Sunday, 24th November 2024

Gururaj Gantihole Column: ದಮನಿತರ ಬದುಕಿಗೆ ಆಸರೆಯಾದ ಡಿ.ಸಿ. ಭೂಮಿ ಯೋಜನೆ !

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ದಲಿತರು, ಹಿಂದುಳಿದ ಭೂರಹಿತರ ಕುರಿತಂತೆ ಕಾಳಜಿ ತೋರಿದಂತೆ ಮಾಡಿ ಬ್ರಿಟಿಷರು ಹಲವು ನಿಯಮ ಗಳನ್ನು ರೂಪಿಸಿದರು. ಇದು, ಒಂದು ವರ್ಗಕ್ಕೆ ಸಹಾಯವಾಗುವುದು ಎಂಬಂತೆ ಮೇಲ್ನೋಟಕ್ಕೆ ಕಂಡು ಬಂದರೂ, ಅಂದಿನ ಭಾರತದಲ್ಲಿ ಜಾತಿ-ಮತಭೇದ ಉಂಟುಮಾಡಲು ಈ ಅವಕಾಶವನ್ನು ಅವರು ದಾಳವನ್ನಾಗಿ ಮಾಡಿಕೊಂಡರು.

ಸಾಮಾಜಿಕವಾಗಿ ತುಳಿತಕ್ಕೊಳಗಾದ ವರ್ಗಗಳಿಗಾಗಿ ಬ್ರಿಟಿಷ್ ಸರಕಾರವು 1892ರಲ್ಲಿ ಭೂ ಕಾಯಿದೆಯನ್ನು ಜಾರಿ ಗೊಳಿಸಿತು. ಇದರ ಮೊದಲ ಭಾಗವಾಗಿ ಅಂದಿನ ಮದ್ರಾಸ್ ಪ್ರಾಂತ್ಯದ ತಮಿಳುನಾಡಿನಲ್ಲಿ 12 ಲಕ್ಷ ಎಕರೆ ಭೂಮಿಯನ್ನು ವಿತರಿಸಿತು. ಈ ಕೃಷಿಯೋಗ್ಯ ಭೂಮಿಯನ್ನು ತುಳಿತಕ್ಕೊಳಗಾದ ವರ್ಗದ ದಲಿತರಿಗೆ ನೀಡಲಾಗಿತ್ತು ಮತ್ತು ಈ ಭೂಮಿಯನ್ನು ಅನ್ಯರಿಗೆ ಮಾರಾಟ ಮಾಡುವಂತಿಲ್ಲ, ಗುತ್ತಿಗೆ ನೀಡುವಂತಿಲ್ಲ ಎಂಬ ಕೆಲವು ಷರತ್ತು ಗಳನ್ನು ಅವರಿಗೆ ವಿಧಿಸಲಾಗಿತ್ತು. ಇದನ್ನು ‘ಪಂಚಮಿ ಭೂಮಿ’ ಎಂದು ಸಹ ಕರೆಯಲಾಗುತ್ತದೆ.

1891ರಲ್ಲಿ ಚೆಂಗಲ್ಪುಟ್ ಕಲೆಕ್ಟರ್ ಆಗಿದ್ದ ಜೆ.ಎಚ್.ಎ. ಟ್ರೆಮೆನ್ಹೀರೆ ಅವರು ಸಲ್ಲಿಸಿದ ವರದಿಯ ಆಧಾರದ ಮೇಲೆ
ಭೂಮಿಯನ್ನು ವಿತರಿಸಲು ಅಂದಿನ ಬ್ರಿಟಿಷ್ ಸರಕಾರ ನಿರ್ಧಾರ ಮಾಡಿತು. ‘ಚೆಂಗಲ್ಪುಟ್‌ನ ಪಾರಿಯಾಗಳ ಟಿಪ್ಪಣಿಗಳು’ ಎಂಬ ಶೀರ್ಷಿಕೆಯ ವರದಿಯು, ಪಾರಿಯಾಗಳನ್ನು ಭೂಮಾಲೀಕ ಸಮುದಾಯವಾಗಿ ಪರಿವರ್ತಿಸಲು
ಕರೆ ನೀಡಿತು. Govt Order 10/10, 10A (Revenue act) ಅನ್ನು Depressed Classes Land Act-1892 ರ ಅಡಿಯಲ್ಲಿ ಸೆಪ್ಟೆಂಬರ್ ೩೦ರಂದು ಜಾರಿಗೆ ತಂದಿತು. ಇದರಿಂದಾಗಿ ದಲಿತರು ಆರ್ಥಿ ಕವಾಗಿ ಮತ್ತು ಸಾಮಾಜಿಕವಾಗಿ ಸಬಲ ರಾಗುತ್ತಾರೆ ಎಂದು ಸರಕಾರ ನಂಬಿತ್ತು.

