ಅಲೆಮಾರಿಯ ಡೈರಿ
mehandale100@gmail.com
ಇದೆಂಥಾ ಅಂದ್ರಾ..? ಹೌದು ಇಂಥದ್ದೊಂದು ಸವಲತ್ತು ಅಥವಾ ಅವಕಾಶ ಕೆಲವು ಜನರಿಗೆ ಸಿಕ್ಕುತ್ತದೆ ಮತ್ತು ಅದು ಅನಿವಾರ್ಯವೋ, ಅವಕಾಶವೋ ಹಾಗೆಯೇ ಇತಿಹಾಸ ಸೃಷ್ಟಿಯಾಗುತ್ತಿರುತ್ತದೆ. ಅದರಲ್ಲೂ ಸರಹದ್ದುಗಳಲ್ಲಿ ರಾಜಕೀಯ ಬಡಿದಾಟ ಮತ್ತು ವೈಷಮ್ಯ ಇಲ್ಲದಿದ್ದರೆ ಮತ್ತು ಮಾನವ ಹಕ್ಕುಗಳ ಕಾಯ್ದುಕೊಳ್ಳುವಿಕೆಯೂ ಪ್ರಮುಖ ಅಂಶವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಮನಸ್ಥಿತಿ ರಾಜ ಪ್ರಭುತ್ವದಲ್ಲಿದ್ದರೆ ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಅದರ ಮನ್ನಣೆ ಹೆಚ್ಚೆ ಇರುವಾಗ ಎರಡೆರಡು ದೇಶದಲ್ಲಿ ಬದುಕುವ ಅಪರೂಪದ ಅವಕಾಶ ಲಭ್ಯ.
ಮಿಗಿಲಾಗಿ ಗಡಿ ಹಂಚಿಕೊಳ್ಳುವಾಗ ಎರಡು ದೇಶಗಳಲ್ಲಿ ರಾಜಕೀಯ ಮತ್ತು ಮಿಲಿಟರಿ ಸೌಹಾರ್ದ ಇದ್ದಾಗ, ಹೆಚ್ಚಿನ ಅಮಾಯಕ ನಾಗರಿಕರನ್ನು ಸರಹದ್ದಿನಿಂದ ಕದಲಿಸಿ ಅವರ ಜೀವನೋಪಾಯದ ಕೃಷಿ ಇತ್ಯಾದಿಗೆ ಅನುಕೂಲ ಇರುವ ಭೂಮಿ ಜನ-ಜಾಪತ್ರೆ ದನ ಕರು ಇತ್ಯಾದಿಗಳನ್ನು ಕಿತ್ತು ಕೊಂಡು ಅವರನ್ನು ಅಲ್ಲಿಂದ ಇನ್ನೆಲ್ಲಿಗೋ ಎತ್ತಾಕಿ ಅಬ್ಬೆಪಾರಿ ಯಾಗಿಸುವುದಿಲ್ಲ. ಅಷ್ಟರ ಮಟ್ಟಿಗೆ ಹಲವು ದೇಶಗಳು ಹೀಗೆ ಗಡಿಯ ವಿಷಯದಲ್ಲಿ ಹೊಂದಾಣಿಕೆ ಹೊಂದಿದ್ದು, ಕೆಲವೊಂದು ದೇಶಗಳ ಸರಹದ್ದು ನಗರದ ಮಧ್ಯೆ ಹಾಯ್ದು ಹೋಗುವಾಗ ಹೋಟೆಲಿನ ಆಚೀಚೆಯ ಮಗ್ಗುಲಿಗೆ ಲೆಕ್ಕಕ್ಕೆ ಬರುತ್ತದಲ್ಲ. ಅಲ್ಲೆಲ್ಲ ಹಳದಿ ಬಣ್ಣದ ಪಟ್ಟಿ ಹೊಡೆದು ಆ ದೇಶದ ಸರಹದ್ದನ್ನು ಗುರುತಿಸಿ ನೆಲದ ಮೇಲೆ ಹೆಸರು ಬರೆದು ಬಿಟ್ಟಿರುತ್ತಾರೆ.
