ಅಭಿಮತ
ಚಂದ್ರಶೇಖರ ಬೇರಿಕೆ
ಸ್ಥಳೀಯ ಜನತೆಯ ಆಶೋತ್ತರ ಹಾಗೂ ಕಲ್ಯಾಣವನ್ನು ಸಾಧಿಸುವ ಸಲುವಾಗಿ ಸ್ಥಾಪಿಸಲಾಗುವ ಸರಕಾರವೇ ಸ್ಥಳೀಯ ಸರಕಾರ
ಎಂದು ಡಾ.ಎಸ್.ರಾಧಾಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವ ಸಫಲವಾಗಬೇಕಾದರೆ ಅದು ಉತ್ತಮವಾದ ಸ್ಥಳೀಯ ಸರಕಾರ ವ್ಯವಸ್ಥೆಯನ್ನು ಹೊಂದುವುದು ಅವಶ್ಯಕ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿನ ಜನತೆಯ ಕಲ್ಯಾಣಕ್ಕಾಗಿ ಸ್ಥಾಪಿತವಾದ ಸ್ಥಳೀಯ ಸರಕಾರ ಗಳಲ್ಲಿ ಗ್ರಾಮ ಪಂಚಾಯ್ತಿ ಒಂದು ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಅವಧಿ ಮುಗಿದ ಒಟ್ಟು 5762 ಗ್ರಾಮ ಪಂಚಾಯ್ತಿ ಗಳಿಗೆ ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾಗಿದೆ.
ಸ್ಥಳೀಯ ಸಮಸ್ಯೆಗಳಿಗೆ ಕೇಂದ್ರ ಸರಕಾರವಾಗಲೀ ಅಥವಾ ರಾಜ್ಯ ಸರಕಾರವಾಗಲೀ ನೇರವಾಗಿ ಸ್ಪಂದಿಸಲು ಅಥವಾ ಗಮನ ಹರಿಸಲು ಸಾಧ್ಯವಿಲ್ಲ. ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಅಽಕಾರದ ಪ್ರಜಾಸತಾತ್ಮಕ ಕೇಂದ್ರೀಕರಣದ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಯನ್ನು ಸ್ಥಾಪಿಸಲಾಗಿದೆ. ಸ್ಥಳೀಯ ಸರಕಾರದ ವ್ಯವಸ್ಥೆಯಡಿಯಲ್ಲಿ ಗ್ರಾಮ ಪಂಚಾಯತ್ಗಳಿಗೆ ಆಡಳಿತವನ್ನು ಮತ್ತು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ
ಗೊಳಿಸುವ ಜವಾಬ್ದಾರಿಯೂ ಇದೆ.
ಪಂಚಾಯ್ತಿಗಳ ಭೌಗೋಳಿಕ ವ್ಯಾಪ್ತಿ ಕಿರಿದಾಗಿದ್ದರೂ ಕಾರ್ಯವ್ಯಾಪ್ತಿ ಅಗಾಧವಾಗಿದ್ದು, ಸ್ಥಳೀಯ ಜನರ ಪಾಲ್ಗೊಳ್ಳುವಿಕೆ ಯಿಂದ ಸ್ಥಳೀಯ ನೈಜ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅರಿತು ಆ ನಿಟ್ಟಿನಲ್ಲಿ ಸ್ಪಂದಿಸಲು ಸಾಧ್ಯವಾಗಲಿದೆ. ಗ್ರಾಮಗಳ ಅಭಿವೃದ್ಧಿ ಯು ದೇಶದ ಅಭಿವೃದ್ಧಿಗೆ ಅಡಿಪಾಯವಾಗಿದ್ದು, ಗ್ರಾಮ ಪಂಚಾಯ್ತಿಗಳು ಅದರ ವ್ಯಾಪ್ತಿಯ ಜನರ ಪಾಲ್ಗೊಳ್ಳುವಿಕೆಯಿಂದ ನಡೆಸಲ್ಪಡುವ ಸ್ಥಳೀಯ ಸರಕಾರ ಎಂದೆನಿಸಿಕೊಂಡಿದೆ.
