Wednesday, 13th November 2024

ಕಾಂಗ್ರೆಸ್ ಸಮಗ್ರ ದೃಷ್ಟಿಯ ಉತ್ತಮ ಆಡಳಿತ ನೀಡಲಿ

ಸ್ವಾಸ್ಥ್ಯ ಸಂಪದ

Yoganna55@gmail.com

ಸಿಂಗಲ್ ಇಂಜಿನ್ನಿನ ಕಾಂಗ್ರೆಸ್ ಸರ್ಕಾರ ಕೇಂದ್ರದೊಡನೆ ಸಂಘರ್ಷಕ್ಕಿಳಿಯದೆ ರಾಜಕೀಯ ಜಾಣ್ಮೆಯಿಂದ ವರ್ತಿಸಿ ರಾಜ್ಯಕ್ಕೆ ಬರಬೇಕಾದ ತನ್ನ ಪಾಲಿನ ಹಣವನ್ನು ಕಾಲಾನುಕಾಲಕ್ಕೆ ಪಡೆದು ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಎಲ್ಲ ಸಹಕಾರವನ್ನು ಪಡೆಯುವ ಮಧ್ಯಮ ಮಾರ್ಗದ ರಾಜಕೀಯ ನೀತಿಯನ್ನು ಅನುಸರಿಸಬೇಕಾಗಿದೆ.

ಕರ್ನಾಟಕ ವಿಧಾನಸಭೆಯ ಚುನಾವಣೆ ಮುಗಿದು ಫಲಿತಾಂಶಗಳು ಪ್ರಕಟವಾಗಿ ಕಾಂಗ್ರೆಸ್ ಅಭೂತಪೂರ್ವ ಬಹುಮತದೊಂದಿಗೆ ಜಯಗಳಿಸಿ ಸರ್ಕಾರ ರಚನೆ ಮಾಡುತ್ತಿರುವುದು ಸ್ವಾಗತಾರ್ಹವಾದರೂ, ಮುಂದಿನ ದಿನಗಳಲ್ಲಿ ಅವರು ನಡೆಸುವ ಆಡಳಿತ ವೈಖರಿಯಿಂದ ಜನಮನ ಗೆದ್ದು, ಜನರ ವಿಶ್ವಾಸವನ್ನು ಉಳಿಸಿಕೊಳ್ಳುವರೇ ಎಂಬ ಯಕ್ಷಪ್ರಶ್ನೆ ಮತದಾರ ರನ್ನು ಕಾಡತೊಡಗಿದೆ.

೧೮೮೯ ರಲ್ಲಿ ವೀರೇಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ಅಖಂಡ ಬಹುಮತ (೧೭೯) ಪಡೆದ ೩೪ ವರ್ಷಗಳ ನಂತರ ಕಾಂಗ್ರೆಸ್ ಈ ಚುನಾವಣೆಯಲ್ಲಿ (೨೦೨೩)ಅತ್ಯಂತ ಹೆಚ್ಚು ಸ್ಥಾನ (೧೩೬) ಗಳಿಸಿ ಅಧಿಕಾರ ಹಿಡಿದಿರುವುದಕ್ಕೆ ಹಲವಾರು ಕಾರಣಗಳಿವೆ. ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ತನ್ನ ಚುನಾವಣಾ ಪ್ರಣಾಳಿಕೆಗಳನ್ನು ಮುಂದಿಟ್ಟು ಮತ ಕೇಳಿದರೂ ಅವುಗಳನ್ನೇ ಮಾತ್ರ ಪರಿಗಣಿಸಿ ಮತದಾರ ಮನ್ನಣೆ ನೀಡುತ್ತಾನೆ ಎಂಬುದು ಪೂರ್ಣ ಸತ್ಯವಲ್ಲ. ಪ್ರಣಾಳಿಕೆಗಳಲ್ಲಿನ ಆಶ್ವಾಸನೆಗಳನ್ನು ಮೀರಿದ ಹಲವಾರು ಅಂಶಗಳೂ ಸಹ ಮತದಾರನ ನಿರ್ಣಯವನ್ನು ನಿರ್ಧರಿಸುತ್ತವೆ.