ಹೊಟೇಲಿನ ಆಚೆ ಟೇಬಲ್ಲಿಗೆ ಕೂತರೆ ಒಂದು ದೇಶ, ಚಹ ಕುಡಿದು ತಿಂಡಿ ತಿಂದ ಬಿಲ್ ಕೊಡುವಾಗ ಇತ್ಲಾಗೆ ಬಂದರೆ ಇನ್ನೊಂದು ದೇಶ. ಇಲ್ಲೂ ಹೀಗೆಯೇ ಆಗಿದೆ: ಮನೆಯಿಂದ ಹೊರಗೆ ಬಿದ್ದರೆ ಈ ದೇಶದಲ್ಲಿ ವ್ಯವಹಾರ, ಮನೆಯ ಹಿಂದಕ್ಕೆ ಹೋದರೆ ಅತ್ತಲಿನ ದೇಶದ ನಾಗರಿಕತ್ವ, ಅಡುಗೆ ಮನೆಗೆ ಬಂದರೆ ಮತ್ತೆ ದೇಶ ಬದಲು, ಆಯ್ತು ಬಚ್ಚಲು ಮನೆಗೆ ಹೋದರೆ ಕರೆಕ್ಟಾಗಿ ಎರಡೂ ದೇಶದ ಸರಹದ್ದಿನ ಸೊಂಟದ ಮೇಲೆ ನಿಂತು ಗೌನು ಹಾಕಿ ಕೊಂಡು ಸ್ನಾನ ಮಾಡುತ್ತಿರುತ್ತಿರಿ. ಪುಣ್ಯಕ್ಕೆ ನಮ್ಮ ಕಡೆಗ್ಯಾಕೆ ಸಂಡಾಸು ಎಂದು ಯಾವ ದೇಶವೂ ತಕರಾರು ತೆಗೆದಿಲ್ಲದಿರುವುದು ಇಲ್ಲಿವರೆಗಿನ ಮತ್ತು ಆ ಊರಿನ ಮನೆಯವರ ಪುಣ್ಯ.
ಕಾರಣ ಬೇಕಿದ್ದರೆ ನಿಮ್ಮ ದೇಶದ ಕಡೆಗೆ ಹೊಲಸು ಇರಿಸಿಕೊಂಡು ನಮ್ಮ ಕಡೆನೇ ಅಡುಗೆ ಮನೆ ಕೊಡಿ ಎಂದೇನಾದರೂ ಕ್ಯಾತೆ ತೆಗೆದಿದ್ದರೆ ಆ ಮಟ್ಟಿಗೆ ಇಂಥದ್ದೊಂದು ಅಪರೂಪ ಮತ್ತು ವಿಭಿನ್ನತೆ ನಮಗೆ ದಕ್ಕುತ್ತಿರಲಿಲ್ಲ. ಕಾರಣ ಇದೆಲ್ಲ ಎಲ್ಲೋ ಆಗಿದ್ದು, ಆಗುತ್ತಿರುವುದಲ್ಲ. ನಮ್ಮದೆ ದೇಶದ ನಾಗಾಲ್ಯಾಂಡ್ ನ ಒಂದು ಊರು ಪಕ್ಕದ ಬರ್ಮಾದ ಜತೆಗೆ ಸರಹದ್ದು ಹಂಚಿಕೊಂಡಿದ್ದು, ಅದರ ಸರಹದ್ದಿನ ಗಡಿರೇಖೆ ಅನಾಮತ್ತಾಗಿ ಊರ ಮಧ್ಯೆ ಅದರಲ್ಲೂ ಮನೆಯ ಮಧ್ಯ ದಲ್ಲೇ ಹಾಯ್ದು ಹೋಗುವ ಕಾರಣ ಆ ಮನೆಯೀಗ ಎರಡೂ ದೇಶದ ಪೌರತ್ವಕ್ಕೆ ಒಳಪಟ್ಟಿದ್ದು ಅನುಕೂಲಕರ ಕಾನೂನು ಬಳಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಯಜಮಾನ ಜೋಯಿನ್ ಹೌನ್ಲೆ.
