Thursday, 28th November 2024

ಪಕ್ಷಗಳು ಕೇವಲ ಭರವಸೆಗಳಿಗೆ ನೀರೆರೆದರೆ ಸಾಕೇ ?

ಸುಪ್ತ ಸಾಗರ

rkbhadti@gmail.com

ಕುಡಿಯುವ ಜೀವಜಲಕ್ಕೆ ಜನರು ಅವಲಂಬಿಸಿರುವ ನದಿಗಳು ಮಲೀನವಾಗಕೂಡದು. ಅಭಿವೃದ್ಧಿ ಯೋಜನೆಗಳ ಗತಿ ಬದಲಾಗಬೇಕು. ಏಕೆಂದರೆ, ಜನರ ವಾಸಸ್ಥಾನವನ್ನೇ ಅವು ನುಂಗುತ್ತ ಬದುಕು ಕಸಿಯುತ್ತಿವೆ. ಎಲ್ಲರಿಗೂ ಬಳಕೆಗೆ ಸಿಗುವ ರೀತಿಯಲ್ಲಿ ಜಲ ಸಂಪನ್ಮೂಲದ ವಿಕೇಂದ್ರೀಕರಣವಾಗಬೇಕು.

ಇವೆಲ್ಲ ದಶಕಗಳ ಹಿಂದಿನ ಮಾತು. ಈ ದೇಶ ಕಂಡ ಅತ್ಯಂತ ಕಿರಿಯ ಪ್ರಧಾನಿ, ರಾಜೀವ್‌ ಗಾಂಧಿ ಅತಿ ಹೆಚ್ಚು ಮತಗಳಿಂದ ಆ ಬಾರಿ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಅವರು ಗಂಗಾ ನದಿಯ ಪುನರುತ್ಥಾನದ ಸಂಕಲ್ಪ ಮಾಡಿ ಅದಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ಘೋಷಿಸಿದರು. ಮೊದಲ ಬಾರಿಗೆ ಸರಕಾರದ ಮಟ್ಟದಲ್ಲಿ ಪಾಪನಾಶಿನಿಯಲ್ಲಿ ತುಂಬಿ ಹೋಗಿದ್ದ ದೇಶವಾಸಿಗಳ ಪಾಪ ತೊಳೆಯುವ ಕಾರ್ಯ ಸಾಂಸ್ಥಿಕ ಸ್ವರೂಪದಲ್ಲಿ ಘೋಷಣೆಯಾಗಿತ್ತು. ಆ ಪುಣ್ಯ ಸಂಚಯದ ಫಲವೆಂಬಂತೆ ಯುವ ಪ್ರಧಾನಿ ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು.

ಸಿದ್ದು ನ್ಯಾಮಗೌಡ ಅಲಿಯಾಸ್ ಬ್ಯಾರೇಜ್ ಸಿದ್ದು, ಜಮಖಂಡಿಯಲ್ಲಿ ಒಬ್ಬ ಸಾಮಾನ್ಯ ಮುಖಂಡನಾಗಿ ಸ್ಥಳೀಯ ಮಟ್ಟದಲ್ಲಿ ರಾಜಕಾರಣದಲ್ಲಿ ತೊಡಗಿಕೊಂಡಿದ್ದವರು. ಮಾಜಿ ಮುಖ್ಯಮಂತ್ರಿ, ಜನತಾಪರಿವಾರದ ರಾಷ್ಟ್ರೀಯ ನಾಯಕ, ಆಬಿವೃದ್ಧಿಯ ಹರಿಕಾರನೆಂದೇ ಹೆಸರು ಪಡೆದಿದ್ದ ದಿವಂಗತ ರಾಮಕೃಷ್ಣ ಹೆಗಡೆಯವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಕೇಂದ್ರ ಸಚಿವ ಸ್ಥಾನವನ್ನು ಅಲಂಕರಿಸಿದ್ದರು ಸಿದ್ದು ನ್ಯಾಮಗೌಡ.

ಬರದಿಂದ ಕಂಗೆಟ್ಟು ಹೋಗಿದ್ದ ಬಾಗಲಕೋಟ ಜಿಲ್ಲೆಗೆ ನೀರೊದಗಿಸುವ ಪಣ ತೊಟ್ಟು, ಬ್ಯಾರೇಜ್‌ಗಳ ಸರಣಿ ನಿರ್ಮಿಸಿ ಜಲಜನಕ ರಾದವರು. ಜನರಿಗೆ ಅವರೆಷ್ಟು ಹತ್ತಿರವಾಗಿದ್ದರೆಂದರೆ ಮಂದಿ ಅವರನ್ನು ಅಕ್ಕರೆಯಿಂದ ಬ್ಯಾರೇಜ್ ಸಿದ್ದು ಎಂತಲೇ ಕರೆದರು. ಮಾತ್ರವಲ್ಲ, ಹೆಗಡೆಯವರಂಥ ಮುತ್ಸದ್ಧಿಯನ್ನು ತಿರಸ್ಕರಿಸಿ ತಮ್ಮ ನಾಯಕನಿಂದ ತಾವು ನಿರೀಕ್ಷಿಸುವದೇನನ್ನು
ಎಂಬ ಸ್ಪಷ್ಟ ಸಂದೇಶ ನೀಡಿದ್ದರು.