ಈ ಮೂಲಕ, ಬ್ರಿಟಿಷರು ಅಂದಿನ ಭಾರತದಲ್ಲಿನ ಕೆಳವರ್ಗದ, ದಲಿತರ ಏಳಿಗೆಗಾಗಿ ಶ್ರಮಿಸಿದರು ಎಂಬಂಥ
ಹಲವು ವಿಚಾರಗಳನ್ನು ಅವರ ಪರವಾಗಿ ನಮ್ಮ ಇತಿಹಾಸದ ಪುಟಗಳಲ್ಲಿ ದಾಖಲಿಸಿದರು. ಆದರೆ, ಇದಕ್ಕೆ ಬೇರೆ ಯದೇ ಆದ ಒಂದು ಪ್ರಭಾವಿ ಹಿನ್ನೆಲೆ ಇದೆ. ಆ ಹಿನ್ನೆಲೆ ಅಂದಿನ ಬ್ರಿಟಿಷರ ಎದೆಯಲ್ಲಿ ಪುಟ್ಟ ನಡುಕವನ್ನು ಹುಟ್ಟಿಸಿತ್ತು. ಹೀಗಾಗಿ, ಇಂಗ್ಲೆಂಡಿನಲ್ಲಿ ನಡೆದ ಅನಾಹುತಗಳು ಭಾರತದಲ್ಲಿ ನಡೆಯದಂತೆ ಎಚ್ಚರ ವಹಿಸಿ ದೂರ ಗಾಮಿ ಯೋಜನೆ ರೂಪಿಸಿ ಭಾರತದಲ್ಲಿ ಕೆಲ ವರ್ಗಗಳನ್ನು ಈ ಯೋಜನೆಯಡಿಯಲ್ಲಿ ಪ್ರತ್ಯೇಕಿಸಿ ಜಾರಿಗೆ ತರಲಾ ಯಿತು.

ಗ್ರೇಟ್ ಬ್ರಿಟನ್‌ನಲ್ಲಿ ಉತ್ತಮ ಕೃಷಿ ಚಟುವಟಿಕೆಯಲ್ಲಿ ಕುಸಿತ ಕಾಣತೊಡಗಿತು. ಅಂದರೆ, ದಿನನಿತ್ಯ ಬಳಸುವ
ಆಹಾರ ಧಾನ್ಯಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದ ಅಲ್ಲಿನ ಕೃಷಿಕರು ಹತ್ತೊಂಬತ್ತನೇ ಶತಮಾನದ ಕೊನೆಯ
ತ್ರೈಮಾಸಿಕದಲ್ಲಿ ಕೃಷಿ ಉತ್ಪನ್ನದಲ್ಲಿ ಕುಸಿತವನ್ನು ಕಾಣತೊಡಗಿದರು. ಈ ಕೃಷಿ ಕುಸಿತದ ನಿಖರ ಲಕ್ಷಣಗಳೆಂದರೆ ಬೆಲೆಗಳ ಕುಸಿತ, ನಂತರ ಉತ್ಪಾದನೆಯ ಕುಸಿತ ಮತ್ತು ಅಂತಿಮವಾಗಿ ಭೂ ಆದಾಯ ಹಾಗೂ ಸಂಪತ್ತು, ಬಾಡಿಗೆ ಗಳು ಮತ್ತು ಭೂಮಿಯ ಮೌಲ್ಯಗಳು ಕುಗ್ಗುವಿಕೆ ಇತ್ಯಾದಿ.

