Friday, 20th September 2024

ವಿಸ್ತೃತ ಕೋವಿಡ್: ಹೀಗೊಂದಿದೆಯೇ?

ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್

ದಿನಗಳೆದಂತೆ ಈ ಕರೋನಾ ವೈರಸ್ ಹೊಸ ಹೊಸ ರೂಪ ತೋರಿಸುತ್ತಿದೆ. ಕೋವಿಡ್- 19 ಕಾಯಿಲೆಯ ಕಡಿಮೆ ಪ್ರಮಾಣದ ಸೋಂಕಿಗೆ ಒಳಗಾದ ರೋಗಿಗಳು ಸಾಮಾನ್ಯವಾಗಿ 2 ವಾರಗಳಲ್ಲಿ ಗುಣಮುಖರಾಗುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆ ಪ್ರಮಾಣದ ಕಾಯಿಲೆ ಬಂದು ಗುಣಮುಖರಾದ ಎಷ್ಟೋ ರೋಗಿಗಳು ಸೋಂಕು ಬಂದು ಹೋಗಿ ತಿಂಗಳುಗಟ್ಟಲೆ ಆದರೂ ತಮ್ಮಲ್ಲಿ ಇನ್ನೂ ಕಾಯಿಲೆಯ ಲಕ್ಷಣಗಳಿವೆ ಎನ್ನುತ್ತಿದ್ದಾರೆ. ಇದನ್ನು ವೈದ್ಯ ವಿಜ್ಞಾನಿಗಳು ವಿಸ್ತೃತ ಕೋವಿಡ್ (Long Covid) ಎಂದು ನಾಮಕರಣ ಮಾಡಿದ್ದಾರೆ. ಇದರ ಬಗ್ಗೆ ಇವರಿಗೂ ಸಮಸ್ಯೆಯಾಗಿದೆ. ಆದರೆ ಈ ರೀತಿಯ ವಿಸ್ತೃತ ಕೋವಿಡ್‌ಗೆ ಒಳಗಾದ ರೋಗಿಗಳು ಮಾತ್ರ ಸುಸ್ತಾಗಿಬಿಟ್ಟಿದ್ದಾರೆ. ಜತೆಗೆ ಅಂತಹವರಿಗೆ ಸಹಾಯ ಮಾಡುವವರೂ ಇಲ್ಲವಾಗಿದ್ದಾರೆ.

ಮೊದಲು ತಿಳಿಸಿದಂತೆ ಕೋವಿಡ್ – 19ರ ಸಾಮಾನ್ಯ ಮಟ್ಟದ ಸೋಂಕಿಗೆ ಒಳಗಾದ ರೋಗಿಗಳು 2 ವಾರಗಳಲ್ಲಿ ಸಂಪೂರ್ಣ ಗುಣಮುಖರಾಗುತ್ತಾರೆ. ಆದರೆ ತುಂಬಾ ತೀವ್ರ ಮಟ್ಟದ ಕಾಯಿಲೆಗೆ ಒಳಗಾದ ರೋಗಿಗಳು ಕಾಯಿಲೆಯಿಂದ ಹೊರಗೆ ಬರಲು 6 ವಾರಗಳಷ್ಟು ಅವಧಿ ತೆಗೆದುಕೊಳ್ಳುತ್ತಾರೆ. ಇದು ಜಗತ್ತಿನ ಯಾವುದೋ ಒಂದು ನಿರ್ದಿಷ್ಟ ಭಾಗದಿಂದ ವರದಿಯಾಗಿಲ್ಲ. ಜಗತ್ತಿನ ಎಲ್ಲಾ ಭಾಗಗಳಿಂದ ಈ ರೀತಿಯ ಕೋವಿಡ್ ಕಾಯಿಲೆಯ ನಮೂನೆ ಕಾಣಿಸಿಕೊಳ್ಳುತ್ತಿದೆ. ಈ ವಿಸ್ತೃತ ಕೋವಿಡ್‌ಗೆ ಒಳಗಾದ ರೋಗಿಗಳಲ್ಲಿ ಕಾಯಿಲೆಯ ಲಕ್ಷಣಗಳು – ಅದರಲ್ಲೂ ಜ್ವರ, ತಲೆನೋವು, ವಾಸನೆ ಗ್ರಹಿಕೆ ನಾಶವಾಗಿರುವುದು ಮತ್ತು ವಿಪರೀತ ಸುಸ್ತು – ಈ ಲಕ್ಷಣಗಳು ಬಹಳ ದಿನಗಳು ಇರುತ್ತವೆ.

