Hari Paraak Column: ʼಕಾಮಿಡಿ ವಿತ್ ಕಪಿಲ್ʼ ಕಾರ್ಯಕ್ರಮದ ಕಂಟೆಂಟ್ -ʼಕಪಿಲʼ ವಸ್ತು
ಪ್ರಾಣಿಪ್ರಿಯರಾಗಿರುವ ದರ್ಶನ್ ಅವರು ಇದೇ ಸಂದರ್ಭದಲ್ಲಿ ತಮ್ಮ ನಾಯಕತ್ವದಲ್ಲಿ ಬರಲಿರುವ ‘ಗಂಧದಗುಡಿ ಪಾರ್ಟ್-3’ ಸಿನಿಮಾ ವನ್ನು ಅನೌನ್ಸ್ ಮಾಡಿದರು. ಹಾಗಾಗಿ ಡಾ.ರಾಜ್‌ಕುಮಾರ್ ಫ್ಯಾಮಿಲಿಗೂ ದರ್ಶನ್ ಅವರಿಗೂ ಆಗಿಬರೋದಿಲ್ಲ ಎಂಬ ಹಲವರ ನಂಬಿಕೆಗಳಿಗೆ ತೆರೆಬಿದ್ದಿದೆ.... ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮ ಮುಗಿಸಿ ಸುಸ್ತಾಗಿ ನಿನ್ನೆ ರಾತ್ರಿ 8 ಗಂಟೆಗೇ ಮಲಗಿದಾಗ ಹಿಂಗೆಲ್ಲ ಕನಸು ಬಿತ್ತು!


ತುಂಟರಗಾಳಿ
ಸಿನಿಗನ್ನಡ
ಮೊನ್ನೆ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬ, ಅದರ ಅಂಗವಾಗಿ ಅನೇಕ ವಿಶೇಷ ಕಾರ್ಯ ಕ್ರಮಗಳು ನಡೆದವು. ಆದರೆ ವಿಶೇಷ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘದ ವತಿಯಿಂದ ಕೂಡ ಈ ವರ್ಷ ಅಣ್ಣಾವ್ರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಯ್ತು. ರಾಜರಾಜೇಶ್ವರಿ ನಗರದ ದರ್ಶನ್ ಮನೆಯ ಮುಂದೆ ರಾಜ್‌ಕುಮಾರ್ ಅವರ ಬೃಹತ್ ಕಟೌಟ್ ಹಾಕಿ ಅದಕ್ಕೆ ಹಾಲು ತುಪ್ಪದ ಅಭಿಷೇಕ ಮಾಡಿದರು. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಬೃಹತ್ ಕೇಕ್ ಒಂದನ್ನು ಕಟ್ ಮಾಡಿ, ಅಣ್ಣಾವ್ರ ಆಶಯದಂತೆ, ಕುಡಿತದ ಚಟ ಇರುವ ಹಲವು ಜನರನ್ನು ಕರೆಸಿ ಅಂದು ಕುಡಿತ ಬಿಡಿಸುವ ಪ್ರಮಾಣ ಮಾಡಿಸಿದ್ದಾರೆ ದರ್ಶನ್. ಆದರೆ ದರ್ಶನ್ ಅವರು ಈ ಪ್ರಮಾಣ ತೆಗೆದುಕೊಂಡರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕಾರ್ಯಕ್ರಮದಲ್ಲಿ ದರ್ಶನ್ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದರು. ಜತೆಗೆ, ಪ್ರಾಣಿಪ್ರಿಯರಾಗಿರುವ ದರ್ಶನ್ ಅವರು ಇದೇ ಸಂದರ್ಭದಲ್ಲಿ ತಮ್ಮ ನಾಯಕತ್ವದಲ್ಲಿ ಬರಲಿರುವ ‘ಗಂಧದಗುಡಿ ಪಾರ್ಟ್-3’ ಸಿನಿಮಾ ವನ್ನು ಅನೌನ್ಸ್ ಮಾಡಿದರು. ಹಾಗಾಗಿ ಡಾ.ರಾಜ್‌ಕುಮಾರ್ ಫ್ಯಾಮಿಲಿಗೂ ದರ್ಶನ್ ಅವರಿಗೂ ಆಗಿಬರೋದಿಲ್ಲ ಎಂಬ ಹಲವರ ನಂಬಿಕೆಗಳಿಗೆ ತೆರೆಬಿದ್ದಿದೆ.... ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮ ಮುಗಿಸಿ ಸುಸ್ತಾಗಿ ನಿನ್ನೆ ರಾತ್ರಿ 8 ಗಂಟೆಗೇ ಮಲಗಿದಾಗ ಹಿಂಗೆಲ್ಲ ಕನಸು ಬಿತ್ತು!
