Sunday, 8th September 2024

ಮತ್ತೊಮ್ಮೆ ಗರಿಗೆದರಿದ ಕ್ರಿಕೆಟ್ ಕನಸುಗಳು !

ಶಶಾಂಕಣ

shashidhara.halady@gmail.com

ಕ್ರಿಕೆಟ್ ಆಟವನ್ನು ಸೋಮಾರಿಗಳ ಆಟ ಎಂದು ನಮ್ಮ ದೇಶದವರು ಹೇಳುವ ಕಾಲವೊಂದಿತ್ತು; ತೀರಾ ಮುಂಚೆ ಏನಲ್ಲ, ೧೯೭೦ರ ದಶಕದ ತನಕ ಕ್ರಿಕೆಟ್‌ಎಂದರೆ ಐದು ದಿನ ನಡೆಯತ್ತಿದ್ದ ಟೆಸ್ಟ್ ಪಂದ್ಯ ಮಾತ್ರ. ಅಂಥ ಪಂದ್ಯಗಳು ಹಲವು ಬಾರಿ, ಯಾವುದೇ ಫಲಿತಾಂಶ ನೀಡದೇ ಡ್ರಾನಲ್ಲಿ ಕೊನೆಗೊಳ್ಳುತ್ತಿದ್ದುದನ್ನು ಕಂಡ ಕ್ರೀಡಾಪ್ರೇಮಿಗಳು ಹತಾಶೆಯಿಂದ ಉದ್ಗರಿಸುತ್ತಿದ್ದ ಮಾತು ಅದು.

ಜೆಫ್ ಬಾಯ್ಕಾಟ್ ಎಂಬ ತೀರಾ ನಿಧಾನಗತಿಯ ಇಂಗ್ಲಿಷ್ ಬ್ಯಾಟ್ಸ್‌ಮನ್ ಒಬ್ಬನಿದ್ದ; ೨ ದಿನ ಬೇಕಾದರೂ ಆಡಿ, ೭೦ ರನ್ ಮಾಡಬಲ್ಲ ಭೂಪ ಆತ! ಅಕಸ್ಮಾತ್ ಇಂದಿನ ಯುವಜನತೆಯ ಎದುರು ಆಡಿದ್ದರೆ, ಅವನನ್ನು ಹಿಡಿದು ಉಪ್ಪಿನ ಕಾಯಿ ಭರಣಿಯಲ್ಲಿ ಸಿಕ್ಕಿಸಿಬಿಡುತ್ತಿದ್ದರೇನೋ! ಕ್ರಿಕೆಟ್‌ನ್ನು ನಮಗೆ ಪರಿಚಯಿಸಿದವರು ಬ್ರಿಟಿಷರು. ಅವರು ಈ ಆಟವನ್ನು ‘ಜಂಟಲ್‌ಮನ್ಸ್ ಗೇಮ್’ ಎಂದು ಕರೆದು, ಹಾಗೆಂದೇ ಪ್ರಚುರಪಡಿಸಿ, ಆ ನಿಧಾನಗತಿಯ ಆಟವಾಡಲು ಯತ್ನಿಸುತ್ತಿದ್ದ ನಮ್ಮಂಥ ವಸಾಹತುಗಳ ಸ್ಥಳೀಯ ಜನರಲ್ಲಿ ಒಂದು ರೀತಿಯ ಕೀಳರಿಮೆಯನ್ನು ಬೆಳೆಸಿದ್ದೂ ಉಂಟು.

ಯುರೋಪಿಯನ್ನರು ಆಡುತ್ತಿದ್ದ ಫುಟ್‌ಬಾಲ್, ರಗ್ಬಿ ಮೊದಲಾದ ಪ್ರಖ್ಯಾತ ಆಟಗಳಿಗೆ ಹೋಲಿಸಿದರೆ, ೫ ದಿನ ಶಾಂತರೀತಿಯಿಂದ ಆಡುವ ಟೆಸ್ಟ್ ಕ್ರಿಕೆಟ್,
ಸಜ್ಜನರ ಆಟವೆಂದು ಹೊಗಳಿಸಿಕೊಂಡಿದ್ದರೆ, ಆಗಿನ ಕಾಲಮಾನದಲ್ಲಿ ಅದು ಅಚ್ಚರಿಯೇನಾಗಿರಲಿಲ್ಲ. ನಮ್ಮ ದೇಶದವರು ಆ ೫ ದಿನದ ಆಟವನ್ನು ಬಹಳ ಕುತೂಹಲದಿಂದ ನೋಡುತ್ತಿದ್ದರು, ಕೊನೆಯಲ್ಲಿ ಫಲಿತಾಂಶ ಬಾರದೇ ಇದ್ದರೂ, ಯಾವ ಬ್ಯಾಟ್ಸ್‌ಮನ್ ಯಾವ ಶೈಲಿಯಲ್ಲಿ ಕವರ್‌ನಲ್ಲಿ
ಹೊಡೆದ, ಇನ್ನಾವ ಬೌಲರ್ ಯಾವ ದಿಕ್ಕಿಗೆ ತನ್ನ ಬಾಲನ್ನು ಸ್ವಿಂಗ್ ಮಾಡಿದ ಎಂದೆಲ್ಲಾ ವರ್ಣಿಸಿಕೊಳ್ಳುತ್ತಾ, ಕ್ರಿಕೆಟ್‌ನ್ನು ಅಕ್ಷರಶಃ ಆರಾಧಿಸುತ್ತಿದ್ದರು.

