Monday, 25th November 2024

ಆರ್‌.ಕೆ.ಲಕ್ಷ್ಮಣ್ ಅಭಿಪ್ರಾಯದಲ್ಲಿ ಕಾಗೆಯೇ ರಾಷ್ಟ್ರಪಕ್ಷಿ!

ತಿಳಿರು ತೋರಣ

ಶ್ರೀವತ್ಸ ಜೋಶಿ

‘ಅನ್ಯಾಯವಾಗಿ ನಾವು ಕಾಗೆಗಳನ್ನು ಕಡೆಗಣಿಸಿಬಿಟ್ಟಿದ್ದೇವೆ. ನಿಜವಾಗಿಯೂ ಕಾಗೆ ಒಂದು ಶ್ರೇಷ್ಠ ಪಕ್ಷಿ. ನನಗೆ ಒಂದು ವೇಳೆ
ಅಂಥದೊಂದು ಅಥಾರಿಟಿ ಇದ್ದಿದ್ದರೆ, ಅಂದರೆ ನಾನೇನಾದ್ರೂ ಈ ಮಹಾನ್ ದೇಶದ ಪ್ರಧಾನಿಯೋ ರಾಷ್ಟ್ರಪತಿಯೋ ಆಗಿದ್ದಿ ದ್ದರೆ, ನವಿಲಿಗೆ ಅಲ್ಲ ಕಾಗೆಗೆ ಕೊಡುತ್ತಿದ್ದೆ ರಾಷ್ಟ್ರಪಕ್ಷಿ ಎಂಬ ಗೌರವದ ಸ್ಥಾನಮಾನವನ್ನು!

ಏಕೆಂದರೆ ನನ್ನ ಪ್ರಕಾರ ಕಾಗೆಯೇ ನಿಜವಾದ ರಾಷ್ಟ್ರಪಕ್ಷಿ. ನವಿಲಿಗೆ ಇಲ್ಲದ ಸಾವಿರ ಪಟ್ಟು ಅರ್ಹತೆ ಕಾಗೆಗಿದೆ.’ – ಇದು ವ್ಯಂಗ್ಯ ಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಮನದಾಳದ ಮಾತು. ತಮಾಷೆಗೋ ಕುಹಕದ ರೀತಿಯಲ್ಲೋ ಹೇಳಿದ್ದಲ್ಲ. ಇದನ್ನವರು ಬಹಳ ಚೆನ್ನಾಗಿ ಸಮರ್ಥಿಸಿಕೊಳ್ಳುತ್ತಾರೆ ಕೂಡ.

‘ದಿನಾ ಬೆಳಗ್ಗೆ ಎದ್ದತಕ್ಷಣ ನಾವೇನು ನವಿಲನ್ನಾಗಲೀ ಗಿಳಿಯನ್ನಾಗಲೀ ನೋಡ್ತೀವಾ? ಇಲ್ಲ ತಾನೆ? ಕಾಗೆಯನ್ನಾದ್ರೆ ನೋಡ್ತೇವೆ. ಕಿಟಕಿ ತೆರೆದ್ರೆ ಅಲ್ಲೇ ಒಂದು ಕಾಗೆ ಇರುತ್ತೆ. ಅದರ ಚಲನವಲನ, ಅಭ್ಯಾಸಗಳು, ಆಲೋಚನಾಶಕ್ತಿ ಎಲ್ಲವೂ ಮನುಷ್ಯನಿಗೆ ತುಂಬ ಹತ್ತಿರ. ಕಾಗೆಗೆ ಇರುವಂಥ ಈ ಗುಣಸ್ವಭಾವ ಬೇರಾವ ಪಕ್ಷಿಗೂ ಇಲ್ಲ. ಗಿಳಿ ಅಂತೀರಾ ಅದೊಂದು ಮಹಾ ಪೆದ್ದು. ಮರದ ಮೇಲಿದ್ರೂ ಕೂತ್ಕೊಂಡಿರುತ್ತೆ ಪಂಜರದಲ್ಲಿ ಹಾಕಿದ್ರೂ ಒಂದೇಥರ ಕೂತಿರುತ್ತೆ. ಅದಕ್ಕೊಂದು ವಿಶೇಷ ಧ್ವನಿಯಿಲ್ಲ, ಯೋಚನಾ ಶಕ್ತಿ ಇಲ್ಲ. ತಲೆಯನ್ನು ಆಚೀಚೆ ಹೊರಳಿಸೋದಕ್ಕೂ ಸೋಮಾರಿ.

ಕಾಗೆ ಹಾಗಲ್ಲ, ಯಾವಾಗಲೂ ಜಾಗೃತ. ಹಿಂದೆ ಯಾರು ಬರ್ತಿದ್ದಾರೆ ಮುಂದೆ ಏನ್ ನಡೀತಾ ಇದೆ ಅಲ್ಲಿ ದೂರದ ಆ ಕಿಟಕಿಯಲ್ಲಿ ಏನಿಟ್ಟಿದ್ದಾರೆ ಅಂತೆಲ್ಲ ನೋಡ್ತಾ ಇರುತ್ತೆ. ಬಹುಶಃ ಅದೊಂದೇ ಪಕ್ಷಿಪ್ರಭೇದ ಇರಬೇಕು, ಸಂಜೆ ಆರು ಗಂಟೆ ಆಸುಪಾಸಿನಲ್ಲಿ ಸೂರ್ಯಾಸ್ತದ ಸಮಯ ಆದ ತತ್‌ಕ್ಷಣ ಯಾವ್ದಾದ್ರೂ ಮನೆಯ ಛಾವಣಿಯ ಮೇಲೋ ಟಿವಿ ಆಂಟೆನಾಗಳ ಮೇಲೋ ಗುಂಪಾಗಿ ಸೇರಿ ಸಭೆ ನಡೆಸುತ್ತವೆ. ಆ ದಿನ ಏನೇನೆಲ್ಲ ನಡೆಯಿತೆಂದು ಚರ್ಚೆಮಾಡುತ್ತವೆ. ಅವುಗಳ ಭಾಷೆ, ಮಾತು ನನಗೆ ಅಲ್ಪಸ್ವಲ್ಪ ಅರ್ಥ ವಾಗುತ್ತೆ. ಅವುಗಳದೂ ನಮ್ಮ ಹಾಗೆಯೇ ವಿಚಾರವಿನಿಮಯ.

