Thursday, 28th November 2024

ಸಾರ್ಥಕ ಬದುಕಿಗೆ ಭಾರತೀಯ ಚಿಂತನೆಗಳು

ಅವಲೋಕನ

ಡಾ.ಎಂ.ರವೀಂದ್ರ

ಜೀವನದ ಶಾಶ್ವತ ಸುಖದ ಹಾದಿ ತೋರುವಲ್ಲಿ ಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ನೈತಿಕತೆಗೂ ಜ್ಞಾನವೇ ತಳಹದಿ. ಜ್ಞಾನವಿಲ್ಲದೆ ಸದ್ಗುಣ ಲಭಿಸಲಾರದು. ಜ್ಞಾನ ಸಂಪಾದನೆ ಮನುಷ್ಯ ಜೀವನದ ಸೂತ್ರವಾಗಬೇಕು. ಮನುಷ್ಯ ಜೀವನದ ಸಾರ್ಥಕತೆಯ ಹೆಗ್ಗುರುತು ಜ್ಞಾನವೇ. ಈ ಅಂಶಗಳ
ಹಿನ್ನೆಲೆಯಲ್ಲಿ ಭಾರತೀಯ ತತ್ವಶಾಸ್ತ್ರದ ಅಧ್ಯಯನ ಮಾಡಿದರೆ ಸಾಕಷ್ಟು ಕುತೂಹಲಕಾರಿಯಾದ ಅಂಶಗಳು ಕಾಣಸಿಗುತ್ತವೆ.

ಮಾನವನ ಬದುಕಿನ ಅರ್ಥವೇನು ಮತ್ತು ಪರಮೋದ್ದೇಶವೇನು ಎಂಬ ಪ್ರಶ್ನೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಉಪನಿಷತ್ತುಗಳು ಆಳವಾದ ಚಿಂತನೆ ಮತ್ತು ಅರ್ಥಾನ್ವೇಷಣೆಗೆ ಆಯ್ದುಕೊಂಡವು ಎಂಬುದು ಗಮನಾರ್ಹ. ವೇದಕಾಲದಲ್ಲಿ (ಕ್ರಿ.ಪೂ. ೧೫೦೦ ರಿಂದ ಕ್ರಿ.ಪೂ.೯೦೦) ಪ್ರಾರಂಭವಾದ ಮನುಷ್ಯ, ಪ್ರಕೃತಿ ಮತ್ತು ಪರಮಾತ್ಮನ ಸಂಬಂಧಗಳ ಅನ್ವೇಷಣೆಯು ಉಪನಿಷತ್ತಿನ ಗುರು-ಶಿಷ್ಯರ ನಡುವಿನ ಪ್ರಶ್ನೋತ್ತರ ರೂಪದ
ಸಂವಾದಗಳ ಮೂಲಕ ಮುಂದುವರೆದು, ರಾಮಾಯಣ, ಮಹಾಭಾರತ, ಭಗವದ್ಗೀತೆ ಮೊದಲಾದವುಗಳಲ್ಲಿ ಅರ್ಥ ಪೂರ್ಣವಾಗಿ ವಿವರಿಸಲ್ಪಟ್ಟಿವೆ.

ವೇದಗಳು ಅಪೌರುಷೇಯಗಳೆಂದು ತಿಳಿದು ಅವುಗಳ ಪ್ರಮಾಣವನ್ನು ಒಪ್ಪಿದ ಹಿಂದೂ ಧರ್ಮಪ್ರಚಾರಕರಾದ ಶಂಕರ, ರಾಮಾನುಜ, ಮಧ್ವರೇ ಮೊದಲಾದ ಆಚಾರ್ಯ ಪುರುಷರು, ವೇದಪ್ರಾಮಾಣ್ಯ ಒಪ್ಪದ ಬೌದ್ಧರು, ಜೈನರನ್ನು ಒಳಗೊಂಡಂತೆ ಹಲವರು, ಭಾರತೀಯ ಪರಂಪರೆ, ಸಂಸ್ಕೃತಿ
ಮತ್ತು ಜೀವನಪದ್ಧತಿಯ ಹಿನ್ನೆಲೆಯಲ್ಲಿ ಮಾನವ ಬದುಕಿನ ಅರ್ಥಾನ್ವೇಷಣೆಯನ್ನಷ್ಟೇ ಅಲ್ಲದೆ, ಮಾನವ ಬದುಕಿನ ದುಃಖ ನಿವಾರಣೆಯ ಮಾರ್ಗಗಳು, ಶಾಶ್ವತ ಸುಖದ ಮಾರ್ಗಗಳ ಬಗ್ಗೆಯೂ ಚಿಂತನೆಗಳನ್ನು ನಡೆಸಿದರು.