ಚುರುಕುಗತಿಯ ಬೇರೆ ಆಟಗಳನ್ನು ಇಷ್ಟಪಡುವ ಕ್ರೀಡಾಪ್ರೇಮಿಗಳು ನಮ್ಮ ಜನರ ಕ್ರಿಕೆಟ್‌ಪ್ರೇಮ ಕಂಡು ಹತಾಶೆಯಿಂದ, ‘ಈ ಕ್ರಿಕೆಟ್‌ನಿಂದಾಗಿ ನಮ್ಮ
ದೇಶದಲ್ಲಿ ಬೇರಾವುದೇ ಆಟ ಬೆಳೆಯುವುದಿಲ್ಲ’ ಎಂದು ಗೊಣಗುತ್ತಿದ್ದರು. ಆಗ ಸಂಭವಿಸಿದ ವಿಸ್ಮಯವೇ, ಕಪಿಲ್‌ದೇವ್ ನಾಯಕತ್ವದಲ್ಲಿ, ಪ್ರುಡೆನ್ಷಿಯಲ್ ವಿಶ್ವಕಪ್ ಕ್ರಿಕೆಟ್ ನಲ್ಲಿ ನಮ್ಮ ದೇಶ ವಿಶ್ವಚಾಂಪಿಯನ್ ಆದುದು!

ಕ್ರಿಕೆಟ್ ಕಾಶಿ ಎಂದೆನಿಸಿರುವ ಲಾರ್ಡ್ಸ್‌ನಲ್ಲಿ ೨೫.೬.೧೯೮೩ರಂದು ನಡೆದ ಸೀಮಿತ ಓವರ್‌ನ ಫೈನಲ್ ಪಂದ್ಯದಲ್ಲಿ, ಆಗಿನ ಕ್ರಿಕೆಟ್ ಸಾರ್ವಭೌಮ ಎನಿಸಿದ್ದ ವೆಸ್ಟ್ ಇಂಡೀಸ್ ತಂಡವನ್ನು ನಮ್ಮವರು ಸೋಲಿಸಿದ ಕ್ಷಣ, ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಹೊಸ ಭಾಷ್ಯವನ್ನು ಬರೆದಂತಾಯಿತು. ಆ ಪಂದ್ಯದ
ಕೊನೆಯ ಓವರ್‌ಗಳ ರೋಚಕತೆಯನ್ನು ಈ ಲೇಖಕ ಕೇಳಿದ್ದುಂಟು; ಆ ವೀಕ್ಷಕವಿವರಣೆಯನ್ನು ಟೇಪ್ ರೆಕಾರ್ಡರ್‌ನಲ್ಲಿ ಹಿಡಿದಿಟ್ಟುಕೊಂಡು, ನಂತರ
ಹಲವು ಬಾರಿ ಪದೇ ಪದೆ ಕೇಳಿಸಿಕೊಂಡಿದ್ದುಂಟು! ದೇಶಕ್ಕೆ ಸ್ವಾತಂತ್ರ್ಯ ದೊರಕಿ ಇನ್ನೂ ೪೦ ವರ್ಷಗಳು ಆಗಿರಲಿಲ್ಲ; ಕ್ರಿಕೆಟ್ ಇನ್ನೂ ಜೆಂಟಲ್‌ಮನ್ಸ್ ಗೇಮ್ (ಅರ್ಥಾತ್ ಯುರೋಪಿಯನರ ಪ್ರಾಬಲ್ಯ) ಎಂದೇ ಪ್ರಸಿದ್ಧವಾದ ಕಾಲ. ಆ ದಿನ ಇಂಗ್ಲೆಂಡಿನ ಲಾರ್ಡ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯುವಾಗ
ನಮ್ಮವರು ಬ್ಯಾಟಿಂಗ್ ಮಾಡಿ ೧೮೩ ರನ್‌ಗೆ ಆಲ್ ಔಟ್ ಆದಾಗ, ಬಲಿಷ್ಠ ವೆಸ್ಟ್ ಇಂಡೀಸ್‌ನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೇ ಎಲ್ಲರೂ ತಿಳಿದಿದ್ದರು.

