Friday, 20th September 2024

ಗೊಂದಲದ ಗೂಡಾಗುತ್ತಿದೆ ಕರೋನಾ ಚಿಕಿತ್ಸೆಯ ರೋಗ ನಿರ್ಣಯ

ಕರೋನಾ ರೋಗ ನಿರ್ಣಯ ಅಂದ ಕೂಡಲೇ ಕರೋನಾ ಸೋಂಕಿನ ಪರೀಕ್ಷೆಯ ಬಗ್ಗೆ ಹೇಳಿದ್ದೆಂದು ಭಾವಿಸಬೇಡಿ. ವಿಷಯ ಅದಲ್ಲ. ಇದು ಕರೋನಾ ಸಾಂಕ್ರಾಮಿಕದ ಚಿಕಿತ್ಸೆಗೆ ಸಂಬಂಧಿಸಿದ ರೋಗದ ನಿರ್ಣಯ.

ಅಥವಾ Diagnosis of Corona Treatment. ಇದೇನು ವಿಚಿತ್ರ ವಾದ ಎನ್ನುತ್ತಿರಾ. ನೋಡಿ: ಕೆಲವರು ಕರೋನಾ ಒಂದು ಭಯಂಕರ ಸಾಂಕ್ರಾಮಿಕ ಎಂದರೆ ಇನ್ನೂ ಕೆಲವರು ಅದು ರೋಗವೇ ಅಲ್ಲ ಎಂದರು. ಈ ವಾದಗಳಲ್ಲಿ ಸತ್ಯವೂ
ಇದೆ, ಅವಾಸ್ತವವೂ ಇದೆ. ರೋಗ ನಿರೋಧಕ ಶಕ್ತಿ ಇರುವವರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ – ಇದು ಕೆಲವರ ವಾದ. ಹೌದು, ಇನ್ನೂ ಯಾವುದೇ ನಿರ್ದಿಷ್ಟ ಲಸಿಕೆಯಾಗಲೀ ಅಥವಾ ಔಷಧಿಯಾಗಲೀ ಆವಿಷ್ಕಾರವಾಗದೆ ಇದ್ದರೂ, ಸೋಂಕು ದೃಢಪಟ್ಟವರಲ್ಲಿ ಶೇ.75ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗುತ್ತಿರುವುದು ಇಂತಹ ವಾದಕ್ಕೆ ಪುಷ್ಠಿ ಕೊಡುತ್ತದೆ. ಅದೇ ವೇಳೆ, ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮತ್ತು ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುತ್ತದೆ, ಬೇರೆ ವಯೋಮಾನದವರಲ್ಲಿ ಅದು ಬಲಿಷ್ಠವಾಗಿರುತ್ತದೆ, (ದುರಭ್ಯಾಸ ಇರುವವರನ್ನು ಹೊರತುಪಡಿಸಿ) ಇಲ್ಲೂ ಗೊಂದಲ ಮೂಡಿಸುವ ವಿಷಯವೆಂದರೆ, ಶತಕದ ಅಂಚಿನಲ್ಲಿರುವವರು ಆರಾಮವಾಗಿ ಆಸ್ಪತ್ರೆೆಯಿಂದ ಹೊರಗೆ ಬಂದರೆ ನಡು ವಯಸ್ಸಿನವರು ಮೃತಪಟ್ಟ ಉದಾಹರಣೆಗಳೂ ಇವೆ.