ಮಂಡ್ಯದಲ್ಲಿ ಇಂದಿಗೂ ರಾಜಕೀಯ ನಡೆಯುವುದೇ ಕಾವೇರಿಯ ಹೆಸರಿನಲ್ಲಿ. ಮಾದೇಗೌಡರು ಎರಡು ಬಾರಿ ಪಾರ್ಲಿಮೆಂಟ್ ಪ್ರವೇಶಿಸಿದ್ದು, ಐದು ಬಾರಿ ಶಾಸಕರಾದದ್ದು ಸಹ ಕಾವೇರಿ ಮಾತೆಯ ಕೃಪೆಯಿಂದಲೇ. ಅಲ್ಲಿಂದಲೇ ಸಂಸದರಾಗಿ, ದಳ, ಕಾಂಗ್ರೆಸ್‌ಗಳನ್ನು ಪ್ರತಿನಿಧಿಸಿ ಕೇಂದ್ರ ಸಚಿವರೂ ಆಗಿದ್ದ ನಟ ಅಂಬರೀಷ್ ಕಾವೇರಮ್ಮನ ಮಗನೇ. ಅದೇ ಕಾವೇರಿಯ ವಿಚಾರದಲ್ಲಿ ಕೊನೆಗೆ ಅವರು ರಾತೋರಾತ್ರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಎಚ್.ಡಿ.ದೇವೇಗೌಡರು ಪ್ರಧಾನಿ ಆಗದೇ ಹೋಗಿದ್ದರೆ ಕೃಷ್ಣಾ ಕೊಳ್ಳವೂ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳು ದಶಕದ ಹಿಂದೆಯೇ ಉಳಿದಿರು ತ್ತಿತ್ತು.

ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಡಿ. ಕೆ. ಬೋಸ್ ರಾಜ್ ನಾಯಕತ್ವದ ಸಾಫಲ್ಯ ಅಡಗಿದ್ದಿದ್ದು ಅವರು ರಾಯಚೂರು ಜಿಲ್ಲೆಯಲ್ಲಿ ರೂಪಿಸಿದ ನೀರಾವರಿ ಯೋಜನೆಯಲ್ಲಿಯೇ. ಕಾಲುವೆ ಕೊನೆಯ ರೈತರಿಗಾಗಿ ವಿಶಿಷ್ಟ ಯೋಜನೆ ರೂಪಿಸಿ ತುಂಗಭದ್ರಾ ನೀರಿನ ಪಯಣಕ್ಕೆ ತಂಗುದಾಣ ನಿರ್ಮಸಿ, ಇಮ್ಮಡಿ ವೇಗದೊಂದಿಗೆ ಕೊಟ್ಟಕೊನೆಯ ರೈತ ನಿಗೂ ನೀರು ಸಿಗುವಂತೆ ನೋಡಿಕೊಂಡಿದ್ದರು. ಇದು ಅವರನ್ನು ಅಧಿಕಾರದ ಮಟ್ಟಕ್ಕೆ ಕೊಂಡೊಯ್ದಿದ್ದು ಸುಳ್ಳಲ್ಲ.

ರಾಜ್ಯದ ಜನತಾಪರಿವಾರದ ನಾಯಕರಾಗಿದ್ದ ನಾಗೇಗೌಡ, ಭೈರೇಗೌಡ, ನಂಜೇಗೌಡರನ್ನು ಬಿಟ್ಟು ರಾಜ್ಯದಲ್ಲಿ  ನೀರಾವರಿ ಯನ್ನು ಪ್ರತ್ಯೇಕಿಸಿ ನೋಡಲಾಗುವುದೇ ಇಲ್ಲ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯದಲ್ಲಿ ಅತ್ಯಂತ ಮುಂಚೂಣಿಗೆ ಬಂದದ್ದೇ ಯಡಿಯೂರಪ್ಪ ಅವರ ಸಂಪುಟದಲ್ಲಿ ದುವರ್ಷಗಳ ತನಕ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲೇ.