ಆದರೆ ಕಪಿಲ್‌ದೇವ್ ಬಳಗವು, ೧೪೦ ರನ್‌ಗೆ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ, ೪೩ ರನ್‌ಗಳ ವಿಜಯ ಸಾಽಸಿದಾಗ, ದೇಶಕ್ಕೆ ದೇಶವೇ ಸಂಭ್ರಮಿಸಿತು. ಆ ನಂತರದ ದಶಕಗಳಲ್ಲಿ ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿ ಸೀಮಿತ ಓವರ್ ಕ್ರಿಕೆಟ್ ಜನಪ್ರಿಯವಾಯಿತು. ಇಂದು ನಮ್ಮ ದೇಶದವರು ವಿಶ್ವಕಪ್ ಪಂದ್ಯಾವಳಿಯನ್ನು ಏಕಾಂಗಿಯಾಗಿ ಹೋಸ್ಟ್ ಮಾಡುತ್ತಿದ್ದಾರೆಂದರೆ, ಅದಕ್ಕೆ ಮುನ್ನುಡಿ ಬರೆದದ್ದು ಕಪಿಲ್‌ದೇವ್ ನಾಯಕತ್ವದ ಆ ಮೊದಲ
ವಿಶ್ವಕಪ್ ವಿಜಯ.

ಐದು ದಿನಗಳ, ಪ್ರತಿ ತಂಡದ ಎರಡು ಇನ್ನಿಂಗ್ಸ್ ಗಳ, ನಿಧಾನಗತಿಯ ಟೆಸ್ಟ್ ಪಂದ್ಯಕ್ಕೂ, ಈಚೆಗೆ ಆವಿಷ್ಕಾರಗೊಂಡ ‘ಹೊಡಿ ಬಡಿ’ ಶೈಲಿಯ ಟಿ-೨೦
ಕ್ರಿಕೆಟ್‌ಗೂ ಮಧ್ಯದಲ್ಲಿರುವ ಸೀಮಿತ ಓವರ್‌ಗಳ (೫೦ ಓವರ್) ಕ್ರಿಕೆಟ್ ಪಂದ್ಯವು, ಈಗ ನೋಡಿದರೆ ಒಂದು ರೀತಿಯ ಪರಿಪೂರ್ಣ ಆವೃತ್ತಿ ಎನಿಸುತ್ತಿದೆ.
ಒಂದೇ ದಿನದ ಆಟ, ಫಲಿತಾಂಶ ಖಚಿತ (ಆಕಸ್ಮಿಕ ಗಳನ್ನು ಹೊರತುಪಡಿಸಿದರೆ), ಶತಕ ಬಾರಿಸುವ ಅವಕಾಶ, ಬೌಲರ್‌ಗಳೂ ತಮ್ಮ ಕೌಶಲ ತೋರುವ
ಸಾಧ್ಯತೆ ಇವೆಲ್ಲವೂ ಅಡಕಗೊಂಡಿರುವ ೫೦ ಓವರ್ ಗಳ ಪಂದ್ಯಾವಳಿಯ ಶಕ್ತಿಯು, ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಾಣಿಸುತ್ತಿದೆ. ಈ
ಮುಂಚೆಯೂ, ರೋಚಕ ಎನಿಸಿದ್ದ ಹಲವು ಒಂದು ದಿನದ ಪಂದ್ಯಗಳು ದಾಖಲಾಗಿವೆ; ಕೊನೆಯ ಓವರ್ ತನಕವೂ ಕೌತುಕವನ್ನು ಹಿಡಿದಿಟ್ಟು ಕೊಳ್ಳಬಲ್ಲ ೫೦ ಓವರ್‌ಗಳ ಕ್ರಿಕೆಟ್ ಪಂದ್ಯಗಳು ಇನ್ನೇನು ತೆರೆಮರೆಗೆ ಸರಿಯುತ್ತಿವೆಯೋ ಎಂಬ ಅನುಮಾನ ಮೂಡುತ್ತಿರುವ ಸಮಯದಲ್ಲೇ (೨೦ ಓವರ್‌ಗಳ ಅಬ್ಬರದ ಮ್ಯಾಚ್ ಹಿನ್ನೆಲೆಯಲ್ಲಿ) ಒಂದು ದಿನದ ಈ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ, ಈ ಪ್ರಕಾರದ ಕ್ರಿಕೆಟ್‌ಗೆ ಇನ್ನಷ್ಟು ಹೆಸರನ್ನು ತರುತ್ತಿವೆ.

