Saturday, 26th October 2024

D K Shivakumar Column: ಬೆಂಗಳೂರಿನ ಹಳ್ಳಿಗಳಿಗೆ ಬರಲಿದ್ದಾಳೆ ಕಾವೇರಿ ಮಾತೆ

ಗಂಗಾವತರಣ

ಡಿ.ಕೆ.ಶಿವಕುಮಾರ್‌

ಬೆಂಗಳೂರು ನಗರ ದಿನೇದಿನೆ ವೇಗವಾಗಿ ಬೆಳೆಯುತ್ತಿದೆ. ಈ ವೇಗಕ್ಕೆ ತಕ್ಕಂತೆ ಮೂಲಭೂತ ಅಗತ್ಯತೆಗಳನ್ನು ಪೂರೈಸು ವುದು ಸವಾಲಿನ ಕೆಲಸವಾಗಿದೆ. ಬೆಂಗಳೂರಿನ ಜನರು ದಿನವೊಂದಕ್ಕೆ 2600 ಮಿಲಿಯನ್ ಲೀಟರ್ ನೀರನ್ನು ಬಳಸುತ್ತಾರೆ. ಇದರಲ್ಲಿ 1450 ಎಂಎಲ್‌ಎಡಿ ನೀರು ಕಾವೇರಿ ನದಿಯಿಂದ ಪೂರೈಕೆಯಾದರೆ ಉಳಿದ 650 ಎಂಎಲ್‌ಡಿ ನೀರು ಅಂತರ್ಜಲದಿಂದ ಪೂರೈಕೆಯಾಗುತ್ತದೆ.

ಆದರೂ ಬೆಂಗಳೂರಿಗೆ ಪೂರೈಸಲು 500 ಎಂಎಲ್‌ಡಿಗಳಷ್ಟು ನೀರಿನ ಕೊರತೆ ಇದೆ. 2018 ದಕ್ಷಿಣ ಆಫ್ರಿಕಾದಲ್ಲಿ ನೀರಿನ ತೀವ್ರ ಅಭಾವ ಎದುರಾದಾಗ, ಜಾಗತಿಕವಾಗಿ ಅನೇಕ ಮಹಾನಗರಗಳೂ ಇದೇ ಪರಿಸ್ಥಿತಿಯನ್ನು ಎದುರಿಸ ಲಿವೆ ಎಂದು ಎಚ್ಚರಿಸಲಾಗಿತ್ತು. ಆದರೆ ಮಹಾನಗರಿ ಬೆಂಗಳೂರಿಗೂ ಜಲಕ್ಷಾಮ ಇಷ್ಟು ವೇಗವಾಗಿ ಬಂದು ಅಪ್ಪಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕಳೆದ ಬಿರುಬೇಸಗೆಯಲ್ಲಿ ಬೆಂಗಳೂರಿನ ಜನರಿಗೆ ನೀರಿನ ಸಮಸ್ಯೆ ಬಹಳ ಕಾಡಿತ್ತು.

ಬೆಂಕಿ ಬಿದ್ದ ಮೇಲೆ ಬಾವಿ ತೋಡುವುದರ ಬದಲು, ಬೆಂಗಳೂರಿನ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರುವ ಕರ್ನಾಟಕ ರಾಜ್ಯ ಸರಕಾರ ಹಾಗೂ ಬೆಂಗಳೂರು ಜಲಮಂಡಳಿ, ಅನೇಕ ಜಲಸಂರಕ್ಷಣಾ ಕಾರ್ಯಗಳು ಮತ್ತು ಸಮರ್ಪಕ ನೀರಿನ ಪೂರೈಕೆಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಈ ಪೈಕಿ, ನನ್ನ ಮುಂದಾಳತ್ವದಲ್ಲಿ, ‘ಮನೆಮನೆಗೂ ಕಾವೇರಿ ನೀರು- ಇದು ಸಮೃದ್ಧ ಬೆಂಗಳೂರು’ ಎಂಬ ಧ್ಯೇಯದಡಿ ಅನುಷ್ಠಾನಗೊಳ್ಳುತ್ತಿರುವ, ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಜಲಸಂಪರ್ಕ ಯೋಜನೆ ಬಹಳ ಮುಖ್ಯವಾಗಿದೆ.

ಇದರಿಂದ ಬೆಂಗಳೂರಿನ 110 ಹಳ್ಳಿಗಳ ಜಲಕ್ಷಾಮ ನೀಗಲಿದೆ. 4 ಲಕ್ಷ ನೀರಿನ ಸಂಪರ್ಕ, 50 ಲಕ್ಷ ಜನರಿಗೆ ಕಾವೇರಿ ನೀರನ್ನು ಪೂರೈಸಲಿರುವ ಈ ಮಹತ್ವಾಕಾಂಕ್ಷಿ ಯೋಜನೆ ಇತಿಹಾಸವನ್ನು ಸೃಷ್ಟಿಸಲಿದೆ.