ಕಾಲ ಕೆಟ್ಟುಹೋಗಿ ಬಿಟ್ಟಿದೆ. ಬೆಲೆ ಏರಿಕೆ. ಏನೂ ಸಿಗ್ತಾ ಇಲ್ಲ. ಬರ್ತಾ ಬರ್ತಾ ಬ್ರೆಡ್ಡಿನ್ ಚೂರೊಂದು ಸಿಕ್ತು ಕಾಲ ತಳ್ಬುಟ್ಟೆ… ಅಂತೆಲ್ಲ ಏನೋ ಸುಖದುಃಖ ತೋಡಿಕೊಳ್ತವೆ. ನಾನು ಇದನ್ನೆಲ್ಲ ಸೂಕ್ಷ್ಮ ಗಮನಿಸುತ್ತೇನೆ. ಕಾಗೆಗಳು ಮಾತ್ರ ಹಾಗೆ ಮಾಡೋದು.
ಗಿಳಿಗಳು ಮಾಡೋದಿಲ್ಲ. ನವಿಲುಗಳೂ ಮಾಡೋದಿಲ್ಲ. ಅಯ್ಯೋ ನವಿಲಿಗೆ ಡ್ಯಾನ್ಸ್ ಮಾಡೋಕೂ ಬರಲ್ಲ ಸರಿಯಾಗಿ!’

‘ನವಿಲಿನ ಸೃಷ್ಟಿ ಆದದ್ದೂ ವಿಚಿತ್ರ ರೀತಿಯಲ್ಲಿ. ನೀವು ಮನೆಗೆ ಪೆಯಿಂಟ್ ಮಾಡಿಸುವಾಗ ಮಿಕ್ಕ ಉಳಿದ ಚೂರುಪಾರು ಬಣ್ಣ ಗಳನ್ನೆಲ್ಲ ಒಂದು ಗೊಂಬೆಗೆ ಬಳಿದರೆ ಹೇಗಿರುತ್ತೋ ಹಾಗೆ ಬ್ರಹ್ಮ ನವಿಲನ್ನು ಸೃಷ್ಟಿಸಿದ್ದು. ಬೇರೆಲ್ಲ ಜೀವಿಗಳನ್ನು ಉತ್ಪತ್ತಿ
ಮಾಡಿದ್ಮೇಲೆ ಮಿಕ್ಕಿದ ಬಣ್ಣಗಳನ್ನೆಲ್ಲ ಸೇರಿಸಿ ನವಿಲು ಎಂಬ ಒಂದು ಪಕ್ಷಿಯನ್ನು ಮಾಡಿದ್ದು. ಆದ್ದರಿಂದಲೇ ನವಿಲಿನ ಕಲರ್
ಕಾಂಬಿನೇಷನ್ ಬಲುವಿಚಿತ್ರ. ಸಿಕ್ಕಾಪಟ್ಟೆ ಗ್ಯಾರಿಷ್ ಕಲರ್ಸ್.

ಎಲ್ಲಿ ಯೆಲ್ಲೋ ಇರಕೂಡದೋ ಅಲ್ಲಿ ಯೆಲ್ಲೋ. ಎಲ್ಲಿ ಬ್ಲೂ ಹಾಕ್ಕೂಡದೋ ಅಲ್ಲಿ ಬ್ಲೂ. ನಾನಾಗಿದ್ರೆ ಬೇರೆ ಥರ ಮಾಡಿರು ತ್ತಿದ್ದೆ. ಹಾಗೆಯೇ, ನವಿಲಿಗೆ ಹಾರಲಿಕ್ಕೆ ಆಗುತ್ತೋ ಆಗುವುದಿಲ್ಲವೋ ಅನ್ನೋದನ್ನೂ ಬ್ರಹ್ಮ ಸರಿಯಾಗಿ ನಿರ್ಣಯಿಸಲಿಲ್ಲ. ಇಲ್ಲಿಂದ ಅಲ್ಲಿವರೆಗೆ ಸ್ವಲ್ಪೇಸ್ವಲ್ಪ ದೂರ ಹಾರಿ ಸುಸ್ತಾಗುತ್ತೆ. ಸ್ಥೂಲಶರೀರ. ರೆಕ್ಕೆ ಚಿಕ್ಕದು. ಹಿಂದುಗಡೆ ಉದ್ದದ ಬಾಲ ಯೂಸ್‌ ಲೆಸ್ ಅದು. ಬರೀ ಒಂದು ಆಭರಣದಂತೆ ಪ್ರದರ್ಶನಕ್ಕೆ ಮಾತ್ರ. ಹೀಗೆಲ್ಲ ಮಾಡಿ ಕೆಡಿಸ್ಬಿಟ್ರು ನವಿಲನ್ನು.

ಕಾಗೆಗೆ ಹಾಗಲ್ಲ. ಸರಿಯಾಗಿ ಮೈಯಿಡೀ ಒಂದೇ ಬಣ್ಣ. ಎದ್ದು ಕಾಣುವ ಕಪ್ಪು. ಅದೂ ನಮ್ಮ ಭಾರತೀಯ ಪರಿಸರದ ವರ್ಣ ವೈವಿಧ್ಯದ ಹಿನ್ನೆಲೆಯಿರುವಾಗ ಸ್ಪಷ್ಟವಾಗಿ ಗೋಚರಿಸುವ ಬಣ್ಣ. ಕಾಗೆಯ ಧ್ವನಿಯಾದರೂ ಅಷ್ಟೇ- ವಿಶೇಷವಾದದ್ದು. ಕಾಗೆ ಒಂದೇ ಥರದಲ್ಲಿ ಕೂಗೋದು ಅನ್ಕೋಬೇಡಿ ಮತ್ತೆ! ಬೆಳಗಿನ ಹೊತ್ತಿನಲ್ಲಿ ಒಂಥರ ಧ್ವನಿ. ಮಧ್ಯಾಹ್ನ ಸುಮಾರು ಹನ್ನೆರಡೂ ವರೆಯಿಂದ ಒಂದೂವರೆ ಗಂಟೆವರೆಗೆ ಎಲ್ಲ ಕಾಗೆಗಳೂ ಕಂಪಲ್ಸರಿ ರೆಸ್ಟ್ ತಗೋಳ್ತಾವೆ.