ಆಲಮಟ್ಟಿ ಅಣೆಕಟ್ಟೆ ವಿಚಾರದಲ್ಲಿ ತಗಾದೆಯನ್ನು ಕೊನೆಗಾಣಿಸಿ, ಎತ್ತರವನ್ನು ಹೆಚ್ಚಿಸಿ ನೀರು ನಿಲ್ಲಿಸಿದ ಕೀರ್ತಿ ಕಾಗ್ರೆಸ್‌ನ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರು ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಗೆ ಸಲ್ಲಬೇಕೆನ್ನುವುದು ನಿರ್ವಿವಾದ. ಈಗ ಬಿಜೆಪಿಯಲ್ಲಿರುವ ಆಗಿನ ಕಾಂಗ್ರೆಸ್ ಸಚಿವ ಕುಮಾರ್ ಬಂಗಾರಪ್ಪ ಸಣ್ಣ ನೀರಾವರಿ ಸಚಿವರಾಗಿ ರಾಜ್ಯದ ಕೆರೆಗಳ ಹೂಳೆತ್ತಲು ಕೈಗೊಂಡ ಉಪಕ್ರಮಗಳು ಸಾವಿರಾರು ಕೆರೆಗಳು ಇಂದಿಗೂ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ನೆರವಾಗಿದೆ. ತೀರಾ ಇತ್ತೀಚಿನ ವರ್ಷಗಳ ವಿಚಾರಕ್ಕೆ ಬಂದರೆ, ವಿಜಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಿದ್ದಾಗಲೂ ಅದೇ ಪಕ್ಷದಿಂದ ಶಾಸಕರಾದ ಎಂ.ಬಿ.
ಪಾಟೀಲ್ ಗೆಲುವಿಗೆ ಅವರು ರೂಪಿಸಿದ ಕೆರೆ ತುಂಬುವ ಯೋಜನೆಯ ಪಾತ್ರ ಹಿರಿದು. ಅಲ್ಲಿಂದ ಮುಂದೆ ಎಂ ಬಿ ಪಾಟೀಲ್ ಹಿಂತಿರುಗಿ ನೋಡಿಲ್ಲ.

ಅವರು ಬೃಹತ್ ನೀರಾವರಿ ಸಚಿವರಾಗಿದ್ದಾಗ ಸರಿಸುಮಾರು ೮೦ ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನ ಮೀಸಲಿಟ್ಟು ಒಟ್ಟಾರೆ ರಾಜ್ಯಕ್ಕೆ, ವಿಜಾಪುರ ಜಿಲ್ಲೆಗೆ ನೀರಾವರಿಯಲ್ಲಿ ನೀಡಿದ ಕೊಡುಗೆ ಇಂದಿಗೂ ದಾಖಲೆ. ಹಾಗೆಯೇ ಬಾಗೇಪಲ್ಲಿ ಶಾಸಕ ಸಂಪಗಿ ಗೆಲುವಿನಲ್ಲಿ ಚಿತ್ರಾವತಿ ಯೋಜನೆ, ಸೊರಬದ ರಾಜಕೀಯದಲ್ಲಿ ದಂಡಾವತಿ ಯೋಜನೆಗಳೂ ಮಹತ್ವದ ಪಾತ್ರ ವಹಿಸಿವೆ. ಇನ್ನು ತಮಿಳುನಾಡಿನಲ್ಲಿ ಸರಕಾರಗಳು ಬದಲಾಗುವುದೇ ಕಾವೇರಿಯ ಹೆಸರಿನಲ್ಲಿ. ಇಷ್ಟೆಲ್ಲದರ ನಡುವೆ ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ ರಾಜ್ಯವಿದೆ. ಇನ್ನೇನು ಮೂರು ದಿನದಲ್ಲಿ ಮುಂದಿನ ಐದು ವರ್ಷಗಳ ಕಾಲ ನಮ್ಮನ್ನಾಳುವವರು ಯಾರೆಂಬುದನ್ನು ಬರೆಯಲಿದ್ದೇವೆ.

ಕರ್ನಾಟಕದಂಥ ಮುಕ್ಕಾಲು ಪಾಲು ಬರಪೀಡಿತ ಪ್ರದೇಶವನ್ನೇ ಹೊಂದಿರುವ ರಾಜ್ಯದಲ್ಲಿ ಮತ ಸೆಳೆಯಲು ರಾಜಕೀಯ ಪಕ್ಷಗಳಿಗೆ ‘ನೀರಾವರಿ’ ವಿಚಾರ ಅತಿಪ್ರಮುಖ ವಿಚಾರಗಳಲ್ಲಿ ಒಂದು. ಹೀಗಾಗಿ ಪ್ರಮುಖ ಮೂರೂ ಪಕ್ಷಗಳು ತಂತಮ್ಮ ಪ್ರಣಾಳಿಕೆ ಯಲ್ಲಿ ‘ರಾಜ್ಯದ ನೀರಾವರಿಗೆ’ ಭರಪೂರ ಭರವಸೆ ನೀಡಿವೆ. ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆ ಗಳನ್ನೂ ಪೂರ್ಣಗೊಳಿಸುವುದಾಗಿ ಬಿಎಜಪಿ ಹೇಳಿಕೊಂಡಿದೆ. ಜಾತ್ಯತೀತ ಜನತಾದಳವಂತೂ ನೀರಾವರಿ, ರೈತರನ್ನೇ ಆಧರಿಸಿ ಪ್ರಣಾಳಿಕೆ ತಯಾರಿಸಿದ್ದು, ನೀರಾವರಿಗೆ ೫೦ ಸಾವಿರ ಕೋಟಿ ನೀಡಡುವುದಾಗಿ ಹೇಳಿದೆ.