ಈ ರೀತಿಯ ಲಕ್ಷಣಗಳು ಇರುವುದರಿಂದ ಅವರ ಜೀವನವು ಹಳಿ  ತಪ್ಪಿದಂತಾಗುತ್ತದೆ. ಎಂದಿನ ದೈನಂದಿನ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಮಾಡಿದ ತಮ್ಮ ಕೆಲಸದಲ್ಲಿಯೇ ಸಂತೋಷ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಜತೆಗೆ ಇವರುಗಳಿಗೆ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರುಗಳಿಂದ ಬೇಕಾದ ಸಹಾಯವೂ ಸಿಗುತ್ತಿಲ್ಲ. ವೈದ್ಯರುಗಳು ಈ ರೀತಿಯ ಲಕ್ಷಣಗಳಿಗೆ ತಾವು ಏನು ಪರಿಹಾರ ಕೊಡಬಹುದು ಎಂದು ಚಿಂತಿತರಾಗಿದ್ದಾರೆ. ಇದರ ಪರಿಣಾಮವಾಗಿ ಈ ರೀತಿಯ ವಿಸ್ತೃತ ಕೋವಿಡ್ ರೋಗಿಗಳಿಗೆ ಸಹಾಯ ಮಾಡುವ ಗುಂಪುಗಳು ಆನ್‌ಲೈನ್‌ನಲ್ಲಿ ಹುಟ್ಟಿಕೊಂಡಿವೆ. ಜಗತ್ತಿನಾದ್ಯಂತ ಎಷ್ಟು ಜನರು ಈ ರೀತಿಯ ವಿಸ್ತೃತ ಕೋವಿಡ್‌ಗೆ ಒಳಗಾಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಗಳಿಲ್ಲ. ಆದರೆ ಒಂದು ಅಂದಾಜಿನ ಮೇಲೆ 10 ಜನರಲ್ಲಿ ಒಬ್ಬರು ಮೂರು ವಾರದ ನಂತರವೂ ಕೋವಿಡ್ ಕಾಯಿಲೆಯ ಹಲವಾರು ಲಕ್ಷಣಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇಟಲಿಯಲ್ಲಿ ಈ ಬಗ್ಗೆ ಕೋವಿಡ್ ಕಾಯಿಲೆಯಿಂದ ಆಸ್ಪತ್ರೆ ಸೇರಿದ 143 ಜನರಲ್ಲಿ ಅಧ್ಯಯನ ಮಾಡಲಾಗಿದೆ. ಇವರಲ್ಲಿ ಶೇ.88ರಷ್ಟು ರೋಗಿಗಳು ಕಾಯಿಲೆ ಬಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ 2 ತಿಂಗಳ ನಂತರವೂ ವಿಪರೀತ ಸುಸ್ತು ಮತ್ತು ಉಸಿರು ಕಟ್ಟುವ ಲಕ್ಷಣಗಳನ್ನು ಹೊಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಲಂಡನ್ನಿನ ಕಿಂ‍‍ಗ್ಸ್ ಕಾಲೇಜಿನ ಎಪಿಡಿಮಿಯಾಲಜಿಸ್ಟ್ ಪ್ರೊ.ಸ್ಪೆಕ್ಟರ್ ಅವರು ವಾಸನೆ ನಷ್ಟವಾಗುವುದು, ತಲೆನೋವು, ಎಡಬಿಡದ ಕೆಮ್ಮು, ಸುಸ್ತಾಗುವಿಕೆ ಮತ್ತು ಉಸಿರು ಕಟ್ಟುವುದು – ಈ ಲಕ್ಷಣಗಳು ಹೆಚ್ಚು ದಿನ ಇರುತ್ತವೆ ಎಂದು ಅಭಿಪ್ರಾಯ ಪಡುತ್ತಾರೆ.