ಇದು ಯಾವ ಮಟ್ಟಕ್ಕೆ ಬಂದಿತೆಂದರೆ, ಬೆಳೆ ಮತ್ತು ಬೆಲೆ ಕುಸಿತವು, ಅಲ್ಲಿನ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯ
ಮೇಲಿದ್ದ ಬ್ರಿಟಿಷ್ ಭೂಮಾಲೀಕರ ಹಿಡಿತವನ್ನು ಸಡಿಲಗೊಳಿಸಿತು. ಇದು ಐರಿಶ್ ದಂಗೆ ಶುರುವಾಗಲು, ಲಿಬರಲ್
ಪಕ್ಷವನ್ನು ಮಧ್ಯದಲ್ಲಿ ವಿಭಜಿಸಿ ಅಧಿಕಾರದಿಂದ ದೂರವಿರಿಸಲು ಸಹಾಯ ಮಾಡಿತು. ಈ ಮಹತ್ತರ ಬದಲಾವಣೆ ಯು ಮೊದಲ ಮಹಾಯುದ್ಧದ ವೇದಿಕೆ ಸಿದ್ಧಗೊಳ್ಳುವಲ್ಲಿನ ದೂರದ ಕಾರಣಗಳಲ್ಲಿ ಒಂದಾಗಿತ್ತು ಎನ್ನಬಹುದು.

ಈ ಹಂತದಲ್ಲಿ ಲಕ್ಷಾಂತರ ಕಾರ್ಮಿಕರು ಗ್ರಾಮಾಂತರ ಪ್ರದೇಶವನ್ನು ತೊರೆದರು. ಇದರಿಂದಾಗಿ ಗೋಧಿಯ
ಬೆಲೆಯು ಕಾಲುಭಾಗಕ್ಕೆ ಕುಸಿಯಿತು. ಮಾಂಸ ಮತ್ತು ಉಣ್ಣೆಯ ಬೆಲೆಯೂ ಕುಸಿಯಿತು. ಕೇವಲ ಧಾನ್ಯಗಳಿಗಾಗಿ, ಕೃಷಿಭೂಮಿಯನ್ನು ಮೂರನೇ ಎರಡರಷ್ಟು ಗುತ್ತಿಗೆ ಪಡೆದು ಪರಸ್ಪರ ಹಂಚಿಕೊಳ್ಳುವಂಥ ಒಪ್ಪಂದಕ್ಕೆ ಬಂದ
ಬ್ರಿಟನ್, 1913ರ ಹೊತ್ತಿಗೆ ತಿನ್ನಲು ಗೋಧಿ ಮತ್ತು ಹಿಟ್ಟಿನ ಐದನೇ ನಾಲ್ಕರಷ್ಟು ಭಾಗವನ್ನು ಆಮದು ಮಾಡಿ ಕೊಳ್ಳುವಂಥ ದುರ್ದೆಸೆಗೆ ಬಂದಿತು.

ಇಂಥ ಒಂದು ಅತ್ಯಂತ ಕೆಟ್ಟ ಪರಿಸ್ಥಿತಿ ಬರಲು ಪ್ರಮುಖ ಕಾರಣ, ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ
ಭಾವನೆಯು ಅಲ್ಲಿನ ದುಡಿಯುವ ವರ್ಗದವರಲ್ಲಿ, ಕೂಲಿಕಾರ್ಮಿಕರಲ್ಲಿ ಮೂಡುವಂತೆ ಮಾಡಿ ಉನ್ನತ ವರ್ಗ ದವರ ವಿರುದ್ಧ ಅವರನ್ನು ಎತ್ತಿಕಟ್ಟುವ ಮೂಲಕ ಸಾಮಾಜಿಕವಾಗಿ ಒಡೆಯಲು ನಡೆಸಿದ ಪ್ರಯತ್ನ. ಈ ಹಂತದಲ್ಲಿ ಭಾರತವು ಸಂಪೂರ್ಣವಾಗಿ ಹಳ್ಳಿಗಳಿಂದ ಕೂಡಿದ ದೇಶವಾಗಿತ್ತು. ಇಲ್ಲಿ ದುಡಿಯುವವರಿಂದ, ಕೂಲಿ, ಕಾರ್ಮಿಕ ವರ್ಗಕ್ಕೆ ಸೇರಿದವರಿಂದಲೇ ಕೃಷಿ ಕಾರ್ಯಗಳು, ಸೇವಾವಲಯದ ಕೆಲಸಗಳು ಹೆಚ್ಚಾಗಿ ನಡೆಯುತ್ತಿದ್ದುದನ್ನು ಗಮನಿಸಿದ ಬ್ರಿಟಿಷರು, ಇದೇ ಘಟನೆಗಳು ಭಾರತದಲ್ಲಿ ನಡೆಯದಂತೆ ತಡೆಯಲು ಕಂಪನಿ ಮೂಲಕ ಮುಂಜಾಗ್ರತಾ ಕ್ರಮವಾಗಿ ಜಾರಿಗೆ ತಂದದ್ದೇ ಇಂಥ ಹಲವು ಕಾನೂನುಗಳು.