ಇಂತಹ ತಳಮಟ್ಟದ ಸರಕಾರವನ್ನು ಮುನ್ನಡೆಸಲು ಮತ್ತು ಜನರನ್ನು ಪ್ರತಿನಿಧಿಸಲು ಜನಪ್ರತಿನಿಧಿಗಳು ಅವಶ್ಯ. ಈ ಜನಪ್ರತಿ ನಿಧಿಯು ಅವನು ಪ್ರತಿನಿಧಿಸುವ ಜನರ ಆಶೋತ್ತರಗಳನ್ನು ಈಡೇರಿಸಿಕೊಡಲು ಬದ್ಧತೆಯನ್ನು ಹೊಂದಿರಬೇಕು ಮತ್ತು
ಸಮರ್ಥ ಹಾಗೂ ಯೋಗ್ಯನಾಗಿರಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದಂಥ ಅಥವಾ ಜನರ ಸಮಸ್ಯೆಗಳನ್ನು
ಸರಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿಕೊಡುವಂಥ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಜನಪ್ರತಿನಿಧಿ
ಗಳಿಗೆ ಕನಿಷ್ಠ ಪ್ರಮಾಣದ ತಿಳಿವಳಿಕೆ ಮತ್ತು ಸಾಮಾನ್ಯ ಗ್ರಹಿಕಾ ಸಾಮರ್ಥ್ಯ ಇರಬೇಕಾಗುತ್ತದೆ.
ಸಂವಿಧಾನ ಜಾರಿಯ ಸಮಯದಲ್ಲಿ ದೇಶದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಾಗಿದ್ದರಿಂದ ಚುನಾವಣಾ ಸ್ಪರ್ಧೆಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸುವುದು ಸಮಂಜಸವಲ್ಲ ಎಂಬುದನ್ನು ನಗಂಡು ವಿದ್ಯಾರ್ಹತೆಗೆ ಒತ್ತು ನೀಡಿರಲಿಲ್ಲ. ಆದರೆ
ಈಗಿನ ಪರಿಸ್ಥಿತಿಗಳಲ್ಲಿ ಅನಕ್ಷರಸ್ಥರಿಗೆ ಪ್ರಾಶಸ್ತ್ಯ ನೀಡುವುದು ಸೂಕ್ತವೆನಿಸುವುದಿಲ್ಲವಾದ್ದರಿಂದ ಜನಪ್ರತಿನಿಧಿಗಳು ಕನಿಷ್ಠ
ವಿದ್ಯಾರ್ಹತೆ ಹೊಂದಿರಬೇಕಾದುದು ಬಹಳ ಅಗತ್ಯ.
ಇಂದಿನ ಕಾಲಘಟ್ಟದಲ್ಲಿ ವಿದ್ಯಾಭ್ಯಾಸ ಬಹಳ ಅಗತ್ಯವಾದ ಮೂಲ ಅವಶ್ಯಕತೆಗಳಲ್ಲೊಂದಾಗಿದೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಹೆತ್ತವರು ವಿದ್ಯಾಭ್ಯಾಸ ಹೊಂದಿದವರಾಗಿದ್ದಲ್ಲಿ ಮಾತ್ರ ಅಂತಹವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಲ್ಲಿ ಆದ್ಯತೆ ನೀಡುವ ನಿದರ್ಶನಗಳೂ ಇವೆ. ಅಂತಹದರಲ್ಲಿ ಸ್ಥಳೀಯ ಸರಕಾರ ವನ್ನು ನಡೆಸುವವರಿಗೆ ವಿದ್ಯಾಭ್ಯಾಸ ವಿಲ್ಲದಿದ್ದಲ್ಲಿ ಜನತೆಗೆ ಯಾವ ರೀತಿಯ ಆಡಳಿತವನ್ನು ನೀಡಲು ಸಾಧ್ಯ?.