ಇದು ಲಾಂಗ್ವಾ ಊರಿನ ಕತೆ: ಈ ಊರಿನ ಜನರೂ ಎರಡೂ ದೇಶದಲ್ಲಿ ಸಂಚರಿಸುವ ಉಭಯಚರಿಗಳು ಎಂದರೂ ತಪ್ಪಿಲ್ಲ. ಇದು ಮ್ಯಾನ್ಮಾರ್ ಅಥವಾ ಬರ್ಮಾ ಎಂದು ಕರೆಯುವ ಪಕ್ಕದ ಸೌಹಾರ್ದ ದೇಶದ ಜತೆಗೆ ಗಡಿ ಹಂಚಿಕೊಂಡಿದ್ದು, ಈ ಊರು ಅನಾಮತ್ತಾಗಿ ಎರಡರ ಮಧ್ಯೆ ಪವಡಿಸಿದೆ. ಹಾಗಾಗಿ ಅದರ ಮಧ್ಯೆ ಎಳೆದ ಗಡಿಯ ಗೆರೆ ಅನೇಕ ಮನೆಗಳು, ಸ್ಥಳೀಯ ಅಂಗಡಿ ಹೋಟೇಲು ಸ್ಕೂಲು ಹೀಗೆ ಎಲ್ಲೆಲ್ಲೂ ಊರ ತುಂಬ
ಹಾಯ್ದು ಹೋಗಿದೆ. ಇತ್ತ ಬಂದರೆ ಭಾರತ ಅತ್ತ ಕಾಲಿಟ್ಟರೆ ಬರ್ಮಾ. ನಿಮಗೆ ಹಿತ ಅನ್ನಿಸಿದ ದೇಶದಲ್ಲಿ ಕೂತೆದ್ದು, ಮತ್ತೊಂದು ಕಡೆ ಮಲಗಿದರೂ ಕೇಳುವವರಿಲ್ಲ.
ಅಷ್ಟರ ಮಟ್ಟಿಗೆ ಕೊನ್ಯಾಕ್ ಕಡೆ ಪ್ರವಾಸಿಸುವ ಸಂದರ್ಶಕರು ಇದೊಂದೇ ಕಾರಣಕ್ಕೇ ಏನೂ ಇಲ್ಲದ ಈ ಹಳ್ಳಿಗೆ ಭೇಟಿ ಕೊಡುತ್ತಾರೆ. ಬರ್ಮಾದ ಬಾರ್ಡರ್ನಲ್ಲಿ ನೆಲ ಹಂಚಿಕೊಂಡಿರುವದರಲ್ಲೂ ವಿಶೇಷವಾಗಿ ಒಂದೆರಡು ಮನೆಗಳಂತೂ ಅಕ್ಷರಶ: ಸರಹದ್ದಿನ ಕುತ್ತಿಗೆಯ ಮೇಲೆ ಕೂತಂತಿವೆ. ಅಡುಗೆ ಮನೆ ಭಾರತದಲ್ಲಿದ್ದರೆ ಡೈನಿಂಗ್ ಹಾಲ್ ಬರ್ಮಾದಲ್ಲಿದೆ. ಅದಕ್ಕೆ ಹೇಳಿದ್ದು ಇತ್ಲಾಗೆ ಅಡುಗೆ ಮನೆ ಅತ್ಲಾಗೆ ಊಟದ ಕೋಣೆ ಎಂದು.
