Monday, 25th November 2024

ಈ ಊರ ತುಂಬಾ ಚಿತ್ರ ಸಂತೆ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಇಲ್ಲಿನ ಪ್ರತಿ ಮನೆಗಳೂ ಕಲಾ ಶ್ರೀಮಂತಿಕೆ ಉಸಿರಾಡುತ್ತಿದ್ದರೂ ಬರಲಿರುವ ಪೀಳಿಗೆ ಮಾತ್ರ ರಘುರಾಜಪುರ ಈಗ ಬದುಕುತ್ತಿದ್ದರೆ ಅದು ವಿದೇಶಿಯರ ಆಸಕ್ತಿಯಿಂದಾಗಿ ಮತ್ತು ಹಿಂದಿನ ತಲೆಮಾರು ಪಟ್ಟು ಬಿಡದೆ ರಚಿಸುತ್ತಿರುವ ಕಲಾಕೃತಿಗಳಿಂದ.

ಇಲ್ಲಿ ಪ್ರತಿ ಮನೆಯೂ ಅಂಗಳದಿಂದ ಅಗಳಿಯವರೆಗೂ, ಅಡುಗೆ ಮನೆಯಿಂದ ಭತ್ತದ ಪಣತದವರೆಗೆ, ಉಳಿದದ್ದೆಲ್ಲ ಸಾಯಲಿ ಕೊನೆಕೊನೆಗೆ ಮನೆ
ಮಾಡಿನ ಅಡ್ಡ ನಾಗಂದಿಗೆಯಿಂದ ಅಷ್ಟು ದೂರದ ಟಾಯ್ಲೆಟ್ ಸೀಟಿನವರೆಗೆ, ಹೊಚ್ಚ ಹೊಸ ಮನೆಯಿಂದ ಹಿಡಿದು ಇನ್ನೇನು ಬಿದ್ದು ಹೋಗಲಿರುವ, ಕಂಭದ ಆಸರೆಯಲ್ಲಿ ಮಾಡು ಕಾಯ್ದುಕೊಂಡ ಕೊನೆಯ ಗುಡಿಸಲಿನ ಮಣ್ಣು ಗೋಡೆಯ ಮೇಲೂ ಬಣ್ಣ ಬಣ್ಣಗಳ ಪ್ರದರ್ಶನ ಊರ ತುಂಬ ಹರಡಿದ್ದು, ಬದುಕುವವರ ಬದುಕು ಅಕ್ಷರಶಃ ಬಣ್ಣಗಳ ಸಂತೆ.

ಮನೆಯ ಪ್ರತಿ ಓರೆ ಕೋರೆಯೂ ಬರುವವರ ಪ್ರದರ್ಶನಕ್ಕೆ ಮೀಸಲು. ದೇಶಾದ್ಯಂತದಿಂದ ಮಾತ್ರವಲ್ಲ, ದುಡ್ಡುದುಗ್ಗಾಣಿ ಒಟ್ಟು ಮಾಡಿಕೊಂಡು ಕೋಣೆ ಕೋಣೆಯಿಂದ ಹೊರಬಿದ್ದು ಬಂದು ತಿಂಗಳಾನುಗಟ್ಟಲೆ ಇಲ್ಲೇ ಬೀಡುಬಿಡುವ ವಿದೇಶದ ಚಿತ್ರ ಪ್ರೇಮಿಗಳು, ಇದನ್ನೇ ವ್ಯವಹಾರವಾಗಿಸಿಕೊಳ್ಳಲು  ಬರುವ ವಿದ್ಯಾರ್ಥಿ ರೂಪದ ಹಿರಿಯರು, ಬಣ್ಣದ ಹುಚ್ಚಿನ ಕಲಾವಿ ದರು, ಇನ್ಯಾವುದೋ ದೇಶದ ಬೀದಿಯಲ್ಲಿ ಇಲ್ಲಿನ ವಿವಿಧ ರೀತಿಯ ಚಿತ್ರ ರೂಪಿಕೆ ಗಳನ್ನು ಮಾರಿ ಬದುಕು ಕಟ್ಟಿಕೊಳ್ಳುವ ಯೋಜನೆಯ ಭಾಷೆ, ರೂಪ, ಅಡುಗೆ, ಕೊನೆಗೆ ಇರುವ ಅನುಕೂಲ ಯಾವುದೂ ಮ್ಯಾಚೇ ಆಗದಿದ್ದರೂ ಗುಡಿಸಲಿನಲ್ಲಿ ಇದ್ದಾದರೂ ಚಿತ್ರ ಬಿಡಿಸುವಿಕೆ ಕಲಿಯಲು ಬರುವ ಪರದೇಸಿಗರು, ಹೀಗೆ ಬರುವವರ ದಂಡಿನ ಕಾರಣಕ್ಕೆ ಪ್ರತಿ ಮನೆಯ ಯಾವುದೇ ಕೋಣೆ, ಹಜಾರ, ಮಾಡಿ ಮನೆಯ ಮೆತ್ತಿಗಳು, ಪಣತದ ಪಕ್ಕದ ಖಾಲಿ ಜಾಗ, ಕೊನೆಗೆ ತೀರ ಆಪ್ತ ಆಪ್ತ ಆಡುಗೆ ಮನೆ ಯಾವುದೂ ಖಾಸಗಿಯಾಗಿ ಉಳಿದೇ ಇಲ್ಲ. ಎಲ್ಲೆಲೂ ಜನ ಜಂಗುಳಿ.