ಇದೆಲ್ಲವನ್ನು ಸೂಕ್ಷ್ಮವಾಗಿ ನೋಡಿದರೆ, ರೋಗ ನಿರೋಧಕ ಶಕ್ತಿಯಿರು ವವರು ಎನ್ನುವುದಕ್ಕಿಂತಲೂ, ಯಾವುದೇ ಗಂಭೀರವಾದ ಕಾಯಿಲೆ ಇಲ್ಲದವರು ಎಂದರೆ ಹೆಚ್ಚು ಸಮಂಜಸ. ಹಾಗಾದರೆ ಸಣ್ಣ ವಯಸ್ಸಿನವರು ಸಾಯುವುದಕ್ಕೆ ಕಾರಣವೇನಿರಬಹುದು? ಯಾರಿಗೆ ಗೊತ್ತು ಅವರಿಗೆ ಯಾವುದಾದರೂ ಅಭ್ಯಾಸವೋ, ಗುರುತಿಸದೇ ಇದ್ದ, ಅಂತರ್ಗತವಾದ ಕಾಯಿಲೆಯೋ ಇದ್ದಿದ್ದರೆ? ಇದೆಲ್ಲವನ್ನೂ ಗಮನಿಸಿದರೆ, ಕರೋನಾ ಮೂಲತಃ ಒಂದು ಕಾಯಿಲೆಯಲ್ಲ ಎನ್ನುವ ವಾದವೇ ಸರಿ ಇರಬಹುದೆಂದು ಅನ್ನಿಸುತ್ತದೆ.

ಇದೆಲ್ಲದಕ್ಕಿಂತಲೂ ಈ ಸಾಂಕ್ರಾಮಿಕದ ಮೂಲ ಗೊತ್ತಿದ್ದರೂ, ಅದನ್ನು ಮೊತ್ತ ಮೊದಲು ವಿಶ್ವ ಆರೋಗ್ಯ ಸಂಸ್ಥೆಯಂಥ ಸರ್ವೋಚ್ಛ ಪ್ರಾಧಿಕಾರವೇ ಲಘುವಾಗಿ ಪರಿಗಣಿಸಿದ ಕಾರಣಕ್ಕೆ ಸಮಸ್ತ ವಿಶ್ವವೇ ಇಂದು ಇಷ್ಟು ದೊಡ್ಡ ಸಂಕಟ ಅನುಭವಿಸು ವಂತಾಗಿದೆ ಎಂಬ ವಾದ – ವಿವಾದಗಳು ಒಂದೆಡೆಯಾದರೆ, ಇಂದಿಗೂ ವಿಶ್ವ ಆರೋಗ್ಯ ಸಂಸ್ಥೆಯು ದಿನಕ್ಕೊಂದು, ಕ್ಷಣಕ್ಕೊಂದು ಹೇಳಿಕೆ ನೀಡುವ ಮೂಲಕ ಸಮಗ್ರ ಆರೋಗ್ಯ ವ್ಯವಸ್ಥೆಯನ್ನೇ ಕುಲಗೆಡಿಸುತ್ತಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ತುಪ್ಪ ಸುರಿದಂತೆ ಮಾಧ್ಯಮಗಳು, ಜಾಲತಾಣಗಳು, ಪೈಪೋಟಿಗೆ ಬಿದ್ದಂತೆ ಗೊಂದಲಮಯವಾದ ಹೇಳಿಕೆಗಳನ್ನು ಪ್ರಚಾರ ಮಾಡು ತ್ತಿವೆ. ಉದಾಹರಣೆಗಳನ್ನು ನೋಡಿ. ಸೋಂಕು ಇರುವವರು ಕೆಮ್ಮುವಾಗ ಅಥವಾ ಸೀನುವಾಗ ಸಿಡಿಯುವ ಹನಿಗಳಲ್ಲಿ ಇರುವ, ಇರಬಹುದಾದ ವೈರಾಣು ಇನ್ನೊಂದು ಆರೋಗ್ಯವಂತ ವ್ಯಕ್ತಿಯ ದೇಹವನ್ನು ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಸೇರಿ, ಸೋಂಕಿನ ಪ್ರಸರಣವಾಗುತ್ತದೆ, ಆದ್ದರಿಂದ ಮುಖಗವಸು ಕಡ್ಡಾಯ ಎನ್ನಲಾಯಿತು.