ಅಧಿಕಾರಸ್ಥ ಪಕ್ಷದ ಮೇಲಿನ ವಿರೋಧಿ ಭಾವನೆ, ಆಯಾಯ ಕ್ಷೇತ್ರದಲ್ಲಿನ ಅಭ್ಯರ್ಥಿಯ ಜಾತಿಬಲ, ಹಣಬಲ, ವಿಶ್ವಾಸಾರ್ಹತೆ, ಅಭ್ಯರ್ಥಿಯ ಸಚ್ಚಾರಿತ್ರ್ಯ ವ್ಯಕ್ತಿತ್ವ ಮತ್ತು ಅವನು ಪ್ರತಿನಿಧಿಸುವ ಪಕ್ಷದ ಪ್ರಭಾವ, ನೀತಿ, ವಿಶ್ವಾಸಾರ್ಹತೆ ಇವೆಲ್ಲವೂ ಹಾಲಿ ಚುನಾವಣೆಯಲ್ಲಿನ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುತ್ತವೆ. ಯಾವುದೇ ಪಕ್ಷದ ಅಭ್ಯರ್ಥಿಯೂ ಈ ಯಾವುದಾದರೂ ಒಂದೇ ಅಂಶದಿಂದ ಗೆಲ್ಲಲಾರ. ಇವೆಲ್ಲವುಗಳ ಒಟ್ಟಾರೆ ಸಮೀಕರಣದಿಂದಾದ ಪರಿಣಾಮದಿಂದ ಮಾತ್ರ ಅಭ್ಯರ್ಥಿ ಗೆಲ್ಲುತ್ತಾನೆ. ಕಾಂಗ್ರೆಸ್
ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಈ ಚುನಾವಣೆಯಲ್ಲಿ ಗೆಲ್ಲಲು ಈ ಯಶಸ್ವಿ ಸಮೀಕರಣವೇ ಪ್ರಮುಖ ಕಾರಣವೆಂದರೆ ಅತಿಶಯೋಕ್ತಿಯಲ್ಲ.

ಹಾಗೆ ನೋಡಿದರೆ ಮೂರೂ ಪಕ್ಷಗಳು ಒಂದಲ್ಲಾ ಒಂದು ರೀತಿಯ ಉಚಿತ ಭರವಸೆಗಳ ಮಹಾಪೂರವನ್ನೇ ಹರಿಸಿದ್ದವು. ಜೆಡಿಎಸ್ ಪ್ರಣಾಳಿಕೆ ಇನ್ನಿತರ ಎಲ್ಲ ಪಕ್ಷಗಳ ಪ್ರಣಾಳಿಕೆಗಳಿಗಿಂತಲೂ ಉಚಿತಗಳ ಜೊತೆಗೆ ಅಭಿವೃದ್ಧಿ, ನೀರಾವರಿ, ರೈತರ ಸಮಸ್ಯೆಗಳಿಗೆ
ಪರಿಹಾರ, ಗ್ರಾಮೀಣ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ ಇತ್ಯಾದಿ ಉತ್ತಮ ಭರವಸೆಗಳನ್ನೇ ನೀಡಿತ್ತೇ ಆದರೂ ಇನ್ನಿತರ ಹಲವಾರು ಅಂಶಗಳ ಕೊರತೆಯಿಂದಾಗಿ ಜನಮನ್ನಣೆ ಗಳಿಸಲಿಲ್ಲ. ಕಾಂಗ್ರೆಸ್ ಸಹ ತನ್ನ ಗ್ಯಾರಂಟಿ ಯೋಜನೆಗಳಿಂದ ಮಾತ್ರ ಗೆದ್ದಿದೆ
ಎನ್ನುವಂತಿಲ್ಲ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳು,ಅಭದ್ರ ಆಡಳಿತ, ದುರಾಡಳಿತ, ಬೆಲೆಯೇರಿಕೆ, ಸಚಿವರುಗಳು ಜನರಿಗೆ ವಿಧಾನಸೌಧದಲ್ಲಿ
ಸಿಗದಿರುವುದು, ಅನೈತಿಕವಾದ ಆಪರೇಷನ್ ಕಮಲಾಧಾರಿತ ರಾಜಕೀಯ, ಮುಕ್ತವಾದ ಜಾತಿ ಮತ್ತು ಧರ್ಮದ ರಾಜಕಾರಣ, ವರ್ಗಾವಣೆಯಲ್ಲಿ ಭ್ರ ಷ್ಟಾಚಾರ ಇತ್ಯಾದಿ ಜನವಿರೋಽ ಆಡಳಿತದಿಂದ ಭ್ರಮನಿರಶನಗೊಂಡು ರೊಚ್ಚಿಗೆದ್ದು, ಕಾಂಗ್ರೆಸ್ ಪಕ್ಷಕ್ಕೆ ಅಖಂಡ ಬಹುಮತ ನೀಡಿದ್ದಾರೆಯೇ ವಿನಃ ಬರೀ ಗ್ಯಾರಂಟಿ ಯೋಜನೆಗಳಿಂದಲ್ಲ ಎಂಬುದನ್ನು ಕಾಂಗ್ರೆಸ್ ಮನಗಂಡು ಈ ಯಾವುವೂ ಅವಘಡಗಳು ಕಾಂಗ್ರೆಸ್ ಸರ್ಕಾರದಲ್ಲಿ ಮರುಕಳಿಸದಂತೆ ಶುದ್ಧ ಆಡಳಿತ ನೀಡಿದಲ್ಲಿ ಮಾತ್ರ ಕಾಂಗ್ರೆಸ್‌ಗೆ ನೀಡಿದ ಬಹುಮತ ಸಾರ್ಥಕವಾಗುತ್ತದೆ.