ಒಂದೋ ನೋಡಲು ಬಂದಿರುವವರು ಇರಬಹುದು, ಇಲ್ಲ ಇಲ್ಲೇ ಇದ್ದು ಕಲಿಯಲು ಮುಗಿಬಿದ್ದವರು ಇರಬಹುದು. ಒಟ್ಟಾರೆ ಈ ಊರಿನ ಪ್ರತಿ ಮನೆಯ ಮೆಟ್ಟಿಲ ಮೇಲೆ ಬಣ್ಣದ ಸೆಳಕುಗಳಿವೆ, ಪ್ರತಿ ಉಸಿರಲ್ಲೂ ಕುಂಚ ಬೀಸುವ ಆಮೋದವಿದೆ. ಅದೆಲ್ಲಕ್ಕೂ ಮಿಗಿಲಾಗಿ ಭಾರತದ ಅಪೂರ್ವ ಕಲೆಗಳ ಪ್ರತಿ ಪ್ರಕಾರವೂ ಇಲ್ಲಿ ಹೇಗೋ ಸರಿ ಜೀವಂತ ಉಸಿರಾಡುತ್ತಿದೆ ಎನ್ನುವಲ್ಲಿಗೆ ರಘುರಾಜಪುರ ಎಂಬ ಹಳ್ಳಿಯ ಬಣ್ಣದ ಬದುಕಿನ ಒಳಕೋವೆಗಳ ಕತೆಗಳು ಸಾರ್ವಜನಿಕರಿಗೆ ನಿಧಾನಕ್ಕೆ ತೆರೆದುಕೊಳ್ಳುತ್ತಿದೆ.

ಒಡಿಶಾದ ಪುರಿ ಜಿಲೆಯಲ್ಲಿರುವ ರಘುರಾಜಪುರ ಕೇವಲ ಚಿತ್ರಗಳಿಗೆ ಮಾತ್ರವಲ್ಲ ಓಡಿಸ್ಸಿ ನೃತ್ಯ ಕಲಾವಿದರ ಪಿತಾಮಹ ಕೇಳು ಚರಣ ಮಾಹಾಪಾತ್ರ ಇದೇ ಹಳಿಯ ಜಗುಲಿಯ ಮೇಲೆ ಬೆಳೆದು ಹೊರಗೆ ಬಂದವರು. ತೀರ ನೃತ್ಯ ಗುರುವಾಗುವ ಮುನ್ನ ಇದೇ ಬಣ್ಣದ ಬದುಕಿನ ಗೀಳಿಗೆ ಬಿದ್ದು ಇದ್ದಕ್ಕಿದ್ದಂತೆ ಬಣ್ಣದ ಜಗುಲಿಯಿಂದ ಇಳಿದು ಹೆಜ್ಜೆಗೆ ಗೆಜ್ಜೆ ಕಟ್ಟಿ ನಿಂತ ಮಹಾಪಾತ್ರರಿಗೆ ಬೆನ್ನು ತಟ್ಟಿ ಬೆಂಬಲಿಸಿದ ಹಳ್ಳಿ ರಘುರಾಜಪುರ, ಮುಂದೊಮ್ಮೆ ಅವನನ್ನು ಪಿತಾಮಹ ಎಂದು ಕರೆದು ತಮ್ಮದೇ ಸಾಂಪ್ರದಾಯಿಕ ಪಟ್ಟಾ ಶಾಲು ಹೊದಿಸಿದಾಗ, ಅವತ್ತು ಕೇಳು ಚರಣ ಊರಿನಿಂದ ಹೋದರೂ ಜಗತ್ತಿನ ಅಷ್ಟೂ ಮೀಡಿಯಾಗಳು ಮೂರು ದಿನ ಕಾಲ ಇಲ್ಲಿಂದ ಅಲುಗಿರಲಿಲ್ಲ.