ಕಾಂಗ್ರೆಸ್ ಇನ್ನೂ ಒಂದು ಹೆಜ್ಜೆ ಐದು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿಗಳನ್ನು ನೀರಾವರಿಗೆ ಮೀಸಲಿಡುವುದಾಗಿ ತನ್ನ
ಪ್ರಣಾಳಿಕೆಯಲ್ಲಿ ಘೋಷಿಸಿದೆ. ಇಷ್ಟು ಸಾಕೆ? ಪರಿಸರವನ್ನು ನೋಡುವ ದೃಷ್ಟಿಕೋನದ ವ್ಯಾಪ್ತಿ ಇಷ್ಟಕ್ಕೇ ಸೀಮಿತವೇ? ಬೆಳವಣಿಗೆ ಹಾಗೂ ಆರ್ಥಿಕ ಬದಲಾವಣೆಯ ಜತೆ ಸಮೀಕರಿಸಿದೇ ಬರೀ ಜನಪ್ರಿಯತೆಯ ಹಂತದಲ್ಲೇ ಪರಿಸರದ ವಿಷಯಗಳನ್ನು ಮೊಟಕುಗೊಳಿಸಿದರೆ ಏನಾದೀತು? ಯಾಕೆಂದರೆ, ಪರಿಸರದ ಬಗ್ಗೆ ಮಾತಾಡುತ್ತಿರುವ ಪಕ್ಷಗಳೆಲ್ಲ ಅದಕ್ಕೂ ದೊಡ್ಡ ಧ್ವನಿಯಲ್ಲಿ
ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿವೆ.

ಇಲ್ಲಿಯೇ ಸಮಸ್ಯೆ ಎದುರಾಗುತ್ತದೆ. ಪರಿಸರದ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬೆಳವಣಿಗೆ ಸಾಧಿಸುವುದೇ ನಿಜವಾದ ಸವಾಲು. ಯುರೋಪ್‌ನಲ್ಲೂ ಸಹ ಮುಖ್ಯವಾಹಿನಿಯಲ್ಲಿರುವ ರಾಜಕೀಯ ಪಕ್ಷಗಳೆಲ್ಲ ಚುನಾವಣೆಯಂಥ ಸಂದರ್ಭದಲ್ಲಿ
ಪರಿಸರ ವಿಷಯವನ್ನು ಬಲವಾಗಿ ಪ್ರತಿಪಾದಿಸುತ್ತವೆ. ಕಡಿಮೆ ಕಾರ್ಬನ್ ತಂತ್ರಜ್ಞಾನದ ಕುರಿತಾಗಿ ಹಾಗೂ ವಾತಾವರಣದ ಏರುಪೇರನ್ನು ತಡೆಯುವ ಘೋಷಣೆಗಳಿಗೆ ಅಲ್ಲೂ ಬರವಿಲ್ಲ. ಭಾರತದಲ್ಲಿ ನೀರು, ಪರಿಸರ, ಕೃಷಿ ಎಂಬುದು ಚುನಾವಣೆಯ ಮುಖ್ಯ ವಿಷಯವಾಗಿಲ್ಲ.

ಆದರೆ, ಐರೋಪ್ಯ ರಾಷ್ಟ್ರಗಳಲ್ಲಿ ಇದು ಹತ್ತರಲ್ಲಿ ಹನ್ನೊಂದನೇ ಅಂಶವಲ್ಲ. ಹಾಗಿದ್ದಾಗಿಯೂ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಪರಿಸರದ ಭರವಸೆಗಳನ್ನು ಈಡೇರಿಸಲು ಅಲ್ಲಿನ ಪಕ್ಷಗಳು ಸೋಲುತ್ತಿವೆ. ಬೃಹತ್ ಕೈಗಾರಿಕೆಗಳಿಗೆ ಹೊಗೆಯುಗುಳುವಿಕೆ ಪರವಾನಗಿಯನ್ನು ಎಗ್ಗಿಲ್ಲದೇ ನೀಡುತ್ತಿರುವ ಜರ್ಮನಿ ಸರಕಾರ, ಪರಿಸರ ಉಳಿಸುವ ಭರವಸೆಗಳಿಂದ ಹಿಂದೆ ಸರಿದಿದೆ. ಕಾರು ಹಾಗೂ ಹೊಸ ವಾಹನಗಳನ್ನು ಕೊಳ್ಳುವವರಿಗೆ ಸಬ್ಸಿಡಿ ನೀಡುವುದರಲ್ಲೂ ಸರಕಾರ ಹಿಂದೆ ಬಿದ್ದಿಲ್ಲ.