ಆಮೇಲೆ ಕೂಗುವಾಗಿನ ಧ್ವನಿ ಬೇರೆ. ಬೇಸಗೆಯಲ್ಲಿ ಬಾಯಾರಿಕೆ ಆಗಿ ಎಲ್ಲೂ ನೀರು ಸಿಗದಿದ್ದಾಗ ಇನ್ನೊಂದು ಥರ ಧ್ವನಿ. ಅಷ್ಟೆಲ್ಲ
ಯಾಕೆ, ಮುಂಬೈಯಲ್ಲೇ ದಾದರ್ ಪ್ರದೇಶದ ಕಾಗೆಗಳದು ಒಂಥರ ಸೌಂಡು. ದೂರದ ಬೊರಿವಲಿ ಕಡೆಯ ಕಾಗೆಗಳ ಧ್ವನಿ ಬೇರೆ ಥರ. ಸೂಕ್ಷ್ಮ ಗಮನಿಸಿದರೆ ಇದೆಲ್ಲ ವೆರಿವೆರಿ ಇಂಟೆರೆಸ್ಟಿಂಗ್. ನಿಮ್ಮ ನವಿಲಿನ ಧ್ವನಿಯೋ ಅಗ್ಲಿಯೆಸ್ಟ್. ಅದನ್ನೂ ಸರಿಯಾಗಿ ಮಾಡಿಲ್ಲ ಬ್ರಹ್ಮ. ಯಾವ್ದೋ ಹರಕು ಆಟಿಗೆಗೆ ವೀಣೆತಂತಿ ಜೋಡಿಸಿ ಹೋಗಪ್ಪಾ ಚೆನ್ನಾಗಿದೆ ಅಂತ ಕಳಿಸಿಬಿಟ್ಟಿದ್ದಾರೆ.’ ‘ಕಾಗೆಯ ಇನ್ನೊಂದು ವಿಶೇಷತೆಯೆಂದರೆ – ಮನೆಯಲ್ಲಿ ಬ್ರೆಡ್‌ನ ಒಂದೆರಡು ಸ್ಲೈಸಸ್ ಇವೆ ಅಂತಿಟ್ಕೊಳ್ಳಿ.

ತುಂಬ ದಿವ್ಸ ಆಗಿದೆ ತಂದಿಟ್ಟು. ಅವು ಗಟ್ಟಿಯಾಗ್ಬಿಟ್ಟಿವೆ. ಕಾಗೆಯಾದ್ರೂ ತಿನ್ನಲಿ ಅಂತ ಕಿಟಿಕಿಯಿಂದ ಹೊರಕ್ಕೆಸೆಯುತ್ತೀರಿ. ಬ್ರೆಡ್ ಚೂರು ಕಲ್ಲಿನಂತೆ ಗಟ್ಟಿಯಿರುವುದರಿಂದ ಬೇರಾವ ಪಕ್ಷಿಗಳೂ ಅದನ್ನು ಮುಟ್ಟಲಿಕ್ಕೆ ಹೋಗೋದಿಲ್ಲ. ಕಾಗೆ ಏನ್ಮಾಡ್ತದೆ ಅಂದ್ರೆ ಆ ಗಟ್ಟಿ ಚೂರನ್ನೇ ಕೊಕ್ಕಿನಲ್ಲಿ ಎತ್ತಿಕೊಂಡು ಹೋಗಿ ಎಲ್ಲಿ ನೀರು ಇರುತ್ತೋ ಹುಡುಕಿ ಅಲ್ಲಿ ನೀರಲ್ಲಿ ಅದ್ದಿಬಿಟ್ಟು ಮೆದು
ಮಾಡ್ಕೊಂಡು ತಿನ್ನುತ್ತೆ! ನನ್ನೊಬ್ಬ ಸ್ನೇಹಿತರಿದ್ದರು, ಪ್ರಾಣಿಪಕ್ಷಿಗಳ ಬಗ್ಗೆ ಪರಮದಯಾಳು. ಅವರಿಗೆ ಕಾಲುಗಳಿಲ್ಲ.

ದಿನಾಬೆಳಗ್ಗೆ ಕಾಗೆಗೆ ಒಂದು ಚೂರು ತಾಜಾ ಬ್ರೆಡ್ ಕೊಡುತ್ತಿದ್ದರು. ನಿರ್ದಿಷ್ಟ ಹೊತ್ತಿಗೆ ಕಿಟಕಿಯಲ್ಲಿ ಬ್ರೆಡ್ ಚೂರನ್ನಿಡೋರು, ಕಾಗೆ ಬಂದು ತಕ್ಕೊಂಡುಹೋಗೋದು. ಒಂದು ದಿನ ಅವರ ಬಳಿ ಬ್ರೆಡ್ ಇರಲಿಲ್ಲ, ಬದಲಿ ವ್ಯವಸ್ಥೆ ಅಂತ ಕಿಟಕಿಯ ಹೊರಗೆ ಬಿಸ್ಕೇಟ್ ಇಟ್ಟರು. ಹೊತ್ತಿಗೆ ಸರಿಯಾಗಿ ಬಂತು ಕಾಗೆ. ಬಿಸ್ಕೇಟನ್ನು ಕೊಕ್ಕಿನಿಂದ ಮುಟ್ಟಿದ್ದೇ ತಡ ಸಿಟ್ಟಿನಿಂದ ಎಗರಿ ಕಿಟಕಿಯ ಗಾಜನ್ನು ಕುಕ್ಕಿತು. ಕಾವ್ ಕಾವ್ ಎಂದು ತನ್ನದೇ ಭಾಷೆಯಲ್ಲಿ ಜಗಳಾಡಿ ಸಿಕ್ಕಾಪಟ್ಟೆ ಬೈದು ಹೊರಟುಹೋಯ್ತು.