ಕ್ಯಾಮೆರಾ ಇಣುಕುವುದೇ ಆಗಿ ಹೋಗಿತ್ತು. ಪ್ರತಿ ಮನೆಯ ಜಗುಲಿಯ ಮೇಲೆ ಒಡಿಶಾದ ಆರಾಧ್ಯ ದೈವಪುರಿಯ ಜಗನ್ನಾಥನ ತರಹೇವಾರಿ ಬಣ್ಣ ವಿನ್ಯಾಸ, ಶೈಲಿಯ ಚಿತ್ರಗಳಿದ್ದರೆ, ಪ್ರತಿ ಕಪಾಟುಗಳ ತುಂಬಾ ಅಚ್ಚುಕಟ್ಟಾದ ಅರಗು ಅಚ್ಚಿನ ಮೂರ್ತಿಗಳ ಪರಿಶೆ ಎದುರಿಗೆ ದಕ್ಕುತ್ತದೆ. ಕ್ರಿ.ಪೂ. 5ಕ್ಕೂ ಮೊದಲಿನ ಕಲೆಯಾದ ಪಟಚಿತ್ರಕಲೆ ಮತ್ತು ಮ್ಯೂರಲ್ ಆರ್ಟ್‌ನ ಉಬ್ಬು ಚಿತ್ರಗಳ ಪರಂಪರೆ ಹಲವು ಶತಮಾನಗಳ ನಂತರವೂ ಮುಂದುವರಿದಿದೆ.