ಹೌದು, ಅದೇಕೆ ನಮ್ಮ ದೇಶದವರನ್ನು ಕ್ರಿಕೆಟ್ ಈ ರೀತಿ ಮೋಡಿ ಮಾಡಿದೆ? ಯುರೋಪಿನ ಹಲವು ದೇಶಗಳು, ದಕ್ಷಿಣ ಅಮೆರಿಕದ ಹಲವು ದೇಶಗಳಲ್ಲಿ
ಫುಟ್‌ಬಾಲ್‌ನದೇ ಪಾರಮ್ಯ; ಆದರೆ, ನಮ್ಮಲ್ಲಿ ಫುಟ್‌ಬಾಲ್‌ಗೆ ಅಷ್ಟೊಂದು ಜನಪ್ರಿಯತೆಯಿಲ್ಲ, ಕ್ರಿಕೆಟ್ ಎಂದರೆ ಪ್ರಾಣ! ಬ್ರಿಟಿಷರು ಪರಿಚಯಿಸಿದ
ಆಟ, ಸೋಮಾರಿಗಳ ಆಟ, ನಮ್ಮ ಜನರು ನಿಧಾನ ಗತಿಯನ್ನು ಇಷ್ಟಪಡುವವರು ಹೀಗೆ ಹಲವು ಕಾರಣ ಗಳ ಮೂಲಕ ಕ್ರಿಕೆಟ್‌ನ್ನು ಅದೇಕೆ ನಾವು ಇಷ್ಟೊಂದು ಇಷ್ಟಪಡುತ್ತಿದ್ದೇವೆ ಎಂಬ ವಿಶ್ಲೇಷಣೆ ನೀಡುವ ಪ್ರಯತ್ನ ನಡೆದಿದೆ. ಆದರೆ, ನನಗಂತೂ ಯಾವ ವಿಶ್ಲೇಷಣೆಯೂ ಸಮರ್ಪಕ ಎನಿಸುತ್ತಿಲ್ಲ. ಮಲೆನಾಡಿನ ಮೂಲೆಯ ಕಾಡಿನ ನಡುವೆ ಮಕ್ಕಿ ಗದ್ದೆಯಲ್ಲಿ, ಮೂರು ಅಡಕೆ ದಬ್ಬೆಗಳನ್ನು ನೆಟ್ಟು ಅದನ್ನೇ ವಿಕೆಟ್ ಮಾಡಿಕೊಂಡು, ಟೆನಿಸ್ ಬಾಲ್‌ನ್ನು ಬಳಸಿ ಪ್ರತಿದಿನ ಸಂಜೆ ಕ್ರಿಕೆಟ್ ಆಡುವ ಹಳ್ಳಿ ಹೈಕಳ ಆಟೋತ್ಸಾಹವನ್ನು ಅಷ್ಟು ಸುಲಭದ ವಿವರಣೆಗೆ ಒಳಪಡಿಸಲು ಅಸಾಧ್ಯ.

ಈಗ ಪ್ರತಿದಿನ ನಡೆಯುತ್ತಿರುವ ೫೦ ಓವರ್‌ಗಳ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಉತ್ಸಾಹ, ರೋಚಕತೆ, ತಿರುವುಗಳು, ಕೌತುಕಗಳನ್ನು ನೋಡುತ್ತಿರು
ವಾಗ, ಈ ಹಿಂದೆ ಹಳ್ಳಿಗಳಲ್ಲಿ ನಾವಾಡುತ್ತಿದ್ದ ಕ್ರಿಕೆಟ್ ನ ನೆನಪಾಗುತ್ತದೆ. ೧೯೮೩ರ ನಂತರ ಸೀಮಿತ ಓವರ್‌ನ (೫೦) ಕ್ರಿಕೆಟ್ ನಮ್ಮ ದೇಶದಲ್ಲಿ ಜನ
ಪ್ರಿಯತೆ ಗಳಿಸುವ ಮೊದಲು, ಎರಡು ಇನ್ನಿಂಗ್ಸ್‌ನ ಆಟಗಳೇ ಚಾಲ್ತಿಯಲ್ಲಿದ್ದುದು. ಶಾಲಾ ಮಕ್ಕಳು ಸಹ ಎರಡು ಇನ್ನಿಂಗ್ಸ್ ಆಟಗಳನ್ನೇ ಆಡುತ್ತಿದ್ದು, ಬೆಳಗಿ ನಿಂದ ಸಂಜೆಯ ತನಕ ಆಡಿ, ಅಕಸ್ಮಾತ್ ಫಲಿತಾಂಶ ಬರದೇ ಇದ್ದರೆ ಡ್ರಾ ಎಂದು ಮನೆಗೆ ಹೋಗುತ್ತಿದ್ದರು!