ನನ್ನ ಸ್ನೇಹಿತರು ಆಮೇಲೆ ನನಗೆ ಫೋನ್ ಮಾಡಿ ಇದನ್ನೆಲ್ಲ ಹೇಳಿದ್ರು. ಅಂದರೆ, ಏನೋ ಒಂದು ಆಹಾರ ಕೊಟ್ಟರೆ ನಡೀತದೆ
ಅಂತಲ್ಲ, ಆ ಕಾಗೆಗೆ ಬ್ರೆಡ್ಡಿನದೇ ಅಭ್ಯಾಸವಾಗಿ ಬ್ರೆಡ್ಡೇ ಬೇಕು ಅಂತಾಗಿತ್ತು. ನಾವು ಮನುಷ್ಯರೂ ಎಷ್ಟೋಸರ್ತಿ ಅದೇ ವರ್ತನೆ
ತೋರೋದಿಲ್ವೇ? ಅಪಾಯಗಳನ್ನು ಅಂದಾಜಿಸುವ ವಿಚಾರ ದಲ್ಲೂ ಹಾಗೆಯೇ. ಒಂದೆರಡು ವರ್ಷಗಳ ಚಿಕ್ಕ ಮಗು ಅಲ್ಲೆಲ್ಲೋ ಕೂತು ಆಟ ಆಡ್ಕೊಂಡಿರುತ್ತೆ ಅಂದ್ಕೊಳ್ಳಿ. ಕಾಗೆ ಆ ಮಗುವಿನ ತೀರ ಹತ್ತಿರಕ್ಕೆ ಹೋಗಿ ಆರಾಮಾಗಿ ಕುಳಿತುಕೊಳ್ಳುತ್ತೆ.

ಮಗು ಕೈಕಾಲು ಆಡಿಸಿದ್ರೂ ಕಾಗೆಗೇನೂ ಭಯವಿಲ್ಲ. ಆದರೆ ನಾಲ್ಕೈದು ವಯಸ್ಸಿಗಿಂತ ದೊಡ್ಡ ಮಕ್ಕಳ ಹತ್ತಿರ ಸುಳಿಯೋದಿಲ್ಲ.
ಗೊತ್ತು ಅದಕ್ಕೆ ಯಾರತ್ರ ಹೋಗಬಹುದು ಯಾರತ್ರ ಹೋಗಕೂಡದು ಅಂತ!’ ‘ಪುರಾಣಕಥೆಗಳಲ್ಲಿ, ಬಾಲಬೋಧೆ ಪುಸ್ತಕಗಳಲ್ಲಿ, ಕಾಗೆಯ ಉಲ್ಲೇಖಗಳನ್ನು ನೀವೂ ಓದಿರಬಹುದು. ಉಮಾರಾಣಿಯು ಸರೋವರದಲ್ಲಿ ಸ್ನಾನ ಮಾಡ್ತಿರಬೇಕಾದರೆ ಅವಳ ಒಡವೆ
ಗಳನ್ನೆಲ್ಲ ಸರೋವರದ ಪಕ್ಕದಲ್ಲಿ ತೆಗೆದಿಟ್ಟದ್ದಿತ್ತು. ಅದರಲ್ಲಿ ಚಿನ್ನದ ಸರ ಸಹ ಇತ್ತು. ಒಂದು ಕಾಗೆ ಬಂದು ಆ ಸರವನ್ನು
ಎತ್ತಿಕೊಂಡು ಹೋಗಿ ಹಾವಿನ ಹುತ್ತದಲ್ಲಿ ಹಾಕಿತು. ಆಮೇಲೆ ರಾಣಿಯ ಅಂಗರಕ್ಷಕರು ಬಂದು ಹುತ್ತದಲ್ಲಿದ್ದ ಹಾವನ್ನು ಕೊಂದು ಸರವನ್ನು ರಾಣಿಗೆ ಮರಳಿಸಿದರು. ಕಾಗೆ ಯಾಕೆ ಹಾಗೆ ಮಾಡಿದ್ದೆಂದರೆ ಆ ಹಾವು ಕಾಗೆಯ ಗೂಡಿಗೆ ಬಂದು ಮೊಟ್ಟೆ ಗಳನ್ನು ತಿನ್ನುತ್ತಿತ್ತು. ಅದನ್ನು ಹೇಗಪ್ಪಾ ಸಾಯಿಸೋದು ಎಂದು ಗಂಡು – ಹೆಣ್ಣು ಕಾಗೆ ಜೋಡಿ ತುಂಬಾ ಯೋಚನೆ ಮಾಡಿ ಈ ಉಪಾಯದ ದಾರಿ ಕಂಡುಕೊಂಡಿದ್ದವು!

ಇನ್ನೊಂದು, ಜಗದ್ವಿಖ್ಯಾತ ಈಸೋಪನ ಕಥೆ- ಹೂಜಿಯಲ್ಲಿ ಸ್ವಲ್ಪೇಸ್ವಲ್ಪ ನೀರಿರುವುದನ್ನು ಕಂಡ ಕಾಗೆ ಅದರೊಳಗೆ ಚಿಕ್ಕಚಿಕ್ಕ ಕಲ್ಲುಗಳನ್ನು ಹಾಕಿ ನೀರು ಮೇಲಕ್ಕೇರುವಂತೆ ಮಾಡಿ ಕುಡಿದು ಬಾಯಾರಿಕೆ ನೀಗಿಸಿಕೊಂಡದ್ದು. ಇವುಗಳನ್ನು ನಾವು ಬರೀ ಕಟ್ಟುಕತೆಗಳು ಅಂತ ತಿಳ್ಕೋಬಾರದು. ಕಾಗೆಗಳಿಗೆ ನಿಜವಾಗಿಯೂ ಆ ರೀತಿಯ ಬುದ್ಧಿಶಕ್ತಿ ಇದೆ. ಅಮೆರಿಕದ ಸ್ಮಿತ್ಸೋನಿಯನ್ ಇನ್ಸ್‌ಟಿಟ್ಯೂಟ್ ಆಫ್ ರಿಸರ್ಚ್‌ನವರು ಪ್ರಕಟಿಸಿದ ಒಂದು ಪುಸ್ತಕದಲ್ಲಿ ಕಾಗೆಯ ಬುದ್ಧಿವಂತಿಕೆ ವಿಚಾರ ಓದಿದ್ದೆ.