ಈ ಹಂತದಲ್ಲಿ ಅಂದಿನ ಮದ್ರಾಸ್ ಸರಕಾರ 1918ಲ್ಲಿ, ಬಳಕೆಯಿರದ ಭೂಮಿಯನ್ನು ರೈತವಾರಿ ಗ್ರಾಮಗಳಲ್ಲಿನ
ದಮನಿತ ವರ್ಗಕ್ಕೆ ನೀಡುವಂತೆ ಮಾಡಿದ ಆದೇಶದಂತೆ, ಸುಮಾರು 40 ಸಾವಿರ ಎಕರೆಯಷ್ಟು ಜಮೀನನ್ನು ಕೇವಲ
ಸೌತ್ ಕೆನರಾ ಜಿಯೊಂದರ 1945ರ ಸುಮಾರಿಗೆ ಮೀಸಲಿಡಲಾಯಿತು. ಇದರಂತೆ ಕುಂದಾಪುರ ತಾಲೂಕಿನಲ್ಲಿ 98ಕ್ಕೂ ಹೆಚ್ಚು ಹಳ್ಳಿಗಳಲ್ಲಿ 3698 ಎಕರೆಯಷ್ಟು ಮೀಸಲಿಟ್ಟರೆ, ಕಾರ್ಕಳದಲ್ಲಿ 7 ಸಾವಿರ ಎಕರೆ, ಕಾಸರಗೋಡಿ ನಲ್ಲಿ 8345 ಎಕರೆ, ಮಂಗಳೂರಿನಲ್ಲಿ 6190 ಎಕರೆ, ಪುತ್ತೂರಿನಲ್ಲಿ 11 ಸಾವಿರ ಎಕರೆ ಮತ್ತು ಉಡುಪಿ ತಾಲೂಕಿನಲ್ಲಿ 4332 ಎಕರೆಯಷ್ಟು ಜಮೀನು-ಜಾಗವನ್ನು ದಮನಿತ ವರ್ಗಗಳಿಗೆಂದು ಬಿಟ್ಟುಕೊಡಲಾಯಿತು.

ಹೀಗಿದ್ದರೂ, ಕೆಲವೊಂದು ಜಮೀನುಗಳು ಉಳುಮೆ ಮಾಡಲು ಬಾರದ ಸ್ಥಿತಿಯಲ್ಲಿದ್ದು, ಇನ್ನು ಕೆಲವು ವಿಪರೀತ ವಾಗಿ ಸಾಗುವಳಿ ಖರ್ಚು ಬೇಡುತ್ತಿದ್ದುದರಿಂದ ಬೇಸತ್ತ ಈ ಜನರು, ಸ್ಥಿತಿವಂತರಿಗೆ ಹಣಕ್ಕಾಗಿ ಕೊಡುವುದು
ಅಥವಾ ಕಡಿಮೆ ಬೆಲೆಗೆ ಮಾರಿಬಿಡುವುದೆಲ್ಲ ನಡೆದಿದೆ. ಹಾಗಾಗಿ, ಇದನ್ನು ತಡೆಯಲು ಸರಕಾರದಿಂದ ಸ್ಥಳೀಯ
ಮಟ್ಟದಲ್ಲಿ ಹಲವು ನೀತಿ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.