ಭಾರತೀಯ ತತ್ವಜ್ಞಾನ ಪರಂಪರೆಯಲ್ಲಿ ದೇವರು, ಪುನರ್ಜನ್ಮ, ಸ್ವರ್ಗ, ನರಕ, ಮೋಕ್ಷ ಇತ್ಯಾದಿಗಳನ್ನು ಒಪ್ಪದೆ, ಇವು ಮೂಢನಂಬಿಕೆಗಳೆಂದೂ, ಇವುಗಳಿಗೆ ಬೆಲೆಕೊಡದೆ ತಿಂದು-ಕುಡಿದು, ಖುಷಿಯ ಜೀವನ ನಡೆಸುವ ಉಪದೇಶ ನೀಡಿದ ಚಾರ್ವಾಕ ವಾದವೂ ಇದೆ. ಆದರೆ ಅನೈತಿಕ ಜೀವನ
ನಡೆಸಲು ಪ್ರಚೋದನೆ ನೀಡುವುದು ಈ ವಾದದ ಎದ್ದುಕಾಣುವ ದೌರ್ಬಲ್ಯ.

ಧರ್ಮ ಮತ್ತು ಸಾತ್ವಿಕ ಜೀವನದ ಪಾತ್ರ

ಭಾರತೀಯ ತತ್ವಜ್ಞಾನ ಪರಂಪರೆಯಲ್ಲಿ ಜೀವನದ ಪರಮೋದ್ದೇಶವೆಂದರೆ ಮೋಕ್ಷ ಸಾಧನೆ, ಅಂದರೆ, ಹುಟ್ಟು-ಸಾವಿನ ಸಂಸಾರ ಚಕ್ರದಿಂದ ಬಿಡುಗಡೆ ಹೊಂದುವುದೇ ಆಗಿದೆ. ಈ ಸಾಧನೆಗಾದರೋ ಆತ್ಮಜ್ಞಾನ ಗಳಿಸಬೇಕಾಗುತ್ತದೆ. ಇದರ ಮೊದಲ ಹೆಜ್ಜೆಯೇ ಧರ್ಮಸಮ್ಮತ ಜೀವನ ನಡೆಸುವುದು. ಸಾಧಾರಣ ಧರ್ಮದಲ್ಲಿ ಕ್ಷಮೆ, ದಮೆ, ದಯೆ, ಆಸ್ತೇಯ, ನಿರ್ಮಲತೆ, ಇಂದ್ರಿಯಗಳ ಮೇಲಿನ ಹತೋಟಿ, ಸತ್ಯಶೀಲತೆ, ಅಹಿಂಸೆ, ಶಾಂತಿಯಿಂದ ಇರುವುದು ಇನ್ನೂ ಮೊದಲಾದವು ಹೇಳಲ್ಪಟ್ಟಿವೆ. ಸತ್ಕರ್ಮಗಳು ಮತ್ತು ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡುವುದರ ನಿಜಾರ್ಥ ಹಾಗೂ ವಿಧಾನಗಳು, ಆತ್ಮಜ್ಞಾನ ಗಳಿಸುವ ವಿಧಾನಗಳನ್ನು ತಿಳಿಸಲು ಭಗವದ್ಗೀತೆಯೂ ಸೇರಿದಂತೆ ಹಲವು ಧರ್ಮಗ್ರಂಥ ಗಳಿವೆ.