ನಾಗಾಲ್ಯಾಂಡ್ನ ಸೋಮ ಜಿಲ್ಲೆಯ ಕೋನ್ಯಾಕ್ದಲ್ಲಿನ ಈ ಹಳ್ಳಿ ಲಾಂಗ್ವಾ ಕುತೂಹಲದಿಂದಾಗೇ ಆಕರ್ಷಿಸುತ್ತಿದೆ. ಈಗ ಅತ್ತ ಪ್ರವಾಸಕ್ಕೆ ಹೋದವರು ವಿಭಿನ್ನ ಕುತೂಹಲದಿಂದ ಇಣುಕಿ ಬರುವ ಕಾರಣ ಊರಿನ ಸಣ್ಣ ಆದಾಯಕ್ಕೂ ಕಾರಣವಾಗಿದೆ. ಜನ ಅದಕ್ಕಾಗಿ ಖುಷಿ ಕೂಡಾ ಆಗಿದ್ದಾರೆ. ಹೆಚ್ಚಾಗಿ ನಾಗಾ ಬುಡಕಟ್ಟಿನ ನಿರ್ದಿಷ್ಟ ಜನಾಂಗದ ಗುಂಪುಗಳೇ ಊರಲ್ಲಿದ್ದು, ವಿಪರೀತ ಎನ್ನುವಷ್ಟು ಹಚ್ಚೆ ಹಾಕಿಸಿಕೊಂಡ, ಸಾಂಪ್ರದಾಯಿಕ ಶೈಲಿಯ ನಾಗಾ ಜನರು ಎಲ್ಲೆಲ್ಲೂ ಸಿಕ್ಕುತ್ತಾರೆ. ಬರುವ ಪ್ರವಾಸಿಗರಿಗಾಗಿ ನಾಗಾಗಳ ಅಚ್ಚ ಸಾಂಪ್ರಾದಾಯಿಕ ದಿರಿಸಿನಲ್ಲೇ ಟೀ
ಶಾಪು ನಡೆಸುವ, ಕಬ್ಬಿನ ರಸದ ಅಂಗಡಿ ತೆಗೆದಿರುವ, ಅಲ್ಲಲ್ಲಿ ಹೋಮ್ ಸ್ಟೇ ಮಾದರಿಯ ಮನೆಯಲ್ಲೇ ವಸತಿ ಊಟ ಒದಗಿಸುವ ಹಲವರು ದೂರದಲ್ಲೆಲ್ಲೋ ಹಾಯ್ದು ಹೋದ ಲೈನು ನಮ್ಮ ಮನೆಯಲ್ಲೊ ಹಾಯ್ದು ಹೋಗಿದೆ ಎಂದು ಅಲ್ಲಲ್ಲಿ ಹಳದಿ ಪಟ್ಟಿಯನ್ನು ಬರೆದಿರಿಸಿಕೊಂಡಿರುವವರೂ
ಇದ್ದಾರೆ. ಅದರ ಮೇಲೆ ನಿಲ್ಲಿಸಿ ಫೋಟೊ ತೆಗೆದು ಕಳಿಸುತ್ತಾರೆ.
ನೈಜವಾದ ಮತ್ತು ಸರಹದ್ದು ಎಂದು ದಾಖಲೆ ಗುರುತಿಸಿರುವ ರೇಖೆ ಊರ ಮಧ್ಯೆ ಹಾಯ್ದರೂ ಒಂದೆರಡು ಮನೆಗಳು ಮಾತ್ರ ಇವರೆಡೂ ಸರಹದ್ದನ್ನು ಹಂಚಿಕೊಂಡಿದ್ದು ಹೌದು. ಬಾಕಿ ಎಲ್ಲ ಸ್ವಲ್ಪ ಮಟ್ಟಿಗೆ ಟೂರಿಸಂ ಅಟ್ರಾಕ್ಷನ್ನೆ ಹೊರತು ಬೇರೇನಲ್ಲ. ಸೋಮ ಜಿಲ್ಲೆ ಇದೆ ಎನ್ನುವುದೇ ಎಷ್ಟೋ ಜನಕ್ಕೆ
ಗೊತ್ತಿಲ್ಲದ, ಈ ಊರು ಈಗ ಇದರಿಂದಾಗಿ ಎಲ್ಲೆಡೆ ಚರ್ಚೆಗೆ ಬರುತ್ತಿದೆ.