ಮೇಜಿನ ಮೇಲೆ ಒಂದು ಗೇರುಬೀಜ ಇಟ್ಟು ಅದರ ಮೇಲೆ ಒಂದು ಸ್ಟೀಲ್ ಲೋಟವನ್ನು ಬೋರಲಾಗಿ ಮುಚ್ಚಿಟ್ಟಿದ್ದಿತ್ತು. ಒಂದು ಕಾಗೆ ಹಾರಿಕೊಂಡು ಬರುತ್ತದೆ. ಲೋಟವನ್ನು ಕೊಕ್ಕಿನಿಂದ ತೆಗೆಯುವುದಕ್ಕೆ ಅದರಿಂದಾಗದು. ಆದರೆ ಅದು ಏನು ಮಾಡುತ್ತ ದೆಂದರೆ ಗೇರುಬೀಜದ ಸಮೇತ, ಬೋರಲಾಗಿಟ್ಟ ಲೋಟವನ್ನು ಮೇಜಿನ ತುದಿಯವರೆಗೂ ದೂಡುತ್ತದೆ. ಲೋಟ ಮೇಜಿನ ಮೇಲಿಂದ ನೆಲಕ್ಕೆ ಬೀಳುತ್ತದೆ, ಜೊತೆಗೆ ಗೇರುಬೀಜವೂ. ತನಗೆ ಬೇಕಾದ ಗೇರುಬೀಜವನ್ನು ಕೊಕ್ಕಿನಲ್ಲಿ ಎತ್ತಿಕೊಂಡು ಕಾಗೆ
ಹಾರಿಹೋಗುತ್ತದೆ!’

‘ಕಾಗೆ ಅಂದ್ರೆ ನನಗೆ ತುಂಬ ಇಷ್ಟ. ನಾನು ಮೂರು ವರ್ಷದ ಹುಡುಗನಿದ್ದಾಗ ಮನೆಯ ಗೋಡೆ ಮೇಲೆಲ್ಲ ಚಿತ್ರ ಬಿಡಿಸಲಿಕ್ಕೆ
ಶುರು ಮಾಡಿದ್ದೆ. ಆಗಲೇ ಕಾಗೆ ಚಿತ್ರನೂ ಬಿಡಿಸುತ್ತಿದ್ದೆ. ಆಮೇಲೆ ಇದಿಷ್ಟು ದಶಕಗಳ ನನ್ನ ಜೀವನಯಾತ್ರೆಯಲ್ಲಿ ಕಾಗೆ ಸಹ ನನ್ನ
ಕಾರ್ಟೂನ್‌ಗಳ ಒಂದು ಭಾಗವೇ ಆಗಿಹೋಗಿದೆ. ಕಾಗೆಗಳದೇ ಚಿತ್ರಗಳನ್ನು ಬಿಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದೂ ಇದೆ.
ಒಂದೊಂದು ಕಾಗೆಗೆ(ಕಾಗೆಯ ಚಿತ್ರಕ್ಕೆ) ೫೦೦೦ ರುಪಾಯಿ. ಈಗ ಬೆಲೆ ಇನ್ನೂ ಸ್ವಲ್ಪ ಜಾಸ್ತಿ ಮಾಡಿದ್ದೇನೆ. ಕಳೆದವರ್ಷ ಮದ್ರಾಸಿ ನಲ್ಲಿ ನನ್ನ ಕಾಗೆಚಿತ್ರಗಳ ಎಕ್ಸಿಬಿಷನ್ ಇತ್ತು. ಇಪ್ಪತ್ತೊಂದು ಚಿತ್ರಗಳಿದ್ದವು. ಮೊದಲ ದಿನವೇ ಎಲ್ಲ ಸೋಲ್ಡ್ ಔಟ್.

ಹಾಗಾಗಿ ಕಾಗೆಯನ್ನು ಅಂಡರ್‌ಎಸ್ಟಿಮೇಟ್ ಮಾಡ್ಬೇಡಿ. ಕಾಗೆ ಬಗೆಗಿನ ಕಥೆಗಳೂ ನನ್ನಲ್ಲಿ ಬೇಕಾದಷ್ಟು ಇವೆ. ಪುರಿ ಜಗನ್ನಾಥ
ದೇವಸ್ಥಾನವನ್ನುರಾಜನೊಬ್ಬ ಕಟ್ಟಿಸಿದ್ದು, ಸಮುದ್ರ ಮಧ್ಯದಲ್ಲಿ ಒಂದು ಗೂಟದ ಮೇಲೆ ಕುಳಿತ ಕಾಗೆಯು ಆ ರಾಜನ ಬಳಿ
‘ನೀನು ಒಂದು ದೇವಸ್ಥಾನವನ್ನು ಕಟ್ಟು; ನಿನ್ನ ಸಾಮ್ರಾಜ್ಯಕ್ಕೆ ಒಳ್ಳೆಯದಾಗುತ್ತದೆ’ ಅಂತ ಹೇಳಿದ್ದರಿಂದಲೇ ಎಂಬ ಐತಿಹ್ಯವೂ
ಇದೆ. ನಾನು ಮೂರನೆಯ ವಯಸ್ಸಿನಲ್ಲೇ ಕಾಗೆ ಚಿತ್ರ ಬಿಡಿಸಿದ್ದೆ ಎಂದೆನಲ್ಲ, ನನ್ನ ತಾಯಿಗೆ ಅದು ತುಂಬ ಮೆಚ್ಚುಗೆಯಾಗಿತ್ತು.
‘ಕಾಗೆಯು ಶನಿದೇವನ ವಾಹನ, ಅದನ್ನು ಪೂಜ್ಯಭಾವದಿಂದ ನೋಡುತ್ತಿದ್ದೀ. ನಿನಗೆ ಒಳ್ಳೆಯದಾಗುತ್ತದೆ’ ಎಂದು ಅವರು
ನನ್ನನ್ನು ಹರಸಿದ್ದರು. ನನ್ನ ಕಾಗೆಚಿತ್ರದ ಒಂದು ವಿಶೇಷ ಪ್ರಸಂಗವನ್ನು ಹೇಳಿ ಮುಗಿಸುತ್ತೇನೆ ಈ ಪುರಾಣವನ್ನು.