ಇಲ್ಲದಿದ್ದಲ್ಲಿ ಬಿಜೆಪಿಗಾದ ಗತಿಯೇ ಕಾಂಗ್ರೆಸ್‌ಗೂ ಶತಸಿದ್ಧ. ಒಂದೊಂದು ರಾಜಕೀಯ ಪಕ್ಷಕ್ಕೆ ಒಂದೊಂದು ಜಾತಿ ಬೆಂಬಲ ಗುರುತಿಸಿಕೊಂಡಿದ್ದ ಕಾಲ ದೂರಾಗಿ ದೇವರಾಜ ಅರಸ್, ಎಸ್.ಎಂ. ಕೃಷ್ಣ ಮತ್ತು ವೀರೇಂದ್ರ ಪಾಟೀಲ್(೧೯೮೯) ಅವರ ನೇತೃತ್ವದ ಕಾಂಗ್ರೆಸ್ಸಿಗೆ ಎಲ್ಲ ಜಾತಿಗಳ ಬೆಂಬಲ ದೊರೆತಂತೆ ೩೪ ವರ್ಷಗಳ ನಂತರ ಪುನಃ ಕಾಂಗ್ರೆಸ್ಸಿಗೆ ಎಲ್ಲ ವರ್ಗದ ಜನರು ಬೆಂಬಲ ನೀಡಿದ ಪರಿಣಾಮವಾಗಿ ಅಖಂಡ ಬಹುಮತ ಕಾಂಗ್ರೆಸ್ಸಿಗೆ ಲಭಿಸಿದೆ ಎಂಬುದು ನಿರ್ವಿವಾದ.