ಪಂಚಾಯತ್ ಸದಸ್ಯರಿಗೆ ಪಂಚಾಯತ್ನ ಕಾರ್ಯ ಚಟುವಟಿಕೆಗಳ ಬಗ್ಗೆ ಜ್ಞಾನವಿರಬೇಕು. ಸರಕಾರದ ಯೋಜನೆಗಳು, ಸೌಲಭ್ಯ ಗಳ ಬಗ್ಗೆ ಜನಪ್ರತಿನಿಧಿಗಳು ತಿಳಿದುಕೊಳ್ಳಲು ವಿಫಲರಾಗಿ ಮಾಹಿತಿ ಇಲ್ಲದವರಾದರೆ ಜನರಿಗೆ ಯಾವ ರೀತಿಯಲ್ಲಿ ಸರಕಾರದ ಯೋಜನೆಗಳನ್ನು ಅಥವಾ ಸೌಲಭ್ಯಗಳನ್ನು ತಲುಪಿಸಬಹುದು?. ಕಾಲಕಾಲಕ್ಕೆ ಸರಕಾರದ ಯೋಜನೆಗಳು ಮತ್ತು ಅದಕ್ಕೆ ಸಂಬಂಧಪಟ್ಟ ನಿಯಮಗಳ ಬದಲಾವಣೆ, ಮಾರ್ಪಾಡುಗಳಿಗೆ ಒಳಪಡುತ್ತದೆ.
ಎಲ್ಲವನ್ನೂ ಎಲ್ಲಾ ಕಾಲದಲ್ಲೂ ಅನ್ಯರಿಂದ ತಿಳಿದುಕೊಂಡು ಮುಂದುವರಿಯುವುದು ಅಸಾಧ್ಯ. ಸಮಸ್ಯೆಗಳನ್ನು ಸಂಬಂಧ ಪಟ್ಟವರಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಲು ಸಂವಹನ ಸಾಮರ್ಥ್ಯ ಅಗತ್ಯ. ಪ್ರಸಕ್ತ ಕಾಲಘಟ್ಟದಲ್ಲಿ ಬಹುತೇಕ ಸಂವಹನಗಳು, ವ್ಯವಹಾರಗಳು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಅವಲಂಬಿತವಾಗಿದೆ. ಜನಪ್ರತಿನಿಧಿಗಳಿಗೆ ಸಾಂವಿಧಾನಿಕ ಜವಾಬ್ದಾರಿ, ಕರ್ತವ್ಯಗಳ ಅರಿವಿಲ್ಲದೇ ಹೋದರೆ ಸರಕಾರದ ಆಶಯಗಳು ಈಡೇರಲು ಸಾಧ್ಯವಿಲ್ಲ.
ಪಂಚಾಯತ್ ಮಟ್ಟದಲ್ಲಿ ಅವಿದ್ಯಾವಂತ ಚುನಾಯಿತ ಸದಸ್ಯರ ದುರ್ಬಳಕೆಯಾಗುವ ಅಪಾಯವಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದಾಗ ಅದಕ್ಕೆ ಸೂಕ್ತ ಪರಿಹಾರ, ಸಲಹೆ ನೀಡಬೇಕಾದರೆ ಜನಪ್ರತಿನಿಧಿಯಾದ ವರು ಕನಿಷ್ಠ ತಿಳಿವಳಿಕೆಯನ್ನಾದರೂ ಹೊಂದಿರ ಬೇಕಲ್ಲವೇ? ಕನಿಷ್ಠ ಪಕ್ಷ ತಾನು ಪ್ರತಿನಿಧಿಸುವ ಜನರ ಸಮಸ್ಯೆಗಳ ಬಗ್ಗೆ ಒಂದು ವಿವರವಾದ ಪತ್ರ ವ್ಯವಹಾರ ಮಾಡುವು ದಕ್ಕಾಗಿಯಾಗಲೀ ಅಥವಾ ತನಗೆ ಬಂದಿರುವ ಪತ್ರಗಳನ್ನು ಓದಿ ಅರ್ಥೈಸಿಕೊಳ್ಳುವು ದಕ್ಕಾಗಿ ಯಾಗಲೀ ಸಮರ್ಥರಿರಬೇಕಲ್ಲವೇ? ಹಾಗಾಗಿ ಬದಲಾದ ಈಗಿನ ಸನ್ನಿವೇಶದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಚುನಾ ವಣೆಗೆ ಸ್ಪರ್ಧಿಸುವವರಿಗೆ ವಿದ್ಯಾರ್ಹತೆ ನಿಗದಿಪಡಿಸುವುದು ಬಹಳ ಪ್ರಸ್ತುತವೆನಿಸಲಿದೆ.