ಮೋಕ್ಷಸಾಧನೆಯ ಗುರಿ ಸಾಧಿಸಲು ಕೇವಲ ಸತ್ಕರ್ಮಗಳನ್ನು ಮಾಡಿದರೆ ಸಾಲದು; ನಿಸ್ವಾರ್ಥ ದೃಷ್ಟಿಯಿಂದ, ‘ಸರ್ವೇ ಜನಾಃ ಸುಖಿನೋಭವಂತು’ ಎಂಬ ಧ್ಯೇಯದೊಂದಿಗೆ ಸಮಾಜಸೇವೆ ಮಾಡುವುದೂ ಬೋಧಿಸಲ್ಪಟ್ಟಿದೆ. ಇದು ಜೀವನದ ಪರಮೋದ್ದೇಶ ಸಾಧನೆಗೆ ಆಸ್ತಿಕವಾದಿಗಳು ಬೋಧಿಸುವ ಮಾರ್ಗದ ಸಂಕ್ಷಿಪ್ತ ನೋಟ. ಉತ್ತಮ ಜೀವನಮೌಲ್ಯಗಳ ಬಗ್ಗೆ ಭಾರತೀಯ ತತ್ವಜ್ಞಾನ ಬೋಧಿಸುವ ಹಲವು ವಿಚಾರಗಳಿಂದ ಸ್ಪೂರ್ತಿ ಪಡೆದು ತಮ್ಮ
ಜೀವನದಲ್ಲಿ ಅಳವಡಿಸಿಕೊಂಡ ಹಲವಾರು ಜಗತ್‌ಪ್ರಸಿದ್ಧ ಭಾರತೀಯ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧಿ, ವಿವೇಕಾನಂದ, ಎಸ್.ರಾಧಾಕೃಷ್ಣನ್, ರವೀಂದ್ರ ನಾಥ ಟ್ಯಾಗೋರ್, ಅರಬಿಂದೋ ಮುಖ್ಯರು. ತಮ್ಮ ಬದುಕು ಮತ್ತು ಬೋಧನೆಗಳಿಂದ ಇವರು ಸಾರಿದ ಭಾರತೀಯ ಸಂಸ್ಕೃತಿಯ ಉತ್ತಮ ಮೌಲ್ಯಗಳು ಹಾಗೂ ಸಾಧನೆಗಳು ಹೀಗಿವೆ:

ಸತ್ಯ, ಅಹಿಂಸೆ ಮತ್ತು ಸರ್ವೋದಯ ತತ್ವಗಳು

‘ನನ್ನ ಬದುಕೇ ನನ್ನ ಸಂದೇಶ’ ಎಂದು ಸಾರಿದವರು, ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ ಧಿರೋದಾತ್ತ ನಾಯಕರು ಮಹಾತ್ಮ ಗಾಂಧೀಜಿ. ಭಗವದ್ಗೀತೆ ಅವರಿಗೆ ಹೆತ್ತತಾಯಿಗಿಂತ ಮಿಗಿಲಾದುದಾಗಿತ್ತು.

ಅವರ ಜೀವನದ ಅತ್ಯಂತ ಕಠಿಣ ಸಂದರ್ಭಗಳಲ್ಲಿ, ದಿಕ್ಕುತೋಚದ ಪರಿಸ್ಥಿತಿಗಳಲ್ಲಿ ಅವರ ಕೈಹಿಡಿದು ನಡೆಸಿ ಶಕ್ತಿಕೊಟ್ಟಿದ್ದು ಭಗವದ್ಗೀತೆ. ತುಳಸಿ ರಾಮಾಯಣವೂ ಅವರ ಅಚ್ಚುಮೆಚ್ಚಿನ ಗ್ರಂಥವೇ. ನಿರಂತರ ಆತ್ಮಶೋಧನೆ, ಸತ್ಯಾನ್ವೇಷಣೆ, ಅಹಿಂಸಾ ಮಾರ್ಗದ ಮೂಲಕ ಹರಿಜನೋದ್ಧಾರ, ಸಮಾಜೋನ್ನತಿಯ ಚಿಂತನೆ ಹಾಗೂ ಭಾರತ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿ, ಸರಳ ಜೀವನ ನಡೆಸುತ್ತಾ, ಭಗವದ್ಗೀತೆಯ ಬೋಧನೆಗಳ ಅರ್ಥಾನುಸಂಧಾನ ನಡೆಸುತ್ತಾ, ಭಾರತೀಯರ ಬದುಕಿನಲ್ಲಿ ಅರ್ಥ ತುಂಬಿ ‘ರಾಷ್ಟ್ರಪಿತ’ ಎಂದು ಗೌರವಿಸಲ್ಪಟ್ಟವರು ಗಾಂಧೀಜಿ.