ಕಾಂಗ್ರೆಸ್‌ನಿಂದ ದೂರವಾಗಿದ್ದ ಲಿಂಗಾಯತರು ಮತ್ತು ಒಕ್ಕಲಿಗರೂ ಸಹ ಇಂದು ಕಾಂಗ್ರೆಸ್ಸಿಗೆ ಬೆಂಬಲ ನೀಡಿ ಕಾಂಗ್ರೆಸ್ ಸಮಗ್ರ ದೃಷ್ಟಿಕೋನದಿಂದ ಎಲ್ಲ ವರ್ಗದವರ ಹಿತ ಕಾಯುತ್ತಾರೆಂಬ ಆಶಯವನ್ನು ವ್ಯಕ್ತಪಡಿಸಿರುತ್ತವೆ. ಇದುವರೆವಿಗೂ ಮೇಲ್ಜಾತಿ ಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಮಾತ್ರ ಕಾಂಗ್ರೆಸ್ಸಿದೆ, ಮೇಲ್ಜಾತಿಯವರು ಮತ್ತು ಹಿಂದೂಗಳ ವಿರುದ್ಧ ಕಾಂಗ್ರೆಸ್ಸಿದೆ ಎಂಬ ಅಭಿಪ್ರಾಯವನ್ನು ಅಳಿಸಿ ಹಾಕಿ ಎಲ್ಲ ವರ್ಗದವರ ಹಿತ ಕಾಪಾಡಿ ಪ್ರೀತಿ ಗಳಿಸಿ ಸರ್ವರ ಹಿತ ಬಯಸಿ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ವನ್ನಾಗಿಸುವ ಸುವರ್ಣಾವಕಾಶ ಕಾಂಗ್ರೆಸ್ಸಿಗೆ ಲಭಿಸಿದ್ದು, ಈ ದಿಕ್ಕಿನಲ್ಲಿ ಕಾಂಗ್ರೆಸ್ ದೃಢ ಸಂಕಲ್ಪ ಮಾಡುವುದು ಅತ್ಯವಶ್ಯಕ.

ಕಾಂಗ್ರೆಸ್ ಮುಸ್ಲಿಮರನ್ನು ತಪ್ಪು ಮಾಡಿದಾಗ್ಯೂ ತಿದ್ದುವ ಗೋಜಿಗೆ ಹೋಗದೆ ಅವರು ಮಾಡಿರುವುದೆಲ್ಲಾ ಸರಿ ಎಂದು ಈ ಹಿಂದೆ ಹಿಜಾಬ್ ಮತ್ತು ಉಗ್ರಗಾಮಿ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಓಟಿಗಾಗಿ ಬೆಂಬಲಿಸಿದರ ಪರಿಣಾಮ ವಾಗಿ ಕಾಂಗ್ರೆಸ್ ಹಿಂದೂಗಳ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವುದರಿಂದ ಹೊರಬರಬೇಕು.

ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು. ಮುಸ್ಲಿಮರಿಗೆ ಕರ್ನಾಟಕದಲ್ಲಿ ಕನ್ನಡ ಕಲಿಸಿ ಅವರಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ ಎಲ್ಲರಲ್ಲೂ ಒಂದಾಗುವ
ಮನೋ ಭಾವ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಬಿಜೆಪಿ ಸೋಲಿಗೆ ಭ್ರಷ್ಟಾಚಾರವೇ ಪ್ರಮುಖ ಕಾರಣವಾಗಿದ್ದು, ಸರ್ಕಾರವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಿ ಪಾರದರ್ಶಕ ಆಡಳಿತವನ್ನು ನೀಡುತ್ತೇವೆಂಬ ಭರವಸೆ ನೀಡಿ (ಪ್ರಣಾಳಿಕೆಯಲ್ಲಿ ನೀಡಿಲ್ಲದ ಕಾರಣ) ಶಾಸಕಾಂಗ ಮತ್ತು ಕಾರ್ಯಾಂಗದ ಆಡಳಿತದಲ್ಲಿ ಭ್ರಷ್ಟಾಚಾರ ತೊಲಗಿಸುವ ಆಡಳಿತವನ್ನು ಮತದಾರ ಕಾಂಗ್ರೆಸ್‌ನಿಂದ ನಿರೀಕ್ಷಿಸುತ್ತಿದ್ದಾನೆ.