ತುಳಿತಕ್ಕೊಳಗಾದವರಿಗೆ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಇಂಥ ಜಮೀನುಗಳು, ಕೃಷಿ ತೋಟಗಳಾಗಿ, ದೊಡ್ಡವರ -ರ್ಮ್ ಹೌಸ್‌ಗಳಾಗಿ ಬದಲಾಗಿವೆ. ಒಟ್ಟಾರೆ ಎಷ್ಟು ಭೂಮಿಯನ್ನು ಎಲ್ಲಿ ಬಿಟ್ಟುಕೊಡಲಾಗಿದೆ ಎಂಬ
ಪೂರ್ಣ ಮಾಹಿತಿ ರಾಜ್ಯದ ಸರಕಾರದ ಬಳಿಯಿಲ್ಲದಿರುವುದು ಕೂಡ ಇಂಥ ಯೋಜನೆಗಳು ಸುಮ್ಮನೆ ಕಾಟಾಚಾರಕ್ಕೆ,
ಕಡತಗಳಲ್ಲಿ ಧೂಳು ತಿನ್ನುತ್ತ ಮುಂದುವರಿಯುತ್ತಿವೆ ಎನ್ನುವುದಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ ಎನ್ನಬಹುದು. ಹಾಗಾಗಿ, ಡಿ.ಸಿ.ಲ್ಯಾಂಡ್ ಯೋಜನೆ ಜಾರಿಗೊಂಡ ನಂತರ ಬಂದು ಹೋದ ಎಲ್ಲಾ ಸರಕಾರಗಳು ಇಂದಿನವರೆಗೂ ಮಕಾಡೆ ಮಲಗಿಯೇ ಇವೆ. ಪರಿಶಿಷ್ಟ ಜಾತಿ/ಪಂಗಡಗಳಿಗೆ ನೀಡಿದ ಭೂಮಿಯಲ್ಲಿ ನದಿ ಕಿನಾರೆಯ ಭೂಮಿಗಳೂ ಇದ್ದವು ಮತ್ತು ಮಾಯವಾದವು ಎನ್ನುವುದನ್ನು ಅಲ್ಲಗಳೆಯಲಾಗದು.

ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತರ ಹೆಸರಿನಲ್ಲಿ ನೂರಾರು ಯೋಜನೆಗಳು ಪಕ್ಷಭೇದ ಮರೆತು ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಕಾಲಕಾಲಕ್ಕೆ ಜಾರಿಯಾಗಿವೆ. ಇಂಥ ಯೋಜನೆಗಳಲ್ಲಿ ಹೆಚ್ಚಾಗಿ, ಕೃಷಿ ಜಮೀನು, ಮನೆಕಟ್ಟಿಕೊಳ್ಳಲು ಜಾಗ ಕೊಟ್ಟಿರುವಂಥವುಗಳೇ ಹೆಚ್ಚು. ಇಂಥ ಕಾಲಘಟ್ಟದಲ್ಲಿ, ಭಾರತದಲ್ಲಿ ಹಿಂದುಳಿದ ದಲಿತರಿಗೆ, ತುಳಿತಕ್ಕೊಳಗಾದವರಿಗೆ ಒಂದು ಹಂತದಲ್ಲಿ ಬಹುದೊಡ್ಡ ಆತ್ಮಸ್ಥೈರ್ಯ, ಆತ್ಮಸಮ್ಮಾನ, ಸಾಮಾಜಿಕ ಗೌರವವನ್ನು ತಂದುಕೊಟ್ಟವರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಒಬ್ಬರೆನ್ನಬಹುದು. ಬಾಲ್ಯದಲ್ಲಿ ಸ್ವತಃ ಅನುಭವಿಸಿದ ಸಾಮಾಜಿಕ ಅಸಮಾನತೆ, ಜಾತಿ ಆಧರಿತ ತಾರತಮ್ಯವನ್ನು ಹೊಡೆದೋಡಿಸಲು ಶಿಕ್ಷಣವೇ ಬಹು ದೊಡ್ಡ ಅಸ್ತ್ರವೆಂದು ಅರಿತುಕೊಂಡು ಆಳವಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಂಬೇಡ್ಕರ್ ಜ್ಯೂರಿ ಆಗಿ, ಭಾರತದ ಸಂವಿಧಾನದ ಸಂರಚನೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದರು.