ಏರ್ ಇಂಡಿಯಾದ ಮ್ಯಾನೇಜರ್ ಒಬ್ಬರಿಗೆ ನಾನೊಂದು ಕಾಗೆ ಚಿತ್ರವನ್ನು ಉಡುಗೊರೆಯಾಗಿ ಕೊಡಲು ಅವರ ಮನೆಗೆ
ಹೋಗಿದ್ದೆ. ಆವತ್ತು ಅವರ ಮೊಮ್ಮಗ ಬಂದಿದ್ದ ಊರಿಂದ. ವರಾಂಡದಲ್ಲಿ ಆಡುತ್ತಾ ಇದ್ದ, ಅವನ ಆಟದ ಸಾಮಾನು ಇಟ್ಕೊಂಡು. ನಾನು ಕೊಟ್ಟ ಕಾಗೆಚಿತ್ರ, ಗಾಜಿನ ಫ್ರೇಮ್ ಹಾಕಿದ್ದು, ಮ್ಯಾನೇಜರ್ ಅವರ ಪುಸ್ತಕಗಳ ಕಪಾಟಿನ ಮೇಲೆ ಇಟ್ಟಿ ದ್ದರು. ಈ ಹುಡುಗ, ಎರಡು ವಯಸ್ಸಿನವನು, ಇಲ್ಲಿ ಅಲ್ಲಿ ಓಡಾಡಿದ. ಕಾಗೆಯನ್ನು ನೋಡಿದ. ಒಂದು ಸರ್ತಿ ಶ್! ಎಂದ.

ಅದೇನೂ ಹಾರಿಹೋಗ್ಲಿಲ್ಲ. ಬಂದ, ಅಲ್ಲೊಂದು ಪೇಪರ್ ವೆಯ್ಟ್ ಇತ್ತು ಟೇಬಲ್ ಮೇಲೆ. ತೆಗ್ದ, ಒಂದೇ ಏಟಿಗೆ ಕಾಗೆಚಿತ್ರದ ಫ್ರೇಮ್‌ಅನ್ನು ಒಡೆದು ಬೀಳಿಸಿಬಿಟ್ಟ! ಬಹುಶಃ ನನ್ನ ಕಾಗೆಚಿತ್ರಗಾರಿಕೆಗೆ, ಅದರಲ್ಲಿ ನೈಜತೆ ಮೂಡಿಸುವ ನನ್ನ ಪ್ರಯತ್ನಕ್ಕೆ, ಇದಕ್ಕಿಂತ ದೊಡ್ಡ ಕಾಂಪ್ಲಿಮೆಂಟ್ ಬೇರೊಂದಿಲ್ಲ.’ – ಇದು ಬೆಂಗಳೂರು ಆಕಾಶವಾಣಿಯ ಧ್ವನಿಭಂಡಾರದಲ್ಲಿ ಸಿಕ್ಕಿದ ಆರ್.ಕೆ.ಲಕ್ಷ್ಮಣ್ ಸಂದರ್ಶನದಿಂದ ಆಯ್ದ ಕಾಗೆ ಕಥನ.

ಸುಮಾರು ಅರ್ಧ ಗಂಟೆಯ ಸಂದರ್ಶನದಲ್ಲಿ ಹತ್ತು ನಿಮಿಷಗಳಷ್ಟು ಕಾಗೆ ಬಗ್ಗೆಯೇ ಮಾತು. ಎರಡು ದಶಕಗಳ ಹಿಂದೆ, ೧೯೯೦ರ ನವೆಂಬರ್‌ನಲ್ಲಿ ಪ್ರಸಾರವಾಗಿದ್ದ ಈ ಸಂದರ್ಶನ, ಬೆಂಗಳೂರು ಆಕಾಶವಾಣಿಯ ಯುಟ್ಯೂಬ್ ವಾಹಿನಿಯಲ್ಲಿ ಕೆಲವೊಂದಿಷ್ಟು ಅಮೂಲ್ಯ ಧ್ವನಿಮುದ್ರಿಕೆಗಳನ್ನು ಶ್ರೋತೃಗಳಿಗೆ ಮರು – ಕೇಳುವಿಕೆಗೆ ಒದಗಿಸಿರುವುದರಲ್ಲಿ ನನಗೆ ಸಿಕ್ಕಿತು. ಸಂದರ್ಶಕರು ಬೆಂಗಳೂರು ಆಕಾಶವಾಣಿಯಲ್ಲಿ ಆಗ ನಿರ್ದೇಶಕರಾಗಿದ್ದ ಎಚ್.ಕೆ. ರಂಗನಾಥ್. ಈಗ ಇವರಿಬ್ಬರೂ ಇಲ್ಲ. ಆದರೆ ಸಂದರ್ಶನ ಕೇಳ್ತಾ ಇರುವಾಗ ನಮ್ಮ ಕಣ್ಣೆದುರೇ ಇಬ್ಬರೂ ಕುಳಿತು ಲವಲವಿಕೆಯಿಂದ ಹರಟೆ ಹೊಡೆಯುತ್ತಿದ್ದಾರೇನೋ ಎಂಬಂಥ ರೋಚಕ ಅನುಭವ.

೬೦-೭೦ರ ದಶಕಗಳಲ್ಲಿ ರೇಡಿಯೊ ಕೇಳುತ್ತಿದ್ದ ಕನ್ನಡಿಗರಿಗೆ ಎಚ್.ಕೆ. ರಂಗನಾಥ್ ಧ್ವನಿ ಚಿರಪರಿಚಿತ. ಅವರು ಪ್ರದೇಶ ಸಮಾ ಚಾರ / ಕನ್ನಡವಾರ್ತೆ ಸಹ ಓದುತ್ತಿದ್ದರೆಂದು ಆ ಕಾಲದವರು ನೆನಪಿಸಿಕೊಳ್ಳುತ್ತಾರೆ. ಎಚ್.ಕೆ. ರಂಗನಾಥ್ ಅವರ ಒಬ್ಬ ಸೋದರ ಎಚ್.ಕೆ.ರಾಮಕೃಷ್ಣ ಸಹ ಆಕಾಶವಾಣಿಯಲ್ಲಿ ದಿಲ್ಲಿ ಕೇಂದ್ರದಿಂದ ಬರುತ್ತಿದ್ದ ವಾರ್ತೆಗಳ ವಾಚಕರಾಗಿದ್ದವರು.