ಸರಿ ಕೆಲವರು ಅದನ್ನು ಉಪಯೋಗಿಸಿದರು, ಇನ್ನೂ ಕೆಲವರು ಧರಿಸದೆ ಊರೆಲ್ಲಾ ಓಡಾಡಿದರು, ಕೇಳಿದರೆ ನನಗೆ ಯಾವ ರೋಗ ಲಕ್ಷಣಗಳೂ ಇಲ್ಲ, ಆದ್ದರಿಂದ ಧರಿಸುವ ಅಗತ್ಯವಿಲ್ಲ ಎಂದರು. ಅದನ್ನು ಸಮರ್ಥಿಸುವ ವೀಡಿಯೊಗಳು ಜಾಲತಾಣಗಳಲ್ಲಿ ಹರಿದಾಡ ತೊಡಗಿ, ಅದನ್ನೇ ನಂಬಿ ಹಲವಾರು ಬಿಂದಾಸ್ ಓಡಾಡಿದರು.

ಆಗ ಬಂತು ಇಲಾಖೆಯ ಪ್ರಕಟಣೆ: ಲಕ್ಷಣಗಳು ಇಲ್ಲವೆಂದ ಮಾತ್ರಕ್ಕೆ ರೋಗವಿಲ್ಲವೆಂದರ್ಥವಲ್ಲ. ರೋಗ ನಿರೋಧಕ ಶಕ್ತಿಯ ಕಾರಣದಿಂದ ಲಕ್ಷಣಗಳು ಗೋಚರಿಸದಿದ್ದರೂ ರೋಗ ಪ್ರಸರಣದ ಸಾಧ್ಯತೆ ಇರುತ್ತದೆ, ಆದ್ದರಿಂದ ಮುಖಗವಸು ಧರಿಸುವುದು ಕಡ್ಡಾಯ. ಇದರ ಹಿಂದಿನಿಂದ ಇನ್ನೊಂದು ಸುದ್ದಿ ಬಂತು. ಅದೇನೆಂದರೆ, 32 ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದಲ್ಲಿ ಕಂಡುಬಂದಂತೆ, ವೈರಾಣು ಗಾಳಿಯಲ್ಲಿ ಪ್ರಸರಣವಾಗುತ್ತದಂತೆ, ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೂ ದೃಢೀಕರಿಸಿತು. ಮತ್ತೊಮ್ಮೆ ಬಿರುಗಾಳಿ. ಪರ ವಿರೋಧಿ ಚರ್ಚೆಗಳು – ಗಾಳಿಯಲ್ಲಿ ಹರಡುವುದಾದರೆ ಜಗತ್ತಿನ ಜೀವಜಂತು ಗಳೆಲ್ಲವೂ ನಾಶವಾಗಬೇಕಿತ್ತು ಎಂದೆಲ್ಲಾ ಹೇಳಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯಿಂದ ಸ್ಪಷ್ಟೀಕರಣ ಬಂತು. ಅದೇನೆಂದರೆ,
ಸೋಂಕಿತ ಸೀನಿದ ಅಥವಾ ಉಗುಳಿದ ಹನಿ ಗಾಳಿಯಲ್ಲಿ ತೇಲಾಡಿ ಇನ್ನೊಂದು ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ ವಿನಃ ವೈರಾಣು ಸ್ವತಂತ್ರವಾಗಿ ಹಾರಾಡುವುದಿಲ್ಲ.

ಅಂದರೆ ಮೊದಲು ಹೇಳಿದ್ದು ‘ಅಳಿಯ’ ಈಗ ಹೇಳಿದ್ದು ಮಗಳ ಗಂಡ! ಇನ್ನೊಂದೆಡೆ ವಿಶ್ವದಾದ್ಯಂತ ಲಸಿಕೆ ಮತ್ತು ಔಷಧ ತಯಾರಿಗೆ ಸಂಶೋಧನೆಗಳು ಸಮರೋಪಾದಿಯಲ್ಲಿ ನಡೆದು, ರಷ್ಯಾದ ಲಸಿಕೆ ಬಂದೇ ಬಿಟ್ಟಿತೆಂದು ಪ್ರಚಾರ ಮಾಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ರಷ್ಯಾ ನಿಗದಿತ ಮಾನದಂಡಗಳಂತೆ ಮಾಡದಿರುವುದರಿಂದ ಅದನ್ನು ಉಪಯೋಗಿಸದಂತೆ ಎಚ್ಚರಿಕೆ ನೀಡಿದ್ದೂ ಆಯಿತು. ಆದರೂ ಭಾರತವೂ ಸೇರಿ ಕೆಲವು ದೇಶಗಳು ಲಸಿಕೆಯನ್ನು ಉಪಯೋಗ ಮಾಡುವತ್ತ ಮುಂದುವರಿದವು.
ಆಗ ಇನ್ನೊಂದು ಸುದ್ದಿ ಹೊರಟಿತು – ಅದೇ – ಲಸಿಕೆ ತೆಗೆದು ಕೊಂಡರೂ ಅದು ಶಾಶ್ವತ ಪರಿಹಾರವಲ್ಲ, ಲಸಿಕೆಯು ದೇಹದಲ್ಲಿ ಉತ್ಪಾದಿಸುವ ಪ್ರತಿಕಾಯಗಳ ಆಯುಸ್ಸು ಕೆಲವೇ ತಿಂಗಳು ಮಾತ್ರವಂತೆ!