ಭಾರತೀಯ ತತ್ವಜ್ಞಾನ ಸಿದ್ಧಾಂತವನ್ನು ತಮ್ಮ ಬದುಕಿನ ಅರ್ಥಪೂರ್ಣತೆಗಾಗಿ ಅಳವಡಿಸಿಕೊಂಡವರು ಅವರು ಎಂಬುದು ನಿರ್ವಿವಾದ. ಗಮನಿಸ ಬೇಕಾದ ಅಂಶವೆಂದರೆ, ಹಿಂದೂ ಧರ್ಮದಲ್ಲಿ ಹರಿಜನೋದ್ಧಾರ ಹಾಗೂ ಇನ್ನಿತರ ಸುಧಾರಣೆಗಳು ಆಗಬೇಕಾದರೆ ಮಾಡಬೇಕಾದ ಕೆಲಸಗಳ ಬಗ್ಗೆ ಗಾಂಧಿಯವರಲ್ಲಿ ಸಂಪ್ರದಾಯ ಶರಣತೆ ಇರಲಿಲ್ಲ ಹಾಗೂ ಪರಧರ್ಮ ಸಹಿಷ್ಣುತೆ ಕೂಡ ಅವರು ನಂಬಿದ ತತ್ವಸಿದ್ಧಾಂತದ ಒಂದು ಭಾಗವಾಗಿತ್ತು.

ಜ್ಞಾನದಿಂದ ಮೋಕ್ಷ

ರಾಷ್ಟ್ರ ಕಂಡ ಶ್ರೇಷ್ಠ ದಾರ್ಶನಿಕ ಹಾಗೂ ಶಿಕ್ಷಕರು ಎಸ್. ರಾಧಾಕೃಷ್ಣನ್. ಭಾರತದ ಪ್ರಪ್ರಥಮ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿ ಗಳೆನಿಸಿಕೊಂಡ ಇವರು, ಸ್ವತಃ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಮಹಾಜ್ಞಾನಿ. ಶಂಕರರ ಅದ್ವೈತ ವೇದಾಂತವು ಇವರ ಆಯ್ಕೆಯ ತತ್ವಜ್ಞಾನ ಸಿದ್ಧಾಂತವಾಗಿತ್ತು. ಸ್ವತಃ ಅನುಭವಿಸಿದ ಜೀವನ ಮೌಲ್ಯಗಳ ಜತೆಗೆ ಭಗವದ್ಗೀತೆ, ಉಪನಿಷತ್ತುಗಳು ಬೋಧಿಸುವ ಮೌಲ್ಯಾಧಾರಿತ ಧಾರ್ಮಿಕ, ಸಾಮಾಜಿಕ, ಮಾನಸಿಕ ಮತ್ತು ವೈಜ್ಞಾನಿಕ ತತ್ವಗಳನ್ನು ಜನರಿಗೆ ಬೋಧಿಸು ವುದು ಮುಖ್ಯವೆಂದು ಸಾರಿದ ವಿಶ್ವವಿಖ್ಯಾತ ತತ್ವಜ್ಞಾನಿ ಇವರು.

ಆತ್ಮ ಸಾಕ್ಷಾತ್ಕಾರಕ್ಕಾಗಿ ಯೋಗಮಾರ್ಗ

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ೧೯೧೦ರವರೆಗೆ ಸಕ್ರಿಯರಾಗಿ ಭಾಗವಹಿಸಿದರೂ, ತರುವಾಯದಲ್ಲಿ ತಮಗುಂಟಾದ ಅಲೌಕಿಕ ಅನುಭವಗಳ ಕಾರಣದಿಂದ ರಾಜಕೀಯ ಚಟುವಟಿಕೆಗಳಿಂದ ದೂರವುಳಿದು ಪಾಂಡಿಚೆರಿಗೆ ತೆರಳಿ, ಅಂತರಂಗದ ಶೋಧನೆಯ ಯೋಗಮಾರ್ಗದಲ್ಲಿ ಸಂಪೂರ್ಣ ತೊಡಗಿಸಿಕೊಂಡು ಜಗದ್ವಿಖ್ಯಾತರಾದವರು ಅರವಿಂದ ಘೋಷ್. ಭಾರತೀಯ ತತ್ವಜ್ಞಾನದ ವಿಚಾರಗಳ ಬಗ್ಗೆ ಅಷ್ಟೇ ಅಲ್ಲದೆ, ಪ್ಲೆಟೋ, ಪ್ಲುಟೋನಿಸ್ ಮುಂತಾದ ಪಾಶ್ಚಾತ್ಯ ತತ್ವಜ್ಞಾನಿಗಳ ಸಿದ್ಧಾಂತಗಳನ್ನು ಆಳವಾಗಿ, ತುಲನಾತ್ಮಕವಾಗಿ ಅಧ್ಯಯನ ಮಾಡಿದವರು. ಆದರೆ ಅವರ ಆಯ್ಕೆಯ ತತ್ವಜ್ಞಾನ ಮಾತ್ರ ಭಾರತೀಯ ವೇದ-ವೇದಾಂತ ಚಿಂತನೆಗಳ ಮೂಲವನ್ನು ಹೊಂದಿತ್ತು.