ಭ್ರಷ್ಟಾಚಾರ ಪ್ರಾರಂಭವಾಗುವುದೇ ಅಧಿಕಾರಿಗಳ ವರ್ಗಾವಣೆ ಮತ್ತು ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಅವರವರಿಗೆ ಬೇಕಾದವರನ್ನು, ಅವರವರ ಜಾತಿಯವರನ್ನು ಅವರ ಕಚೇರಿಗಳಿಗೆ ನೇಮಿಸಿಕೊಳ್ಳುವುದರಿಂದ. ಇವರು ತಮ್ಮ ಕಚೇರಿಗಳಿಗೆ ಮತ್ತು ಅವರ ಬಳಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ನೇಮಿಸಿಕೊಳ್ಳುವಾಗ ಶುದ್ಧಹಸ್ತರನ್ನು ಮತ್ತು ದಕ್ಷರನ್ನು ನೇಮಿಸಿ ಕೊಳ್ಳಬೇಕು. ಶಾಸಕರಿಗೆ ಬೇಕಾದ ಅಧಿಕಾರಿಗಳನ್ನು ಅವರವರ ಕ್ಷೇತ್ರಗಳಿಗೆ ವರ್ಗಾವಣೆ ಮಾಡುವ ದುಷ್ಟ ಪದ್ಧತಿ ರಾಮಕೃಷ್ಣ ಹೆಗಡೆಯವರು ಕಾಲದಿಂದ ಪ್ರಾರಂಭವಾಗಿ ಅದು ಬಿಜೆಪಿ ಸರ್ಕಾರದಲ್ಲಿ ಹುದ್ದೆವಾರು ಹಣ ನಿಗದಿ ಮಾಡುವ ವರ್ಗಾವಣೆ
ಮಾಡುವ ಭ್ರಷ್ಟಾಚಾರಕ್ಕೆ ನಾಂದಿಯಾದುದೂ ಸಹ ಬಿಜೆಪಿ ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣ.

ವರ್ಗಾವಣೆಯ ಭ್ರಷ್ಟಾಚಾರದ ದಾಂಧಲೆಯಿಂದ ಬೇಸತ್ತ ಸರ್ಕಾರಿ ನೌಕರರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದೂ ಸಹ ಬಿಜೆಪಿ ಸೋಲಲು ಪ್ರಮುಖ ಕಾರಣ ಎಂಬುದನ್ನು ಕಾಂಗ್ರೆಸ್ ಅರಿತು ತಮ್ಮ ಅಧಿಕಾರಾವಧಿಯಲ್ಲಿ ವರ್ಗಾವಣೆಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಸರ್ಕಾರಗಳಿಗೆ ಕಳಂಕ ತರುವ ಸ್ವಜಾತಿ ನೌಕರರ ರಕ್ಷಣೆ ಮತ್ತು ಸ್ವಜಾತಿಯವರನ್ನು ಆಯಕಟ್ಟಿನ ಸ್ಥಾನ ಗಳಿಗೆ ನೇಮಿಸುವ ಪರಿಪಾಠದಿಂದ ಹೊರಬಂದು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಮಾತ್ರ ಸರ್ಕಾರದಲ್ಲಿ ಮನ್ನಣೆ ನೀಡಿ ಸರ್ಕಾರಿ ನೌಕರಿ ವರ್ಗದಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಸಾಮಾಜಿಕ ಕಳಕಳಿ ಬೆಳೆಯುವಂತಾಗಿಸಬೇಕು.

ಆಯಾಯ ಜಾತಿಯ ರಾಜಕೀಯ ನಾಯಕರುಗಳು ಆಯಾಯ ಜಾತಿಯ ಅಧಿಕಾರಿಗಳನ್ನು ಪೋಷಣೆ ಮಾಡಿದರೆ ಆಯಾಯ
ಜಾತಿಯ ಜನಸಾಮಾನ್ಯರು ಉದ್ಧಾರವಾಗುತ್ತಾರೆಂಬ ಭ್ರಮೆಯಿಂದ ಹೊರಬರಬೇಕು. ವರ್ಗಾವಣೆಗೆ ಹಣ ನೀಡಿದ ವೈದ್ಯ ರೋಗಿಯ ಶೋಷಣೆ ಮಾಡುತ್ತಾನೆ. ಪಿಡಬ್ಲ್ಯೂಡಿ ಅಧಿಕಾರಿಗಳು ಕಳಪೆ ಕಾಮಗಾರಿಗಳನ್ನು ಮಾಡುತ್ತಾರೆ. ತಹಶೀಲ್ದಾರ್ ಮತ್ತಿತರ ಕಂದಾಯ ಅಧಿಕಾರಿಗಳು ರೈತರನ್ನು ಶೋಷಣೆ ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳು, ಕಳ್ಳ ಕಾಕರು ಹಾಗೂ ಸಮಾಜ ವಿರೋಧಿ ಚಟುವಟಿಕೆ ನಡೆಸುವವರಿಂದ ಹಣ ವಸೂಲಿ ಮಾಡಿ ಅವರನ್ನು ಪೋಷಿಸುತ್ತಾರೆ.