ಆಸ್ಟ್ರೇಲಿಯದಲ್ಲೂ ಇದೇ ಕತೆ. ಹಿಂದೆ ಜಾನ್ ಹೋವರ್ಡ್ ಸರಕಾರದ ಪರಿಸರ ವಿರೋ ನೀತಿಗಳನ್ನು ವಿರೋಧಿಸುತ್ತಲೇ ಅಧಿಕಾರಕ್ಕೆ ಬಂದಿತ್ತು ಅಲ್ಲಿನ ಲೇಬರ್ ಪಾರ್ಟಿ. ಆದರೆ, ಪರಿಸರದ ಬಗ್ಗೆ ಸರಕಾರ ತಾಳಿರುವ ನಿರ್ಲಕ್ಷ್ಯ, ಹಿಂದಿನ ಸರಕಾರವೇ ಪರವಾಗಿಲ್ಲ ಎಂಬಂತಿದೆ. ಈ ಹಿನ್ನೆಲೆಯಲ್ಲಿ, ಭಾರತದಂಥ ದೇಶದಲ್ಲಿ ಹಸಿರು ಭರವಸೆ ನೀಡುತ್ತಿರುವ ಪಕ್ಷಗಳ ಹಕೀಕತ್ ಏನು? ವಾಸ್ತವಾಂಶ ಏನೆಂದರೆ, ನಮ್ಮ ದೇಶದ ಬಹುಪಾಲು ಜನಸಂಖ್ಯೆ ಪರಿಸರವನ್ನೇ ಅವಲಂಬಿಸಿ ಜೀವನ ರೂಪಿಸಿಕೊಂಡಿದೆ. ಅದು
ಭೂಮಿ ಇರಬಹುದು, ನೀರು ಹಾಗೂ ಅರಣ್ಯವಿರಬಹುದು. ಹಾಗಾಗಿ, ಇವರು ಅವಲಂಬಿಸಿರುವ ನೈಸರ್ಗಿಕ ಸಂಪನ್ಮೂಲದ ಉತ್ಪಾದಕತೆ ಹೆಚ್ಚಿಸುವುದೇ ನಿಜವಾದ ಪರಿಸರದ ಇಶ್ಯೂ ಆಗಬೇಕು.

ಇದರಿಂದ ಸ್ಥಳೀಯರು ನೈಸರ್ಗಿಕ ಸಂಪನ್ಮೂಲದ ಮೇಲೆ ಅವಲಂಬಿತವಾಗಿರುವ ಅರ್ಥವ್ಯವಸ್ಥೆಯನ್ನು ಬಲಪಡಿಸಿಕೊಂಡು ತಮ್ಮ ಜೀವನ ಸುದೃಢಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರದ ಮೇಲೆ ಸರಕಾರ ಹಾಕುವ ಬಂಡವಾಳದಿಂದ ಸ್ಥಳೀಯರ ಬದುಕು ಹಸನಾಗುವಂತಿರಬೇಕು. ಕುಡಿಯುವ ಜೀವಜಲಕ್ಕೆ ಜನರು ಅವಲಂಬಿಸಿರುವ ನದಿಗಳು ಮಲೀನವಾಗ ಕೂಡದು. ಅಭಿವೃದ್ಧಿ ಯೋಜನೆಗಳ ಗತಿ ಬದಲಾಗಬೇಕು. ಏಕೆಂದರೆ, ಜನರ ವಾಸಸ್ಥಾನವನ್ನೇ ಅವು ನುಂಗುತ್ತ ಬದುಕು ಕಸಿಯುತ್ತಿವೆ. ಎಲ್ಲರಿಗೂ ಬಳಕೆಗೆ ಸಿಗುವ ರೀತಿಯಲ್ಲಿ ಜಲ ಸಂಪನ್ಮೂಲದ ವಿಕೇಂದ್ರೀಕರಣವಾಗಬೇಕು.