ರಸ್ತೆ ಪ್ರಯಾಣವೂ ಸುಲಭ ಸಾಧ್ಯ ಇರುವ ಈ ಭಾಗದಲ್ಲಿ, ಡೊಯಾಂಗ್ ನದಿ ಆಪ್ತ ಆಪ್ತ ವಿಹರಿಸಲು. ಸ್ಥಳೀಯರು ಪ್ರವಾಸಿಗರಿಗೆ ಸಣ್ಣ ದೊಡ್ಡ ದೋಣಿಗಳನ್ನೂ ಒದಗಿಸುವುದರ ಮೂಲಕ ನದಿಯಲ್ಲಿ ವಿಹಾರದ ಅವಕಾಶ ಮಾಡಿಟ್ಟಿದ್ದು ನಿಮ್ಮ ನಿಮ್ಮ ರೇಟು ಕುದುರಿಸುವ ತಾಕತ್ತಿನ ಮೇಲೆ ರೇಟು
ನಿಗದಿತವಾಗುತ್ತದೆ. ಆದರೂ ಶುದ್ಧ ಸ್ಪಟಿಕದಂತಹ ನೀರಿನ ವಿಶಾಲ ನದಿಯ ಸಮಪಾತಳಿಯ ತಳದಲ್ಲಿನ ಬಣ್ಣದ ಕಲ್ಲುಗಳು ಎದ್ದುಕಾಣುವಂತೆ, ಉದ್ದಾನು ಉದ್ದದ ಸಣ್ಣ ದೊಣಿಗಳು ಬಣ್ಣ ಬಣ್ಣದ ರಂಗಿನಲ್ಲಿ ಫೋಟೊಗೆ ಹೇಳಿ ಮಾಡಿಸಿದ ಪೋಸು ಕೊಡುತ್ತಿರುತ್ತವೆ. ಸಿಲೇಯಿ ಎನ್ನುವ ದೊಡ್ಡದಾದ ಕೆರೆ ಸರಹದ್ದಿನ ಮತ್ತೊಂದು ಪಾಲುದಾರಿಕೆಯ ಬಾಬತ್ತಿನಲ್ಲಿದೆ. ಅತ್ತ ಬರ್ಮಾಗೆ ಇಳಿಯುವ ಇತ್ತ ಭಾರದಲ್ಲೂ ಈಜಬಹುದಾ ಸಿಲೋಯಿ ಅತಿ ದೊಡ್ಡ ಸರೋವರ.
ಸಂಜೆಯ ಹೊತ್ತಿಗೆ ಸ್ಥಳೀಯವಾಗಿ ಹಲವು ಆಮದಾದ ಸಾಮಾನು ಮಾರುವ ಹಾಂಗ್ಕಾಂಗ್ ಮಾರ್ಕೆಟು ಪ್ರವಾಸಿಗರ ಆಕರ್ಷಕ ತಾಣವೂ ಹೌದು.ಅಕ್ಟೊಬರ್ನಿಂದ ಮಾರ್ಚ್ವರೆಗೆ ಹಕ್ಕಿ ಪಕ್ಕಿ ವಿಕ್ಷಕರ, ದಂಡೆಗೆ ಕೂತು ಆಕಾಶಕ್ಕೆ ಬೈನಾಕ್ಯೂಲರ್ ಒಡ್ಡಿ ನಕ್ಷತ್ರ ಹುಡುಕುವ, ರಾತ್ರಿ ಕಾವಳದಲ್ಲಿ ಸರೋವರದ ದಂಡೆಗೆ ಟೆಂಟು ಹಾಕುವ ಪ್ರವಾಸಿಗರ ಕೂಚು ದೊಡ್ಡ ಮಟ್ಟದಲ್ಲಿ ದಾಂಗುಡಿ ಇಡುತ್ತಿದೆ. ಪ್ರವಾಸೋದ್ಯಮದ ನೆಪದಲ್ಲಿ ಸ್ಥಳೀಯ ಆಡಳಿತ ವಿಶಾಲ ರಸ್ತೆಗಳನ್ನೂ ಕಲ್ಪಿಸಿದೆ.