ಇದನ್ನೂ ಓದಿ: Hari Paraak Column: ಬಸವಣ್ಣ ʼಜಾತಿನ ಲೆಕ್ಕಕ್ಕೇ ಇಡಬೇಡಿʼ ಅಂದ್ರು, ಇವ್ರ್ ನೋಡಿದ್ರೆ ಜಾತಿ ಲೆಕ್ಕ ಹಾಕ್ತಾ ಇದ್ದಾರೆ
ಲೂಸ್ ಟಾಕ್- ಯೋಗರಾಜ್ ಬಟ್
ಗೀತ ಸಾಹಿತಿಯಾಗಿ ನಿಮಗೆ ಇನ್ನೂನು ರಾಜ್ಯ ಪ್ರಶಸ್ತಿ ಬಂದಿಲ್ಲ. ನಿಮ್ಮ ಅಭಿಪ್ರಾಯ?
- ‘ಇನ್ನೂನು’ ಅನ್ನೋದನ್ನು ‘ಇನ್ನೂರು’ ಅಂತ ತಿದ್ದಿದರೆ ಮಾತ್ರ ಉತ್ತರಿಸಲು ಸಾಧ್ಯ!
ಎಷ್ಟೊಂದ್ ಬುದ್ಧಿವಂತ್ರು ನೀವು, ‘ಹೋಗಿ ಹೋಗಿ’ ಸಿನಿಮಾ ಫೀಲ್ಡ್‌ಗೆ ಯಾಕೆ ‘ಬಂದ್ರಿ’?
- ಹಂಗೆಲ್ಲ ನನ್ನ ಬುದ್ಧಿವಂತ ಅನ್ಬೇಡಿ. ‘ಸೆಲ್ ಡಿಕ್ಲೇರ್ಡ್’ ಬುದ್ಧಿವಂತರೆಲ್ಲ ಸಾಮೂಹಿಕವಾಗಿ ಕೇಸು ಹಾಕ್ತಾರೆ ನಿಮ್ಮ ಮೇಲೆ.
‘ಅನ್ಯಾಯವಾಗಿ’ ಅನ್ನೋ ಪದವನ್ನು ನ್ಯಾಯವಾಗಿ ಬಳಸೋರು ನೀವೊಬ್ರೇ ಅನ್ಸುತ್ತೆ. ನಿಮ್ಮದೇ ಆದ ಇಂಥ ಸ್ಪೆಷಲ್ ಪದಕೋಶಕ್ಕೆ ಸ್ಪೂರ್ತಿ ಏನು?
ಈಗ ಬರ್ತಾ ಇರೋ ಕನ್ನಡ ಕಾದಂಬರಿಗಳಿಗಿಂತ ಕನ್ನಡ ಪದಕೋಶವನ್ನು ಕಾದಂಬರಿ ಥರ ಓದುವುದೇ ಒಳ್ಳೆಯದು ಅದ್ಕೊಂಡು ಓದಿದೆ. ಒಳ್ಳೆ ರಸಾನುಭೂತಿ ಕೂಡ ಸಿಕ್ಕಿತು. ಅದ್ರೆ ಅನ್ಯಾಯ ವಾಗಿ ಹಿಂಗಾಗೋದೆ.
ನಿಮ್ಮ ಹೊಸ ಸಿನಿಮಾಗಳು ‘ವಾಸ್ತು ಪ್ರಕಾರ’ ಯಾವ ಚಿತ್ರಮಂದಿರದಲ್ಲಿ ಬಿಡುಗಡೆ ಆದರೆ ಚೆನ್ನ?
-ಚಿತ್ರಮಂದಿರ ಯಾವುದಾದ್ರೂ ಆಗ್ಲಿ. ‘ಹೌಸ್ ಫುಲ್’ ಅಂತ ಬೋರ್ಡ್ ಹಾಕೋಕೆ ಚಿತ್ರಮಂದಿರಕ್ಕೆ ಒಂದು ಒಳ್ಳೇ ಗೇಟು ಇರಬೇಕು. ಅದೊಂದೇ ನನ್ನ ಕೋರಿಕೆ.