ಮೇಲ್ನೋಟಕ್ಕೆ ಮಧ್ಯಮ ವರ್ಗ ತಲೆದೂಗುವ ರೀತಿಯಲ್ಲಿ ಒಂದಿಷ್ಟು ಪರಿಸರದ ವಿಷಯಗಳನ್ನು ಪ್ರಸ್ತಾಪಿಸುವುದು ದೊಡ್ಡ ವಿಷಯವಲ್ಲ. ಆದರೆ ಹಾಗೆ ಕೈಗೆತ್ತಿಕೊಂಡ ವಿಷಯದ ಆಳವೆಷ್ಟು? ಸ್ಥಳೀಯರಿಗೆ ಅಲ್ಲಿನ ಸಂಪನ್ಮೂಲಗಳ ಮೇಲೆ ಹಕ್ಕು ಸಿಗುವಂತೆ ವ್ಯವಸ್ಥೆ ಬಲವಾಗಬೇಕಿದೆ. ‘ಕಾಡು’ ಎಂಬುದು ಶುಷ್ಕ ಪದವಲ್ಲ. ಕೇವಲ ಮರ ಸಮೂಹವೂ ಅಲ್ಲ, ಅದರ ವೈವಿಧ್ಯ ವನ್ನು ಅಲ್ಲಿನ ಬದಲಾವಣೆಗಳನ್ನು ನೋಡಿ ಆಶ್ಚರ್ಯಪಡುತ್ತಲೇ ಇದ್ದುಬಿಡಬಹುದು. ಆದರೆ ಇಂದಿನ ಪರಿಸ್ಥಿತಿ ಏನಾಗಿದೆ ಎಂದರೆ ಮಿಲಿಯಾಂತರ ವರ್ಷಗಳಿಂದ ಒಂದು ಕ್ರಮದಲ್ಲಿ ವಿಕಾಸವಾಗುತ್ತ ಬಂದಿರುವ ಕಾಡು ಮತ್ತು ಕಾಡು ಪ್ರಾಣಿಗಳನ್ನು
ಇಂದು ಮಾನವ ತನ್ನ ಮೂರ್ಖತನ ಹಾಗೂ ಸ್ವಾರ್ಥದಿಂದ ನಾಶಪಡಿಸಿದರೆ ಮುಂದೇನಾಗುವುದೆನ್ನುವುದನ್ನು ಹೇಳಲೂ ವಿಜ್ಞಾನ ಅಸಮರ್ಥವಾಗಿದೆ!

ಹೀಗೆ ಹೇಳಿದರೆ ಅದು ಕೇವಲ ಪದಾಡಂಬರವಾಗಿ ಬಿಡಬಹುದು. ವಾಸ್ತವ ಏನೆಂದರೆ ಭೂಮಿ ಹುಟ್ಟಿದಾಗಿ ನಿಂದ ೧೯೧೭ರವರೆಗೆ ಯಾವ ಪ್ರಮಾಣದ ಕಾಡು ನಾಶವಾಗಿತ್ತೋ ಅದರ ಎರಡು ಪಟ್ಟು ಕಾಡು ನಂತರದ ೫೦ ವರ್ಷಗಳಲ್ಲಿ ನಾಶವಾಗಿದೆ ಎನ್ನುತ್ತದೆ ಅಂಕಿಅಂಶ. ಇದೇ ಪ್ರಮಾಣದಲ್ಲಿ ಅಥವಾ ಅದಕ್ಕೂ ವೇಗವಾಗಿ ಕಾಡು ನಂತರದ ದಶಕದಲ್ಲಿ ನಾಶವಾಗಿದೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ. ಒಂದೇ ಒಂದು ಮರವನ್ನು ಕಡಿಯುವುದರಿಂದ ನಾವು ೩೭ ಲಕ್ಷ ರೂಪಾಯಿ ಮೌಲ್ಯದ ಪ್ರಯೋಜನವನ್ನು
ಕಳೆದುಕೊಳ್ಳುತ್ತೇವೆ. ಅಂಥದ್ದರಲ್ಲಿ ಈ ಪ್ರಮಾಣದ ಕಾಡು ನಾಶವಾಗಿರುವುದರಿಂದ ಎಷ್ಟು ನಷ್ಟ ರಾಜ್ಯಕ್ಕಾಗಿದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.

ಇದು ಅರಣ್ಯದ ವಿಚಾರವಾದರೆ ಇನ್ನು ಕೃಷಿಯದ್ದು ಇದಕ್ಕಿಂತ ಹೀನಾಯ ಸ್ಥಿತಿ. ಏಕೆಂದರೆ ಅರಣ್ಯ ಇಲ್ಲದೇ ಕೃಷಿ ಇಲ್ಲ. ಪ್ರತಿ ಸರಕಾರಗಳೂ ಕೃಷಿ, ಕೃಷಿಕನ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಲೇ, ಭರವಸೆಗಳ ಸರಮಾಲೆಯನ್ನು ಹರಿಯಬಿಡುತ್ತಲೇ ಕೈಗಾರಿಕೆಗಳನ್ನು ಪೋಷಿಸುತ್ತಿವೆ. ಅದೇ ಅಭಿವೃದ್ಧಿಯ ಮಾನದಂಡವೆಂಬಂತೆ ಬಿಂಬಿಸುತ್ತಿವೆ. ಇದಕ್ಕೆ ಸಾಕಷ್ಟು ಉಜ್ವಲಂತ ಉದಾಹರಣೆಗಳು ನಮ್ಮ ಮುಂದಿವೆ. ಹಸಿರು ಕ್ರಾಂತಿಯ ಹೆಸರಿನಲ್ಲಿ ನಾವು ಮಾಡಿದ್ದು ಇದನ್ನೇ ಅಲ್ಲವೇ. ಆಹಾರ ಉತ್ಪಾದನೆಯನ್ನು ದ್ವಿಗುಣ ಗೊಳಿಸುವ ಭರದಲ್ಲಿ ರಾಸಾಯನಿಕ ಕಂಪನಿಗಳಿಗೆ ಯಥೇಚ್ಛ ಮಣೆ ಹಾಕಿ. ನಮ್ಮ ನೆಲವನ್ನು ಬಂಜರುಗೊಳಿಸಿದ್ದು ಇತಿಹಾಸ.

