Saturday, 28th December 2024

Davanagere Mukund Column: ಅದು ಹಾಗಲ್ಲ, ಹೀಗೆ..

ಪ್ರತಿಸ್ಪಂದನ

ದಾವಣಗೆರೆ ಮುಕುಂದ

ಸುರೇಂದ್ರ ಪೈ, ಭಟ್ಕಳ ಅವರ ‘ವಾರದಲ್ಲಿ 70 ಗಂಟೆ ಕೆಲಸ ಯಾರಿಗಾಗಿ…?’ ಎಂಬ ಲೇಖನದ ಕೆಲ ಅಂಶಗಳ
ಕುರಿತಾಗಿ ನನ್ನ ಅಭಿಪ್ರಾಯವನ್ನು ಮಂಡಿಸಿದ್ದಕ್ಕೆ ಅವರು ‘ಮರುಸ್ಪಂದನ’ದ ರೂಪದಲ್ಲಿ ಅದಕ್ಕೆ ಪ್ರತಿಕ್ರಿಯಿಸಿ ದ್ದರು. ಹೀಗಾಗಿ ಅದರಲ್ಲಿನ ಕೆಲ ಅಂಶಗಳಿಗೆ ನನ್ನ ಅಭಿಪ್ರಾಯ ತಿಳಿಸಲು ಬಯಸುತ್ತೇನೆ.

ಮೊದಲನೆಯದಾಗಿ, ದಿನಕ್ಕೆ 10-12 ಗಂಟೆ ಕೆಲಸ ಮಾಡುವುದು ನಾವು ಮಾಡುತ್ತಿರುವ ನೌಕರಿಯ ಅನಿವಾರ್ಯತೆ ಯಿಂದಾಗಿ. ಹೀಗಾಗಿ ಆಂತರಿಕ ಪ್ರೇರಣೆಯನ್ನು ಪಡೆದುಕೊಳ್ಳಲೇಬೇಕಾಗುತ್ತದೆ. ವರ್ಗಾವಣೆ ಇರುವ ನೌಕರಿಗೆ ಸೇರಿದಾಗ, ಅನಿವಾರ್ಯವಾಗಿ ಕೆಲವು ಸಲ ಕುಟುಂಬದಿಂದ ಬೇರೆ ಇರಬೇಕಾಗುತ್ತದೆ. ನನ್ನ ಕೆಲಸದಲ್ಲೇ ಐದು ಸಲ, ಹಳ್ಳಿಯಲ್ಲಿರುವ ಶಾಖೆಗೆ ಮತ್ತು ಬೇರೆ ರಾಜ್ಯದ ಶಾಖೆಗಳಿಗೆ ವರ್ಗವಾದಾಗ ಅನಿವಾರ್ಯವಾಗಿ ಕುಟುಂಬವನ್ನು ಒಂದು ಕಡೆ ಬಿಟ್ಟು, ವರ್ಗವಾದ ಸ್ಥಳಕ್ಕೆ ನಾನೊಬ್ಬನೇ ಹೋಗುತ್ತಿದ್ದೆ. ಅಂಥ ಅನಿವಾರ್ಯತೆ ಎದುರಿಸಲು ಮಾನಸಿಕವಾಗಿ ಸಿದ್ಧರಿರಲೇಬೇಕು.