ಚಾರಣಿಗರಿಗೆ ಆಪ್ತವಾಗುವ ವೇದ ಪರ್ವತ ಆಯಕಟ್ಟಿನ ಜಾಗದ್ದಲ್ಲಿದ್ದು ಅಕಸ್ಮಾತ್ ಪೂರ್ತಿ ಏರಿ ನಿಂತಾಗ ವಾತಾವರಣ ಚೆನ್ನಾಗಿದ್ದರೆ ಅಗಾಧವಾದ ಲಾಂಗ್ವಾ ಮತ್ತು ಬರ್ಮಾ ಸೇರಿದ ಸರಹದ್ದಿನ ದೊಡ್ಡ ನೋಟ ನಿಲುಕುತ್ತದಲ್ಲ, ಅದರಷ್ಟು ದೊಡ್ಡ ದೃಶ್ಯ ಇನ್ನೊಂದಿರಲಿಕ್ಕಿಲ್ಲ. ಅದರಲ್ಲೂ ಸ್ವಚ್ಛ ಸುಂದರ ವಾತಾವರಣ ಇದ್ದರೆ ಹೇಗಾದರೂ ವೇದ ಪರ್ವತ ಏರಿ ಒಮ್ಮೆ ಪಕ್ಷಿ ನೋಟ ಹರಿಸಲೇಬೇಕು. ಇದರ ಕೆಳಗಿಳಿದು ಪಕ್ಕಕ್ಕೆ ಅರ್ಧ ಕಿ.ಮೀ. ಕ್ರಮಿಸಿದರೆ ದೊಡ್ಡದಾದ ಶಿಲಾ ರಚನೆಗಳ ಶ್ಯಾಂಗೂ ಗ್ರಾಮವಿದೆ. ಹೆರಿಟೇಜ್ ಎಂದು ಯಾಕೋ ಇದರ ರಕ್ಷಣೆಗೆ ಇಳಿದದ್ದು ಕಾಣಿಸಲಿಲ್ಲ. ಆದರೆ ಹತ್ತಾರು ಕಡೆಗಳಲ್ಲಿ ಹರಡಿರುವ ಶಿಲಾ ರಚನೆಗಳಿಗೆ ಇತಿಹಾಸ ದ್ಯೋತಕವಾಗಿರುವ ಅಗಾಧ ರಚನೆಗಳು, ಕಲ್ಲಿನ ನಿರ್ಮಾಣದ ಪಳಿಯುಳಿಕೆಗಳು ಹೀಗೆ ಈ ಕಲ್ಲಿನ ಗ್ರಾಮ ಚೆಂದ ಚೆಂದ ಚಿತ್ರ ತೆಗೆದುಕೊಳ್ಳುವುದಕ್ಕೆ ಹೇಳಿ ಮಾಡಿಸಿದಂತಿದೆ.
ಇದರ ಇತಿಹಾಸ ಐನೂರು ವರ್ಷಕ್ಕೂ ಹಿಂದಿನದ್ದು ಎನ್ನುತ್ತಾರೆ, ಇರಬಹುದೇನೋ ಪಾಳು ಬಿದ್ದ ಸ್ಥಿತಿ ನೋಡಿದರೆ. ಇಲ್ಲೆಲ್ಲ ಜೋಡಿಸಿಡಲಾದ ಮಾನವ ತಲೆ ಬುರುಡೆಗಳು, ಎಲುಬಿನಿಂದ ಮಾಡಿದ ಕಲಾಕೃತಿಗಳು, ಮನೆಯ ವಸ್ತುಗಳು ಹೀಗೆ ವಿಭಿನ್ನ ವಸ್ತುವಿನಿಂದ ಮಾಡಿರುವ ಅದರಲ್ಲೂ ಮಾನವ ಬುರುಡೆಯ ವಸ್ತುಗಳು ದೊಡ್ಡ ಮಟ್ಟದ ಕಲೆಕ್ಷನ್ನು ಸರಹದ್ದಿನ ಊರಿಗೆ ಜನರನ್ನು ಬರುವಂತೆ ಮಾಡುತ್ತಿದ್ದು, ಲಾಂಗ್ವಾ ಕೆಲವೇ ವರ್ಷ
ಗಳಲ್ಲಿ ಆರ್ಥಿಕವಾಗಿ ಚೇತರಿಸಿಕೊಳ್ಳಲು ಪ್ರವಾಸೋದ್ಯಮ ಕಾರಣವಾಗುತ್ತಿದೆ.