ಹೆಚ್ಚಿನ ಇಂಥ ಎಲ್ಲರಲ್ಲಿ ವಿಪರೀತ ಸುಸ್ತು ಇರುವ ಲಕ್ಷಣ ಬಹಳ ದಿನಗಳ ಕಾಲ ಇರುವುದರಿಂದ ಇದನ್ನು ಕೆಲವರು ಪೋಸ್ಟ್ ವೈರಲ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಹೆಚ್ಚಿನ ಸಂದರ್ಭ ತೀವ್ರ ಪ್ರಮಾಣದ ವೈರಸ್ ಸೋಂಕಿನ ಸಂದರ್ಭಗಳಲ್ಲಿ ಈ ರೀತಿಯ ಸುಸ್ತು ಬಹಳ ದಿನ ಇರುತ್ತದೆ. ಹಾಗೆಯೇ ಬೇರೆ ಬೇರೆ ಕಾರಣಗಳಿಂದ ಬರುವ ವಿಪರೀತ ಸುಸ್ತಿನ ಕಾಯಿಲೆ (Chronic fatigue Syndrome)ಯ ರೀತಿಯಲ್ಲಿಯೇ ಇದರ ಲಕ್ಷಣಗಳಿರುತ್ತವೆ ಎಂದು ಕೆಲವರ ಅಭಿಪ್ರಾಯ. ಆದರೆ ಈ ರೀತಿಯಾಗುವ ಬಗ್ಗೆ ಕಾರಣಗಳು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ.

ಇದರ ಬಗ್ಗೆ ಇನ್ನೂ ಆಳವಾದ ಸಂಶೋಧನೆ ಆಗಬೇಕಿದೆ ಎಂಬುದು ತಜ್ಞರ ಅಭಿಮತ. ಈ ಬಗ್ಗೆ ಈಗಾಗಲೇ ಅಧ್ಯಯನ ಕೈಗೊಂಡಿ ರುವ ಮೊದಲು ತಿಳಿಸಿದ ಪ್ರೊ.ಸ್ಪೆಕ್ಟರ್ ಏಕೆ ಕೆಲವರಲ್ಲಿ ಮಾತ್ರ ಈ ರೀತಿ ಬಹಳ ದಿನಗಳ ಕಾಲ ಕಾಯಿಲೆಯ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ ಎಂಬುದು ಸ್ಪಷ್ಟವಿಲ್ಲ. ಈಗ ನಾವು ಹಲವಾರು ಅಂಶಗಳನ್ನು ಗಮನಿಸುತ್ತಿದ್ದೇವೆ. ಅವುಗಳೆಂದರೆ – ಬಾಡಿ ಮಾಸ್ ಇಂಡೆಕ್ಸ್, ವಯಸ್ಸು, ಲಿಂಗ, ಯಾವುದೋ ಒಂದು ಜನಾಂಗ – ಈ ಯಾವುದಾದರೂ ಅಂಶಗಳು 30 ದಿನಗಳಿಗಿಂತ ಹೆಚ್ಚಿನ ಕಾಲ ಲಕ್ಷಣಗಳು ಉಳಿಯುತ್ತಿವೆಯೇ ಎಂಬ ಬಗ್ಗೆ ಗಮನಿಸುತ್ತಿದ್ದೇವೆ ಎಂದು ಅಭಿಪ್ರಾಯ ಪಡುತ್ತಾರೆ.