ಒಂದು ಸಂಶೋಧನೆಯಲ್ಲಿ ವೈರಾಣುವಿನ ಜೀವಿತಾವಧಿ ಕೆಲವೇ ಗಂಟೆ ಮಾತ್ರ, ಅಷ್ಟರಲ್ಲಿ ಅದು ಇನ್ನೊಂದು ದೇಹಕ್ಕೆ ಸೇರಿ ಅಲ್ಲಿರುವ ಪ್ರೋಟಿನ್ ಬಳಸಿಕೊಂಡು ಬೆಳೆದರೆ ಮಾತ್ರ ಸೋಂಕು ಪಸರಿಸುತ್ತದೆಂದು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ, ಇಂತಹ ದೊಂದು ಹೇಳಿಕೆ ನೀಡಿ ಮುಗಿಸುವಷ್ಟರಲ್ಲಿ ಅದು ನೀರಿನ ಮೂಲಕವೂ, ಶೌಚಾಲಯ ಮೂಲಕವೂ ಹರಡುತ್ತದೆ ಎಂಬ ಹೇಳಿಕೆ ನೀಡುತ್ತದೆ.

ಇದೆಲ್ಲವೂ ಅಂತಾರಾಷ್ಟ್ರೀಯ ಮಟ್ಟದ ಪ್ರಹಸನ ಗಳಾದರೆ, ದೇಶೀಯವಾಗಿ, ರಾಜ್ಯ, ಜಿಲ್ಲೆಗಳ ಮಟ್ಟದಲ್ಲಿ ಬೇರೆ ಬೇರೆ ರೀತಿಯ ಪ್ರಹಸನಗಳು ನಡೆಯುತ್ತಿದೆ. ವೈದ್ಯಕೀಯ ಸಿಬ್ಬಂದಿ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಸೀಮಿತ ಸೌಲಭ್ಯಗಳೊಂದಿಗೆ, ಕಾಲ ಕಾಲಕ್ಕೆ ಬದಲಾಗುವ ಸರಕಾರದ ನಿರ್ದೇಶನಗಳ ಪರಿಧಿಯಲ್ಲಿ ಸೋಂಕು ಪತ್ತೆ, ಚಿಕಿತ್ಸೆ ಮತ್ತಿತರ ಕಾರ್ಯಗಳಲ್ಲಿ ಹಗಲಿರುಳು ದುಡಿಯುತ್ತಿದ್ದರೆ, ಆರಕ್ಷಕ ಇಲಾಖೆ ಹಾಗೂ ಸಂಬಂಧಿಸಿದ ಇತರ ಕೆಲವು ಇಲಾಖೆಯ ಸಿಬ್ಬಂದಿಗಳು ಅವರಿಗೆ ಸಹಕರಿಸುತ್ತಿದ್ದಾರೆ. ಸರಕಾರಿ ವಲಯದ ಆಸ್ಪತ್ರೆ ಮತ್ತು ಇತರ ಇಲಾಖೆಗಳಲ್ಲಿ ತೀವ್ರ ಕೊರತೆಯಿದ್ದರೂ ಲಭ್ಯ ಸಿಬ್ಬಂದಿ ಗಳೊಂದಿಗೆ, ವಿಪರೀತ ಒತ್ತಡದೊಂದಿಗೆ ಕೆಲಸ ನಿರ್ವಹಿಸುತ್ತಿದ್ದರೆ, ಖಾಸಗಿ ಆಸ್ಪತ್ರೆಗಳ ಆಡಳಿತ ಕೈಲಾದಷ್ಟು ವಸೂಲಿ ಮಾಡುವಲ್ಲಿ, ಸರಕಾರಿ ಅಧಿಕಾರಿಗಳು ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿ ತಮ್ಮ ಖಜಾನೆ ತುಂಬಿಸಿ ಕೊಳ್ಳುವಲ್ಲಿ, ವಿಪಕ್ಷಗಳು ಕಾಲೆಳೆಯುವುದರಲ್ಲಿ, ರಾಜಕಾರಣಿಗಳು, ಜನನಾಯಕರ ಜತೆಗೆ ಸ್ವಯಂಘೋಷಿತ ಸಮಾಜ ಸೇವಕರು, ಕರೋನಾ ನಿರ್ವಹಣೆಯಲ್ಲಿ ಅವಿರತ ಶ್ರಮಿಸುತ್ತಿರುವವರಿಗೆ ಅಸಹಕಾರ ನೀಡುವ, ಹಲ್ಲೆ ನಡೆಸುವ, ಗೊಂದಲ ಎಬ್ಬಿಸುವ, ಅಡಚಣೆ ತಂದಿಡುವ ಮೂಲಕ ತಮ್ಮ ಕೈಲಾದ(?) ಕೊಡುಗೆ ನೀಡುತ್ತಿದ್ದಾರೆ!