ಪ್ರಾಥಮಿಕ ಶಾಲೆಯಲ್ಲಿ ನಾನು ಮೊದಲು ಕ್ರಿಕೆಟ್ ಆಡಿದಾಗ, ಅಂಡರ್ ಹ್ಯಾಂಡ್ ಬೌಲಿಂಗ್ ಪದ್ಧತಿಯಿತ್ತು. ನಮ್ಮದು ಹಳ್ಳಿ ಶಾಲೆ; ಈಗಿನಂತೆ ಟಿವಿ
ಇಲ್ಲದಿದ್ದುದರಿಂದ, ನಮಗೆಲ್ಲಾ ಮಕ್ಕಳಿಗೆ ಕ್ರಿಕೆಟ್‌ನ ಹೆಚ್ಚಿನ ಪಟ್ಟುಗಳು ಗೊತ್ತಿರಲಿಲ್ಲ; ಕ್ರಿಕೆಟ್ ಮ್ಯಾಚ್ ಗಳನ್ನು ನೋಡಿಯೂ ಗೊತ್ತಿಲ್ಲದ ಗ್ರಾಮೀಣ
ಪ್ರದೇಶ. ಬೌಲಿಂಗ್‌ನ ಸರಿಯಾದ ಕ್ರಮ ಗೊತ್ತಿಲ್ಲದೇ ಇದ್ದುದರಿಂದಲೋ ಏನೋ, ಅಂಡರ್‌ಹ್ಯಾಂಡ್ ಬೌಲಿಂಗ್ ಮಾಡುತ್ತಿದ್ದೆವು.

ಹೈಸ್ಕೂಲ್ ಶಾಲೆಗೆ ಶಂಕರನಾರಾಯಣಕ್ಕೆ ಬಂದಾಗ, ‘ನನಗೂ ಕ್ರಿಕೆಟ್ ಗೊತ್ತಿದೆ’ ಎಂದು ಆಟಕ್ಕೆ ಸೇರಿಕೊಂಡೆ; ಮೊದಲ ದಿನ ಅಂಡರ್‌ಹ್ಯಾಂಡ್
ಬೌಲಿಂಗ್ ಮಾಡಿದಾಗ, ಮಕ್ಕಳೆಲ್ಲಾ ನಕ್ಕರು. ‘ನಿನಗೆ ಬೌಲಿಂಗ್ ಗೊತ್ತಿಲ್ಲ’ ಎಂದು ಬಾಲ್ ಕಸಿದುಕೊಂಡರು; ಆದರೆ ಬ್ಯಾಟ್ ಕಸಿಯಲಿಲ್ಲವಲ್ಲ! ಬ್ಯಾಟ್
ಬೀಸಿ ಸಾಕಷ್ಟು ರನ್ ಮಾಡಿದೆ; ಕ್ರಿಕೆಟ್‌ನ ಪ್ರಾಥಮಿಕ ಪಾಠಗಳ ಪರಿಚಯವೂ ಆಯಿತು. ಆಗ ಟೆನಿಸ್ ಬಾಲ್ ಬಳಸಿ, ಎರಡು ಇನ್ನಿಂಗ್ಸ್ ಆಡುತ್ತಿದ್ದೆವು.
ಕೆಲವು ಹುಡುಗರು ಅರ್ಧ ದಿನ ಬ್ಯಾಟಿಂಗ್ ಮಾಡುವಷ್ಟು ಕೌಶಲ ಹೊಂದಿದ್ದರು. ತಾಲೂಕು ಕೇಂದ್ರದಲ್ಲಿದ್ದ ಕಾಲೇಜಿಗೆ ಬಂದಾಗ, ನಿಜವಾದ ಕ್ರಿಕೆಟ್
ನೋಡುವ ಅವಕಾಶ: ಕಾಲುಗಳಿಗೆ ಪ್ಯಾಡ್, ಸೆಂಟರ್ ಪ್ಯಾಡ್, ಗ್ಲೌಸ್, ವಿಕೆಟ್‌ಕೀಪರ್‌ಗೆ ಪ್ಯಾಡ್, ಗ್ಲೌಸ್, ಲೆದರ್ ಬಾಲ್, ಗುಣಮಟ್ಟದ ಭಾರವಾದ ಬ್ಯಾಟ್
ಇವನ್ನೆಲ್ಲಾ ನೋಡಿದಾಗ, ಸಣ್ಣಗೆ ನಡುಕ. ವೇಗ ವಾಗಿ ಬೌಲಿಂಗ್ ಮಾಡುವ ಎತ್ತರದ ವಿದ್ಯಾರ್ಥಿಗಳ ಶೈಲಿ ನೋಡಿ, ಆ ಬಾಲ್‌ಗಳಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎಂಬ ಭಾವ. ಪ್ಯಾಡ್ ಧರಿಸುವ, ಭಾರವಾದ ಬ್ಯಾಟ್ ಎತ್ತಿ ಬೀಸುವ ಕೆಲಸಗಳು ರೇಜಿಗೆ ಎನಿಸಿ, ಕಾಲೇಜಿನಲ್ಲಿ ನಾನು ಕ್ರಿಕೆಟ್ ಆಡಿದ್ದು ಅಷ್ಟಕ್ಕಷ್ಟೇ.