ಈ ರೀತಿಯ ರೋಗಿಗಳಿಗೆ ಸಹಾಯವಾಗಲೆಂದು ರಚಿಸಿಕೊಂಡ ಗುಂಪಿನ ಒಬ್ಬರ ಅಭಿಪ್ರಾಯ ಹೀಗಿದೆ ಕ್ಲಾರಾ ಹಾಸ್ರಿ ಎನ್ನುವ ವರು ಮೇ ತಿಂಗಳಲ್ಲಿ ಈ ರೀತಿಯ ಆನ್ ಲೈನ್ ಸಹಾಯಕ ಗುಂಪನ್ನು ಆರಂಭಿಸಿದರು. ಆಗ ಈ ರೀತಿಯ ವಿಸ್ತೃತ ಕೋವಿಡ್ ರೋಗಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ನಮ್ಮ ಗಮನಕ್ಕೆ ಬರದಿದ್ದರೂ ಈ ರೀತಿ ಲಕ್ಷಣಗಳನ್ನು ಅನುಭವಿಸುತ್ತಿರುವ ಹಲವಾರು ಜನರು ಜಗತ್ತಿನಾದ್ಯಂತ ಇರಬೇಕು ಎಂದು ಎಣಿಸಿದ್ದೆವು.

ಹೀಗೆ ಕಾಯಿಲೆಯ ವಿಸ್ತೃತ ಲಕ್ಷಣ ಹೊಂದಿರುವವರು ಮತ್ತು ಬೇರೆಯವರಿಂದ ತಿರಸ್ಕೃತರು, ಹಾಗೆಯೇ ನಿಜವಾದ ಸಹಾಯ ಬೇಕಾದವರು ಇವರುಗಳು. ಈಗ ನಮ್ಮ ಈ ಗುಂಪಿನಲ್ಲಿ 20,000 ಜನರಿದ್ದಾರೆ. ಇದರಲ್ಲಿ ಹೆಚ್ಚಿನವರು ಕಾಯಿಲೆ ಬಂದಾಗ ಆಸ್ಪತ್ರೆ ಸೇರಿದವರಲ್ಲ. ಮಾರ್ಚ್‌ನಲ್ಲಿ ಲಕ್ಷಣ ಕಾಣಿಸಿಕೊಂಡ ಇವರಲ್ಲಿ ಹಲವರಲ್ಲಿ ಇನ್ನೂ ಅವು ಇವೆ ಎಂದರೆ ಈ ಸುದೀರ್ಘ ಅವಧಿ ಗಮನಿಸಿ. ಈ ರೀತಿಯ ವಿಸ್ತೃತ ಕೋವಿಡ್ ಲಕ್ಷಣ ಇರುವ ಹಲವರಿಗೆ ನಂತರ ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯ ವಾಗುತ್ತಿಲ್ಲ. ಪರೀಕ್ಷೆ ಮಾಡಿಸಿಕೊಂಡ ಹೆಚ್ಚಿನವರಲ್ಲಿ ಕೋವಿಡ್ 19 ಇಲ್ಲ ಎಂದು ಗೊತ್ತಾಗಿದೆ.

ಈ ಲಕ್ಷಣಗಳಿಗೆ ತುತ್ತಾದ ಯುನೈಟೆಡ್ ಕಿಂಗ್ಡಮ್‌ನ ಒಬ್ಬ ರೋಗಿಯ ಅನುಭವ ಹೀಗಿದೆ. ಈಕೆ ಲೈರಾ ಎನ್ನುವವಳು. ಆರಂಭದಲ್ಲಿ ಈಕೆಗೆ ಕಡಿಮೆ ಪ್ರಮಾಣದ ಫ್ಲೂ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ತಿಂಗಳುಗಳಾದರೂ ಇವಳಿಗೆ ಇದರ ಲಕ್ಷಣಗಳೇ ಹೋಗುತ್ತಿಲ್ಲ. ಎಂದಿನ ದೈನಂದಿನ ಕೆಲಸಗಳನ್ನು ಮಾಡಲಾಗುತ್ತಿಲ್ಲ ಎನಿಸುತ್ತಿದೆ. ಈಕೆಗೆ ಮಾರ್ಚ್‌ನಲ್ಲಿಯೇ ಕಾಯಿಲೆಯ ಸಣ್ಣ ಮಟ್ಟದ ಲಕ್ಷಣಗಳು ಕಾಣಿಸಿಕೊಂಡವು. ಆದರೆ ಕಾಯಿಲೆಯ ಟಿಪಿಕಲ್ ಲಕ್ಷಣಗಳು ಇರಲಿಲ್ಲ. ಹಾಗಾಗಿ ಈಕೆಗೆ ತನಗೆ ಕೋವಿಡ್ ಕಾಯಿಲೆ ಬಂದಿದೆ ಎಂತಲೇ ಗೊತ್ತಿರಲಿಲ್ಲ.