ಸೋಂಕು ದೃಢಪಟ್ಟ ವರದಿಗಳಲ್ಲೂ ಗೊಂದಲ, ವಸ್ತುಸ್ಥಿತಿ ಏನೆಂಬುದರ ಯುಕ್ತಾಯುಕ್ತ ವಿವೇಚನೆ ನಡೆಸದೇ ಮಾಧ್ಯಮಗಳಲ್ಲಿ ಬಣ್ಣಕಟ್ಟಿ ಸರಕಾರದ, ವೈದ್ಯರ, ಜಿಲ್ಲಾಡಳಿತದ ವಿರುದ್ಧ ತೇಜೋವಧೆಯ ವರದಿಗಳ ಮಹಾಪೂರವೇ ಹರಿಯುತ್ತದೆ. ಸತ್ಯವೇನೆಂದು ತಿಳಿದ ಬಳಿಕ ಕೇವಲ ವೈದ್ಯರೊಂದಿಗೆ ಅಥವಾ ಸಂಬಂಧಪಟ್ಟ ಇತರರೊಂದಿಗೆ ಖಾಸಗಿ ಕ್ಷಮಾಯಾಚನೆಯಲ್ಲಿ ಮುಗಿಸಿ ಬಿಡುತ್ತಾರೆ. ಅಧಿಕಾರಿ ಅಥವಾ ವೈದ್ಯಕೀಯ ಸಿಬ್ಬಂದಿ ನೀಡುವ ಸ್ಪಷ್ಟನೆಗೂ ಮೌನವಾಗಿಯೇ ಉಳಿಯುವ ಮೂಲಕ ಕೃತಜ್ಞತೆ ವ್ಯಕ್ತಪಡಿಸಬೇಕಾದ ಪ್ರಕರಣದಲ್ಲೂ ಕೃತಜ್ಞರಾಗುತ್ತಾರೆ.