ವಾಣಿಜ್ಯ ಇಲಾಖೆ ಅಧಿಕಾರಿಗಳು ಬೊಕ್ಕಸಕ್ಕೆ ಬರುವ ತೆರಿಗೆ ಹಣವನ್ನು ಖೋತ ಮಾಡುತ್ತಾರೆ. ಹೀಗೆ ವರ್ಗಾವಣೆಯಲ್ಲಿ
ನಡೆಯುವ ಭ್ರಷ್ಟಾಚಾರ ಇಡೀ ಆಡಳಿತ ವ್ಯವಸ್ಥೆಯನ್ನೇ ಕುಸಿದುಬೀಳುವಂತಾಗಿಸುತ್ತದೆ. ಲಂಚ ನೀಡಿ ಹುದ್ದೆಯನ್ನಲಂಕರಿಸಿದ ಅಧಿಕಾರಿ ಬಡ್ಡಿ ಸಮೇತ ಅದನ್ನು ದುಡಿಯಬೇಕಲ್ಲವೇ? ಭ್ರಷ್ಟಾಚಾರದಿಂದಾಗಿ ಸರ್ಕಾರದಲ್ಲಿ ಕಡತಗಳ ವಿಲೇವಾರಿ
ನಿಧಾನವಾಗಿ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರದಲ್ಲಿನ ಪ್ರತಿಹಂತದ ಕಡತಗಳ ವಿಲೇವಾರಿಗೆ ನಿಗದಿತ ಸಮಯವನ್ನು ನಿಗದಿಮಾಡಿ ಆ ಅವಧಿಯಲ್ಲಿ ಸಂಬಂಧಪಟ್ಟ ಕಡತಗಳು ವಿಲೇವಾರಿಯಾಗಬೇಕೆಂಬ ನಿಯಮವನ್ನು ಕಟಿಬದ್ಧವಾಗಿ ಜಾರಿಗೊಳಿಸಿ ಜಡ್ಡು ಹಿಡಿದಿರುವ ಆಡಳಿತ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಬೇಕಾಗಿದೆ.

ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡುವ ಒಟ್ಟಾರೆ ಹಣದಲ್ಲಿ ಶೇ. ೧೫ ರಷ್ಟು ಮಾತ್ರ ಅಂತಿಮವಾಗಿ ಯೋಜನೆಗೆ ಖರ್ಚಾಗುತ್ತದೆ. ಇನ್ನುಳಿದ ಶೇ. ೮೫ ರಷ್ಟು ಹಣ ಭ್ರಷ್ಟಾಚಾರದ ಪಾಲಾಗುತ್ತದೆ ಎಂದು ಕಾಂಗ್ರೆಸ್ಸಿನ ಮಾಜಿ ಪ್ರಧಾನಿ ರಾಜೀವ್ ಗಾಂಽಯವರು ಲೋಕಸಭೆಯಲ್ಲೇ ಹೇಳಿದ್ದನ್ನು ರಾಜ್ಯದ ಹೊಸ ಕಾಂಗ್ರೆಸ್ ಸರ್ಕಾರ ಮನಗಂಡು ಸರ್ಕಾರದ ಬೊಕ್ಕಸದ ಹಣ
ಪೋಲಾಗದಂತೆ ನಿಗ್ರಹಿಸುವ ಪ್ರಮಾಣವಚನವನ್ನು ಪ್ರಥಮ ಮಂತ್ರಿಮಂಡಲದ ಮತ್ತು ಶಾಸಕಾಂಗ ಸಭೆಯಲ್ಲಿ ಸ್ವೀಕರಿಸಿ ಅನುಷ್ಠಾನಕ್ಕೆ ತಂದರೆ ಮಾತ್ರ ಕಾಂಗ್ರೆಸ್ಸಿಗೆ ಕೊಟ್ಟಿರುವ ಐತಿಹಾಸಿಕ ಬಹುಮತ ಸಾರ್ಥಕವಾಗುತ್ತದೆ.