ಪಂಚಾಯತ್ ಮಟ್ಟದಲ್ಲಿ ಹಲವಾರು ಅಪಸವ್ಯಗಳು ಕಂಡು ಬರುತ್ತಿದ್ದು, ಚುನಾವಣಾ ಸ್ಪರ್ಧೆಗೆ ವಿದ್ಯಾರ್ಹತೆ ಕಡ್ಡಾಯವಲ್ಲ ಎಂಬ ನಿಯಮವನ್ನು ದುರುಪಯೋಗ ಪಡಿಸಿಕೊಂಡು ಕೆಲವು ಅದ್ಯಾವಂತ ವ್ಯಕ್ತಿಗಳನ್ನು ಒತ್ತಾಯಪೂರ್ವಕವಾಗಿ ಚುನಾವಣೆ ಯಲ್ಲಿ ನಿಲ್ಲಿಸಿ ಇನ್ಯಾರೋ ದರ್ಬಾರು ನಡೆಸುವ ನಿದರ್ಶನಗಳು ಬಹಳ ಷ್ಟಿದೆ.
ಅವಿದ್ಯಾವಂತರೇ ಚುನಾಯಿಸಲ್ಪಟ್ಟರೆ ಪಂಚಾಯತ್ಗಳು ಯೋಗ್ಯರಲ್ಲದವರ ಕೈಗೆ ಸಿಕ್ಕಿ ಹಾಳಾಗುವ ಸಂಭವವಿದೆ. ಸರಕಾರದ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುವ ಪಂಚಾಯತ್ ಮಟ್ಟದ ಅಧಿಕಾರಿಗಳು ನಿಗದಿತ ವಿದ್ಯಾರ್ಹತೆ, ನಿಯಮಾನು ಸಾರ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆ ಮತ್ತು ಆಯ್ಕೆ ಮಾನದಂಡ ಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ‘ಡಿ’ ದರ್ಜೆಯ ಸಿಬ್ಬಂದಿ ಗಳು, ವಾಟರ್ ಮನ್ಗಳೂ ಸಹ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ. ಆದರೆ ಅಂತಹ ಅಧಿಕಾರಿಗಳು, ಸಿಬ್ಬಂದಿ ಗಳ ಮೂಲಕ ಕೆಲಸ ಮಾಡಿಸುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಜನಪ್ರತಿನಿಧಿಗಳಿಗೆ ಯಾವುದೇ ರೀತಿಯ ವಿದ್ಯಾರ್ಹತೆ ನಿಗದಿಗೊಳಿಸದಿರುವುದು ವ್ಯವಸ್ಥೆಯ ಲೋಪವಾಗಿದೆ.
ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬುದಾಗಿ ಹರಿಯಾಣ, ಬಿಹಾರ ಮತ್ತು ರಾಜಸ್ಥಾನ ಸರಕಾರಗಳು 2015ರಲ್ಲಿ ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದ್ದವು. ಇದಕ್ಕೆ ಕೆಲವು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸಿದರು. ದೇಶದ ಸಂವಿಧಾನದಲ್ಲಿ ಚುನಾವಣೆಗೆ ಸ್ಫರ್ಧಿಸಲು ಜನರಿಗೆ ವಿವಿಧ ಅರ್ಹತೆ, ಷರತ್ತುಗಳನ್ನು ವಿಧಿಸಲಾಗಿದೆಯಾದರೂ ಸ್ಪರ್ಧಾಳುಗಳ ಶೈಕ್ಷಣಿಕ
ಅರ್ಹತೆಯ ಬಗೆಗೆ ಉಲ್ಲೇಖವಿಲ್ಲ. ಹರ್ಯಾಣ ಸರಕಾರದ ಈ ನಿರ್ಧಾರವು ಸಾಮಾಜಿಕ ನ್ಯಾಯ ಮತ್ತು ಮೂಲ ಹಕ್ಕುಗಳ
ಉಲ್ಲಂಘನೆಯಾಗಿದ್ದು, ಪ್ರಜಾಪ್ರಭುತ್ವದ ತತ್ತ್ವಕ್ಕೆ ವಿರುದ್ಧವಾಗಿದೆ.