ಕಾಲೇಜು ಮುಗಿಸಿ, ಉದ್ಯೋಗ ಅರಸುತ್ತಾ ದೂರದ ಬಯಲುಸೀಮೆಯ ಹಳ್ಳಿಯೊಂದನ್ನು ಸೇರಿಕೊಂಡಾಗ, ನನ್ನ ಕ್ರಿಕೆಟ್ ಕನಸುಗಳು ಗರಿಗೆದರಿದವು. ನಾನಿದ್ದ ಹಳ್ಳಿಯಲ್ಲಿ ವರ್ಷಕ್ಕೆ ನಾಲ್ಕೋ ಆರೋದಿನ ಮಳೆ ಬಂದರೆ ಅದೇ ಹೆಚ್ಚು; ಅದರಿಂದ ಹಳ್ಳಿಯ ಜನರಿಗೆ ನೀರಿನ ಕೊರತೆ ಆಗುತ್ತಿದ್ದುದು ನಿಜ, ಆದರೆ ವರ್ಷವಿಡೀ ಪ್ರತಿಸಂಜೆ ಕ್ರಿಕೆಟ್ ಆಡುವ ಅವಕಾಶವಿತ್ತು! ಆ ಹಳ್ಳಿಯಲ್ಲಿ ವಿಶಾಲವಾದ ಹೈಸ್ಕೂಲ್ ಮೈದಾನವಿತ್ತು; ಕ್ರಿಕೆಟ್‌ನಲ್ಲಿ ಆಸಕ್ತಿಯಿದ್ದ ಹುಡುಗರೂ ಇದ್ದರು. ಓವರ್‌ಹ್ಯಾಂಡ್ ಬೌಲಿಂಗ್ ಕಲಿತೆ, ಬ್ಯಾಟಿಂಗ್‌ನಲ್ಲೂ ಪರಿಣತಿ ಸಾಧಿಸಿದೆ.

ಅರಸೀಕೆರೆ, ಹಾಸನ ಮೊದಲಾದ ಕಡೆ ಕಾರ್ಕ್ ಬಾಲ್ ಬಳಕೆ ಇತ್ತು. ನೋಡಲು, ತೂಕದಲ್ಲಿ ಇದು ಲೆದರ್ ಬಾಲ್‌ನ್ನು ಹೋಲುತ್ತದೆ. ಬೆಲೆ ಕಡಿಮೆ, ಹಳ್ಳಿ
ಹುಡುಗರ ಬಜೆಟ್‌ಗೆ ತಕ್ಕದಾದ ಬಾಲ್. ಸರಿ ಸುಮಾರು ಲೆದರ್ ಬಾಲ್ ಬೌಲಿಂಗ್‌ನಲ್ಲಿ ಗಳಿಸಿದ ವೇಗವನ್ನು ಇದರಲ್ಲೂ ಗಳಿಸಬಹುದು; ಬೌಂಡರಿ
ಹೊಡೆದಾಗಲೂ ಲೆದರ್ ಬಾಲ್‌ನ ಅನುಭವ. ಆದರೆ, ಕೈಗೋ, ಮೈಗೋ ತಗುಲಿದರೆ, ಅಯ್ಯಯ್ಯೋ ಎಂಬಷ್ಟು ನೋವು! ಎರಡು ಬಾರಿ ಗದ್ದಕ್ಕೆ ಕಾರ್ಕ್ ಬಾಲ್ ತಗುಲಿಸಿಕೊಂಡು, ನಾನು ಬಳಲಿದ್ದುಂಟು. ನಮ್ಮ ಜತೆಗಾರರೊಬ್ಬರು ಕೈಗೆ ಬಿದ್ದ ಕಾರ್ಕ್‌ಬಾಲ್ ಹೊಡೆತದಿಂದಾಗಿ, ಹೇರ್‌ಲೈನ್ ಫ್ಯಾಕ್ಚರ್ ಸಹ ಆಗಿತ್ತು! ಸೆಂಟರ್ ಪ್ಯಾಡ್ ಧರಿಸದೇ ನಾವು ಆಡುತ್ತಿದ್ದ ಅಂದಿನ ಆಟದಲ್ಲಿ ಸಣ್ಣ ಮಟ್ಟದ ರಿಸ್ಕ್ ಇತ್ತು. ಕ್ರಮೇಣ ಅಲ್ಲೂ ಟೆನಿಸ್ ಬಾಲ್ ಕ್ರಿಕೆಟ್
ಜನಪ್ರಿಯತೆ ಗಳಿಸಿತು.