ಅದೇ ಹೊತ್ತಿಗೆ ಟರ್ಕಿಯಲ್ಲಿರುವ ಆಕೆಯ ಸ್ನೇಹಿತೆ ಒಬ್ಬಳಿಗೆ ಕೋವಿಡ್ ಕಾಯಿಲೆ ಬಂದಿತ್ತು. ಆಕೆಗೆ ಇದ್ದಂತಹ ಲಕ್ಷಣಗಳು ತನ್ನಲ್ಲಿಯೂ ಇರುವುದು ಗೊತ್ತಾಯಿತು. ಕೆಲವು ದಿನ ಲಕ್ಷಣಗಳು ತೀವ್ರವಾಗಿರುವುದು, ಕೆಲವು ದಿನಗಳ ಕಾಲ ಏನೂ ಇಲ್ಲದಿರು ವುದು ಈ ರೀತಿ ಆಗುತ್ತಾ ಹೋಯಿತು. 3 ತಿಂಗಳುಗಳ ನಂತರವೂ ಇದೇ ರೀತಿ ಆಗಲಾರಂಭಿಸಿದ ನಂತರವೇ ಆಕೆಗೆ ಗೊತ್ತಾಗಿದ್ದು – ಇದು ಕೋವಿಡ್ ಕಾಯಿಲೆಯ ಮತ್ತೊಂದು ರೂಪ ಎಂದು.