ಈ ನಿರ್ಧಾರದಿಂದ ಬಹಳಷ್ಟು ಮಂದಿ ಚುನಾವಣೆ ಸ್ಪರ್ಧೆಗೆ ಅನರ್ಹರಾಗಲಿದ್ದು, ಒಂದು ನಿರ್ದಿಷ್ಟ ವರ್ಗದ ಜನರನ್ನು ರಾಜಕೀಯದಿಂದ ಹೊರಗಿಟ್ಟಂತಾಗುತ್ತದೆ. ಇದು ತಳಮಟ್ಟದ ಸರಕಾರದಲ್ಲಿ ಜನರ ಭಾಗವಹಿಸುವಿಕೆಯ ಅವಕಾಶವನ್ನು ತಡೆಗಟ್ಟುತ್ತದೆ. ಹಾಗಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆ ಸ್ಪರ್ಧೆಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸುವುದು ಅಪ್ರಸ್ತುತ ಎಂದು ವಾದಿಸಿ ಕೆಲವು ಸಾಮಾಜಿಕ ಕಾರ್ಯಕರ್ತರು ಹರ್ಯಾಣ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದರು. ಈ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಸರಿ – ತಪ್ಪು, ಸಾಧಕ – ಬಾಧಕಗಳ ನಿರ್ಧಾರವನ್ನು ಶಿಕ್ಷಣ ದಿಂದಷ್ಟೇ ಮಾಡಲು ಸಾಧ್ಯವಾಗುವುದರಿಂದ ಮತ್ತು ಉತ್ತಮ ಆಡಳಿತದ ದೃಷ್ಟಿಯಿಂದ ಶೈಕ್ಷಣಿಕ ಅರ್ಹತೆಯನ್ನು ಅಪ್ರಸ್ತುತ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಅನಕ್ಷರಸ್ಥರು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಬಹುದು ಮತ್ತು ಇದು ಚುನಾವಣೆಗಳಲ್ಲಿ ಸ್ಪರ್ಧಿಸುವ ಜನರ
ಸಾಂವಿಧಾನಿಕ ಹಕ್ಕಿನ ಮೇಲೆ ಹಾಕುತ್ತಿರುವ ನ್ಯಾಯಯುತ ನಿರ್ಬಂಧ ಎಂದು ಪ್ರತಿಪಾದಿಸುತ್ತಾ, ಶೈಕ್ಷಣಿಕ ಅರ್ಹತೆ ಕುರಿತ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಮನಗಳನ್ನು ಮಾನ್ಯ ಮಾಡದೆ ಹರ್ಯಾಣ ಸರಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದು ಐತಿಹಾಸಿಕ ತೀರ್ಪು ನೀಡಿತ್ತು.
ಕನಿಷ್ಠ ವಿದ್ಯಾರ್ಹತೆಯ ನಿಗದಿ ವಿಚಾರವಾಗಿ ಪರ – ವಿರೋಧ ಅಭಿಪ್ರಾಯಗಳೇನೇ ಇದ್ದರೂ ಪ್ರಜಾಸತ್ತೆಯ ತಳಹದಿಯಾದ ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಜಾರಿಗೊಳಿಸಿ ಮೇಲ್ಸ್ತರಗಳ ಚುನಾವಣೆಗೂ ಈ ನಿಯಮವನ್ನು ವಿಸ್ತರಿಸಿದರೆ ಪ್ರಜಾಪ್ರಭುತ್ವ ಇನ್ನಷ್ಟು ಸದೃಢವಾಗಬಹುದು. ಮುಂದುವರಿದು ಗ್ರಾಮ
ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಎಲ್ಲರಿಗೂ ಆಯಾ ತಾಲೂಕು ಕೇಂದ್ರಗಳಲ್ಲಿ ಪಂಚಾಯತ್ ಸದಸ್ಯರುಗಳ ಕರ್ತವ್ಯಗಳು, ಜವಾಬ್ದಾರಿಗಳು ಮತ್ತು ಸರಕಾರದ ಯೋಜನೆಗಳ ಬಗ್ಗೆ ವಿಷಯಾಧಾರಿತ ಸ್ಪಷ್ಟ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವುದು ಸಮಂಜಸವೆನಿಸಲಿದೆ.
