ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayab Singh Saini: ಉಗ್ರರ ದಾಳಿಯಲ್ಲಿ ಮೃತಪಟ್ಟ ನರ್ವಾಲ್ ಕುಟುಂಬಕ್ಕೆ ಸರ್ಕಾರಿ ಉದ್ಯೋಗ

ಜಮ್ಮು ಕಾಶ್ಮೀರದ ಪಹಲ್ಗಾಮ್‌ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಪ್ರವಾಸಿಗರಲ್ಲಿ ಒಬ್ಬರಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕುಟುಂಬಕ್ಕೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ 50 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ.

ವಿನಯ್ ನರ್ವಾಲ್ ಕುಟುಂಬಕ್ಕೆ ಉದ್ಯೋಗ: ಸೈನಿ ಭರವಸೆ

ಚಂಡೀಗಢ: ಜಮ್ಮು ಕಾಶ್ಮೀರದ (Jammu and Kashmir) ಪಹಲ್ಗಾಮ್‌ (Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಪ್ರವಾಸಿಗರಲ್ಲಿ ಒಬ್ಬರಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ (Lieutenant Vinay Narwal) ಅವರ ಕುಟುಂಬಕ್ಕೆ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Nayab Singh Saini) ಶನಿವಾರ 50 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದಾರೆ. ಅವರ ಕಚೇರಿಯಿಂದ ಬಿಡುಗಡೆ ಮಾಡಲಾದ ಅಧಿಕೃತ ಹೇಳಿಕೆಯಲ್ಲಿ ನರ್ವಾಲ್ ಅವರ ಪೋಷಕರ ಆಶಯದಂತೆ ಕುಟುಂಬದ ಒಬ್ಬರು ಸದಸ್ಯರಿಗೆ ಈ ಕೆಲಸವನ್ನು ನೀಡಲಾಗುವುದು ಎಂದು ತಿಳಿಸಿದೆ.

ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರು ತಮ್ಮ ಪತ್ನಿ ಹಿಮಾಂಶಿ ಅವರೊಂದಿಗೆ ಪಹಲ್ಗಾಮ್‌ಗೆ ಹನಿಮೂನ್‌ಗೆ ತೆರಳಿದ್ದರು. ಈ ವೇಳೆ ಉಗ್ರರು ದಾಳಿ ನಡೆಸಿ ವಿನಯ್ ನರ್ವಾಲ್ ಅವರನ್ನು ಹತ್ಯೆ ಮಾಡಿದ್ದರು. ಏಪ್ರಿಲ್ 16ರಂದು ವಿನಯ್ ನರ್ವಾಲ್ ಮತ್ತು ಹಿಮಾಂಶಿ ಅವರ ವಿವಾಹವಾಗಿತ್ತು.

ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆಯನ್ನು ಏಪ್ರಿಲ್ 23ರಂದು ನಡೆಸಲಾಗಿದ್ದು, ಇದರಲ್ಲಿ ನಯಾಬ್ ಸೈನಿ ಕೂಡ ಪಾಲ್ಗೊಂಡಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸೈನಿ, ವಿನಯ್ ನರ್ವಾಲ್ ಅವರಿಗೆ ಗೌರವ ಸಲ್ಲಿಸಲು ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಹೇಡಿತನದ ದಾಳಿ ನಡೆಸಿದವರನ್ನು ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿನಯ್ ನರ್ವಾಲ್ ಒಬ್ಬ ಧೈರ್ಯಶಾಲಿ ಸೈನಿಕ. ಹರಿಯಾಣ ಸರ್ಕಾರ ಅವರ ಕುಟುಂಬದೊಂದಿಗೆ ನಿಂತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Pahalgam Terror Attack: ಸೇನೆಯಿಂದ ಉಗ್ರರ 10 ಮನೆಗಳು ಉಡೀಸ್‌ ; ಮುಂದುವರಿದ ಕಾರ್ಯಾಚರಣೆ

ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಂತಿಮ ದರ್ಶನಕ್ಕಾಗಿ ಹಲವಾರು ಮಂದಿ ಅಧಿಕಾರಿಯ ನಿವಾಸಕ್ಕೆಆಗಮಿಸಿದ್ದರು. ಮದುವೆಯಾಗಿ 10 ದಿನದಲ್ಲಿ ಪತಿಯನ್ನು ಕಳೆದುಕೊಂಡ ಹಿಮಾಂಶಿ ಅವರು ಕಣ್ಣೀರು ಸುರಿಸುತ್ತಾ ಪತಿಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ ಸಿಎಂ ಸೈನಿ ಅವರು ಉನ್ನತ ಮಟ್ಟದ ಸಭೆಯನ್ನು ಕರೆದು ಲೆಫ್ಟಿನೆಂಟ್ ವಿನಯ್ ನರ್ವಾಲ್ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ಕುರಿತು ತೀರ್ಮಾನ ಕೈಗೊಂಡಿದ್ದರು.