ಡಾ. ಏವಿ ಸ್ಮಾಲ್ – ಈಕೆ ಸ್ಕಾಟ್ಲೆಂಡ್‌ನ ವೈದ್ಯೆ. ಈಕೆ ಆರಂಭದಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಗಾದಳು. ಆದರೆ ಪರೀಕ್ಷೆಯಲ್ಲಿ ಕೋವಿಡ್ ಇಲ್ಲವೆಂದು ಬಂದಿತು. ಆದರೆ ಆಕೆಗೆ ತನಗೆ ಬಂದಿರುವ ಆರಂಭಿಕ ಲಕ್ಷಣಗಳು, ನಂತರ ಬಹಳ ದಿನಗಳು ಇದ್ದ ಲಕ್ಷಣಗಳನ್ನು ಆಧರಿಸಿ ತನಗೆ ಬಂದದ್ದು ಕೋವಿಡ್ ಅಲ್ಲದೆ ಮತ್ತೇನೂ ಅಲ್ಲ ಎಂದುಕೊಂಡಳು. ನನಗೆ ಏಪ್ರಿಲ್‌ನಲ್ಲಿ ತಲೆ ನೋವು ಎಂದು ಆರಂಭವಾಯಿತು, ನಂತರ ಸ್ವಲ್ಪ ಜ್ವರ ಬರಲಾರಂಭಿಸಿತು. ಅದೇ ಹೊತ್ತಿಗೆ ನನ್ನ ಸಹೋದ್ಯೋಗಿ ಒಬ್ಬರಲ್ಲಿ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿತು. ಕೆಲವೇ ದಿನಗಳಲ್ಲಿ ಆಕೆ ಕೋವಿಡ್- 19 ಪಾಸಿಟಿವ್ ಎಂದು ಬಂದಿತು. ಆ
ನಂತರ ನನ್ನ ಪತಿ, ಮಕ್ಕಳು ಎಲ್ಲರಿಗೂ ಈ ಕಾಯಿಲೆ ಬಂದಿತು. ಆದರೆ ನನಗೆ ಮತ್ತು ನನ್ನ ಪತಿಗೆ ಗಂಟಲಿನ ಸ್ವಾಬ್ ಪರೀಕ್ಷೆ ಯಲ್ಲಿ ಕಾಯಿಲೆ ಇಲ್ಲ ಎಂದೇ ಬಂದಿತ್ತು. ಆದರೆ ರೋಗ ಲಕ್ಷಣಗಳು ಬೇರೆಯದೇ ಕತೆ ಹೇಳುತ್ತಿದ್ದವು ಎನ್ನುತ್ತಾರೆ ಆಕೆ. ಮೇಲೆ ತಿಳಿಸಿದ ಲೈರಾ ಮತ್ತು ಸ್ಮಾಲ್ ಇಬ್ಬರೂ ಈ ಕಾಯಿಲೆಯ ಲಕ್ಷಣಗಳು ತಮ್ಮ ದೈನಂದಿನ ಜೀವನದ ಮೇಲೆ ಬಹಳ ಪರಿಣಾಮ ಬೀರಿವೆ ಎನ್ನುತ್ತಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಅವರಿಬ್ಬರಲ್ಲೂ ವಿಪರೀತ ಸುಸ್ತು ಇತ್ತು. ಹಾಗಾಗಿ ಸ್ವಲ್ಪ ದೂರ ವಾಕಿಂಗ್ ಮಾಡಲೂ ಸಾಧ್ಯವಾಗು ತ್ತಿರಲಿಲ್ಲ. ದೈನಂದಿನ ಮನೆಯ ಕೆಲಸಗಳನ್ನು ಹೆಚ್ಚು ಮಾಡಲಾಗುತ್ತಿರಲಿಲ್ಲ. ಬಹಳ ಹೊತ್ತು ನಿಂತರೆ ಮತ್ತಷ್ಟು ಸುಸ್ತಾಗಲು ಆರಂಭವಾಯಿತು. ಡಾ ಸ್ಮಾಲ್‌ರ ಅಂಬೋಣ – ಈಗ 4 ತಿಂಗಳಾಯಿತು. ಪ್ರತಿದಿನ ನನಗೆ ಜ್ವರ ಬರುತ್ತಿದೆ. ಕೆಲಸ ಮಾಡಲಾಗು ತ್ತಿಲ್ಲ. ನನ್ನ ಪತಿಗೆ ದಿವಸದಲ್ಲಿ ಒಂದು ಗಂಟೆಯೂ ಕೆಲಸ ಮಾಡಲಾಗುತ್ತಿಲ್ಲ. ಒಟ್ಟಿನಲ್ಲಿ, ಈ ಕಾಯಿಲೆ ನಮ್ಮನ್ನು ಹೈರಾಣಾ ಗಿಸಿದೆ ಎಂದು ಆಕೆ ನುಡಿಯುತ್ತಾಳೆ.