ಪ್ರಸಕ್ತ ಚುನಾವಣೆಯಲ್ಲಿ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ರೂಪಿಸಿರುವುದು ಶ್ಲಾಘನೀಯ. ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಆಧರಿಸಿ ಸ್ಪರ್ಧೆಗೆ ಅವಕಾಶ ಇಲ್ಲದೇ ಇರುವುದರಿಂದ ನೇರಾನೇರ ರಾಜಕೀಯ ಪೈಪೋಟಿಗೆ ಅವಕಾಶವಿಲ್ಲ. ಆದರೆ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಲ್ಲಿ ಸಹಜವಾಗಿ ಗುರುತಿಸಿಕೊಂಡಿರುವುದರಿಂದಾಗಿ ಆಯಾ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲುವುದರಿಂದ ಪರೋಕ್ಷವಾಗಿ ರಾಜಕೀಯ ಜಿದ್ದಾಜಿದ್ದಿಗೆ ಪಂಚಾಯ್ತಿ
ಚುನಾವಣೆ ಕಾರಣವಾಗಿದೆ.
ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ವಿದ್ಯಾರ್ಹತೆಯನ್ನು ನಿಗದಿಪಡಿಸಿಲ್ಲವಾದರೂ ಪಂಚಾಯ್ತಿ ವ್ಯವಸ್ಥೆಯ ಉದ್ದೇಶಗಳು, ಧ್ಯೇಯಗಳು ಸಾಕಾರಗೊಳ್ಳಲು ವಿದ್ಯಾವಂತರು ಚುನಾವಣೆಗೆ ಸ್ಪರ್ಧಿಸುವಂತೆ ಅಭ್ಯರ್ಥಿಯನ್ನು ಪರೋಕ್ಷವಾಗಿ
ಬೆಂಬಲಿಸುವ ಆಯಾ ರಾಜಕೀಯ ಪಕ್ಷಗಳು ನೋಡಿಕೊಳ್ಳಬೇಕು ಮತ್ತು ಸಂಬಂಧಪಟ್ಟ ಪಂಚಾಯ್ತಿ ವ್ಯಾಪ್ತಿಯ ಜನತೆ
ಈ ನಿಟ್ಟಿನಲ್ಲಿ ಆದ್ಯತೆ ನೀಡುವ ಬಗ್ಗೆ ಗಮನಹರಿಸಬೇಕು. ಗ್ರಾಮ ಪಂಚಾಯ್ತಿಗಳು ಕಸುಬಿಲ್ಲದವರಿಗೆ ಸಮಯ ಕಳೆಯುವ ರಾಜಕೀಯ ಆಶ್ರಯ ತಾಣವಾಗಬಾರದು.
ಇಲ್ಲವೇ ಅಂತಹ ವ್ಯಕ್ತಿಗಳಿಗೆ ಅವಕಾಶ ದೊರೆಯಬಾರದು. ಬದ್ಧತೆ, ಕೌಶಲ್ಯ, ಸೇವಾ ಮನೋಭಾವ, ಅಭಿವೃದ್ಧಿಯ ಚಿಂತನೆ ಮತ್ತು ಸಂಕಲ್ಪದ ಜತೆಗೆ ವಿದ್ಯಾರ್ಹತೆಯುಳ್ಳ ಸೂಕ್ತ ವ್ಯಕ್ತಿಗಳನ್ನು ಗ್ರಾಪಂ ಚುನಾವಣೆಯಲ್ಲಿ ಆರಿಸಬೇಕು. ಅಬ್ರಹಾಂ ಲಿಂಕನ್ ಹೇಳಿದಂತೆ ‘ಮತ ಪೆಟ್ಟಿಗೆ ಬುಲೆಟ್ ಗಿಂತಲೂ ಶಕ್ತಿಶಾಲಿ’ ಎಂಬುದನ್ನು ಅರಿತುಕೊಂಡು ಯೋಗ್ಯ ಅಭ್ಯರ್ಥಿಯನ್ನು ಚುನಾಯಿಸುವಲ್ಲಿ ವಿವೇಕತನ ತೋರುವ ಜವಾಬ್ದಾರಿ ನಮ್ಮ ಮೇಲಿದೆ.