ಈಗಾಗಲೆ ರಾಜ್ಯದ ಮೇಲೆ ೫.೫ಲಕ್ಷ ಕೋಟಿಗೂ ಮೀರಿದ ಸಾಲವಿದ್ದು, ಕಾಂಗ್ರೆಸ್ ಘೋಷಿಸಿರುವ ಉಚಿತಗಳಿಗೆ ವಾರ್ಷಿಕ ಸುಮಾರು ೬೦ ಲಕ್ಷ ಕೋಟಿಗೂ ಹೆಚ್ಚು ಹಣ ಬೇಕಾಗಿದ್ದು, ಈ ಹಣವನ್ನು ಸರ್ಕಾರದ ಆದಾಯದಲ್ಲಾಗುತ್ತಿರುವ ಸೋರಿಕೆಯನ್ನು ತಡೆಗಟ್ಟಿ ಭರಿಸಬೇಕೇ ವಿನಃ ಹೆಚ್ಚುವರಿ ಸಾಲ ಮಾಡಲಾಗಲಿ ಅಥವಾ ಮತ್ತು ಜನಸಾಮಾನ್ಯರಿಗೆ ಹೆಚ್ಚುವರಿ ತೆರಿಗೆ  ವಿಧಿಸುವು ದರಿಂದ ಭರಿಸಿದಲ್ಲಿ ಮತದಾರ ಕಾಂಗ್ರೆಸ್ಸನ್ನು ಕ್ಷಮಿಸುವುದಿಲ್ಲ.

ದೇವೇಗೌಡರು, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಅನಂತರದಲ್ಲಿ ಯಡಿಯೂರಪ್ಪ ಇವರ ವೈಯಕ್ತಿಕ ರಾಜಕೀಯ ಭಿನ್ನಾಭಿಪ್ರಾಯ ಮತ್ತು ಜಗಳದಿಂದಾಗಿ ತಳಮಟ್ಟದಲ್ಲೂ ಒಕ್ಕಲಿಗರು ಮತ್ತು ಲಿಂಗಾಯತರು, ಹಾಗೆಯೇ ದೇವೇಗೌಡರು ಮತ್ತು ಸಿದ್ದರಾಮಯ್ಯನವರ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ಒಕ್ಕಲಿಗರು ಮತ್ತು ಕುರುಬರು, ಒಂದೆಡೆ ರಾಜಕೀಯವಾಗಿ ಒಗ್ಗಟ್ಟಾಗಿರಲಿಲ್ಲ.

ಸುದೈವ ಇಂದು ಈ ಎಲ್ಲ ಜಾತಿಗಳು ಕಾಂಗ್ರೆಸ್ಸಿನಲ್ಲಿರುವ ಸಂಬಂಧಿಸಿದ ಆಯಾಯ ಜಾತಿಗಳ ನಾಯಕರಡಿಯಲ್ಲಿ ಸುಮಾರು ೩೦ ವರ್ಷಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಬಂದಿವೆ. ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಮೇಲೆ ಬಿಜೆಪಿ ನೀಡಿದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಏರಿಕೆ ಮತ್ತು ಒಳ ಮೀಸಲಾತಿಯನ್ನೂ ನಿರ್ಲಕ್ಷಿಸಿ ದಲಿತರೂ ಕೂಡ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ತೆಕ್ಕೆಗೆ ಈ ಚುನಾವಣೆಯಲ್ಲಿ ಬಂದಿರುವುದನ್ನು ಕಾಣಬಹುದಾಗಿದೆ. ಬಿಜೆ
ಪಿಯ ವಿರೋಧದಿಂದಾಗಿ ಸಹಜವಾಗಿ ಮುಸಲ್ಮಾನರು, ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹೀಗೆ ಈ ಬಾರಿ ಕಾಂಗ್ರೆಸ್ ಒಂದಲ್ಲಾ ಒಂದು ಕಾರಣಕ್ಕಾಗಿ ಹತ್ತಾರು ವರ್ಷಗಳ ನಂತರ ಎಲ್ಲ ಜಾತಿ, ವಗಗಳ ಬೆಂಬಲವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಸರ್ವಜನಾಂಗಗಳ ಶಾಂತಿಯ ತೋಟವನ್ನಾಗಿಸುವ ಬಗೆಯ ಸಮಗ್ರ ದೃಷ್ಟಿಯ ಆಡಳಿತವನ್ನು ನೀಡಲು
ಕಟಿಬದ್ಧರಾಗಬೇಕಾಗಿದೆ.