ಲೈರಾಳು ವೈದ್ಯರಲ್ಲಿ ಈ ಬಗ್ಗೆ ಚರ್ಚಿಸಿದಾಗ ತನಗೆ ಆದ ಭಿನ್ನ ರೀತಿಯ ಅನುಭವ ತಿಳಿಸುತ್ತಾಳೆ. ಫೋನ್ ನಲ್ಲಿ ವೈದ್ಯರಲ್ಲಿ ಮಾತನಾಡಿದಾಗ ಒಬ್ಬ ವೈದ್ಯರು ನನಗೆ ಒಳಗಿವಿಯ ಸೋಂಕು ಆಗಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಎರಡನೇ ವೈದ್ಯರು ಹಲವು ರಕ್ತ ಪರೀಕ್ಷೆಗೆ ಸೂಚಿಸಿದರು. ಅವೆಲ್ಲವೂ ಸರಿ ಇದ್ದರೆ ವೈರಸ್ ಕಾಯಿಲೆಯ ನಂತರದ ಸುಸ್ತು ಇರಬೇಕು ಎನ್ನುತ್ತಾರೆ. ನಾನೇ ಅವರಿಗೆ ಇದು ಕೋವಿಡ್ ಕಾಯಿಲೆ ಇರಬಹುದೇ ಎಂದರೆ ಅವರು ಅದು 14 ದಿನಗಳಿಗಿಂತ ಜಾಸ್ತಿ ಲಕ್ಷಣ ತೋರಿಸುವುದಿಲ್ಲ ಎಂದು ಆ ಕಾಯಿಲೆ ಅಲ್ಲ ಎಂದರು. ಆ ನಂತರ ನನ್ನ ಲಕ್ಷಣಗಳನ್ನು ವಿವರಿಸಿ ಜನರಲ್ ಪ್ರಾಕ್ಟೀಸ್ ಎಂಬ
ಪತ್ರಿಕೆಗೆ ಬರೆದೆ. ಆಗ ಅಲ್ಲಿನ ನರ್ಸ್ ಒಬ್ಬರು ಇದು ವಿಸ್ತೃತ ಕೋವಿಡ್ ಕಾಯಿಲೆ. ಇದಕ್ಕೆ ನಾವು ನಿಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು.

ಡಾ.ಸ್ಮಾಲ್ ಅವರು ತಮಗೆ ಸ್ವಲ್ಪ ಸಹಾಯ ಸಿಕ್ಕಿದರೂ ವೈದ್ಯರುಗಳು ಈ ಬಗ್ಗೆ ನಿರ್ದಿಷ್ಟ ನಿಲುವು ತಳೆದಿಲ್ಲ, ತಮ್ಮ ರೋಗಿಗಳಿಗೆ ಹೇಗೆ ಸಹಾಯ ಮಾಡುವುದು ಎಂದು ಅವರಿಗೂ ತಿಳಿಯುತ್ತಿಲ್ಲ ಎನ್ನುತ್ತಾರೆ. ಇತ್ತೀಚಿಗೆ ಒಬ್ಬರು ಈ ಬಗ್ಗೆೆ ಹೆಚ್ಚು ಅಧ್ಯಯನ ಮಾಡಿ ಸೂಕ್ತ ಸಲಹೆ ಕೊಡಲು ಆರಂಭಿಸಿದ್ದಾರೆ. ಅದು ತನ್ನ ಅದೃಷ್ಟ. ಅವರು ಈ ಬಗೆಗಿನ ಹೊಸ ಹೊಸಾ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಹಾಗೆಯೇ ಅಗತ್ಯ ಬಿದ್ದಾಗೆಲ್ಲಾ ತಮಗೆ ಸೂಕ್ತ ಸಲಹೆ ಕೊಡುತ್ತಿದ್ದಾರೆ ಎನ್ನುತ್ತಾರೆ. ಆದರೆ ಎಲ್ಲಾ ಕಡೆ ಈ ರೀತಿ ಸಲಹೆ ಮತ್ತು ಸಾಂತ್ವನ ಕೊಡುವ ವೈದ್ಯರು ಇಲ್ಲದಿರುವುದು ದುರದೃಷ್ಟಕರ ಎಂದು ಅವರ ಅಭಿಪ್ರಾಯ.