ಬಿ.ಎನ್.ರಾವ್, ಅಡಿ ಕೃಷ್ಣಸ್ವಾಮಿ ಅಯ್ಯರ್, ರಾಜೇಂದ್ರ ಪ್ರಸಾದ್, ರಾಜಾಜಿ ಅವರಂಥ ಮಹನೀಯರ ಜತೆ ಬೆರೆಯುವ ಅವಕಾಶ ಅವರಿಗೆ ದೊರೆಯಿತು. ಬಳಿಕ, ಅಂಬೇಡ್ಕರ್ ಅವರ ವಿಚಾರಧಾರೆ ತುಳಿತಕ್ಕೊಳಗಾದವರ
ಕಡೆಗೆ ಹರಿಯಿತು. ತಮ್ಮ ಬರಹದ ಸಂಪುಟಗಳಲ್ಲಿ ಅಂದಿನ ಕಟುಸತ್ಯಗಳನ್ನು ಹಂಚಿಕೊಂಡಿರುವ ಬಾಬಾ ಸಾಹೇಬರು, ‘ದೀನದಲಿತರ ಬಗೆಗೆ ಕೇವಲ ಭಾಷಣಗಳಲ್ಲಿ, ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ ಬರೆದರೆ ಸಾಲದು; ಸ್ತರಮಟ್ಟದಲ್ಲಿ, ಹಾದಿಬೀದಿ-ಕೇರಿಗಳಿಗೆ ಹೋಗಿ ಜನಜಾಗೃತಿ ಮೂಡಿಸಬೇಕು’ ಎಂಬ ದೃಢನಿರ್ಧಾರವನ್ನು ತಳೆದರು. ಹಾಗೆಯೇ, ‘ಮೂಕನಾಯಕ’ ಎಂಬ ಪತ್ರಿಕೆಯನ್ನು ದಮನಿತರ ಧ್ವನಿಯಾಗಿ ನಡೆಸಲು ಅಂಬೇಡ್ಕರ್ ಯತ್ನಿಸಿದರು.

ಹೀಗೆ, ಅಂದಿನ ಭಾರತದ ಮಹಾನಾಯಕರೆಲ್ಲ ಅಂದಿನ ಸಾಮಾಜಿಕ ತಾರತಮ್ಯದ ಬಗ್ಗೆ ವಿವಿಧ ಮಾರ್ಗಗಳಲ್ಲಿ
ಹೋರಾಡುತ್ತ ದಮನಿತರನ್ನು ಮೇಲಕ್ಕೆತ್ತುವ ಕಾರ್ಯದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯಾ
ನಂತರದಲ್ಲಿ ಈ ದಲಿತ-ದಮನಿತರ ವಿಚಾರದಲ್ಲಿ ಬಹಳಷ್ಟು ಹೋರಾಟಗಳು, ಚಳವಳಿಗಳು ನಡೆದವು. ಹಲವು
ನಾಯಕರು ಹುಟ್ಟಿಕೊಂಡರು. ಇನ್ನೂ ಕೆಲವರು ನಿಸ್ವಾರ್ಥ ಸಾಮಾಜಿಕ ಸೇವೆಗೆ, ಭಾರತದಲ್ಲಿನ ಅಸ್ಪೃಶ್ಯತೆಯ
ನಿವಾರಣೆಗಾಗಿ ಹೋರಾಡಿದರು. ಇದರ ಭಾಗವಾಗಿ ಜನಜನಿತವಾದ ಅಂದಿನ ಭೂದಾನ ಚಳವಳಿ ಎಲ್ಲರಿಗೂ
ಗೊತ್ತಿರುವಂಥದೇ ಆಗಿದೆ. ವಿನೋಬಾ ಭಾವೆ ಅವರ ನೇತೃತ್ವದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ
ಅವರ ಪ್ರಖರ ಬೆಂಬಲದ ಮೂಲಕ ದೇಶಾದ್ಯಂತ ಹರಡುತ್ತ ಹೋದ ಈ ಚಳವಳಿಯು, ಮೊದಲ ಬಾರಿಗೆ ಮಹಾ ರಾಷ್ಟ್ರ ರಾಜ್ಯ ಭೂದಾನ ನಿಯಮ- ಸೆಕ್ಷನ್ ೨೫ ಎಂಬುದರಡಿಯಲ್ಲಿ, ಯಾರಿಗೆ ಅಗತ್ಯಕ್ಕಿಂತ ಹೆಚ್ಚು ಜಮೀನಿದ್ದು, ಹತ್ತಾರು ವರ್ಷಗಳಿಂದ ಕೃಷಿ ಬಳಕೆಗೆ ಜಮೀನು ಬಳಸದಿದ್ದರೆ ಅದನ್ನು ಭೂರಹಿತ ವರ್ಗಕ್ಕೆ ಉಳುಮೆಗಾಗಿ
ಕೊಡಬೇಕೆಂಬ ಕಾನೂನು ಜಾರಿಗೆ ಬಂದಿತು.