ಸಿಂಗಲ್ ಇಂಜಿನ್ನಿನ ಕಾಂಗ್ರೆಸ್ ಸರ್ಕಾರ ಕೇಂದ್ರ ದೊಡನೆ ಸಂಘರ್ಷಕ್ಕಿಳಿಯದೆ ರಾಜಕೀಯ ಜಾಣ್ಮೆಯಿಂದ ವರ್ತಿಸಿ ರಾಜ್ಯಕ್ಕೆ ಬರಬೇಕಾದ ತನ್ನ ಪಾಲಿನ ಹಣವನ್ನು ಕಾಲಾನುಕಾಲಕ್ಕೆ ಪಡೆದು ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಎಲ್ಲ ಸಹಕಾರವನ್ನು ಪಡೆಯುವ ಮಧ್ಯಮ ಮಾರ್ಗದ ರಾಜಕೀಯ ನೀತಿಯನ್ನು ಅನುಸರಿಸಬೇಕಾಗಿದೆ. ರಾಜ್ಯದ ಕಿರೀಟ ಪ್ರಾಯ ಅಭಿವೃದ್ಧಿ ಯೋಜನೆಗಳಾದ ಮೇಕೆ ದಾಟು, ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಇತ್ಯಾದಿ ಯೋಜನೆಗಳ ಪೂರೈಕೆಗೆ ಕೇಂದ್ರ ಸರ್ಕಾರದ ಸಹಕಾರವನ್ನು ಪಡೆಯುವ ಜಾಣ್ಮೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕಿದೆ.

೨೦೨೪ರಲ್ಲಿ ಲೋಕಸಭಾ ಚುನಾವಣೆ ಇದ್ದು, ರಾಜ್ಯ ಸರ್ಕಾರ ರಾಜ್ಯದ ಆಡಳಿತವನ್ನು ಮೈಮರೆತು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸುವುದರಲ್ಲಿ ಕಾಲ ಕಳೆಯದೆ ಮುಂದಿನ ವರ್ಷದಲ್ಲಿ ಸ್ವಚ್ಛ ಜನಪರ ಆಡಳಿತ ನೀಡಿ ಜನಮನ್ನಣೆ ಗಳಿಸಿ ಹೆಚ್ಚು ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುವಂತಾದಲ್ಲಿ ಕರ್ನಾಟಕ ದಿಂದ ೨ನೇ ಬಾರಿಗೆ ಮತ್ತೊಬ್ಬ ಪ್ರಧಾನಿಯಾಗುವ ಅವಕಾಶಗಳನ್ನು ತಳ್ಳಿಹಾಕುವಂತಿಲ್ಲ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಕೇಂದ್ರದಲ್ಲಿ ರಚನೆಯಾದಲ್ಲಿ ಕೇಂದ್ರದ ಎಲ್ಲ ವಿರೋಧ ಪಕ್ಷಗಳ ಮನ್ನಣೆ ಗಳಿಸಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಎಲ್ಲ ವಿರೋಧ ಪಕ್ಷಗಳ ಸರ್ವಸಮ್ಮತದ ಅಭ್ಯರ್ಥಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇವೆಲ್ಲವುಗಳ ಹಿನ್ನೆಲೆಯಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ, ಸಮಗ್ರ ದೃಷ್ಟಿಯ, ಉತ್ತಮ ಆಡಳಿತ ನೀಡುತ್ತದೆ ಯೆಂಬ ಭರವಸೆಯಿಂದ ಮತದಾರ ಆರಿಸಿದ್ದಾನೆಯೇ ವಿನಃ ಉಚಿತ ಭರವಸೆಗಳಿಂದಲ್ಲ.