ಮಹೇಶ್ ಭಟ್‌ಗೂ ಯೋಗರಾಜ್ ಭಟ್‌ಗೂ ಏನು ಸಂಬಂಧ?
-ಸಂಬಂಧದಲ್ಲಿ ಅವ್ರು ನಮ್ ಮಾವ ಆಗುವ ಸಾಧ್ಯತೆ ಇತ್ತು. ಪೂಜಾಭಟ್‌ಗೆ ವಯಸ್ಸಾಯ್ತು. ಪೆದ್ದಿ ಆಲಿಯಾ ಭಟ್‌ಗೂ ಮದುವೆ ಆಯ್ತು. ಅಲ್ದೇ ಇಬ್ರೂ ನಂಗಿಷ್ಟ ಇಲ್ಲ. ಆದ್ದರಿಂದ ಮಹೇಶ್ ಭಟ್ ಅವರ ಬಾಂಧವ್ಯ ಸಾಧ್ಯವಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಶ್ವೇಶ್ವರ ಭಟ್ರನ್ನ ಸಂಪರ್ಕಿಸಿ.
(ಕಾಲ್ಪನಿಕ ಸಂದರ್ಶನ ಅಲ್ಲ)
ನೆಟ್ ಪಿಕ್ಸ್
ಸಂಸತ್ ಭವನದ ಮುಂದೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಗಾಡಿಗಳು ಇಂಚಿಂಚೇ ಮುಂದೆ ಚಲಿಸುತ್ತಿದ್ದವು. ಅದೇ ದಾರಿಯಲ್ಲಿ ಸೋಮು ತನ್ನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ. ಆದರೆ ಮುಂದಕ್ಕೆ ಹೋಗದ ವಾಹನಗಳಿಂದಾಗಿ ಬೇಸತ್ತು ಹೋಗಿದ್ದ ಸೋಮು. ಕೊನೆಗೆ ಪೂರ್ತಿ ಜಾಮ್ ಆಗಿ ನಿಂತ ನಿಲ್ಲುವ ಪರಿಸ್ಥಿತಿ ಬಂತು. ಅವನ ಮುಂದೆ ಸಾಲು ಸಾಲಾಗಿ, ಸಾಲು ಸಾಲಾಗಿ ವಾಹನ ಗಳು ಎಂಜಿನ್ ಆಫ್ ಮಾಡಿಕೊಂಡು ನಿಂತಿದ್ದವು. ಅಷ್ಟರಲ್ಲಿ ಖೇಮು ಆ ಕಡೆಯಿಂದ ಬಂದ. ಸೋಮು ಕಾರಿನ ಮುಂದೆ ಸಾಲಾಗಿ ನಿಂತಿದ್ದ ಎಲ್ಲ ವಾಹನಗಳ ಬಳಿಯೂ ಹೋಗಿ ಖೇಮು ಏನೋ ಹೇಳುತ್ತಿದ್ದ. ಸ್ವಲ್ಪ ಹೊತ್ತಾದ ನಂತರ ಅವನು ಸೋಮು ಕಾರಿನ ಬಳಿಯೂ ಬಂದ. ಕಾದು ಕಾದು ಸಾಕಾಗಿದ್ದ ಸೋಮು, ಖೇಮು ಬಂದೊಡನೆ ಕೇಳಿದ ‘ಬ್ರದರ್ ಏನ್ ಪ್ರಾಬ್ರಮ್? ಯಾಕೆ ಟ್ರಾಫಿಕ್ ಜಾಮ್ ಆಗಿದೆ?’. ಅದಕ್ಕೆ ಖೇಮು ಹೇಳಿದ ‘ಏನಿಲ್ಲ, ಸಂಸತ್ ಒಳಗೆ ಉಗ್ರರು ನುಗ್ಗಿದ್ದಾರೆ. ಅಲ್ಲಿ ಎಲ್ಲ ರಾಜಕಾರಣಿಗಳನ್ನು ಹೈಜಾಕ್ ಮಾಡಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. 