‘ದಿ ಲೈಫ್ ಡಿವೈನ್’ ಮತ್ತು ‘ಸಾವಿತ್ರಿ’ ಅವರ ಮಹತ್ವದ ಕೃತಿಗಳು. ‘ದಿ ಲೈಫ್ ಡಿವೈನ್’ ಕೃತಿಯಲ್ಲಿ ಅರ್ಥಪೂರ್ಣ ಬದುಕಿಗೆ ಬೇಕಾದ ಹಲವಾರು ಹೊಸ ಸಾಧ್ಯತೆಗಳನ್ನು ಅವರು ತೆರೆದಿಡುತ್ತಾರೆ. ಋಗ್ವೇದ, ಉಪನಿಷತ್ತುಗಳು, ಭಗವದ್ಗೀತೆಗಳಿಂದ ಉದ್ಧರಿಸುತ್ತಾ, ತಮಗೆ ದೃಗ್ಗೋಚರಿಸಿದ ಸಾಧಾರಣ ಮಾನವನಿಂದ ದೈವಿಕ ಮಾನವನಾಗುವ ಯೋಗಪ್ರಕ್ರಿಯೆಗಳನ್ನು ಅವರು ಮನಮುಟ್ಟುವಂತೆ ವಿವರಿಸುತ್ತಾರೆ. ಹಾಗೆಯೇ ಅವುಗಳನ್ನು ಕರಗತ ಮಾಡಿಕೊಂಡು ಅರ್ಥಪೂರ್ಣವಾಗಿ ಬಾಳಿ ತೋರಿಸುತ್ತಾರೆ. ಮನುಷ್ಯನ ಜೀವನವೇ ಆಧ್ಯಾತ್ಮಿಕ ಸಾಕ್ಷಾತ್ಕಾರದತ್ತ ಒಂದು ಪಯಣ ಎಂದು ನಂಬಿದ್ದ ಅವರು, ಈ ಪಯಣದಲ್ಲಿ ವ್ಯಕ್ತಿ ತಾನೊಬ್ಬನೇ ನಡೆಯದೆ ಇಡೀ ಸಮುದಾಯವನ್ನೇ ಕರೆದೊಯ್ಯಬೇಕು ಎಂದು ಹಂಬಲಿಸಿದ್ದರು.

ವಿಶ್ವಶಾಂತಿಯ ಪ್ರತಿಪಾದನೆ ತಮ್ಮ ‘ಗೀತಾಂಜಲಿ’ ಮಹಾಕಾವ್ಯದ ಮೂಲಕ ೧೯೧೩ರಲ್ಲಿ ಭಾರತಕ್ಕೆ ಪ್ರಪ್ರಥಮವಾಗಿ ‘ನೊಬೆಲ್ ಪ್ರಶಸ್ತಿ’ ಯನ್ನು ತಂದುಕೊಟ್ಟು, ದೇಶ, ಕಾಲ, ಭಾಷೆ, ಧರ್ಮ,  ಸಂಸ್ಕೃತಿಗಳ ಎಲ್ಲೆಯನ್ನು ವಿಸ್ತರಿಸಿದವರು ವಿಶ್ವಕವಿ ರವೀಂದ್ರನಾಥ ಟ್ಯಾಗೋರರು. ಭಾರತದ ಭವ್ಯ
ಪರಂಪರೆಯ ಗುಣಗಾನವನ್ನು ರಾಷ್ಟ್ರಗೀತೆ ಹಾಗೂ ತಮ್ಮ ಸಮೃದ್ಧ ಸಾಹಿತ್ಯ ಕೃತಿಗಳ ಮೂಲಕ ಮಾಡುತ್ತಾ, ಕೋಟ್ಯಂತರ ಭಾರತೀಯರ ಹೃದಯದಲ್ಲಿ ಅಂದಿಗೂ ಇಂದಿಗೂ ದೇಶಪ್ರೇಮ ಮತ್ತು ರಾಷ್ಟ್ರಿಯ ಏಕತೆಯ ಭಾವದ ರೋಮಾಂಚನ ಉಂಟುಮಾಡುತ್ತಿರುವ ದಾರ್ಶನಿಕ ಇವರು.