ಮನೆಮನೆಗಳಲ್ಲೂ ಹರಿಯಲಿದ್ದಾಳೆ ಕಾವೇರಿ ಮಾತೆ: ೨೦೦೭ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಗ್ರಾಮಗಳ ಅಭ್ಯುದಯಕ್ಕೆ ನನ್ನ ನೇತೃತ್ವದಲ್ಲಿ ಕಾಯಕಲ್ಪ ದೊರೆತಿದೆ. ದೇಶದ ಅತ್ಯಾಧುನಿಕ ಹಾಗೂ ಬೃಹತ್ ನೀರಿನ
ಸಂಸ್ಕರಣಾ ಘಟಕವು ಮಂಡ್ಯದ ಮಳವಳ್ಳಿಯ ತೊರೆಕಾಡನಹಳ್ಳಿಯಲ್ಲಿ ನಿರ್ಮಾಣವಾಗಿದೆ. ನೆಟ್ಟಕಲ್ ಸಮತೋಲನ ಅಣೆಕಟ್ಟಿನಿಂದ ನೀರೆತ್ತಿ, ಟಿ.ಕೆ. ಹಳ್ಳಿ, ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‌ಗಳ ಮೂಲಕ ಒಟ್ಟು 775 ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ 13 ಹಳ್ಳಿಗಳಲ್ಲಿ 48000 ಸಂಪರ್ಕ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 37500 ಸಂಪರ್ಕ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳಲ್ಲಿ 73500 ಸಂಪರ್ಕ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 32 ಹಳ್ಳಿಗಳಲ್ಲಿ 96750 ಸಂಪರ್ಕ, ಮಹದೇವಪುರ ಕ್ಷೇತ್ರದ 33 ಹಳ್ಳಿ ಗಳಲ್ಲಿ 93100 ನೀರಿನ ಸಂಪರ್ಕ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಹಾಗೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ನೀರಿನ ಸಂಪರ್ಕ ಸಿಗಲಿದ್ದು, ಮನೆಮನೆಗೂ ಕಾವೇರಿ ನೀರು ಸರಬರಾಜು ಆಗಲಿದೆ.

ಮಾಡರ್ನ್ ಎಂಜಿನಿಯರಿಂಗ್ ಮಾರ್ವೆಲ್

ಜಪಾನ್ ಯಂತ್ರೋಪಕರಣಗಳು ಹಾಗೂ ಫ್ರೆಂಚ್ ತಂತ್ರಜ್ಞಾನಗಳನ್ನು ಬಳಸಿ ಈ ಮಹತ್ವಾಕಾಂಕ್ಷೆಯ ಯೋಜನೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. 2.4 ಕೋಟಿ ಮಾನವ ಗಂಟೆಗಳ ಶ್ರಮ ಈ ಯೋಜನೆಯ ಹಿಂದಿದೆ. 145000 ಎಂಟಿ ಸ್ಟೀಲ್ ಪ್ಲೇಟ್‌ಗಳನ್ನು ಬಳಸಲಾಗಿದೆ. 450 ಮೀಟರ್ ಎತ್ತರಕ್ಕೆ ನೀರು ಹಾಯಿಸಲಾ ಗುತ್ತದೆ. ಅಂದರೆ ಇದು ಐಫೆಲ್ ಟವರ್‌ಗಿಂತ ಹೆಚ್ಚಿನ ಎತ್ತರವನ್ನು ಹೊಂದಿದೆ.

ಹಾಗಾಗಿ ಈ ಯೋಜನೆಯನ್ನು ‘ಮಾಡರ್ನ್ ಎಂಜಿನಿಯರಿಂಗ್ ಮಾರ್ವೆಲ್’ ಎಂದೇ ಕರೆಯಬಹುದು. 4336 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ಜಪಾನಿನ ಸಂಸ್ಥೆ ಜೈಕಾದಿಂದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲಾಗಿದೆ. ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಜಲಮಂಡಳಿಯ ವಿವಿಧ ಆದಾಯ ಮೂಲಗಳಿಂದ ಈ ಸಾಲವನ್ನು ತೀರಿಸಲಾಗುವುದು.