ಆಗಿನಿಂದಲೂ ಮುಂದುವರಿಸಿಕೊಂಡು ಬಂದಿರುವ ಈ ಚಿತ್ರ ಶಾಲೆಯಲ್ಲಿ ಹ್ಯಾಂಡಿಕ್ರಾಫ್ಟ್ಗಳು, ಚಿತ್ರಪಟಗಳು, ಕಲ್ಲಿನ ಕೆತ್ತನೆ, ಪಾಮ್ ಎಲೆಗಳ ಮೇಲೆ ತೈಲ ಚಿತ್ರಗಳು, ಒಣಗರಿಗಳ ಮೇಲೆ ಕೊರೆದ ರೇಖಾ ಚಿತ್ರಗಳು, ತೆಂಗಿನ ಗೆರಟೆಯ ನುಣುಪು ಶೈಲಿಯ ಕಲೆ, ವರ್ಜಿತ ಪೇಪರ್ ಮತ್ತು ಇತರ ಕಾಗದ ಉತ್ಪಾದನೆಗಳನ್ನು ಮರು ಉಪಯೋಗಿಸುವ ಪೇಪರ್ ಆರ್ಟ್ (ಇದಕ್ಕಾಗಿ ಎಳು ದಿನಗಳ ಕಾಲ ಎಲ್ಲ ರೀತಿಯ ಕಾಗದ ಉತ್ಪಾದನೆಯನ್ನು ನೆನೆಸಿ ಅದನ್ನು ಪಲ್ಪ  ಮಾದರಿ ಯಲ್ಲಿ ಮರುಸಂ ಯೋಜನೆ ಮಾಡಿಕೊಂಡು ಕಲಾಕೃತಿಗಾಗಿ ಬಳಸುತ್ತಾರೆ) ನಾನಾ ಬಣ್ಣಗಳ ಕಟ್ಟಿಗೆಯ ಕಾಷ್ಟಕೃತಿಗಳು, ಕಟ್ಟಿಗೆಯ 2ಡಿ ಮತ್ತು 3ಡಿಗಳು, ವಾಲ್‌ಪೇಂಟಿಂಗ್ಸ್, ವಾಲ್‌ಹ್ಯಾಂಗಿಂಗ್ಸ್, ಮುಖ ವರ್ಣಿಕೆಗಳು, ಪಿಲ್ಲರ್ ಆರ್ಟ್ (ನಮ್ಮಲ್ಲಿ ಮೆಟ್ರೊ ಕಂಬಗಳಿಗೆ ಬಣ್ಣ ಬಳಿಯುತ್ತಾರಾ ದರೂ ಅವರ ಶೈಲಿ ಅನುಕರಿಸಿದರೆ ಅವು ಕಂಭದ ಬದಲಿಗೆ ಕಲಾಕೃತಿಯೊಂದನ್ನು ನಿಲ್ಲಿಸಿದ ಜೀವಂತಿಕೆ ಕಂಡುಬರುತ್ತಿತ್ತು), ಮುಖವಾಡಗಳು, ಲೋಹದ ಶಿಲ್ಪಗಳು, ಅರಗು ಮತ್ತು ಅಚ್ಚುಚಿತ್ರಗಳು, ಸೆಗಣಿಯನ್ನು ಸಂಸ್ಕರಿಸಿ ಅದಕ್ಕೊಂದು ಬಿರುಸುತನ ನೀಡಿ ಅದರ ಮೇಲೆ ಕೊರೆದ ಚಿತ್ರಗಳು, ಮನೆಯ ಹಾಲ್‌ನ ಮೆರುಗಿಗಾಗಿ ಜಲವರ್ಣ, ತೈಲವರ್ಣ ಚಿತ್ರಗಳು, ಮನೆಯ ಕಿಟಕಿ, ಬಾಗಿಲ ಸುತ್ತ ಚಿತ್ರಿಸುವ ಕಲೆ, ಗಂಜಿ-, ಟೇರಾಕೊಟ್ಟಾ, ಹುಲ್ಲಿನ ಕಡ್ಡಿ, ಹಂಚಿಕಡ್ಡಿಗಳ ಹೆಣಿಕೆ ಕಲೆ, ಬಿದಿರು ಎಳೆಗಳ ನೇಯ್ಗೆ, ಬಿದಿರು ಕೊಳವೆಗಳ ಬಾಂಬೂ ಕ್ರಾಫ್ಟ್, ಎಲ್ಲ ರೀತಿಯ ಕಲಾ ಪ್ರಕಾರಗಳ ಜತೆ ಪ್ರತಿ ಚಿತ್ರಗಳು ಭಾರತೀಯ ಪುರಾಣ, ಮಹಾಭಾರತ ಕಾವ್ಯಗಳು, ಉಪನಿಷತ್‌ನ ಕಥೆಗಳ ಸೀರೀಸ್ ಹೊಂದಿವೆ.

ರಾಷ್ಟ್ರೀಯ ಹೆದ್ದಾರಿ 203 ರ ಮೇಲೆ ಭುವನೇಶ್ವರದಿಂದ 55 ಕಿ.ಮೀ. ದೂರ ಇರುವ ರಘುರಾಜಪುರ ಕ್ಕೆ ನೇರ ಬಸ್ ಸೇರಿದಂತೆ ಎಲ್ಲ ರೀತಿಯ ಸ್ಥಳೀಯ ವಾಹನ ಸೌಲಭ್ಯಗಳು ಲಭ್ಯವಿವೆ. ಪುರಿಯಿಂದ ಹೊರಟರೆ ಚಂದನಪುರ ಮೂಲಕ, ಹೆದ್ದಾರಿಯಿಂದ ಹದಿನೈದು ನಿಮಿಷದ ಕಾಲ್ದಾರಿ ತರಹದ ರಸ್ತೆಯನ್ನು ನಡೆಯುತ್ತಲೇ ಹೋಗಿ. ಪ್ರತಿಹೆಜ್ಜೆಗೂ ಕಂಡಲೆಲ್ಲ ಮರ ಮಟ್ಟುಗಳು, ತೆಂಗಿನ ಬೊಡ್ಡೆ, ಹುಲ್ಲಿನ ಮಾಡು ಹೀಗೆ ಕಲಾಕೃತಿಗಳ ಸಾಲು ಮುದ ನೀಡುತ್ತದೆ. ಅದೇ ಲಭ್ಯ ಇರುವ ಆಟೊರೀಕ್ಷಾ ಇತ್ಯಾದಿ ಬಳಸಿದರೆ ಇಂತಹ ಅಪರೂಪದ ಕಾಷ್ಟ ಶಿಲ್ಪಗಳ ದೃಶ್ಯಾವಭ್ಯವಾಗುವ ದೃಶ್ಯಕಲೆಗಳ ವಿವರ ಲೇಖನಿಗೆ ದಕ್ಕುವಂತಹದ್ದಲ್ಲ.

ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರ್ ಇದನ್ನು ಹೆರಿಟೇಜ್ ವಿಲೇಜ್ ಎಂದು ಗುರುತಿಸಿ ಸೂಕ್ತ ಬೆಂಬಲ ನೀಡಿ ಕಲೆಗಳನ್ನು ಪ್ರೊತ್ಸಾಹಿಸಿ ಬೆಳೆಸಲು ಯತ್ನಿಸುತ್ತಿದ್ದರೆ, ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ಕಾಸು ರಹಿತ  ವ್ಯವಹಾರಕ್ಕೆ ಬದ್ಧಗೊಳಿಸುತ್ತ ಇದನ್ನು ಡಿಜಿಟಲ್ ವಿಲೇಜ್ ಮಾಡಿದೆ. ಕೇಳುಚರಣ ಮಹಾಪಾತ್ರ ಮೂಲತಃ ರಘುರಾಜ ಪುರವನ್ನು ಕೇವಲ ಕಲೆಗೆ ಮಾತ್ರ ಸೀಮಿತಗೊಳಿಸದೇ ಇರಲು ನೃತ್ಯ ಪ್ರಕಾರದ ಹಲವು ಆಯೋಜನೆ ನಡೆಸುತ್ತ ಬಂದಿದ್ದರೆ, ದಶಭುಜ ಓಡಿಸ್ಸಿ ನೃತ್ಯ ಪರಿಷತ್ ಇಲ್ಲಿ ಗುರುಕುಲ ಮಾದರಿ ನೃತ್ಯ ಶಾಲೆಯನ್ನು ಆರಂಭಿಸಿದೆ.

ರಘುರಾಜಪುರದ ಕಲಾ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು ಪ್ರತಿವರ್ಷ ಫೆಬ್ರುವರಿ ಮತ್ತು ಮಾರ್ಚನಲ್ಲಿ ವಸಂತೋತ್ಸವವನ್ನು ಆಯೋಜಿಸ ಲಾಗುತ್ತಿದ್ದು ದೊಡ್ಡ ಮಟ್ಟದ ಕಲಾವಿದರು ಹಾಗು ಆಸಕ್ತರು ಪಾಲ್ಗೊಳ್ಳುತ್ತಾರೆ. ಪರಂಪರಾ ಎನ್ನುವ ಎನ್‌ಜಿಒ ಇದಕ್ಕೆ ಕಟಿಬದ್ಧವಾಗಿದ್ದು ಹೆರಿಟೇಜ್ ವಿಲೇಜ್‌ನ ಕಲಾ ಮತ್ತು ನೃತ್ಯ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಈ ಉತ್ಸವದಲ್ಲಿ ರಘುರಾಜಪುರದ ಅಷ್ಟೂ ಕಲಾಕೃತಿಗಳು ಮತ್ತು ಕಲಾಪ್ರಕಾರಗಳು ಬೀದಿಯನ್ನು ಅಲಂಕರಿಸಿದ್ದರೆ, ಹಳ್ಳಿಯ ಎರಡೂ ಕೊನೆಯಲ್ಲಿ ನೃತ್ಯ ವೇದಿಕೆಗಳಿಂದ ಸತತ ತಿಂಗಳು ಕಾಲ ಇಲ್ಲಿ ಕಲಾವೈಭವ ಜೀವ ತಳೆದಿರುತ್ತದೆ.

ಹಾಗಾಗಿ ಜನವರಿಯಿಂದಲೇ ವಿದೇಶಿಗರ ವಾಸ್ತವ್ಯ ಪ್ರತಿ ಮನೆಯ ಜಗುಲಿಯಲ್ಲಿ ತೆರೆದುಕೊಳ್ಳತೊಡಗುತ್ತದೆ. ಮನೆಗಳೂ ಅತಿಥಿಗಳನ್ನು ಎದುರು ಗೊಳ್ಳಲು ಸಜ್ಜಾಗೇ ಇರುತ್ತವೆ. ಅದರ ಜತೆಗೆ ಹಳ್ಳಿಗರ ಆತಿಥ್ಯ ವಿದೇಶದಲ್ಲಿ ಜಗಜ್ಜಾಹೀರು. ಇದ್ದುದರಲ್ಲೇ ಊಟ ವಸತಿ ಒದಗಿಸುವ ಸ್ಥಳೀಯರ ಸನ್ನಡ ತೆಗೆ ಹೋದ ಪ್ರವಾಸಿಗರೂ ಫಿದಾ.