ಕಪಿಲ್‌ದೇವ್ ತಂಡವು, ಇಂಗ್ಲೆಂಡಿನಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದ ನಂತರ (೧೯೮೩) ಎಲ್ಲಾ ಕಡೆ ಸೀಮಿತ ಓವರ್ ಕ್ರಿಕೆಟ್ ಬಳಕೆಗೆ ಬಂತು. ಅದಕ್ಕೂ ಮುಂಚೆ, ಹಳ್ಳಿಗಳಲ್ಲೂ ಎರಡೆರಡು ಇನ್ನಿಂಗ್ಸ್‌ನ ಸ್ಥಳೀಯ ಪಂದ್ಯಾವಳಿ ನಡೆಯುತ್ತಿದ್ದವು. ಸಂಜೆಯ ತನಕ ಫಲಿತಾಂಶ ಬರದೇ ಇದ್ದರೆ, ಡ್ರಾ! ೧೯೮೩ರ ನಂತರ, ಹತ್ತು ಓವರ್, ಇಪ್ಪತ್ತು ಓವರ್‌ನ ಆಟವು ಜನಪ್ರಿಯತೆ ಗಳಿಸಿತು, ಜನರಿಗೆ ನಿಜವಾದ ಕ್ರಿಕೆಟ್ ಹುಚ್ಚನ್ನು ಹತ್ತಿಸಿತು.

೧೯೯೦ರ ದಶಕದ ನಂತರ, ನಮ್ಮ ದೇಶದ ಹಳ್ಳಿ ಹಳ್ಳಿಗಳಲ್ಲೂ ಕಲರ್ ಟಿವಿ ಪರಿಚಯಗೊಂಡ ನಂತರ, ಎಲ್ಲರೂ ಕ್ರಿಕೆಟ್ ಆಟದ ಪರಿಚಯ ಪಡೆದರು.
ಪ್ರಮುಖ ಕ್ರಿಕೆಟ್ ಮ್ಯಾಚ್ ನಡೆಯುತ್ತಿರುವಾಗ, ಜನರು ಮನೆಯಿಂದ ಹೊರಗೆ ಬರದೇ, ಟಿವಿಗೆ ದಿಟ್ಟಿ ಕೀಲಿಸಿ ಕೂರುವುದು ಸಾಮಾನ್ಯ ಎನಿಸಿತು.
ಪ್ರಮುಖ ಹೀರೋಗಳು ನಟಿಸಿದ ಚಲನಚಿತ್ರದ ಬಿಡುಗಡೆಯ ದಿನಾಂಕ ನಿಗದಿಪಡಿಸುವಾಗ, ಕ್ರಿಕೆಟ್ ಮ್ಯಾಚ್ ಇದೆಯೋ ಇಲ್ಲವೋ ಎಂದು ನೋಡು
ವುದು ಅಗತ್ಯ ಎನಿಸಿತು. ರೋಚಕ ಎನಿಸುವ ಕ್ರಿಕೆಟ್ ಪಂದ್ಯ ಇದ್ದಾಗ, ಸಿನಿಮಾ ಥಿಯೇಟರ್‌ಗಳು ಖಾಲಿ ಹೊಡೆಯತ್ತವೆ!

ಈಗ ನಡೆಯುತ್ತಿರುವ ಐವತ್ತು ಓವರ್‌ಗಳ ಪಂದ್ಯಗಳು ರೂಪುಗೊಂಡ ಪ್ರಕ್ರಿಯೆಯೂ ಕುತೂಹಲಕಾರಿ. ಆಸ್ಟ್ರೇಲಿಯಾದ ಕೆರ್ರಿ ಪ್ಯಾಕರ್ ಎಂಬಾತ
ಈ ಪರಿಕಲ್ಪನೆಯ ಜನಕ. ಆದರೆ, ಆತ ಅದ್ದೂರಿ ಯಿಂದ, ಬಹು ಪ್ರಚಾರದಿಂದ ನಡೆಸಿದ್ದ ಪ್ಯಾಕರ್ ಸೀರೀಸ್ ಕ್ರಿಕೆಟ್‌ನ್ನು ಆಗಿನ ದಿನಗಳಲ್ಲಿ ಹೀಗೆಳೆ
ದವರೇ ಹೆಚ್ಚು. ‘ಐದು ದಿನದ ಟೆಸ್ಟ್ ಕ್ರಿಕೆಟ್‌ನ ಕೌಶಲ ವನ್ನು ಒಂದು ದಿನದ ಪಂದ್ಯದಲ್ಲಿ ನಿರೀಕ್ಷಿಸಲು ಆಗುವುದಿಲ್ಲ, ಇದರಿಂದ ಕ್ರಿಕೆಟ್‌ಗೆ ನಷ್ಟವೇ ಹೆಚ್ಚು’ ಎಂದು ಕ್ರಿಕೆಟ್ ಪಂಡಿತರು ಪ್ಯಾಕರ್ ಸರಣಿಯನ್ನು ಟೀಕಿಸಿದರು. ೧೯೭೭-೧೯೭೯ರ ಅವಧಿಯಲ್ಲಿ ನಡೆದ ಪ್ಯಾಕರ್ ಕ್ರಿಕೆಟ್, ಆ ನಂತರ ನಿಂತುಹೋಯಿತು.