ಆಮೇಲೆ ರೇಡಿಯೊ ಮಾಸ್ಕೊದಿಂದ ಅರ್ಧ ಗಂಟೆ ಕನ್ನಡ ಕಾರ್ಯಕ್ರಮ ಬರುತ್ತಿದ್ದಾಗ ಅದರ ನಿರೂಪಕರಾಗಿದ್ದರು. ಆ ಧ್ವನಿ ನನಗೆ ಚೆನ್ನಾಗಿ ನೆನಪಿದೆ. ಮತ್ತೊಬ್ಬ ಸೋದರ ಡಾ. ಎಚ್.ಕೆ. ನಂಜುಂಡಸ್ವಾಮಿಯವರು ಇಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ವೈದ್ಯರಾಗಿದ್ದವರು. ಕನ್ನಡ ಸಾಹಿತ್ಯರಂಗದ ಚಟುವಟಿಕೆಗಳ ಮೂಲಕ ನನಗವರ ಮುಖತಃ ಪರಿಚಯವೂ ಆಗಿತ್ತು. ತುಂಬ ಹಾಸ್ಯಸ್ವಭಾವದವರು. ಕನ್ನಡದಲ್ಲಿ ಮೂರ್ನಾಲ್ಕು ಮೌಲಿಕ ಕೃತಿಗಳನ್ನು ರಚಿಸಿದವರು.

ಅಮೆರಿಕನ್ನಡಿಗ ಲೇಖಕ – ಲೇಖಕಿಯರು ಸೇರಿ ತಯಾರಿಸಿದ ‘ನಗೆಗನ್ನಡಂ ಗೆಲ್ಗೆ’ ಗ್ರಂಥದ ಸಂಪಾದಕರಾಗಿದ್ದವರು. ಅವರ
ಕನ್ನಡ – ಗಿನ್ನಡ ಎಂಬ ಲಘುಹರಟೆಯೊಂದನ್ನಂತೂ ನಾನು ಆಗಾಗ ಓದಿ ಆನಂದಿಸುತ್ತಿರುತ್ತೇನೆ. ಈಗ ಈ ಹಿರಿಯರೆಲ್ಲರೂ
ನಮ್ಮನ್ನಗಲಿ ಹೋಗಿದ್ದಾರೆ; ಕಾಗೆ ಕಥನದಿಂದಾಗಿ ಒಮ್ಮೆ ಎಲ್ಲ ಧ್ವನಿಗಳೂ ನನ್ನ ಮನದಲ್ಲೇ ಮಾರ್ದನಿಸಿದವು.

ಇನ್ನು, ಇಂದಿನ ಅಂಕಣದ ಜೊತೆಗಿರುವ ಚಿತ್ರದ ವಿಚಾರವೂ ಉಲ್ಲೇಖಾರ್ಹವಾದದ್ದು. ಇದು ಮೊನ್ನೆ ಅಕ್ಟೋಬರ್ ೨೪ರಂದು
ಆರ್.ಕೆ.ಲಕ್ಷ್ಮಣ್ ಅವರ ೯೮ನೆಯ ಜನ್ಮದಿನ ಸಂದರ್ಭದಲ್ಲಿ ಬೆಂಗಳೂರಿನ ಗೌರಿ ಎನ್. ಪ್ರಸಾದ್ ಎಂಬೊಬ್ಬ ಪುಟ್ಟ ಹುಡುಗಿಯು ಬಿಡಿಸಿದ ಚಿತ್ರ. ಗೌರಿ ಹನ್ನೊಂದು ವರ್ಷ ವಯಸ್ಸಿನವಳು. ನನಗೆ ಈ ಚಿತ್ರವನ್ನು ಕಳಿಸಿದ್ದು ಗೌರಿಯ ತಾತ ಲಕ್ಷ್ಮೀನಾರಾಯಣ ಎಂಬುವವರು, ನನ್ನ ಅಂಕಣದ ಹಿತೈಷಿ ಓದುಗ ಮಿತ್ರರು. ಆರ್.ಕೆ.ಲಕ್ಷ್ಮಣ್ ಅವರ ಕಾರ್ಟೂನ್‌ಗಳಲ್ಲಿ ಕಾಣಿಸಿಕೊಳ್ಳುವ ಚೌಕುಳಿ ಕೋಟು ಮತ್ತು ಹರಿದ ಪಂಚೆ ಧರಿಸುವ ‘ಶ್ರೀಸಾಮಾನ್ಯ’ನು ಲಕ್ಷ್ಮಣ್ ಅವರ ಹೆಗಲ ಮೇಲೆ ಒಂದು ಕೈಯಿಟ್ಟು, ಇನ್ನೊಂದು ಕೈಯಲ್ಲಿ ಕೇಕ್ ಮೇಲೆ ಕ್ಯಾಂಡಲ್ ಉರಿಸಿ ಜನ್ಮದಿನ ಶುಭಾಶಯ ಕೋರುತ್ತಿರುವ ದೃಶ್ಯ. ಗೌರಿ ಇದನ್ನು ಎಷ್ಟು ಚೆನ್ನಾಗಿ ಬಿಡಿಸಿದ್ದಾಳೆ ನೋಡಿ!