ಶೇ ೮೦ರವರೆಗೆ ದೊರಕುವ ಸಬ್ಸಿಡಿಯಿಂದ ನಿಜವಾಗಿ ಅಭಿವೃದ್ಧಿ ಹೊಂದಿದ್ದು ಕಾರ್ಖಾನೆಗಳೇ ವಿನಾ ರೈತರಲ್ಲ. ಅಥವಾ ಅವರ ನೆಲವಲ್ಲ. ರಾಸಾಯನಿಕ ಗೊಬ್ಬರ ತಯಾರಿಕಾ ಕಾರ್ಖಾನೆಗಳಿಗೆ ಸಹಾಯಧನ ಕೊಡುವ ಸರಕಾರಗಳು ಹೇಳಿಕೊಳ್ಳುವುದು ಮಾತ್ರ ರೈತರಿಗಾಗಿ ಈ ಸಹಾಯ ಕೊಡುತ್ತಿರುವುದಾಗಿ. ಅಸಲೀ ಸಂಗತಿಯೆಂದರೆ ಇದರಿಂದ ರಾಸಾಯನಿಕ ಗೊಬ್ಬರವನ್ನು ಬಳಸುವ ಶ್ರೀಮಂತ ರೈತರಿಗೆ ಮಾತ್ರ ಸಹಾಯವಾಗುತ್ತಿದೆ.

ಅದು ಬಿಟ್ಟರೆ ಕಂಪನಿಗಳು ಬೆಳೆಯುತ್ತಿದೆ ಎಂಬುದಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರ್ಖಾನೆಗಳ ಸಂಖ್ಯೆಯೇ ಸಾಕ್ಷಿ.
ಒಂದೊಮ್ಮೆ ಸಣ್ಣ ರೈತರು ಅದರಿಂದ ಪ್ರಯೋಜನವನ್ನು ಪಡೆದುಕೊಂಡಿದ್ದರೂ ಅದು ತಾತ್ಕಾಲಿಕೆ. ದೀರ್ಘಾವಧಿಯ
ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಅವರ ಅಲ್ಪಸ್ವಲ್ಪ ಭೂಮಿಯನ್ನೂ ಬಂಜರಾಗಿಸಿ, ಇಡೀ ಬದುಕನ್ನೇ ಬರಡಾಗಿಸುತ್ತಿದೆ.

ಮೊನ್ನೆಮೊನ್ನೆ ದ್ರವರೂಪದ ನ್ಯಾನೋ ರಾಸಾಯನಿಕ ಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ನೀಡಿದ ರಸಗೊಬ್ಬರದ ಮೇಲಿನ ಸಬ್ಸಿಡಿಯ ಅಂಕಿ ಅಂಶ ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ನಮ್ಮ ಸರಕಾರ ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ರೂಪದಲ್ಲಿ ಒಂದೇ ವರ್ಷದಲ್ಲಿ ೭೧,೪೩೧ ಕೋಟಿ ವ್ಯಯಿಸಿದೆ. ದೇಶದ ರೈತರ ಸಂಖ್ಯೆ ೬೬ ಕೋಟಿ. ಇದನ್ನೇ ನೇರವಾಗಿ ಹಂಚಿದ್ದರೆ ಪ್ರತಿಯೊಬ್ಬರಿಗೆ ೧೦೮೨ ರು. ಸಿಗುತ್ತಿತ್ತು. ಕೃಷಿ ಇಲಾಖೆ ಕೇವಲ ಅಂಕಿ ಅಂಶಗಳ ದಾಖಲಾತಿಯಲ್ಲಿ ತೊಡಗಿದೆಯೇ ವಿನಾ ಅಧಿಕಾರಿಗಳಿಗಾಗಲೀ, ಸರಕಾರಕ್ಕಾಗಲೀ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಇಲ್ಲ.

ಅವರದೇನಿದ್ದರೂ ಸಬ್ಸಿಡಿ, ಸಾಲ ಮನ್ನ, ಕಡಿಮೆ ಬಡ್ಡಿ ದರದ ಸಾಲದಂಥ ಜನಪ್ರಿಯ ಯೋಜನೆಗಳೇ. ಇದು ನಾವಂದು ಕೊಂಡಂತೆ ರೈತರನ್ನು ನಿಜವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆಯೇ ಎಂಬುದಕ್ಕೆ ರಾಜಕೀಯ ಪಕ್ಷಗಳೇ ಉತ್ತರಿಸಬೇಕು. ಏಕೆಂದರೆ ಇಷ್ಟೆಲ್ಲಾ ಯೋಜನೆಗಳ ನಂತರವೂ ಮತ್ತೆ ಚುನಾವಣೆಯ ಪ್ರಣಾಳಿಕೆ ಕಳೆದ ಅರವತ್ತು ವರ್ಷಗಳಲ್ಲಿಯಂತೇ
‘ರೈತರ ಅಭಿವೃದ್ಧಿ’ ಎಂಬುದೇ ಅಗುತ್ತಿದೆ.

