂತಿ ಮಂಗಗಳ ಸಂಖ್ಯೆ ಇಂದು ಹತ್ತಾರು ಪಟ್ಟು ಹೆಚ್ಚಿದೆ. ತಂಡೋಪತಂಡವಾಗಿ ಕೃಷಿ ಜಮೀನಿಗೆ ನುಗ್ಗಿ, ಫಸಲನ್ನು ಹಾಳು ಮಾಡುವ ಮಂಗಗಳು ಜಿಲ್ಲೆ ಅನ್ನ ದಾತರನ್ನು ಹೈರಣಾಗಿಸಿದೆ. ಮಲೆನಾಡಿನ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದ ಅರಣ್ಯದಂಚಿನ ರೈತರು ತಮ್ಮ ಬೆಳೆಗಳನ್ನು ಮಂಗಗಳ ಕಾಟದಿಂದ ಕಳೆದುಕೊಂಡು ಕಂಗಾಲಾಗಿದ್ದಾರೆ.

ಅಡಕೆ, ಎಳನೀರು, ಶುಂಠಿ, ತರಕಾರಿಗಳನ್ನು ಕಿತ್ತು ತಿನ್ನುವ ಮಂಗಗಳು, ಬಾಳೆಮರದ ಮೊಳಕೆಗಳನ್ನು ಸಹ ಬಿಡುತ್ತಿಲ್ಲ. ನಾಯಿ, ಏರ್‌ಗನ್, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ಇಂದು ರೈತರ ನಿದ್ದೆಗೆಡಿಸಿವೆ. ಕೆಲವು ಬೆಳೆಗಳನ್ನು ಎಳವೆ ಯಲ್ಲಿಯೇ ಕಿತ್ತು ತಿಂದರೆ, ಇನ್ನೇನು ಫಸಲು ಕಟಾವಿಗೆ ಬರಬೇಕು ಎನ್ನುವ ಹಂತದಲ್ಲಿ ಏಕಾಏಕಿ ದಾಳಿ ಬೆಳೆಗಳನ್ನು ನಾಶ
ಮಾಡುತ್ತಿವೆ. ಇಷ್ಟೇ ಅಲ್ಲ. ವಿಪರೀತ ರಾಸಾಯನಿಕಗಳನ್ನು ಬಳಸಲಾರಂಭಿಸುತ್ತಿದ್ದಂತೆ, ನಿಸರ್ಗದಲ್ಲಿ ಹದ್ದುಗಳ ಸಂಖ್ಯೆಯೂ
ನಾಶವಾಯಿತು.

ಜಾನುವಾರುಗಳಿಗೆ ಕೊಡುವ ಡೈಕ್ಲೋಫಿ ನಾಕ್ ಚುಚ್ಚುಮದ್ದುಗಳಲ್ಲಿನ ರಾಸಾಯನಿಕ ವಿಷಕಾರಿ  ಅಂಶದಿಂದಲೂ ಹದ್ದುಗಳು ಸಂತತಿ ಕ್ಷೀಣಿಸಿದೆ. ಮೃತ ಜಾನುವಾರುಗಳ ದೇಹದಲ್ಲಿನ ಈ ರಾಸಾಯನಿಕ ಹದ್ದುಗಳ ದೇಹ ಸೇರಿ ಅವು ನಶಿಸುತ್ತಿದೆ. ಹೀಗಾಗಿ ಮಂಗನ ಮರಿಗಳನ್ನು ತಿಂದು ಅವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತಿದ್ದ ಹದ್ದುಗಳಿಲ್ಲದೇ ಮಂಗಗಳ ಸಂತತಿ ವೃದ್ಧಿಸಿದೆ. ಹೆಚ್ಚುತ್ತಿರುವ ಸಂಖ್ಯೆಗೆ ಅನುಗುಣವಾಗಿ ಆಹಾರ ಸಿಗದ ಮಂಗಗಳು ಊರಿಗೆ- ತೋಟಕ್ಕೆ ದಾಂಗುಡಿಯಿಡುತ್ತಿವೆ. ಒಂದು ಅಂದಾ ಜಿನ ಪ್ರಕಾರ ಮಲೆನಾಡಿನ ಹಳ್ಳಿಯೊಂದರಲ್ಲಿ ಮಂಗಗಳ ಹಾವಳಿಯಿಂದ ಸರಾಸರಿ ವಾರ್ಷಿಕ ಆಗುತ್ತಿರುವ ನಷ್ಟ ಐದು
ಕೋಟಿಗೂ ಮೀರುತ್ತಿದೆ.