ಜೊತೆಯಲ್ಲೇ ‘The man who painted our lives with colors of humour and brought smiles to a billion faces….’ ಎಂದು ಮುದ್ದಾದ ಕೈಬರಹದಲ್ಲಿ ಸ್ಮರಣವಾಕ್ಯ. ಬರ್ತ್‌ಡೇ ಸಂಭ್ರಮವೆಂದು ಇರಬಹುದು, ಶ್ರೀಸಾಮಾನ್ಯನು ಚೌಕುಳಿ ಕೋಟಿನ ಬದಲಿಗೆ ಬೇರೊಂದು ಮೇಲುಡುಗೆ ತೊಟ್ಟಿದ್ದಾನೆ. ಗೌರಿಯ ಚಿತ್ರಕಲೆ ವಿಶೇಷವಾಗಿದೆ ಎಂದು ನನಗೆ ಅನಿಸಿ ಆಕೆಯ ಬಗ್ಗೆ ಇನ್ನಷ್ಟು ವಿವರ ಗಳನ್ನು ನಾನು ಲಕ್ಷ್ಮೀ ನಾರಾಯಣ ಅವರಿಂದ ತಿಳಿದುಕೊಂಡೆ. ಪೆನ್ಸಿಲ್ ಡ್ರಾಯಿಂಗ್ ಚಿತ್ರ ಬಿಡಿಸುವುದು ಗೌರಿಯ ಒಂದು ಹವ್ಯಾಸ.

ಗಣೇಶನ ಚಿತ್ರ, ಶಿವಪಾರ್ವತಿಯರ ಚಿತ್ರ ಮುಂತಾದುವಷ್ಟೇ ಅಲ್ಲದೆ ಕೆ.ಎಸ್. ನಿಸ್ಸಾರ್ ಅಹ್ಮದ್ ಅವರ ಕ್ಯಾರಿಕೇಚರ್ ಸಹ
ಚಿತ್ರಿಸಿದ್ದಾಳೆ. ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಆರನೆಯ ತರಗತಿಯಲ್ಲಿ ಓದುತ್ತಿರುವ ಗೌರಿ ಲಘುಶಾಸ್ತ್ರೀಯ ಸಂಗೀತ ಹಾಡುತ್ತಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ಗ್ರೇಡ್ ವಿದ್ಯಾರ್ಥಿ. ನೃತ್ಯವನ್ನೂ ಕಲಿಯುತ್ತಿದ್ದಾಳೆ. ಪುಸ್ತಕಗಳನ್ನು, ಕಾದಂಬರಿಗಳನ್ನು ಓದುತ್ತಾಳೆ. ಕಾಂಪೀರಿಂಗ್ ಮಾಡುತ್ತಾಳೆ.

gowrismusings.blogspot.com ಅಂತೊಂದು ಬ್ಲಾಗ್ ಸಹ ಬರೆಯುತ್ತಾಳೆ! ಗೌರಿಯಂಥ ಪ್ರತಿಭಾನ್ವಿತರೆಂದರೆ ನನಗೆ ಯಾವತ್ತಿಗೂ ಹೆಚ್ಚು ಅಭಿಮಾನ. ಅದರಲ್ಲೂ ಅವರು ನಮ್ಮ ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಕೆಲಸ, ಅದೆಷ್ಟೇ ಚಿಕ್ಕದಿರಲಿ, ಮಾಡಿದರಂತೂ ಅಭಿಮಾನ ಇಮ್ಮಡಿಯಾಗುತ್ತದೆ.

ಆರ್.ಕೆ.ಲಕ್ಷ್ಮಣ್ ಎಂಬ ಮೇರು ಕಲಾವಿದ, ಕನ್ನಡಿಗ, ವಿಶ್ವಮಾನ್ಯ ವ್ಯಂಗ್ಯಚಿತ್ರಕಾರ, ಅವರ ಅನನ್ಯ ಸೃಷ್ಟಿ ಶ್ರೀಸಾಮಾನ್ಯ ವ್ಯಕ್ತಿ – ಇವೆಲ್ಲವನ್ನೂ ಚಂದದ ಚಿತ್ರ ಬಿಡಿಸಿ ಚೌಕಟ್ಟಿನೊಳಕ್ಕೆ ತಂದ ಹೊಸ ಪೀಳಿಗೆಯ ಕನ್ನಡತಿ ಗೌರಿ, ಒಂದು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ, ಭವ್ಯ ಪರಂಪರೆ, ಮೌಲ್ಯಗಳು, ಹೇಗೆ ತಲೆಮಾರಿನಿಂದ ತಲೆಮಾರಿಗೆ ಹಾದುಹೋಗಬೇಕು ಎಂಬುದಕ್ಕೆ ಆದರ್ಶ, ಅನುಸರಣೀಯ ಉದಾಹರಣೆ.

ಈ ಅಂಶವನ್ನು ಎತ್ತಿಹಿಡಿಯಲೆಂದೇ ನಾನು ಇಂದಿನ ಅಂಕಣದಲ್ಲಿ ಕಾಗೆ ಕಥನದ ನೆಪದಲ್ಲಿ ಆರ್.ಕೆ.ಲಕ್ಷ್ಮಣ್ ಅವರ ಸಂಸ್ಮರಣೆ, ಗೌರಿ ಬಿಡಿಸಿದ ಆರ್.ಕೆ.ಲಕ್ಷ್ಮಣ್ ರೇಖಾಚಿತ್ರ – ಇವೆರಡರ ಸಮಪಾಕ ಮಾಡಿ ಪ್ರಸ್ತುತ ಪಡಿಸಿದ್ದೇನೆ. ನಾವು ಸಾಮಾನ್ಯ ಸಂಗತಿ ಗಳಲ್ಲಿ, ವಸ್ತುಗಳಲ್ಲಿ, ವಿಚಾರಗಳಲ್ಲಿ, ವ್ಯಕ್ತಿಗಳಲ್ಲಿ ಇರುವ ಅಸಾಮಾನ್ಯತೆಯನ್ನು ಗುರುತಿಸಿ ಗೌರವಿಸಿದಷ್ಟೂ ಈ ಜೀವನ,
ಈ ಪ್ರಪಂಚ ಸುಂದರವಾಗುತ್ತ ಹೋಗುತ್ತವೆ. ಇದು ನನ್ನ ಅಚಲ ನಂಬಿಕೆ ಮತ್ತು ಅಷ್ಟಿಷ್ಟು ಅನುಭವ ಕೂಡ. ಹೌದೆಂದು ನಿಮ್ಮ ಅಭಿಪ್ರಾಯವೂ ಆದರೆ ಅದಕ್ಕಿಂತ ಸಂತಸ ಬೇರೇನು ಬೇಕು!