ನಾನು ಈ ರೀತಿಯ ಹಲವಾರು ವೈದ್ಯಕೀಯ ಮತ್ತು ವೈದ್ಯಕೀಯ ಅಲ್ಲದ ಫೋರಂ ಗಳಲ್ಲಿ ಇದ್ದೇನೆ. ನನ್ನ ಹಾಗೆ ಅನುಭವ ಹೊಂದಿದ ಹಲವರ ಅನುಭವಗಳೂ ಅಲ್ಲಿ ಬರುತ್ತಿವೆ. ಆದರೆ ಅದಕ್ಕೆ ಹಲವು ವೈದ್ಯರು ನೀವು ಬಹಳ ಮನಸ್ಸಿಗೆ ಹಚ್ಚಿಕೊಂಡಿ ದ್ದೀರಿ, ಚಿಂತೆ ಮಾಡುತ್ತಿದ್ದೀರಿ ಎಂಬ ನುಡಿಗಳನ್ನು ಆಡುತ್ತಿದ್ದಾರೆ. ಮೇಲೆ ತಿಳಿಸಿದ ಇಬ್ಬರೂ ಅಭಿಪ್ರಾಯ ಪಡುವ ಪ್ರಕಾರ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಈ ಬಗ್ಗೆ ಸ್ವಲ್ಪ ಗಮನ ಕೊಡಬೇಕು, ರೋಗಿಗಳ ಲಕ್ಷಣ, ಕಷ್ಟ ಏನೆಂದು ತಿಳಿದು ಕೊಳ್ಳಲು ಪ್ರಯತ್ನಿಸಬೇಕು.

ಹಾಗಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ – ಹೀಗೆ ಎಲ್ಲರನ್ನೂ ಒಳಗೊಂಡ ಒಂದು ತಂಡ ರಚಿಸಿ ಇಂತಹ ರೋಗಿಗಳಿಗೆ ಸಲಹೆ ಕೊಡುವಲ್ಲಿ ಮುಂದಾಗಬೇಕು. ಹಾಗಾಗಿ ಸಾಮಾನ್ಯ ಜನರು ತಿಳಿದುಕೊಳ್ಳುವಂತಾಗಬೇಕು. ಈ ರೀತಿಯ ವಿಸ್ತೃತ ಕೋವಿಡ್ ಎಂಬುದೊಂದಿದೆ, ಕೋವಿಡ್ ಕಾಯಿಲೆ ಬಂದ ಸುಮಾರು ಶೇ.10- 12ರಷ್ಟು ಜನರಲ್ಲಿ ಇದು ಕಾಣಿಸಿಕೊಳ್ಳಬಹುದು. ಇದು ಹಲವಾರು ತಿಂಗಳುಗಳ ಕಾಲ ವಿವಿಧ ಲಕ್ಷಣ ತೋರಿಸುತ್ತಾ ತಮ್ಮನ್ನು ಕಾಡಿಸಬಹುದು. ಹಾಗೆಯೇ ವೈದ್ಯರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ – ಈ ರೀತಿಯ ವಿಸ್ತೃತ ಕೋವಿಡ್ ಕಾಯಿಲೆ ಗುರುತಿಸುವುದು ಹೇಗೆ, ಅವರ  ಲಕ್ಷಣಗಳಿಗೆ ತಾವು ಏನು ಪರಿಹಾರ ಹೇಳಬಹುದು – ಎಂಬುದರ ಬಗ್ಗೆ ಚರ್ಚಿಸಿ ಒಂದು ಗೈಡ್ ಲೈನ್ ಮಾಡಬೇಕಾಗುತ್ತದೆ. ಮತ್ತೊಂದು ವಿಚಾರ ಎಂದರೆ ಈ ಸಾಂಕ್ರಾಮಿಕದಿಂದ ಹೆಚ್ಚಿನ ವೈದ್ಯರು ರೋಗಿಗಳ ಚಿಕಿತ್ಸೆ ಮಾಡಿ ತೀವ್ರವಾಗಿ ಬಳಲಿದ್ದಾರೆ. ಹಲವರಲ್ಲಿ ಕೋವಿಡ್ ಬಂದಿದೆ, ಹಲವರು ಮಡಿದಿದ್ದಾರೆ ಕೂಡ. ಹಾಗಾಗಿ ಸಮಸ್ಯೆ ಪರಿಹರಿಸುವುದು ಸುಲಭವಲ್ಲ ಎನಿಸುತ್ತದೆ.