ಆದರೆ ಇಷ್ಟೆಲ್ಲ ಪ್ರತಿ ಮನೆಗಳು ಕಲಾ ಶ್ರೀಮಂತಿಕೆ ಉಸಿರಾಡುತ್ತಿದ್ದರೂ ಬರಲಿರುವ ಪೀಳಿಗೆ ಮಾತ್ರ ಈಗಿನ ಮೊಬೈಲ್ ಸಂಸ್ಕೃತಿಗೆ ಜೋತು ಬಿದ್ದು ಸಂಪೂರ್ಣ ದೂರ ಉಳಿದಿದೆ. ರಘುರಾಜಪುರ ಈಗ ಬದುಕುತ್ತಿದ್ದರೆ ಅದು ವಿದೇಶಿಯರ ಆಸಕ್ತಿಯಿಂದಾಗಿ ಮತ್ತು ಹಿಂದಿನ ತಲೆಮಾರು ಪಟ್ಟು ಬಿಡದೆ
ರಚಿಸುತ್ತಿರುವ ಕಲಾಕೃತಿಗಳಿಂದ. ವಿದೇಶದ ನೂರಾರು ಯುವಕ ಯುವರಿಯರು ಇಲ್ಲಿ ಕಲಿತು ಹೋಗುತ್ತಿದ್ದರೆ ಹೊಸ ತಲೆಮಾರು ಮಾತ್ರ ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಮಾಡ ರ್ನೈಸ್ ಎನ್ನುವ ಮೋಹ ಮತ್ತು ಸಿಟಿ ಕಲ್ಚರ್ ಕಾಲಿಟ್ಟರೆ ಇದು ನಾಶವಾಗುವ ಭೀತಿ ಪ್ರತಿಯೊಬ್ಬರನ್ನು ಕಾಡುತ್ತಿದ್ದು ಹಲವು
ಸಂಘಟನೆಗಳು ಇದನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿವೆ.

ಆರ್ಥಿಕವಾಗಿ ಸ್ಥಳೀಯರನ್ನು ಬಲಾಢ್ಯವಾಗಿಸಿ ಕಾಯುತ್ತಿವೆ. ಆದರೆ ಬರಲಿರುವ ತಲೆ ಮಾರು ಇಲ್ಲಿ ಉಳಿಯಲೇ ಸಿದ್ಧವಿಲ್ಲದಿದ್ದಾಗ ಬೇರೆಯವರ ಪ್ರವೇಶ ಅನಿವಾರ್ಯವಾಗುತ್ತಿದೆ. ಕ್ರಮೇಣ ಕಲೆಯ ಪಾವಿತ್ರ್ಯ ಅಳಿಯತೊಡಗುತ್ತಿದೆ. ಹಿತ್ತಿಲಿನ ಗಿಡ ಮದ್ದಲ್ಲ. ವಿದೇಶಿಗರ ಮುಖಗಳ ಮಧ್ಯೆ ನಮ್ಮವರ ನಗು ಹುಡುಕುವ ಪ್ರಮೇಯ ತಲೆದೋರುತ್ತಿದೆ. ಪ್ರತಿ ತಲೆಮಾರು ಎದುರಿಸುವ ಸಮಸ್ಯೆಗಳಿಂದ ರಘುರಾಜಪುರ ಕೂಡಾ ಮುಕ್ತವಾಗಿಲ್ಲ. ಇನ್ಯಾವುದೋ ದಶಕದಲ್ಲಿ ಈ ಕಲೆಗಾರಿಕೆಗೆ ವಿದೇಶಕ್ಕೆ ಪ್ರವಾಸ ಕೈಗೊಳ್ಳುವ ವಾಸ್ತವ ಮಾತ್ರ ದುರಂತವಾಗಲಿದೆ. ಉಳಿದದ್ದು ಕಾಲವೇ ನಿರ್ಣಯಿಸಲಿದೆ.