ಬ್ಯಾಂಕ್ ಅಧಿಕಾರಿಗಳು ವರ್ಷದ ಕೊನೆಯ ಮಾರ್ಚ್ ತಿಂಗಳಲ್ಲಿ ರಾತ್ರಿವರೆಗೆ ಕೆಲಸ ಮಾಡುವುದುಂಟು ಎಂದು
ಸುರೇಂದ್ರ ಪೈ ಅವರು ಬರೆದಿದ್ದಾರೆ. ಅದು ಅವರ ತಪ್ಪು ಕಲ್ಪನೆ. ಸಾಮಾನ್ಯವಾಗಿ ಅಧಿಕಾರಿಗಳಿಗೆ ರಾತ್ರಿವರೆಗೂ ಕೆಲಸ ಮಾಡುವುದು ದಿನನಿತ್ಯದ ಅನಿವಾರ್ಯತೆ. ಬೆಳಗ್ಗೆ 10 ಗಂಟೆಗೆ ಗ್ರಾಹಕರಿಗೆ ಸೇವೆ ಒದಗಿಸಲು, ೯.೩೦ರಿಂದಲೇ ತಯಾರಿ ನಡೆಸಬೇಕಾಗುತ್ತದೆ. 4 ಗಂಟೆಗೆ ಗ್ರಾಹಕರ ಸೇವಾ ಅವಧಿ ಮುಗಿಯುವವರೆಗೂ ಆ ಕೆಲಸ ಮಾಡುತ್ತಿರ ಬೇಕಾಗುತ್ತದೆ.

ಅದಾದ ಮೇಲೆ ಆಯಾ ದಿನದ ಜಮಾ-ಖರ್ಚುಗಳ ಲೆಕ್ಕಗಳನ್ನೆಲ್ಲ ಪರಿಶೀಲಿಸಿ, ತಾಳೆಮಾಡಿ, ಆ ದಿನದ ಆಯವ್ಯಯ ಪತ್ರ (ಬ್ಯಾಲೆನ್ಸ್ ಶೀಟ್) ಆ ದಿನವೇ ಮಾಡಿ ಮುಗಿಸಬೇಕು. ಅದಾದ ನಂತರ, ಸಾಲದ ಅರ್ಜಿಗಳು, ಪತ್ರ ವ್ಯವಹಾರ ಗಳು ಮುಂತಾ ದವುಗಳಿಗೆ ಸಮಯ ಕೊಡಬೇಕಾಗುತ್ತದೆ. ಹಾಗಾಗಿ ದಿನನಿತ್ಯವೂ ತಡರಾತ್ರಿವರೆಗೂ ಕೆಲಸ ಮಾಡ ಬೇಕಾಗುತ್ತದೆ, ಸುರೇಂದ್ರ ಪೈ ಅವರು ಉಲ್ಲೇಖಿಸಿರುವಂತೆ ಮಾರ್ಚ್ ತಿಂಗಳಲ್ಲಿ ಮಾತ್ರವೇ ಅಲ್ಲ.

ಇನ್ನು, ಭ್ರಷ್ಟಾಚಾರ, ಕಲಬೆರಕೆ ಆಹಾರ ಇವೆಲ್ಲವೂ ನಮ್ಮ ಕೆಲಸದ ಮೇಲೆ ಪ್ರಭಾವ ಬೀರಿದರೂ, ನಮ್ಮ ನಿಯೋ ಜಿತ ಕೆಲಸವನ್ನು ನಿಸ್ಪೃಹತೆಯಿಂದ ಮಾಡಲು ಅವು ಅಡ್ಡಿಯಾಗಬಾರದು. ಕೊನೆಯದಾಗಿ, ಐಟಿ ಉದ್ಯೋಗಿಗಳ ಆರೋಗ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಾನು ಶಕ್ತನಲ್ಲ; ಏಕೆಂದರೆ, ನಮ್ಮ ಕುಟುಂಬದಲ್ಲೂ ಹಾಗೂ ಪರಿಚಯಸ್ಥರಲ್ಲೂ ಸಾಕಷ್ಟು ಐಟಿ ಉದ್ಯೋಗಿಗಳಿದ್ದಾರೆ. ಆದರೆ ಅವರ‍್ಯಾರೂ ಪೈ ಅವರು ಉಲ್ಲೇಖಿಸಿದಂಥ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿಲ್ಲ.

(ಲೇಖಕರು ಬ್ಯಾಂಕಿನ ನಿವೃತ್ತ ಅಧಿಕಾರಿ)
(ಈ ಪ್ರತಿಸ್ಪಂದನ ಮತ್ತು ಮರುಸ್ಪಂದನಗಳನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