ಅಕ್ರಮ ನೀರಿನ ಸಂಪರ್ಕಗಳಿಗೆ ತಡೆ
ಕಾವೇರಿ ನೀರು ಸಂಪರ್ಕ ಪಡೆಯುವ ಪ್ರಕ್ರಿಯೆಯು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್
ಮನೋಹರ್ ಅವರ ಸುಪರ್ದಿಯಲ್ಲಿ ನಡೆಯುತ್ತಿದೆ. ಜಲಮಂಡಳಿ ಅಧಿಕಾರಿಗಳು ಕಾವೇರಿ ನೀರು ಸಂಪರ್ಕ
ನೋಂದಣಿಗಾಗಿ ಮನೆ ಬಾಗಿಲಿಗೆ ಬರಲಿದ್ದು, ಜನರು ಅಗತ್ಯ ಮಾಹಿತಿಯನ್ನು ನೀಡಿ ಇದರ ಪ್ರಯೋಜನ
ಪಡೆದುಕೊಳ್ಳಬಹುದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಯೋಜನೆ
ಸಾಕಾರವಾದರೆ ಈಗಿರುವ ಅಕ್ರಮ ಜಲಸಂಪರ್ಕಗಳಿಗೆ ತಡೆ ಬೀಳಲಿದೆ ಹಾಗೂ ಅನಧಿಕೃತವಾಗಿ ಬೋರ್‌ವೆಲ್‌ ಗಳನ್ನು ಕೊರೆಸುವುದೂ ನಿಲ್ಲಲಿದೆ. ಹಾಗಾಗಿ ಸುಸ್ಥಿರವಾದ ನೀರಿನ ಬಳಕೆಯಿಂದಾಗಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉಂಟಾಗುವುದನ್ನು ಸಮರ್ಥವಾಗಿ ಎದುರಿಸಬಹುದು. ಬೆಂಗಳೂರನ್ನು ‘ವಾಟರ್ ಸರ್ಪ್ಲಸ್’ ಆಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಕೋವಿಡ್ ಕಾರಣದಿಂದ ನಿಧಾನಗತಿಯತ್ತ ಸಾಗಿದ್ದ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯು ನನ್ನ ಮುತುವರ್ಜಿಯಿಂದಾಗಿ ಮತ್ತೆ ಹುರುಪನ್ನು ಪಡೆದುಕೊಂಡಿದೆ. ಕಾವೇರಿ, ಮಹದಾಯಿ, ಮೇಕೆದಾಟು ಯೋಜನೆಗಳ ವಿಚಾರಗಳಲ್ಲಿ ಸದಾ ಕನ್ನಡಿಗರ ಪರ ಧ್ವನಿ ಎತ್ತುತ್ತಾ ಬಂದಿರುವ ನಾನು, ಇತ್ತೀಚೆಗಷ್ಟೇ ಎತ್ತಿನ ಹೊಳೆ ಯೋಜನೆಯ ಮೊದಲನೇ ಹಂತವನ್ನು ಲೋಕಾರ್ಪಣೆಗೊಳಿಸಿದ್ದು ನಿಮಗೆ ಗೊತ್ತಿರುವ ಸಂಗತಿಯೇ.
ಇದಕ್ಕಾಗಿ ಜನರು ನನ್ನನ್ನು ‘ಬಯಲುಸೀಮೆಯ ಭಗೀರಥ’ ಎಂದು ಕರೆದಿದ್ದೂ ಉಂಟು. ಈಗ ಬೆಂಗಳೂರಿನ ವಿವಿಧ
ಹಳ್ಳಿಗಳ ಮನೆಬಾಗಿಲಿಗೆ ಕಾವೇರಿ ನೀರನ್ನು ಕೊಳವೆಗಳ ಮೂಲಕ ಹರಿಸುವ ಕಾವೇರಿ ಐದನೇ ಹಂತದ ಕುಡಿಯುವ
ನೀರಿನ ಯೋಜನೆಯ ಕನಸೂ ನನಸಾಗುತ್ತಿದೆ. ಇದರಿಂದಾಗಿ, ಬೆಂಗಳೂರನ್ನು ಕಾಡುತ್ತಿರುವ ನೀರಿನ ಬವಣೆಗೆ ಪರಿಹಾರ ದೊರೆಯಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಕ್ಟೋಬರ್ 16ರಂದು ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ನಾನು ಟಿ.ಕೆ. ಹಳ್ಳಿಯಲ್ಲಿ ಚಾಲನೆ ನೀಡಲಿದ್ದೇವೆ. ಬನ್ನಿ, ಬೆಂಗಳೂರನ್ನು ಸಮೃದ್ಧ ವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ.

(ಲೇಖಕರು ಕರ್ನಾಟಕದ ಉಪಮುಖ್ಯಮಂತ್ರಿಗಳು)

ಇದನ್ನೂ ಓದಿ: DK Shivakumar: ಅ. 16 ಬೆಂಗಳೂರಿಗೆ ವಿಶೇಷ ದಿನ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್