ಇನ್ನೊಂದೆಡೆ ಕಾಡುಕೋಣ, ಜಿಂಕೆ, ನವಿಲು, ಕಾಡು ಹಂದಿಗಳು ಕೆಳಗಡೆಯಿಂದ ದಾಳಿ ಮಾಡುತ್ತವೆ. ಸಂಜೆಯವರೆಗೆ ಚೆನ್ನಾಗಿ ಯೇ ಇದ್ದ ಅಡಕೆ ಸಸಿ ತೋಟ, ಬಾಳೆ ತೋಟ ಬೆಳಗಾಗುವಷ್ಟರಲ್ಲಿ ಬಹುತೇಕ ನಿರ್ನಾಮ ಮಾಡಿಬಿಡುತ್ತವೆ ಕಾಡು ಕೋಣಗಳು ಹಾಗೂ ಹಂದಿಗಳು. ಜೀವ ವೈವಿಧ್ಯಕ್ಕೆ ಕುತ್ತು ತಂದಲ್ಲಿ ಆಗುವ ಅಸಮತೋಲನದ ಒಂದು ನೈಜ ಉದಾಹರಣೆ ಇದು. ನಿಸರ್ಗ ದಲ್ಲಿ ಮನುಷ್ಯರ ಅನಗತ್ಯ ಹಸ್ತಕ್ಷೇಪದಿಂದಾಗಿ ಜೀವವೈವಿಧ್ಯ, ಜೈವಿಕ ಸಮತೋಲನ ಹಾಳಾಗಿದೆ. ಇವೆಲ್ಲದರ ನೇರ ಪರಿಣಾಮ ಕೃಷಿಯ ಮೇಲೆ ಉಂಟಾಗುತ್ತಿದೆ. ಕೃಷಿಕರ ಸಂಕಟಗಳು ಹೆಚ್ಚಾಗುತ್ತಲೇ ಇವೆ. ಆದರೆ ಶಾಶ್ವತ ಪರಿಹಾರಗಳು ಮರಿಚೀಕೆಯೇನೊ ಎನಿಸುತ್ತಿದೆ. ಇದಕ್ಕೆ ಪರಿಹಾರ ನಿಸರ್ಗದಿಂದಲೇ ದೊರಕಬೇಕು. ಅದರಲ್ಲಿ ಅನಗತ್ಯ ಹಸ್ತಕ್ಷೇಪ ಮಾಡದಿದ್ದರೆ ಅದೇ ಪರಿಹಾರ ವನ್ನು ಒದಗಿಸಿಕೊಡುತ್ತದೆ ಎಂದನಿಸಿದೆ.

ಕೇವಲ ಮನುಷ್ಯ ಮಾತ್ರ ಈ ಪರಿಸರದ ಜೀವಿಯಲ್ಲ. ಬೇರೆ ಪ್ರಾಣಿಗಳಿಗೂ ಬದುಕುವ ಸ್ವಾತಂತ್ರ್ಯವಿದೆ. ಆಲೋಚಿಸಿ ಅನುಕೂಲ, ಅನನುಕೂಲಗಳಿಗೆ ಹೊಂದಿಕೊಂಡು ಬಾವಲಿಗಳನ್ನು ಹಾಗೂ ಇತರೇ ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡಿ ನಮ್ಮ ಪರಿಸರವನ್ನು ಸಮತೋಲನವಾಗಿಟ್ಟುಕೊಳ್ಳುವಲ್ಲಿ ಮನುಷ್ಯರಾದ ನಮ್ಮ ಪಾತ್ರ ಬಹುಪಾಲು ದೊಡ್ಡದು.

 
Read E-Paper click here