10 ಕೋಟಿ ರುಪಾಯಿ ಕೊಡದಿದ್ರೆ ಎಲ್ಲ ರಾಜಕಾರಣಿಗಳನ್ನೂ ಪೆಟ್ರೋಲ್ ಹಾಕಿ ಸುಟ್ಟುಬಿಡ್ತೇವೆ ಅಂತ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ಎಲ್ಲಾ ಕಾರುಗಳ ಹತ್ರನೂ ಹೋಗಿ ಪ್ರತಿಯೊಬ್ಬರಿಂದಲೂ ಡೊನೇ ಶನ್ ಸಂಗ್ರಹ ಮಾಡ್ತಾ ಇದ್ದೀವಿ’. ಅದನ್ನು ಕೇಳಿ ಗಾಬರಿಯಾದರೂ ಒಂದು ಕ್ಷಣ ಸಾವರಿಸಿ ಕೊಂಡು ‘ಸರಿ, ಎಲ್ಲರೂ ಎಷ್ಟೆಷ್ಟು ಕೊಡ್ತಾ ಇzರೆ?’ ಅಂತ ಕೇಳಿದ ಸೋಮು. ಅದಕ್ಕೆ ಖೇಮು ತಣ್ಣಗೆ ಉತ್ತರಿಸಿದ ‘ಸುಮಾರು ಒಂದೂವರೆಯಿಂದ ಎರಡು ಲೀಟರ್’.
ಲೈನ್ ಮ್ಯಾನ್
ಬಿಎಂಟಿಸಿಯವರು ಒಂದು ಏರ್‌ಲೈನ್ಸ್ ಶುರು ಮಾಡಿದ್ರೆ ಅದಕ್ಕೆ ಹೆಸರು
-‘ಪುಷ್ಪಕ್’ ವಿಮಾನ
ಟ್ರಾಫಿಕ್ ಸಿಗ್ನಲ್‌ನಲ್ಲಿ ಸುಮ್ಸುಮ್ನೇ ಹಾರ್ನ್ ಮಾಡುವವರನ್ನು ಏನೆನ್ನಬಹುದು?
- ಹಾರ್ನಿ
ಕಾಮಿಡಿ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಅವರು ಆರಿಸಿಕೊಳ್ಳುವ ಕಂಟೆಂಟ್ ಅನ್ನು ಏನೆನ್ನಬಹುದು?
-‘ಕಪಿಲ’ ವಸ್ತು
ಕ್ರಾಂತಿ ಸಂಪೂರ್ಣ ಯಶಸ್ವಿಯಾಗದಿದ್ದರೆ ಅದು?
-‘ಅರ್ಧ’ ಕ್ರಾಂತಿ
ಮನುಷ್ಯರಿಗೂ ಅಂಗಡಿಯಲ್ಲಿ ಸಿಗುವ ಸಾಮಾನುಗಳಿಗೂ ಇರುವ ವ್ಯತ್ಯಾಸ
-ಸಾಮಾನುಗಳಿಗೆ ಎಕ್ಸ್‌ಪೈರಿ ಡೇಟ್ ಮುಂಚೆನೇ ಫಿಕ್ಸ್ ಆಗಿರುತ್ತೆ
ಮೆಣಸಿನ ಕಾಯಿಯ ರುಚಿಯ ಬಗೆಗಿನ ಅಭಿಪ್ರಾಯ
- ‘ಖಾರ’ದ ಪ್ರತಿಕ್ರಿಯ
ನೋ ಕಾಮೆಂಟ್ಸ್‌ಗೆ ಕನ್ನಡದಲ್ಲಿ ಏನೆನ್ನಬಹುದು?
- ‘ಕಾರದ’ ಪ್ರತಿಕ್ರಿಯೆ
ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕ
- ‘ಹಾದಿ’ ಮಾನವ
ಬರೆದ ಲೇಖನದಲ್ಲಿ ಮಧ್ಯದ ಒಂದು ಪ್ಯಾರಾ ಬೈ ಮಿಸ್ಟೇಕ್ ಎಗರಿ ಹೋದರೆ
- ‘ಪ್ಯಾರಾ’ಗಾನ್
ಅರಬ್ ದೇಶದಲ್ಲಿರೋ ನಟೋರಿಯಸ್ ಕ್ರಿಮಿನಲ್
- ‘ಖತಾರ್’ನಾಕ್