ಅರ್ಥಪೂರ್ಣ, ಶಾಂತಿಯುತ, ಸಮಾಧಾನದ ಜೀವನ ನಡೆಸಲು ಬೇಕಾದ ಹಲವಾರು ಉತ್ಕೃಷ್ಟ ಅಂಶಗಳು ವಿಶ್ವದ ಎಲ್ಲ ಜನರಿಗೂ ಅನ್ವಯ ವಾಗುವಂತೆ ‘ಗೀತಾಂಜಲಿ’ ಮಹಾಕಾವ್ಯದಲ್ಲಿ ಕಾವ್ಯಾತ್ಮಕವಾಗಿ ಬೋಽಸಲ್ಪಟ್ಟಿವೆ. ಭಾರತೀಯ ವೇದ, ಉಪನಿಷತ್ತುಗಳು ಸೇರಿದಂತೆ ತತ್ವಜ್ಞಾನ ಪರಂಪರೆಯ ಸಾರ ಗೀತಾಂಜಲಿಯ ಅಂತಃ ಸತ್ವವಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಭಾರತೀಯ ವೇದ-ಉಪನಿಷತ್ತುಗಳು, ಪ್ರಕೃತಿ-
ಜೀವಾತ್ಮ-ಪರಮಾತ್ಮರ ಸಂಬಂಧಗಳು, ಜೀವ-ಜಗತ್ತಿನ ಸೃಷ್ಟಿ, ಹುಟ್ಟು-ಸಾವಿನ ರಹಸ್ಯಗಳನ್ನು ಒಳಗೊಂಡಂತೆ ಹಲವಾರು ಇಂದ್ರಿಯಾತೀತ ವಿಚಾರಗಳ ಬಗ್ಗೆ ಜಿಜ್ಞಾಸೆ ನಡೆಸುತ್ತವೆ. ಒಟ್ಟಿನಲ್ಲಿ ಭಾರತೀಯ ತತ್ವಜ್ಞಾನಗಳು ಬೋಧಿಸುವ ಮೋಕ್ಷಸಾಧನೆ ಈ ಎಲ್ಲ ಮಹತ್ಸಾಧಕರ ಪರಮೋದ್ದೇಶ ವಾಗಿತ್ತು ಎನ್ನಲಾಗದಿದ್ದರೂ, ಭಾರತೀಯ ತತ್ವಜ್ಞಾನ ಬೋಧಿಸುವ ಹಲವಾರು ಜೀವನಧರ್ಮಗಳು ಇವರೆಲ್ಲರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು ಎನ್ನಲಡ್ಡಿಯಿಲ್ಲ.

ಗಾಂಧೀಜಿಯವರ ‘ಸತ್ಯ ಮತ್ತು ಅಹಿಂಸಾಧರ್ಮ’, ಟ್ಯಾಗೋರರ ‘ಸತ್ಯ, ಸೌಂದರ್ಯ ಮತ್ತು ಮಾನವೀಯತೆಯ ಧರ್ಮ’, ಅರಬಿಂದೋ ಅವರ ‘ಅಂತಃಸಾಕ್ಷಿ ಧರ್ಮ’ ಇತ್ಯಾದಿಗಳು ಇದಕ್ಕೆ ಉದಾಹರಣೆ. ಇವರೆಲ್ಲರೂ ಇತರ ಧರ್ಮಗಳು ಹಾಗೂ ಪಾಶ್ಚಿಮಾತ್ಯ ತತ್ವಜ್ಞಾನಗಳ ಉತ್ತಮ ಅಂಶಗಳತ್ತ ತೆರೆದಮನದವರಾಗಿದ್ದರು ಎಂಬುದೂ ಉಲ್ಲೇಖನೀಯ.

(ಲೇಖಕರು ನಿವೃತ್ತ ವಿಜ್ಞಾನಿ, ಯು.ಆರ್.ರಾವ್
ಉಪಗ್ರಹ ಕೇಂದ್ರ, ಇಸ್ರೋ)