ಗವಾಹುಟಿ, ದಿಬ್ರುಗಡ, ಶಿಲ್ಲಾಂಗ್, ಇಂಫಾಲ, ಸಿಲಗುರಿ ಹೀಗೆ ಎಲ್ಲೆಡೆಯ ಪ್ರಮುಖ ನರಗಗಳಿಂದ ರಸ್ತೆ ಸೌಲಭ್ಯಕ್ಕೆ ದಕ್ಕುವ ಲಾಂಗ್ವಾ ಬರ್ಮಾಕ್ಕೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಯೂ ಆಗಬಹುದಾದ ಸಾಧ್ಯತೆಗೆ ತೆರೆದುಕೊಳ್ಳುತ್ತಿದೆ. ಬೋಜ್ ರೈಲು ನಿಲ್ದಾಣ ಕೇವಲ ಎಂಬತ್ತು ಕಿ.ಮೀ ದೂರದ
ಲ್ಲಿದ್ದು ಎಲ್ಲ ಲೈನ್ ಗಳ ಜೊತೆಗೆ ಇದು ಸಂಪರ್ಕ ಹೊಂದಿದೆ. ಅರುಣಾಚಲ ಪ್ರದೇಶ, ಆಸ್ಸಾಂ ಸೇರಿದಂತೆ ಮಣಿಪುರಕ್ಕೂ ಸಂಪರ್ಕ ಇರುವ ಕಾರಣ ಇಲ್ಲೆಲ್ಲ ಭೇಟಿಗೆ ಬರುವ ಪ್ರವಾಸಿಗರು ಇದು ಬಾರ್ಡರ್ ಮೇಲಿರುವ ಊರು ಎಂದು ಸಣ್ಣ ಕುತುಹಲದಿಂದ ಲಾಂಗ್ವಾಕ್ಕೆ ಒಂದಿನದ ಉಳಿಸಿಕೊಳ್ಳುತ್ತಾರೆ.
ಆದರೆ, ಕಾಲಿಟ್ಟ ಮೇಲೆ ಅಕ್ಕಪಕ್ಕದ ಗ್ರಾಮ, ವೇದಪರ್ವತ ನದಿ ಸರೋವರ ಎನ್ನುತ್ತ ಎರಡು ದಿನಗಳಾದರೂ ಇರಿಸಿಕೊಳ್ಳಬೇಕಿತ್ತು ಎಂದುಕೊಳ್ಳು ತ್ತಾರೆ. ತುಂಬ ವ್ಯವಸ್ಥಿತ ಎಂದಿಲ್ಲ ದಿದ್ದರೂ ಪೆಯಿಂಗ್ ಗೆಸ್ಟ್ಗಳಿಗಾಗಿ ಒಂದೆರಡು ಮನೆಗಳನ್ನು ಪರಿವರ್ತಿಸಿ ಪ್ರವಾಸಿಗರ ಆಕರ್ಷಿಸುವ ಪ್ರಯತ್ನ ಗಂಭೀರ ಜಾರಿ ಇದೆ. ತಣ್ಣಗಿನ ಈಶಾನ್ಯದ ಬಯಲಿನ ಪ್ರಕೃತಿ, ಚಾರಣ, ಕುತೂಹಲ ಇವೆಲ್ಲ ಮೇಳೈಸಿಕೊಂಡು ಹೋಗುವುದಾದರೆ ಲಾಂಗ್ವಾಗೆ ಹೋಗಿಬನ್ನಿ. ಕಡಿಮೆ ಖರ್ಚಿನಲ್ಲಿ ಲಾಂಗ್ವಾದ ಹಾಂಗ್ಕಾಂಗ್ ಮಾರ್ಕೆಟ್ ಮ್ಯಾನ್ಮಾರ್ ದರದಲ್ಲಿ ವಸ್ತುಗಳನ್ನು ಪೂರೈಸುತ್ತದೆ. ಬಾರ್ಡರ್ ರೋಡ್ ಪರ್ಮಿಶನ್ನ್ನು ಕೆಳಗೇ ಚೆಕ್ ಪೋಸ್ಟಿನಲ್ಲಿ ಒದಗಿಲಾಗುತ್ತದೆ. ಸರಹದ್ದಿನ ಊರೊಮ್ಮೆ ಸಲೀಸಾಗಿ ಕೈಗೆಟುಕುವಂತಿದೆ.
Read E-Paper click here