ಮುಂದೆ ಇದು ‘ಬಳುವಳಿ ಭೂಮಿ’ ಎಂದು ಆಂಧ್ರದಲ್ಲಿ, ‘ಗೈರಾನ್ ಭೂಮಿ’ ಎಂದು ಮಹಾರಾಷ್ಟ್ರದಲ್ಲಿ, ‘ಮೋಹ್ ಜಮೀನ್ ಮೋಹ್ ದಿಹಾ ಭೂಮಿ’ ಎಂದು ಅಸ್ಸಾಂನಲ್ಲಿ ಹೀಗೆ ದೇಶಾದ್ಯಂತ ವಿವಿಧ ಹೆಸರುಗಳಿಂದ ಕರೆಯ ಲ್ಪಟ್ಟಿತು. ಇಂದಿಗೂ ಇದು D.C. Land (Depressed Classes) ಎಂದು ಗುರುತಿಸಿಕೊಂಡು ವಿವಿಧ ಯೋಜನೆಗಳ ಮೂಲಕ ಅಗತ್ಯವಿರುವವರಿಗೆ ಹಂಚಿಕೆಯಾಗುತ್ತಿದೆ. ಆದರೆ, ಇದಕ್ಕೂ ಮೊದಲು ಈ ಕಾಯ್ದೆಯನ್ನು ಜಾರಿಗೆ ತಂದಿದ್ದು ಬ್ರಿಟಿಷರು ಎಂದರೆ ನೀವು ನಂಬಲೇಬೇಕು!

ಹೌದು, ದಲಿತರು, ಅಸ್ಪೃಶ್ಯರು, ಹಿಂದುಳಿದ ಭೂರಹಿತರ ಕುರಿತಂತೆ ಕಾಳಜಿ ತೋರಿದಂತೆ ಮಾಡಿ ಬ್ರಿಟಿಷರು ಹಲವು
ನೀತಿ ನಿಯಮಗಳನ್ನು ರೂಪಿಸಿದರು. ಇದು, ಒಂದು ವರ್ಗಕ್ಕೆ ಸಹಾಯವಾಗುವುದು ಎಂಬಂತೆ ಮೇಲ್ನೋಟಕ್ಕೆ
ಕಂಡುಬಂದರೂ, ಅಂದಿನ ಭಾರತದ ಸಾಮಾಜಿಕ ಪರಿಸ್ಥಿತಿಯಲ್ಲಿ ಜಾತಿ-ಮತಭೇದ ಉಂಟುಮಾಡಲು ಮತ್ತು
ಪರಸ್ಪರರಲ್ಲಿ ತಾರತಮ್ಯ ಸೃಷ್ಟಿಸಲು ಈ ಅವಕಾಶವನ್ನು ಅವರು ದಾಳವನ್ನಾಗಿ ಮಾಡಿಕೊಂಡರು ಎಂಬುದು ಅವರ ದಾಖಲಾತಿಗಳಲ್ಲಿ ತಿಳಿದುಬರುತ್ತದೆ.

ಇಂಥ ಜಾಗಗಳು ಮತ್ತು ಉಳುಮೆ ಜಮೀನುಗಳನ್ನು ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ವಿಸ್ತೀರ್ಣಗಳಲ್ಲಿ ಬಿಟ್ಟು ಕೊಡಲಾಗಿದೆ ಎಂಬ ವಿಚಾರ ಮತ್ತು ಇನ್ನೂ ಇವುಗಳು ದಲಿತರ ಬಳಿ ಉಳಿದುಕೊಂಡಿವೆಯೇ ಎಂಬುದರ ಕುರಿತು ಸರಕಾರದ ಬಳಿ ಒಂದು ವ್ಯವಸ್ಥಿತ ಕ್ರೋಡೀಕೃತ ದಾಖಲಾತಿ ಇರಬೇಕಾದುದು ಅತ್ಯವಶ್ಯ. ಬಾಯಿಮಾತಿ ನಲ್ಲಿ ದಲಿತರ ಪರ ಎನ್ನುವ ಬದಲು ಇಂಥ ದಲಿತಪರ ಕಾರ್ಯಗಳನ್ನು ಜಾರಿಗೊಳಿಸುವುದರಲ್ಲಿ ನಿಜವಾದ ಕಳಕಳಿ ಅಡಗಿದೆ.

ಇದನ್ನೂ ಓದಿ: ಇಳಯರಾಜ; ಇಳೆಯೇ ಹೆಮ್ಮೆಪಡುವ ಗೀತರಚನೆಕಾರ