ಆದರೆ, ಕೆರ್ರಿ ಪ್ಯಾಕರ್ ಎಂಬಾತ ಅಂದು ಹುಟ್ಟು ಹಾಕಿದ ಏಕದಿನದ ಕ್ರಿಕೆಟ್‌ನ ಪರಿಕಲ್ಪನೆಯು ಅದೆಷ್ಟು ಕ್ರಾಂತಿಕಾರಿ ಎಂದು ಈಗ ಅರಿವಾಗುತ್ತಿದೆ. ೧೯೮೦ರ ದಶಕದ ಏಕದಿನದ ವಿಶ್ವಕಪ್ ಕ್ರಿಕೆಟ್‌ನ ಮೇಲೂ ಪ್ಯಾಕರ್ ಸರಣಿಯ ಪ್ರಭಾವವಿದೆ. ಏಕದಿನ ಕ್ರಿಕೆಟ್ ಪಂದ್ಯಗಳು ಆರಂಭಗೊಂಡಾಗ,
ಪ್ರತಿ ತಂಡವೂ ೬೦ ಓವರ್ ಆಡಬೇಕಿತ್ತು; ೧೯೮೩ರಲ್ಲಿ ಭಾರತ ತಂಡವು ಲಾರ್ಡ್ಸ್ ಮೈದಾನದಲ್ಲಿ ಗೆದ್ದದ್ದು ೬೦ ಓವರ್‌ಗಳ ಮ್ಯಾಚ್‌ನ್ನು. ನಂತರ ಏಕದಿನ ಪಂದ್ಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿ, ತಲಾ ೫೦ ಓವರ್ ಈಗ ಸ್ಥಿರವಾಗಿದೆ. ಮೊದಲ ಹತ್ತು ಓವರ್‌ಗಳಲ್ಲಿ ಹೊರವಲಯದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಫೀಲ್ಡರ್ ಇರುವಂತಿಲ್ಲ, ಬೌಲರ್‌ಗೆ ತಲಾ ೧೦ ಓವರ್, ಪವರ್‌ಪ್ಲೇ ಮೊದಲಾದ ಸಾಕಷ್ಟು ಬದಲಾವಣೆಗಳನ್ನು ಅಳವಡಿಸಲಾಗಿದೆ.

ಹಗಲು ಮತ್ತು ರಾತ್ರಿ ಆಡುವ ಪದ್ಧತಿಯು ಇಂದು ಸಾಮಾನ್ಯ. ಎಲ್ಲಾ ಬದಲಾವಣೆಗಳನ್ನು ಮಾಡಿದ್ದು, ಹೆಚ್ಚು ಜನರನ್ನು ಸೆಳೆಯುವ ಉದ್ದೇಶದಿಂದ. ಕ್ರಿಕೆಟ್ ಪಂದ್ಯಗಳನ್ನು ಟಿವಿಯಲ್ಲಿ ನೋಡುವ ಕೋಟ್ಯಂತರ ಜನರು ಈ ಪಂದ್ಯಾವಳಿಯ ಯಶಸ್ಸಿಗೆ ಮತ್ತೊಂದು ಕಾರಣ. ಆ ಮೂಲಕ ಬರುವ ಜಾಹೀರಾತು ಆದಾಯವೇ ಇಂದು ಕ್ರಿಕೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದೆ. ಈಗ ನಮ್ಮ ದೇಶದಲ್ಲಿ ನಿಧಾನವಾಗಿ ಕ್ರಿಕೆಟ್ ಜ್ವರ ಆವರಿಸುತ್ತಿದೆ. ಇಪ್ಪತ್ತು ಓವರ್‌ಗಳ ಕ್ರಿಕೆಟ್, ಐಪಿಎಲ್‌ನ ಹೊಡೆದಾಟದ ಅಬ್ಬರದ ನಡುವೆ, ಏಕದಿನ ಪಂದ್ಯಗಳ ಸೊಗಸು ಎದ್ದು ಕಾಣುತ್ತಿದೆ. ಇನ್ನು ಕೆಲವು
ವಾರಗಳ ಕ್ರಿಕೆಟ್ ರೋಚಕತೆಯನ್ನು ನೋಡೋಣ, ಅನುಭವಿಸೋಣ!

Leave a Reply

Your email address will not be published. Required fields are marked *

error: Content is protected !!