ಕೃಷಿಯಾಧಾರಿತ ಉದ್ದಿಮೆಗಳ ಬೆಳವಣಿಗೆಯಾಗಲೀ, ಸಾವಯವದ ಪ್ರೋತ್ಸಾಹವಾಗಲೀ, ರೈತರಿಗೆ ಸೂಕ್ತ ಕೃಷಿ ಮಾರುಕಟ್ಟೆ ಕಲಿಸುವುದಾಗಲೀ, ಆತನನ್ನು ಸಾಲ ಮುಕ್ತ ಗೊಳಿಸಿ ಸ್ವಾವಲಂಬಿಯನ್ನಾಗಿಸುವುದಾಗಲೀ… ನೈಜ ಅರ್ಥದಲ್ಲಿ ಅನುಷ್ಠಾನ ಗೊಳ್ಳುವುದೇ ಇಲ್ಲ. ಇವೆಲ್ಲ ರಾಜಕೀಯ ಪ್ರಣಾಳಿಕೆಗೆ ಭೂಷಣಪ್ರಾಯ ಪದಪುಂಜಗಳಾಗಿ ಯಷ್ಟೇ ಉಳಿಯುತ್ತಿವೆ. ಗುಣಮಟ್ಟದ ವಿದ್ಯುತ್ ನೀಡಿ, ರೈತರ ಕೃಷಿಗೆ ಸೂಕ್ತ ನೀರಾವರಿಗೆ ನೆರವಾಗುವ ಬದಲಿ ನಮ್ಮ ಸರಕಾರಗಳ ಗಮನ ಉಚಿತ ವಿದ್ಯುತ್‌ನ ಘೋಷಣೆಯತ್ತಲೇ. ಸೂಕ್ತ ನೀರಾವರಿ, ಮಳೆನೀರಿನ ಸದ್ಬಳಕೆಯನ್ನು ಬಿಟ್ಟು ನಾವು ಯೋಜಿಸುವುದು ಅರಣ್ಯ, ಪರಿಸರಗಳನ್ನು
ನುಂಗಿ ಹಾಕುವ ಬೃಹತ್ ನೀರಾವರಿ ಯೋಜನೆಗಳನ್ನೇ.

ವೈವಿಧ್ಯದ ಆಗರವಾದ ಸೊಪ್ಪಿನ ಬೆಟ್ಟವನ್ನು ಸಂರಕ್ಷಿಸುವ ಬದಲಿ ನಾವು ಬೆಳೆಸಲು ಮುಂದಾಗುವುದು ಶಾಲಾ ಮಕ್ಕಳ
ಯೂನಿಫಾರ್ಮ ಅನ್ನೂ ನಾಚಿಸುವ ಏಕಜಾತಿಯ ಸಸ್ಯಗಳ ನೆಡುತೋಪುಗಳನ್ನೇ. ನೆಲಜಲ ಸಂರಕ್ಷಣೆಯಲ್ಲಿ ರೈತರನ್ನು
ತೊಡಗಿಸಿಕೊಂಡು ಅವರಿಗೇ ಅದರ ಲಾಭಾಂಶ ದೊರೆಯುವಂತೆ ಮಾಡುವ ಬದಲು ವಿಶ್ವಬ್ಯಾಂಕ್ ನೆರವಿನಲ್ಲಿ ನಮ್ಮ
ಸರಕಾರಗಳು ಪೋಷಿಸುತ್ತಿರುವುದು ಎನ್‌ಜಿಒಗಳನ್ನು. ನಮ್ಮ ಆಸಕ್ತಿ ಹೊಸಹೊಸ ಇಲಾಖೆಗಳನ್ನು ಸೃಷ್ಟಿಸುವ ಮೂಲಕ ರಾಜಕೀಯ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದರಲ್ಲೇ ವಿನಃ ಪರಸ್ಪರ ಪೂರಕ ಇಲಾಖೆಗಳನ್ನು ಬೆಸೆದು ಶೀಘ್ರ ಕಾರ್ಯಾನು ಷ್ಠಾನದತ್ತ ಅಲ್ಲವೇ ಇಲ್ಲ.

ಸರಕಾರಗಳು ಬದಲಾಗುತ್ತವೆ, ಮುಖ್ಯಮಂತ್ರಿಗಳು ಬದಲಾಗುತ್ತಾರೆ. ಪರಿಸ್ಥಿತಿ ಮಾತ್ರ ಹಾಗೆಯೇ ಮುಂದುವರಿಯುತ್ತದೆ. ಇದೇ ಪ್ರಜಾಪ್ರಭುತ್ವಕ್ಕಿರುವ ಅರ್ಥವೇ?