ಆಸ್ಪತ್ರೆಯಲ್ಲಿ ಆಡಳಿತವೇ ಬೇರೆ, ಚಿಕಿತ್ಸೆ ನೀಡುವ ವೈದ್ಯರೇ ಬೇರೆ ಎಂಬ ಕನಿಷ್ಠ ಪ್ರಜ್ಞೆ ಇಲ್ಲದವರೂ ನಮ್ಮ ನಡುವೆ ಇದ್ದಾರೆ. ಯಾವುದೇ ಔಷಧ ನೀಡದೇ ಲಕ್ಷಗಟ್ಟಲೆ ಬಿಲ್ಲು ಮಾಡಿದ್ದಾರೆಂದು, ಚಿಕಿತ್ಸೆ ನೀಡಿದ ವೈದ್ಯರ ತೇಜೋವಧೆ ಮಾಡುವ ಬದಲಿಗೆ ನಿಜಕ್ಕೂ ಅಂತಹ ದಾಖಲೆಗಳಿದ್ದರೆ, ಸೂಕ್ತ ಪ್ರಾಧಿಕಾರದಲ್ಲಿ ದಾವೆ ಹೂಡುವ ಮೂಲಕ ಪರಿಹಾರ ಪಡೆಯಬಹುದಲ್ಲ? ವೈದ್ಯರ ಮೇಲಿನ ಆಪಾದನೆ ಮಾಡುವಾಗ ಇರುವ ರೋಷ, ತಪ್ಪೆಂದು ತಿಳಿದಾಗ ಅವರಿಗಾದ ಅವಮಾನಕ್ಕೆ ಪರಿಹಾರ ನೀಡುವಾಗ ಏಕೆ
ಇರುವುದಿಲ್ಲ?

ಕಾರಣವಿಷ್ಟೇ: ಗುಂಪುಗುಂಪಾಗಿ ಗದ್ದಲ ಮಾಡುವಾಗ ಒದರಿದವರು ಯಾರೆಂದು ತಿಳಿಯುವುದಿಲ್ಲ, ಒದೆಸಿಕೊಳ್ಳುವವರು ಕೆಲವರೇ ತಾನೇ? ಇದೆಲ್ಲವನ್ನೂ ನೋಡುವಾಗ ಜಾಲತಾಣದಲ್ಲಿ ಮಿತ್ರರೊಬ್ಬರು ಬರೆದ ಬರಹವೊಂದು ನೆನಪಾಯ್ತು. ಕರೋನಾ ಪಾಸಿಟಿವ್ ಇದ್ದು ಬೇರೆ ಯಾವುದೋ ಗಂಭೀರ ಕಾಯಿಲೆಯ ಕಾರಣಕ್ಕೆ ಸಾವು ಅನಿವಾರ್ಯವಾಗಬಹುದಾದ ಕೆಲವೇ ಕೆಲವು ರೋಗಿಗಳಿಗೆ ಚಿಕಿತ್ಸೆ ನೀಡುವ ಧಾವಂತದಲ್ಲಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಉಳಿಸಬಹುದಾದ ನೂರಾರು ಜೀವ ಗಳನ್ನು ಸಾಯಿಸುತ್ತಿದ್ದೇವೆ! ಎಷ್ಟೊಂದು ಸತ್ಯ!

ಇದೆಲ್ಲದಕ್ಕೂ ಮುಖ್ಯವಾದ ಕಾರಣವೆಂದರೆ, ಮಾಧ್ಯಮಗಳು, ಜಾಲತಾಣಗಳು, ವರದಿ ಮಾಡುವಲ್ಲಿ ತೋರಿಸುವ ಧಾವಂತವೇ ಹೊರತು ಬೇರೇನಲ್ಲ. ಇಂತಹ ಜಾಗತಿಕ ಗೊಂದಲಕ್ಕೆ ಪೂರ್ಣ ವಿರಾಮ ನೀಡುವ ಉತ್ತರದಾಯಿತ್ವ ಯಾರದು? ಕರೋನಾ ಸಾಂಕ್ರಾಮಿಕ ವೈರಾಣುವಿಗೆ ಸೂಕ್ತ ಔಷಧ, ಲಸಿಕೆ ಕಂಡು ಹಿಡಿಯುವುದರಲ್ಲಿ ಇರುವಷ್ಟೇ ಮುತುವರ್ಜಿ ಇಂತಹ ಅಧ್ವಾನಗಳಿಗೆ ಕಾರಣರಾಗುವವರಿಗೆ ಸೂಕ್ತ ಚಿಕಿತ್ಸೆ ನೀಡುವುದರಲ್ಲೂ ಇರಬೇಕಾಗುವುದು ಇಂದಿನ ತುರ್ತು ಅಗತ್ಯ.